ಭಾರತೀಯ ಕಾವ್ಯ ಮೀಮಾಂಸೆ
ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ.[೧][೨] ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ.
ಹಿನ್ನೆಲೆ
ಬದಲಾಯಿಸಿಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ. ಕಾಳಿದಾಸ ಸರ್ವಾಂಗ ಸುಂದರವಾದ ನಾಟ್ಯಶಾಸ್ತ್ರವನ್ನು ತಿಳಿಸುತ್ತಾನೆ. ಆದ್ದರಿಂದ ಪುರಾತನ ರಾಜಮಹಾರಾಜರು ನಾಟ್ಯಕಲೆಯನ್ನು ಪ್ರೋತ್ಸಾಹಿಸುವುದಕ್ಕೆ ಮುಂದೆಯೆ ಈ ಕಲೆ ಜನಜೀವನದಲ್ಲಿ ಬೆಳೆದು ಬಂದಿದ್ದಿತು. ಪ್ರಾಚೀನದಿಂದ ಬೆಳೆದು ಬಂದ ಈ ಕಲೆಗೆ ಪೌರಾಣಿಕ ಹಿನ್ನೆಲೆಯನ್ನು ಕೊಡಲು ಶಿವ, ಬ್ರಹ್ಮ ಮೊದಲಾದವರಿಂದ ಪ್ರಣೀತವೇ ನಾಟಕವೆಂದೂ ಈ ಶಾಸ್ತ್ರ ಅಪೌರುಷೇಯವೆಂದೂ ಕಥೆಗಳು ಹುಟ್ಟಿಕೊಂಡವು.
ಅಲಂಕಾರಶಾಸ್ತ್ರ ಮಹಾ ವಿಮರ್ಶಕ ವಿಭೂತಿಗಳಿಂದ ಕಟ್ಟಲ್ಪಟ್ಟ ಕಲಾ ವಿಮಾರ್ಶಾತ್ಮಕ ಸೌಧ. ಇದರಲ್ಲಿ ದೈವಾಂಶಿಕರು, ಮುನಿಗಳು, ಮಾನವರು ಎಲ್ಲರ ಹೆಸರೂ ಕಂಡುಬರುತ್ತವೆ. ಉಮಾಮಹೇಶ್ವರರು ನಂದೀಶ್ವರ, ಬ್ರಹ್ಮ ಇವರು ಈ ಕಲೆಯನ್ನು ಪ್ರಪಂಚದ ಹಿತಕ್ಕಾಗಿ ತಾವೇ ಸ್ವತಃ ಕಂಡು ಇತರರಿಗೆ ಉಪದೇಶಿಸಿದರೆಂಬ ಸಂಪ್ರದಾಯವನ್ನು ಕಾಳಿದಾಸಾದಿಗಳು ಮಾನಿಸುತ್ತಾರೆ. ತನ್ನ ಕಾವ್ಯಮೀಮಾಂಸೆಯಲ್ಲಿ ರಾಜಶೇಖರ ಕವಿ ಹದಿನೆಂಟು ಅಧಿಕರಣವುಳ್ಳ (ವಿಭಾಗ) ಈ ನಾಟ್ಯವನ್ನು ಹದಿನೆಂಟು ಮುನಿಗಳು ಕಂಡು ನಮಗೆ ಅನುಗ್ರಹಿಸಿದರೆಂದು ಹೇಳುತ್ತಾನೆ.[೩] ಅಭಿನಯದರ್ಪಣವೆಂಬ ಗ್ರಂಥವೂ ನಂದಿಕೇಶ್ವರ ಪ್ರಣೀತವೆಂದು ಹೇಳುತ್ತಾರೆ. ದೃಶ್ಯ ಶ್ರವ್ಯ ಕಾವ್ಯಕಲಾ ಸಂಪ್ರದಾಯಗಳಿಗೆ ಸಂಗ್ರಹಾಲಯದಂತಿರುವ ಅಗ್ನಿಪುರಾಣ ವ್ಯಾಸಪ್ರಣೀತವೆನ್ನುತ್ತಾರೆ.
ಭರತನ ನಾಟ್ಯಶಾಸ್ತ್ರ
ಬದಲಾಯಿಸಿಭರತಮುನಿಯ (ಕ್ರಿ. ಪೂ. ಸುಮಾರು 6-3ನೆಯ ಶತಮಾನ) ನಾಟ್ಯಶಾಸ್ತ್ರ ಕಲಾಸಂಪ್ರದಾಯಗಳ ಸಂಗ್ರಹ ಗ್ರಂಥವಾದರೂ ಭಾರತೀಯ ಸೌಂದರ್ಯಶಾಸ್ತ್ರ ಹಾಗೂ ಕಾವ್ಯ ಮೀಮಾಂಸೆಗಳಿಗೆ ಪ್ರಪ್ರಥಮ ಆಧಾರಗ್ರಂಥವೆನ್ನಬಹುದು. ಬ್ರಹ್ಮನಿಂದ ಈ ನಾಟ್ಯವೇದವನ್ನು ಪಡೆದು ನಮಗೆ ಅನುಗ್ರಹಿಸಿದನೆಂದು ಊಹಿಸುವವರೂ ಉಂಟು. ಅದೇನೆ ಇರಲಿ ಭರತನಾಟ್ಯಶಾಸ್ತ್ರ ಈ ದಿಕ್ಕಿನಲ್ಲಿ ಮೊತ್ತಮೊದಲ ಗ್ರಂಥ. ನಾಟ್ಯಶಾಸ್ತ್ರದಲ್ಲಿ ಉತ್ತರ ಮತ್ತು ದಕ್ಷಿಣದ ಎರಡು ರೀತಿ ಪರಿಷ್ಕøತ ಗ್ರಂಥವುಂಟು. ಈ ಗ್ರಂಥದಲ್ಲಿ ಪ್ರಾಚೀನ ಅರ್ವಾಚೀನ ಅಧ್ಯಾಯಗಳುಂಟೆಂದು ವಾದವಿದೆ. ಅಭಿನವಗುಪ್ತ ಇದಕ್ಕೆ ಅಭಿನವ ಭಾರತೀ ಎಂಬ ವ್ಯಾಖ್ಯಾನ ಬರೆದಿದ್ದಾನೆ. ಇದು ಮಧ್ಯೆ ಮಧ್ಯೆ ಹೊಸ ಶ್ಲೋಕಗಳನ್ನು ಹೊಂದಿ ಸ್ವತಂತ್ರ ಕೃತಿಯಂತೆಯೂ ಇದೆ.
ನಾಟ್ಯಶಾಸ್ತ್ರ ಭಾರತೀಯ ಸೌಂದರ್ಯಶಾಸ್ತ್ರದ ವಿಶ್ವಕೋಶದಂತಿದೆ. ನಾಟ್ಯಕ್ಕೆ ಇಲ್ಲಿ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆ. ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ ಭಯಾನಕ, ಬೀಭತ್ಸ ಮತ್ತು ರೌದ್ರ_ಈ ಎಂಟು ರಸಗಳು, ಅವುಗಳ ವಿಭಾವಗಳು, ಅನುಭಾವಗಳು ಮತ್ತು ವ್ಯಭಿಚಾರಿ ಭಾವಗಳು, ನಾಟ್ಯಾಂಗಕ್ಕೆ ಬೇರೆಯಾಗಿ ಅಲಂಕಾರಾಂಗ ಮತ್ತು ಕಾವ್ಯವಿಮರ್ಶೆಗಳು ಇಲ್ಲಿ ಪ್ರಸ್ಥಾಪಿಸಲ್ಪಟ್ಟಿವೆ. ಅಗ್ನಿಪುರಾಣದಲ್ಲಿ ಇಲ್ಲಿಯ ಅಂಶಗಳೇ ಪುನಾರಾವೃತ್ತವಾಗಿವೆಯೆಂದು ವಿಮರ್ಶಕರ ಅಭಿಪ್ರಾಯ. ನಾಟ್ಯಶಾಸ್ತ್ರದಲ್ಲಿ 36 ಅಧ್ಯಾಯಗಳು, 6000 ಅನುಷ್ಟುಪ್ ಶ್ಲೋಕಗಳು, ಕೆಲವೆಡೆ ಗದ್ಯವೂ ಇವೆ. ಗದ್ಯಭಾಗ ಇತ್ತೀಚಿನ ಪ್ರಕ್ಷಿಪ್ತವೆಂದು ಕೆಲವರ ಅಭಿಪ್ರಾಯ.
ಋಗ್ವೇದದಿಂದ ಮಾತಿನ ಭಾಗವನ್ನೂ ಯಜುರ್ವೇದದಿಂದ ಅಭಿನಯವನ್ನೂ ಸಾಮವೇದದಿಂದ ಗಾನವನ್ನೂ ಅಥರ್ವವೇದದಿಂದ ರಸವನ್ನೂ ಆಯ್ದುಕೊಂಡು ನಾಟ್ಯಶಾಸ್ತ್ರವೆಂಬ ಪಂಚಮವೇದವನ್ನು ಬ್ರಹ್ಮ ರಚಿಸಿ ಭರತನಿಗೆ ಉಪದೇಶಿಸಿದ. ಆತ ತನ್ನ ನೂರುಮಂದಿ ಮಕ್ಕಳಿಗೆ ಇದನ್ನು ಕಲಿಸಿದ. ಆ ಗಾಂಧರ್ವವೇದವನ್ನು ಇಂದ್ರನ ಇಚ್ಛೆಯಂತೆ ಕೋಹಲ, ವಾತ್ಸ್ಯ, ಶೌಂಡಿಲ್ಯ, ಧೂರ್ತಿಲ ಇವರು ಭೂಮಿಯಲ್ಲಿ ಪ್ರಚಾರಪಡಿಸಿದರು ಎಂದು ಪ್ರತೀತಿ.
ನಾಟಕದ ಮಹಿಮೆಯನ್ನು ಕಂಡು ಕೇಳದ ಜನರಿಲ್ಲ. ಅದಕ್ಕೆ ಸರ್ವಾಂಗ ಸುಂದರ ಮತ್ತು ಸಮಗ್ರ ರೂಪ ಕೊಟ್ಟವನು ಭರತ. ರಂಗಶಿಲ್ಪ, ನಟರ ಆಯ್ಕೆ, ಅವರ ಯೋಗ್ಯತೆಯಂತೆ ಪಾತ್ರಧಾರಣೆ, ಭಕ್ತಿ, ಯುಕ್ತಿ, ಪ್ರಯೋಗ ಕೌಶಲ, ಸಾಂಸ್ಕ್ರತಿಕ ಮಹಾತ್ಮ್ಯೆ, ರಾಗ, ತಾಳ, ಅಭಿನಯ ಮೊದಲಾದ ನಾಟಕ ಕಲೆಯ ವಿಶ್ವರೂಪವನ್ನೇ ಶಾಸ್ತ್ರೀಕರಿಸುವ ಭರತನಾಟ್ಯಶಾಸ್ತ್ರದಂಥ ಬೇರೆ ಗ್ರಂಥ ಪ್ರಪಂಚ ಸಾಹಿತ್ಯದಲ್ಲಿ ಇಲ್ಲ. ನಾಟ್ಯಕಲೆಯ ಜೊತೆಯಲ್ಲಿಯೇ ಸಾಹಿತ್ಯ ಮೀಮಾಂಸಾ ಭಾಗವಾದ ರಸ, ಅಲಂಕಾರ, ಕಾವ್ಯತತ್ತ್ವ ಇತ್ಯಾದಿಗಳೂ ಇಲ್ಲಿ ಸೇರಿಕೊಂಡಿವೆ. ಭರತನ ಕಾಲಕ್ಕಿಂತ ಮುಂಚೆ ಭರತಖಂಡದಲ್ಲಿ ಬೆಳೆದಿದ್ದ ದೃಶ್ಯ ಶ್ರವ್ಯ ಕಾವ್ಯಕಲಾ ಪ್ರೌಢಿಮೆಯೆಲ್ಲವೂ ಇಲ್ಲೆ ಅಡಗಿದೆ. ಈಚೆಗೆ ಇದರಿಂದ ತೆಗೆದುಕೊಂಡು ಇತರರು ಆ ಕಲೆಯನ್ನು ವಿಸ್ತರಿಸಿದ್ದಾರೆ. ವಸ್ತು, ಶೈಲಿ, ಪ್ರಯೋಜನ ಮತ್ತು ಸಾಹಿತ್ಯ ವಿಮರ್ಶೆ ಕುರಿತಂತೆ ಭರತನಾಟ್ಯಶಾಸ್ತ್ರ ಮಹೋನ್ನತ ಸ್ಥಾನವನ್ನು ಪಡೆದಿದೆ.
ಕಾವ್ಯಮೀಮಾಂಸೆ ಮತ್ತು ಕಾವ್ಯ ವಿಮರ್ಶೆ
ಬದಲಾಯಿಸಿಕಾವ್ಯಮೀಮಾಂಸೆ ಅಥವಾ ಕಾವ್ಯ ವಿಮರ್ಶೆ ಕ್ರಿ.ಶ. 5ನೆಯ ಶತಮಾನ ದಿಂದೀಚೆಗೆ ಹೆಚ್ಚು ಬೆಳೆದಿವೆ. ಸುಮಾರು ಒಂದು ಸಾವಿರ ವರ್ಷ ದೃಶ್ಯ ಕಾವ್ಯಕಲೆಗೆ ಆಸಕ್ತಿ ಇದ್ದಿರಬಹುದು. ಕಾವ್ಯಮೀಮಾಂಸೆ ಈ ಮಧ್ಯೆ ಇರಲೇ ಇಲ್ಲವೆನ್ನುವಂತಿಲ್ಲ. ಆದರೆ ಕ್ರಿ.ಶ. 600 ರಿಂದೀಚೆಗೆ ಭಾಮಹ, ದಂಡಿ, ಉದ್ಭಟ, ವಾಮನ. ಲೊಲ್ಲಟ, ಆನಂದವರ್ಧನ, ರಾಜಶೇಖರ, ಮಮ್ಮಟ, ಭೋಜ, ವಿಶ್ವನಾಥ, ಜಗನ್ನಾಥ ಮುಂತಾದವರು ಕಾವ್ಯಮೀಮಾಂಸೆಯನ್ನು ಮುಂದುವರಿಸಿ ಕೊಂಡು ಬಂದರು. `ವಾಚಾಂ ವಿಚಿತ್ರಮಾರ್ಗಾಣಾಂ ನಿಜಬಂಧುಃ ಕ್ರಿಯಾವಿಧಿಂ ಕಾವ್ಯದಲ್ಲಿ ವಿಭಿನ್ನಮಾರ್ಗಗಳು ಮುಖ್ಯ ಎಂದು ದಂಡಿ ಪ್ರತಿಪಾದಿಸಿದ್ದಾನೆ. ಈ ಮಾರ್ಗಗಳು ವೈದರ್ಭೀ ಮತ್ತು ಗೌಡೀ. ಇವನ್ನೇ ಕಾವ್ಯದಲ್ಲಿ ಬಂಧ, ವೃತ್ತಿ. ಪ್ರವೃತ್ತಿ ಎಂದು ಬೇರೆಯವರು ಕರೆಯುತ್ತಾರೆ. ವಾಮನ ಇದನ್ನು " ರೀತಿರಾತ್ಮ ಕಾವ್ಯಸ್ಯ " ಎಂದು ಬಂಧಕ್ಕೆ (ಮಾರ್ಗ) ರೀತಿ ಎಂಬ ಹೊಸ ಹೆಸರಿಟ್ಟಿದ್ದಾನೆ. ಆದರೆ ಕಾವ್ಯಕ್ಕೆ ಆತ್ಮವೊಂದಿದೆಯೆಂದು ಹೇಳಿದುದು ವಾಮನನ ಮುಖ್ಯ ಕಾಣಿಕೆ. ವಿಶಿಷ್ಟ ಪದರಚನೆಯೆ ರೀತಿ ಎಂದು ವಾಮನನ ಅಭಿಮತ. ವಿಶೇಪಗಳಾದರೋ ಗುಣಗಳು ಓಜಸ್, ಪ್ರಸಾದ, ಸಮತಾ, ಮಾಧುರ್ಯ, ಕಾಂತಿ, ಉದಾರತಾ, ಸುಕುಮಾರತಾ, ಅರ್ಥವ್ಯಕ್ತಿ. ಪ್ರೌಢಿ ಈ ಹತ್ತು ಕಾವ್ಯ ಗುಣಗಳನ್ನು ದಂಡಿ ಬಲುವಾಗಿ ಬಣ್ಣಿಸಿ ಒತ್ತಿಹೇಳಿದ್ದಾನೆ. ಇವುಗಳಲ್ಲಿ ಮಾಧುರ್ಯ, ಓಜಸ್ ಮತ್ತು ಪ್ರಸಾದ ಈ ಮೂರೇ ಸಾಕೆಂದು ಮಮ್ಮಟ ಹೇಳುತ್ತಾನೆ. ಭಾಮಹ, ಉದ್ಭಟ, ರುದ್ರಟ ಮೊದಲಾದವರು ವಕ್ರೊಕ್ತಿಯೇ ಕಾವ್ಯದ ಜೀವಾಳವೆಂದರು. ಈ ಕಾರಣದಿಂದ ಭಾಮಹನನ್ನು ಅಲಂಕಾರದಿಂದ ಸಾಂಪ್ರದಾಯದವನೆನ್ನುತ್ತಾರೆ. ಸಹಜ ಸುಂದರಿಯಾದರೂ ಅಲಂಕಾರದಿಂದ ಸೌಂದರ್ಯ ಹೆಚ್ಚುವಂತೆ ಕಾವ್ಯದಲ್ಲಿ ಅಲಂಕಾರಗಳೇ ಶೋಭೆಗೆ ಕಾರಣವೆಂದು ಭಾಮಹ, ಉದ್ಭಟ ಮೊದಲಾದವರ ವಾದ. ಅಂದರೆ ಕಾವ್ಯದ ಶೈಲಿ, ಮೈಕಟ್ಟು ಎಲ್ಲವೂ ಸುಲಲಿತ ಸುಮಧುರವಾಗಿ ಇರಬೇಕೆಂದು ಎಲ್ಲರೂ ಒಪ್ಪುತ್ತಾರೆ. ಈ ಮಾತನ್ನೇ ಲಾಕ್ಷಣಿಕವಾಗಿ ವಿಮರ್ಶಿಸಿ ಆನಂದವರ್ಧನ (9-10ನೆಯ ಶತಮಾನ) ಶಬ್ದ ಅರ್ಥಗಳ ಮಧುರ ಸಂಮಿಳನವೇ ಕಾವ್ಯ ಎಂದು ಹೇಳಿದರೂ ಅವುಗಳ ಸಾಕ್ಷಾದರ್ಥವನ್ನೂ ಮೀರಿ ಪರೋಕ್ಷವಾದ ಮತ್ತು ಸೂಕ್ಷ್ಮ ವ್ಯಾಪಾರವಾದ ಧ್ವನಿಗೆ ಅವಕಾಶ ಕೊಡುವುದೇ ಉತ್ತಮ ಕಾವ್ಯ; ಆ ಧ್ವನಿಗೆ ಅಥವಾ ವ್ಯಂಜನಕ್ಕೆ ಅವಕಾಶ ಮಾಡಿಕೊಡುವವನೇ ಉತ್ತಮ ಕವಿ ಎಂದು ಹೇಳಿದ್ದಾನೆ. ಈ ಧ್ವನಿ ಕಾವ್ಯವಾಸನಾ ಪರಿಪಕ್ವಮತಿಗಳಿಗೆ ಮತ್ತು ಪ್ರತಿಭಾನ್ವಿತರಿಗೆ ಮೀಸಲು. ಶಬ್ದಾರ್ಥಗಳಿಗೆ ಗುಣ, ಅರ್ಥಗಳು ಸಹಜವಾದಂತೆ ಈ ಧ್ವನನ ವ್ಯಾಪಾರವೂ ಸಹಜ. ಅಭ್ಯಾಸ ಪ್ರಯತ್ನಗಳಿಂದ ಕರಗತವಾಗುವ ಸಂಸ್ಕøತಿಯಾದ ಈ ಮನೋವ್ಯಾಪಾರವೇ ಕಾವ್ಯಸರ್ವಸ್ವ ಇತ್ಯಾದಿಯಾಗಿ ಸಮರ್ಥಿಸಿದ್ದಾನೆ.
ಆಲಂಕಾರಿಕ ಮತಭೇದಗಳು
ಬದಲಾಯಿಸಿಪ್ರಾಚೀನದಿಂದ ಇಲ್ಲಿಯತನಕ ಸಾಹಿತ್ಯಾಮೃತ ರಸಾಸ್ವಾದದಲ್ಲಿ ಏನೊಂದು ಬದಲಾವಣೆಯಿಲ್ಲವಾದರೂ ಅದರ ಹಿನ್ನಲೆಯನ್ನು ವಿಮರ್ಶಿಸುವಾಗ ಬೇರೆ ಬೇರೆ ವಿಮರ್ಶಕರು ಬೇರೆ ಅಭಿಪ್ರಾಯಪಟ್ಟಿರುವರು ಹಿಂದೆ ಹೇಳಿದಂತೆ ಕ್ರಿ.ಶ. 6ನೆಯ ಶತಕದ ತನಕ ಭರತನಾಟ್ಯಶಾಸ್ತ್ರ, ಅಗ್ನಿಪುರಾಣ ಇತ್ಯಾದಿಗಳಲ್ಲಿ ರೀತಿ, ಗುಣ, ಅಲಂಕಾರ, ವೃತ್ತಿ, ರಸ ಮುಂತಾದ ಕಾವ್ಯ ಪ್ರಪಂಚದ ಪಾರಿಭಾಷಿಕ ಅಂಶಗಳು ಇದ್ದರೂ ನಾಟ್ಯಕ್ಕೇ ಒಲವು ಹೆಚ್ಚಾಗಿತ್ತು. 6ನೆಯ ಶತಕದಿಂದೀಚೆಗೆ ಭಾಮಹ, ದಂಡಿ, ವಾಮನ, ಆನಂದವರ್ಧನ ಮುಂತಾದ ವಿಮರ್ಶಕರು ವಿಮರ್ಶಾ ಕ್ರಮಗಳ ಬೇರೆ ಬೇರೆ ಶಾಖೆಗಳನ್ನು ಸ್ಥಾಪಿಸಿದರು. ಸೌಂದರ್ಯವನ್ನು ಆಸ್ವಾದಿಸುವವರು ಭಿನ್ನರು ಎಂದು ಇಷ್ಟ ಮಾತ್ರ ಒಪ್ಪಿದರೆ ಸಾಕು. ಭಿನ್ನ ರುಚಿ ಸೌಂದರ್ಯಶಾಸ್ತ್ರದಲ್ಲಿಯೂ ಸ್ವಾಭಾವಿಕವೆಂದು ಸ್ಪಷ್ಟವಾಗುತ್ತದೆ. ಅರ್ಥಗರ್ಭಿತ ಶಬ್ದ ಪ್ರಪಂಚವೇ ಕಾವ್ಯಪ್ರಪಂಚ. ಶಬ್ದದಲ್ಲಿ ಯಮಕ, ಅನುಪ್ರಾಸ ಇತ್ಯಾದಿ ಅಲಂಕಾರಗಳೂ ಅರ್ಥದಲ್ಲಿ ಉಪಮಾದ್ಯಾಲಂಕಾರಗಳೂ ಮುಖ್ಯ. ಈ ಅಲಂಕಾರಗಳೇ ಕಾವ್ಯಗಳಿಗೆ ಮುಖ್ಯವೆಂದು ಭಾಮಹ ಹೇಳುತ್ತಾನೆ. ಓದುಗರಿಗೆ ಆಪ್ಯಾಯನಕರವಾದ ಸರಸ ಸರಳ ಕಾವ್ಯಬಂಧವೇ ಪ್ರಸಾದ. ಈ ಸುಗಮಾರ್ಥವುಳ್ಳ ರೀತಿ ಅಥವಾ ಮಾರ್ಗವೇ ಮುಖ್ಯವೆಂದು ದಂಡಿಯ ವಾದ. ಒಳ್ಳೆಯ ಶಬ್ದ ಮತ್ತು ಅರ್ಥಗಳು ಸೇರಿದ ಉತ್ತಮ ಗುಣವುಳ್ಳ ವಿಶಿಷ್ಟ ಪದರಚನೆಯೇ ಕಾವ್ಯದ ಸಾರಸರ್ವಸ್ವ ಎಂದು ವಾಮನನ ಅಭಿಮತ. ಕಾವ್ಯದಲ್ಲಿ ಋಜುಮಾರ್ಗವಲ್ಲ; ವಕ್ರತೆ (ಭಂಗಿ) ಇರಬೇಕೆಂದು ಕುಂತಕ ಅಭಿಪ್ರಾಯಪಡುತ್ತಾನೆ. ಆದರೆ ದೂರಗಾಮಿಯಾದ ಧ್ವನಿಯೇ ಕಾವ್ಯದಲ್ಲಿ ಆಸ್ವಾದನೀಯ ಎಂದು ಆನಂದವರ್ಧನನ ಸಿದ್ಧಾಂತ. ವೀಣೆ, ಮೃದಂಗ ಮೊದಲಾದುವು ಮಧುರನಾದದ ಅಭಿವ್ಯಕ್ತಿ ಸಾಧಕಗಳಾದಂತೆ ಕಾವ್ಯ ಮಾಧುರ್ಯ ಭಾವವಿರಬಹುದು, ಅಲಂಕಾರವಿರಬಹುದು ಅಥವಾ ರಸವಿರಬಹುದು ಅದನ್ನು ವಾಚಿಸುವುದು ಶಬ್ದ ಹಾಗೂ ಅರ್ಥ. ಆದರೆ ಅದನ್ನು ಸೂಚಿಸುವುದು ಅದಕ್ಕೆ ಸಾಧ್ಯವಿಲ್ಲ. ಎಲ್ಲರೂ ಎಲ್ಲರನ್ನೂ ತಿಳಿದವರಲ್ಲ. ಕಾವ್ಯದ ಹಾಗೂ ಕಲೆಯ ಗೂಢಾರ್ಥವನ್ನು ಆಸ್ವಾದಿಸುವವರು ಕೆಲವರೇ. ವಾಚಕ, ಲಾಕ್ಷಣಿಕ ಮತ್ತು ತಾತ್ಪರ್ಯವೃತ್ತಿ (ಶಬ್ದವ್ಯಾಪಾರ) ಇವುಗಳ ಮಿತಿಗೆ ಮೀರಿದುದು ಧ್ವನಿ, ವ್ಯಂಜನ, ಅಂಜನ ಅಥವಾ ಧ್ವನನ. ಆದುದರಿಂದಲೇ ಇದನ್ನೂ ಅಲೌಕಿಕ ವ್ಯಾಪಾರವೆಂದೂ ಕರೆಯುತ್ತಾರೆ.
ಈ ಧ್ವನಿ ತತ್ತ್ವವನ್ನು ಆನಂದವರ್ಧೆನನೇ ಮೊದಲಬಾರಿಗೆ ಕಂಡುಹಿಡಿಯಲಿಲ್ಲ. ಆತನೇ ತಿಳಿಸಿರುವಂತೆ ಇದನ್ನು ವ್ಯಾಕರಣಶಾಸ್ತ್ರದಲ್ಲಿ ನಿರೂಪಿಸಲ್ಪಟ್ಟಿದ್ದ ಸ್ಛೋಟಸಿದ್ಧಾಂತದ ಮೇಲೆ ರೂಪಿಸಲಾಗಿದೆ. ಸ್ಛೋಟವೆಂದರೆ ಶಬ್ದಗಳಲ್ಲಿ ಅವಿನಾಭೂತವಾಗಿ ಅಡಗಿರುವ ಅಲೌಕಿಕ ಶಕ್ತಿ. ಇದು ಬ್ರಹ್ಮನಂತೆ ಒಂದೇ ಆಗಿದ್ದರೂ ಶಬ್ದದಲ್ಲಿ ಭಿನ್ನವಾಗಿದೆ. ಈ ಶಕ್ತಿಯ ಕಾರಣದಿಂದ ಒಂದು ಶಬ್ದದ ಕಡೆಯ ಅಕ್ಷರ ಕಿವಿಗೆ ಬೀಳುತ್ತಿದ್ದಂತೆಯೇ ಆ ಶಬ್ದ ಮನಸ್ಸಿನಲ್ಲಿ ಒಡೆದು ಅರ್ಥವಾಗಿ ಕಾಣಿಸಿಕೊಳ್ಳುತ್ತದೆ; ಶಬ್ದ ಅರ್ಥವನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬುದರಿಂದ ಧ್ವನಿತತ್ತ್ವ ಹುಟ್ಟಿತು. ಧ್ವನಿಯಾದರೋ ಅನುರಣನಾತ್ಮಕ, ಮಾರ್ದನಿಯಿಂದ ಮಾರ್ದನಿಗೆ ಶ್ರವಣಸಾಮಥ್ರ್ಯ ವಿರುವವರೆಗೆ ಕೇಳಿಬರುವ ಅರ್ಥರೂಪ ಮಧುರನಾದ. ಆದರೆ ಧ್ವನಿ ಅಭಿವ್ಯಕ್ತವಾಗಲು ಅದನ್ನು ಕಾವ್ಯದಲ್ಲಿ ಅಡಗಿಸುವ ಮಹಾಕವಿಯೂ ಬೇಕು; ಅದನ್ನು ಗ್ರಹಿಸುವ ರಸಿಕಹೃದಯರೂ ಬೇಕು.
ಆದ್ಯ ಆಲಂಕಾರಿಕರು
ಬದಲಾಯಿಸಿಭರತನ- ನಾಟ್ಯಶಾಸ್ತ್ರ, ಭಾಮಹನ -ಕಾವ್ಯಾಲಂಕಾರ, ದಂಡಿಯ- ಕಾವ್ಯಾದರ್ಶ, ಉದ್ಭಟನ- ಕಾವ್ಯಾಲಂಕಾರ ಸಂಗ್ರಹ, ವಾಮನನ- ಕಾವ್ಯಾಲಂಕಾರ ಸೂತ್ರ, ರುದ್ರಟನ -ಕಾವ್ಯಾಲಂಕಾರ , ಆನಂದವರ್ಧನನ -ಧ್ವನ್ಯಾಲೋಕ ಇವು ಭಾರತೀಯ ಕಾವ್ಯಮೀಮಾಂಸೆಯನ್ನು ವಿಶದವಾಗಿ ಚರ್ಚಿಸಿರುವ ಮುಖ್ಯ ಕೃತಿಗಳು. ಇವರಲ್ಲದೆ ಇನ್ನು ಅನೇಕರು ಈ ಕುರಿತು ಬರೆದಿದ್ದಾರೆ. ಮುಕುಲಭಟ್ಟನ- ಅಭಿಧಾವೃತ್ತಿಮಾತೃಕೆ, ಭಟ್ಟತೌತನ- ಕಾವ್ಯಕೌತುಕ, ಭಟ್ಟನಾಯಕನ- ಹೃದಯದರ್ಪಣ,ಮಮ್ಮಟ-ಕಾವ್ಯಪ್ರಕಾಶ ಹೇಮಚಂದ್ರನ- ಕಾವ್ಯಾನುಶಾಸನ. ವಿಶ್ವನಾಥನ- ಸಾಹಿತ್ಯದರ್ಪಣ, ಜಗನ್ನಾಥ ಪಂಡಿತರಾಜ- ರಸಗಂಗಾಧರ, ಕ್ಷೇಮೇಂದ್ರನ- ಔಚಿತ್ಯ ವಿಚಾರ ಚರ್ಚಾ ಮೊದಲಾದವುಗಳನ್ನು ಹೆಸರಿಸಬಹುದು. [೪]
ಕಾವ್ಯ ದೋಷಗಳು
ಬದಲಾಯಿಸಿ- ಗೂಡಾರ್ಥ
- ಅರ್ಥಾಂತರ
- ಅರ್ಥಹೀನ
- ಭಿನ್ನಾರ್ಥ
- ಏಕಾರ್ಥ
- ಅಭಿಪ್ಲುತಾರ್ಥ
- ನಾಯಾದ್ ಅಪೇತಂ
- ವಿಷಮ
- ವಿಸಂಧಿ
- ಶಬ್ದ ಹೀನ
ನೋಡಿ
ಬದಲಾಯಿಸಿ- ಮೈ.ವಿ.ವಿಶ್ವಕೋಶ:ಕಾವ್ಯಮೀಮಾಂಸೆ
ಉಲ್ಲೇಖ
ಬದಲಾಯಿಸಿ- ↑ ತೀ.ನಂ.ಶ್ರೀಕಂಠಯ್ಯ, ೧೯೫೨. ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
- ↑ ಅಂತರಜಾಲ ಸಂಚಯ
- ↑ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಾಹಿತ್ಯ ವಿಮರ್ಶೆ
- ↑ / ಭಾರತೀಯ ಕಾವ್ಯ ಮೀಮಾಂಸೆ; ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ