ಸದಸ್ಯ:ಜಯಲಕ್ಷ್ಮೀ ಭಟ್/ನನ್ನ ಪ್ರಯೋಗಪುಟ3

ಹುಲೇಕಲ್ ಪ್ರತಿನಾಮಕ ಲಕ್ಷ್ಮಿನಾರಾಯಣ ಪುರ

ಬದಲಾಯಿಸಿ

ಶ್ರೀ ವ್ಯಾಸರಾಯರ ಪಾದಸ್ಪರ್ಷದಿಂದಾಗಿ ಕ್ಷೇತ್ರ ಪಾವಿತ್ರತೆ ಪಡೆದಿರುವ ಸ್ವಾದಿ ಕ್ಷೇತ್ರ ವ್ಯಾಪ್ತಿಯ ಹುಲೇಕಲ್‌ನ ಶ್ರೀ ಲಕ್ಷ್ಮಿನಾರಾಯಣ ಶಿಲಾದೇಗುಲಕ್ಕೆ ಸುಮಾರು ೪೬೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಹುಲೇಕಲ್ ಹೆಸರು ೧೨ನೇ ಶತಮಾನದ ಶಿಲಾಲೇಖನಗಳಲ್ಲಿಯೂ ಕಂಡುಬರುವುದರಿಂದ ಈ ಊರಿಗೆ ಸಹಸ್ರಾರು ವರ್ಷಗಳ ಇತಿಹಾಸವಿರುವುದು ಖಚಿತವಾಗುತ್ತದೆ. ಹುಲೇಕಲ್ ಬಳಿ ಅಡವಿಯಲ್ಲಿರುವ ಬೃಹತ್ ಬಂಡೆ ಕಲ್ಲು ಈ ಹಿಂದೆ ಹುಲಿಗಳ ವಾಸದ ತಾಣವಾಗಿದ್ದರಿಂದ ಹುಲಿಕಲ್ಲು ಎಂಬ ಹೆಸರು ಬಂತು, ತದನಂತರ ಅದೇ ಹುಲೇಕಲ್ ಆಯಿತು ಎಂದು ಹೇಳಲಾಗುತ್ತದೆ. ಇತಿಹಾಸ ಪುಟಗಳನ್ನು ತಿರುವಿ ನೋಡಿದಾಗ ಬರೀ ಹುಲೇಕಲ್ ಅಷ್ಟೇ ಅಲ್ಲ ಶಿರಸಿ ತಾಲೂಕು ಅಡವಿ ಹುಲಿಗಳಿಂದ ತುಂಬಿತ್ತು ಎಂಬುದು ತಿಳಿಯುತ್ತದೆ. ಹಾಗಾಗಿ ಸಿರ್ಸಿ ಭಾಗದಲ್ಲಿ ಹುಲಿಯ ಕಲ್ಲಿನ ಮೂರ್ತಿ ಮಾಡಿಸಿ, “ಹುಲಿಯಪ್ಪ” ಎಂದು ಪೂಜೆ ಮಾಡುವ ಸಂಪ್ರದಾಯ ಈಗಲೂ ಇದೆ. ಹದಿನೈದನೇ ಶತಮಾನದ ಅಡಿಪಾದದಲ್ಲಿ ಶ್ರೀ ವ್ಯಾಸರಾಜರಿಂದ ಶ್ರೀ ಲಕ್ಷ್ಮಿನಾರಾಯಣ ದೇವರು ಪ್ರತಿಷ್ಠಾಪನೆಗೊಂಡ ನಂತರ ಊರು ಬೃಹತ್ ಪಟ್ಟಣವಾಗಿ, ವಾಣಿಜ್ಯ ಕೇಂದ್ರವಾಗಿ ಖ್ಯಾತಿ ಹೊಂದಿತಲ್ಲದೇ, ಮಾಧ್ವರ ಪಾಲಿಗೆ- ಅಷ್ಟೇ ಏಕೆ ಹರಿಭಕ್ತರ ಪಾಲಿಗೆ ಪವಿತ್ರ ಕ್ಷೇತ್ರವಾಯಿತು. ಹದಿನಾರನೇ ಶತಮಾನದಲ್ಲಿ ಸೋದೆಯ ಅರಸ ರಾಮಚಂದ್ರನಾಯಕ ಹುಲೇಕಲ್‌ಗೆ ಶ್ರೀ ಲಕ್ಷ್ಮಿನಾರಾಯಣ ಪುರ ಎಂದು ಪ್ರತಿನಾಮಕರಣ ಮಾಡಿದನಾದರೂ ಇಂದಿಗೂ ಈ ಗ್ರಾಮ ಹುಲೇಕಲ್ ಹೆಸರಿನಿಂದಲೇ ಪರಿಚಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಪ್ರಖ್ಯಾತಿ ಪಡೆದಿರುವ ಸಿರ್ಸಿ ತಾಲೂಕಿನ ಶಿರಸಿ ಪಟ್ಟಣದ ಪಶ್ಚಿಮಕ್ಕೆ ೧೩ ಕಿ.ಮೀ ದೂರದಲ್ಲಿ ರಸ್ತೆಗೆ ಹೊಂದಿಕೊಂಡಂತೆಯೇ ಇರುವ ಈ ಗ್ರಾಮ ಇಂದು ಗ್ರಾಮ ಪಂಚಾಯತ್ ಕಛೇರಿ ಹಾಗೂ ಉಪ ತಹಶೀಲ್ದಾರ ಕಚೇರಿ ಹೊಂದಿರುವ ಕೇಂದ್ರ ಸ್ಥಳವಾಗಿದೆ. ಸ್ವಾದಿ ಅರಸರ ಕಾಲಕ್ಕೆ- ಅಂದರೆ ಈಗ್ಗೆ ೨೭೦ ವರ್ಷಗಳ ಹಿಂದಿನವರೆಗೂ ಹುಲೇಕಲ್ ಸೋದೆ ರಾಜಧಾನಿಗೆ ಹೊಂದಿಕೊಂಡ ದೊಡ್ಡ ಪೇಟೆ ಹೊಂದಿದ ಒಂದು ಬಡಾವಣೆಯಾಗಿ ಅದರ ಅವಿಭಾಜ್ಯ ಅಂಗವಾಗಿತ್ತು. ಮೂರು( ಏಳು) ಸುತ್ತಿನ ಕೋಟೆಯ ಅಂತಿಮ ಗಡಿ ಪ್ರದೇಶವಾಗಿತ್ತು.

ಪೇಟೆ ವೆಂಕಟ್ರಮಣ

ಬದಲಾಯಿಸಿ

ಹುಲೇಕಲ್‌ನಿಂದ ಸೋಂದಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ಎರಡು ಕಿ.ಮೀ ಕ್ರಮಿಸಿದಾಗ ಸಿಗುವ ವೆಂಕಟ್ರಮಣ ದೇವಸ್ಥಾನವನ್ನು ಪೇಟೆ ವೆಂಕಟ್ರಮಣ ( ಹುಣಸೇಹೊಂಡ ವೆಂಕಟ್ರಮಣ ಎಂದೂ ಕರೆಯಲಾಗುತ್ತದೆ) ಎಂದು ಕರೆಯುತ್ತಾರೆ. ೧೭೫೬ರಲ್ಲಿ ೨೫೦೦೦ ಪೌಂಡ್ ಯಾಲಕ್ಕಿಯನ್ನು ಹುಲೇಕಲ್‌ನಿಂದ ಹಾಲೆಂಡ್‌ಗೆ ಕಳಿಸಿದ ದಾಖಲೆ ಇದೆ. ಈಗಲೂ ಸಹ ಹುಲೇಕಲ್‌ನಲ್ಲಿರುವ ೧೦೦-೨೦೦ ವರ್ಷ ಹಳೆಯ ಮನೆಗಳನ್ನು ಗಮನಿಸಿದರೆ ‘ ವಖಾರಿ’ ವಹಿವಾಟಿನ ಹೋಲಿಕೆಯಲ್ಲಿಯೇ ಇವೆ. ಅಲ್ಲದೆ ಹಿಂದಿನ ತಮ್ಮ ತಲೆಮಾರಿನವರು ನಡೆಸುತ್ತಿದ್ದ ವಹಿವಾಟಿನ ಬಗ್ಗೆ ತಿಳಿದವರು ಇದ್ದಾರೆ. ಹುಲೇಕಲ್‌ನಲ್ಲಿ ದೊರೆತ ಹಲವು ಶಾಸನಗಳು ಅರಸು ಮನೆತನದ ಮೇಲೆ ಬೆಳಕು ಚೆಲ್ಲಿವೆ. ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದ ಹಿಂಭಾಗದಲ್ಲಿರುವ ರಾಮಲಿಂಗೇಶ್ವರ ದೇವ ಸ್ಥಾನದಲ್ಲಿರುವ ಒಂದು ಶಾಸನದಲ್ಲಿ ಸೋದೆಯನ್ನು ಆಳುವ ಅರಸಪ್ಪ ಒಡೆಯರು ಸಮರದಲ್ಲಿ ಮಡಿದ ಬಂಟನೋರ್ವನ ಕುಟುಂಬಕ್ಕೆ ನೀಡಿದ ದಾನದ ವಿವರ ತಿಳಿಸಲಾಗಿದೆ. ಇದು ೧೫ನೇ ಶತಮಾನದೆಂದು ಪರಿಗಣಿಸಲಾಗಿದೆ, ಆದರೂ ಶಾಸನದ ಪಠ್ಯ ತ್ರುಟಿತವಾಗಿರುವುದರಿಂದ ಈತ ಒಂಬನೇ ಅರಸಪ್ಪನೋ ಎಂಬುದು ಸ್ಫುಟವಾಗುವುದಿಲ್ಲ.

ಶಾಸನಪಾಠ

ಬದಲಾಯಿಸಿ

ಹುಲೇಕಲ್‌ನ ಹಳ್ಳಿ ಮಾಸ್ತಿ ಕಾನ ಅಡವಿಯಲ್ಲಿ ಇರುವ ವೀರಗಲ್ಲು ಕ್ರಿ.ಶ. ೧೫೬೩-೬೪ರ ಕಾಲದ್ದಾಗಿದೆ. ಇದರಲ್ಲಿ ಇಮ್ಮಡಿ ಅರಸಪ್ಪ ಒಡೇರ ಅವರ ಬಂಟ ವೋದವ ಗೌಡರ ಮಗ ಮಚಗಂಡಿಯ ಗಿರಿಯನ್ಣ ನಾಯಕರು ಮತ್ತು ಅವರ ಮಾವಣ್ಣ ನಾಯಕರು, ಸದಾಶಿವ ನಾಯಕ, ಅರಸಪ್ಪ ಒಡೆಯರ ಜಗಳದಲ್ಲಿ ಕಾದಾಡಿ ಸತ್ತರು ಎಂಬುದನ್ನು ತಿಳಿಸುತ್ತದೆ. ಗೋಸಾಸ ಕಲ್ಲುಗಳು ಇಲ್ಲಿನ ಶ್ರೀ ರಾಮೇಶ್ವರ ದೇವಸ್ಥಾನದ ಬಯಲಿನಲ್ಲಿ ಆರಕ್ಕೂ ಅಧಿಕ ಗೋಸಾಸ ಕಲ್ಲುಗಳಿವೆ. [] ಕಲ್ಲು ಈ ಭಾಗದಲ್ಲಿ ದೊರೆತಿರುವುದು ಆಶ್ಚರ್ಯವೇ ಆಗಿದೆ. ಅನ್ನದ ಹಸುವಿನೊಂದಿಗೆ ಒಂದು ಸಾವಿರ ಗೋವುಗಳನ್ನು ಶಾಸ್ತ್ರ ವಿಧಿಯಂತೆ ದಾನ ಮಾಡಿದ ನೆನಪಿಗಾಗಿ ಒಂದು ಗೋಸಾಸು ಕಲ್ಲು ನೆಡಲಾಗುತ್ತದೆ. ಅಂದರೆ ಇಲ್ಲಿ ಎಷ್ಟು ಕಲ್ಲುಗಳಿವೆಯೋ ಅಷ್ಟು ಸಹಸ್ರ ಗೋವುಗಳನ್ನು ದಾನ ಮಾಡಲಾಗಿದೆ ಎಂಬುದು ಖಚಿತವಾಗುತ್ತದದೆ.

ಶ್ರೀ ಲಕ್ಷ್ಮಿನಾರಾಯಣ ನೆಲೆ ನಿಂತ ಬಗೆ

ಬದಲಾಯಿಸಿ

ಸೋಮದಾಪುರದ ಯಾನೆ ಸೋವಿದಾಪುರದ( ಈಗಿನ ಸೋದೆ ಯಾನೆ ಸೋಂದಾಂ ರಾಜ ಅರಸಪ್ಪ ನಾಯಕ ಒಮ್ಮೆ ಕುದುರೆ ಮೇಲೆ ಹೊರಟಿದ್ದಾಗ ರಾಜಧಾನಿ ಸೋದೆಯ ಹೊರಪ್ರದೇಶವಾಗಿದ್ದ ಹುಲೇಕಲ್‌ನ ಅಡವಿ ಪ್ರದೇಶವೊಂದರಲ್ಲಿ ಕುದುರೆ ಎಡವಿ ಬಿದ್ದಿತ್ತು. ಇದೊಂದು ಅಪಶಕುನ ಎಂದು ಭಾವಿಸಿದ ರಾಜ ಅರಮನೆಗೆ ಹಿಂತಿರುಗಿ ಆಸ್ಥಾನ ಜ್ಯೋತಿಷ್ಯರನ್ನು ಕರೆಸಿ ನಡೆದ ಘಟನೆಯನ್ನು ವಿವರಿಸಿ ಕೇಳಿದಾಗ, “ಇದು ಅಶುಭವಲ್ಲ, ಶುಭ ಸೂಚನೆಯೇ ಆಗಿದೆ ಸದ್ಯದಲ್ಲೇ ಇದರ ಮರ್ಮ ತಿಳಿದು ಬರಲಿದೆ” ಎಂದರು. ಒಂದೆರಡು ದಿನಗಳ ನಂತರ ರಾತ್ರಿ ಮಲಗಿದ್ದಾಗ ಬೆಳಗಿನ ಜಾವದ ಸ್ವಪ್ನದಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವರು ಕಾಣಿಸಿಕೊಂಡು “ಕುದುರೆ ಎಡವಿ ಬಿದ್ದ ಜಾಗದ ಭೂಗರ್ಭದಲ್ಲಿ ನಾನಿದ್ದೇನೆ, ನನ್ನನ್ನು ಮೇಲೆತ್ತಿ ಪ್ರತಿಷ್ಠಾಪಿಸಿ ಪೂಜಿಸು. ನಿನಗೆ ನಿನ್ನ ರಾಜ್ಯಕ್ಕೆ ಒಳಿತಾಗುತ್ತದೆ” ಎಂದು ಹೇಳಿದಂತಾಯಿತು. ಇದೇ ವೇಳೆಗೆ ಉಡುಪಿ ಶ್ರೀಕೃಷ್ಣದರ್ಶನಕ್ಕೆಂದು ಪರ್ಯಟನೆ ಹೊರಟಿದ್ದ ಶ್ರೀ ವ್ಯಾಸರಾಯ ಗುರುಗಳು ಸೋದೆಗೆ ಆಗಮಿಸಿದ್ದರು. ಅರಸು ಅರಸಪ್ಪ ನಾಯಕ ಸ್ವಪ್ನದ ದೃಷ್ಟಾಂತವನ್ನು ಶ್ರೀ ವ್ಯಾಸರಾಯರಿಗೆ ತಿಳಿಸಿ, ಅವರ ಆಜ್ಞೆಯಂತೆ ಭೂಮಿಯನ್ನು ಅಗೆಸಿದಾಗ ಸ್ವಪ್ನದಲ್ಲಿ ಕಂಡಂತಹ ಶ್ರೀ ಲಕ್ಷ್ಮಿನಾರಾಯಣರದೇ ರೂಪದ ಸುಂದರ ಶಿಲಾವಿಗ್ರಹ ಕಂಡು ಬಂದಿತು. ಭಯ-ಭಕ್ತಿಗಳೊಂದಿಗೆ ದೇವರ ವಿಗ್ರಹವನ್ನು ಹೊರತೆಗೆಯಿಸಿದ ಅರಸಪ್ಪ ನಾಯಕ ಶ್ರೀ ವ್ಯಾಸರಾಯರು ಸೂಚಿಸಿದ ರೀತಿಯಲ್ಲಿಯೇ ಸುಂದರ ಶಿಲಾದೇಗುಲವನ್ನು ನಿರ್ಮಿಸಿ ಶ್ರೀ ವ್ಯಾಸರಾಯರಿಂದಲೇ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದ. ಶ್ರೀ ವ್ಯಾಸರಾಯರು ಅರಸಪ್ಪ ನಾಯಕನ ವಿನಂತಿ ಮೇರೆಗೆ ಕೆಲಕಾಲ ಸೋದೆಯಲ್ಲಿ ತಂಗಿದ್ದರಲ್ಲದೇ ತಿರುಪತಿಯಿಂದ ಶ್ರೀನಿವಾಸ ದೇವರು,ಶ್ರೀದೇವಿ, ಭೂದೇವಿ, ಶ್ರೀರಾಮ, ಲಕ್ಷ್ಮಣ ಸೀತೆ ಉತ್ಸವ ಮೂರ್ತಿಗಳನ್ನು ತರಿಸಿ, ತಮ್ಮ ಕೈಯ್ಯಾರೆ ಪೂಜೆ ನೆರೆವೇರಿಸಿ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.

ಶ್ರೀ ವ್ಯಾಸರಾಯರು ಹಾಕಿಕೊಟ್ಟ ಸಂಪ್ರದಾಯದಂತೆ ಶ್ರೀ ಲಕ್ಷ್ಮಿನಾರಾಯಣ ದೇವರಿಗೆ ಅರಮನೆಯ ವತಿಯಿಂದಲೇ ತ್ರಿಕಾಲ ಪೂಜೆ, ಅಮೃತಪಡಿ, ನಂದಾದೀಪ, ನೈವೇದ್ಯ, ರಥೋತ್ಸವ, ಕೆರೆಹಬ್ಬ, ಕಾರ್ತೀಕಾರಾಧನೆ ಮುಂತಾದ ವೈಭವಗಳು ನಡೆಯುತ್ತಿದ್ದವು. ಇದರ ಪರಿಣಾಮವಾಗಿಯೇ ಸೋದೆ ಸಾಮ್ರಾಜ್ಯವು ಸಹ ಸಂಪದ್ಭರಿತವಾಗಿ ಸುಖ, ಸಮೃದ್ಧಿಯನ್ನು ಕಂಡಿತು. ಶ್ರೀ ಲಕ್ಷ್ಮಿನಾರಾಯಣ ಮನಮೋಹಕ ಕಳೆ ನೋಡಿದಾಗ ಇದರಲ್ಲೇನೋ ವಿಶೇಷ ಶಕ್ತಿ ಇರುವುದು ಹೌದು ಎನಿಸದಿರದು. ಅರಸಪ್ಪ ನಾಯಕ ಈ ಕಥೆ ಚಾರಿತ್ರಿಕ ಸತ್ಯವಾಗಿದೆ.

ಕ್ಷಿಪ್ರವರಪ್ರದಾಯಕ ಬಾಗಿಲು ಗಣಪತಿ

ಬದಲಾಯಿಸಿ

ಶ್ರೀವ್ಯಾಸರಾಯರು ಶ್ರೀ ಲಕ್ಷ್ಮಿನಾರಾಯಣ ದೇವರ ಪ್ರತಿಷ್ಠಾಪನೆ ಕಾರ್ಯ ನೆರವೇರಿಸುವಾಗ ವಾಡಿಕೆಯಂತೆ ದೇವಸ್ಥಾನದ ಹೊರಬಾಗಿಲಿನ ತೋರಣದಲ್ಲಿ ಕೆತ್ತಲಾಗಿರುವ ಶ್ರೀಗಣಪತಿ ದೇವರಿಗೂ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದಾಗ ಶ್ರೀ ಮಹಾಗಣಪತಿ ದೇವರು ಪ್ರತ್ಯಕ್ಷನಾಗಿ ಶ್ರೀ ವ್ಯಾಸರಾಯರು ನೀಡಿದ ನೈವೇದ್ಯವನ್ನು ಸ್ವೀಕರಿಸಿ, ಭಕ್ತರ ಮನದಿಚ್ಛೆ ಪೂರೈಸುವ ವಾಗ್ದಾನ ನೀಡಿ, ಅಂತರ್ಧಾನರಾದರೆಂದು ಹೇಳಲಾಗುತ್ತದೆ. ಆದ್ದರಿಂದ ಇಲ್ಲಿಯ ಈ ತೋರಣ ಗಣಪತಿ ಕ್ಷಿಪ್ರವರಸಿದ್ದಿ ಗಣಪತಿ ಎಂದೇ ಪ್ರಖ್ಯಾತಿ ಹೊಂದಿದೆ.

ದೇವಸ್ಥಾನದ ಇತಿಹಾಸ

ಬದಲಾಯಿಸಿ

ಸೋದೆಯ ಅರಸ, ಹೀರೆ ಅರಸಪ್ಪ ನಾಯಕ ಮಗ ಇಮ್ಮಡಿ ಅರಸಪ್ಪ ಹಾಗೂ ಈತನ ಮಗ ರಾಮಚಂದ್ರ ನಾಯಕ ಅವರು ದೇವಸ್ಥಾನಕ್ಕೆ ನೀಡಿರುವ ತಾಮ್ರ ಶಾಸನದ ನಕಲು ವಿವರದಂತೆ ಈ ದೇವಸ್ಥಾನಕ್ಕೆ ಸುಮಾರು ೪೫೦ ವರ್ಷಗಳಿಗೂ ಹಿಂದಿನ ಇತಿಹಾಸವಿದೆ. ಈ ದೇವಸ್ಥಾನ ನಿರ್ಮಿತವಾದ ಕಾಲಮಾನದ ಬಗ್ಗೆ ನಿಖರ ದಾಖಲೆ ಸಿಕ್ಕಿಲ್ಲವಾದರೂ ಸೋದೆಯ ದೊರೆಯಾಗಿದ್ದ ಎರಡನೇ ಅರಸಪ್ಪ ನಾಯಕ ಕ್ರಿ.ಶ ೧೫೯೪ರಲ್ಲಿ ( ಈತನ ಕಾಲಮಾನ ೧೫೫೫-೧೬೦೩) ಈ ದೇವಸ್ಥಾನಕ್ಕೆ ನೀಡಿರುವ ದಾನಪಟ್ಟಿಯ ತಾಮ್ರ ಶಾಸನದ ಪಾಠದಿಂದ ಈತನಗಿಂತ ಮೊದಲೇ ದೇವಸ್ಥಾನ ನಿರ್ಮಿತವಾಗಿತ್ತು ಎಂಬುದು ಶ್ರುತ ಪಡುತ್ತದೆ.[] ಇತಿಹಾಸಕಾರರ ಸದ್ಯದ ಅಭಿಪ್ರಾಯದಂತೆ ಸೋದೆಯ ಉಚ್ಛಾçಯ ಅರಸುತನ ಎಂಬುದು ಆರಂಭವಾಗುವುದೇ ಈ ಎರಡನೇ ಅರಸಪ್ಪ ನಾಯಕ ( ಕ್ರಿ.ಶ ೧೫೫೫)ನಿಂದ. ಆದರೆ ಹುಲೇಕಲ್‌ನಲ್ಲಿ ದೊರೆತ ಶಾಸನ ಒಂದರಿಂದ ಒಂದನೇ ಅರಸಪ್ಪ ನಾಯಕನೆಂಬುವನಿದ್ದ ಎಂಬುದು ದೃಡಪಟ್ಟದ್ದ, ಈತ ಬರೀ ಪಾಳೆಯಗಾರನಿದ್ದನೆ ಅಥವಾ ಸ್ವತಂತ್ರ ಅರಸ ಎಂಬ ಪದವಿಗಳಿಸಿದ್ದನೆ ಎಂಬುದು ಗೊತ್ತಾಗಿಲ್ಲವಾಗಿದೆ. ಒಂದನೇ ಅರಸಪ್ಪ ನಾಯಕನ ಕಾಲಮಾನ ಸುಮಾರುಕ್ರಿ.ಶ ೧೪೩೧ ಎಂದು ತರ್ಕಿಸಲಾಗಿದ್ದು, ಈತನ ನಂತರ ೧೪೩೧ ರಿಂದ ೧೫೫೫ರ ಮಧ್ಯಂತರ ೧೨೫ ವರ್ಷಗಳ ಅವಧಿಯಲ್ಲಿ ಆಳಿದ ‘ ನಾಯಕರುಗಳ’ ನಿಖರ ಕಾಲ ಗೊತ್ತಾಗಿಲ್ಲವಾಗಿದೆ. ಒಂದನೇ ಅರಸಪ್ಪ ನಾಯಕನ ನಂತರ ಹಾಗೂ ಇಮ್ಮಡಿ ಅರಸಪ್ಪ ನಾಯಕನ ಪೂರ್ವದ ಮಧ್ಯಂತರ ಕಾಲಮಾನದಲ್ಲಿ ಆಳಿದ ನಾಯಕನೋರ್ವನ ಕಾಲಮಾನದಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನ ಸ್ಥಾಪಿತವಾಗಿರುವುದು ಖಚಿತವಾಗುತ್ತದೆ. ಸೋದೆಯ ನಾಯಕರಾಗಿದ್ದ ಸದಾಶಿವರಾಯ ಎಂಬಾತ ಸ್ವತಃ ಬರೆದಿರುವ ಸದಾಶಿವರಾಯ ಗ್ರಂಥದಲ್ಲಿ ೧೪೩೧ರಿಂದ ೧೫೫೫ ಅವಧಿಯಲ್ಲಿ ಸೋದೆಯ ಅರಸರಾಗಿ ಸೋದೇಶ ಮಂಗಮಹಾಪ್ರಭು (ಕ್ರಿ.ಶ ೧೪೫೧) ರಾಮಣ್ಣ ಒಡೆಯ (ಕ್ರಿ.ಶ ೧೪೫೪) ಆಳಿದ್ದರೆಂದು ಉಲ್ಲೇಖಿಸಲಾಗಿದೆ. ೧೪೩೧-೫೧ರ ಮಧ್ಯದಲ್ಲಿ ಅರಸಪ್ಪ ಒಡೆಯರ ಎಂಬಾತ ಆಳ್ವಿಕೆ ನಡೆಸಿದ್ದ ಎಂದು ತರ್ಕಿಸಲಾಗಿದೆ. ಇಮ್ಮಡಿ ಅರಸಪ್ಪ ನಾಯಕನ ಮಗ ರಾಮಚಂದ್ರ ನಾಯಕ ಕ್ರಿ.ಶ ೧೫೨೭ (ಕ್ರಿ.ಶ ೧೬೦೫) ರಲ್ಲಿ ನೀಡಿರುವ ತಾಮ್ರ ಶಾಸನದಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವರಿಗೆ ನಡೆಯುತ್ತಿದ್ದ ಪೂಜಾ ವಿವರ, ಅದಕ್ಕಾಗಿ ನಿಯುಕ್ತಿಗೊಂಡಿದ್ದ ಪರಿವಾರ, ಸಮರ್ಪಿಸಲಾಗುತ್ತಿದ್ದ ನೈವೇದ್ಯಗಳ ಕುರಿತು ಮಾಹಿತಿ ನೀಡಲಾಗಿದೆ. ಲಕ್ಷ್ಮೀನಾರಾಯಣ ದೇವರು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಲಕ್ಷ್ಮಿನಾರಾಯಣ ದೇವರ ವಿಗ್ರಹ ಸುಮಾರು ೪ ಅಡಿ ಎತ್ತರವಿದೆ. ಲಕ್ಷ್ಮೀ ದೇವಿಯನ್ನು ವರಿಸಿದ ತನ್ನ ಎಡಗಾಲಿನ ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ನಾರಾಯಣ ಎಡಗೈನಿಂದ ಲಕ್ಷ್ಮಿ ದೇವಿಯ ಸೊಂಟವನ್ನು ಬಳಸಿ ಹಿಡಿದಿದ್ದಾನೆ. ಚತುರ್ಭುರಾಗಿರುವ ನಾರಾಯಣನ ಮೇಲಿನ ಎರಡು ಕೈಗಳಲ್ಲಿ ಶಮಖ ಚಕ್ರಗಳಿವೆಯಾದರೂ ಕೆಳಗಿನ ಬಲಗೈ ಹಸ್ತ ‘ತಥಾಸ್ತು’ ಎಂದು ಸಂಕೇತಿಸುವ ‘ವರದ ಹಸ್ತವಾಗಿದೆ’ನಾರಾಯಣನ ಕೊರಳನ್ನು ಒಡವೆಯಿಂದ ಶೃಂಗಾರಗೊಳಿಸಿದ್ದು, ಮುಕುಟಧಾರಿಯಾಗಿದ್ದಾನೆ. ತೊಡೆಯ ಮೇಲೆ ಕುಳಿತಿರುವ ಶ್ರೀ ಲಕ್ಷ್ಮೀ ದೇವಿಎಡಗೈಯಲ್ಲಿ ‘ ಬೆಣ್ಣೆಮುದ್ದೆ’ ( ಅಮೃತ ಕಳಸ)ಯಂತೆ ಕಾಣುವ ಕಜ್ಜಾಯ ಹಿಡಿದುಕೊಂಡು ನಾರಾಯಣನತ್ತ ತನ್ನ ದೃಷ್ಠಿ ನೆಟ್ಟಿದ್ದಾಳೆ. ಲಕ್ಷ್ಮಿ ದೇವಿಗೆ ಕಿರೀಟ ತೊಡಿಸದೇ ಬಾಚಿದ ನೀಳ ಕೇಶ ರಾಶಿಯ ಕಡೆದಿರುವುದು ಉಲ್ಲೇಖನೀಯವಾಗಿದೆ. ದೇವರ ಪ್ರಭಾವಳಿಯಲ್ಲಿ ದಶಾವತಾರವನ್ನು ಪೀಠದಲ್ಲಿ ಬುಡದಲ್ಲಿ ಗರುಡನನ್ನು ಕೆತ್ತಲಾಗಿದೆ. ಲಕ್ಷ್ಮೀ ದೇವಿ ನಾರಾಯಣನನ್ನು ವೀಕ್ಷಿಸುತ್ತಿರುವುದು ಹರಿ ಸರ್ವೊತ್ತಮ ಎಂಬ ತತ್ವದ ಬಿಂಬಕ ಎನ್ನಲಾಗಿದೆ. ನಾರಾಯಣನ ತೊಡೆಯ ಮೇಲೆ ಕುಳಿತು ನಾರಾಯಣನನ್ನೇ ದೃಷ್ಠಿಸುತ್ತಿರುವ, ಕೈಯಲ್ಲಿ ಕಜ್ಜಾಯ ಹಿಡಿದುಕುಳಿತ ಲಕ್ಷ್ಮೀ ನಾರಾಯಣ ದೇವರು ರಾಜ್ಯದಲ್ಲಿಯೇ ವಿಶಿಷ್ಟವಾದುದು ಎನ್ನಲಾಗಿದೆ.

ಅನ್ನ ಪೂರ್ಣೇಶ್ವರಿ

ಬದಲಾಯಿಸಿ

ಗರ್ಭಗೃಹದ ದ್ವಾರದ ಮೇಲ್ಗಡೆಯ ಮಧ್ಯ ಭಾಗದಲ್ಲಿ ಕೈಲಿ ಸೌಟು ಹಿಡಿದು ಕುಳಿತಿರುವ ಕಾಶಿ [] ಅನ್ನಪೂರ್ಣೇಶ್ವರಿಯನ್ನು ಕಡೆದಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ವಿಷ್ಣು ಸಂಬಂಧದ ದೇವಾಲಯಗಳಲ್ಲಿ ಪಾರ್ವತಿ ಪ್ರತೀಕಗಳನ್ನು ಕೆತ್ತುವ ಸಂಪ್ರದಾಯವಿಲ್ಲ. ಇದನ್ನು ಗಮನಿಸಿದ ಖ್ಯಾತ ಶಿಲ್ಪಿ ಕರುಪಯ್ಯ ಈ ದೇವರನ್ನು ಸಮೃದ್ಧಿ, ಸಂಪತ್ತಿಗಾಗಿಯೇ ಪ್ರತಿಷ್ಠಾಪಿಸಿರುವುದರಿಂದ ಇಲ್ಲಿ ಅನ್ನಪೂರ್ಣೇಶ್ವರಿಯನ್ನು ಕೆತ್ತಲಾಗಿದೆ ಎಂದು ಅಭಿಪ್ರಾಯ ಪಟ್ಟರು. ಆದರೆ ಕೆಲವರು ಇದನ್ನು ಅಮೃತ ಬಡಿಸಲು ಸಮುದ್ರಮಂಥನ[] ಸಂದರ್ಭದಲ್ಲಿ ಮೋಹಿನಿ ರೂಪತಾಳಿ ಸೌಟುಹಿಡಿದಿದ್ದ ವಿಷ್ಣುವಿನ ಅವತಾರದ ಸಂಕೇತ ಎಂದು ಅಥವಾ ದ್ವಾರದೇವತೆ “ ಶ್ರೀಯೈ” ಎಂದು ಹೇಳುತ್ತಾರೆ.

ಗರುಡಗಂಭ

ಬದಲಾಯಿಸಿ

ತಲೆ ಎತ್ತಿ ಈ ಕಂಬವನ್ನು ದೃಷ್ಠಿಸುತ್ತಾ ಹತ್ತು ಹೆಜ್ಜೆ ಮುಂದೆ ಇಟ್ಟರೆ ಕಾಣಸಿಗುವುದು ದೇವಸ್ಥಾನದ ಮುಖಮಂಟಪ ಅಥವಾ ಸ್ವಾಗತ ಮಂಟಪ. ಸುಮಾರು ೫೦ ಶಿಲಾ ಕಂಬಗಳ ಆಧಾರದ ಮೇಲೆ ನಿರ್ಮಿಸಿರುವ ಸುಮಾರು ೩೦ ಅಡಿ ಉದ್ದ ೬೦ ಅಡಿ ಅಗಲದ ವಿಸ್ತಾರದ ಈ ಮಂಟಪ ಹೊರ ಹಾಗೂ ಒಳಭಾಗ ಎರಡೂ ಕಡೆಗಳಲ್ಲಿ ವಿಶಾಲ ಹಜಾರ ಹೊಂದಿದೆ. ೫೦ ಕಂಬಗಳ ಪೈಕಿ ೮ ಕಂಬಗಳ ಮೇಲೆ ಉಬ್ಬು ಶಿಲ್ಪಗಳಿವೆ. ಸುಮಾರು ೬ ಅಡಿ ಉದ್ದ, ೬ ಇಂಚು ದಪ್ಪ, ೨ ಅಡಿ ಅಗಲದ ಭಾರಿ ಗಾತ್ರದ ಕಲ್ಲು ಹಾಸಿನ ಸಮತಲ ಛಾವಣಿ ನಿರ್ಮಿಸಲಾಗಿದ್ದು, ಬಿದ್ದ ನೀರು ಹರಿದು ಹೋಗಲು ಎರಡು ಕಡೆ ಹಾಸುಗಲ್ಲುಗಳನ್ನೇ ಇಳಿಜಾರಾಗಿ ಹೊಂದಿಸಿರುವುದನ್ನು ಗಮನಿಸಿದಾಗ ಅಬ್ಬಾ ಎನಿಸುತ್ತದೆ. ಸ್ವಾಗತ ಮಂಟಪದ ಪ್ರವೇಶ ಕಂಬಗಳಲ್ಲಿ ಎರಡು ಕಾಲು ಮೇಲೆತ್ತಿ ನಿಂತಿರುವ ಸಿಂಹವನ್ನು ಸವಾರನೋರ್ವ ನಿಯಂತ್ರಿಸುತ್ತಿರುವಂತೆ ಕೆತ್ತಲಾಗಿದೆ. ಪ್ರವೇಶ ದ್ವಾರದ ಚೌಕಟ್ಟಿನ ಕೆಳಭಾಗದ ಎಡ, ಬಲಗಳಲ್ಲಿ ಹೂಬಳ್ಳಿ ಆವೃತ್ತ ನಿರ್ವಾಣ ಸ್ತ್ರೀ ಶಿಲ್ಪವನ್ನು: ಚೌಕಟ್ಟಿನ ಮೇಲ್ಗಡೆ ಲಲಾಟಭಾಗದಲ್ಲಿ ಗಣಪತಿಯನ್ನು ಕೆತ್ತಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. [೧]
  2. https://www.ancient.eu/Hindu_Architecture/
  3. https://indianmandirs.blogspot.com/2013/12/kasi-annapoorneswari-devi-shakthi.html
  4. https://www.quora.com/What-was-the-samudra-manthana