ವೈದ್ಯಕೀಯ ನ್ಯಾಯಶಾಸ್ತ್ರ
ವೈದ್ಯಕೀಯ ನ್ಯಾಯಶಾಸ್ತ್ರ ಎಂಬುದು ವ್ಯಾವಹಾರಿಕ ಮತ್ತು ದಂಡನಾ ಕಾನೂನುಗಳ ಅನುಷ್ಠಾನ ಸಂದರ್ಭದಲ್ಲಿ ವೈದ್ಯಕೀಯ ಜ್ಞಾನ ಮತ್ತು ತತ್ತ್ವ ಬಳಸಿಕೊಂಡು ಅಪರಾಧಗಳ ಮತ್ತು ಕಾನೂನು ಉಲ್ಲಂಘನೆ ಸ್ವರೂಪ ಹಾಗೂ ಪರಿಣಾಮ ಶೋಧಿಸುವ ಅಂತರಶಿಸ್ತೀಯ ಚಿಂತನ ಪ್ರಕಾರ (ಮೆಡಿಕಲ್ ಜ್ಯೂರಿಸ್‌ಪ್ರುಡೆನ್ಸ್).[೧][೨][೩]
ವೈದ್ಯಕೀಯ ಸಾಕ್ಷ್ಯ
ಬದಲಾಯಿಸಿಅತ್ಯಂತ ಸರಳವಾದ ಲಿಖಿತ ವೈದ್ಯಕೀಯ ಸಾಕ್ಷ್ಯವನ್ನು ವೈದ್ಯಕೀಯ ದೃಢೀಕರಣ ಪತ್ರದಲ್ಲಿ ಕಾಣುತ್ತೇವೆ. ಇದರಿಂದ ಮೊದಲ್ಗೊಂಡು ಜಟಿಲ ಕೊಲೆ ಪ್ರಕರಣದವರೆಗೂ ವೈದ್ಯಕೀಯ ಸಾಕ್ಷ್ಯದ ಹರವು ಇದೆ. ವೈದ್ಯಕೀಯ ಮಂಡಳಿ ಅಧಿನಿಯಮದ ಪ್ರಕಾರ ನೋಂದಾಯಿಸಲ್ಪಟ್ಟ ವೈದ್ಯರು ಯಾವುದೇ ವ್ಯಕ್ತಿಯ ಅನಾರೋಗ್ಯ, ಮಾನಸಿಕ ಅಸ್ವಾಸ್ಥ್ಯತೆ, ಮರಣ ಇತ್ಯಾದಿಗೆ ಸಂಬಂಧಿಸಿದಂತೆ ನೀಡುವ ದೃಢೀಕರಣ ಪತ್ರ ನ್ಯಾಯಾಲಯದಲ್ಲಿ ಅಂಗೀಕಾರವಾಗುತ್ತದೆ. ಆದರೆ ವೈದ್ಯರು ಸ್ವತಃ ಆ ವ್ಯಕ್ತಿಯನ್ನು ತಪಾಸಣೆ ಮಾಡಿ ತನ್ನ ಸರ್ವೋತ್ಕೃಷ್ಟ ಜ್ಞಾನ ಮತ್ತು ನಂಬಿಕೆಯ ಆಧಾರದಲ್ಲಿ ಅದನ್ನು ಕೊಟ್ಟಿದ್ದಿರಬೇಕು. ಅಪರಾಧ ಕೃತ್ಯಗಳಾದ ಘಾಸಿಗೊಳಿಸುವಿಕೆ, ಅತ್ಯಾಚಾರ, ಕೊಲೆ, ವಿಷಪ್ರಾಶನ, ಆತ್ಮಹತ್ಯೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಕಾನೂನಿನ ವರದಿಗಳು ನ್ಯಾಯಾಲಯದ ಅವಗಾಹನೆಗೆ ಬರುತ್ತವೆ. ಇಂಥವುಗಳಲ್ಲಿ ಸತ್ಯಸ್ಥಿತಿಯ ವಿವರಣೆ ಮತ್ತು ವೈದ್ಯರ ತಜ್ಞ ಅಭಿಪ್ರಾಯಗಳು ಪ್ರತ್ಯೇಕವಾಗಿ ಬರೆಯಲ್ಪಡುತ್ತವೆ.
ವೈದ್ಯಾಧಿಕಾರಿ ತನ್ನ ಆಸ್ಪತ್ರೆ ಅಥವಾ ಚಿಕಿತ್ಸಾಲಯದಲ್ಲಿರುವ ವ್ಯಕ್ತಿಯ ಮರಣಕಾಲಿಕ ಹೇಳಿಕೆಯನ್ನು ಸ್ಥಳೀಯ ದಂಡನಾಧಿಕಾರಿಯ ಸಮ್ಮುಖದಲ್ಲಿ ದಾಖಲುಪಡಿಸುವಂತೆ ವ್ಯವಸ್ಥೆ ಮಾಡತಕ್ಕದ್ದು. ಒಂದು ವೇಳೆ ಕಾಲಾವಕಾಶವಿಲ್ಲದಿದ್ದರೆ ಆ ವ್ಯಕ್ತಿ ನೀಡುವ ಎಲ್ಲ ವಿವರಣೆಗಳನ್ನು ಅವನದೇ ಭಾಷೆಯಲ್ಲಿ ತಪ್ಪಿಲ್ಲದಂತೆ ಸಾಕ್ಷಿದಾರರ ಮುಂದೆ ದಾಖಲು ಮಾಡತಕ್ಕದ್ದು. ನ್ಯಾಯಾಲಯದಲ್ಲಿ ವೈದ್ಯಾಧಿಕಾರಿ ವ್ಯಕ್ತಿಯ ಮರಣಕಾಲಿಕ ಹೇಳಿಕೆ ಕುರಿತು, ತಾನು ನೀಡಿದ ದೃಢೀಕರಣ ಪತ್ರ ಇಲ್ಲವೇ ವರದಿ ಬಗ್ಗೆ ಅಥವಾ ಕೆಳಗಿನ ನ್ಯಾಯಾಲಯದಲ್ಲಿ ತಜ್ಞನಾಗಿ ಈ ಮೊದಲು ಹೇಳಿದುದನ್ನು ದೃಢೀಕರಿಸುವ ಬಗ್ಗೆ ಮೌಖಿಕ ಸಾಕ್ಷ್ಯ ಹೇಳುವ ಸಂದರ್ಭಗಳು ಬರುತ್ತವೆ. ಒಬ್ಬ ತಜ್ಞ ಸಾಕ್ಷಿದಾರನಾಗಿ ವೈದ್ಯ ಆ ಪ್ರಕರಣ ಕುರಿತಂತೆ ಸರಳವೂ ನಿಷ್ಪಕ್ಷಪಾತವೂ ಸಂಕ್ಷಿಪ್ತವೂ ಆದ ಸಾಕ್ಷ್ಯ ನೀಡಬೇಕು. ವೈದ್ಯವೃತ್ತಿಯ ಉದ್ದೇಶಕ್ಕಾಗಿ ಅಥವಾ ವೈದ್ಯಕೀಯ ಸಂದರ್ಭದಲ್ಲಿ ರೋಗಿ ನೀಡಿದ ಮಾಹಿತಿಯ ಗೌಪ್ಯ ಕಾಪಾಡುವ ಹೊಣೆ ವೈದ್ಯನದ್ದು. ಆದರೆ ಈ ಮಾಹಿತಿಯನ್ನು ನ್ಯಾಯಾಲಯದ ಒತ್ತಾಯದ ಮೇರೆಗೆ ವಿಶೇಷ ಸಂದರ್ಭಗಳಲ್ಲಿ ಬಹಿರಂಗಪಡಿಸಬಹುದು.
ಮರಣೋತ್ತರ ಪರೀಕ್ಷೆ
ಬದಲಾಯಿಸಿಮೃತವ್ಯಕ್ತಿಯ ಗುರುತು ಸ್ಥಾಪಿಸಲು, ಮಡಿದ ವೇಳೆ ಮತ್ತು ಕಾರಣ ತಿಳಿಯಲು ಹಾಗೂ ಸದ್ಯೋಜಾತ ಶಿಶು ಹುಟ್ಟುವಾಗಲೇ ಸತ್ತಿತ್ತೆ ಎಂಬುದನ್ನು ಕಂಡುಕೊಳ್ಳಲು ಸಾಮಾನ್ಯವಾಗಿ ಶವದ ಮರಣೋತ್ತರ ಪರೀಕ್ಷೆ ಮಾಡುತ್ತಾರೆ. ಪೊಲೀಸ್ ಆಯುಕ್ತರ ಅಥವಾ ಜಿಲ್ಲಾ ದಂಡನಾಧಿಕಾರಿಯವರ ಲಿಖಿತ ಆದೇಶದ ಸಂದರ್ಭದಲ್ಲಿ ಸರಕಾರೀ ವೈದ್ಯಾಧಿಕಾರಿ ಇದನ್ನು ಮಾಡುತ್ತಾನೆ. ಆದಷ್ಟು ಮಟ್ಟಿಗೆ ಹಗಲಿನಲ್ಲಿ ಮತ್ತು ಕಾರ್ಯಸ್ಥಳದಲ್ಲಿ ಈ ಕೆಲಸ ನಡೆಸಬೇಕು. ಮೊದಲು ಮೃತ ವ್ಯಕ್ತಿಯ ಗುರುತು ಸ್ಥಾಪನೆ ಮಾಡಬೇಕು. ದೇಹದ ಉಷ್ಣತೆ ಮತ್ತು ಕಣ್ಣಿನ ಸ್ಥಿತಿ ಗಮನಿಸಿ ಸಾವಿನ ಸಮಯವನ್ನು ಊಹಿಸಬಹುದು. ಒಡಲ ಮೇಲಿನ ಗಾಯ ಮತ್ತು ರಂಧ್ರಗಳನ್ನು ಪರೀಕ್ಷಿಸಬೇಕು. ಗಾಯಗಳ ಸ್ವರೂಪ, ಗಾತ್ರ ಮುಂತಾದವನ್ನು ಕರಾರುವಾಕ್ಕಾಗಿ ಅಳತೆಮಾಡಿ ಬರೆದುಕೊಳ್ಳಬೇಕು. ಕೋವಿ ಗುಂಡುಗಳಿಂದಾದ ಗಾಯವನ್ನು ಗುರುತಿಸಬೇಕು ಮತ್ತು ಬುಲೆಟ್‌ಗಳನ್ನು ಶೋಧಿಸಬೇಕು. ಕುತ್ತಿಗೆಯ ಸುತ್ತ ಇರಬಹುದಾದ ಗಾಯ ಮತ್ತು ಬೆರಳಚ್ಚುಗಳನ್ನು ಗುರುತಿಸಬೇಕು.
ಆಂತರಿಕ ಪರೀಕ್ಷೆ ಮಾಡುವಾಗ ಸಾಮಾನ್ಯವಾಗಿ ಮೊದಲು ತಲೆ ಅನಂತರ ಎದೆ ಹಾಗೂ ಕೊನೆಯಲ್ಲಿ ಹೊಟ್ಟೆಯನ್ನು ಸೀಳಿ ಪರೀಕ್ಷಿಸಬೇಕು. ಅಂದರೆ ಕೂಲಂಕಷ ಪರೀಕ್ಷಣೆ ಜರೂರಿನ ಅಗತ್ಯ. ಉದಾಹರಣೆಗೆ ಮೃತನ ಪರೀಕ್ಷಿಸುವುದರ ಮೂಲಕ ಆತನ ಲಿಂಗ, ವಯಸ್ಸು, ಸಾವಿನ ಕ್ಷಣ ಮತ್ತು ಕಾರಣವನ್ನು ಅಂದಾಜಿಸಲು ಸಾಧ್ಯವಾಗುತ್ತದೆ.
ಮರಣ ಕಾರಣದ ಬಗ್ಗೆ ವಿಶ್ಲೇಷಣೆ
ಬದಲಾಯಿಸಿಸ್ವಾಭಾವಿಕ ಮತ್ತು ಅಸ್ವಾಭಾವಿಕ ಸಾವುಗಳು ಮಂಕುಗವಿಯುವುದರಿಂದ (ಕೋಮಾ), ಹೃದಯಸ್ತಂಭನದಿಂದ ಮತ್ತು ಶ್ವಾಸೋಚ್ಛ್ವಾಸ ಕ್ರಿಯೆ ನಿಲ್ಲುವುದರಿಂದ ಸಂಭವಿಸುತ್ತವೆ. ಮಿದುಳಿನ ರಕ್ತಸ್ರಾವ ಮತ್ತು ಕಪಾಲಕ್ಕಾದ ಗಾಯಗಳಿಂದ ಅಥವಾ ವಿಷಪ್ರಾಶನದ ಪರಿಣಾಮದಿಂದ ಪ್ರಾಣಾಂತಿಕ ಮಂಕು ಕವಿಯುತ್ತದೆ. ಕಾರಣಗಳು ನೂರಾರು. ಇವನ್ನು ಸವಿವರ ತಪಾಸಣೆಯಿಂದ ವರದಿಸುವುದು ವೈದ್ಯನ ಹೊಣೆ. ಮರಣದ ಕಾರಣವನ್ನು ನಿಖರವಾಗಿ ಹೇಳುವುದರ ಬಗ್ಗೆ ವೈದ್ಯಕೀಯ ನ್ಯಾಯಶಾಸ್ತ್ರದಲ್ಲಿ ವಿಸ್ತೃತ ವಿವರಣೆಯಿದೆ. ತಲೆ, ಕತ್ತು, ಎದೆ, ಹೊಟ್ಟೆ ಮತ್ತು ಸ್ನಾಯುಗಳ ಮೇಲೆ ಗಾಯಗಳ ಪರಿಣಾಮದ ಬಗ್ಗೆ ಸಚಿತ್ರ ಮತ್ತು ಸೋದಾಹರಣ ವಿವರಣೆ ಕೂಡ ಕಾಣಬಹುದು.
ಜೀವಪುನರುತ್ಪತ್ತಿ
ಬದಲಾಯಿಸಿಕಾನೂನು ಕ್ಷೇತ್ರದಲ್ಲಿ ಜೀವಪುನರುತ್ಪತ್ತಿ ವಿಚಾರಗಳಾದ ಗರ್ಭಧಾರಣೆ, ಭ್ರೂಣ ಬೆಳೆವಣಿಗೆ, ಗರ್ಭಪಾತ, ಮೃತಶಿಶುಜನನ ಮತ್ತು ಶಿಶುರಕ್ಷಣೆ ಕುರಿತು ಪ್ರಶ್ನೆಗಳು ಬಂದಾಗ ವೈದ್ಯರ ತಜ್ಞ ಅಭಿಪ್ರಾಯಗಳು ಪ್ರಸ್ತುತವಾಗುತ್ತವೆ. ನಪುಂಸಕತ್ವ ಮತ್ತು ಗರ್ಭಧಾರಣೆ ಕುರಿತ ತೊಡಕುಗಳ ಬಗ್ಗೆ ಸ್ಪಷ್ಟ ಅಭಿಪ್ರಾಯ ವೈವಾಹಿಕ ಸಂಬಂಧವನ್ನು ನೇರ್ಪುಗೊಳಿಸಲು ಸಹಾಯ ಮಾಡುತ್ತದೆ. ಗರ್ಭಧಾರಣೆಯ ಅವಧಿ ಮತ್ತು ಪಿತೃತ್ವದ ಜಟಿಲ ಪ್ರಶ್ನೆಗಳಿಗೆ ಆಧುನಿಕ ವೈದ್ಯವಿಜ್ಞಾನ ಡಿಎನ್‌ಎ ಪರೀಕ್ಷೆಗಳ ಮೂಲಕ ನಿಖರ ಉತ್ತರ ನೀಡುತ್ತದೆ. ಕೃತಕ ಗರ್ಭಧಾರಣೆಗೆ ಸಂಬಂಧಿಸಿದ ಸೂಕ್ಷ್ಮ ವೈದ್ಯಕಾನೂನಿನಲ್ಲಿ ಹೊಸ ತತ್ತ್ವಗಳು ಬಂದಿವೆ. ಸ್ತ್ರೀ ಭ್ರೂಣಹತ್ಯೆಯ ವ್ಯಾಪಕ ದುಷ್ಪ್ರವೃತ್ತಿಯ ಹಿನ್ನೆಲೆಯಲ್ಲಿ ಭ್ರೂಣದ ಲಿಂಗ ಪತ್ತೆಹಚ್ಚು ವುದನ್ನು ನಿಷೇಧಿಸುವ ಕಾನೂನು ಜಾರಿಗೆ ಬಂದಿದೆ (ಜನನಪೂರ್ವಚಿಹ್ನಾ ಶೋಧನಾತಂತ್ರ ನಿಷೇಧ ಕಾನೂನು, 1994). ಭಾರತೀಯ ದಂಡನೀತಿಯ ಪ್ರಕಾರ ಮಹಿಳೆಯ ಪ್ರಾಣ ಉಳಿಸುವ ಉದ್ದೇಶಕ್ಕಲ್ಲದೆ ಇನ್ನಿತರ ಉದ್ದೇಶಕ್ಕಾಗಿ ಆಕೆಯ ಗರ್ಭಪಾತ ಮಾಡುವುದು ಅಪರಾಧ (ಕಲಂ 312). ಆದರೆ 1971ರ ವೈದ್ಯಕೀಯ ಕಾನೂನಿನ ರೀತ್ಯ ಗರ್ಭಪಾತ ಅಧಿನಿಯಮದ ಪ್ರಕಾರ ಮಾನಸಿಕ ಅಥವಾ ದೈಹಿಕ ವೈಕಲ್ಯದೊಂದಿಗೆ ಹುಟ್ಟಬಹುದಾದ ಶಿಶುವನ್ನಾಗಲೀ ಅತ್ಯಾಚಾರದ ಕಾರಣದಿಂದ ಅಥವಾ ಗರ್ಭನಿರೋಧಕ ಸಾಧನ ಕ್ರಮದ ವೈಫಲ್ಯದಿಂದ ಹುಟ್ಟಬಹುದಾದ ಶಿಶುವನ್ನಾಗಲೀ ವೈದ್ಯರ ಸಹಾಯದಿಂದ ಮಾನ್ಯತೆ ಪಡೆದಿರುವ ಆರೋಗ್ಯ ಸಂಸ್ಥೆಯಲ್ಲಿ ಗರ್ಭಪಾತದ ಮೂಲಕ ನಿವಾರಿಸುವ ಅವಕಾಶವಿದೆ. ಇತರ ಗರ್ಭಪಾತದ ಪ್ರಕರಣಗಳು ಅಪರಾಧಕೃತ್ಯವಾದ್ದರಿಂದ ವೈದ್ಯಕೀಯ ನ್ಯಾಯಶಾಸ್ತ್ರದಲ್ಲಿ ಈ ಬಗ್ಗೆ ವಿಸ್ತೃತ ವಿವರಣೆಯಿದೆ.
ಮಾನಸಿಕ ಮತ್ತು ದೈಹಿಕ ಅಂಗವೈಕಲ್ಯ
ಬದಲಾಯಿಸಿವ್ಯಕ್ತಿಯ ವ್ಯಾವಹಾರಿಕ ಮತ್ತು ಅಪರಾಧ ಕೃತ್ಯಗಳಿಗೆ ಹೊಣೆಗಾರಿಕೆ ಬರುವುದು ಆತ ಸ್ವಸ್ಥ ಚಿತ್ತ ಹೊಂದಿದ್ದಾಗ ಮಾತ್ರ. ಆದ್ದರಿಂದ ಮಾನಸಿಕ ಅಸ್ವಾಸ್ಥ್ಯತೆ ಚಾಲ್ತಿಯಲ್ಲಿದ್ದ ಅವಧಿ, ಅದರ ತೀವ್ರತೆ ಮತ್ತು ಪರಿಣಾಮ ಕುರಿತು ತಜ್ಞ ವೈದ್ಯರ ಅಭಿಪ್ರಾಯ, ಅಪರಾಧ ದಂಡನಾ ಕಾನೂನು, ಕರಾರುಗಳ ಅಧಿನಿಯಮ, ವೈವಾಹಿಕ ಕಾನೂನು, ಉತ್ತರಾಧಿಕಾರದ ಕಾನೂನು ಇತ್ಯಾದಿಗಳ ಅನ್ವಯಿಸುವಿಕೆಯ ಸನ್ನಿವೇಶದಲ್ಲಿ ಸಹಾಯಕ್ಕೆ ಬರುತ್ತದೆ. ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವಾಗ ಅಥವಾ ಅಲ್ಲಿಂದ ಬಿಡುಗಡೆಯಾಗುವಾಗ ಕೂಡ ಇದು ಪ್ರಯೋಜನಕ್ಕೆ ಬರುತ್ತದೆ. ದೈಹಿಕ ಅಂಗವೈಕಲ್ಯದ ಪ್ರಮಾಣವನ್ನು ನಿರ್ಣಯಿಸುವ ವೈದ್ಯರ ಅಭಿಪ್ರಾಯ ಕಾರ್ಮಿಕರ ಪರಿಹಾರ ಅಧಿನಿಯಮ ಅಥವಾ ಇತರ ಕಾನೂನಿನ ಸವಲತ್ತನ್ನು ಅಂಗವಿಕಲನಿಗೆ ಕೊಡಿಸುವುದರಲ್ಲಿ ಉಪಯೋಗಕ್ಕೆ ಬರುತ್ತದೆ.
ಲೈಂಗಿಕ ಅಪರಾಧಗಳು
ಬದಲಾಯಿಸಿಅತ್ಯಾಚಾರ ಮತ್ತು ಅನೈಸರ್ಗಿಕ ಲೈಂಗಿಕ ಅಪರಾಧಗಳ ಪತ್ತೆಗೆ ವೈದ್ಯ ಅನುಸರಿಸಬೇಕಾದ ಶೋಧನಾಕ್ರಮಗಳ ಬಗ್ಗೆ ವೈದ್ಯಕೀಯ ನ್ಯಾಯಶಾಸ್ತ್ರದಲ್ಲಿ ವಿವರವಿದೆ. ಅತ್ಯಾಚಾರಕ್ಕೊಳಗಾದ ಸ್ತ್ರೀಯ ವಯೋನಿರ್ಧಾರ, ಸ್ತ್ರೀಯ ದೇಹದ ಮೇಲೆ ಹಿಂಸೆಯ ಗುರುತುಗಳನ್ನು ಗಮನಿಸುವುದು ಮತ್ತು ಜನನಾಂಗ ಪರೀಕ್ಷಣೆ ಇವುಗಳ ಬಗ್ಗೆ ಕೂಡ ವಿವರಗಳಿವೆ.
ವಿಷಶಾಸ್ತ್ರ
ಬದಲಾಯಿಸಿವೈದ್ಯಕೀಯ ನ್ಯಾಯಶಾಸ್ತ್ರಕ್ಕೆ ಪೂರಕವಾಗಿ ಕಲಿಯುವ ಇನ್ನೊಂದು ವಿಷಯ ವಿಷಶಾಸ್ತ್ರ. ಪ್ರಬಲ ಆಮ್ಲ ಮತ್ತು ಕ್ಷಾರಗಳು, ಲೋಹಾಧಾರಿತ ವಿಷಗಳು, ಲೋಹೇತರ ವಿಷಗಳು, ಪ್ರಾಣಿಜನ್ಯ ಮತ್ತು ಸಸ್ಯಜನ್ಯ ವಿಷಗಳು, ನರಮಂಡಲದ ಮೇಲೆ ತೀವ್ರವಾಗಿ ಕೆಲಸ ಮಾಡುವ ವಿಷಗಳು ಎಂದು ವರ್ಗೀಕರಣ ಮಾಡಿ ವಿವಿಧ ವಿಷಗಳ ಪರಿಣಾಮ, ಅದಕ್ಕಿರುವ ಪರಿಹಾರ ಮತ್ತು ಅವುಗಳ ಸೇವನೆಯ ಪತ್ತೆಮಾಡುವ ಕ್ರಮವನ್ನು ವಿಷಶಾಸ್ತ್ರದಲ್ಲಿ ಕಲಿಸಲಾಗುತ್ತದೆ.
ವೈದ್ಯರ ಹಕ್ಕು ಮತ್ತು ಹೊಣೆಗಾರಿಕೆಗಳು
ಬದಲಾಯಿಸಿವೈದ್ಯರಿಗೆ ಸಂವಿಧಾನದತ್ತವಾದ ವೃತ್ತಿ ಸ್ವಾತಂತ್ರ‍್ಯದ ಹಕ್ಕಿದೆ. ಭಾರತೀಯ ವೈದ್ಯಕೀಯ ಮಂಡಳಿ ಅಧಿನಿಯಮ 1956 ಮತ್ತು ಅದರ ತಿದ್ದುಪಡಿ ಹಾಗೂ ನಿಯಮಾವಳಿ ಅನುಸಾರ ವೈದ್ಯವೃತ್ತಿ (ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ) ಆರಂಭಿಸಲು ಮಂಡಳಿ ನಿಗದಿಸಿದ ವಿದ್ಯಾರ್ಹತೆ ಮತ್ತು ಪರಿಣತಿ ಪಡೆದುಕೊಂಡು ರಾಜ್ಯ ವೈದ್ಯಮಂಡಳಿಗೆ ವೈದ್ಯರ ಮೇಲೆ ಅವರು ವೃತ್ತಿ ನಿಯಮಕ್ಕೆ ತಪ್ಪಿದಲ್ಲಿ ಶಿಸ್ತಿನ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ. ನೋಂದಾವಣೆಯ ಸಮಯದಲ್ಲಿ ಅವರು ಸಮಾಜದ ಆರೋಗ್ಯ ಮತ್ತು ತಮ್ಮ ವೃತ್ತಿ ಗೌರವವನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡತಕ್ಕದ್ದು. ಅವರು ಅನುಸರಿಸಬೇಕಾದ ವಿಸ್ತಾರವಾದ ನೀತಿಸಂಹಿತೆಯನ್ನು ಮಂಡಳಿ ರಚಿಸಿದೆ. ವೈದ್ಯವೃತ್ತಿ ಅಪೇಕ್ಷಿಸುವ ಜಾಗರೂಕ ಕರ್ತವ್ಯ ನಿರ್ವಹಣೆಯಿಂದ ವಿಚಲಿತರಾಗಿ ವೈದ್ಯ ಬೇಜವಾಬ್ದಾರಿಯಿಂದ ರೋಗಿಯ ಆರೈಕೆ ಮಾಡಿದರೆ ಅದರಿಂದ ಸಂತ್ರಸ್ತನಾದ ವ್ಯಕ್ತಿಗೆ ನಷ್ಟಪರಿಹಾರ ಕೊಡುವ ಹೊಣೆಗಾರಿಕೆ ವೈದ್ಯನದು. ರೋಗಿಗೆ ಸಂಬಂಧಿಸಿದ ಸತ್ಯಸಂಗತಿಗಳ ಗೌಪ್ಯವನ್ನು ರಕ್ಷಿಸುವ ಜವಾಬ್ದಾರಿಯೂ ವೈದ್ಯರ ಮೇಲಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ, ಭಾರತೀಯ ದಂಡಸಂಹಿತೆ ಇತ್ಯಾದಿ ಕಾನೂನುಗಳ ಸಂಬಂಧಪಟ್ಟ ಪ್ರಾವಿಧಾನಗಳನ್ನು ವೈದ್ಯರು ಅರಿಯುವಂತೆ ವೈದ್ಯಕೀಯ ನ್ಯಾಯಶಾಸ್ತ್ರದಲ್ಲಿ ಒತ್ತು ನೀಡಲಾಗುತ್ತದೆ. ಒಟ್ಟಿನಲ್ಲಿ ವೈದ್ಯಜ್ಞಾನದ ಸಹಾಯವನ್ನು ನ್ಯಾಯನಿರ್ಣಯದ ಪ್ರಕ್ರಿಯೆಯಲ್ಲಿ ನೀಡುವುದು ಮತ್ತು ಕಾನೂನುಗಳ ತಿಳಿವಳಿಕೆ ಮೂಲಕ ತಮ್ಮ ವೃತ್ತಿಯನ್ನು ಸಾಮಾಜಿಕ ಮೌಲ್ಯಗಳಿಗೆ ಹಾಗೂ ಆರೋಗ್ಯದ ಹಕ್ಕಿಗೆ ಸರಿಸಾಟಿಯಾಗುವಂತೆ ನಿಭಾಯಿಸುವುದು ವೈದ್ಯಕೀಯ ನ್ಯಾಯಶಾಸ್ತ್ರದ ಪ್ರಮುಖ ಕಾಳಜಿಯಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ Theodric Romeyn Beck and William Dunloop. (1825.) Elements of Medical Jurisprudence, 2 ed., Oxford University Press.
- ↑ Britannica, The Editors of Encyclopaedia. "medical jurisprudence". Encyclopedia Britannica, 18 Aug. 2011, https://www.britannica.com/science/medical-jurisprudence. Accessed 25 March 2024.
- ↑ Picard, Ellen. "Medical Jurisprudence". The Canadian Encyclopedia, 16 December 2013, Historica Canada. www.thecanadianencyclopedia.ca/en/article/medical-jurisprudence. Accessed 25 March 2024.
ಗ್ರಂಥಸೂಚಿ
ಬದಲಾಯಿಸಿ- Ferllini, R. "Silent witness". Grange 2007.
- Saukko, P.; Knight, B. "Knight’s forensic pathology". CRC Press/Taylor & Francis Group 2016.