ಅಮರಕೋಶ
ಅಮರಸಿಂಹನು ಸಂಸ್ಕೃತ ಭಾಷೆಯಲ್ಲಿ ರಚಿಸಿದ ನಾಮಲಿಂಗಾನುಶಾಸನ ಎಂಬ ಸಮಾನಾರ್ಥಕ ಪದಕೋಶವೇ ಅಮರಕೋಶ. ನಾಮಲಿಂಗಾನುಶಾಸನ ಕೃತಿಯನ್ನು ಅವನ ಗೌರವಾರ್ಥ ಅಮರಕೋಶ ಎಂದು ಕರೆಯುತ್ತಾರೆ. ಈ ಕೃತಿಯು ಅಮರಾನಿರ್ಜರಾದೇವಾಃ ಎಂದು ಅರಂಭವಾಗುವುದರಿಂದ ಅಮರಕೋಶ ಎಂಬ ಹೆಸರು ಬಂದಿದೆ ಎಂದೂ ಹೇಳುತ್ತಾರೆ. ನಾಮಲಿಂಗಾನುಶಾಸನ ಎಂದರೆ ನಾಮ ಮತ್ತು ಲಿಂಗಗಳನ್ನು ಕುರಿತಾದ ವ್ಯವಸ್ಥೆ ಎಂದರ್ಥ. ಅಮರಸಿಂಹನು ಕ್ರಿ.ಶ. ೪೦೦ ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬನು. ಅವನು ಕ್ರಿ.ಶ. ಏಳನೇ ಶತಮಾನದಲ್ಲಿದ್ದ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು. ಅದ್ವೈತ ಮತಪ್ರಚಾರಕ್ಕೆಂದು ಭಾರತದಾದ್ಯಂತ ಪ್ರವಾಸದಲ್ಲಿದ್ದ ಶಂಕರಾಚಾರ್ಯರು ಅಮರಸಿಂಹನನ್ನು ಭೇಟಿಯಾಗಬಯಸಿದಾಗ ಶಂಕರಾಚಾರ್ಯರೊಡನೆ ವಾದಕ್ಕಿಳಿಯಬಯಸದ ಅಮರಸಿಂಹನು ತನ್ನ ಎಲ್ಲ ಕೃತಿಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದನು. ಆಗ ಇದನ್ನು ತಿಳಿದ ಶಂಕರಾಚಾರ್ಯರು ಅವನ ಮನೆಗೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ ಅಮರಕೋಶವೊಂದನ್ನು ಬಿಟ್ಟು ಎಲ್ಲ ಕೃತಿಗಳು ಸುಟ್ಟು ಹೋಗಿದ್ದವು. ಈ ಸಂಗತಿಯನ್ನು ಶಂಕರದಿಗ್ವಿಜಯ ದಲ್ಲಿ ಹೇಳಲಾಗಿದೆ. ಅಮರಕೋಶವು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಪದ್ಯಗಳಿಂದ ಕೂಡಿದೆ. ಇದು ಮೂರು ಖಂಡ ಅಥವಾ ಅಧ್ಯಾಯಗಳಲ್ಲಿ ಇದೆ. ಮೊದಲನೆಯದು , ಸ್ವರ್ಗಾದಿಕಾಂಡ ದೇವರುಗಳ ಮತ್ತು ಸ್ವರ್ಗಕ್ಕೆ ಸಂಬಂಧಿಸಿದ ಪದಗಳನ್ನು ಹೊಂದಿದೆ. ಎರಡನೇ, ಭೂವರ್ಗಾದಿಕಾಂಡ ಭೂಮಿ, ಪಟ್ಟಣಗಳು, ಪ್ರಾಣಿಗಳು ಮತ್ತು ಮಾನವರಿಗೆ ಸಂಬಂಧಪಟ್ಟ ಪದಗಳನ್ನು ಹೊಂದಿದೆ. ಮೂರನೇ, ಸಾಮಾನ್ಯಾದಿಕಾಂಡವು ವ್ಯಾಕರಣ ಮತ್ತು ಇತರೆ ಪದಗಳಿಗೆ ಸಂಬಂಧಿಸಿದ ಪದಗಳನ್ನು ಹೊಂದಿದೆ. ಉಜ್ಜೈನಿಯ ಪಂಡಿತನೊಬ್ಬನು ಇದನ್ನು ಚೀನೀ ಭಾಷೆಗೆ ಅನುವಾದಿಸಿದ್ದಾನೆ.
ಅಮರಕೋಶಃ-ಕನ್ನಡಾನುವಾದಃ-ವಿದ್ವಾನ್ ಎನ್. ರಂಗನಾಥ ಶರ್ಮ
ಬದಲಾಯಿಸಿಪೀಠಿಕಾ ಶ್ಲೋಕಾಃ
ಬದಲಾಯಿಸಿಯಸ್ಯ ಜ್ಞಾನದಯಾಸಿಂಧೋರಗಾಧಸ್ಯನಘಾ ಗುಣಾಃ | ಸೇವ್ಯತಾಮಕ್ಷಯೋ ಧೀರಾ ಸ್ಸಶ್ರಿಯೈ ಚಾಮೃತಾಯ ಚ || 1 ||
- ಅನ್ವಯಃ - ಹೇ ಅನಘಾಃ ಜ್ಞಾನದಯಾಸಿಂಧೋಃ, ಅಗಾಧಸ್ಯ ಗುಣಾಃ ಸಃ ಅಕ್ಷಯಃ ಧೀರಃ (ಭವದ್ಭಿಃ )ಸೇವ್ಯತಾಮ್, ಶ್ರಿಯೈ, ಚ ಅಮೃತಾಯ,
- ಅನ್ವಯಃ - ಹೇ ಧೀರಾಃ ಜ್ಞಾನದಯಾಸಿಂಧೋಃ, ಯಸ್ಯ ಅಗಾಧಸ್ಯ ಗುಣಾಃ ಅನಘಾಃ, ಸಃ ಅಕ್ಷಯಃ ಶ್ರಿಯೈ, ಚ, ಅಮೃತಾಯ, (ಭವದ್ಭಿಃ), ಸೇವ್ಯತಾಮ್,
- ಶ್ಲೋಕಾರ್ಥ-ಎಲೈ ಧೀರರೇ, ಜ್ಞಾನ ಮತ್ತು ದಯೆಗಳಿಗೆ ಸಮುದ್ರದಂತೆ ಆಕರನಾದ ಯಾರ ಸರ್ವಶಕ್ತತ್ವಾದಿ ಗುಣಗಳು ಪಾಪನಿವರ್ತಕವಾಗಿ ಮಂಗಳಕರವಾಗಿವೆಯೋ, ಅಂತಹ ಶಾಶ್ವತನಾದ ಭಗವಂತನು ಧರ್ಮಾರ್ಥಕಾಮಗಳ ಸಮೃದ್ಧಿಗಾಗಿಯೂ ಮೋಕ್ಷಕ್ಕಾಗಿಯೂ ಸೇವಿಸಲ್ಪಡಲಿ.
ಸಮಾಹೃತ್ಯಾನ್ಯತಂತ್ರಾಣಿ ಸಂಕ್ಷಿಪ್ತೈಃ ಪ್ರತಿಸಂಸ್ಕೃತೈಃ | ಸಂಪೂರ್ಣಮುಚ್ಯತೇ ವರ್ಗೈರ್ನಾಮಲಿಂಗಾನುಶಾಸನಮ್ || 2 ||
- ಅನ್ವಯಃ - ಅನ್ಯತಂತ್ರಾಣಿ, ಸಮಾಹೃತ್ಯ, ಪ್ರತಿಸಂಸ್ಕೃತೈಃ, ಸಂಕ್ಷಿಪ್ತೈಃ, ವರ್ಗೈಃ, ಸಂಪೂರ್ಣಂ ಉಚ್ಯತೇ ನಾಮಲಿಂಗಾನುಶಾಸನಮ್,
- ಶ್ಲೋಕಾರ್ಥ-ನಾಮಲಿಂಗಾನುಶಾಸನವೆಂಬ ಶಬ್ದಕೋಶವನ್ನು ನಾನು ರಚಿಸುತ್ತಿದ್ದೇನೆ. ಇದರಲ್ಲಿ ಶಾಸ್ತ್ರಾಂತರಗಳನ್ನು ಪರ್ಯಾಲೋಚಿಸಿ, ಸಂಗ್ರಹಿಸಿರುವ ಶಬ್ದರಾಶಿಗಳನ್ನು ವರ್ಗಗಳಾಗಿ ವಿಂಗಡಿಸಲಾಗಿದೆ. ಇವು ವ್ಯಾಕರಣ ಸಂಸ್ಕಾರವನ್ನು ಪಡೆದಿರುವ ಪರಿಶುದ್ಧ ಶಬ್ದಗಳು.
ಪ್ರಾಯಶೋ ರೂಪಭೇದೇನ ಸಾಹಚರ್ಯಾಚ್ಚ ಕುತ್ರಚಿತ್ | ತ್ರೀಪುಂನಪುಂಸಕಂ ಜ್ಞೇಯಂ ತದ್ವಿಶೇಷವಿಧೇಃ ಕ್ವಚಿತ್ || 3 ||
- ಅನ್ವಯಃ - ಪ್ರಾಯಶಃ, ರೂಪಭೇದೇನ, ಕುತ್ರಚಿತ್, ಸಾಹಚರ್ಯೇಣ, ಕ್ವಚಿತ್, ವಿಶೇಷವಿಧೇಃ, ತತ್, ಸ್ರೀಪುಂನಪುಂಸಕಂ ಜ್ಞೇಯಮ್,
- ಶ್ಲೋಕಾರ್ಥ-ಈ ಗ್ರಂಥದಲ್ಲಿ ವಿಶೇಷವಾಗಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗಗಳನ್ನು ಶಬ್ದಗಳ ರೂಪಭೇದದಿಂದಲೇ ತಿಳಿಯಬಹುದಾಗಿದೆ. (ಉದಾ: ಸಂವತ್ಸರೋವತ್ಸರೋಬ್ದ= ಇಲ್ಲಿ ಸಂವತ್ಸರಾದಿ ಶಬ್ದಗಳು ಪುಲ್ಲಿಂಗಗಳೆಂದು ಪ್ರಥಮಾವಿಭಕ್ತಿಯ ರೂಪಗಳಿಂದ ತಿಳಿಯುತ್ತದೆ. ಕಾದಂಬಿನೀ, ಮೇಘಮಾಲಾ = ಇವು ಸ್ತ್ರೀಲಿಂಗಗಳೆಂದು ಊಹಿಸಬಹುದು. ಗಗನಮನಂತಂ ಸುರವರ್ತ್ಮಖಮ್ = ಇವು ನಪುಂಸಕಲಿಂಗಗಳೆಂದು ತಿಳಿಯಬಹುದಾಗಿದೆ). ಕೆಲವೆಡೆ ಶಬ್ದಾಂತರಗಳ ಸಾಹಚರ್ಯದಿಂದ ಲಿಂಗಗಳನ್ನು ಗೊತ್ತುಮಾಡಬಹುದು.(ಉದಾ: ಭಾನುಃಕರಃ = ಕರಶಬ್ದವು ಪುಲ್ಲಿಂಗವಾದ್ದರಿಂದ ಅದರೊಡನಿರುವ ಭಾನುಶಬ್ದವೂ ಪುಲ್ಲಿಂಗ. ಅಶ್ವಯುಗಶ್ವಿನೀ= ಅಶ್ವಯುಕ್, ಸ್ತ್ರೀಲಿಂಗ, ವಿಯದ್ವಿಷ್ಣುಪದಂವಾಗಿ ಲಿಂಗನಿರ್ದೇಶವನ್ನು ಮಾಡಿದ್ದರಿಂದ ಲಿಂಗವನ್ನು ತಿಳಿಯಬೇಕು(ಉದಾ: ದುಂದುಭಿಃ ಪುಮಾನ್; ದಿಧೀತಿಃ ಸ್ತ್ರಿಯಾಮ್; ರೋಚಿಃ ಶೋಚಿರುಭೇ ಕ್ಲೀಬೇ).
ಭೇದಾಖ್ಯಾನಾಯ ನ ದ್ವಂದ್ವೋ ನೈಕಶೇಷೋ ನ ಸಂಕರಃ | ಕೃತೋತ್ರ ಭಿನ್ನಲಿಂಗಾನಾಮನುಕ್ತಾನಾಂ ಕ್ರಮಾದೃತೇ ||
- ಅನ್ವಯಃ -
- ಶ್ಲೋಕಾರ್ಥಃ - ವಿಭಿನ್ನ ಲಿಂಗದ ಶಬ್ದಗಳಿಗೆ ಲಿಂಗಭೇದವು ಸರಿಯಾಗಿ ಗೊತ್ತಾಗಲೆಂಬ ಉದ್ದೇಶದಿಂದ ಅವುಗಳಿಗೆ ದ್ವಂದ್ವ ಸಮಾಸವನ್ನಾಗಲಿ, ಏಕಶೇಷವನ್ನಾಗಲಿ, ಸಂಕರವನ್ನಾಗಲಿ ಮಾಡಿಲ್ಲ.
- (ಉದಾ: ದೇವತಾ, ದೈವತ, ಅವರ = ಇವು ವಿಭಿನ್ನ ಲಿಂಗಗಳು. ಇಲ್ಲಿ ದೇವತಾ ದೈವತಾಮರಾಃ ಎಂದು ದ್ವಂದ್ವ ಸಮಾಸವನ್ನು ಮಾಡಿಲ್ಲ. ಮಾಡಿದ್ದರೆ ಎಲ್ಲವೂ ಒಂದೇ ಲಿಂಗದವುಗಳೆಂದು ಭ್ರಮೆಯಾಗುತ್ತಿತ್ತು. ಖಂ, ನಭಃ, ಶ್ರಾವಣೋ ನಭಾಃ = ಇಲ್ಲಿ ಖಶ್ರಾವಣೌ ತು ನಭಸೀ ಎಂದು ಏಕಶೇಷ ಮಾಡಿಲ್ಲ. ಮಾಡಿದ್ದರೆ, ನಭಃ ಶಬ್ದವು ಪುಲ್ಲಿಂಗದಲ್ಲಿ ಇದೆಯೆಂದು ತಿಳಿಯುತ್ತಿರಲಿಲ್ಲ. ಸ್ತವಃ ಸ್ತೋತ್ರಂ ಸ್ತುತಿರ್ನುತಿಃ = ಇಲ್ಲಿ 'ಸ್ತುತಿಃ ಸ್ತೋತ್ರಂ ಸ್ತವೋ ನುತಿ' ಎಂದು ಸಾಂಕರ್ಯವನ್ನು ಮಾಡಿಲ್ಲ. ಮಾಡಿದ್ದರೆ ಸ್ತುತಿ ಶಬ್ದದ ಲಿಂಗವು ತಿಳಿಯುತ್ತಿರಲಿಲ್ಲ. ಮತ್ತು ನುತಿ ಶಬ್ದವು ಪುಲ್ಲಿಂಗವೆಂದು ಭ್ರಮೆಯಾಗುತ್ತಿತ್ತು. ಆದರೆ ಕ್ರಮ ಎಂದರೆ ವ್ಯವಸ್ಥೆಯಿಲ್ಲದೆ ಸಾಂಕರ್ಯವನ್ನು ಮಾಡಿಲ್ಲ. ಒಂದು ವ್ಯವಸ್ಥೆ ಇದ್ದಾಗ ಸಾಂಕರ್ಯವಿರಬಹುದು. ಹೇಗೆಂದರೆ ಸ್ತವಃ, ಸ್ತೋತ್ರಂ ಸ್ತುತಿರ್ನುತಿಃ = ಇಲ್ಲಿ ಸಾಂಕರ್ಯ ಉಂಟು, ಲಿಂಗಜ್ಞಾನಕ್ಕೆ ಇಲ್ಲಿ ಒಂದು ವ್ಯವಸ್ಥೆ ಇದೆ, ಸ್ವವ, ಸ್ತೋತ್ರಗಳ ಲಿಂಗವು ರೂಪಭೇದದಿಂದ ತಿಳಿಯುತ್ತದೆ. ಸ್ತುತಿನುತಿಗಳು ನಪುಂಸಕವಲ್ಲವೆಂದು ರೂಪದಿಂದಲೇ ತಿಳಿಯುತ್ತದೆ. ಪುಲ್ಲಿಂಗವಾಗಿದ್ದರೆ ಸ್ತವ ಶಬ್ದದೊಡನೆ ಸೇರಿಸಬೇಕಾಗಿತ್ತು. ಆದ್ದರಿಂದ ಅವು ಸ್ತ್ರೀಲಿಂಗಗಳೆಂದು ಊಹಿಸಬಹುದು)
ತ್ರಿಲಿಂಗ್ಯಾಂ ತ್ರಿಷ್ವಿತಿ ಪದಂ ವಿಥುನೇ ತು ದ್ವಯೋರಿತಿ | ನಿಷಿದ್ಧ ಲಿಂಗಂ ಶೇಷಾರ್ಥಂ ತ್ವಂತಾಥಾದಿ ನ ಪೂರ್ವಭಾಕ್ || 5 ||
- ಅನ್ವಯಃ-
- ಶ್ಲೋಕಾರ್ಥ- ಮೂರು ಲಿಂಗಗಳೂ ಇವೆಯೆಂದೂ ಸೂಚಿಸಲು 'ತ್ರಿಷು' ಎಂಬ ಪದವನ್ನೂ ಸ್ತ್ರೀಲಿಂಗ ಪುಲ್ಲಿಂಗಗಳೆರಡೂ ಇವೆಯೆನ್ನಲು ದ್ವಯೋಃ ಎಂಬ ಪದವನ್ನು ಬಳಸಲಾಗಿದೆ.(ಉದಾ: ತ್ರಿಷು ಸ್ಪುಲಿಂಗೋಗ್ನಿಕಣಃ = ಇಲ್ಲಿ ಸ್ಪುಲಿಂಗ ಶಬ್ದವು ಮೂರು ಲಿಂಗಗಳಲ್ಲಿಯೂ ಇದೆಯೆಂದು ತಿಳಿಯಬೇಕು. ವಹ್ನೇರ್ದ್ವರ್ಚ್ವಾಲಕೀಲೌ = ಇಲ್ಲಿ ಜ್ವಾಲ, ಕೀಲ ಶಬ್ದಗಳು ಸ್ತ್ರೀಲಿಂಗ ಮತ್ತು ಪುಲ್ಲಿಂಗಗಳಲ್ಲಿವೆಯೆಂದು ಅರ್ಥ) ಹಾಗೆಯೇ ಒಂದು ಲಿಂಗವನ್ನು ನಿಷೇಧಿಸಿದರೆ ಉಳಿದ ಲಿಂಗಗಳಿವೆಯೆಂದು ತಿಳಿಯಬೇಕು, (ಉದಾ: ವ್ಯೋಮಯಾನಂ ವಿಮಾನೋಸ್ತ್ರೀ = ಸ್ತ್ರೀಲಿಂಗವಿಲ್ಲ ಎಂದು ನಿಷೇಧಿಸಿದ್ದರಿಂದ ವಿಮಾನ ಶಬ್ದಕ್ಕೆ ಪುಲ್ಲಿಂಗ ನಪುಂಸಕಲಿಂಗಗಳಿವೆಯೆಂದು ತಿಳಿಯಬೇಕು).ಯಾವ ಶಬ್ದದ ಮುಂದೆ 'ತು' ಎಂಬ ಪದವಿದೆಯೋ ಆ ಶಬ್ದವು ಹಿಂದಿನ ಪದಗಳೊಡನೆ ಅನ್ವಿತವಾಗುವುದಿಲ್ಲ. (ಉದಾ: ಪುಲೋಮಜಾ ಶಚೀಂದ್ರಾಣೀ ನಗರೀತ್ವಮರಾವತೀ = ಇಲ್ಲಿ ನಗರೀ ಶಬ್ದವು ಹಿಂದಿನ ಇಂದ್ರಾಣಿಯೊಡನೆ ಅನ್ವಿತವಲ್ಲ. ಅದು ಅಮರಾವತಿಯೊಡನೆ ಅನ್ವಿತ). ಯಾವ ಶಬ್ದದ ಹಿಂದೆ 'ಅಥ' ಎಂಬ ಪದವಿದೆಯೋ ಆ ಶಬ್ದವೂ ಹಿಂದಿನ ಶಬ್ದಗಳೊಡನೆ ಅನ್ವಿತವಾಗುವುದಿಲ್ಲ. (ಉದಾ: ವಿಸ್ಮಯೋದ್ಭುತಮಾಶ್ಚರ್ಯಂ ಚಿತ್ರಮಪ್ಯಥ ಭೈರವಮ್ = ಇಲ್ಲಿ ಭೈರವ ಶಬ್ದವು ಹಿಂದಿನ ಚಿತ್ರ ಶಬ್ದದೊಡನೆ ಅನ್ವಿತವಲ್ಲ. "ದಾರುಣಂ ಭೀಷಣಂ ಭೀಷ್ಮಂ" ಎಂಬುದರೊಡನೆ ಅನ್ವಿತ).
- ಟಿಪ್ಪಣಿ : ದ್ವಿಹೀನ, ದ್ವಯಹೀನ ಎಂದರೆ ಸ್ತ್ರೀ ಪುಂಸಕಗಳೆರಡೂ ಇಲ್ಲ - ನಪುಂಸಕಲಿಂಗ ಎಂದು ತಿಳಿಯತಕ್ಕದ್ದು. ನಾ ಎಂದರೆ ಪುಲ್ಲಿಂಗ, ಕ್ಲೀಬ ಎಂದರೆ ನಪುಂಸಕ. "ಅಥ" ಶಬ್ದದಂತೆಯೇ "ಅಥೋ" ಶಬ್ದವನ್ನು ಉಪಯೋಗಿಸಿದರೂ ಪೂರ್ವಾನ್ವಯವಿಲ್ಲ. ಶಬ್ದದ ಕಡೆಯಲ್ಲಿ 'ತಿ' ಎಂಬ ಪ್ರತ್ಯಯವಿದ್ದು ಭಾವನಾಮವಾಗಿದ್ದರೆ, ಅದು ಸ್ತ್ರೀಲಿಂಗ.(ಉದಾ : ಮತಿ, ರತಿ, ನತಿ, ಇತ್ತಾದಿ).
ಪ್ರಥಮ ಕಾಂಡಮ್
ಬದಲಾಯಿಸಿ- 1 - ಸ್ವರ್ಗವರ್ಗಃ
ಸ್ವರವ್ಯಯಂ ಸ್ವರ್ಗನಾಕತ್ರಿದಿವತ್ರಿದಶಾಲಯಾಃ | ಸುರಲೋಕೋ ದ್ಯೋದಿವೌ ದ್ವೇ ಸ್ತ್ರಿಯಾಂ ಕ್ಲೀಬೇ ತ್ರಿವಿಷ್ಟಪಮ್ || 6 ||
- ಸ್ವರ್(ಅವ್ಯಯ), ಸ್ವರ್ಗ, ನಾಕ, ತ್ರಿದಿವ, ತ್ರಿದಶಾಲಯ, ಸುರಲೋಕ(ಇವುಗಳು ಪುಲ್ಲಿಂಗಳು), ದ್ಯೋ, ದಿವ್(ಸ್ತ್ರೀಲಿಂಗ), ತ್ರಿವಿಷ್ಟಪ(ನಪುಂಸಕಲಿಂಗ) = ಸ್ವರ್ಗ
ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ | ಸುಪರ್ವಾಣಸ್ಸುಮನಸಸ್ತ್ರಿದವೇಶಾ ದಿವೌಕಸಃ || 7 || ಆದಿತೇಯಾ ದಿವಿಷದೋ ಲೇಖಾ ಅದಿತಿನಂದನಾಃ | ಆದಿತ್ಯಾ ಋಭವೋSಸ್ವಪ್ನಾ ಅಮರ್ತ್ಯಾ ಅಮೃತಾಂಧಸಃ || 8 || ಬರ್ಹಿರ್ಮುಖಾಃ ಕ್ರತುಭುಜೋ ಗೀರ್ವಾಣಾ ದಾನವಾರಯಃ | ವೃಂದಾರಕಾಃ ದೈವತಾನಿ ಪುಂಸಿ ವಾ ದೇವತಾಃ ಸ್ತ್ರಿಯಾಮ್ || 9 ||
- ಅಮರ, ನಿರ್ಜರ, ದೇವ, ತ್ರಿದಶ, ವಿಬುಧ, ಸುರ, ಸುಪರ್ವನ್, ಸುಮನಸ್, ತ್ರಿದಿವೇಶ, ದಿವೌಕಸ್, ಆದಿತೇಯ, ದಿವಿಷದ್, ಲೇಖ, ಅದಿತಿನಂದನ, ಆದಿತ್ಯ, ಋಭು, ಅಸ್ವಪ್ನ, ಅಮರ್ತ್ಯ, ಅಮೃತಾಧಸ್, ಬಹಿರ್ಮುಖ, ಕ್ರತುಭುಜ್, ಗೀರ್ವಾಣ, ದಾನವಾರಿ, ವೃಂದಾರಕ(ಇಷ್ಟು ಪದಗಳು ಪುಲ್ಲಿಂಗಳು), ದೈವತ(ಪುಲ್ಲಿಂಗ, ಮತ್ತು ನಪುಂಸಕಲಿಂಗ), ದೇವಾತಾ(ಸ್ತ್ರೀಲಿಂಗ) = ದೇವತೆಗಳು.