ಪರಾಶರ
ಪರಾಶರ ವೇದಸ್ತುತನಾದ ಒಬ್ಬ ಋಷಿ. ಋಗ್ವೇದದಲ್ಲಿ ವಸಿಷ್ಠರೊಂದಿಗೆ ಈತನ ಉಲ್ಲೇಖವಿದೆ. ನಿರುಕ್ತದ ಪ್ರಕಾರ ಈತ ವಸಿಷ್ಠನ ಮಗ. ಮಹಾಕಾವ್ಯದ ಪ್ರಕಾರ ವಸಿಷ್ಠನ ಮಗನಾದ ಶಕ್ತಿಯ ಮಗ. ಶಕ್ತಿ ಮಹರ್ಷಿಯಿಂದ ಅದೃಶ್ಯಂತಿಯಲ್ಲಿ ಜನಿಸಿದವ. ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಶಕ್ತಿಮುನಿಯನ್ನು ಒಬ್ಬ ರಾಕ್ಷಸ ಕೊಂದ. ತನ್ನ ಸಂತತಿ ನಶಿಸುವುದೆಂದು ಹತಾಶನಾಗಿದ್ದ (ಪರಾಶ) ವಸಿಷ್ಠ ವಂಶೋದ್ಧಾರಕನಿಗೆ ಪರಾಶರನೆಂದು ಹೆಸರಿಟ್ಟ. ತನ್ನ ತಂದೆ ರಾಕ್ಷಸನಿಂದ ಹತನಾದದ್ದನ್ನು ತಿಳಿದ ಪರಾಶರ ಲೋಕವಿನಾಶಕ್ಕಾಗಿ ಯಜ್ಞ ಮಾಡತೊಡಗಿದ.[೧] ಅದು ಸಲ್ಲದೆಂಬ ವಸಿಷ್ಠನ ಉಪದೇಶದಿಂದ ಆ ಯಜ್ಞವನ್ನು ನಿಲ್ಲಿಸಿ ರಾಕ್ಷಸ ವಿನಾಶಕ್ಕಾಗಿ ಯಜ್ಞ ಮಾಡತೊಡಗಿದ. ತೀರ್ಥಯಾತ್ರಾನಿಮಿತ್ತದಿಂದ ಭೂಮಂಡಲದಲ್ಲಿ ಸುತ್ತುತ್ತಿದ್ದ ಈತ ಒಮ್ಮೆ ಯಮುನಾ ನದಿಯ ಬಳಿಗೆ ಬಂದಾಗ ಬೆಸ್ತಕನ್ಯೆಯಾದ ಸತ್ಯವತಿಯನ್ನು ಕೂಡಿದನಾದರೂ ಅನಂತರ ಆಕೆಗೆ ಕನ್ಯತ್ವವನ್ನು ಅನುಗ್ರಹಿಸಿದ ಇವರ ಮಗನೇ ವ್ಯಾಸ.
ತಾಯಿಯ ಗರ್ಭದಲ್ಲಿರುವಾಗಲೇ ಪರಾಶರ ವೇದಾಧ್ಯಯನನಿರತನಾಗಿದ್ದ. ಕಪಿಲನ ಶಿಷ್ಯನಾದ ಈತ ವಿಷ್ಣುಪುರಾಣವನ್ನು ಪೌಲಸ್ತ್ಯನಿಂದ ಪಡೆದು ಮೈತ್ರೇಯನಿಗೆ ಬೋಧಿಸಿದ. ಧರ್ಮಶಾಸ್ತ್ರ ಹಾಗೂ ನ್ಯಾಯಶಾಸ್ತ್ರದ ಬಗೆಗಿನ ಗ್ರಂಥಗಳು ಇವನ ಹೆಸರಿನಲ್ಲಿವೆ. ಜನಕ ಮತ್ತು ಪರಾವಶರ ಸಂವಾದವನ್ನೇ ಪರಾಶಗೀತೆ ಎನ್ನುತ್ತಾರೆ.
ಪರಾಶರ 26 ನೆಯ ದ್ವಾಪರದ ವ್ಯಾಸನೆಂದೂ ಒಂದು ಋಗ್ವೇದ ಶಾಖೆಯ ಹಾಗೂ ಸಾಮವೇದ ಗುರುವೆಂದೂ ತಿಳಿಯಲಾಗಿದೆ.
ಮತ್ತೊಬ್ಬ ಪರಾಶರ ಪ್ರಸಿದ್ಧ ನ್ಯಾಯಶಾಸ್ತ್ರದ ಕರ್ತೃ. ಯಾಜ್ಞವಲ್ಕ್ಯ ಈತನನ್ನು ಉಲ್ಲೇಖಿಸಿದ್ದಾನೆ. ವ್ಯಾಖ್ಯಾನಕಾರರೂ ಆಗಾಗ್ಗೆ ಈತನನ್ನು ಉಲ್ಲೇಖಿಸಿದ್ದಾರೆ. ತಂತ್ರದ ಪ್ರತಿಷ್ಠತ ಲೇಖಕನ ಹೆಸರೂ ಪರಾಶರನೆಂದಿದೆ. ಜ್ಯೋತಿಶಾಸ್ತ್ರ ಕೃತಿಯೊಂದರ ಕರ್ತೃತ್ವವೂ ಪರಾಶರನೆಂದಿದೆ. ಇವರು ಕ್ರಮವಾಗಿ ಮೂರು ಮತ್ತು ನಾಲ್ಕನೆಯ ಪರಾಶರರಿಬೇಕು ಎಂದು ತಿಳಿಯಲಾಗಿದೆ.
ಉಲ್ಲೇಖ
ಬದಲಾಯಿಸಿ- ↑ https://www.speakingtree.in/blog/rishi-parashara%7Ctitle=Rishi Parashara - Speaking Tree|last=|first=|date=|website=|archive-url=|archive-date=|dead-url=|access-date=