ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ಒಂದು ಜಾನಪದ ಕಲೆ. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗೂ ಪ್ರಕಾರಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಒಟ್ಟಾಗಿ ಭಜನೆ ಮೇಳಗಳು ಒಂದಲ್ಲಾ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ.

ಚಿತ್ರ:Lord hanuman singing bhajans AS.jpg
ರಾಮನ ಪರಿಪೂರ್ಣ ಭಕ್ತನಾದ ಹನುಮಂತ, ಭಜನೆಯ ಗಾಯಕನಾಗಿ ಕಲ್ಪಿಸಿಕೊಂಡಂತೆ
Bhajan in Coimbatore, ತಮಿಳುನಾಡು during Navratri Golu

ಹಿನ್ನೆಲೆ ಬದಲಾಯಿಸಿ

ಮಧ್ಯಕಾಲೀನ ಭಕ್ತಿಯುಗ ಈ ಭಜನೆ ಸಂಪ್ರದಾಯಕ್ಕೆ ಹತ್ತಿರವಾದದ್ದು. ಶೈವ ಮತ್ತು ವೈಷ್ಣವ ಪಂಥಗಳೆರಡೂ ವ್ಯಾಪಕವಾಗಿ ಭಜನೆಯ ಪರಂಪರೆಯುನ್ನು ಹುಟ್ಟು ಹಾಕಿದವು. ವೈದಿಕ ಪರಂಪರೆಯ ನಿಗೂಢತೆಯನ್ನು ಸೀಮಿತತೆಯನ್ನು ಮೊಟ್ಟ ಮೊದಲ ಬಾರಿಗೆ ಸಾಮಾಜಿಕವಾಗಿ ಸಾರ್ವತ್ರಿಕಗೊಳಿಸಲಾಯಿತು. ಈ ಪರಂಪರೆಯ ದಾಸರು ಭಜನೆಗಳಿಗೆ ತಾತ್ವಿಕ ರೂಪವೊಂದನ್ನು ಕೊಡುವುದಕ್ಕೆ ಸಮರ್ಥರಾದರು. ನವ ವಿಧ ಭಕ್ತಿಗಳ ಮೂಲಕ ಅವರು ಭಜನೆಗೊಂದು ವ್ಯಾಖ್ಯಾನವನ್ನು ನೀಡಿದರು. ಹೀಗೆ ವ್ಯಾಖ್ಯಾ ಕೊಡುವುದರ ಮೂಲಕವೇ ಅವರ ಭಜನೆಗೊಂದು ನಿರ್ಧಷ್ಟತೆ ದೊರೆಯಿತು.

ಭಜನೆ ಸಂಪ್ರದಾಯದ ಬದಲಾಯಿಸಿ

ಭಜನೆ ಸಂಪ್ರದಾಯದ ವೈಶಿಷ್ಟ್ಯವೆಂದರೆ ವ್ಯಾಖ್ಯಾನವನ್ನು ಕಾಲಾಂತರದಲ್ಲಿ ಮುರಿದುದು, ಅಷ್ಟು ಮಾತ್ರವಲ್ಲ ಶೈವ ಮತ್ತು ವೈಷ್ಣವ ಎನ್ನುವ ವಿಂಗಡಣೆಯ ಗೆರೆಯನ್ನು ದಾಟಿ ಭಾವೈಕ್ಯದ ಕಡೆಗೆ ಸಾಗಿದರು. ಜನಪದರ ಭಜನೆಗಳೆಂದರೆ ಜಾತಿ, ಮತಗಳನ್ನು ಮೀರಿದ ದೇಶಿಯ ಆರಾಧನಾ ಗೀತೆಗಳ ಸಂಪ್ರದಾಯ, ಅದರಲ್ಲಿ ಇಲ್ಲಿಯ ಗ್ರಾಮ ದೇವತೆಗಳ ಸ್ತುತಿಯೇ ಮುಖ್ಯವಾದದು, ಛಂದಸ್ಸು ಕೂಡ ಶುದ್ಧವಾಗಿ ದೇಶೀಯ ದಾಸರು ಬಳಸಿದ ಭಾಷೆ. ಛಂದಸ್ಸುಗಳ ಶಿಷ್ಠ ರೂಪವನ್ನು ಇಲ್ಲಿ ಗುರುತಿಸುವಂತಿಲ್ಲ, ಬಹುತೇಕವಾಗಿ ಅವು ಆಯಾ ಪ್ರಾದೇಶಿಕ ಭಾಷೆಯ ರೂಪವನ್ನು ಪಡೆಯುತ್ತವೆ. ಹಿಂದೂ ಮುಸಲ್ಮಾನ ಎನ್ನುವ ಭೇದವಿಲ್ಲದೆ ಭಜನೆಗಾರರ ಮೇಳಗಳು ಕಂಡು ಬರುತ್ತವೆ. ಹಿಂದೂಗಳು ಮುಸಲ್ಮಾನ ಧರ್ಮದ ವಿಚಾರಗಳನ್ನು ಮುಸಲ್ಮಾನರು ಹಿಂದೂ ಧರ್ಮದ ವಿಚಾರಗಳನ್ನು ಭಜನೆಯಲ್ಲಿ ಒಳಗೊಳಿಸುವುದು ಇಲ್ಲಿಯ ವಿಶೇಷ.

ಭಜನೆಯ ವಿಂಗಡಣೆ ಬದಲಾಯಿಸಿ

ಭಜನೆಯನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು.

ವ್ಯಕ್ತಿಗತ ಭಜನೆ ಬದಲಾಯಿಸಿ

ವ್ಯಕ್ತಿಗತ ಭಜನೆಯ ಸ್ಪಷ್ಟ ರೂಪಗಳನ್ನು ಏಕತಾರಿ ಪದಗಳನ್ನು ಕಾಣುತ್ತೇವೆ. ಏಕತಾರಿ ನುಡಿಸುತ್ತಾ ತಾನೊಬ್ಬನೆ ಭಜನೆ ಹಾಡುವುದು ಅಲ್ಲಿಯ ಕ್ರಮ,

ಸಾಮೂಹಿಕ ಭಜನೆ ಬದಲಾಯಿಸಿ

ಸಾಮೂಹಿಕ ಭಜನೆ ಮೇಳ ರೂಪದ್ದು. ಇಲ್ಲಿಯ ಸಂಖ್ಯೆಯನ್ನು ನಿರ್ಧಿಷ್ಟವಾಗಿ ಹೇಳದೆ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತ. ತಾಳ, ತಪ್ಪಡಿ, ಏಕತಾರಿ, ಚಾಜು, ಶ್ರುತಿ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ. ಸಾಮೂಹಿಕ ಭಜನೆಯಲ್ಲಿ ಹಿಮ್ಮೇಳವಿರುತ್ತದೆ. ಮುಖ್ಯಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ, ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಇನ್ನು ಕೆಲವೊಮ್ಮೆ ಜತೆಯಲ್ಲೆ ಇಡಿ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ,

ಭಜನೆಯ ಲಕ್ಷಣ ಬದಲಾಯಿಸಿ

ನಿಧಾನಗತಿಯಲ್ಲಿ ಆರಂಭವಾಗಿ ಆ ಮೇಲೆ ತ್ವರಿತಗತಿಯಲ್ಲಿ ಮುಕ್ತಾಯವಾಗುವುದು ಭಜನೆಗಳ ಸಾಮಾನ್ಯ ಲಕ್ಷಣ. ಪ್ರತಿಯೊಂದು ಭಜನೆ ಆರಂಭವಾಗುವಾಗ ಮತ್ತು ಮುಗಿಯುವಾಗ ಮುಖ್ಯಗಾಯಕನು "ಹರ ಹರ ಮಹಾದೇವ" ಎನ್ನುತ್ತಾರೆ, ಆಗ ಎಲ್ಲರೂ ಅದನ್ನು ಪುನರಾವರ್ತಿಸುತ್ತಾರೆ, ಹಾಗೆಯೇ "ಶ್ರೀ ಮದ್ರಮಾರಣ ಗೋವಿಂದ" ಎಂದಾಗ "ಗೋವಿಂದ ಗೋವಿಂದ" ಎಂದು ಗುಂಪಿನಲ್ಲಿ ಗೋವಿಂದವಾಗುವುದು ಇದೆ. ಭಜನೆಯ ಕೊನೆಯ ಹಂತವೆಂದರೆ "ಮಂಗಳ ಪದ". ಆಗ ಹೇಳಿದ ಜಯಕಾರಗಳು ಬಹಳ ಹೊತ್ತಿನವರೆಗೆ ನಡೆಯುತ್ತವೆ, ಸ್ಥಳೀಯ ದೇವರುಗಳಿಗೂ ಆಗ ಜಯಕಾರಗಳಿರುತ್ತವೆ.

ಭಜನೆಯ ಕಾಲ ಬದಲಾಯಿಸಿ

ನಿತ್ಯದ ಭಜನೆಗಳು, ವಾರದ ಭಜನೆಗಳು, ವರ್ಷದ ಭಜನೆಗಳೆಂದು ಸ್ಥೂಲವಾಗಿ ಭಜನೆಯ ಕಾಲಗಳನ್ನು ವಿಭಾಗಿಸಬಹುದು, ಇದಲ್ಲದೇ ಸೋಮವಾರ, ಶನಿವಾರ ಮುಂತಾದ ಆಯಾ ದೇವರಿಗೆ ಸಲ್ಲುವ ವಾರಗಳಲ್ಲಿಯೂ ಭಜನೆ ನಡೆಯುವುದಿದೆ. ದೇವರ ಗುಡಿ, ಮನೆಗಳಲ್ಲಿ ಹಾಗೂ ಕೆಲವೊಮ್ಮೆ ಬೀದಿ ಬೀದಿಗಳಲ್ಲಿ ನಿರ್ಧಿಷ್ಟ ವಾರಗಳಂದು ಭಜನೆ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವರ ಭಾವಚಿತ್ರವನ್ನು ಅಲಂಕರಿಸಿ ಮನೆ ಮನೆಗೆ ಹೋಗುತ್ತಾರೆ, ಮನೆಯವರಿಂದ ಹಣ್ಣುಕಾಯಿ ದಕ್ಷಿಣೆ ಪೂಜೆಗಳಾದ ಮೇಲೆ ಗುಡಿಯಲ್ಲಿಯೂ ಭಜನೆ ಇರುತ್ತದೆ, ಇದಕ್ಕೆ 'ಊರಾಡುವುದು' ಎಂದೇ ಹೆಸರು. ಸಾಮಾನ್ಯವಾಗಿ ಭಜನೆ ಮೇಳದವರಿಗೆ ಆಹಾರ ನಿರ್ಬಂಧಗಳಿಲ್ಲ, ಆದರೂ ಕೆಲವೊಮ್ಮೆ ಭಜನೆಕಾರರು ಫಲಾಹಾರವಷ್ಟೆ ಮಾಡುವುದಿದೆ, ತಿಂಗಳು ಭಜನೆಯು ಸಾಮಾನ್ಯವಾಗಿ ಶ್ರಾವಣ ಮತ್ತು ಕಾರ್ತಿಕಮಾಸದಲ್ಲಿ ನಡೆಯುತ್ತದೆ, ಇಂತಹ ಸಂದರ್ಭಗಳಲ್ಲಿ ಹಗಲು-ರಾತ್ರಿ ನಿರಂತರ ಭಜನೆ ನಡೆಯುತ್ತದೆ, ಕೊನೆಯ ದಿನ ವಿಶೇಷ ಪೂಜೆ ಇರುತ್ತದೆ, ಇಂತಹ ಭಜನೆಗಳಲ್ಲಿ ಭಕ್ತಾದಿಗಳು ಕುಣಿಯುವುದೂ ಇದೆ, ಇದನ್ನು ಭಜನೆ ಕುಣಿತ ಎಂದೂ ಕರೆಯಬಹುದು,

ಭಜನೆಯ ಕುಣಿತ ಬದಲಾಯಿಸಿ

ಭಜನೆಯ ಕುಣಿತ ಸರಳವಾದದ್ದು, ಕುಣಿಯುವವರು ಕೈತಾಳಗಳನ್ನು ಹಿಡಿದುಕೊಂಡು ವೃತ್ತಾಕಾರವಾಗಿ ಸುತ್ತುತ್ತಾರೆ, ಮಧ್ಯ ಮಧ್ಯ ಭಜನೆಯ ತಾಳ ಲಯಕ್ಕನುಗುಣವಾಗಿ ಒಮ್ಮೆ ಎಡಗಾಲು ಮತ್ತೆ ಬಲಗಾಲನ್ನು ಎತ್ತುತ್ತಾ ಏಕಕಾಲದಲ್ಲಿ ತಾಳವನ್ನು ನುಡಿಸುತ್ತಾರೆ, ಇದು ಒಂದು ವಿಧ, ಇನ್ನೊಂದು ವಿಧದಲ್ಲಿ ಮೇಳದವರೆಲ್ಲರೂ ಮುಂದಕ್ಕೆ ಹಾರಿ ತಾಳ ಹಾಕಿ ಮತ್ತೆ ಹಿಂದಕ್ಕೆ ಹಾರಿ ಇನ್ನೊಮ್ಮೆ ತಾಳ ಹಾಕುತ್ತಾರೆ, ಹೀಗೆ ಹಿಂದಕ್ಕೆ ಹಾರುವಾಗ, ತಿರುಗಿ ಅಂದರೆ ಬೆನ್ನ ಹಿಂದಕ್ಕೆ ತಾಳ ಹಾಕುವುದು ವಾಡಿಕೆ, ಹೀಗೆ ಕೆಲವೊಂದು ಅಂಶಿಕ ಬದಲಾವಣೆಗಳಿದ್ದರೂ ಹೆಚ್ಚಾಗಿ ಈ ಕುಣಿತಗಳಲ್ಲಿ ಏಕತನತೆ ಇರುತ್ತದೆ, ಇಂತಹ ಭಜನೆಗಳಿಗೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರಿರುತ್ತಾರೆ, ಹಾಗೆಯೇ ಬೆಳಗಿನವರೆಗೆ ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಾರೆ. ಸಾಮಾನ್ಯವಾಗಿ ಭಜನೆಗಳಲ್ಲಿ ಸ್ತ್ರೀ ಪುರುಷರೆಂಬ ಭೇಧವಿಲ್ಲ, ಪರಸ್ಪರ ಕಲೆತು ಭಜನೆ ಮಾಡಲಾಗುತ್ತದೆ, ಇಂತಹ ಸಂದರ್ಭಗಳಲ್ಲಿ ಸ್ತ್ರೀಯರು ಮತ್ತು ಪುರುಷರು ಪ್ರತ್ಯೆಕವಾಗಿ ಪಂಕ್ತಿಗಳಲ್ಲಿ ಕುಳಿತುಕೊಳ್ಳುತ್ತಾರೆ, ಆದರೆ ಮೇಲೆ ಹೇಳಿದ ಇಂತಹ ಕುಣಿತಗಳಲ್ಲಿ ಸ್ತ್ರೀಯರು ಭಾಗವಹಿಸುವುದಿಲ್ಲ, ಕೆಲವು ಸಂದರ್ಭಗಳಲ್ಲದೆ ಕೆಲವೊಮ್ಮೆ ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಮೈನೆರೆದಾಗ, ಗುರುಗಳ ಪುಣ್ಯ ದಿನದಲ್ಲಿ, ಉರುಸುಗಳಲ್ಲಿಯೂ ಭಜನೆ ನಡೆಯುವುದಿದೆ.

ಉಪಸಂಹಾರ ಬದಲಾಯಿಸಿ

ಆರಾಧನಾ ಕಲೆಯಾದ ಭಜನೆ ಸಂಪ್ರದಾಯಕ್ಕೆ ಸಾಹಿತ್ಯ ಪರಂಪರೆಯಿದೆ, ಮಧ್ಯಕಾಲಿನ ಭಕ್ತಿಪಂಥದ ಪರಂಪರೆಯೇ ಭಜನೆಗೆ ಹಿನ್ನಲೆಯಾಗಿದೆ, ಅಷ್ಟಲ್ಲದೆ ದಾಸ ಸಾಹಿತ್ಯದ ನೇತಾರರೂ ಇದೇ ಪರಂಪರೆಯಲ್ಲಿ ಬರುತ್ತಾರೆ, ಇತ್ತೀಚಿನ ದಿನಗಳಲ್ಲಿ ಭಜನೆಯನ್ನು ಜನಪದ ಪರಂಪರೆಗೆ ತಂದು ನಿಲ್ಲಿಸಿದ ಅನೇಕ ಹಿರಿಯ ಕವಿಗಳು ಇಲ್ಲಿ ಆಗಿ ಹೋಗಿದ್ದಾರೆ, ಕಲಬುರ್ಗಿಯ ಕಡಗೋಳ ಮಡಿವಾಳಪ್ಪ, ಅದೇ ಜಿಲ್ಲೆಯ ರಾಮಾಪುರದ ಬಕ್ಕಪ್ಪ, ಶಿಶುನಾಳ ಶರೀಫ, ಕಲಬುರ್ಗಿಯ ಕೂಡಲೂರು ಬಸವಲಿಂಗ ಶರಣ, ಬಿಜಾಪುರದ ಸಾರವಾಡದ ಚಿಕ್ಕಪ್ಪಯ್ಯ ಇವರೆಲ್ಲ ಉತ್ತರ ಕರ್ನಾಟಕದಲ್ಲಿ ಭಜನೆ ಸಂಪ್ರದಾಯವನ್ನು ಹಿರಿದಾಗಿ ಬೆಳೆಸಿದವರು, ಉಳಿದಂತೆ ದಕ್ಷಿಣ ಕರ್ನಾಟಕದಲ್ಲಿ ಆಯಾ ಪ್ರದೇಶದ ವೃತ್ತಿಗಾಯಕರೇ ಭಜನೆಯನ್ನು ಮುಂದುವರಿಸಿದ್ದಾರೆ, ಆದರೆ ದಕ್ಚಿಣ ಕನ್ನಡದಲ್ಲಿ ಅಂತಹ ಪರಂಪರೆ ಕಂಡುಬರುವುದಿಲ್ಲ.

ಉಲ್ಲೇಖ ಬದಲಾಯಿಸಿ

  1. ಸಂಪಾದಕ: ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಭಜನೆ&oldid=1070744" ಇಂದ ಪಡೆಯಲ್ಪಟ್ಟಿದೆ