ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು

'ಶ್ರೀ.ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು', (೧೮೯೧-೧೯೯೬)[] ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೋಗಾಚಾರ್ಯರು, ಶತೋತ್ತರಾಯುಷಿಗಳು, (೧೦೩, ವರ್ಷಗಳಕಾಲ ಬದುಕಿದವರು) ಮಹಾಸಂಘಟಕರು, ಮತ್ತು ನಿಷ್ಕಾಮ ಕರ್ಮಯೋಗಿ, ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ರಾಘವೇಂದ್ರ ಸ್ವಾಮಿಗಳನ್ನು ಹತ್ತಿರದಿಂದ ಬಲ್ಲವರು, ಅವರನ್ನು 'ಅಭಿನವ ಧನ್ವಂತರಿ'ಯೆಂದೇ ತಿಳಿದು ಗೌರವಸಲ್ಲಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ 'ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ಈ ಕಗ್ಗ ಹಳ್ಳಿ-ಮಲ್ಲಾಡಿಹಳ್ಳಿಗೆ,[] ಅವರು ಬಂದದ್ದು, ಅಲ್ಲಿನ ಜನರ ಸುಯೋಗವೇ ಸರಿ. ತಮ್ಮ ಗುರುಗಳಾದ 'ಶಿವಾನಂದ'ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನು ಉದ್ಧರಿಸುವ ಕೆಲಸವನ್ನು ಒಂದು 'ಪರಮಾತ್ಮನ ಪೂಜೆ' ಎಂದು ಸ್ವೀಕರಿಸಿ, ಸುಮಾರು ೪೫-೫೦ ಹಳ್ಳಿಗಳಿಗೆ ಭೇಟಿಕೊಟ್ಟು, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನೂ ತಮ್ಮ ಕೈಗೆ ತೆಗೆದುಕೊಂಡು ಗ್ರಾಮಗಳ ಜನರಿಗೆ ತಿಳುವಳಿಕೆಯನ್ನು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. ೧೯೪೩ ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ ೫೦ ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.

ಶ್ರೀ. ರಾಘವೇಂದ್ರ ಸ್ವಾಮೀಜಿ
ಚಿತ್ರ:Svamiji latest photo.jpg
ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು
Bornbirth date and,
Died
ಬೆಂಗಳೂರು ಶನಿವಾರ, ಬೆಳಿಗ್ಯೆ,೧೦-೩೦, ಆಗಸ್ಟ್ ೩೧, ೧೯೯೬ ರಂದು ೧೦೩ ನೇ ವರ್ಷದಲ್ಲಿ (ಶುದ್ಧ ಆಷಾಢ) ದೈವೈಕ್ಯರಾದರು
Cause of deathಉಸಿರಾಟದ ತೊಂದರೆಯಿಂದ ಬೆಂಗಳೂರಿನ ಮಲ್ಯಾ ಆಸ್ಪತ್ರೆಯಲ್ಲಿ ನಿಧನರಾದರು.
Resting placeಮಲ್ಲಾಡಿಹಳ್ಳಿ,ಚಿತ್ರದುರ್ಗ ಜಿಲ್ಲೆ, ಕರ್ನಾಟಕ, ಭಾರತ
Nationalityಭಾರತೀಯ
Education'B.Pc ; Bachelor of Physical Culture',ಎಂಬ ಪದವಿಯನ್ನು ಬಾಬಾ ಲಕ್ಷ್ಮಣದಾಸ್ ರವರ ಹಸ್ತದಿಂದ ಪಡೆದರು.
Occupation(s)ಸಮಾಜಸೇವೆ. ಸ್ಥಾಪಿಸಿದ ಸಂಸ್ಥೆಗಳು : ಬನಶಂಕರಿ ಅಮ್ಮನವರ ದೇವಸ್ಥಾನ, ಕಾಲೇಜುಗಳು, 'Centenary College of Physical Education' (ಆಯುರ್ವೇದ ಕಾಲೇಜು), B.Ed; College, (ಶಿಕ್ಷಕರ ತರಬೇತಿ ಕಾಲೇಜ್)
Known forದೀನ, ಆರ್ತರ ಸಹಾಯ, ವಿದ್ಯಾಪ್ರಸಾರ{ಬಲಿಷ್ಠ ಹಾಗೂ ಸ್ವಸ್ತ್ಯ ಸಮಾಜ ನಿರ್ಮಾಣ}ರಚಿಸಿದ ಕೃತಿಗಳು : ೪ ಕಾವ್ಯಗಳು, ೯ ಕಾದಂಬರಿಗಳು, ೧೨ ನಾಟಕಗಳು, ೨ ಗೀತ ನಾಟಕ, ೭ ಏಕಪಾತ್ರಾಭಿನಯ, ೧ ವಚನ ಸಾಹಿತ್ಯ, ೩ ಕಥಾಸಂಕಲನ, ೪ ಆಯುರ್ವೇದ, ೪ ಯೋಗ-ಇದರಲ್ಲಿ " ಬೃಹತ್ ಯೋಗ ದರ್ಶನ" ಯೋಗ ಸಂಪುಟವೂ ಇದೆ. ೫ ವ್ಯಾಯಾಮ, ೨ ಇತರೆ-೧. ಆತ್ಮ ನಿವೇದನೆ, ೨. ಜೋಳಿಗೆ ಪವಾಡ.
Titleಯೋಗಾಚಾರ್ಯ
Successorಶ್ರೀ ಸೂರ್ದಾಸ್ ಜಿ
Parentಶ್ರೀ. ಅನಂತಪದ್ಮನಾಭ ನಂಬೂದರಿ, ಶ್ರೀಮತಿ. ಪದ್ಮಾಂಬಾಳ್
Relativesಸಾಕು ತಂದೆಯಾಯಂದಿರು : ನರಸಿಂಹಯ್ಯ ಮತ್ತು ಪುಥಲೀ ಬಾಯಿ
Websitemalladihalliast.com

ಕುಮಾರಸ್ವಾಮಿ ಕೊಲ್ಲೂರಿಗೆ

ಬದಲಾಯಿಸಿ

ಅವರ ತಂದೆಯವರಾದ, 'ಅನಂತ ಪದ್ಮನಾಭ ನಂಬೂದರಿ'ಯವರು, ಮೂಲತಃ ಕೇರಳದ ಜ್ಯೋತಿಶ ವಿದ್ವಾಂಸರು, ಮಹಾಪಂಡಿತರು ; ಅಲ್ಲಿನ ಸುತ್ತುಮುತ್ತಲಿನ ಜನಕ್ಕೆ ತಮ್ಮ ಅಮೂಲ್ಯ ಜ್ಞಾನದಿಂದ ಸಲಹೆ ಸಮಾಧಾನ ಹೇಳುತ್ತಿದ್ದರು. 'ಪದ್ಮಾಂಬಳ್',ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು 'ಕುಮಾರ ಸ್ವಾಮಿ'ಎಂದು. ಆದರೆ, ಹುಟ್ಟಿದಾ ಗಲೇ ಆ ಶಿಶು,'ಬಾಲರೋಗ'ಕ್ಕೆ ತುತ್ತಾಗಿ ಸುಮಾರು ೧೪ ವರ್ಷ, ಯಾವ ಭಾವನೆಯನ್ನೂ ಅನುಭವಿಸದ ಒಂದು 'ಮಾಂಸದ ಮುದ್ದೆ'ಯಂತಿದ್ದ ಆ ಪ್ರಜ್ಞಾಶೂನ್ಯ ಮಗುವಿನ ಮಾತೆ, ದೂರದ ಕೊಲ್ಲೂರಿನಲ್ಲಿದ್ದ ಮೂಕಾಂಬಿಕ ದೇವಿಯ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯಲು ನಿರ್ಧರಿಸುತ್ತಾರೆ. ಪದ್ಮಾಂಬ ಹಾಗೂ ನಂಬೂದರಿಯವರು ವೃ‍ದ್ಧಾಪ್ಯದಿಂದಲೂ ಮತ್ತು ರೊಗಗಳಿಂದ ಬಳಲಿ ಬೆಂಡಾಗಿದ್ದರು. ನಿಶ್ಯಕ್ತಿ; ನಡೆಯುವುದೂ ಕಷ್ಟ. ೧೪ ವರ್ಷದ ಮಗನನ್ನು ಎತ್ತಿಕೊಂಡೇ ಹೋಗಬೇಕು. ಅಂದಿನ ದಿನಗಳಲ್ಲಿ ರಸ್ತೆಯಾಗಲೀ ವಾಹನ ಸೌಕರ್ಯವಾಗಲಿ ಇರಲಿಲ್ಲ. ದುರ್ಗಮವಾದ ಕಾಡಿನ ಮಧ್ಯೆ ಕಾಡು ಮೃಗಗಳ ನಡುವೆ ತಿಂಗಳುಗಟ್ಟಲೆ ನಡೆದೇ ದಾರಿ ಸವೆಸಬೇಕಾದ ಪ್ರಸಂಗ. ಹೀಗೆಯೇ ಅವರ ’ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ” ಸಾಗಿತ್ತು. ದಕ್ಷಿಣ ಕನ್ನಡಬಾರಕೂರು ಎಂಬ ಗ್ರಾಮಕ್ಕೆ ಬಂದು, ಶ್ರೀ ನರಸಿಂಹಯ್ಯ ಎಂಬ ಸದ್ಗೃಹಸ್ತರ ಮನೆಯಲ್ಲಿ ವಸತಿಮಾಡುತ್ತಾರೆ.

ಮಂತ್ರಾಲಯದ ಸ್ವಾಮಿಗಳ ಆಶೀರ್ವಾದ

ಬದಲಾಯಿಸಿ

ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು, ಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದಮೇಲೆ, ಪದ್ಮಾಂಬಳ್ ರವರಿಗೆ ಸ್ವಲ್ಪ ಸಮಧಾನವಾಯಿತು.ಮಂತ್ರಾಲಯದ ಯತಿಗಳು ಆ ಬಾಲಕನನ್ನು' ರಾಘವೇಂದ್ರ', ಎಂದು ಕರೆದರು. ಅಷ್ಟುಹೊತ್ತಿಗೆ ಪದ್ಮಾಂಬಳರ ಆರೋಗ್ಯ ತೀರ ಹದಗೆಟ್ಟಿದ್ದು, ಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆ, ಮಗನ ಈ ಸ್ಥಿತಿಯನ್ನು ನೋಡಲಾರದೆ ಚಿಂತಾಕ್ರಾಂತರಾಗಿ 'ಬಾರಕೂರು' ಹಳ್ಳಿಯಲ್ಲೇ ಮರಣಹೊಂದುತ್ತಾರೆ. ನಂಬೂದರಿಯವರು ಆ ಬಾಲಕನನ್ನು ತಮ್ಮ ಗೆಳೆಯ ,ಸದ್ಗೃಹಸ್ತರೂ, ಯಕ್ಷಗಾನ ಪಂಡಿತರೂ, ಒಳ್ಳೆಯ ಮತುಗಾರರೂ, ರಾಮಾಯಣ ಮಹಾಭಾರತಗಳನ್ನು ಓದಿ, ವ್ಯಾಖ್ಯಾನಿಸುವುದರಲ್ಲಿ ಸಮರ್ಥರೂ, ಹಾಗೂ 'ಶ್ರೀ.ನರಸಿಂಹಯ್ಯ', ಮತ್ತು ಅವರ ಧರ್ಮಪತ್ನಿಯವರಾದ 'ಶ್ರೀಮತಿ. ಪುಥಲೀಬಾಯಿ'ಯವರಿಗೆ ಒಪ್ಪಿಸಿ, ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆ. ಈ ಕಾರ್ಯ ಆದದ್ದು ಕ್ರಿ.ಶ.೧೯೦೬ಯುಗಾದಿಯ ಶುಭದಿನದಂದು.

ಸಾಕು ತಂದೆ-ತಾಯಿಗಳ ಆಶ್ರಯದಲ್ಲಿ

ಬದಲಾಯಿಸಿ

'ಪುಥಲೀಬಾಯಿ'ಯವರು 'ಕುಮಾರಸ್ವಾಮಿ'ಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ, ಅವನಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತಾರೆ. ದಿನ ಕ್ರಮೇಣ, ಅದ್ಭುತ ಬದಲಾವಣೆಯಾಗಿ ಹುಡುಗನು ಎಲ್ಲರನ್ನೂ ನೋಡಿ ನಗುವುದು, ಗಮನಿಸುವುದು, ಪ್ರತಿಕ್ರಯಿಸುವುದು, ಇವನ್ನು ಮಾಡಿ, ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದನ್ನು ನೋಡಿ, ಈ ಸಾಕುತಂದೆತಾಯಿಗಳು ಸಂತೋಷ ಪಡುತ್ತಾರೆ. ರಾಘವೇಂದ್ರರ ಬಾಲ್ಯದಲಿ ಅವರನ್ನು ಪುಥಲೀ ಬಾಯಿಯವರಿಗೆ ಒಪ್ಪಿಸಲು ಸಹಾಯಮಾಡಿದ ಪುಣ್ಯಾತ್ಮರು, 'ಭಿರ್ತಿಯ ಶ್ರೀ. ರಾಮಚಂದ್ರಶಾಸ್ತ್ರಿಗಳು'. ಇವರು ಉದ್ದಾಮಪಂಡಿತರು ಮತ್ತು ಶ್ರೀ. ಅನಂತಪದ್ಮನಾಭ ನಂಬೂದರಿಯವರ ಆತ್ಮೀಯಗೆಳೆಯರಲ್ಲೊಬ್ಬರು.

ಸ್ವಾಮಿ ಶಿವಾನಂದ ರಿಂದ ತಾರಕ ಮಂತ್ರದ ಉಪದೇಶ

ಬದಲಾಯಿಸಿ

ರಾಘವರ ಜೀವನದಲ್ಲಿ ಹೊಸತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ, ಅವರ ಬಾಲ್ಯದ ಗುರುಗಳಾದ, ಶ್ರೀ. ಶಿವರಾಮಯ್ಯನವರು, 'ತಾರಕಮಂತ್ರ'ವನ್ನು ಉಪದೇಶಿಸಿದ 'ಶ್ರೀ.ನಿತ್ಯಾನಂದಸ್ವಾಮಿಗಳು', 'ಶ್ರೀ ರಂಗನಾಥಭಟ್ಟರು', 'ವರೂಢದ ಶ್ರೀ ಶಿವಾನಂದ ಸ್ವಾಮಿ ಗಳು','ಬರೋಡದ ಪ್ರೊ.ಮಾಣಿಕ್ಯರಾಯರು', 'ಪಳನಿಸ್ವಾಮಿಗಳು' ಬಹಳಮುಖ್ಯರಾದ ವ್ಯಕ್ತಿಗಳು. ತಾರಕಮಂತ್ರ (ಶಕ್ತಿಪಾತ ಯೊಗ)ವನ್ನು ಉಪದೇಶಿಸುವಾಗ, ಸ್ವಾಮಿ ನಿತ್ಯಾನಂದರು, ರಾಘವರ ಮಸ್ತಕದ ಮೇಲೆ ತಮ್ಮ ಕೈಇಟ್ಟರು. "ಭೌತಿಕ ಅಸ್ತಿತ್ವವನ್ನೇ ಮರೆಸಿ, ಅದ್ಯಾವುದೊ ಅಲೌಕಿಕ ಅನುಭವದ ಚರಮಸೀಮೆಯನ್ನು ದಾಟಿಸಿದಂತಹ ಭಾವ, ಅದು ; ನಾನೆಂಬ ಅಹಂಭಾವ ಲುಪ್ತವಾಗಿಬಿಟ್ಟಿತ್ತು. ಕೇವಲ ಆನಂದದ ಅನುಭೂತಿ. ದ್ವಂದ್ವಗಳಿಲ್ಲದ ನಿರ್ಲಿಪ್ತ- ಶೂನ್ಯ ಸ್ಥಿತಿ; ಜಗತ್ ಸೃಷ್ಟಿಯ ಪ್ರಥಮ ಅಧ್ಯಾಯದಂತೆ "- ಹೀಗಿತ್ತು ರಾಘವರ ಅನುಭವ. ಇದಾದ ಮೇಲೆ ಅವರಿಗೆ ದೇವರನ್ನು ಕಾಣುವ ಹಂಬಲ ಹೆಚ್ಚಾಯಿತು. 'ದೈವಸಾಕ್ಷಾತ್ಕಾರ'ಕ್ಕೆ ಅವರ ಮನಸ್ಸು ಹಂಬಲಿಸುತ್ತಿತ್ತು. ಅದನ್ನು ಕಂಡುಕೊಳ್ಳಲು ಅವರು ಅನೇಕ ಮಹಾತ್ಮರನ್ನೂ, ಸ್ವಾಮಿಗಳನ್ನು ಭೇಟಿಮಾಡಲು ಹೋಗಿ, ಅವರ ಅನುಗ್ರಹಕ್ಕೆ ಬಹಳವಾಗಿ ಶ್ರಮಿಸಿ ದರು. ದೇಹಧಾರಢ್ಯವನ್ನು ಉತ್ತಮಗೊಳಿಸಿಕೊಂಡು ತಮ್ಮ ಮುಂದಿನ ಆಶೋತ್ತರಗಳಾದ, ರಾಷ್ಟ್ರಸೇವೆಯ ಕನಸನ್ನು ಈಡೇರಿಸಿಕೊಳ್ಳಲು ಎಲ್ಲ ಯೋಗಿವರ್ಯರೂ ಅವರಿಗೆ ಬೋಧಿಸಿದರು. 'ದೇವರು' ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದ ಯತಿವರ್ಯರು, ಶ್ರೀ.ಸ್ವಾಮೀ ಶಿವಾನಂದರು. ರೋಗಿಗಳಲ್ಲಿ, ದೀನರಲ್ಲಿ, ಆರ್ತರಲ್ಲಿ, ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ದೇವರು- ಎಂಬುದು ಒಂದು ದೃಷ್ಟಿಕೋನ- ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು 'ಭಾವಶುದ್ಧಿ'ಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ತಮ್ಮ ಮುಂದಿನ ಜೀವನವನ್ನು ಇದೇ ದಾರಿಯಲ್ಲಿ ನಡೆಸಿಕೊಂಡು ಹೋಗಲು ಅವರು ನಿರ್ಧರಿಸಿದರು.

ಬರೋಡ ಹಾಗೂ ಲಾಹೋರಿನ ಆಶ್ರಮಗಳಲ್ಲಿ ತರಬೇತಿ

ಬದಲಾಯಿಸಿ

ರಾಘವೇಂದ್ರರ ಸಾಕುತಂದೆತಾಯಿಗಳು, ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸವನ್ನು ಕುಂದಾಪುರದಲ್ಲಿ ಕೊಡಿಸಿದರು. ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, ೧೩೦ ವರ್ಷ ಬದುಕಿದ್ದ ಶತೋತ್ತರಯುಷಿ, ಜುಮ್ಮಾದಾದ ರವರ ಶಿಷ್ಯ, ಬಾಲಬ್ರಹ್ಮಚಾರಿ, ಪ್ರೊಫೆಸರ್, ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ "ಜುಮ್ಮಾದಾದ ವ್ಯಾಯಾಮಶಾಲೆ"ಯಲ್ಲಿ ಶಬ್ದವೇಧಿಯೆಂಬ ಪ್ರಾಕಾರವನ್ನೂ ಕಲಿತರು. "ಜುಮ್ಮಾದಾದ ವ್ಯಾಯಾಮಶಾಲೆ"ಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾದ ಅವರಿಗೆ, 'B.Pc ; Bachelor of Physical Culture', ಎಂಬ ಪದವಿಯನ್ನು ಲಾಹೋರಿನ ವೈದ್ಯಶ್ರೇಷ್ಟರಾದ, 'ಆಚಾರ್ಯ, ಬಾಬಾ ಲಕ್ಷ್ಮಣದಾಸ್' ಅವರ ಘನ ಅಧ್ಯಕ್ಷತೆಯಲ್ಲಿ ಬರೋಡದಲ್ಲಿ ದಯಪಾಲಿಸಲಾಯಿತು.[೧] Archived 2014-10-28 ವೇಬ್ಯಾಕ್ ಮೆಷಿನ್ ನಲ್ಲಿ. ಇದಕ್ಕೆ ಮೊದಲು, ಲಾಹೋರಿನ ಬಾಬಾಲಕ್ಷ್ಮಣದಾಸ್ ರವರ "ಕೈವಲ್ಯಧಾಮ," ಆಶ್ರಮದಲ್ಲಿ, ಆಯುರ್ವೇದ, ಸಿದ್ಧವಿದ್ಯೆ, ಅಸ್ತಿ ಸಂಧಾನ ಕಲೆ, ಯುನಾನಿ ವೈದ್ಯಪದ್ಧತಿ,ಗಳನ್ನು ಕಲಿತರು. ಸಿದ್ಧವಿದ್ಯೆಗೆ ಸಂಬಂಧಿಸಿದ, ರಹಸ್ಯ ಪ್ರಯೋಗಗಳನ್ನು ಕಲಿಯುವಷ್ಟರಲ್ಲೇ ಅವರು ಆಶ್ರಮವನ್ನು ಬಿಡಬೇಕಾದ ಪ್ರಸಂಗ ಒದಗಿಬಂತು. ಲಾಹೋರಿಗೆ ಹೋಗುವ ಮೊದಲೇ ಅವರಿಗೆ, ೩೬೮ ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು. ಸೂರ್ಯನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆ, ಯೋಗವಿದ್ಯೆಯಲ್ಲಿ ನಿಷ್ಣಾತರಾಗಿ, ತಮ್ಮ ಗುರುಗಳಾದ ಶಿವಾನಂದರ ಆದರ, ವಿಶ್ವಾಸ ಮತ್ತು ಭರವಸೆಗೆ ಪಾತ್ರರಾದರು. ಶಿವಾನಂದರ ಆತ್ಮೀಯಶಿಷ್ಯರಾಗಿ ವಿಜೃಂಭಿಸಿದರು. ಶ್ರೀ. ಶಿವಾನಂದರು, ರಾಘವೇಂದ್ರರಾಯರ ಮುಖದಲ್ಲಿನ ದಿವ್ಯ ತೇಜಸ್ಸು, ದೀರ್ಘಕಾಲೀನ ಸಾಧನೆಯಿಂದ, ಯೋಗಾಭ್ಯಾಸದಿಂದ ಆದ ವಜ್ರಕಾಯ, ಹಾಗೂ ದೇಹಸಂಪತ್ತನ್ನು ಗಮನಿಸಿದರು. ಅವರ ಅಂಗ ಸೌಷ್ಠವ, ಶರೀರದ ಆಕೃತಿ, ಶಿಲ್ಪಿಗಳಿಗೂ, ಶಿಲ್ಪ ಚಿತ್ರಕಾರರಿಗೂ ಮಾದರಿಯಂತಿತ್ತು. ಕನ್ನಡದಲ್ಲಿ ಬರೆದ ಅವರ ಕಾವ್ಯರಚನೆ, ನಾಟಕ, ಕಾದಂಬರಿ, ಪ್ರಹಸನಗಳು ಬಹಳ ಉತ್ತಮ ಮಟ್ಟದ್ದಾಗಿದ್ದವು. ಇನ್ನು ಅವರನ್ನು ಮುಂದುವರೆಯಲು ಪ್ರೋತ್ಸಾಹಿಸಿ, ರಾಷ್ಟ್ರಸೇವೆಮಾಡುವ ಅವಕಾಶಗಳಿಗೆ ಅಣಿಮಾಡುವ ಕಾಲ ಬಂತೆಂದು ಅವರಿಗನ್ನಿಸಿತು. [೨]

ಭಟ್ಕಳದಲ್ಲಿ 'ಮಾರುತಿ ವ್ಯಾಯಾಮಶಾಲೆ'ಯ ಉದ್ಘಾಟನೆ

ಬದಲಾಯಿಸಿ

ಮೊಟ್ಟಮೊದಲನೆಯ ಕಾರ್ಯವೆಂದರೆ, ಭಟ್ಕಳದಲ್ಲಿ ಅವರಿಗೆ 'ಮಾರುತಿ ವ್ಯಾಯಾಮಶಾಲೆ'ಯ ಉದ್ಘಾಟನೆಯೊಂದಿಗೆ ಮುಂದುವರಿಯಲು ಆಶೀರ್ವಾದಮಾಡಿದರು. ಆ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯಿತು. 'ರಾಘವೇಂದ್ರರಾಯರು' ಹಳ್ಳಿ-ಹಳ್ಳಿಗಳಿಗೆ ಹೋಗಿ, ತಮ್ಮ ಯೋಗ ಶಿಬಿರಗಳನ್ನು ತೆರೆದು, ಅಲ್ಲಿನ ಜನರ ಉದ್ಧಾರಮಾಡುತ್ತಾ, ಕರ್ನಾಟಕದ ಎಲ್ಲ ಜಿಲ್ಲೆಗಳನ್ನೂ ಸುತ್ತಿ, ಕೊನೆಗೆ ಮಲ್ಲಾಡಿಹಳ್ಳಿಗೆ ಬಂದರು. ಅವರನ್ನು ಕರೆದೊಯ್ಯಲು, ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ 'ಶ್ರೀ. ಅತ್ರಿ,' ಹಾಗೂ ಊರಿನ ಪ್ರಮುಖರೆಲ್ಲ ಬಂದಿದ್ದರು. ಒಂದು ಸಪ್ತಾಹದ ನಂತರ 'ರಾಘವರು' ಅಲ್ಲಿಂದ ತೆರಳಲು ಸೂಚಿಸಿದಾಗ, ಊರಿನ ಪ್ರಜೆಗಳು 'ಅಳಲು' ಪ್ರಾರಂಭಿಸಿದರು. ಅಲ್ಲಿನ ಪ್ರದೇಶದ ಯತಿವರ್ಯರಾದ 'ಶಂಕರಲಿಂಗ ಭಗವಾನ್'ರ ಹಿತೋಕ್ತಿಯಂತೆ, ೭ ವರ್ಷವಾದರೂ ಅಲ್ಲಿದ್ದು, ಜನರ ಹಿತಾಸಕ್ತಿಗಳಿಗನುಗುಣವಾಗಿ ಸೇವೆಮಾಡಲು ಉಳಿದುಕೊಂಡರು.

ಮಲ್ಲಾಡಿಹಳ್ಳಿಯಲ್ಲಿ ಅನಾಥಸೇವಾಶ್ರಮದ ಸ್ಥಾಪನೆ

ಬದಲಾಯಿಸಿ

ಆದರೆ ಇದೇ ಒತ್ತಾಯ ಮುಂದೆಯೂ ಬಂದು, ಅವರಿಗೆ ಗೊತ್ತಿಲ್ಲದಂತೆ ಸುಮಾರು ೫೦ ವರ್ಷಗಳನ್ನು ಮಲ್ಲಾಡಿಹಳ್ಳಿಯಲ್ಲೇ ಅವರು ಕಳೆಯುವ ಪ್ರಮೇಯ ಒದಗಿಬಂತು. ಹೀಗೆ ಅವರು ತಮ್ಮ ಕನಸು ನನಸಿನಲ್ಲೂ ಒಮ್ಮೆಯು ಯೋಚಿಸದ ಗ್ರಾಮ ಮಲ್ಲಾಡಿಹಳ್ಳಿ. ನಿಶ್ಚಯವಾಗಿಯೂ, ಅದು ವಿಶ್ವನಿಯಾಮಕನ ಸಂಕಲ್ಪವೇ ಇರಬೇಕೆಂದು ರಾಘವೇಂದ್ರರು ಭಾವಿಸುತ್ತಾರೆ. ಹೀಗೆ ರಾಘವೇಂದ್ರರು ಸ್ಥಾಪಿಸಿದ 'ಅನಾಥ ಸೇವಾಶ್ರಮ' ಅನಾಥರಿಗೆ, ಬಡ ಮಕ್ಕಳಿಗೆ, ಒಂದು 'ಸೇವಾಕುಟೀರ'ವಾಗಿ ಬೆಳೆಯಿತು. ರಾಘವರ ಅಪಾರ ಶಿಷ್ಯವೃಂದದಲ್ಲಿ ಆಗತಾನೇ ಹೊಳಲ್ಕೆರೆಯಿಂದ ಆಗಮಿಸಿದ 'ಸೂರ್ಯನಾರಾಯಣ', ಎಂಬುವರು ಬಹಳಮುಖ್ಯರು. ಇವರೇ ಮುಂದೆ 'ಸೂರ್ದಾಸ್ ಜೀ' ಎಂದು ಹೆಸರಾದವರು; ಇವರು ಅನಾಥಸೇವಾಶ್ರಮದ ಸರ್ವತೋಮುಖ ಬೆಳವಣಿಗೆಗೆ ರಾಘವೇಂದ್ರರ ನೆರಳಿನಂತೆ ಇದ್ದು ,ಪ್ರಗತಿಗೆ ಕಾರಣರಾದರು. ಪ್ರತಿವರ್ಷವೂ ಅಕ್ಟೋಬರ್ ೪ನೆಯ ತಾರೀಖಿನಿಂದ ೨೪ ರವರೆಗೆ ಆಯುರ್ವೇದ, 'ಯೋಗ ಶಿಬಿರ'ಗಳಿದ್ದು ಅಲ್ಲಿ ವಿದ್ಯಾರ್ಥಿಗಳಿಗೆ 'ಅಷ್ಟಾಂಗ ಆಯುರ್ವೇದ' ವಿಭಾಗಗಳಿಂದ ಆಯ್ದ, ಕೆಳಗೆ ನಮೂದಿಸಿದ ಶಾಸ್ತ್ರ, ತಂತ್ರಗಳನ್ನು ಹೇಳಿಕೊಡುತ್ತಿದ್ದರು. []

ಅನಾಥಸೇವಾಶ್ರಮದಲ್ಲಿ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳು

ಬದಲಾಯಿಸಿ
  • ಶಲ್ಯ ತಂತ್ರ (Science of Surgery)
  • ಶಾಲಾಕ್ಯ ತಂತ್ರ (Science of E.N.&T)
  • ಕಾಯ ಚಿಕಿತ್ಸೆ (General Treatment)
  • ಭೂತ ಚಿಕಿತ್ಸೆ (Treatment of Demonical Disease)
  • ಕೌಮಾರ ಭೃತ್ಯ (Management of Childrens' Diseases)
  • ಅಗದ ತಂತ್ರ (Toxicology)
  • ರಸಾಯನ ತಂತ್ರ (Science of Rejuvination)
  • ವಾಜೀಕರಣ ತಂತ್ರ (Science of Aphrodisiac).
 
'ಮಲ್ಲಾಡಿ ಹಳ್ಳಿ ಸ್ವಾಮಿಗಳು'

ಹಾಗೆಯೇ ಯೋಗಶಾಸ್ತ್ರದ, 'ಅಷ್ಟಾಂಗ ಯೋಗ'ದ ವಿಭಾಗಗಳಾದ, ೧. ಯಮ, ೨. ನಿಯಮ, ೩. ಆಸನ, ೪. ಪ್ರಾಣಾಯಾಮ, ೫. ಪ್ರತ್ಯಾಹಾರ, ೬. ಧಾರಣ, ೭. ಧ್ಯಾನ, ೮.ಸಮಾಧಿ,ಗಳನ್ನು ತಿಳಿಸಲಾಗು ತ್ತಿತ್ತು. ಇಂತಹ ದಿನಗಳಲ್ಲಿ ಸಾಯಂಕಾಲ ಆಯೋಜಿಸುತ್ತಿದ್ದ ಕಾರ್ಯಕ್ರಮಗಳಲ್ಲಿ, ನಾಟಕ, ನೃತ್ಯ, ಭಾಷಣ, ಯಕ್ಷಗಾನ, ಹರಿಕಥೆ, ಹಾಡುಗಾರಿಕೆ, ಗಮಕ, ಇತ್ಯಾದಿಗಳಲ್ಲಿ ಭಾಗವಹಿಸಿದವರ ಸಂಖ್ಯೆ ಅಪಾರ. ರಾಜಕಾರಣಿಗಳು, ಕವಿಗಳು, ಸಂಗೀತಕಾರರು, ಕ್ರೀಡಾಪಟುಗಳು, ಮಠಾಧೀಶರು, ಉದ್ಯಮಿಗಳು, ಪತ್ರಿಕಾಕರ್ತರು, ಶೇ‍ಷ್ಟ ಚಲನಚಿತ್ರ ನಟ, ನಟಿಯರು, ಹಾಗೂ ರಾಘವೇಂದ್ರರ ಜೀವನದಲ್ಲಿ ಬಾಲ್ಯದಿಂದ ಅಪಾರ ಪ್ರೀತಿ,ವಿಶ್ವಾಸಗಳನ್ನಿತ್ತು ಅವರಿಗೆ ಸಹಕರಿಸಿದ ಎಲ್ಲರೂ ಇರುತ್ತಿದ್ದರು.

ಮೌನವ್ರತದ ಸಮಯದಲ್ಲಿ ಸಾಹಿತ್ಯ ಸೃಷ್ಟಿ

ಬದಲಾಯಿಸಿ

ಪ್ರತಿವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ಅವರು 'ಮೌನವ್ರತ' ಧಾರಣೆಮಾಡುತ್ತಿದ್ದರು. ಆ ಸಮಯದಲ್ಲಿ ಸವಿರಾರು ಪುಟಗಳ 'ಸಾಹಿತ್ಯ'ವೇ ಸೃಷ್ಟಿಯಾಗುತ್ತಿತ್ತು. ಅವರು ಬರೆದ ಪುಸ್ತಕಗಳು ಬಹಳಷ್ಟಿವೆ. ೪ ಕಾವ್ಯಗಳು, ೯ ಕಾದಂಬರಿಗಳು, ೧೨ ನಾಟಕಗಳು, ೨ ಗೀತ ನಾಟಕ, ೭ ಏಕಪಾತ್ರಾಭಿನಯ, ೧ ವಚನ ಸಾಹಿತ್ಯ, ೩ ಕಥಾಸಂಕಲನ, ೪ ಆಯುರ್ವೇದ, ೪ ಯೋಗ-ಇದರಲ್ಲಿ " ಬೃಹತ್ ಯೋಗ ದರ್ಶನ" ಯೋಗ ಸಂಪುಟವೂ ಇದೆ. ೫ ವ್ಯಾಯಾಮ, ೨ ಇತರೆ-೧. ಆತ್ಮ ನಿವೇದನೆ, ೨. ಜೋಳಿಗೆ ಪವಾಡ- ಇದು ಶ್ರೀ ರಾಘವೇಂದ್ರರ ಆತ್ಮಚರಿತ್ರೆ. ಇವೆಲ್ಲವನ್ನೂ ಅವರ ಕಾವ್ಯನಾಮ 'ತಿರುಕ'ನಡಿಯಲ್ಲಿ ಮಾಡಿಮುಗಿಸುತ್ತಿದ್ದರು.

ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ಆಸಕ್ತರಲ್ಲ

ಬದಲಾಯಿಸಿ

ಕರ್ಣಾಟಕ ಸರ್ಕಾರ, ಅವರನ್ನು ಸನ್ಮಾನಿಸಲು, 'ಪದ್ಮಭೂಷಣ','ಪದ್ಮವಿಭೂಷಣ' ಪ್ರಶಸ್ತಿಗಳ ಬಗ್ಗೆ ಬಹಳಬಾರಿ ಪ್ರಸ್ತಾಪಿಸಿದಾಗ ಅವರ ಉತ್ತರ. "ಅವೆಲ್ಲಾ ನನಗೆ ಬೇಡ; ಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆಇದೆ. ಅದನ್ನು ಕೊಡಿ ". ಕುವೆಂಪು ವಿಶ್ವವಿದ್ಯಾನಿಲಯ ಅವರಿಗೆ 'ಗೌರವ ಡಾಕ್ಟರೇಟ್' ಬಗ್ಗೆ ತಿಳಿಸಿದಾಗಲೂ, ಅವರ ನಿಲವು ಬದಲಾಗಲಿಲ್ಲ. ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು. ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ. ಸ್ವಲ್ಪ ಹಣ, 'ತಿರುಕ' ಎಂಬ ಕಾವ್ಯನಾಮದಲ್ಲಿ, ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ, ಅಲ್ಪಸ್ವಲ್ಪ ಹಣ, ಅವರ 'ಸರ್ವೊದಯ ಮುದ್ರಣಾಲಯ'ದಿಂದ ಬರುತ್ತಿತ್ತು. ತಮ್ಮ 'ಜೋಳಿಗೆ' ತಗುಲಿಹಾಕಿಕೊಂಡು 'ಭಿಕ್ಷ'ಕ್ಕೆ ಅವರು ಹೋಗುತ್ತಿದ್ದರು. ಸೂರ್ದಾಸ್, ಸದಾ ಅವರ ಜೊತೆಗೆ ಇರುತ್ತಿದ್ದರು.

ಚಿತ್ರ:Svamiji.jpg
'ಮಲ್ಲಾಡಿಹಳ್ಳಿ ಸ್ವಾಮಿಗಳು ತಪೋವನದ ಬಳಿ'
ಚಿತ್ರ:Raghavendrasvamiji.jpg
'ಮಲ್ಲಾಡಿಹಳ್ಳಿ ಸ್ವಾಮಿಗಳು'

ರಾಘವೇಂದ್ರ ಸ್ವಾಮಿಗಳ ಶತಮಾನದ ವರ್ಷದ, ವರ್ಧಂತ್ಯುತ್ಸವ

ಬದಲಾಯಿಸಿ

೧೯೯೧ ರಲ್ಲಿ ರಾಘವೇಂದ್ರರ ೧೦೦ ನೆ ಹುಟ್ಟಿದ ಹಬ್ಬವನ್ನು ಊರಿನ ಜನ, ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು. ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ, 'ಆತ್ಮ ನಿವೇದನೆ' ಹೊರಗೆ ಬಂತು. ಆದರೆ, ಇದರಲ್ಲಿ ಸಾಕಷ್ಟು ವಿಷಯಗಳನ್ನು ಅವರಿಗೆ ತಿಳಿಸಲಾಗಿರಲಿಲ್ಲ. ಅಭಿಮಾನಿಗಳ, ಶಿಷ್ಯರ, ನಿವೇದನೆಯ ಮೇರೆಗೆ ಅವರು ತಮ್ಮ ಆತ್ಮ ಚರಿತ್ರೆ, 'ಜೋಳಿಗೆ ಪವಾಡ (ಪುಸ್ತಕ)' [] ಬರೆದರು. ಆಗಲೇ ಒಮ್ಮೆ ಹೃದಯಾಘಾತದಿಂದ ನರಳಿದ್ದ ಅವರು, ತಮ್ಮ ೧೦೦ ವರ್ಷಗಳ ನೆನಪುಗಳನ್ನು ಕೆದಕಿ ಬರೆದ ಆತ್ಮಚರಿತ್ರೆ; ಅವರ ಜೀವನದ ಅತಿ ಸಣ್ಣ ಸಣ್ಣ ವಿಷಯಗಳನ್ನೂ ಮನಸ್ಸಿಗೆ ನಾಟುವಂತೆ ದಾಖಲಿಸಿದ್ದಾರೆ. ಭಾಷಾ ಶೈಲಿ, ವಿಷಯ ನಿರೂಪಣೆ, ಅದ್ಭುತವಾಗಿ ಮೂಡಿ ಬಂದಿದೆ. ಪುನಃ ೧೯೯೬ ರಲ್ಲಿ ಅವರಿಗೆ ಮತ್ತೆ 'ಹೃದಯಾಘಾತ'ವಾದ ಸಮಯದಲ್ಲಿ ಅವರನ್ನು ಬೆಂಗಳೂರಿನ 'ಮಲ್ಯ' ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಯಿತು.

ರಾಘವೇಂದ್ರ ಸ್ವಾಮಿಗಳ,ನಿಧನ

ಬದಲಾಯಿಸಿ

ತಿಂಗಳ ಮೇಲೆ 'ಕೋಮಾ' ದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ. ಹೀಗೆ ಒಬ್ಬ ಮಹಾಯೋಗಾಚಾರ್ಯರು ಶನಿವಾರ, ಬೆಳಿಗ್ಯೆ,೧೦-೩೦, ಆಗಸ್ಟ್ ೩೧, ೧೯೯೬ ರಂದು (ಶುದ್ಧ ಆಷಾಢ) ದೈವೈಕ್ಯರಾದರು. ಅವರ ಅಂತಿಮ ಸಂಸ್ಕಾರವನ್ನು ಮಲ್ಲಾಡಿಹಳ್ಳಿಯಲ್ಲಿ ಮುಗಿಸಿ, ಒಂದು ಭವ್ಯ 'ಸಮಾಧಿ'ಯನ್ನು ಆಶ್ರಮದ ಆಂಗಣದಲ್ಲೆ ನಿರ್ಮಿಸಿದ್ದಾರೆ. ರಾಘವೇಂದ್ರಸ್ವಾಮಿಗಳು ಆಗಾಗ ಹೇಳುತ್ತಿದ್ದ ಅವರ ವಾಕ್ಯಗಳಲ್ಲಿ ಒಂದಾದ, "ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ ," ಎಂಬ ವಾಕ್ಯ ಅವರ ಸಮಾಧಿಯ ಮುಂದೆ ಹಾಕಿರುವ ಫಲಕದಲ್ಲಿ ಎದ್ದು ಕಾಣಿಸುತ್ತಿದೆ. ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿ, ಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದು ,ತಮ್ಮ ಜೀವನವನ್ನು 'ಸಾರ್ಥಕ'ಗೊಳಿಸಿದ ಮಹಾಚೇತನ, ಅನಂತದಲ್ಲಿ ಲೀನವಾಯಿತು. ಎರಡು ವರ್ಷಗಳ ನಂತರ ’ಸೂರ್ದಾಸ್ ಜೀ” ರವರೂ, ರಾಘವೇಂದ್ರ ಸ್ವಾಮಿಗಳ ನೆನಪಿನಲ್ಲೇ, ತಮ್ಮ ಜೀವನದ ಅಂತ್ಯವನ್ನು ಕಂಡುಕೊಂಡರು. ಅವರು ಮರಣಹೊಂದಿದ್ದೂ ಶನಿವಾರ, ಬೆಳಿಗ್ಯೆ, ೧೦-೩೦, ಆಗಸ್ಸ್ಟ್ ೩೧ ರಂದು, ೧೯೯೮ ರಂದು. ಅವರು ತಮ್ಮ ಗುರುಗಳ ಶ್ರೇಷ್ಟ ಆಜ್ಞಾರಾಧಕರಾಗಿದ್ದರು. ಅವರ ಅಂತ್ಯ ಸಂಸ್ಕಾರದ ನಂತರ, ಮಲ್ಲಾಡಿಹಳ್ಳಿಯ ಜನತೆ, ಅವರ ಗೌರವಾರ್ಥವಾಗಿ ಅವರ ಗುರುಗಳಾದ, ಶ್ರೀ ರಾಘವೇಂದ್ರ ಸ್ವಾಮಿಗಳ ಬದಿಯಲ್ಲೇ ಸಮಾಧಿಮಾಡಿದರು. ಇಂದಿಗೂ ವಿಶ್ವದ ಎಲ್ಲಾ ಕಡೆಗಳಿಂದಲೂ ನೂರಾರು, ಸಹಸ್ರಾರು ಜನ, ಶಿಷ್ಯರು, ಅನುಯಾಯಿಗಳು, ಅವರನ್ನು ಕಂಡ ಜನತೆ, ತಮ್ಮ "ಶ್ರದ್ಧಾಂಜಲಿ" ಯನ್ನು ಸಮರ್ಪಿಸಲು ಮಲ್ಲಾಡಿಹಳ್ಳಿಗೆ ಬರುತ್ತಾರೆ.

ರಾಘವೇಂದ್ರ ಸ್ವಾಮಿಗಳು, ಕಟ್ಟಿಬೆಳೆಸಿದ ಸಂಸ್ಥೆಗಳು

ಬದಲಾಯಿಸಿ

ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳು, ಮಕ್ಕಳ ವಸತಿ ಗೃಹಗಳು, ಬನಶಂಕರಿ ಅಮ್ಮನವರ ದೇವಸ್ಥಾನ, ಕಾಲೇಜುಗಳು, 'Centenary College of Physical Education' (ಆಯುರ್ವೇದ ಕಾಲೇಜು), B.Ed; College, (ಶಿಕ್ಷಕರ ತರಬೇತಿ ಕಾಲೇಜ್) ಹಿಂದೆ ಅವು ಬೆಳೆದು, ನಡೆದುಬಂದ ಭವ್ಯ ಪರಂಪರೆಯ, 'ಮೂಕ ಸಾಕ್ಷಿ' ಗಳಾಗಿ ಮುಗಿಲೆತ್ತರ ಬೆಳೆದು ನಿಂತಿವೆ.

ಅನುಪಮವಾದ ಸಾಹಿತ್ಯರಚನೆ

ಬದಲಾಯಿಸಿ
  • ಕಾವ್ಯ:

೧. ಪೂಜೆ(ಕವನ ಸಂಕಲನ) ೨. ಹಣ್ಣುಕಾಯಿ (ಕವನಸಂಕಲನ) ೩. ಭಕ್ತಿಗೀತೆಗಳು ೪. ಹನುಮತ್ಖಡ್ಗ.

  • ಕಾದಂಬರಿಗಳು:

೧. ಕೊನೆಯಗುಟುಕು ೨. ಮೂಳೆಯ ಹಂದರ ೩. ಚಿತೆಯೋ ಸಮಾಧಿಯೋ ೪. ಉದಯಾಸ್ತ ೫.ಸೂತ್ರದ ಬೊಂಬೆ ೬. ರಸಋಷಿ ೭. ಗುಡ್ಡದ ಸಿಂಗಾರಿ ೮. ತ್ಯಾಗಜೀವಿ ೯. ಎಲ್ಲ ಹಸಿವೆಯ ಆಟ.

  • ನಾಟಕಗಳು:

೧. ರಣಚಂಡಿ ೨. ಮಹಾಕವಿ ಭಾರತಿ ೩. ನ್ಯಾಯಮಂತ್ರಿ ೪. ಉಷಾ ಸ್ವಯಂವರ ೫. ದಾರಿಯ ದೇವರು ೬. ವನಮಹೋತ್ಸವ ೭. ತಿರುನಾಮ ೮. ದೆವ್ವದ ಮನೆ ೯. ಸುಖೀರಾಜ್ಯ ೧೦. ಕರ್ಮಯೋಗಿ ೧೧. ಉದ್ಧಾರ ೧೨. ಮೂರು ನಾಟಕಗಳು.

  • ಗೀತ ನಾಟಕಗಳು :

೧. ಭಕ್ತ ಶಬರಿ ೨. ಮಹಾಶಿಲ್ಪಿ.

  • ಏಕಪಾತ್ರಾಭಿನಯಗಳು :

೧. ಧ್ಯಾನಭಾರತಿ ೨. ಜ್ವಾಲಾಮುಖಿ ೩. ಮೂರು ಏಕಪಾತ್ರಾಭಿನಯಗಳು ೪. ಪ್ರೇಮಪಷಾಣಿ ಮತ್ತು ಮಮತೆಯ ಮಗಳು ೫. ಧನಪಿಷಾಚಿ ಮತ್ತು ಇತರ ಏಕಪಾತ್ರಾಭಿನಯಗಳು ೬. ಪಂಚಾಯ್ತಿ ರಾಜ್ಯ ಮತ್ತು ಇತರ ಏಕಪಾತ್ರಾಭಿನಯಗಳು ೭. ನನ್ನ ರಾಮರಾಜ್ಯ.

  • ವಚನ ಸಾಹಿತ್ಯ :

೧. ಅಂತರ್ವಾಣಿ

  • ಕೀರ್ತನ ಸಾಹಿತ್ಯ:

೧. ಕಿರಾತಾರ್ಜುನೀಯ ೨. ಗಿರಿಜಾಕಲ್ಯಾಣ ೩. ತಿರುನೀಲಕಂಠರು ೪. ಹೆಳವನ ಕಟ್ಟೆ ಸಂತ ಗಿರಿಯಮ್ಮ.

  • ಕಥಾಸಂಕಲನ :

೧. ದೇವರ ಉಪವಾಸ ೨. ಕಥೆಯೋ ವ್ಯಥೆಯೋ ೩. ಕಿರುನಾಟಕ ಕಥೆಗಳು.

  • ಆಯುರ್ವೇದ :

೧. 'ಸ್ವಯಂವೈದ್ಯ' ೨. ಚೌಪದಿ ಆಯುರ್ವೇದ ಚಿಕಿತ್ಸಾ ಸಂಗ್ರಹ ೩. ವನೌಷಧಿಗಳ ಗುಣಧರ್ಮ ಹಾಗೂ ವಿವಿಧ ಭಾಷಾಕೋಶ ೪.ಗೃಹ ವೈದ್ಯ ಕೈಪಿಡಿ.

  • ವ್ಯಾಯಾಮ :

೧. ಸೂರ್ಯ ನಮಸ್ಕಾರ ೨. ಸೂರ್ಯ ನಮಸ್ಕಾರ (ಚಿತ್ರಪಟ) ೩. 'ಅಂಗಮರ್ದನ' ೪. ಸರ್ವಾಂಗ ಸುಂದರ ವ್ಯಾಯಾಮ ೫. ಗುರು ನಮಸ್ಕಾರ

  • ಯೋಗ :

೧. ಪ್ರಾಣಾಯಾಮ ೨. ದೇಹ ಸ್ವಾಸ್ಥ್ಯಕ್ಕಾಗಿ ಯೋಗಾಸನಗಳು ೩. ಕಥಾ ರೂಪಕ ಯೋಗಾಸನ ೪. ಷಟ್ಕರ್ಮವಿಧಿ.

  • ಇತರೆ :

೧. ಆತ್ಮ ನಿವೇದನೆ ೨. ಜೋಳಿಗೆ ಪವಾಡ

ಶ್ರೀ. ಶ್ರೀ. ಮರುಘರಾಜೇಂದ್ರ ಯತಿಗಳ ಮೇಲ್ವಿಚಾರಣೆಯಲ್ಲಿ

ಬದಲಾಯಿಸಿ

ಈಗ, ಚಿತ್ರದುರ್ಗದ ಶ್ರೀ. ಶ್ರೀ. ಮರುಘರಾಜೇಂದ್ರಸ್ವಾಮಿಗಳು, 'ಮಲ್ಲಾಡಿಹಳ್ಳಿಯ ಅನಾಥಾಶ್ರಮ' [] ಮತ್ತು ಎಲ್ಲಾ ಸಂಘಟಕಗಳ ಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಕಾಲೇಜುಗಳು, ಹಾಗೂ ಋಗ್ಣಾಲಯ, ಮಕ್ಕಳ, ಶಾಲಾ ಶಿಕ್ಷಕರ ವಸತಿಗೃಹಗಳು, ಚೆನ್ನಾಗಿ ನಡೆಯುತ್ತಿವೆ.

ರಾಘವೇಂದ್ರ ಸ್ವಾಮಿಗಳಿಗೆ ಸ್ಮಾರಕ

ಬದಲಾಯಿಸಿ

ಮಲ್ಲಾಡಿಹಳ್ಳಿಯಂತಹ ಕುಗ್ರಾಮಕ್ಕೆ ಆಗಮಿಸಿ, ಅಲ್ಲಿನ ಸ್ಥಳೀಯ ಬಡಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಹಲವಾರು ಶಿಕ್ಷಣಸಂಸ್ಥೆಗಳನ್ನು ಹುಟ್ಟಿಹಾಕಿ, ಯೋಗಶಿಕ್ಷಣ, ಮತ್ತು ಆಯುರ್ವೇದ ಔಷಧಿಗಳ ಮಹತ್ವಗಳನ್ನು ಜನರಿಗೆ ಪರಿಚಯಿಸಿ, ಜನಪ್ರಿಯಮಾಡಿದ ಯತಿವರ್ಯರಿಗೆ ಒಂದು ಸ್ಮಾರಕವನ್ನು ಸ್ಥಾಪಿಸಲಾಗಿದೆ. ಅವರ ಪಕ್ಕದಲ್ಲೇ ರಾಘವೇಂದ್ರರಾಯರ ಹೆಗಲಿಗೆ ಹೆಗಲು ಸೇರಿಸಿ ತಮ್ಮ ಯೋಗದಾನಮಾಡಿದ ಶ್ರೀ ಸೂರ್ದಾಸ್ ಜೀ ರವರ ಸೇವೆಗಳನ್ನು ಸ್ಮರಿಸಿ, ಅವರಿಗೂ ಸ್ಮಾರಕವನ್ನೂ ನಿರ್ಮಿಸಲಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. Malladihalli Raghavendra Swamiji : (1895-1996) ಒಬ್ಬ ಮಹಾಸಾಧಕ, ಮತ್ತು ತಪಸ್ವಿ
  2. Malladihalli'
  3. 'Fond Memories of Malladihalli Swamiji’-Stephen P. D’Souza, Melbourne, ಆಗಸ್ಟ್, ೨೦೦೯
  4. ""ಜೋಳಿಗೆಯ ಪವಾಡ (ಪುಸ್ತಕ)"- ಶ್ರೀ. ಶ್ರೀ.ರಾಘವೇಂದ್ರ ಸ್ವಾಮಿಯವರ ಆತ್ಮ ನಿವೇದನೆ.-ತಿರುಕ (೧೮೯೧-೧೯೯೩)". Archived from the original on 2021-07-19. Retrieved 2021-07-19.
  5. 'ಅನಾಥ ಸೇವಾಶ್ರಮ ಟ್ರಸ್ಟ್'(ರಿ) ಮಲ್ಲಾಡಿಹಳ್ಳಿ'
  6. ಶ್ರೀ ರಾಘವೇಂದ್ರಸ್ವಾಮೀಜಿ ಮತ್ತು ಶ್ರೀ ಸೂರ್ದಾಸ್ ಜೀರವರ ಸ್ಮಾರಕ, dinapratidina.wordpress.com/ ಮಾರ್ಚ್,೨೭,೨೦೧೬

ಬಾಹ್ಯ ಸಂಪರ್ಕಗಳು

ಬದಲಾಯಿಸಿ