ಅಥರ್ವವೇದ

(ಅಥರ್ವಣವೇದ ಇಂದ ಪುನರ್ನಿರ್ದೇಶಿತ)

ಅಥರ್ವವೇದ ಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು. ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸರು. ಇದರಲ್ಲಿ ೨೦ ಕಾಂಡಗಳೂ, ೭೬೦ ಸೂಕ್ತಗಳೂ, ೬೦೦೦ ಮಂತ್ರಗಳೂ ಇವೆ. ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ. ಈ ವೇದದಲ್ಲಿ ವಿವಾಹ ಪದ್ಧತಿ,ಶವಸಂಸ್ಕಾರ, ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ. ಮಾಟ ಮಂತ್ರ, ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದವುಗಳೂ ವಿಸ್ತಾರವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಧನುರ್ವಿದ್ಯೆ, ರೋಗನಿವಾರಣೋಪಾಯ, ಔಷಧಿಗಳ ವಿವರ ಕೂಡಾ ಇದರಲ್ಲಿದೆ. ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ. ಇದು ದಿನನಿತ್ಯದ ಜೀವನಕ್ಕೆ ಬೇಕಾದ ಜ್ಞಾನವನ್ನು ಕೊಡುವ ಭಂಡಾರವೇ ಆಗಿದೆ.[] ಇದು ವೇದಗಳ ರಚನೆಯಲ್ಲಿ ಕೊನೆಯದು.[][]

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಪರ್ಯಾಯ ನಾಮಗಳು

ಬದಲಾಯಿಸಿ

ಚತುರ್ವೇದಗಳಲ್ಲಿ ಎಲ್ಲಕ್ಕಿಂತ ಕಡೆಯದೂ ಎಲ್ಲಕ್ಕಿಂತ ಜನರ ಭಯಭೀತಿಗಳಿಗೆ, ಮುಟ್ಟಲೂ ಅಂಜುವ ಭಕ್ತಿ ಭಾವನೆಗೆ ಆಸ್ಪದವೆನಿಸಿರುವುದೂ ಅತ್ಯಂತ ಕಡಿಮೆ ಪ್ರಚಾರದ್ದೂ ಆದ ಇದಕ್ಕೆ ಅಥರ್ವಾಂಗಿರಸಃ, ಭೃಗ್ವಂಗಿರಸಃ, ಬ್ರಹ್ಮವೇದ ಎಂಬ ನಾಮಾಂತರಗಳೂ ಉಂಟು. ಇಲ್ಲಿಯ ಮಂತ್ರಗಳನ್ನು ಆಥರ್ವಣ, ಆಂಗಿರಸ ಎಂಬ ಶಬ್ದಗಳಿಂದ ವ್ಯವಹರಿಸುವುದೂ ಉಂಟು. ಅಥರ್ವಣ ಮಂತ್ರಗಳು ಪ್ರಾಯಿಕವಾಗಿ ಶಾಂತವೆಂದೂ ಆಂಗಿರಸ ಮಂತ್ರಗಳು ಘೋರ ಎಂದರೆ ಆಭಿಚಾರಿಕವೆಂದೂ ಸಾಮಾನ್ಯವಾಗಿ ಇಂದಿನ ವಿದ್ವಾಂಸರ ಅಭಿಪ್ರಾಯ. ಅಥರ್ವ, ಆಂಗಿರಸ್, ಭೃಗು ಶಬ್ದಗಳು ಅತಿಪ್ರಾಚೀನ ಕಾಲದ ಪುರೋಹಿತರ ಹೆಸರುಗಳಾಗಿದ್ದಿರಬಹುದಾದರೂ ಅಥರ್ವ-ವೇದ-ಸಂಹಿತೆಯ ವೇಳೆಗೆ ಆ ಶಬ್ದಗಳ ವಿಶಿಷ್ಟಾರ್ಥ ಲುಪ್ತವಾಗಿ, ಸಾಮಾನ್ಯವಾದ ಶಾಂತಿಕ-ಪೌಷ್ಟಿಕ-ಆಭಿಚಾರಿಕ ಕರ್ಮಗಳೆಂಬ ಅರ್ಥ ಬಂದುದಾಗಿರುವಂತೆ ಕಾಣುತ್ತದೆ. ಬ್ರಹ್ಮ-ವೇದವೆನ್ನುವಾಗ ಬ್ರಹ್ಮಶಬ್ದಕ್ಕಾದರೂ ಈ ಸಾಮಾನ್ಯಾರ್ಥವೇ ವಿವಕ್ಷಿತ. ಕಡೆಕಡೆಗೆ ಯಜ್ಞಕರ್ಮಗಳಲ್ಲೂ ಅಥರ್ವವೇದಕ್ಕೆ ಸ್ಥಾನವೊಂದನ್ನು ಕಲ್ಪಿಸಿದಾಗ ಮೊದಮೊದಲು ಋಗ್ವೇದಾದಿ ಸೋಮಯಾಗಗಳಲ್ಲಿ ಅಥರ್ವಣ ಸವಗಳಿಗೆ (ಸೋಮೇತರ ಆಹುತಿಗಳಿಗೆ) ಸ್ಥಾನವಿದ್ದಂತೆ ತೋರುವುದಿಲ್ಲ. ಪುರೋಹಿತರಲ್ಲಿ ಅಧ್ಯಕ್ಷನಾದವನಿಗೆ ಬ್ರಹ್ಮ ಎಂಬ ಹೆಸರು ನಿಯುಕ್ತವಾಯಿತಷ್ಟೇ ಅಲ್ಲ; ಅವನಿಗೆ ಅಥರ್ವವೇದ ತಿಳಿದಿರಬೇಕೆಂಬುದೂ ವಿಹಿತವಾಯಿತು. ಆದರೆ ಪೂರ್ವಪರಂಪರೆಯಲ್ಲಿ ಮುಖ್ಯವಾಗಿ ತ್ರಯೀ ಎಂಬ ಗೌರವಕ್ಕೆ ಪಾತ್ರವಾದ ತ್ರಿವೇದಗಳಿಗೆ ಮಾತ್ರ ಮಹತ್ತ್ವವಿತ್ತು. ಇದನ್ನೇ ಅಮರಕೋಶವೂ ಉಲ್ಲೇಖಿಸುತ್ತದೆ.

ಪರಿವಿಡಿ

ಬದಲಾಯಿಸಿ

ಈ ಅಂಶವನ್ನು ನೆನಪಿನಲ್ಲಿಟ್ಟರೆ ಅಥರ್ವ-ವೇದ-ಸಂಹಿತೆಯ ಕಾರ್ಯನಿರ್ಣಯಕ್ಕೆ ಅನುಕೂಲವಾಗುತ್ತದೆ. ಉಚ್ಚವರ್ಗದ ಪುರೋಹಿತರ ಪೂಜಾಪರಿಕರವನ್ನು ತ್ರಿವೇದಗಳು ಪ್ರತಿಬಿಂಬಿಸುವಂತೆ, ಸಾಮಾನ್ಯ ಜನರ ಜೀವನದಲ್ಲಿ ನಿತ್ಯೋಪಯುಕ್ತ ಕರ್ಮಾಚರಣೆಗಳನ್ನು ಅಥರ್ವವೇದ ತೋರಿಸುತ್ತದೆ. ಮೊದಲನೆಯವು ಹೆಚ್ಚಾಗಿ ನಿತ್ಯಕರ್ಮಗಳು; ದೇವತಾರ್ಪಣಕ್ಕಾಗಿ ಹೊರಟವು. ಅವಕ್ಕೆ ಸಾರ್ವತ್ರಿಕ ಕಲ್ಯಾಣವೇ ಗುರಿ. ಅಥರ್ವವೇದ ಹೆಚ್ಚಾಗಿ ಕಾಮ್ಯ, ನೈಮಿತ್ತಿಕ ಆಚರಣೆಗಳಿಗೆ ಮೀಸಲು. ಪಿಶಾಚಾದಿಗಳಂತೆ ಕ್ಷುದ್ರದೇವತೆಗಳನ್ನೂ ಒಲಿಸುವ ಉದ್ದೇಶ ಇಲ್ಲಿ ಉಂಟು; ವೈಯಕ್ತಿಕ ಇಷ್ಟಸಾಧನೆಗಳೇ ಇಲ್ಲಿ ಧ್ಯೇಯವಾಗಬಲ್ಲವು. ಹೀಗೇ ಇಲ್ಲಿಯ ಮಂತ್ರಗಳ ರಚನಾಕಾಲ ಋಗ್ವೇದಮಂತ್ರಗಳ ಸೃಷ್ಟಿಕಾಲದಷ್ಟೇ ಪ್ರಾಚೀನವಾಗಿರುವುದು ಶಕ್ಯ. ಭಿನ್ನ ಜನವರ್ಗಗಳ ಈ ವೇದಗಳು ಒಂದೇ ಸಮಾಜದ ಭಿನ್ನ ಧ್ಯೇಯಗಳನ್ನು ಕುರಿತಿರುವುದರಿಂದ ತ್ರಿವೇದಗಳನ್ನು ಆರ್ಯಸಂಸ್ಕೃತಿಯ ಆವಿಷ್ಕಾರವೆಂದೂ ಅಥರ್ವವೇದ ಆರ್ಯೇತರ ಸಂಸ್ಕೃತಿಗಳ ಕುರುಹೆಂದೂ ನಿರ್ಣಯಿಸಲು ಪ್ರಮಾಣ ಸಾಲದು. ಆದರೂ ಋಗ್ವೇದ-ಸಂಹಿತೆಯ ಋಷಿ-ಮಂಡಲಗಳಲ್ಲಿ ಇದರ ಉಲ್ಲೇಖವೇ ಇಲ್ಲದಿರುವುದನ್ನೂ ಐತರೇಯ, ಗೋಪಥ, ಶತಪಥ ಮುಂತಾದ ಬ್ರಾಹ್ಮಣಗಳಲ್ಲಿ ಮಾತ್ರವೇ ಸ್ಪಷ್ಟ ಉಲ್ಲೇಖವಿರುವುದನ್ನೂ ಇಲ್ಲಿ ಋಗ್ವೇದ ದೇವತೆಗಳಿಗೆಲ್ಲ ಗೃಹ್ಯಾದಿ ಕರ್ಮಗಳಲ್ಲಿ ವಿನಿಯೋಗ, ಮಾಟ, ಜಾದು ಮುಂತಾದುವುಗಳ ಜೊತೆಜೊತೆಗೇ ಆಧ್ಯಾತ್ಮಿಕ ಜನಜನಿತ ಹಾಗೂ ಕ್ಷುದ್ರಾಚಾರಗಳ ಸಮಾವೇಶ, ಚಾತುರ್ವಣ್ಯಗಳ ನಿರೂಪಣೆ, ಹುಲಿಯ ಪರಿಚಯ, ಗಂಗಾತೀರದ ವಸತಿಗಳ ಉಲ್ಲೇಖ- ಇವುಗಳನ್ನೆಲ್ಲ ಗಮನಿಸಿದರೆ ಋಗ್ವೇದ-ಸಂಹಿತೆಯಾದ ಮೇಲೆ ಬ್ರಾಹ್ಮಣಯುಗದಲ್ಲಿ ಅಥರ್ವವೇದ-ಸಂಹಿತೆ ಮೂಡಿದಂತೆ ತೋರುತ್ತದೆ. ವಿಷಯನಿರೂಪಣೆಯಲ್ಲಿ ಮುಂದಿನ ಗೃಹ್ಯ ಸೂತ್ರಗಳೊಡನೆ ಹೆಚ್ಚಿನ ಹೋಲಿಕೆ ಇದಕ್ಕುಂಟೆನ್ನಬಹುದು. ವಾಕ್-ಸಂಸ್ಕಾರಕ್ಕೆ ತ್ರಯೀ ಕಾರಕವಾದರೆ ಮನಸ್ಸಿನ ಸಂಸ್ಕಾರಕ್ಕೆ ಅಥರ್ವವೇದ ಪ್ರಯೋಜಕ ಎಂಬ ಮಾತು ಐತರೇಯ (ಗಿ-33) ಮತ್ತು ಗೋಪಥ (III-2) ಬ್ರಾಹ್ಮಣಗಳಲ್ಲಿ ಬರುತ್ತದೆ. ಯಜ್ಞಕ್ಕೆ ಎರಡು ಸಂಸ್ಕಾರಗಳೂ ಬೇಕು.

ಸಂರಚನೆ

ಬದಲಾಯಿಸಿ
 
A page from the Atharva Veda Samhita, its most ancient layer of text.

ಅಥರ್ವವೇದದಲ್ಲಿ ಬೇರೆ ಬೇರೆ ವಿಭಾಗಕ್ರಮಗಳ ಪ್ರಕಾರ 20 ಕಾಂಡಗಳು, 34 ಪ್ರಪಾಠಕಗಳು, 111 ಅನುವಾಕಗಳು, 773 ವರ್ಗಗಳು, 731 ಸೂಕ್ತಗಳು, 6,000 ಮಂತ್ರಗಳು ಇವೆ. ಇದು ಪ್ರಸಿದ್ಧವಾದ ಶೌನಿಕ ಶಾಖೆಯನ್ನು ಕುರಿತುದು. ಇವುಗಳಲ್ಲಿ ಕಡೆಯ 20ನೆಯ ಕಾಂಡ ಋಗ್ವೇದ ಮಂತ್ರಗಳಿಂದಲೇ ತುಂಬಿರುವುದರಿಂದ ಇದು ಅನಂತರ ಕೂಡಿಸಿದ ಪ್ರಕ್ಷೇಪವೆನಿಸುತ್ತದೆ. ಉಳಿದ ಕಾಂಡಗಳಲ್ಲಿ ಋಗ್ವೇದ ಮಂತ್ರಗಳ ಉಲ್ಲೇಖ 1/7 ರಷ್ಟು ಮಾತ್ರವಿದೆ. ಈ ಉಲ್ಲೇಖಗಳಲ್ಲಿ ಋಗ್ವೇದದ ಒಂದು, ಎಂಟು ಮತ್ತು ಹತ್ತನೆಯ ಮಂಡಲಗಳಿಂದ ಮಾತ್ರ ತೆಗೆದವು. ಈ ಕಾಂಡಗಳ ಯೋಜನೆಯಲ್ಲಿ ಒಂದು ನಿಯಮವೂ ಉಂಟು. ಮೊದಲ ಏಳು ಕಾಂಡಗಳಲ್ಲಿ ಸೂಕ್ತಗಳ ಮಂತ್ರಸಂಖ್ಯೆ ಕಾಂಡದಿಂದ ಕಾಂಡಕ್ಕೆ ಹೆಚ್ಚುತ್ತ ಹೋಗುತ್ತದೆ: ಒಂದರಲ್ಲಿ 4; ಎರಡರಲ್ಲಿ 5; ಮೂರರಲ್ಲಿ 6; ನಾಲ್ಕರಲ್ಲಿ 7; ಐದರಲ್ಲಿ 8 ರಿಂದ 18; ಆರರಲ್ಲಿ 3;ಏಳರಲ್ಲಿ 2 ಅಥವಾ 1; ಏಳು-ಹದಿನಾಲ್ಕು,ಹದಿನೇಳು, ಹದಿನೆಂಟು ಈ ಕಾಂಡಗಳಲ್ಲಿ 21 ರಿಂದ 89ರವರೆಗೆ ಮಂತ್ರ ಸಂಖ್ಯೆಯಿರುವ ಉದ್ದುದ್ದನೆಯ ಸೂಕ್ತಗಳಿವೆ. ಹದಿನೈದು ಮತ್ತು ಹದಿನಾರರಲ್ಲಿ ಬ್ರಾಹ್ಮಣದ ಗದ್ಯದಂತಿರುವ ಗದ್ಯವಿದೆ.

ಶಾಖೆಗಳು

ಬದಲಾಯಿಸಿ

ಅಥರ್ವವೇದದಲ್ಲಿ 9 ಶಾಖೆಗಳಿದ್ದುದನ್ನು ಮಹಾಭಾಷ್ಯವೇ ಮೊದಲಾದ ಪೂರ್ವಕೃತಿಗಳು ಹೇಳಿದರೂ ಈಗ ಉಪಲಬ್ಧವಿರುವ ಶಾಖೆಗಳು ಎರಡೇ. ಶೌನಕ ಶಾಖೆಯಷ್ಟು ಕೂಡ ಪ್ರಚಾರವಿಲ್ಲದ ಎರಡನೆಯ ಶಾಖೆಯೇ ಪೈಪ್ಪಲಾದ ಶಾಖೆ[]. ಇವರೆಡೂ ಶಾಖೆಗಳು ಮೊದಲಿಗೆ ಜರ್ಮನಿಯ ವಿದ್ವಾಂಸರಿಂದ ಪ್ರಕಟಗೊಂಡುವು. ಪತಂಜಲಿ ಶನ್ನೋದೇವೀರಭೀಷ್ಟಯೇ ಎಂದು ಸೂಚಿಸುವ ಆದ್ಯಮಂತ್ರ ಪೈಪ್ಪಲಾದ ಶಾಖೆಗೇ ಅನ್ವಯಿಸುತ್ತದೆ.ಪೈಪಲಾದ ಹಳೆಯದು.[] ಸಾಯಣ ಭಾಷ್ಯವಿರುವುದು ಶೌನಕಶಾಖೆಗೆ ಮಾತ್ರ. ಇದನ್ನೇ ಈ ಲೇಖನದಲ್ಲಿ ಆಧರಿಸಲಾಗಿದೆ.

ಕಾಂಡಗಳು

ಬದಲಾಯಿಸಿ

ಅಥರ್ವವೇದದ (ಶೌನಕಶಾಖೆ) ಮೊದಲ ಎರಡು ಕಾಂಡಗಳಲ್ಲಿ ತೊನ್ನು, ಕುಷ್ಠ ಮುಂತಾದ ರೋಗಗಳಿಗೆ ಶಾಂತಿಕರ್ಮವನ್ನು ಹೇಳಿದೆ. III ರಲ್ಲಿ ಬಾಲಗ್ರಹ, ಕ್ಷಯ, ವಶೀಕರಣ ಮುಂತಾದುವುಗಳ ಪ್ರಸ್ತಾಪವಿದೆ. ನಾಲ್ಕರಲ್ಲಿ ಧೂಮಕೇತುವೇ ಮುಂತಾದ ಉತ್ಪಾತಗಳ ಶಾಂತಿಗಾಗಿ ವರುಣಸ್ತೋತ್ರ ವಿಹಿತವಾಗಿದೆ. ಐದರಲ್ಲಿ ದನಗಳ ಕಳ್ಳರು, ಶತ್ರುಗಳು ಮುಂತಾದವರನ್ನು ಅಂಜಿಸುವ ಮಂತ್ರಗಳಿವೆ. ಶೂದ್ರರಲ್ಲಿ ಶೀತಜ್ವರ ಹೆಚ್ಚಾಗಿರುತ್ತದೆಂದು ಇಲ್ಲಿ ತಿಳಿಸಲಾಗಿದೆ (೫, ೨೨, ೭). ಗೋಬ್ರಾಹ್ಮಣರಿಗೆ ಪೀಡೆ ಮಾಡುತ್ತಿದ್ದವರಿಗೆ ರಾಜ ದಂಡ ವಿಧಿಸುತ್ತಿದ್ದುದು ಇಲ್ಲಿ ಕಂಡುಬರುತ್ತದೆ (೫. ೧೯). ಆರರಲ್ಲಿ ಕಾಸ, ಶ್ಲೇಷ್ಮ ಮುಂತಾದ ರೋಗಗಳ ಶಾಂತ್ಯುಪಾಯ, ಅಗ್ನಿಭಯನಿವೃತ್ತಿಗೆ ಮಂತ್ರ ಮುಂತಾದವು ಬರುತ್ತವೆ.ಏಳರಲ್ಲಿ ಸಭೆಯಲ್ಲಿ ವಿಜಯಪ್ರಾಪ್ತಿಗೆಂದು ಉಕ್ತವಾದ ಮಂತ್ರಗಳುಂಟು.ಎಂಟರಲ್ಲಿ ಒಂದು ಮಂತ್ರ (ಎಂಟು- 4) ಮೃತ್ಯುವನ್ನು ಗೆದ್ದು ದೀರ್ಘಾಯುಷ್ಯವನ್ನು ಪಡೆಯುವುದನ್ನು ಕುರಿತಿದೆ. ಒಂಭತ್ತರಲ್ಲಿ ಮಧುಕಶಾ ಮುಂತಾದ ಔಷಧಿಗಳ ಉಲ್ಲೇಖವಿದೆ.ಹತ್ತರಲ್ಲಿ ದೇವತಾವಾದ ಬರುತ್ತದೆ. ಹನ್ನೊಂದರಲ್ಲಿ ಬ್ರಹ್ಮಚರ್ಯದ ಮಹಿಮೆ ವರ್ಣಿತವಾಗಿದೆ. ಹನ್ನೆರಡರಲ್ಲಿ ದೇಶಭಕ್ತಿಯಿಂದ ತುಂಬಿ ತುಳುಕುವ ಪ್ರಸಿದ್ಧ ಪೃಥಿವೀಸೂಕ್ತವಿದೆ. ಹದಿಮೂರು, ಹದಿನಾಲ್ಕು, ಹದಿನೈದು, ಹದಿನಾರರಲ್ಲಿ ಅನೇಕ ಚಿಲ್ಲರೆ ವಿಷಯಗಳೂ ವಿವಾಹ, ಸ್ತ್ರೀಕರ್ಮ ಮುಂತಾದವೂ ಬರುತ್ತವೆ. ಹದಿನೇಳರಲ್ಲಿ ಆಧ್ಯಾತ್ಮಿಕ ಮಂತ್ರಗಳು ಹೆಚ್ಚು. ಹದಿನೆಂಟರಲ್ಲಿ ಶ್ರಾದ್ಧ ಮಂತ್ರಗಳುಂಟು ; ಯಮಸ್ತುತಿ ಇಲ್ಲಿ ಬರುತ್ತದೆ. ಹತ್ತೊಂಭತ್ತರಲ್ಲಿ ಛಂದಸ್ಸುಗಳ ನಕ್ಷತ್ರಗಳ ಪ್ರಸ್ತಾಪವಿದೆ. ಆಗ ಕೃತ್ತಿಕೆಯಿಂದ ಮೊದಲುಮಾಡಿ ನಕ್ಷತ್ರಗಳನ್ನು ಎಣಿಸುತ್ತಿದ್ದರು, ಅಶ್ವಿನಿಯಿಂದಲ್ಲ. ಈ ಕಾಂಡದ ಕಡೆಗೆ ರಾಜಸೂಯಯಾಗದ ವರ್ಣನೆಯಿದೆ ; ಕಡೆಯ ಇಪ್ಪತ್ತನೆಯ ಕಾಂಡದಲ್ಲಿ ಸೋಮಯಾಗದ ವಿವರಣೆಯಿದೆ.

ವಿಷಯಗಳು

ಬದಲಾಯಿಸಿ

ಅತ್ಯಂತ ಸಂಕ್ಷೇಪವಾಗಿ ಹೇಳುವುದಾದರೆ, ಅಥರ್ವವೇದದಲ್ಲಿ ಮೂರು ಬಗೆಯ ಅಂಶಗಳಿಗೆ ಮಹತ್ತ್ವ ಹೆಚ್ಚು : 1. ಮಂತ್ರಗಳು 2. ಔಷಧಿಗಳು 3. ಬಗೆ ಬಗೆಯ ಮೂಲಿಕೆ, ಮಣಿ- ಇತ್ಯಾದಿಗಳು. ಇವುಗಳಿಂದ ಐಹಿಕವಾದ ದುಃಖ ದಾರಿದ್ರ್ಯಗಳನ್ನೂ ವಿಘ್ನವಿಘಾತಗಳನ್ನೂ ರೋಗಶೋಕಗಳನ್ನೂ ನಿವಾರಣೆ ಮಾಡಿಕೊಂಡು ಲೌಕಿಕ ಕಲ್ಯಾಣವನ್ನು ಪಡೆಯುವುದು, ಸವಗಳಿಂದ ಸ್ವರ್ಗವನ್ನು ಸಾಧಿಸುವುದು, ಬ್ರಹ್ಮವಿದ್ಯೆಯಿಂದ ನಿಃಶ್ರೇಯಸವನ್ನು ಗಳಿಸುವುದು. ಹೀಗೆ ಮಾನವನ ಸರ್ವಾಂಗೀಣ ಜೀವನಕ್ಕೆ ಸಾಧಕವಾದ ಸಕಲಾಂಶಗಳೂ ಇಲ್ಲಿ ಸೇರಿರುವ ಕಾರಣ ಮುಂದಿನ ಆಯುರ್ವೇದ, ಅರ್ಥಶಾಸ್ತ್ರ, ಧನುರ್ವೇದ, ನಾಟ್ಯಶಾಸ್ತ್ರ, ಕಾಮಶಾಸ್ತ್ರ- ಇತ್ಯಾದಿ ಲೌಕಿಕ ವಿದ್ಯೆಗಳಿಗೆಲ್ಲ ಅಥರ್ವವೇದವೇ ಉಗಮವೆಂಬ ಪ್ರತೀತಿ ಬಹಳಮಟ್ಟಿಗೆ ಸಾಧುವೆಂದೇ ತಿಳಿಯಬಹುದು.

ಭಾಷೆ-ಛಂದಸ್ಸು

ಬದಲಾಯಿಸಿ

ಋಗ್ವೇದದ ಭಾಷೆಗಿಂತ ಅಥರ್ವವೇದದ ಭಾಷೆ ಹೆಚ್ಚು ಒರಟಾದರೂ ಹೆಚ್ಚು ಸತ್ತ್ವಯುತವಾದುದು. ಋಗ್ವೇದಯುಗಕ್ಕಿಂತ ಬ್ರಾಹ್ಮಣಯುಗದ ಭಾಷೆಗೆ ಸಮೀಪಿಸುವ ಶಬ್ದಪ್ರಯೋಗವೇ ಹೆಚ್ಚು; ಆದುದರಿಂದ ಋಗ್ವೇದಕ್ಕಿಂತ ಇದು ಅರ್ಥವಾಗುವುದು ಸುಲಭ; ಸಂಸ್ಕೃತ ಭಾಷೆಗೆ ಮತ್ತು ನಿಕಟವೆನಿಸುವುದರಿಂದ ಛಂದಸ್ಸಿನ ವಿಷಯದಲ್ಲಿ ಕೂಡ ಋಗ್ವೇದದಲ್ಲಿ ಕಾಣದ ನಿರಂಕುಶತೆ ಅಥವಾ ಸ್ವಚ್ಛಂದತೆ ಇಲ್ಲಿ ಹೆಚ್ಚು. ಸಾಮಾನ್ಯವಾಗಿ ಇಲ್ಲಿ ಛಂದಸ್ಸಿನ ಸಾಲುಗಳ ಇಲ್ಲವೆ ಲಯಗಳ ಸೂಕ್ಷ್ಮ ನಿಯಮಗಳ ಪಾಲನೆಯ ಪ್ರವೃತ್ತಿಯಿಲ್ಲ. ಸನ್ನಿವೇಶಕ್ಕೆ ಅನುಸಾರವಾಗಿ ಮೂಲನಿಯಮಗಳನ್ನು ಮರೆಯಾಗಿಸುವ ಮಟ್ಟಿಗೆ ಛಂದಸ್ಸುಗಳನ್ನು ಇಲ್ಲಿ ಬಳಸಲಾಗಿದೆ : ಪದ್ಯದಂತೆ ಗದ್ಯವೂ ಇದೆ. ಇಷ್ಟಾದರೂ ಅಥರ್ವವೇದದ ಕಾವ್ಯಗುಣ ಒಮ್ಮೊಮ್ಮೆ ಋಗ್ವೇದದ ಕಾವ್ಯಗುಣವನ್ನೂ ಹಿಂದೆ ಹಾಕುತ್ತದೆನ್ನಬಹುದು. ರಾಷ್ಟ್ರಪ್ರೇಮದ ಉಜ್ವ್ವಲ ಪ್ರಗಾಥವೆನಿಸುವ ಪೃಥಿವೀಸೂಕ್ತವನ್ನು ಇಲ್ಲಿ ಎತ್ತಿ ಹೇಳಬಹುದಾಗಿದೆ. ದೈವತ ಆವರಣವನ್ನು ಹಿಂದೆ ಬಿಟ್ಟು, ಕೇವಲ ಮಾನವನ ಆಶೆ-ಆಕಾಂಕ್ಷೆಗಳನ್ನು ಹೃದಯಸ್ಫೂರ್ತಿಯಿಂದ ಇಲ್ಲಿ ಮಿಡಿಯುವ ಅನೇಕ ಸೂಕ್ತಗಳಿರುವುದರಿಂದ, ಇವನ್ನೇ ಭಾರತೀಯ ಭಾವಗೀತೆಗೆ ಉಗಮಸ್ಥಾನಗಳೆಂದು ಗಣಿಸುವ ವಿದ್ವಾಂಸರೂ ಉಂಟು.

ಧರ್ಮ ಮತ್ತು ತತ್ತ್ವಸ್ವರೂಪ

ಬದಲಾಯಿಸಿ

ಸ್ತೋತ್ರಗಳಿಂದಲೂ ಆಜ್ಯಾದಿಗಳ ಆಹುತಿಯಿಂದಲೂ ಅಗ್ನಿ, ಇಂದ್ರ, ವರುಣ ಮುಂತಾದ ಸಾತ್ತ್ವಿಕ ದೇವತೆಗಳನ್ನು ಒಲಿಸಿ ಅವರ ಅನುಗ್ರಹವನ್ನು ಪಡೆಯುವ ಪೂಜಾವಿಧಾನ ಋಗ್ವೇದದಲ್ಲಿ ಪ್ರಧಾನ; ಆದರೆ ಅಥರ್ವವೇದದಲ್ಲಿ ಅದೃಶ್ಯದುಷ್ಟಶಕ್ತಿಗಳನ್ನು ಕೂಡ ತಮ್ಮ ಮಂತ್ರಬಲದಿಂದ ವಶಪಡಿಸಿಕೊಂಡು ತಮ್ಮ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವ ತಂತ್ರಕ್ಕೆ ಅಗ್ರಸ್ಥಾನ. ಋಗ್ವೇದದ ದೇವತೆಗಳೆಲ್ಲ ಸಾತ್ವಿಕ ದೀಪ್ತಿಯಿಂದ ದ್ಯುಲೋಕದಲ್ಲಿ ಬೆಳಗುತ್ತಾರೆ. ಅಥರ್ವವೇದದಲ್ಲಿ ಮಾತ್ರ ತಾಮಸಶಕ್ತಿಗಳಿಗೂ ಪಿಶಾಚಾದಿ ಕ್ರೂರ ದೇವತೆಗಳಿಗೂ ಸ್ಥಾನವುಂಟು. ಮಂತ್ರಬಲದಿಂದ ಇವುಗಳ ಆವಾಹನೆ, ಉಚ್ಚಾಟನೆ ಎರಡಕ್ಕೂ ಅಥರ್ವವೇದದಲ್ಲಿ ಮಂತ್ರತಂತ್ರಗಳ ಪ್ರಕ್ರಿಯೆಗಳುಂಟು. ಋಗ್ವೇದದ ಯಜ್ಞಕರ್ಮದಲ್ಲಿ ಉತ್ತಮ ದೇವತೆಗಳ ಉಪಾಸನೆಗೆ ಮಾತ್ರ ಸ್ಥಾನ; ಅಥರ್ವವೇದದ ತಂತ್ರಕಲ್ಪದಲ್ಲಿ ಕ್ಷುದ್ರದೇವತೆಗಳ ವಶೀಕರಣವೇ ಪ್ರಬಲ. ಶ್ರೌತ ಉಪಾಸನೆಯ ಗುರಿ ಲೋಕ ಕಲ್ಯಾಣ ಮತ್ತು ಸಮಾಜದ ಕ್ಷೇಮ. ಆದರೆ ಅಥರ್ವಣವಿಧಿಯ ಗುರಿ ಶತ್ರುಮಾರಣ, ಸ್ತ್ರೀವಶೀಕರಣ, ಭೂತೋಚ್ಚಾಟನ, ಸ್ವಕಾರ್ಯಸಾಧನ- ಹೀಗೆ ಋಗ್ವೇದದಲ್ಲಿ ನಾವು ಕಾಣುವ ಧಾರ್ಮಿಕ ಜಗತ್ತಿಗೂ ಅಥರ್ವವೇದದ ಜಗತ್ತಿಗೂ ಗುರಿಯಲ್ಲಿ, ಅನುಸರಿಸುವ ಉಪಾಯದಲ್ಲಿ-ಎರಡರಲ್ಲೂ ಎದ್ದು ತೋರುವ ಅಂತರವಿದೆ. ಒಂದು ಪ್ರಶಾಂತ, ಪ್ರಭಾಮಯವಾದರೆ ಇನ್ನೊಂದು ಕತ್ತಲೆಯ ಉಗ್ರನೆರಳುಗಳಿಂದ ಆವೃತವಾಗಿ ಘೋರವೆನಿಸುತ್ತದೆ. ಭಾರತೀಯ ಜನತೆಯ ಮನಸ್ಸಿನಲ್ಲಿ ಉಳಿದ ತ್ರಿವೇದಗಳನ್ನು ಕಂಡರೆ ಕೇವಲ ಗೌರವ ಭಕ್ತಿಗಳು ಮೂಡುತ್ತವೆ; ಅಥರ್ವವೇದ ಹೆಸರನ್ನು ಹೇಳಿದರೆ ಸಾಕು, ಅವ್ಯಕ್ತಭಯ ಉತ್ಪನ್ನವಾಗುತ್ತದೆ. ಮನುಷ್ಯ ಗುಪ್ತಮಾರ್ಗಗಳಿಂದ ಪ್ರಕೃತಿಯ ಮೇಲೆ ಅಷ್ಟೇ ಅಲ್ಲ, ಇತರ ವ್ಯಕ್ತಿಗಳ ಮೇಲೂ ತನ್ನ ಪ್ರಭುತ್ವವನ್ನು ಹೇಗೆ ಸ್ಥಾಪಿಸಬಹುದೆಂಬುದನ್ನು ಅಥರ್ವವೇದ ತೋರಿಸಿಕೊಡುತ್ತದೆ. ಸಮಾಜ ವಿಘಾತಕವಾದ ಆಭಿಚಾರಿಕ ರಹಸ್ಯಗಳನ್ನು ಕೂಡ ವಿಶದಪಡಿಸುತ್ತದೆ. ವಿಜ್ಞಾನ ಮುಂದುವರೆಯದ ಆರ್ಯಸಮಾಜದ ಶೈಶವಾವಸ್ಥೆಯಲ್ಲಿ ಸಾಮಾನ್ಯ ಜನತೆಯ ನಿತ್ಯಜೀವನ ಅಥವಾ ಗೃಹಜೀವನ ಹೇಗೆ ಸಾಗಿದ್ದಿತೆಂಬುದನ್ನು ತಿಳಿಯಲು ಇತರ ವೇದಗಳಿಗಿಂತಲೂ ಅಥರ್ವವೇದವೇ ಸಾಮಗ್ರಿಯನ್ನು ಹೆಚ್ಚಾಗಿ ಒದಗಿಸುತ್ತದೆ. ಹಾಗೆಯೇ ವೈದಿಕ ಆರ್ಯರ ಧಾರ್ಮಿಕಭಾವನೆಯನ್ನು ಕೇವಲ ಋಗ್ವೇದಾದಿಗಳಿಂದಲೇ ನಿರ್ಧರಿಸಿದರೆ ಅದು ಏಕಮುಖವಾದ ಅಸಮಗ್ರ ಚಿತ್ರವಾದೀತು; ಅಥರ್ವವೇದದಲ್ಲಿ ಮೂಡುವ ಅವರ ಧಾರ್ಮಿಕಜೀವನದ ಪರಿ ಅದಕ್ಕೆ ಪೂರಕವೆಂದು ಭಾವಿಸಬೇಕು. ಸಮಾಜದಲ್ಲಿ ಹೆಚ್ಚಿನ ಸುಧಾರಣೆಯಿಂದ ಸುಸಂಸ್ಕೃತರಾದ ಕೆಲವರ ಧಾರ್ಮಿಕಜೀವನಕ್ಕೆ ಮಾತ್ರ ಋಗ್ವೇದ ಕನ್ನಡಿಯನ್ನು ಹಿಡಿಯುತ್ತದೆ. ಆದರೆ ಅಥರ್ವವೇದ ಬಹುಜನರ ನಿತ್ಯಜೀವನದಲ್ಲಿ ನೆಲೆಯೂರಿದ್ದ ಭಾವನೆಗಳನ್ನು ನಿಚ್ಚಳವಾಗಿ ನಿರ್ದೇಶಿಸುತ್ತದೆ. ಒಳ್ಳೆಯದನ್ನಾಗಲಿ (ಭೈಷಜ್ಯ) ಕೆಟ್ಟದನ್ನಾಗಲಿ (ಉಗ್ರ) ಬೇಕಾದಂತೆ ಉಂಟುಮಾಡುವ, ಇಲ್ಲವೆ ನಿವಾರಿಸುವ, ಮಹಾರಹಸ್ಯಗಳು ಮಂತ್ರಗಳಲ್ಲಿ ಅಡಗಿವೆಯೆಂದು ಅಂದಿನ ಜನ ತಿಳಿಯುತ್ತಿದ್ದರು. ಕೇವಲ ಅಶಿಕ್ಷಿತರು ಮಾತ್ರವಲ್ಲ; ಶಿಕ್ಷಿತರೂ ಒಮ್ಮೊಮ್ಮೆ ಈ ಅಥರ್ವಣಕ್ರಿಯೆಗಳನ್ನು ಅನುಸರಿಸುತ್ತಿದ್ದರು. ಅಂದಿನ ರಾಜರು ಅಥರ್ವವೇದವನ್ನು ಬಲ್ಲವರನ್ನೇ ಆಯ್ದುಕೊಂಡು ತಮ್ಮ ಪುರೋಹಿತರನ್ನಾಗಿ ಮಾಡಿಕೊಳ್ಳುತ್ತಿದ್ದರು. ಇಂದಿನವರು ಈ ನಂಬಿಕೆಗಳನ್ನು ಕುರುಡುನಂಬಿಕೆಗಳೆನ್ನಬಹುದಾದರೂ ಅಂದಿನವರ ಶ್ರದ್ಧೆಮಾತ್ರ ಅಚಲವಾಗಿತ್ತೆನ್ನುವುದರಲ್ಲಿ ಸಂಶಯವಿಲ್ಲ. ಈ ವಿಷಯದಲ್ಲಿ ಪಾಶ್ಚಾತ್ಯರ ಶ್ರದ್ಧೆ ಅದೇ ಪ್ರಮಾಣದಲ್ಲಿ ಭಾರತೀಯರಿಗೆ ಈಗಲೂ ಇದ್ದಂತಿಲ್ಲ. ಮುಂದಿನ ಆಯುರ್ವೇದ, ಧನುರ್ವೇದ, ಜ್ಯೋತಿಷ, ಗೃಹ್ಯಸೂತ್ರ, ಕಡೆಗೆ ರಸಪ್ರಕ್ರಿಯೆ- ಎಲ್ಲಕ್ಕೂ ಅಥರ್ವವೇದವೇ ಮೂಲವೆಂಬುದನ್ನು ನೆನೆದರೆ ಇದೇ ಪ್ರಾಚೀನ ಆರ್ಯರ ಸಕಲ ವಿದ್ಯಾಕೋಶವಾಗಿತ್ತೆಂಬುದು ಸ್ಪಷ್ಟವಾಗುವುದು. ಮುಖ್ಯವಾಗಿ ಅಥರ್ವವೇದದ ಮಹತ್ತ್ವ ಲೌಕಿಕವೇ ಆದರೂ ತಾತ್ತ್ವಿಕ ಕಲ್ಪನೆಗಳಲ್ಲಿ ಋಗ್ವೇದದಂತೆಯೇ ಉಪನಿಷತ್ತುಗಳ ಬ್ರಹ್ಮವಿದ್ಯೆಗೆ ಪೂರ್ವಭೂಮಿಯೆನಿಸಬಲ್ಲ ಅಂಶಗಳೂ ಮಿನುಗುವುದರಿಂದ, ಐತಿಹಾಸಿಕ ದೃಷ್ಟಿಕೋನದಿಂದ ನೋಡುವಾಗ ಅಥರ್ವವೇದದ ಧರ್ಮ ಮತ್ತು ತತ್ತ್ವಗಳ ಅಧ್ಯಯನಕ್ಕೆ ಪ್ರಾಶಸ್ತ್ಯವೊದಗುತ್ತದೆ. ಕ್ಷುದ್ರ ಮಂತ್ರಮಾಟಗಳಿಗೂ ಮಹೋನ್ನತ ಆಧ್ಯಾತ್ಮಿಕ ವಿಚಾರಗಳಿಗೂ ಎಲ್ಲಿಯ ನಂಟೆಂದು ನಮಗೆ ಎನಿಸಬಹುದು. ಆದರೆ ಈ ವಿಚಿತ್ರವಿರೋಧಾಭಾಸವೇ ಅಥರ್ವವೇದದ ಆಕರ್ಷಣೆಯ ರಹಸ್ಯ. ಜಗತ್ತಿನ ಸೃಷ್ಟಿಯನ್ನೂ ಪರಬ್ರಹ್ಮನ ಅಂತರ್ಯಾಮಿತ್ವವನ್ನೂ ವರ್ಣಿಸುವ ಅನೇಕ ಸೂಕ್ತಗಳು ಅಥರ್ವವೇದದಲ್ಲಿ ಅಲ್ಲಲ್ಲಿ ಬರುವುದರಿಂದ, ಇವನ್ನೆಲ್ಲ ಪ್ರಕ್ಷಿಪ್ತವೆಂದು ಕಡೆಗಣಿಸುವುದು ಯೋಗ್ಯವಲ್ಲ. ಸಾಂಪ್ರದಾಯಿಕವಾಗಿ ಅಥರ್ವವೇದಕ್ಕೆ ಬ್ರಹ್ಮವೇದವೆಂಬ ನಾಮಾಂತರವೂ ಉಂಟು. ಬ್ರಹ್ಮ ಎಂದರೆ ಯಜ್ಞಕರ್ಮದ ಸಮಗ್ರಕಲ್ಪನೆ ಎಂಬ ಅರ್ಥ ಮೊದಲಿಗೆ ಇದ್ದಂತೆ ತೋರುತ್ತದೆ. ಹೋತೃ, ಅಧ್ವರ್ಯ, ಉದ್ಗಾತೃ-ಈ ಋತ್ವಿಕ್ಕುಗಳು ಯಜ್ಞದಲ್ಲಿ ನಿರ್ದಿಷ್ಟ ಕಾರ್ಯಗಳಿಗೆ ನಿಯುಕ್ತರಾದವರು; ಆದರೆ ಯಜ್ಞದ ಸಮಗ್ರಪೂರ್ಣತೆಯ ಹೊಣೆ ಇವರದಲ್ಲ; ಬ್ರಹ್ಮನದು. ಬ್ರಹ್ಮವನ್ನು ತಿಳಿದ ಪುರೋಹಿತನೇ ಬ್ರಹ್ಮ. ಅಥರ್ವವೇದದ ಜ್ಞಾನ ಬ್ರಹ್ಮನಿಗೆ ಅಗತ್ಯವೆಂಬ ಭಾವನೆ ಪೂರ್ವದಿಂದಲೇ ಇದ್ದಂತೆ ತೋರುತ್ತದೆ. ಅಥರ್ವವೇದದ ಸಂಹಿತೆ ಅಸ್ತಿತ್ವಕ್ಕೆ ಬಂದಮೇಲೆ ಈ ಭಾವನೆ ರೂಢವಾಯಿತು. ಯಜ್ಞಕರ್ಮದ ಪರಿಸಮಾಪ್ತಿಗೆ ತ್ರಯೀ ಅಥವಾ ಇತರ ತ್ರಿವೇದಗಳನ್ನು ಬಲ್ಲವರೇ ಸಾಕೆಂಬ ಭಾವನೆಯಿತ್ತು. ತ್ರಿವೇದಿಗಳಲ್ಲಿ ಒಬ್ಬನು ಬ್ರಹ್ಮನಾಗುತ್ತಿದ್ದ. ಆದರೆ ಯಜ್ಞಸಾಂಗವಾಗಲು ಬರಬಹುದಾದ ವಿಘ್ನಗಳ ನಿವಾರಣೆಗಾಗಿ ಅಥರ್ವವೇದಿಯೇ ಬ್ರಹ್ಮನಾಗುವುದು ಯುಕ್ತವೆಂದು ಅಥರ್ವವೇದಿಗಳು ವಾದಿಸಿ ಯಜ್ಞದಲ್ಲಿಯೂ ತಮ್ಮ ವೇದಕ್ಕೆ ಸ್ಥಾನವನ್ನು ಕ್ರಮೇಣ ಸಂಪಾದಿಸಿಕೊಂಡರೆಂದು ತೋರುತ್ತದೆ. ಹೀಗೆ ಶಿಷ್ಟರಿಂದ ಆದರಣೀಯವಾದ ಯಜ್ಞದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಲೆಂದೇ ಅಥರ್ವವೇದದ ಋಷಿಗಳು ಆಧ್ಯಾತ್ಮಿಕ ಸೂಕ್ತಗಳನ್ನು ಬುದ್ಧಿಪೂರ್ವಕವಾಗಿ ಸಂಯೋಜಿಸಿರುವಂತೆ ಭಾಸವಾಗುತ್ತದೆ. ಅಂತೆಯೇ ಗೋಪಥ ಬ್ರಾಹ್ಮಣದಲ್ಲಿ (1-9) ಶ್ರೇಷ್ಟೋ ಹಿ ವೇದಸ್ತಪನೋ ಧಿಜಾತೋ ಬ್ರಹ್ಮe್ಞÁನಾಂ ಹೃದಯೇ ಸಂಬಭೂವ- ಎಂದು ಅಥರ್ವವೇದವನ್ನು ಶ್ಲಾಘಿಸಲಾಗಿದೆ. ಕಮಜ್ಞರಿಗೆ ತ್ರಿವೇದಗಳಾದರೆ, ಬ್ರಹ್ಮಜ್ಞರ ವೇದವೇ ಅಥರ್ವವೇದ. ಈ ಮೊದಲೇ ಸೂಚಿಸಿದಂತೆ ಇಲ್ಲಿ ಬ್ರಹ್ಮಶಬ್ದಕ್ಕೆ ಮಂತ್ರಮಾಟಗಳ ಅದ್ಭುತಶಕ್ತಿ, ಯಾಗಪೂರಕ ಶಕ್ತಿ, ಸಂಸ್ಕಾರಗಳಿಂದೊದಗುವ ಅದೃಶ್ಯಸಾಮಥ್ರ್ಯ ಇತ್ಯಾದಿ ಲೌಕಿಕಾರ್ಥಗಳೂ ಉಂಟು; ಔಪನಿಷದತತ್ತ್ವಜ್ಞಾನಕ್ಕೆ ಆಧಾರವಾಗುವಂಥ ವಿಶಾಲಾರ್ಥವೂ ಉಂಟು. ಮೊದಲನೆಯ ಅರ್ಥಗಳು ಅಥರ್ವಣಧರ್ಮವಿಚಾರವನ್ನು ಸೂಚಿಸಿದರೆ, ಕಡೆಯದು ಅಥರ್ವಣತತ್ತ್ವe್ಞÁನವನ್ನು ಬೋಧಿಸುತ್ತದೆ. ಮೊದಲನೆಯವು ಕಾವ್ಯಕರ್ಮಗಳ ಕಡೆಗೆ ಕೈಮಾಡಿದರೆ, ಕಡೆಯದು ಪರಮಪುರುಷಾರ್ಥವನ್ನು ಧ್ವನಿಸುತ್ತದೆ. ಗೃಹ ಗ್ರಾಮ ನಗರ ದುರ್ಗ ರಾಷ್ಟ್ರ ಪ್ರಜೆಗಳ ಯೋಗಕ್ಷೇಮ- ಇವುಗಳ ರಕ್ಷಣೆ, ಸೌಭಾಗ್ಯ ವಾಣಿಜ್ಯ ಲಾಭ ದೀರ್ಘಾಯುಷ್ಯ ಐಶ್ವರ್ಯ ಆರೋಗ್ಯ - ಇವುಗಳ ಪ್ರಾಪ್ತಿ, ಜ್ವರ ಕಾಮಾಲೆ ತೊನ್ನು ಮುಂತಾದ ರೋಗಗಳಿಂದ ನಿವೃತ್ತಿ, ಶತ್ರುಗಳ ಮಾರಣ ಸಂಮೋಹನ ಉಚ್ಚಾಟ ಸ್ತಂಭನ ಇತ್ಯಾದಿ ಸಿದ್ಧಿ, ಯುದ್ಧದಲ್ಲಿ ವಿಜಯದ ಪ್ರಾಪ್ತಿ, ಸ್ತ್ರೀವಶೀಕರಣ- ಹೀಗೆ ನಾನಾ ವಿಧ ಐಹಿಕಕಾಮನೆಗಳನ್ನು ಇಂದ್ರಾದಿ ದೇವತೆಗಳ ಅನುಗ್ರಹದಿಂದಷ್ಟೇ ಅಲ್ಲ, ನಾರು ಬೇರು ಗಿಡ ಮೂಲಿಕೆ ಮಣಿ ಶಿಲೆ ಮುಂತಾದುವನ್ನಭಿಮಂತ್ರಿಸಿ ಸಾಧಿಸಬಹುದೆಂಬ ನಂಬಿಕೆಯೇ ಅಥರ್ವಣ ಧರ್ಮದ ಸಾರಸರ್ವಸ್ವವೆನ್ನಬಹುದು. ಪ್ರೇತಪಿಶಾಚಾದಿಗಳು ಸ್ವರ್ಗನರಕಗಳು ಶ್ರಾದ್ಧಾದಿ ಕರ್ಮಗಳು ಗೃಹ್ಯಸಂಸ್ಕಾರಗಳು- ಎಲ್ಲಕ್ಕೂ ಈ ವೇದದಲ್ಲಿ ಉಳಿದ ವೇದಗಳಿಗಿಂತ ಹೆಚ್ಚಿನ ಸ್ಥಾನವಿದೆ. ಆತ್ಮರಕ್ಷಣೆಗೂ ಶತ್ರುಧ್ವಂಸಕ್ಕೂ ಅದ್ಭುತ ಬ್ರಹ್ಮಶಕ್ತಿ ಸಾಕೆಂಬ ಅಥರ್ವವೇದದ ಭಾವನೆ ಮುಂದೆ ಪುರಾಣೇತಿಹಾಸಗಳ ಋಷಿಗಳ ಶಾಪಾನುಗ್ರಹ ಕಥೆಗಳಲ್ಲಿ ಪ್ರವೃದ್ಧವಾಗಿರುವುದನ್ನು ನೋಡಬಹುದಾಗಿದೆ. ಇಲ್ಲಿಯ ನೀತಿಯ ಮಟ್ಟ ಬಹಳ ಉನ್ನತವಾದುದೆಂದು ಪ್ರತಿಜ್ಞೆ ಮಾಡುವಂತಿಲ್ಲ. ಗುರಿಯನ್ನು ಮುಟ್ಟಲು ಏನನ್ನು ಮಾಡಿದರೂ ಸರಿಯೇ ಎಂಬ ಮನೋಭಾವ ಎಷ್ಟೋ ವೇಳೆ ಕಾಣಬರುತ್ತದೆ. ಋಗ್ವೇದದ ಯಜ್ಞಗಳ ಸ್ಥಾನದಲ್ಲಿ ಕಾಮ್ಯಸಿದ್ಧಿಗಾಗಿ ಆಚರಿಸುವ ಅನೇಕ ಸವಗಳನ್ನು ಇಲ್ಲಿ ನೋಡುತ್ತೇವೆ. ಅತಿಮೃತ್ಯಸವ ಉರ್ವರಾಸವ ಮುಂತಾದುವನ್ನು ಉಲ್ಲೇಖಿಸಬಹುದು. ಸವಗಳಲ್ಲಿಯೂ ಸ್ವರ್ಗಾದಿ ಆಮುಷ್ಮಿಕ ಫಲಾಪೇಕ್ಷೆಯಿಂದ ಆಚರಿಸುವ ಸ್ವರ್ಗೌದನಸವ ಬ್ರಹ್ಮೌದನಸವ ಮುಂತಾದುವು ಬರುವುದು ಗಮನಾರ್ಹ. ಋಗ್ವೇದದಲ್ಲಿ ಪರಿಚಿತರಾದ ದೇವತೆಗಳ ಜೊತೆಗೆ ಅಥರ್ವವೇದದಲ್ಲಿ ಅಭಿಚಾರಿಕ ದೇವತೆಗಳು ಅನೇಕರು ಬರುತ್ತಾರೆ; ಶರ ಅಸಿಕ್ನೀ ಅಸುರೀ ತಲಶಾ ಆಬಯು ಕೇಶವರ್ಧಿನೀ ಶಮೀ ಮಧು ಅಪಾಮಾರ್ಗ ಶಂಖ ಯಕ್ಷ್ಮ ತಕ್ಮನ್ ವಿಷಾಣ ಕೃಮಿ- ಇತ್ಯಾದಿ. ಯಾತು, ಯಾತುಧಾನ, ರಕ್ಷಸ್, ಪಿಶಾಚ, ಕಿಮೀದಿನ್, ಅಸುರ- ಮುಂತಾದ ರಾಕ್ಷಸರ ಉಲ್ಲೇಖವೂ ಯಥೇಚ್ಫವಾಗಿ ಬರುತ್ತದೆ. ಇಂದಿನ ಜಾದೂ ಶಬ್ದಕ್ಕೆ ಇಲ್ಲಿ ಬರುವ ಯಾತುವೇ ಮೂಲ.

 
ಚರಕ ಮಹಾಮುನಿ, ತನ್ನ ಚರಕ ಸಂಹಿತೆಗೆ ಅಧರ್ವವೇದವನ್ನು ಅಕರವನ್ನಾಗಿ ಪರಿಭಾವಿಸಿದ್ದಾನೆ.

ಹೀಗೆ ವೇದಕಾಲೀನ ಸಂಸ್ಕೃತಿಯ ಸಮಗ್ರ ಪರಿಚಯದಲ್ಲಿ ಕುತೂಹಲಿಗಳಾದವರಿಗೆ ಋಗ್ವೇದ ಸಂಹಿತೆಗಿಂತಲೂ ಸ್ವಲ್ಪ ಹೆಚ್ಚಿನ ಮಹತ್ತ್ವವೇ ಅಥರ್ವವೇದ ಸಂಹಿತೆಯಲ್ಲಿ ಉಂಟೆನ್ನಬಹುದು. ಪೂರ್ವದ ಆರ್ಯರ ದೈನಂದಿನ ಜೀವನ, ಸಾಮಾಜಿಕ ಆಚಾರವಿಚಾರಗಳು, ಹೃದಯೋದ್ಗಾರಗಳು, ಈ ಸಂಹಿತೆಯಲ್ಲಿ ಮೂಡಿರುವಷ್ಟು ವೈವಿಧ್ಯಪೂರ್ಣವಾಗಿ ಮತ್ತೆಲ್ಲಿಯೂ ಮೂಡಿಲ್ಲ. ಅಥರ್ವವೇದ ಕೇವಲ ಮಾಟ ಮಂತ್ರಗಳ ತವರೆಂದೂ ಸಾತ್ತ್ವಿಕರು ಅದನ್ನು ಕಣ್ಣೆತ್ತಿ ನೋಡುವುದು ಕೂಡ ತಪ್ಪೆಂದೂ ಇರುವ ಸಾಮಾನ್ಯಭಾವನೆ ಸರಿಯಾದುದಲ್ಲ. ವಸ್ತುತಃ ಮುಂದಿನ ಆಯುರ್ವೇದವೇ ಮೊದಲಾದ ಅನೇಕ ಲೌಕಿಕ ಶಾಸ್ತ್ರಗಳು ಹುಟ್ಟಿ ಬೆಳೆಯಲು ಈ ಸಂಹಿತೆಯಿಂದಲೇ ಪ್ರಚೋದನೆ ದೊರೆಯಿತೆಂದು ಹೇಳಲು ಯಾವ ಅಡ್ಡಿಯೂ ಇಲ್ಲ. ಭಾರತದಲ್ಲಿ ಮೊದಲಿಗೆ ಪ್ರಚಾರದಲ್ಲಿದ್ದ ಶಸ್ತ್ರಾಸ್ತ್ರ ವಿದ್ಯೆಯಾದರೂ ಅಥರ್ವಣವೇ ಎಂಬುದು ಗಮನಾರ್ಹ. ದ್ರೋಣ, ಪರಶುರಾಮ- ಮೊದಲಾದ ಪೌರಾಣಿಕ ಯುಗದ ಧನುರ್ವಿದ್ಯಾಗುರುಗಳೆಲ್ಲರೂ ಅಥರ್ವವೇದ ಪಾರಂಗತರೆಂಬುದನ್ನು ಇಲ್ಲಿ ನೆನೆಯಬಹುದಾಗಿದೆ. ಈ ವೇದದಲ್ಲಿ ಸಂಶೋಧನೆ ಇನ್ನೂ ಬೆಳೆಯಬೇಕಾಗಿದೆ. ಅಥರ್ವವೇದ ಐಹಿಕವಿದ್ಯೆಗಳ ಮೂಲವಷ್ಟೇ ಅಲ್ಲ, ಆಧ್ಯಾತ್ಮ ವಿದ್ಯೆಗೂ ಮೂಲ; ಶಾಂತಿಕ ಪೌಷ್ಟಿಕ ಕರ್ಮಗಳಿಗೆ ಮಾತ್ರ ಗಣಿಯಲ್ಲ, ಬ್ರಹ್ಮಜ್ಞಾನಕ್ಕೂ ಪ್ರಚೋದಕ; ಸ್ವರ್ಗವನ್ನು ಕೊಡುವ ಯಜ್ಞಯಾಗಾದಿಗಳಿಗೆ ಪ್ರಯೋಜಕವಷ್ಟೇ ಅಲ್ಲ, ಮೃತ್ಯುವನ್ನು ಗೆಲ್ಲುವ ಮಹಾರಹಸ್ಯವನ್ನು ಅರುಹುವುದಕ್ಕೂ ಅದು ಬೆರಳೆತ್ತಿದೆ. ನಿತ್ಯಜೀವನವನ್ನು ಮರೆಯದೆ, ಸತ್ಯದರ್ಶನವನ್ನು ಜರೆಯದೆ, ಸರ್ವರಿಗೂ ಉಪಕಾರವಾಗಬೇಕೆಂದು ಬಂದ ವೇದವೇ ಅದು. ಅದರ ಬೇರೆ ಬೇರೆ ವಿಷಯಗಳ ಬೆಸುಗೆ ಚೆನ್ನಾಗಿಲ್ಲದಿರುವುದೊಂದೇ ಇಂದಿನವರಿಗೆ ತೋರುವ ನ್ಯೂನತೆ. ಅದರ ತತ್ತ್ವಗಳನ್ನು ಕುರಿತ ಪ್ರಾಯೋಗಿಕ ಸಂಶೋಧನೆ ಇನ್ನೂ ನಡೆಯಬೇಕಾಗಿದೆ. ನಾವು ನೋಡಿದ ಆಧ್ಯಾತ್ಮಿಕ ವಿಚಾರಕಿರಣಗಳು ನಿಜವಾಗಿಯೂ ಅಥರ್ವವೇದ ಋಷಿಗಳ ಆಳವಾದ ತತ್ತ್ವಚಿಂತನೆಗೆ ದ್ಯೋತಕಗಳಾಗಿವೆಯೇ ಎಂಬ ವಿಷಯದಲ್ಲಿ ವಿದ್ವಾಂಸರು ಭಿನ್ನಾಭಿಪ್ರಾಯಗಳನ್ನು ತಳೆದಿದ್ದಾರೆ. ಒಂದೇ ಮಟ್ಟದಲ್ಲಿ ಉದಾತ್ತವಾದ ವಿಚಾರಗಳು ಹರಿಯುವುದಿಲ್ಲ. ಒಂದು ಸೂಕ್ತವಿರಲಿ. ಒಂದೇ ಪದ್ಯದ ಪಾದಗಳಲ್ಲಿಯೂ ಉದಾತ್ತಮಟ್ಟದ ತಟ್ಟನೆ ಅತಿ ಕೆಳಮಟ್ಟಕ್ಕೆ ವಿಚಾರಗಳು ಇಳಿದುಬಿಡುತ್ತವೆ. ಆಧ್ಯಾತ್ಮಿಕ ಎತ್ತರಗಳಿಂದ ಹೀಗೆ ಅತಿ ಕ್ಷುದ್ರ ಪಾತಾಳಗಳಿಗೆ ಇಳಿಯುವಂಥ ವಿಚಾರಸರಣಿ ಹೊರಗಿನಿಂದ ತತ್ಕಾಲಕ್ಕೆ ಎರವಲಾಗಿ ತಂದ ದೊಡ್ಡ ಶಬ್ದಗಳ ಪ್ರದರ್ಶನಕ್ಕೆ ಸಾಕ್ಷಿಯನ್ನೊದಗಿಸಬಹುದೇ ಹೊರತು, ಹೃದಯದಿಂದ ನೇರವಾಗಿ ಉಕ್ಕಿಬಂದ ಉನ್ನತ ತಾತ್ತ್ವಿಕ ಮಟ್ಟವನ್ನು ನಿದರ್ಶಿಸಲಾರದೆಂದು ವಿಂಟರ್ ನಿಟ್ಸ್ ಮುಂತಾದ ವಿಮರ್ಶಕರ ಅಭಿಪ್ರಾಯ. ಈ ಕೃತಕವಾದ ಸಾಕ್ಷಿಗಳಿಂದ ಅಥರ್ವವೇದದ ಸೂಕ್ತಿಗಳೇ ಮುಂದಿನ ಉಪನಿಷತ್ತತ್ತ್ವಗಳಿಗೆ ಮೂಲವೆಂದು ಭ್ರಮಿಸಬಾರದೆಂಬುದು ಅವರ ಎಚ್ಚರಿಕೆ. ಆದರೂ ಈಚೆಗೆ ಷೇಂಡೆ ಮುಂತಾದವರು ಇದನ್ನು ಕೊನೆಯ ಮಾತೆಂದು ತಿಳಿಯುತ್ತಿಲ್ಲ. ಅಥರ್ವವೇದದ ಮಂತ್ರಗಳನ್ನು ಶಾಸ್ತ್ರೀಯವಾಗಿ ಮುಖ್ಯ ಶೀರ್ಷಿಕೆಗಳ ಕೆಳಗೆ ತರುವ ಪ್ರಯತ್ನವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದ ಭೈಷಜ್ಯ, ಆಯುಷ್ಯ, ಆಭಿಚಾರಿಕ, ಕೃತ್ಯಾ-ಪ್ರತಿಹರಣ, ಸ್ತ್ರೀಕರ್ಮ, ಸಾಂಮನಸ್ಯ, ರಾಜಕರ್ಮ, ಬ್ರಹ್ಮ-ಪ್ರಶಂಸೆ, ಪೌಷ್ಟಿಕ, ಪ್ರಾಯಶ್ಚಿತ್ತ- ಇವುಗಳ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. Laurie Patton (2004), Veda and Upanishad, in The Hindu World (Editors: Sushil Mittal and Gene Thursby), Routledge, ISBN 0-415215277, page 38
  2. Carl Olson (2007), The Many Colors of Hinduism, Rutgers University Press, ISBN 978-0813540689, pages 13-14
  3. Laurie Patton (1994), Authority, Anxiety, and Canon: Essays in Vedic Interpretation, State University of New York Press, ISBN 978-0791419380, page 57
  4. Frits Staal (2009), Discovering the Vedas: Origins, Mantras, Rituals, Insights, Penguin, ISBN 978-0143099864, pages 136-137
  5. Jan Gonda (1975), Vedic Literature: Saṃhitās and Brāhmaṇas, Vol 1, Fasc. 1, Otto Harrassowitz Verlag, ISBN 978-3447016032, pages 273-274


೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಬಾಹ್ಯಸಂಪರ್ಕಗಳು

ಬದಲಾಯಿಸಿ