ಏಕಪಾತ್ರಾಭಿನಯ
ಏಕಪಾತ್ರಾಭಿನಯ ಒಬ್ಬನೇ ನಟ ರಂಗಭೂಮಿಯ ಮೇಲೆ ಬಂದು ಇಡೀ ಕಥೆಯನ್ನು ನಿರ್ವಹಿಸುವುದು. ಕಥೆಯಲ್ಲಿ ಒಂದೇ ಪಾತ್ರವಿರಬಹುದು ಇಲ್ಲವೇ ಅನೇಕ ಪಾತ್ರಗಳಿರಬಹುದು. ಸಾಮಾನ್ಯವಾಗಿ ನಾಟಕದಲ್ಲಿ ಒಬ್ಬನಿಗಿಂತ ಹೆಚ್ಚು ಜನ ನಟರು ಇರುತ್ತಾರಾದರೂ ಒಬ್ಬನೇ ನಟನಿಂದ ನಿರ್ವಹಿಸಲ್ಪಡುವ ಕೆಲವು ನಾಟಕಗಳು ಹಿಂದಿನಿಂದಲೂ ಇದ್ದಂತೆ ಕಾಣುತ್ತದೆ. ಭಾರತೀಯ ಪರಂಪರೆಯಲ್ಲಿ ಏಕಪಾತ್ರಾಭಿನಯ ನಾಟ್ಯಕಲೆಯ ಒಂದು ಅಧಿಕೃತ ಪ್ರಕಾರವಾಗಿತ್ತು. ಸ್ಥೂಲವಾಗಿ ಹೇಳುವುದಾದರೆ ಭರತನಾಟ್ಯ, ಕೂಚಿಪುಡಿ ಮೊದಲಾದ ನೃತ್ಯಗಳು ಇಂಥ ಏಕಪಾತ್ರಾಭಿನಯದ ಪ್ರಕಾರಕ್ಕೆ ಸೇರಿದ್ದಾಗಿವೆ. ರಾಮಾಯಣ ಇಲ್ಲವೆ ಭಾಗವತದ ಕಥೆಗಳನ್ನು ಒಬ್ಬನೇ ಕಲಾವಿದ-ಕಥೆಯ ಪಾಠವನ್ನು ಒಮ್ಮೊಮ್ಮೆ ಹಿನ್ನೆಲೆಯಲ್ಲಿ ಇರಿಸಿಕೊಳ್ಳದೆಯೂ-ಪ್ರದರ್ಶಿಸುತ್ತಾನೆ. ಏಕಪಾತ್ರಾಭಿನಯ ಬರೀ ನೃತ್ಯಕ್ಕೆ ಸೀಮಿತವಾಗಿಲ್ಲ. ಭಾರತೀಯ ನಾಟಕದಲ್ಲೂ ಇದು ಪ್ರಾಚೀನಕಾಲದಿಂದಲೂ ಕಂಡುಬರುತ್ತಿದೆ.
ಪ್ರಾಜೀನತೆ
ಬದಲಾಯಿಸಿಭಾರತೀಯಪರಂಪರೆಯ ನಾಟಕಕಲೆಯನ್ನು ಪ್ರತಿಷ್ಠಿತಗೊಳಿಸಿದ ಭರತಮುನಿಯ ನಾಟ್ಯಶಾಸ್ತ್ರ ದಶರೂಪಕಗಳನ್ನು (ಹತ್ತು ಬಗೆಯ ನಾಟಕ) ಹೆಸರಿಸಿದೆ. ಅವುಗಳಲ್ಲಿ ಭಾಣ ಎಂಬುದು, ಕೆಲವೊಮ್ಮೆ ವೀಥೀ ಎಂಬುದು ಒಂದೇ ಅಂಕದ ರೂಪಕಗಳು. ಇದರಲ್ಲಿ ಭಾಣ ಎಂಬುದು ಏಕಹಾರ್ಯ ಎಂದರೆ ಒಂದೇ ಪಾತ್ರವುಳ್ಳದ್ದು. ಆದರೆ ವೀಥೀ ಎಂಬುದು ಏಕಹಾರ್ಯಾ ದ್ವಿಹಾರ್ಯಾ ವಾ ಎಂದರೆ ಒಂದು, ಅಥವಾ ಕೆಲವೊಮ್ಮೆ ಎರಡು ಪಾತ್ರಗಳನ್ನುಳ್ಳದ್ದು. ಭಾಣದಲ್ಲಿ ಇನ್ನೊಬ್ಬರ ಮಾತುಗಳನ್ನು, ಆಕಾಶಪುರುಷರ (ಎಂದರೆ ರಂಗಸ್ಥಳದಲ್ಲಿ ಕಾಣದವರ) ಮಾತುಗಳನ್ನು ಅಂಗವಿಕಾರಗಳಿಂದ, ಅಭಿನಯದಿಂದ ಈ ಏಕಪಾತ್ರವೆ ಸೂಚಿಸುತ್ತದೆ. ಭಾಣ ಮತ್ತು ವೀಥೀಗಳೆರಡರಲ್ಲೂ ಶೃಂಗಾರರಸವೇ ಪ್ರಧಾನ ಎಂಬುದು ಗಮನಾರ್ಹವಾಗಿದೆ. ನಾಟ್ಯಶಾಸ್ತ್ರದಲ್ಲಿಯ ಈ ಏಕಪಾತ್ರಾಭಿನಯದ ರೂಪಕಗಳು ಭಾರತೀಯ ರಂಗಭೂಮಿಯಲ್ಲಿ ಪ್ರಚುರಗೊಂಡು ಉಳಿದವೊ ಇಲ್ಲವೊ ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ. ಆದರೆ ಭಾರತದಲ್ಲಿ ನಡೆದುಬಂದ ಹರಿಕಥೆ ಅಥವಾ ಕೀರ್ತನ ಕಲೆಯನ್ನು ನೋಡಿದರೆ ಈ ಏಕಪಾತ್ರಾಭಿನಯಪ್ರಕಾರದ ಜನಪ್ರಿಯತೆ ಸ್ಪಷ್ಟವಾಗಿ ಕಂಡುಬರುವುದು. ಇಲ್ಲಿ ಕೀರ್ತನಕಾರ ತನ್ನ ಕಥೆಯಲ್ಲಿ ಸಂದರ್ಭೋಚಿತವಾಗಿ ಬರುವ ಎಲ್ಲ ಪಾತ್ರಗಳನ್ನೂ ತನ್ನೊಬ್ಬನ ಅಂಗವಿಕಾರಗಳಿಂದ, ಅಭಿನಯದಿಂದ, ಮಾತಿನಿಂದ ನಟಿಸಿ ಚಿತ್ರಿಸುತ್ತಾನೆ.[೧]
ಆಧುನಿಕ ರಂಗಭೂಮಿ
ಬದಲಾಯಿಸಿಆಧುನಿಕ ಭಾರತೀಯ ರಂಗಭೂಮಿಯ ಮೇಲೆ ಏಕಪಾತ್ರಾಭಿನಯ ಪ್ರಕಾರಗಳು ಕಂಡುಬರುವುದಿಲ್ಲ. ಆದರೂ ಭಾರತದ ಕೆಲವು ರಾಜ್ಯಗಳಲ್ಲಿ ಪಾಶ್ಚಾತ್ಯ ರಂಗಭೂಮಿಯ ಪ್ರಭಾವದಿಂದ ಇಂಥ ಪ್ರಯೋಗಗಳು ನಡೆದಿವೆ. ಪಾಶ್ಚಾತ್ಯರಲ್ಲಿ ವಿವಿಧ ವಿನೋದ ರಂಗಭೂಮಿ ಎಂಬಲ್ಲಿ (ವೆರೈಟಿ ಥಿಯೇಟರ್) ಈ ಏಕಪಾತ್ರಾಭಿನಯ ಕಂಡುಬರುವುದು. ಆದರೆ ಇಲ್ಲಿ ಅದು ನಾಟಕಕ್ಕಿಂತ ವಿನೋದಕ್ಕೆ ಪ್ರಾಧಾನ್ಯ ಕೊಡುತ್ತದೆ. ದೃಷ್ಟಾಂತಕ್ಕೆ ಒಬ್ಬನೇ ಒಬ್ಬ ನಟ ಬೇರೆ ಬೇರೆ ಸನ್ನಿವೇಶಗಳನ್ನು ಚಿತ್ರಿಸಿ ಅಲ್ಲಿ ಸಾಂದರ್ಭಿಕವಾದ ಪಾತ್ರಗಳನ್ನು ತಾನೇ ನಿರ್ವಹಿಸುತ್ತಾನೆ. ಸಾಮಾನ್ಯವಾಗಿ ಸಾಮಾಜಿಕ ಇಲ್ಲವೇ ರಾಜಕೀಯ ಸಮಸ್ಯೆಗಳ ವ್ಯಂಗ್ಯ ಟೀಕೆ ಇದರಲ್ಲಿರುತ್ತದೆ.
ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ರಂಗಭೂಮಿಯ ಮೇಲೆ ಏಕಪಾತ್ರಾಭಿನಯದ ಮೂರೋ ನಾಲ್ಕೋ ಪ್ರಯೋಗಗಳು ನಡೆದಿವೆ. ಇವುಗಳಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು, ಅನೇಕ ನಟರು ಕೂಡಿ ಆಡುವ ಇಡಿಯ ನಾಟಕವನ್ನು ಒಬ್ಬನೇ ನಟ (ಇಲ್ಲವೆ ನಟಿ) ಆಡುವುದು. ಇನ್ನೊಂದು ಪಾಶ್ಚಾತ್ಯರಲ್ಲಿನಂತೆ ಹಾಸ್ಯ ಟೀಕಾತ್ಮಕ ಸನ್ನಿವೇಶಗಳನ್ನು ರಚಿಸಿ ಒಬ್ಬನೇ ನಟ ನಟಿಸಿ ತೋರಿಸುವುದು. ಒಟ್ಟಾರೆ ಹೇಳುವುದಾದರೆ ನಾಟಕದ ರಚನೆಯಲ್ಲಾಗಲಿ ನಟನ ವಿವಿಧ ನೈಪುಣ್ಯದಲ್ಲಾಗಲಿ ಮೇಲ್ಮಟ್ಟವನ್ನು ಅಪೇಕ್ಷಿಸುವ ಈ ಏಕಪಾತ್ರಾಭಿನಯ ಭಾರತದ ಇಂದಿನ ರಂಗಭೂಮಿಯಲ್ಲಿ ಮೂಡಿಬಂದಿಲ್ಲ. ಆದರೂ ನಾಟ್ಯಶಾಸ್ತ್ರ, ಹರಿಕಥೆ ಮತ್ತು ಅಷ್ಟಾವಧಾನದಂಥ ಪ್ರಕಾರಗಳನ್ನು ನೋಡಿದರೆ ಇದು ಮುಂಚಿನಿಂದಲೂ ಮನ್ನಣೆ ಪಡೆದ ಒಂದು ರೂಪಕ ಎಂದು ಹೇಳಬಹುದು.