ಆನಂದವರ್ಧನ ಭಾರತೀಯ ಕಾವ್ಯಮೀಮಾಂಸೆಯ ಇತಿಹಾಸದಲ್ಲಿ ಉತ್ತಮ ಸಾಹಿತ್ಯಾಭಿರುಚಿ ಉಜ್ವಲ ಪ್ರತಿಭೆ, ಉನ್ನತ ತಾತ್ವಿಕ ವಿಚಾರ ಎಲ್ಲದರಲ್ಲೂ ಅದ್ವಿತೀಯವೆನಿಸಿ ಅಗ್ರಸ್ಥಾನಕ್ಕೆ ಅರ್ಹನಾದ ವಿಮರ್ಶಕ.ಆನಂದವರ್ಧನನ ಕಾಶ್ಮೀರದವನು, ಕಾಲ ಸುಮಾರು ಕ್ರಿ.ಶ. 850.

ಕೃತಿಗಳು

ಬದಲಾಯಿಸಿ

ಈತ ಶಾಸ್ತ್ರದಲ್ಲಿ ಪರಿಣತನೂ ಕವಿಗಳಲ್ಲಿ ಗಣ್ಯನೂ ಆಗಿದ್ದುದನ್ನು ಈತನ ಮಿಕ್ಕದ ಕೃತಿಗಳು (ತತ್ವಾಲೋಕ, ದೇವೀಶತಕ, ವಿಷಮಬಾಣಲೀಲಾ ಇತ್ಯಾದಿ) ನಿದರ್ಶಿಸುತ್ತವೆ. ಇವು ಈಗ ಉಪಲಬ್ಧವಿಲ್ಲ; ಕಡೆಯದು ಪ್ರಾಕೃತ ಮಹಾಕಾವ್ಯ. ಅವಂತಿವರ್ಮನ ಆಸ್ಥಾನದಲ್ಲಿ ಆನಂದವರ್ಧನ ಮನ್ನಣೆ ಪಡೆದ ವಿಷಯ ಕಲ್ಹಣರಾಜತರಂಗಿಣಿಯಲ್ಲಿ ಉಕ್ತವಾಗಿದೆ. ಈತ ಪೂರ್ವ ಸಂಪ್ರದಾಯಗಳ ಪರಿಷ್ಕಾರದಿಂದ ತೃಪ್ತನಾಗಲಿಲ್ಲ. ತನ್ನದೇ ಆದ ಹೊಸ ಪ್ರಸ್ಥಾನವನ್ನು ಜಗತ್ತಿಗೆ ಸಾರಿದ. ಅದಕ್ಕೆ ಧ್ವನಿ ಎಂಬ ಅಪೂರ್ವ ಹಾಗೂ ಅನ್ವರ್ಥಕ ಹೆಸರನ್ನಿತ್ತ. ಗುಣ, ರೀತಿ, ಅಲಂಕಾರ, ವೃತ್ತಿ, ಸಂಘಟನೆ ಮುಂತಾದ ಹಿಂದಿನ ಪ್ರಕ್ರಿಯೆಗಳಲ್ಲಿ ಸಾರವತ್ತಾದ ಅಂಶವೆಷ್ಟು, ನಿಸ್ಸಾರವಾದ ಅಂಶವೆಷ್ಟು, ನಿಸ್ಸಾರವಾದುದನ್ನೇ ಸಾರವೆಂದು ಅನೇಕ ಪಂಡಿತರು ಕೂಡ ಭ್ರಮಿಸುವಂತೆ ಆದುದೇಕೆ, ಕಾವ್ಯವಿಮರ್ಶೆಗೆ ಶಾಸ್ತ್ರಪಂಡಿತರು ಸರಿಯಾದ ಅಧಿಕಾರಿಗಳೆನ್ನಬಹುದೆ, ಕವಿ ಪ್ರತಿಭೆಗೂ ಸಹೃದಯನ ಪ್ರತಿಭೆಗೂ ಇರುವ ಸಾಮರಸ್ಯ ಯಾವ ಮಟ್ಟದ್ದು, ಮಹಾಕವಿಗಳ ಉತ್ತಮ ಕೃತಿಗಳ ರಹಸ್ಯವೇನು, ರಸೌಚಿತ್ಯದ ನಿಯಮಗಳಾವುವು, ಕಾವ್ಯಗಳಲ್ಲಿ ತಾರತಮ್ಯ ಬರುವುದು ಯಾವುದರಿಂದ, ಕವಿ ಪ್ರತಿಭೆಯನ್ನು ಗುರುತಿಸಲು ಸಹೃದಯನಿಗೆ ಸಾಧಕಗಳಾವುವು- ಇವೇ ಮುಂತಾದ ಮೂಲಭೂತ ತಾತ್ವಿಕಪ್ರಶ್ನೆಗಳನ್ನು ಪ್ರಥಮತಃ ಎತ್ತಿ, ಎಲ್ಲಕ್ಕೂ ಸರ್ವಗ್ರಾಹ್ಯವಾಗುವಂಥ ನಿಸ್ಸಂದಿಗ್ಧ ಉತ್ತರಗಳನ್ನು ತರ್ಕಶುದ್ಧವೂ ಯುಕ್ತಿಪೂರ್ಣವೂ ಆದ ಶೈಲಿಯಲ್ಲಿ ಸೂಚಿಸಿದ್ದಲ್ಲದೆ ಸಹೃದಯರೊಪ್ಪುವಂತೆ ನೂರಾರು ಸುಂದರ ಕಾವ್ಯ ಲಕ್ಷ್ಯಗಳಲ್ಲಿ ತನ್ನ ವಿನೂತನ ತತ್ವವನ್ನು ಸಮನ್ವಯ ಮಾಡಿ ತೋರಿಸಿದ ಉಜ್ವಲ ಯಶಸ್ಸು ಆನಂದವರ್ಧನನದು. ಆ ಯಶಸ್ಸಿಗೆ ಆಧಾರಸ್ತಂಭವಾದ ಮಹಾಗ್ರಂಥವೇ ಧ್ವನ್ಯಾಲೋಕ (ಧ್ವನಿಯ ಬೆಳಕು). ಮುಖ್ಯವಾಗಿ ಹಿಂದಿನದು ಕವಿಗಳಿಗೆ ಅನುಕೂಲವಾಗುವಂಥ ಕೈಪಿಡಿಗಳನ್ನು ಬರೆದಿದ್ದರು. ಮೊತ್ತಮೊದಲಿಗೆ ಸಹೃದಯರ ದೃಷ್ಟಿಯನ್ನು ಪ್ರಧಾನವಾಗಿಟ್ಟುಕೊಂಡು ಅದರ ದೃಷ್ಟಿಯಿಂದಲೇ ಮೂಲತತ್ತ್ವಗಳನ್ನೆಲ್ಲ ಪುನರ್ವಿವೇಚನೆ ಮಾಡಹೊರಟ ಈ ಗ್ರಂಥಕ್ಕೆ ಸಹೃದಯಾಲೋಕವೆಂಬ ಹೆಸರೂ ಸಮುಚಿತವಾಗಿದೆ. ಹಿಂದಿನ ಲಾಕ್ಷಣಿಕರ ಬರೆವಣಿಗೆ ವಿವರಣಾತ್ಮಕವೂ ವಿಭಜನಾತ್ಮಕವೂ ಆಗಿದ್ದರೆ ಆನಂದವರ್ಧನನದು ವಿಚಾರಾತ್ಮಕವೂ ಸಂಯೋಜನಾತ್ಮಕವೂ ಆಗಿದೆಯೆನ್ನಬಹುದು. ಅಲಂಕಾರ, ಗುಣ ಇತ್ಯಾದಿಗಳ ಭೇದ ಪಬೇಧಗಳ ಸಂಖ್ಯಾನದಲ್ಲಿ ಪ್ರಾಚೀನರಿಗೆ ಶ್ರದ್ಧೆ ಹೆಚ್ಚು. ಪ್ರಕ್ರಿಯೆಗಳ ಸ್ವರೂಪವನ್ನು ಕುರಿತ ಶಾಸ್ತ್ರೀಯ ವಿವೇಚನೆ ಅವರಲ್ಲಿ ಕಡಿಮೆ. ಆದರೆ ಆನಂದವರ್ಧನನ ಗ್ರಂಥವೆಲ್ಲ ಕಾವ್ಯದ ಆತ್ಮ ಸ್ವರೂಪ ಪ್ರದರ್ಶನಕ್ಕಾಗಿಯೇ ಮೀಸಲಾಗಿದೆಯೆಂದರೂ ಸಲ್ಲುತ್ತದೆ. ಬಳಕೆಯ ವ್ಯವಹಾರದಲ್ಲಿ ಕಾಣದ, ಶಾಸ್ತ್ರದ ಪಂಕ್ತಿಗಳಲ್ಲಿ ದೊರೆಯದ, ಆದರೆ ಉತ್ತಮ ಕಾವ್ಯದಲ್ಲಿ ತಪ್ಪದೆ ಇದ್ದೇ ತೀರುವ ಅರ್ಥವಾವುದೋ ಅದೇ ಕಾವ್ಯದ ತಿರುಳು. ಅದಕ್ಕೇ ಧ್ವನಿಯೆಂಬ ಹೆಸರು. ಅದು ಪಂಡಿತರಿಗೂ ಅಗೋಚರವಾಗಬಹುದು. ಕೇವಲ ಸಹೃದಯರು ಮಾತ್ರ ಅದನ್ನು ಅರಿತು ಸವಿಯಲಾರ್ಪರು. ಅದೇ ಮಹಾಕವಿ ವಾಣಿಯ ಪರಮರಹಸ್ಯ. ಹೀಗೆ ಶಬ್ದಗಳಿಗೆ ಮೇಲಾಗಿ ಅರ್ಥಗಳಿಗೆ ಕಾವ್ಯದಲ್ಲಿ ಮಾತ್ರ ಕಾಣುವ ವ್ಯಂಜಕತ್ವ ಶಕ್ತಿಯನ್ನು ತಾರ್ಕಿಕರೂ ಮೀಮಾಂಸಕರೂ ವೈಯಾಕರಣರೂ ಒಪ್ಪುವಂತೆ ಅವರವರ ದಾರ್ಶನಿಕ ಯುಕ್ತಿಗಳಿಂದಲೇ ಸಾಧಿಸಿರುವ ಆನಂದವರ್ಧನನ ಸಾಮರ್ಥ್ಯವನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಧ್ವನಿಯೆಂದರೆ ಯಾರೋ ಕೆಲವರಿಗೆ ಮಾತ್ರ ಕಾಣುವ ಭ್ರಮೆ, ಅದನ್ನು ಇನ್ನೊಬ್ಬರಿಗೆ ತೋರಿಸುವುದು ಅಶಕ್ಯ ಎಂಬ ಅಪವಾದವನ್ನು ಸಮೂಲವಾಗಿ ಉಚ್ಛಾಟನೆ ಮಾಡುವಂತೆ ಧ್ವನಿಪ್ರಪಂಚದ ವೈಶಾಲ್ಯವನ್ನು ಸುಸ್ಪಷ್ಟವಾಗಿ ಚಿತ್ರಿಸಿ, ಅದರ ಒಂದೊಂದು ಪರಿಯನ್ನೂ ಸೋದಾಹರಣವಾಗಿ ನಿರ್ಣಯಿಸಿರುವ ಕಾರ್ಯವಂತೂ ಅಚ್ಚರಿಗೊಳಿಸುವಂಥದು. ಹೀಗೆ ಧ್ವನಿತತ್ವದ ಪ್ರತಿಷ್ಠಾಪನೆ, ಸ್ವರೂಪ ನಿರೂಪಣೆ, ಶಾಸ್ತ್ರೀಯ ಯುಕ್ತಿಗಳಿಂದ ಸಮರ್ಥನೆ, ಭೇದ-ಪ್ರಭೇದ ನಿರ್ಣಯ, ಧ್ವನಿತತ್ತ್ವದ ಅಂಗೀಕಾರದಿಂದಾಗುವ ಲಾಭ ಹಾಗೂ ತಿರಸ್ಕಾರದಿಂದಾಗುವ ಹಾನಿಗಳ ಪ್ರದರ್ಶನ ಇಷ್ಟನ್ನೂ ಒಳಗೊಂಡಿರುವ ಗ್ರಂಥವೇ ಧ್ವನ್ಯಾಲೋಕವೆನ್ನಬಹುದು. ಸಾಹಿತ್ಯ ವಿಮರ್ಶೆಯ ಮೂಲವಿಚಾರಗಳ ಮಂಡನದಲ್ಲಿ, ವಿವೇಚನೆಯಲ್ಲಿ, ವಿಸ್ತರಣೆಯಲ್ಲಿ ಆನಂದವರ್ಧನ ಹೊಸ ಹೆಜ್ಜೆಗಳನ್ನಿಟ್ಟಿದ್ದಾನೆ. ಅವನ ಅಭಿಪ್ರಾಯವನ್ನು ಒಪ್ಪದವರೂ ಕೂಡ ಆತನನ್ನು ಗೌರವಿಸುವಷ್ಟು ದೊಡ್ಡ ಕಾರ್ಯ ಮಾಡಿದ್ದಾನೆ.

ವ್ಯಾಖ್ಯಾನ

ಬದಲಾಯಿಸಿ

ಆತನ ಯಶಸ್ಸಿಗೆ ಕಳಸವಿಡುವಂತೆ ಅಭಿನವಗುಪ್ತರಂಥ ಮಹಾಚಾರ್ಯರೇ ಧ್ವನ್ಯಾಲೋಕಕ್ಕೆ ವ್ಯಾಖ್ಯಾನ ಬರೆದು ಧನ್ಯರಾದರು. ಸಂಸ್ಕೃತ ಅಲಂಕಾರಶಾಸ್ತ್ರದ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭವಾದುದೇ ಆನಂದವರ್ಧನನಿಂದ. ಮುಂದಿನವರೆಲ್ಲ ಆತನ ತತ್ತ್ವದಿಂದ ಪ್ರಚೋದಿತರಾದವರೇ. ವಿರೋಧಿಗಳೂ ಕೂಡ ಆತನ ಪರಿಭಾಷೆಯನ್ನು ತಪ್ಪೆಂದರೇ ಹೊರತು ಮೂಲತತ್ತ್ವವನ್ನಲ್ಲ. ಹೀಗೆ ನೂತನ ಸಾಹಿತ್ಯವಿಮರ್ಶೆಗೆ ನಾಂದಿ ಹಾಕಿಕೊಟ್ಟ ಆನಂದವರ್ಧನ ಪ್ರಾಚೀನ ರಸಿಕರ ಮೆಚ್ಚುಗೆಗೆ ಪಾತ್ರನಾದಂತೆ ಆಧುನಿಕ ವಿಮರ್ಶಕರ ಪ್ರಶಂಸೆಯನ್ನೂ ಗಳಿಸಿದ್ದಾನೆ.ಪಾಶ್ಚಾತ್ಯ ಸಂಸ್ಕೃತ ವಿದ್ವಾಂಸ ಡೇನಿಯಲ್ ಎಚ್.ಎಚ್.ಇಂಗಾಲಿಸ್‍ ತನ್ನ ಸಂಗಡಿಗೊರೊಂದಿಗೆ ಈ ಧ್ವನ್ಯಾಲೋಕವನ್ನು ಅಭಿನವಗುಪ್ತನ ವ್ಯಾಖ್ಯಾನದೊಂದಿಗೆ ಆಂಗ್ಲ ಭಾಷೆಗ ತರ್ಜುಮೆಗೊಳಿಸಿದ್ದಾರೆ[].

ಧ್ವನ್ಯಾಲೋಕ

ಬದಲಾಯಿಸಿ

ಧ್ವನ್ಯಾಲೋಕದಲ್ಲಿ ಛಂದೋಬದ್ಧವಾದ, ಸೂತ್ರಪ್ರಾಯವಾದ ಕಾರಿಕೆಗಳಿರುವಂತೆ ಇವುಗಳ ಮೇಲಿನ ವಿಸ್ತೃತ ವಿವರಣೆಯನ್ನೊಳಗೊಂಡ ಗದ್ಯವೃತ್ತಿಯೂ ಇದೆ. ಲಕ್ಷ್ಯ ಪದ್ಯಗಳಿರುವುದೆಲ್ಲ ವೃತ್ತಿಭಾಗದಲ್ಲಿಯೇ. ವಿವೇಚಿಸಲ್ಪಟ್ಟ ಮುಖ್ಯಾಂಶಗಳನ್ನು ಸಂಗ್ರಹಿಸುವ ಪರಿಕರಶ್ಲೋಕಗಳಾದರೂ ವೃತ್ತಿಯಲ್ಲೇ ಅಂತರ್ಗತವಾಗುತ್ತದೆ. ಅಲಂಕಾರಶಾಸ್ತ್ರದ ಮುಂದಿನ ಲೇಖಕರೆಲ್ಲರೂ ಆನಂದವರ್ಧನನೇ ಕಾರಿಕಾ-ವೃತ್ತಿ ಗ್ರಂಥಗಳೆರಡನ್ನೂ ಬರೆದನೆಂದು ಭಾವಿಸುವ ಪರಂಪರೆಯಿದೆ. ಆದರೆ ಅಭಿನವಗುಪ್ತರ ವ್ಯಾಖ್ಯಾನ-ಲೋಕದಲ್ಲಿ ಕಾರಿಕಾಕಾರ ವೃತ್ತಿಕಾರ ಎಂಬ ಭೇದನಿರ್ದೇಶ ಮೇಲಿಂದ ಮೇಲೆ ಬರುವುದನ್ನು ಅನುಲಕ್ಷಿಸಿ ಇದು ಭಿನ್ನಕರ್ತೃತೆಯ ದ್ಯೋತಕವೆನ್ನುವ ಆಧುನಿಕ ವಿದ್ವಾಂಸರಿದ್ದಾರೆ. ಇದಕ್ಕೆ ವ್ಯಾಖ್ಯಾಶೈಲಿಯೇ ಮುಂತಾದ ಉಪಪತ್ತಿ ಹೇಳಿ, ಏಕಕರ್ತೃಕವೆಂಬ ಭಾವನೆಯನ್ನು ಪುಷ್ಟೀಕರಿಸುವವರೂ ಉಂಟು. ಕೇವಲ ಕಾರಿಕೆಗಳಲ್ಲಿ ಧ್ವನಿಪ್ರಸ್ಥಾನದ ಸಾಂಗೋಪಾಂಗ ಪ್ರತಿಷ್ಠಾಪನೆ ಒಂದೂ ಉದಾಹರಣೆಯಿಲ್ಲದೆಯೇ ನೆರವೇರುವುದು ಅಶಕ್ಯವೆನಿಸುವುದರಿಂದಲೂ ಧ್ವನಿಕಾರನ ನಾಮಾಂತರ ಎಲ್ಲಿಯೂ ಉಪಲಬ್ಧವಿಲ್ಲದಿರುವುದರಿಂದಲೂ (ಸಹೃದಯವೆಂಬ ಅಂಕಿತನಾಮ ಶಕ್ಯವೆನಿಸುವುದು ಕಷ್ಟ) ಅಭಿನವಗುಪ್ತರೇ ಬೇರೆಡೆಗಳಲ್ಲಿ ಈ ಭೇದನಿರ್ದೇಶದ ಬದಲು ಅಭೇದವನ್ನು ಹೇಳಿರುವುದರಿಂದಲೂ ಆನಂದವರ್ಧನನೇ ಧ್ವನ್ಯಾಲೋಕದ ಏಕೈಕ ಕರ್ತೃವೆಂಬ ವಾದ ಪುಷ್ಟೀಕೃತವಾಗುತ್ತದೆ. ವಿದ್ವಾಂಸರಲ್ಲಿ ಈ ಚರ್ಚೆ ಇನ್ನೂ ಮುಗಿದಿಲ್ಲ. ಆನಂದವರ್ಧನ ಗ್ರಂಥವನ್ನು ಆರಂಭಿಸುವುದೇ ಪೂರ್ವಪಕ್ಷಗಳ ಪಟ್ಟಿಯಿಂದ. ಧ್ವನಿಯೆಂಬುದೇ ಇಲ್ಲ. ಧ್ವನಿಯೆಂದರೆ ಲಕ್ಷಣಾವೃತ್ತಿಗಿಂತ ಹೆಚ್ಚೇನೂ ಆಗಲಾರದು. ಬಾಯಿಯಿಂದ ಆಡಿ ತೋರಿಸಲಾಗದ ರಹಸ್ಯವೇ ಧ್ವನಿ-ಇತ್ಯಾದಿ ಆಕ್ಷೇಪಣೆಗಳನ್ನು ಗ್ರಂಥಕಾರ ಸವಿಸ್ತಾರವಾಗಿ ಮೊದಲು ಉಲ್ಲೇಖಿಸಿದ್ದಾನೆ. ಮೊದಲನೆಯ ಅಭಾವವಾದಿಗಳು ಪ್ರಸಿದ್ಧವಾದ ಗುಣ, ಅಲಂಕಾರ ಇತ್ಯಾದಿಗಳಲ್ಲಿ ಧ್ವನಿತತ್ವವನ್ನು ಅಂತರ್ಗತಗೊಳಿಸಲು ಹವಣಿಸಿದರೆ, ಎರಡನೆಯ ಭಾಕ್ತವಾದಿಗಳು ಧ್ವನಿಯೆಂಬ ಅಪೂರ್ವ ಶಬ್ಧವ್ಯಾಪಾರವನ್ನೊಪ್ಪದೆ ಪ್ರಸಿದ್ಧ ಲಾಕ್ಷಣಿಕ ಪ್ರಯೋಗವೇ ಧ್ವನಿಯ ಮೂಲವೆನ್ನುತ್ತಾರೆ. ಮೂರನೆಯ ವಾದಿಗಳು ಧ್ವನಿಗೆ ಲಕ್ಷಣ ಹೇಳುವುದೇ ಅಸಾಧ್ಯವೆನ್ನುತ್ತಾರೆ. ಇವುಗಳಲ್ಲಿ ಒಂದೊಂದು ಪೂರ್ವಪಕ್ಷವನ್ನೂ ಆನಂದವರ್ಧನ ಕ್ರಮಕ್ರಮವಾಗಿ ಖಂಡಿಸಿ, ತನ್ನ ಸಿದ್ಧಾಂತವನ್ನು ಮಂಡಿಸಿ, ಧ್ವನಿಪ್ರಸ್ಥಾನದ ಪರಮಾಚಾರ್ಯನೆನಿಸಿಕೊಳ್ಳುತ್ತಾನೆ. ಪೂರ್ವಪಕ್ಷಗಳ ನಿವಾರಣೆಯ ಜೊತೆಜೊತೆಗೇ ಸ್ವಸಿದ್ಧಾಂತ ಪೋಷಣೆಯಾಗಿರುವುದು ಈ ಗ್ರಂಥದ ವೈಶಿಷ್ಟ್ಯವೆನ್ನಬಹುದು. ಗುಣಾಲಂಕಾರಗಳಿಂದ ಸಂಸ್ಕೃತವಾದ ಶಬ್ದಾರ್ಥವೇ ಕಾವ್ಯವೆಂಬುದು ಪ್ರಾಚೀನರ ಮತ. ಕಾವ್ಯದ ಪರ್ಯವಸಾನವೇ ರಸ ಅಥವಾ ಸಹೃದಯ ಮನಃಪ್ರೀತಿ. ಕಾವ್ಯವನ್ನು ವಿಶ್ಲೇಷಿಸಿದರೆ ಯಾರಿಗಾದರೂ ಕಾಣತಕ್ಕ ಅಂಶವೆಂದರೆ ಶಬ್ದಾರ್ಥಗಳ ವೈಶಿಷ್ಟ್ಯವಾದ ಗುಣ ಹಾಗೂ ಅಲಂಕಾರಗಳೇ. ಹೀಗೆ ಶಾಸ್ತ್ರತಃ ಗುಣ ಅಲಂಕಾರ ರಸಗಳನ್ನು ಬೇರ್ಪಡಿಸಿ ವಿವರಿಸಬಹುದಾದರೂ ಸಹೃದಯನ ಅನುಭೂತಿಯನ್ನು ಗಮನಿಸಿದರೆ ಇವು ಅವಿಭಾಜ್ಯ ಘಟಕಗಳೇ ಸರಿ. ಈ ತತ್ತ್ವವನ್ನು ಪೂರ್ಣವಾಗಿ ಮನಗಂಡ ಕೀರ್ತಿ ಆನಂದವರ್ಧನನದು. ನಿರ್ಗುಣವೂ ನಿರಲಂಕಾರವೂ ಆದ ಶಬ್ದಾರ್ಥಗಳಿಂದ ರಸಾಸ್ವಾದ ಬಾರದು. ಆದರೆ ಗುಣಾಲಂಕಾರಗಳಿಗೂ ರಸಕ್ಕೂ ಇರುವ ಸಾಕ್ಷಾತ್ ಸಂಬಂಧದ ವಿವೇಚನೆಯನ್ನು ಆನಂದವರ್ಧನನ ಹಿಂದಿನವರಾರೂ ಶಾಸ್ತ್ರೀಯವಾಗಿ ಕೈಗೊಂಡಿರಲಿಲ್ಲ. ಇದನ್ನು ಸಮರ್ಥವಾಗಿ ನಿರ್ವಹಿಸಿರುವುದೇ ಧ್ವನ್ಯಾಲೋಕದ ವೈಶಿಷ್ಟ್ಯ. ಕವಿಯ ಪ್ರತಿಭಾವೇಶಕ್ಕೆ ಬೀಜರೂಪವಾದ ರಸಾದಿ ಅನುಭೂತಿಯೇ ಸಹೃದಯನ ಹೃದಯದಲ್ಲಿ ಕಡೆಗೆ ವಿಕಸಿತವಾಗುತ್ತದೆ. ಈ ಕಾವ್ಯೈಕ ಗೋಚರವಾದ ಅಥವಾ ಅಲೌಕಿಕವೆನ್ನಬಹುದಾದ ರಸದ ಮಾಧ್ಯಮವೇ ಶಬ್ದಾರ್ಥಗಳ ವೈಶಿಷ್ಟ್ಯ ಅಥವಾ ಸಾಹಿತ್ಯ ಅಥವಾ ಗುಣಾಲಂಕಾರ. ಇದನ್ನು ರಮಣೀಯತೆಯೆಂದ ಮಾತ್ರಕ್ಕೆ ಶಾಸ್ತ್ರೀಯವಾಗಿ ವಿವೇಚಿಸಿದಂತಾಗುವುದಿಲ್ಲ. ಆ ಮಾಧ್ಯಮದ ಕಾರ್ಯವನ್ನು ವಿವರಿಸುವುದಕ್ಕಾಗಿ ಶಬ್ದಾರ್ಥಗಳ ವ್ಯಾಪಾರಗಳೆಷ್ಟೆಂದು ಕೂಲಂಕಷವಾಗಿ ವಿಚಾರಮಾಡಬೇಕಾಗುತ್ತದೆ. ಗುಣಗಳ ಪಟ್ಟಿಯಿಂದಾಗಲಿ ಅಲಂಕಾರಗಳ ಪಟ್ಟಿಯಿಂದಾಗಲಿ, ಕಾವ್ಯಮಾತ್ರ ವಿಶ್ರಾಂತವಾದ ಶಬ್ದಾರ್ಥ- ವ್ಯಾಪಾರದ ಸ್ಪಷ್ಟಕಲ್ಪನೆಯಾಗದು. ಅಸ್ಪಷ್ಟವಾಗಿ ಅದರ ಏಕದೇಶವನ್ನು ಮಾತ್ರ ಅದು ವಿವರಿಸಬಹುದು, ಅಷ್ಟೇ. ಈ ದೃಷ್ಟಿಯಿಂದ ಅನಂದವರ್ಧನ ಪ್ರಾಚೀನ ಲಾಕ್ಷಣಿಕರ ಉಕ್ತಿಗಳನ್ನು ಪುನರ್ವಿಮರ್ಶೆಗೆ ಗುರಿಮಾಡುತ್ತಾನೆ. ರಸಾದಿಗಳಿಗೆ ಸಲ್ಲಬೇಕಾದ ಪ್ರಥಮ ಪ್ರಾಶಸ್ತ್ಯವನ್ನೀಯುತ್ತಾನೆ. ಗುಣಗಳನ್ನು ರಸಧರ್ಮಗಳೆಂದೂ ಅಲಂಕಾರಗಳು ರಸೋಚಿತವಾದಾಗ ಮಾತ್ರ ಗ್ರಾಹ್ಯವೆಂದೂ ಸಿದ್ಧಾಂತಿಸುತ್ತಾನೆ. ಪ್ರಾಚೀನ ಲಾಕ್ಷಣಿಕರ ಅಭಿಪ್ರಾಯ ಕೂಡ ಹೀಗೆಯೇ ಇದ್ದಿರಬಹುದಾದರೂ ಅವರು ಇಷ್ಟು ಸ್ಪಷ್ಟವಾಗಿ ಹೇಳಿರಲಿಲ್ಲ. ಶಬ್ದಾರ್ಥಗಳಿಗೆ ಕಾವ್ಯದಲ್ಲಿ ಅಸಾಧಾರಣ ವ್ಯಾಪಾರವಿದೆಯೆಂಬುದನ್ನು ಅಸ್ಫುಟವಾಗಿ ಅರಿತರೂ ಅದರ ವಿಮರ್ಶೆಗೆ ಹೋಗಿರಲಿಲ್ಲ. ಅದಕ್ಕೆ ವ್ಯಂಜನಾ ಅಥವಾ ಧ್ವನಿಯೆಂಬ ನಾಮಕರಣಮಾಡಿ, ಅದರ ವಿಮರ್ಶೆಗಾಗಿಯೇ ಇಡೀ ಗ್ರಂಥವನ್ನು ಬರೆದವನೆಂದರೆ ಅನಂದವರ್ಧನನೇ. ಈ ವಿಮರ್ಶೆಯಲ್ಲಿ ಆತನ ಅಗಾಧಶಾಸ್ತ್ರಪಾಂಡಿತ್ಯ ಹೆಜ್ಜೆಹೆಜ್ಜೆಗೂ ಕಾಣುತ್ತದೆ. ಶಬ್ದವ್ಯಾಪಾರವನ್ನು ಮೊದಲು ವಿವೇಚನೆ ಮಾಡಿದವರೆಂದರೆ ವೈಯಾಕರಣರು. ಇವರು ರೂಢವಾದ ಪ್ರಸಿದ್ಧ ಅರ್ಥವನ್ನು ಬೋಧಿಸುವ ಶಬ್ದಶಕ್ತಿಗೆ ಅಭಿಧಾ ಎಂಬ ಹೆಸರನ್ನಿತ್ತಿದ್ದರು. ಸಾದೃಶ್ಯಾದಿ ಸಂಬಂಧಗಳ ಮೂಲಕ ಮುಖ್ಯಾರ್ಥಕ್ಕೆ ಪ್ರತಿಯಾಗಿ ಎರಡನೆಯ ಗೌಣಾರ್ಥ ಬರುವ ವಾಕ್ಯಪ್ರಯೋಗಗಳನ್ನು ಪರಾಮರ್ಶಿಸಿ ಲಕ್ಷಣಾವೃತ್ತಿಯ ವಿವೇಚನೆ ಮಾಡಿದ್ದವರು ಮೀಮಾಂಸಕರು. ಲೋಕ ವ್ಯವಹಾರದಲ್ಲೂ ಶಾಸ್ತ್ರವ್ಯವಹಾರದಲ್ಲೂ ಈ ಎರಡು ಶಬ್ದವೃತ್ತಿಗಳದೇ ಸಾಮ್ರಾಜ್ಯ. ಮೊದಲನೆಯದು ಕೇವಲ ಶಬ್ದವೃತ್ತಿ. ಲಕ್ಷಣ ಅರ್ಥವೃತ್ತಿಯೂ ಆಗಬಹುದು. ವಾಕ್ಯಾರ್ಥದ ಒಟ್ಟು ಅಭಿಪ್ರಾಯದ ವಿವರಣೆಗೆ ಕೆಲವು ಮೀಮಾಂಸಕರು ತಾತ್ಪರ್ಯವೃತ್ತಿಯೆಂಬ ಮೂರನೆಯದನ್ನೂ ಒಪ್ಪಿದ್ದರು. ಕಾವ್ಯದಲ್ಲಿ ಈ ಮೂರೂ ಇರುತ್ತವೆ ಎನ್ನುವುದು ನಿಜ; ಆದರೆ ಈ ಮೂರನ್ನೂ ಮೀರಿದ ವ್ಯಂಜನಾವೃತ್ತಿ ಕೂಡಿದಾಗ ಮಾತ್ರ ಕಾವ್ಯ ಕಾವ್ಯತ್ವವನ್ನು ಪಡೆಯುತ್ತದೆಯೆಂಬ ಪರಮರಹಸ್ಯ ಆನಂದವರ್ಧನನಿಂದ ಮೊದಲಿಗೆ ನಿರ್ಣೀತವಾಯಿತು. ವಾರ್ತಾ-ಶಾಸ್ತ್ರ-ಕಾವ್ಯ ಇವನ್ನು ಬೇರ್ಪಡಿಸುವ ಒಂದೇ ತತ್ತ್ವವೆಂದರೆ ಧ್ವನಿ. ಧ್ವನಿಯೇ ಕಾವ್ಯದ ಆತ್ಮ. ಮೊದಲ ಎರಡರಲ್ಲಿ ಧ್ವನಿಯಿಲ್ಲ. ಅದರಿಂದಲೇ ಅವು ಕಾವ್ಯವಲ್ಲ. ಧ್ವನಿಯಿದ್ದಾಗ ಕಾವ್ಯವಾಗದೆ ಇರುವುದೂ ಶಕ್ಯವಿಲ್ಲ. ಈ ಧ್ವನಿವ್ಯಾಪಾರ ಶಬ್ದಗತವೂ ಹೌದು, ಅರ್ಥಗತವೂ ಹೌದು, ಅಭಿಧಾಮೂಲವೂ ಆಗಬಹುದು ಲಕ್ಷಣಾಮೂಲವೂ ಆಗಬಹುದು. ಶಬ್ದಾರ್ಥ ಎರಡೂ ಕಾವ್ಯವಲ್ಲದ ಕಡೆ ವಾಚಕಗಳು ಮಾತ್ರ. ಆದರೆ ಕಾವ್ಯದಲ್ಲಿ ಅವು ವ್ಯಂಜಕಗಳೂ ಆಗಿರುತ್ತವೆ. ವಾಚ್ಯಾರ್ಥ ಲಕ್ಷ್ಯಾರ್ಥಗಳು ಎಲ್ಲರ ಪ್ರತೀತಿಗೂ ಬರುತ್ತವೆ. ವ್ಯಂಗ್ಯಾರ್ಥ ಕೇವಲ ಸಹೃದಯರಿಗೆ ಗೋಚರ. ಕಾವ್ಯದಲ್ಲಿ ಶಬ್ದಾರ್ಥಗಳಿಂದ ವ್ಯಂಗ್ಯವಾಗುವ ವಿಷಯ ಯಾವುದು ಎಂಬ ಪ್ರಶ್ನೆ ಬರುತ್ತದೆ. ತಾತ್ವಿಕವಾಗಿ ನೋಡಿದರೆ ಮೊದಲನೆಯಸ್ಥಾನ ರಸಾದಿಗಳಿಗೆ ಮೀಸಲು. ಏಕೆಂದರೆ ಅವಕ್ಕೆ ವ್ಯಂಗ್ಯದಶೆಯೊಂದೇ ವಿನಾ ವಾಚ್ಯದಶೆಗೆ ಅವಕಾಶವಿಲ್ಲ. ರಸಾದಿಗಳನ್ನು ಶಬ್ದಾರ್ಥಗಳಿಂದ ಸೂಚಿಸಬಹುದೇ ಹೊರತು, ಸಹೃದಯನಲ್ಲಿ ಮೂಡಿಸಬಹುದೇ ಹೊರತು ಅವುಗಳ ಹೆಸರನ್ನು ಹೇಳಿ ಅನುಭವಕ್ಕೆ ತಂದುಕೊಡಲಾಗುವುದಿಲ್ಲ. ಆದರೆ ವಿಧಿ-ನಿಷೇಧಾದಿ ವಸ್ತುಗಳನ್ನೂ ಅಭಿಪ್ರಾಯ ವಿಶೇಷಗಳನ್ನೂ ವಾಚ್ಯವಾಗಿ ಹೇಳುವುದು ಸಾಧ್ಯವಿರುವಂತೆ ವ್ಯಂಗ್ಯವಾಗಿಯೂ ಸೂಚಿಸಬಹುದು. ವಾಚ್ಯಅಲಂಕಾರಗಳಂತೆ ವ್ಯಂಗ್ಯ ಅಲಂಕಾರಗಳು ಇರುವುದು ಅಶಕ್ಯವಲ್ಲ. ಹೀಗೆ ವ್ಯಂಗ್ಯಗಳು ಕಾವ್ಯದಲ್ಲಿ ಮೂರು ಬಗೆ; 1. ರಸಾದಿ; 2. ವಸ್ತು: 3. ಅಲಂಕಾರ ಮೂರರಲ್ಲೂ ವ್ಯಂಜಕತ್ವವಿರುತ್ತದೆ. ವ್ಯಂಜಕತ್ವವೊಂದೇ ಇರುವುದು ಶಕ್ಯವಿಲ್ಲವಾಗಿ ವಾಚಕತ್ವವೂ ಅದರ ಹಿಂದೆ ಇದ್ದೇ ಇರುತ್ತದೆ. ವ್ಯಂಜಕತ್ವವೇ ವಾಚಕತ್ವಕ್ಕಿಂತ ಕವಿ ವಿವಕ್ಷೆಯಲ್ಲಿ ಪ್ರಧಾನವಾಗಿದ್ದಾಗ ಉತ್ತಮಕಾವ್ಯ ಅಥವಾ ಧ್ವನಿಕಾವ್ಯವಾಗುತ್ತದೆ. ಅಪ್ರಧಾನವಾಗಿದ್ದಾಗ ಗುಣೀಭೂತವ್ಯಂಗ್ಯ ಅಥವಾ ಮಧ್ಯಮಕಾವ್ಯವಾಗುತ್ತದೆ. ಇಲ್ಲವೆನ್ನುವ ಮಟ್ಟಕ್ಕಿಳಿದುಬಿಟ್ಟರೆ ಅಕಾವ್ಯ ಅಥವಾ ಚಿತ್ರಕಾವ್ಯವೆನ್ನಬಹುದು. ಹೀಗೆ ಕಾವ್ಯದ ಮಟ್ಟವನ್ನಳೆಯಲು ಧ್ವನಿತತ್ವ ಅತ್ಯಂತ ಉಪಯುಕ್ತವಾಗುತ್ತದೆ. ಧ್ವನಿತತ್ತ್ವದ ವ್ಯಾಪಕದೃಷ್ಟಿಕೋನದಿಂದ ನೋಡಿದರೆ ಅಲಂಕಾರಗಳೆಲ್ಲ ವಾಚ್ಯಾರ್ಥ ಇಲ್ಲವೆ ಲಕ್ಷ್ಯಾರ್ಥದ ಪ್ರಕಾರ ವಿಶೇಷಗಳೆನಿಸಿ ಪರಿಮಿತವೆನಿಸುತ್ತವೆ. ಯಾವುದೇ ಅಲಂಕಾರದ ಅಥವಾ ಅಲಂಕಾರಗಳ ಕ್ಷೇತ್ರ ಅಪರಿಮಿತವಾದ ಧ್ವನಿಯ ವಿಸ್ತಾರವನ್ನು ಪಡೆಯಲಾರದು. ಅಲಂಕಾರಾದಿ ಮುಖ್ಯಾರ್ಥದ ಪ್ರಾಧಾನ್ಯವಿವಕ್ಷೆಯಿದ್ದಾಗಲೆಲ್ಲ, ರಸಾದಿ ವ್ಯಂಗ್ಯಾರ್ಥ ಗುಣೀಭೂತವಾಗಿ, ಕಾವ್ಯ ಗಣೀಭೂತವ್ಯಂಗ್ಯವೆನಿಸುವುದೇ ಹೊರತು ಧ್ವನಿಯೆನಿಸದು. ಆದರೂ ಅದರ ಸೌಂದರ್ಯಕ್ಕೆ ಬಾಧೆಯೇನೂ ಇಲ್ಲ. ರಸಾದಿಶೂನ್ಯವಾದ ರಚನೆ ಮಾತ್ರ ಹೇಯ. ತಾತ್ವಿಕವಾಗಿ ನೋಡಿದರೆ ಕವಿಪ್ರತಿಭೆಯಲ್ಲಿ ರಸಾದಿಪರತ್ವ ಶೂನ್ಯವಾಗುವುದೇ ಅಸಂಭವ. ಏಕೆಂದರೆ ಪ್ರತಿಭಾ ವಿಷಯವಾದ ನೀರಸವಸ್ತು ಕೂಡ ಯಾವುದೋ ಒಂದು ರಸಾದಿಗೆ ವಿಭಾವವಾಗಿಯೇ ಇರುತ್ತದೆ. ದುಷ್ಕರ ಚಿತ್ರಬಂಧಾದಿಗಳು ಮಾತ್ರ ನೀರಸವಾಗಬಹುದು ಅಷ್ಟೆ. ಕೃತಿಮತೆ ಸಂಸ್ಕøತ ಸಾಹಿತ್ಯದಲ್ಲಿ ಹೆಚ್ಚಾಗುತ್ತಿದ್ದಾಗ ಸಮಯೋಚಿತ ಸಲಹೆಯನ್ನು ಧ್ವನಿತತ್ತ್ವ ನೀಡಿತೆನ್ನಬಹುದು. ಧ್ವನಿಯ ಪ್ರಕಾರಗಳೆಷ್ಟು? ಉದಾಹರಣೆಗಳು ಯಾವುವು? ಎಂಬುದನ್ನು ವಿವರವಾಗಿ ಅರಿಯಲು ಧ್ವನ್ಯಾಲೋಕವನ್ನೇ ಓದಬೇಕು. ಗ್ರಂಥದ ಎರಡನೆಯ ಅಧ್ಯಾಯದಲ್ಲೆಲ್ಲ ವ್ಯಂಗ್ಯಮುಖೇನ ಧ್ವನಿಯ ವಿವರಣೆ ಬಂದರೆ ವ್ಯಂಜಕಗಳ ವಿವರಣೆ ಮೂರನೆಯದರಲ್ಲಿ ತುಂಬಿದೆ. ಶಬ್ದಭಾಗಗಳು ಕೂಡ ರಸಕ್ಕೆ ವ್ಯಂಜಕವಾಗುವುದನ್ನೂ ಇಡೀಪ್ರಬಂಧವೇ ರಸಪರವಾಗಿರುವ ಸೂಕ್ಷ್ಮತತ್ತ್ವವನ್ನೂ ಮಾರ್ಮಿಕವಾಗಿ ಇಲ್ಲಿ ವಿವರಿಸಲಾಗಿದೆ. ಹೀಗೆ ರಸದೃಷ್ಟಿಯಿಂದ ಕವಿಗಳ ಮಾರ್ಗದರ್ಶನಕ್ಕೆ ಹೊರಟ ಆನಂದವರ್ಧನ ಕಥಾವಸ್ತುವಿನ ಯೋಜನೆ, ಪಾತ್ರಚಿತ್ರಣ, ಶೈಲಿ ಎಲ್ಲವನ್ನೂ - ನಾಟಕ, ಮಹಾಕಾವ್ಯ, ಭಾವಗೀತೆ, ಗದ್ಯ ಇತ್ಯಾದಿ ವಿವಿಧ ಕಾವ್ಯಪ್ರಕಾರಗಳಲ್ಲಿ ಹೇಗೆ ರಸೌಚಿತ್ಯ ನಿಯಮ ನಿಯೋಜಿಸುತ್ತದೆಂಬುದನ್ನು ಸುಂದರ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾನೆ. ಕಡೆಯ ಅಧ್ಯಾಯದಲ್ಲಿ ಈ ತತ್ತ್ವದ ಅನುಸರಣೆಯಿಂದ ಹೇಗೆ ಪ್ರತಿಭಾವಂತ ಕವಿಗೆ ಸಿದ್ಧಿಸುವುದೆಂದು ತೋರಿಸಿದ್ದಾನೆ. ರಾಮಾಯಣ ಮಹಾಭಾರತ ಮುಂತಾದ ಮಹಾಕಾವ್ಯಗಳಲ್ಲಿ ಕೂಡ ಹೇಗೆ ಪ್ರಧಾನವಾಗಿ ಕರುಣ ಹಾಗೂ ಶಾಂತರಸಗಳು ಬಂದಿವೆಯೆಂದು ವಿವರಿಸಿದ್ದಾನೆ. ಹೀಗೆ ಧ್ವನ್ಯಾಲೋಕದಲ್ಲಿ ಶಾಸ್ತ್ರೀಯವಾದ ಕಾವ್ಯತತ್ತ್ವ ಪ್ರತಿಪಾದನೆಯ ಜೊತೆಗೆ ಸಾರಗ್ರಾಹಿಯಾದ ಸಾಹಿತ್ಯವಿಮರ್ಶೆ ಕೂಡ ಮೂಡಿ ಬಂದಿದೆ. ನಾಟಕಾದಿಗಳಿಗೆ ಸೀಮಿತವಾಗಿದ್ದ ರಸಸೂತ್ರವನ್ನು ಯಥೋಚಿತವಾಗಿ ಕಾವ್ಯಕ್ಷೇತ್ರಕ್ಕೂ ಸಮನ್ವಯ ಮಾಡಿದ್ದರಿಂದ ಸಂಸ್ಕೃತ ಅಲಂಕಾರಶಾಸ್ತ್ರದ ಇತಿಹಾಸದಲ್ಲಿ ಆನಂದವರ್ಧನನ ಕೀರ್ತಿ ಅಜರಾಮರವಾಗಿದೆ.ಪಾಶ್ಚಾತ್ಯ ಸಂಸ್ಕೃತ ವಿದ್ವಾಂಸ ಡೇನಿಯಲ್ ಎಚ್.ಎಚ್.ಇಂಗಾಲಿಸ್‍‍ರವರ ಪ್ರಕಾರ ಸಂಸ್ಕೃತ ಸಾಹಿತ್ಯ ವಿಮರ್ಶಕರಲ್ಲಿಯೇ ಅತ್ಯಂತ ಪ್ರತಿಭಾವಂತ..[]

ಉಲ್ಲೇಖಗಳು

ಬದಲಾಯಿಸಿ
  1. Anandavardhana; Abhinavagupta; Daniel H.H. Ingalls; J.M. Masson; M.V.Patwardhan, The Dhvanyaloka of Anandavardhana with the Locana of Abhinavagupta, Harvard Oriental Series
  2. Vidyakara; Daniel H.H. Ingalls, An Anthology of Sanskrit Court Poetry, Harvard Oriental Series, p. 48


ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: