ರಸ(ಕಾವ್ಯಮೀಮಾಂಸೆ)
ರಸವು ಕಾವ್ಯದಿಂದ ಪಡೆಯುವ ಆನಂದಾನುಭವವಾಗಿದ್ದು , ರಸಸಿದ್ಧಾಂತವು ಜಾಗತಿಕ ಕಾವ್ಯ ಮೀಮಾಂಸೆಗೆ, ಭಾರತೀಯ ಕಾವ್ಯ ಮೀಮಾಂಸೆ ನೀಡಿದ ವಿಶಿಷ್ಟವೂ ಮಹತ್ತ್ವಪೂರ್ಣವೂ ಆದ ಕೊಡುಗೆಯಾಗಿದೆ.
ರಸ ಎಂದರೇನು?
ಬದಲಾಯಿಸಿಯಾವುದು ಆಸ್ವಾದ್ಯವೋ ಅದು ರಸ. ರಸ ಎಂಬುದಕ್ಕೆ ರುಚಿ ಮತ್ತು ಸಾರ ಎಂಬ ಎರಡು ಮುಖ್ಯ ಅರ್ಥಗಳಿವೆ.[೧][೨] ಸ್ಪೃಹೆ, ಇಚ್ಛೆ, ಅಭಿಲಾಷೆ, ಪಾದರಸ ಮುಂತಾದ ಅರ್ಥಗಳೂ ಬ್ರಹ್ಮ, ಬ್ರಹ್ಮಾನಂದ, ಸಾರರೂಪವಾದ ತತ್ತ್ವ ಎಂಬ ಅರ್ಥಗಳೂ ಉಂಟು.
ಭರತ ತನ್ನ ನಾಟ್ಯಶಾಸ್ತ್ರ ಎಂಬ ಕೃತಿಯಲ್ಲಿ ರಸ ಎಂಬ ಮಾತನ್ನು ನಾಟ್ಯ ಕಾವ್ಯಕ್ಕೆ ಅನ್ವಯಿಸಿ ಮೊದಲು ಬಳಸಿದ.[೩] ಇವನು ರಸ ಸಂಪ್ರದಾಯದ ಮೂಲಪ್ರವರ್ತಕ. ಭರತನಲ್ಲಿ ರಸಪರಿಕಲ್ಪನೆ ವಿಶೇಷವಾಗಿ ನಾಟ್ಯಕಲೆಗೆ ಅನ್ವಯಿಸಿ ಬರುತ್ತದೆ. ಮುಂದೆ `ರಸ' ಎನ್ನುವುದು ಕಾವ್ಯದಿಂದ ಪಡೆಯುವ ಆನಂದಾನುಭವ ಎಂಬ ಅರ್ಥವನ್ನೂ ಒಳಗೊಂಡಿತು.
ಭಾವಗಳು ಮತ್ತು ರಸಗಳು
ಬದಲಾಯಿಸಿಮನಸ್ಸು ಒಂದು ಸರೋವರವಿದ್ದ ಹಾಗೆ. ಸರೋವರದಲ್ಲಿ ಹೊರಗಿನಿಂದ ಒಂದು ಕಲ್ಲು ಬಿದ್ದರೆ ತರಂಗಗಳೆದ್ದು ಹರಡುತ್ತಾ, ಹೋಗುತ್ತವೆ. ಹಾಗೆಯೆ ಮನಸ್ಸು ಕೂಡ ಹೊರಗಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆ ತೋರಿಸುತ್ತಾ, ತರಂಗಗಳೇಳುತ್ತಲೇ ಇರುತ್ತವೆ. ಇವುಗಳೇ ಭಾವಗಳು.[೪] ಇವುಗಳಲ್ಲಿ ಎರಡು ಬಗೆ.
- ಸ್ಥಾಯಿ ಭಾವಗಳು
- ಸಂಚಾರಿ (ವ್ಯಭಿಚಾರಿ) ಭಾವಗಳು.
ಸ್ಥಾಯಿಯಾಗಿ, ಮನಸ್ಸಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸದಾ ಇರುವಂಥವೇ ಸ್ಥಾಯಿಭಾವಗಳು. ಅವುಗಳೊಂದಿಗೆ ಬಂದು ಹೋಗುವಂಥವೇ ಸಂಚಾರಿ ಭಾವಗಳು. ಲೋಕದ ಈ ಭಾವಗಳು ಕಲೆಯಲ್ಲಿ ತಮ್ಮ ಲೌಕಿಕತೆಯನ್ನು ಕಳೆದುಕೊಂಡು ಆಸ್ವಾದ್ಯವಾಗುತ್ತವೆ. ಲೋಕಾನುಭವದಿಂದ ಭಿನ್ನವಾದ ವಿಶಿಷ್ಟ ಅನುಭವಗಳಾಗುತ್ತವೆ. ಆನಂದ ಕೊಡುವ ಈ ಅನುಭವವೇ `ರಸ'. ಸ್ಥಾಯಿಭಾವ ಲೋಕಭಾವವನ್ನು ಕಳೆದುಕೊಂಡು ಆಸ್ವಾದ್ಯವಾಗುತ್ತದೆ; ಇದೇ ರಸ.
ಎಂಟು ರಸಗಳು
ಬದಲಾಯಿಸಿ'ಆಸ್ವಾದಯಂತಿ ಮನಸಾ ತಸ್ಮಾನ್ನಾಟ್ಯ ರಸಾಃ' ಎಂದು ಭರತ ತನ್ನ ನಾಟ್ಯಶಾಸ್ತ್ರ ಗ್ರಂಥದಲ್ಲಿ ಹೇಳಿದ್ದಾನೆ. ಹೀಗೆ ಆಸ್ವಾದ್ಯವಾಗಿ ರಸವಾಗುವಂತಹ ಸ್ಥಾಯಿಭಾವಗಳು ಭರತನ ಪ್ರಕಾರ ಎಂಟು: ರತಿ, ಹಾಸ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸೆ ಮತ್ತು ವಿಸ್ಮಯ. ರತಿಭಾವದಿಂದ ಶೃಂಗಾರ, ಹಾಸದಿಂದ ಹಾಸ್ಯ, ಶೋಕದಿಂದ ಕರುಣ, ಕ್ರೋಧದಿಂದ ರೌದ್ರ, ಉತ್ಸಾಹದಿಂದ ವೀರ, ಭಯದಿಂದ ಭಯಾನಕ, ಜಿಗುಪ್ಸೆಯಿಂದ ಭೀಭತ್ಸ, ವಿಸ್ಮಯದಿಂದ ಅದ್ಭುತ - ಈ ರಸಗಳು ಪ್ರತೀತವಾಗುತ್ತವೆ.
ಶೃಂಗಾರ ಹಾಸ್ಯ ಕರುಣಾ ರೌದ್ರವೀರ ಭಯಾನಕಾಃ
ಬೀಭತ್ಸಾದ್ಭುತ ಸಂಜ್ಞಾ ಚೇತ್ಯಷ್ಟೌ ನಾಟ್ಯೇರಸಾಃ ಸ್ಮೃತಾಃ
(ನಾಟ್ಯಶಾಸ್ತ್ರ)
ಇವುಗಳಲ್ಲಿ ಒಂದೊಂದರ ಬಣ್ಣ, ಆಧಿದೈವ, ವಿಭಾವಾನುಭಾವಗಳು, ಸಂಚಾರಿಭಾವಗಳು, ಅಭಿನಯಕ್ರಮ ಯಾವುದು ಎಂಬುದನ್ನು ಭರತ ಹೀಗೆ ವಿಶದೀಕರಿಸಿದ್ದಾನೆ:[೫][೬]
ರಸ | ಸ್ಥಾಯಿಭಾವ | ದೇವತೆ | ವರ್ಣ | |
---|---|---|---|---|
1 | ಶೃಂಗಾರ | ರತಿ | ವಿಷ್ಣು | ಹಸುರು |
2 | ಹಾಸ್ಯ | ಹಾಸ | ಪ್ರಮಥ | ಬಿಳಿ |
3 | ಕರುಣ | ಶೋಕ | ಯಮ | ಬೂದು |
4 | ರೌದ್ರ | ಕ್ರೋಧ | ರುದ್ರ | ಕೆಂಪು |
5 | ವೀರ | ಉತ್ಸಾಹ | ಇಂದ್ರ | ಲಘುಕಿತ್ತಳೆವರ್ಣ |
6 | ಭಯಾನಕ | ಭಯ | ಯಮ/ ಕಾಲ | ಕಪ್ಪು |
7 | ಬೀಭತ್ಸ | ಜಿಗುಪ್ಸೆ | ಶಿವ | ನೀಲಿ |
8 | ಅದ್ಭುತ | ವಿಸ್ಮಯ | ಬ್ರಹ್ಮ | ಹಳದಿ |
- ಶೃಂಗಾರ: ಇದರಲ್ಲಿ ಎರಡು ವಿಧ. (1) ಸಂಭೋಗ ಶೃಂಗಾರ (2) ವಿಪ್ರಲಂಭ ಶೃಂಗಾರ. ಸಂಭೋಗ ಶೃಂಗಾರದಲ್ಲಿ ಪರಸ್ಪರ ದರ್ಶನ, ಮಿಲನ ಇವು ಸೇರುತ್ತವೆ. ವಿಪ್ರಲಂಭದಲ್ಲಿ ವಿರಹ, ಅಭಿಲಾಷೆ ಸೇರುತ್ತವೆ. ನಾಚಿಕೆ, ಶಂಕೆ, ಅಸೂಯೆ, ಮೋಹ, ಔತ್ಸುಕ್ಯ, ಸ್ಮರಣ, ಚಿಂತೆ ಇತ್ಯಾದಿಗಳು ವ್ಯಭಿಚಾರಿ ಭಾವಗಳು.
- ಹಾಸ್ಯ: ಇದರಲ್ಲಿ ಆರು ವಿಧಗಳಿವೆ: (1) ಸ್ಮಿತ (2) ಹಸಿತ (3) ವಿಹಸಿತ (4) ಉಪಹಸಿತ (5) ಅಪಹಸಿತ (6) ಅತಿಹಸಿತ. ಅನೌಚಿತ್ಯವೇ ಹಾಸ್ಯದ ಮೂಲ.
- ಕರುಣ: ಕರುಣ ಅತಿ ಸುಕುಮಾರ ರಸ. ಇದರ ಅನುಭವ ಕಾಲದಲ್ಲಿ ಅಂತರಂಗ ಕರಗುತ್ತದೆ.
- ರೌದ್ರ: ಕ್ರೋಧವು ಉದ್ಧತ ಪ್ರಕೃತಿಯುಳ್ಳವರಲ್ಲಿ ಬೇಗ ಉದ್ರೇಕವಾಗುತ್ತದೆ.
- ವೀರ: ದಾನವೀರ, ಧರ್ಮವೀರ, ಯುದ್ಧವೀರ ಎಂಬ ಮೂರು ವಿಧಗಳಿವೆ.
- ಭಯಾನಕ: `ಭಯ' ಸಹಜ ಪ್ರವೃತ್ತಿ. ಆದರೆ ಇದು ವೀರರಿಗೆ ತಕ್ಕುದಲ್ಲ. ಸಾಮಾನ್ಯರಿಗೆ ಯಾವುದು ಭಯವುಂಟುಮಾಡುತ್ತದೋ ಅದು ವೀರರಿಗೆ ಕೋಪತರಿಸುತ್ತದೆ.
- ಬೀಭತ್ಸ: ಜುಗುಪ್ಸೆಯೇ ಈ ರಸದ ಮೂಲ. ಒಂದು ವಸ್ತು ಜುಗುಪ್ಸಿತವೆ ಅಲ್ಲವೆ ಎಂಬುದು ನಿರೂಪಣೆಯ ಕೌಶಲ್ಯದ ಮೇಲೆ ನಿಲ್ಲುತ್ತದೆ.
- ಅದ್ಭುತ: `ವಿಸ್ಮಯ' ವನ್ನು ಎಲ್ಲರೂ ಅನುಭವಿಸುತ್ತಾರೆ. ಅದ್ಭುತದಲ್ಲಿ ಸಿಕ್ಕುವ `ಚಮತ್ಕಾರ' ವು ಚಿತ್ತವಿಸ್ತಾರರೂಪವಾದದ್ದು.
ಇತರ ರಸಗಳು
ಬದಲಾಯಿಸಿಭರತ ಹೇಳಿದ ಎಂಟು ರಸಗಳ ಜೊತೆಗೆ ಅನಂತರ ಕಾಲದಲ್ಲಿ ಇತರ ರಸಗಳೂ ಸೇರ್ಪಡೆಯಾದವು. ಇವುಗಳಲ್ಲಿ ಮುಖ್ಯವಾದದ್ದು ಶಾಂತರಸ. ಮೊಟ್ಟಮೊದಲಿಗೆ ಶಾಂತರಸವನ್ನು ಕುರಿತು ಪ್ರಸ್ತಾಪಿಸಿದವನು ಉದ್ಭಟ. ಇವನು ತನ್ನ ಕಾವ್ಯಾಲಂಕಾರ ಸಾರಸಂಗ್ರಹದಲ್ಲಿ ಶಾಂತವನ್ನು ಕುರಿತು ಪ್ರಸ್ತಾಪಿಸಿದ್ದಾನೆ. ಇವನು ಅದರ ಹೆಸರನ್ನು ಮಾತ್ರ ಹೇಳಿದ್ದಾನೆ; ಆ ರಸದ ಬಗೆಗೆ ವಿವರಣೆ ನೀಡಿಲ್ಲ. ರುದ್ರಟ ಶಾಂತರಸದ ಬಗೆಗೆ ವಿವರಿಸುತ್ತ ಇದಕ್ಕೆ ಸ್ಥಾಯಿಭಾವ `ಸಮ್ಯಗ್‍ಜ್ಞಾನ' ಎಂದು ಹೇಳಿದ್ದಾನೆ. ಭರತ ಹೇಳಿದ ಎಂಟು ರಸಗಳೊಂದಿಗೆ ರುದ್ರಟನು ಶಾಂತ ಮತ್ತು ಪ್ರೇಯಾನ್ ರಸಗಳನ್ನೂ ಸೇರಿಸುತ್ತಾನೆ. ಅನಂತರ ಬಂದ ಆನಂದವರ್ಧನ ತನ್ನ ಧ್ವನ್ಯಾಲೋಕದಲ್ಲಿ ಶಾಂತರಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಮಹಾಭಾರತದಲ್ಲಿ ಶಾಂತವೇ ಪ್ರಧಾನ ರಸವೆಂದೂ ಪ್ರತಿಪಾದಿಸಿದ್ದಾನೆ. ಧಜಂಜಯ ಮತ್ತು ಧನಿಕರು `ದಶರೂಪಕ' ದಲ್ಲಿ ಅಭಿನಯವೇ ಮುಖ್ಯವಾದ ನಾಟ್ಯದಲ್ಲಿ ಅದಕ್ಕೆ ಸ್ಥಾನವಿಲ್ಲವೆಂದು ಪ್ರತಿಪಾದಿಸಿ, ಕಾವ್ಯದಲ್ಲೂ ಅದಕ್ಕೆ ಸ್ಥಾನವಿಲ್ಲ ಎಂದು ಹೇಳಿದರು. `ಶಮ' ಶಾಂತದ ಸ್ಥಾಯಿಯಾಗುವುದಾದರೆ ಅದು ಅನಿರ್ವಚನೀಯವಾದದ್ದರಿಂದ, ನಾಟ್ಯದಲ್ಲಿಯಂತೆಯೇ ಕಾವ್ಯದಲ್ಲೂ ಇದಕ್ಕೆ ಸ್ಥಾನವಿಲ್ಲವೆನ್ನುವುದು ಅವರ ಮತ. ಅಭಿನವಗುಪ್ತ ಈ ಕಾಲದಲ್ಲಿಯೇ ಜೀವಿಸಿದ್ದ. ಇವನು ಈ ವಿಷಯವಾಗಿ ಇದ್ದ ಭಿನ್ನಾಭಿಪ್ರಾಯಗಳನ್ನೆಲ್ಲ ಕ್ರೋಡೀಕರಿಸಿ ಉತ್ತರಕೊಟ್ಟು, ಪರಿಷ್ಕರ ಮಾಡಿ ಶಾಂತಕ್ಕೆ ಮುಖ್ಯವಾದ ಸ್ಥಾನವನ್ನು ದೊರಕಿಸಿಕೊಟ್ಟ.[೭][೮]
ರುದ್ರಟ ತನ್ನ ಕಾವ್ಯಾಲಂಕಾರದಲ್ಲಿ `ಸ್ನೇಹ ಪ್ರಕೃತಿಃ ಪ್ರೇಯಾನ್' ಎಂದು ಹೇಳಿ `ಪ್ರೇಯಾನ್' ರಸಕ್ಕೆ ಸಾಹಚರ್ಯಾದಿ ವಿಭಾವಗಳು, ಸ್ತ್ರೀಯರ ಕಣ್ಣೀರು ಮುಂತಾದವು ಅದರ ಅನುಭಾವೆನ್ನುತ್ತಾನೆ. ವಾತ್ಸಲ್ಯ, ಲೌಲ್ಯ, ಭಕ್ತಿ, ಉದಾತ್ತ, ಮಾಯಾ, ಕಾರ್ಪಣ್ಯ ಇವುಗಳೂ ರಸಗಳೆಂದು ಹಲವರ ಮತ. ಹೀಗೆ ರಸಗಳ ಸಂಖ್ಯೆಯನ್ನು ಬೆಳೆಸುತ್ತ ಹೋಗಬಹುದು. ಇದಕ್ಕೆ ಕೊನೆ ಮೊದಲಿಲ್ಲ. ಆದ್ದರಿಂದ ಈ ರಸಗಳನ್ನೆಲ್ಲ ರಸದ್ಧವಾದ ಒಂಬತ್ತು ರಸಗಳಲ್ಲಿ ಒಳಪಡಿಸಬಹುದೆಂದು ಇನ್ನು ಕೆಲವರು ಲಾಕ್ಷಣಿಕರ ಮತ. ನಾಟ್ಯಶಾಸ್ತ್ರದ ವ್ಯಾಖ್ಯಾನಕಾರ ಅಭಿನವಗುಪ್ತನೂ ಒಂಬತ್ತಕ್ಕಿಂತ ಹೆಚ್ಚಿನ ರಸಗಳನ್ನು ಮಾನ್ಯ ಮಾಡುವುದಿಲ್ಲ. ಅಭಿನವಗುಪ್ತನ ಪ್ರಕಾರ ಒಂಬತ್ತು ರಸಗಳಲ್ಲಿ ಶೃಂಗಾರ, ರೌದ್ರ, ವೀರ ಮತ್ತು ಶಾಂತ ಇವು ಮುಖ್ಯ ರಸಗಳು. ಉಳಿದ ರಸಗಳು ಇವುಗಳಿಗೆ ಉಪಷ್ಟಂಭಕವಾಗಿ ಬರುತ್ತವೆ.
ಕಲಾಪ್ರಪಂಚದಲ್ಲಿ `ಭಾವ' ದ ಕರಣಗಳನ್ನು `ವಿಭಾವ' ಗಳು ಎನ್ನಲಾಗುತ್ತದೆ. ಕಾರ್ಯಗಳನ್ನು `ಅನುಭಾವ' ಗಳು ಎನ್ನಲಾಗುತ್ತದೆ. ವಿಭಾವಾನುಭವವ್ಯಭಿಚಾರಿ ಸಂಯೋಗಾತ್ ರಸನಿಷ್ಪತ್ತಿಃ ಎಂಬುದು ಪ್ರಸಿದ್ಧವಾದ ಸೂತ್ರ.
ಯಾವ ಯಾವ ರಸಕ್ಕೆ ಯಾವ ಯಾವ ವಿಭಾವಗಳು, ಅನುಭಾವಗಳು ಎಂಬುದನ್ನೂ ಪಟ್ಟಿಮಾಡಲಾಗಿದೆ.
ರಸ | ವಿಭಾವ | ಅನುಭಾವ | |
---|---|---|---|
1 | ಶೃಂಗಾರ | ಸರಸಸಲ್ಲಾಪ, ಇನಿಯರ ಭೇಟಿ ಇತ್ಯಾದಿ | ಕಟಾಕ್ಷವಿಕ್ಷೇಪಣ ಇತ್ಯಾದಿ |
2 | ಹಾಸ್ಯ | ಅಂಗಾಂಗಗಳ ವಕ್ರತೆ, ಅನೌಚಿತ್ಯ ವರ್ತನೆ | ಪಕ್ಕೆಗಳನ್ನು ಹಿಡಿದು ನಗುವುದು, ಬೆವರುವಿಕೆ ಇತ್ಯಾದಿ |
3 | ಕರುಣ | ವಿರಹತಾಪ, ಶಾಪ ಇತ್ಯಾದಿ | ಕಣ್ಣೀರು, ಶೋಕ ಇತ್ಯಾದಿ |
4 | ರೌದ್ರ | ರೋಷ, ಅತ್ಯಾಚಾರ, ದೂಷಣ ಇತ್ಯಾದಿ | ಕೆಂಪುಗಣ್ಣು, ಹುಬ್ಬು ಗಂಟಿಕ್ಕುವುದು ಇತ್ಯಾದಿ |
5 | ವೀರ | ರಾಜತಂತ್ರ, ಕೌಶಲ್ಯ | ಆಕ್ರಮಣ, ಬಲಪ್ರಯೋಗ |
6 | ಭಯಾನಕ | ಕೆಟ್ಟಧ್ವನಿ, ಬಂಧುಜನರ ಮರಣ ಇತ್ಯಾದಿ | ಕೈಕಾಲು ನಡುಗುವುದು, ರೋಮಾಂಚನ |
7 | ಬೀಭತ್ಸ | ಕೆಟ್ಟಸಮಾಚಾರ, ರೇಗಿಸುವಿಕೆ | ಕೈಕಾಲು ನಡುಗುವುದು |
8 | ಅದ್ಭುತ | ತಾಂತ್ರಿಚಿತ್ರ, ಇಂದ್ರಜಾಲ, ಯಕ್ಷಿಣಿ | ಕಣ್ಣು ಅರಳಿಸುವುದು , ರೋಮಾಂಚನ ಇತ್ಯಾದಿ |
9 | ಶಾಂತ | ತೃಪ್ತಿ, ಪ್ರಾರ್ಥನೆ | ಗಾಂಭೀರ್ಯ |
ರಸದ ಅನುಭವ
ಬದಲಾಯಿಸಿರಸಪ್ರತೀತಿ ಸಹೃದಯನಿಗೆ ಹೇಗಾಗುತ್ತದೆಂಬುದನ್ನು ಲೊಲ್ಲಟ, ಶಂಕುಕ, ಭಟ್ಟನಾಯಕ ಮತ್ತು ಅಭಿನವಗುಪ್ತರು ಕೂಲಂಕುಷವಾಗಿ ವಿವೇಚಿಸಿದ್ದಾರೆ. ಸ್ಥಾಯಿಭಾವದ ಉಲ್ಲೇಖ ಮೇಲಿನ ಸೂತ್ರದಲ್ಲಿ ಏಕೆ ಇಲ್ಲ ಎಂಬುದರ ಬಗೆಗೂ ವಿಶದವಾದ ಚರ್ಚೆ ನಡೆದಿದೆ. ಲೊಲ್ಲಟನ ಪ್ರಕಾರ ಭರತನ ಸೂತ್ರದಲ್ಲಿನ `ಸಂಯೋಗ' ಎಂಬ ಶಬ್ದದ ಅರ್ಥ ಮಾಡುವಾಗ ಸ್ಥಾಯಿಗೆ ವಿಭಾವಗಳೊಂದಿಗೆ "ಜನ್ಯಜನಕಭಾವ", ಅನುಭಾವಗಳೊಂದಿಗೆ "ಗಮ್ಯಗಮಕಭಾವ", ಸಂಚಾರಿಭಾವಗಳೊಂದಿಗೆ "ಪೋಷ್ಯಪೋಷಕಭಾವ" ಗಳಿರುತ್ತವೆ. `ನಿಷ್ಪತ್ತಿ' ಎಂದರೆ `ಉತ್ಪತ್ತಿ' ಎಂದು ಅರ್ಥೈಸಬೇಕು. ಶಂಕುಕನ ಪ್ರಕಾರ ರಸಕ್ಕೂ ವಿಭಾವ, ಅನುಭಾವ, ಸಂಚಾರಿ ಭಾವಗಳಿಗೂ `ಗಮ್ಯಗಮಕ' ಭಾವ, ನಿಷ್ಪತ್ತಿ ಎಂಬುದಕ್ಕೆ `ಅನುಮಿತಿ' ಎಂದು ಅರ್ಥೈಸಬೇಕು. ಭಟ್ಟನಾಯಕನು ವಿಭಾವಾದಿಗಳು ಸಾಧಾರಣೀಕೃತವಾಗಿ, ಸಾಮಾಜಿಕನು ರಸಾಸವಾದ ಪಡೆಯುತ್ತಾನೆ ಎಂದು ಪ್ರತಿಪಾದಿಸಿದ. ಅಭಿನವಗುಪ್ತ ಈ ಅಭಿಪ್ರಾಯಗಳನ್ನೆಲ್ಲ ಪರಿಶೀಲಿಸಿ, ಪರಾಮರ್ಶಿಸಿ ರಸಾನುಭವದ ಬಗೆಗೆ ಕೊನೆಯ ಮಾತನ್ನು ಹೇಳಿದ. ರಸವಾದುದು ಜ್ಞಾಪ್ಯ. ಅಂದರೆ `ಉತ್ಪತ್ತಿ' ಅಥವಾ `ಅನುಮಾನ' ದಿಂದ ತಿಳಿಸಿಕೊಡುವುದಾಗಿದೆ. `ಅಭಿವ್ಯಕ್ತ' ವಾಗುವಂಥದು. ಸಾಮಾಜಿಕರ ಮನಸ್ಸಿನಲ್ಲಿ ರತ್ಯಾದಿಸ್ಥಾಯಿಭಾವಗಳು ಸುಪ್ತಾವಸ್ಥೆಯಲ್ಲಿರುತ್ತವೆ. ಇವು ವಿಭಾವಾದಿಗಳಿಂದ ಎಚ್ಚರಗೊಂಡು ರಸಾವಸ್ಥೆ ಪಡೆಯುತ್ತವೆ. ಇದೇ ರಸಾನುಭವ.
ಹೀಗೆ `ರಸ' ಪರಿಕಲ್ಪನೆ ಭರತನಿಂದ ನಿರೂಪಿತನಾಗಿ, ಮುಂದೆ ಭಾರತೀಯ ಕಾವ್ಯಮೀಮಾಂಸೆಯ ಇತಿಹಾಸ ರೂಪಕಂಡಂತೆ ವಿಕಾಸ ಹೊಂದುತ್ತ, ಕಾವ್ಯದ ಪರಮ ಪ್ರಯೋಜನ ರಸಾನುಭವ ಎಂಬ ಆತ್ಯಂತಿಕ ನಿಲುವನ್ನು ತಲುಪಿತು. ರಸಸಿದ್ಧಾಂತವು ಜಾಗತಿಕ ಕಾವ್ಯ ಮೀಮಾಂಸೆಗೆ ಭಾರತೀಯ ಕಾವ್ಯ ಮಿಮಾಂಸೆ ನೀಡಿದ ವಿಶಿಷ್ಟವೂ ಮಹತ್ತ್ವಪೂರ್ಣವೂ ಆದ ಕೊಡುಗೆಯಾಗಿದೆ.
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Monier Monier-Williams (1899), Rasa, Sanskrit English Dictionary with Etymology, Motilal Banarsidass (Originally Published: Oxford)
- ↑ Rasa: Indian Aesthetic Theory, Encyclopedia Britannica (2013)
- ↑ Natalia Lidova 2014
- ↑ Farley Richmond. "India" in The Cambridge Guide to Asian Theatre. ed. James R. Brandon (Cambridge University Press, 1993), p. 69.
- ↑ Ghosh, Manomohan (2002). Natyasastra. ISBN 81-7080-076-5.
- ↑ "The Navarasa". Retrieved 2012-04-22.
- ↑ Daniel Meyer-Dinkgräfe (2005). Approaches to Acting: Past and Present. Bloomsbury Academic. pp. 73, 102–106, 120. ISBN 978-1-4411-0381-9.
- ↑ Susan L. Schwartz (2004). Rasa: Performing the Divine in India. Columbia University Press. pp. 12–17. ISBN 978-0-231-13144-5.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- "Rasas" as Springs of Art in Indian Aesthetics, Radhakamal Mukerjee (Archive Archived 2020-11-08 ವೇಬ್ಯಾಕ್ ಮೆಷಿನ್ ನಲ್ಲಿ.)
- "Rasa" as Aesthetic Experience, G. B. Mohan Thampi (Archive Archived 2017-01-04 ವೇಬ್ಯಾಕ್ ಮೆಷಿನ್ ನಲ್ಲಿ.)
- The Theory of Rasa, P. J. Chaudhury
- The Aesthetics of Ancient Indian Drama, V. Raghavan