ಭ್ರೂಣ
ಭ್ರೂಣವು ಬಹುಕೋಶೀಯ ಜೋಡಿ ವರ್ಣತಂತುವುಳ್ಳ ಯೂಕ್ಯಾರಿಯಾಟಿಕ್ ಜೀವಿಯ ವಿಕಸನದ ಒಂದು ಮುಂಚಿನ ಹಂತ. ಸಾಮಾನ್ಯವಾಗಿ, ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಗಳಲ್ಲಿ, ಭ್ರೂಣವು ಹೆಣ್ಣು ಅಂಡಕೋಶ ಮತ್ತು ಗಂಡು ಶುಕ್ರಾಣುವಿನ ಫಲೀಕರಣದಿಂದ ಉತ್ಪತ್ತಿಯಾಗುವ ಏಕ ಕೋಶವಾದ ಯುಗ್ಮಜದಿಂದ ವಿಕಸನಗೊಳ್ಳುತ್ತದೆ. ಯುಗ್ಮಜವು ಅದರ ಇಬ್ಬರು ಹೆತ್ತವರಿಂದ ತಲಾ ಅರ್ಧ ಡಿ.ಎನ್.ಎಯನ್ನು ಹೊಂದಿರುತ್ತದೆ. ಸಸ್ಯಗಳು, ಪ್ರಾಣಿಗಳು ಮತ್ತು ಕೆಲವು ಪ್ರೋಟಿಸ್ಟ್‌ಗಳಲ್ಲಿ, ಯುಗ್ಮಜವು ಮೈಟಾಸಿಸ್ ಪ್ರಕ್ರಿಯೆಯಿಂದ ವಿಭಜನೆಯಾಗುವುದು ಶುರುವಾಗಿ ಒಂದು ಬಹುಕೋಶೀಯ ಜೀವಿ ಉತ್ಪತ್ತಿಯಾಗುತ್ತದೆ. ಭ್ರೂಣವು ಈ ಪ್ರಕ್ರಿಯೆಯ ಫಲವಾಗಿರುತ್ತದೆ.

ಮಾನವ ಗರ್ಭಾವಸ್ಥೆಯಲ್ಲಿ, ವಿಕಸನಗೊಳ್ಳುತ್ತಿರುವ ಉಲ್ಬವನ್ನು ಒಂಭತ್ತನೇ ವಾರದವರೆಗೆ (ಫಲೀಕರಣ ಅವಸ್ಥೆ), ಅಥವಾ ಹನ್ನೊಂದನೇ ವಾರದವರೆಗೆ (ಗರ್ಭಾವಸ್ಥೆ) ಭ್ರೂಣವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯ ನಂತರ ಭ್ರೂಣವನ್ನು ಉಲ್ಬವೆಂದು ಕರೆಯಲಾಗುತ್ತದೆ.[೧]