ಅನ್ನವೆಂದರೆ ಮನುಷ್ಯನ ಜೀವನದ ಜೀವಧಾತು, ಜೀವಧ್ವನಿಯಾಗಿದೆ. ಪುರಾಣ, ಮಹಾಕಾವ್ಯಗಳಲ್ಲಿ ಅನ್ನ ಪ್ರತಿಮೆಯಾಗಿ ಬಳಕೆಗೊಂಡಿದೆ. ಅನ್ನ ಬ್ರಹ್ಮ, ಅನ್ನದಾತ, ಅನ್ನಪೂರ್ಣೇಶ್ವರಿ, ಅನ್ನ ದಾಸೋಹ, ಅನ್ನದ ಋಣ ಎನ್ನುವ ಪದಗಳು ಅನ್ನಕ್ಕಿರುವ ಮಹತ್ವವನ್ನು ಹೇಳುತ್ತವೆ.[]

ಭೂತಾನಿನ ಬೇಯಿಸಿದ ಅನ್ನ
ಭತ್ತ
ಅಕ್ಕಿ

ಅಕ್ಕಿಯ ಮಹತ್ವ

ಬದಲಾಯಿಸಿ
  • ಪ್ರಾಚೀನ ಕಾಲದ ಬಡ ಜನರು ಅಕ್ಕಿಯನ್ನು ವರ್ಷಕ್ಕೆ ಒಂದೆರಡು ಬಾರಿ, ಅದೂ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳಸುತ್ತಿದ್ದರು. ಸಂಕ್ರಾಂತಿಯ ಹಬ್ಬದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಯಲ್ಲಿ ಮುಖ್ಯವಾಗಿ ಬೆಳ್ತಕ್ಕಿ, ಕುಸುಬಲಕ್ಕಿ, ನುಚ್ಚಕ್ಕಿ ಎಂದು ಮೂರು ಪ್ರಧಾನ ವಿಭಾಗಗಳಿವೆ. ದೋಸೆಯಿಂದ ಹಿಡಿದು ಕರಿದ ತಿಂಡಿಗಳವರೆಗೂ ಅಕ್ಕಿ ಬಳಕೆ ಕಂಡು ಬರುತ್ತದೆ.
  • ಅಕ್ಕಿಯಲ್ಲಿ ಮಾಡುವಂತಹ ಬಗೆ ಬಗೆ ಖಾದ್ಯ-ಅಡುಗೆಗಳನ್ನು ಬಹುಶ: ಬೇರಾವುದೇ ಧಾನ್ಯಗಳಲ್ಲೂ ಮಾಡಲಾಗುವುದಿಲ್ಲ. ಅಕ್ಕಿಯ ಬಳಕೆಯ ಸುತ್ತ ಇರುವ ಆಚರಣೆಗಳಲ್ಲಿ ನಂಬಿಕೆಗಳು ಬಹಳ ಮುಖ್ಯ. ಗೌತಮನು ಇಡೀ ಮಾನವ ಜನಾಂಗವನ್ನು ಹತ್ತು ಭಾಗ ಮಾಡುವಾಗ ಅಕ್ಕಿಗೆ ಎರಡನೇ ಸ್ಥಾವನ್ನು ಕೊಟ್ಟಿದ್ದಾನೆ. ಶುಭಸಮಾರಂಭಗಳಲ್ಲಿ ಅದರಲ್ಲೂ ವಿವಾಹಕ್ಕೆ ಸಂಬಂಧ ಪಟ್ಟ ಕೆಲಸ ಕಾರ್ಯಗಳಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ.
  • ನಿಶ್ಚಿತಾರ್ಥ ಅಥವ ಒಪ್ಪಂದಶಾಸ್ತ್ರದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಶಾಸ್ತ್ರದ ಸಂದರ್ಭದಲ್ಲಿ ವಧುವಿನ ಮಡಿಲಿಗೆ ಸೇರಕ್ಕಿ, ಬೆಲ್ಲ,ಕೊಬ್ಬರಿ, ಹುರಿಗಡಲೆಗಳಿಂದ ಮಡಿಲು ತುಂಬಿ ಸೋಗ್ಲು ಕಟ್ಟುತ್ತಾರೆ. ಹರಸುವಾಗ ಅಕ್ಷತೆಯ ರೂಪದಲ್ಲೂ ಅಕ್ಕಿಯನ್ನ ಬಳಸಿ, ಅಕ್ಷತೆಯನ್ನು ವಧು-ವರರ ತಲೆಯ ಮೇಲೆ ಹಾಕಿ ಶುಭವನ್ನು ಹಾರೈಸುವರು.
  • ಮದುಮಗಳು ತವರಿಂದ ಹೊರಬರುವ ಸಂದರ್ಭದಲ್ಲಿ, ಅವಳ ತೌರು ಮನೆಯೊಳಗೆ ಅಪ್ಪ,ಅಣ್ಣ-ತಮ್ಮ, ಬಂಧು-ಬಳಗದವರನ್ನು ಕೂರಿಸಿ ಅವರ ತಲೆಯ ಮೇಲೆ ಮದುಮಗಳ ಕೈಯಿಂದ ಮೂರು ಬೊಗಸೆ ಅಕ್ಕಿಯನ್ನು ಎರಚುವಾಗ, ಮೂರು ಬಾರಿ ಆಕೆ "ನಮ್ಮಪ್ಪನ ಮನೆ ಹಾಲುಕ್ಕುವಂತೆ ಉಕ್ಕಲಿ"ಎಂದು ಹಾರೈಸುತ್ತಾ ಅಕ್ಕಿಯನ್ನು ಅವರ ಮೇಲೇರಚಿ ದು:ಖದಿಂದ ಕಣ್ತುಂಬಿ ಕೊಳ್ಳುತ್ತಾಳೆ.
  • ಧಾರೆಯಾದ ಬಳಿಕ ಮನೆದೇವರನ್ನು ತಂದ ನೀರಿನಲ್ಲಿ ಅಕ್ಕಿಯನ್ನು ನೆನೆಹಾಕಿ ಬೆಲ್ಲದನ್ನ ಮಾಡಿ ಬಂಧು-ಬಳಗದವರಿಗೆ ಹಂಚುವ ಪರಿಪಾಠವಿದೆ. ಹೊಸದಾಗಿ ಅತ್ತೆ ಮನೆ ಪ್ರವೇಶಿಸುವ ಸೊಸೆ ತಲೆಬಾಗಿಲ ಹೊಸ್ತಿಲಿನ ಮೇಲೆ ಅಕ್ಕಿ,ಬೆಲ್ಲವನ್ನಿಟ್ಟ ಸೇರನ್ನು ತನ್ನ ಬಲಗಾಲಿನಿಂದ ಒದ್ದು ಮನೆಯನ್ನು ಪ್ರವೇಶಿಸುತ್ತಾಳೆ. ಇದಕ್ಕೆ "ಪಡಿಯಕ್ಕಿ" ಇಡುವ ಶಾಸ್ತ್ರ ಎನ್ನುತ್ತಾರೆ.
  • ಸ್ತ್ರೀ ಗರ್ಭಿಣಿಯಾದಾಗ ಅವಳ ಬಸಿರೊಸಗೆಯ ಸಮಯದಲ್ಲಿ ಮಡಿಲಕ್ಕಿಶಾಸ್ತ್ರ ಮಾಡುವರು. ವ್ಯಕ್ತಿಯು ಸತ್ತಾಗ ಅವನ/ಳ ಬಾಯಿಗೆ ಅಕ್ಕಿ ತುಂಬುತ್ತಾರೆ. ಹೀಗೆ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅಕ್ಕಿ ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇಂದು ಅಕ್ಕಿ ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಪ್ರಸಿದ್ದ ಧಾನ್ಯ.[]

ಅನ್ನದ ಬಳಕೆ

ಬದಲಾಯಿಸಿ
  • ಅನ್ನವೆಂದರೆ ಮನುಷ್ಯನ ಜೀವನದ ಜೀವಧಾತು, ಜೀವಧ್ವನಿಯಾಗಿದೆ. ಪುರಾಣ, ಮಹಾಕಾವ್ಯಗಳಲ್ಲಿ ಅನ್ನ ಪ್ರತಿಮೆಯಾಗಿ ಬಳಕೆಗೊಂಡಿದೆ. ಅನ್ನ ಬ್ರಹ್ಮ, ಅನ್ನದಾತ, ಅನ್ನಪೂರ್ಣೇಶ್ವರಿ, ಅನ್ನ ದಾಸೋಹ, ಅನ್ನದ ಋಣ ಎನ್ನುವ ಪದಗಳು ಅನ್ನಕ್ಕಿರುವ ಮಹತ್ವವನ್ನು ಹೇಳುತ್ತವೆ. ಅನ್ನ ಮತ್ತು ನೀರಿನ ದಾನಗಳು "ಅನ್ನೋದಕ ದಾನ" ಎನಿಸಿವೆ. ದಾನಗಳಲ್ಲಿ ಅನ್ನದಾನ ಶ್ರೇಷ್ಠ ವಾದುದು ಎನ್ನುತ್ತಾರೆ.
  • ಆದುದರಿಂದಲೇ ಶಿವಶರಣರು ದಾಸೋಹಕ್ಕೆ ಪ್ರಮುಖ ಆದ್ಯತೆ ನೀಡಿದ್ದಾರೆ. ಅರ್ವಾಚೀನ ಕಾಲದಲ್ಲಿ ಅನ್ನ ಉಳ್ಳವರ ಸ್ವತ್ತಾಗಿತ್ತು. ದಿನವೂ ಅನ್ನವನ್ನು ಉಣ್ಣುವವ ರನ್ನು ಶ್ರೀಮಂತರೆಂದು ಪರಿಗಣಿಸಲಾಗುತ್ತದೆ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ದಾಸರ ವಾಣಿಯಂತೆ ಅನ್ನ ಮನುಷ್ಯನ ಬದುಕಿಗೆ ಬೇಕಾದ ಅತ್ಯಾವಶ್ಯಕ ಆಹಾರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

ರಾಮಧಾನ್ಯ ಚರಿತೆಯಲ್ಲಿ ಭತ್ತ

ಬದಲಾಯಿಸಿ
  • ಕನಕದಾಸರ "ರಾಮಧಾನ್ಯ ಚರಿತೆ"ಯಲ್ಲಿ ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುತ್ತಿರುತ್ತವೆ. ಈ ವಿಷಯ ರಾಮನ ಕಿವಿಗೂ ಮುಟ್ಟಿ ಅವನು ಇವೆರಡನ್ನು ಕರೆಸಿ, ಅವರಿಬ್ಬರ ವಾದವನ್ನು ಕೇಳುತ್ತಾನೆ. ಮೊದಲು ಮಾತನಾಡಿದ ಭತ್ತ ಈ ಜಗತ್ತಿಗೆ ತನ್ನ ಅನಿವಾರ್ಯತೆ ಅಗತ್ಯತೆಗಳನ್ನು ಒತ್ತಿ ಹೇಳುತ್ತದೆ.
  • ಭತ್ತ: ಪ್ರಭು ರಾಗಿಗಿಂತ ನಾನೇ ಶ್ರೇಷ್ಠ. ಹೇಗೆಂದರೆ ಭೂಸುರರು ಬಳಸುವುದು ನನ್ನನ್ನೇ, ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ರೀತಿಯ ಜನರು ನನ್ನನ್ನು ಬಳಸುತ್ತಾರೆ. ನಾನಿಲ್ಲದೆ ಶುಭಕಾರ್ಯಗಳಾಗಲಿ ಅಶುಭಕಾರ್ಯಗಳಾಗಲಿ ನಡೆಯುವುದಿಲ್ಲ. ಈ ಲೋಕವು ನನ್ನನ್ನು ಹೆಚ್ಚಾಗಿ ಬಳಸುವುದರಿಂದ ನಾನೇ ಹೆಚ್ಚು.[]
  • ರಾಗಿ: ಮಹಾಪ್ರಭು ಪ್ರಪಂಚದಲ್ಲಿ ನನ್ನ ಬಳಕೆಯೇ ಹೆಚ್ಚು. ಹೇಗೆಂದರೆ ಈ ಲೋಕದಲ್ಲಿ ಶ್ರೀಮಂತರಿಗಿಂತ ಬಡವರೆ ಹೆಚ್ಚು. ನಾನು ಬಡವರ ಅನುರಾಗಿ. ಕೂಲಿ ಕೆಲಸ ಮಾಡುವವರಿಂದ ಹಿಡಿದು, ಶ್ರೀಮಂತರವರೆಗೂ ನನ್ನನ್ನು ಬಳಸುತ್ತಾರೆ. ನನ್ನನ್ನು ತಿಂದವರು ಬಲಶಾಲಿಗಳಾಗುತ್ತಾರೆ. ಹಿಟ್ಟಂ ತಿಂದವ ಬೆಟ್ಟವ ಕಿತ್ತಿಟ್ಟಂ ಎಂಬ ಗಾದೆ ನನ್ನನ್ನು ನೋಡೆ ಮಾಡಿದ್ದು ಆದುದರಿಂದ ನಾನೇ ಹೆಚ್ಚು.
  • ರಾಮನಿಗೆ ಇವರಿಬ್ಬರ ವಿತಂಡವಾದವನ್ನು ಕೇಳಿ ಸಿಟ್ಟು ಬಂದು ಅವೆರಡನ್ನು ಕಾರಾಗೃಹಕ್ಕೆ ತಳ್ಳುವಂತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಾನೆ. ಒಂದಾರು ತಿಂಗಳು ತನ್ನ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಅವನ್ನು ಮರೆತು ಬಿಡುತ್ತಾನೆ. ಆರು ತಿಂಗಳ ನಂತರ ಅವುಗಳ ನೆನಪು ಬಂದು ಅವನ್ನು ವಿಚಾರಣೆಗೆ ಕರೆಸಿದಾಗ, ರಾಗಿ ಗುಂಡಣ್ಣನಂತೆ ಉರುಳಿ ಕೊಂಡು ಬರುತ್ತದೆ. ಭತ್ತ ಅನಾರೋಗ್ಯದಿಂದ ಸಾಯುವ ಸ್ಥಿತಿ ತಲುಪಿರುತ್ತದೆ.
  • ಆಗ ರಾಮ ಅವರಿಬ್ಬರಲ್ಲಿ ಯಾರು ಶ್ರೇಷ್ಠ ಈಗ ಹೇಳಿ ಎಂದಾಗ ಭತ್ತ ನಾಚಿಕೆಯಿಂದ ತಲೆ ತಗ್ಗಿಸುತ್ತದೆ. ರಾಮ ರಾಗಿಯನ್ನು ಕರೆದು ಅದನ್ನು ನೇವರಿಸಿ,ಅದಕ್ಕೆ "ರಾಮಧಾನ್ಯ" ಎಂಬ ಹೆಸರನ್ನು ಕೊಡುತ್ತಾನೆ. ಹೀಗಾಗಿ ಭತ್ತ ಪುರಾಣಗಳ ಕಾಲದಿಂದಲೂ ಇರುವುದು ಖಚಿತವಾಗುತ್ತದೆ. ಭತ್ತ ಬಾಲ್ಯವಾದರೆ, ಅಕ್ಕಿ ಯೌವನ, ಅನ್ನ ಮುಪ್ಪು. ಏಕೆಂದರೆ ಅಕ್ಕಿಯನ್ನು ಬೇಯಿಸಿದರೆ ಅದು ಅಂತ್ಯವಾದಂತೆ. ಅನ್ನವಾದ ನಂತರ ಅದಕ್ಕೆ ಮರು ಹುಟ್ಟು ಇರುವುದಿಲ್ಲ.

ಜನಪದಗೀತೆಗಳಲ್ಲಿ ಅನ್ನ

ಬದಲಾಯಿಸಿ
  • ಅಕ್ಕಿ ಹಾಕಿವ್ನಿ ಅನ್ನಾವ ಬಸಿದಿವ್ನಿ

ಗಂಡನೀಗೆ ಅನ್ನಾವ ಬಡಿಸಿಲ್ಲ
ಒಂದರಗಳಿಗೆ ಅನ್ನ ಬಡಿಸ್ಬಿಟ್ಟು
ಬತ್ತೀನಿ ಯಮದವ್ನೆ ಗಂಡಂಗ
ಅನ್ನ ಬಡಿಸ್ಬುಟ್ಟು ಬತ್ತೀನಿ ನಡಿ ಮುಂದೆ

  • ಅಕ್ಕಿ ಹಾಕಾವ ಅನ್ನವ ಬಸಿಯಾವ

ಗಂಡಂಗೆ ಅನ್ನ ಬಡಿಸಾವ
ಮತ್ತೊಬ್ಬ ಕರಚಲುವೆ ಬತ್ತಾಳೆ
ನೀ ಮಕ್ಕಳ ತಾಯಿ ನಡೆ ಬೇಗ

  • ಆದ ಅನ್ನ ಬಿಟ್ಟು ಕಾದ ನೀರು ಬಿಟ್ಟು

ಕಂದಗೊಳ ಬಿಟ್ಟು ಮನೆ ಬಿಟ್ಟು/ಗೌಡರು
ಹೊಂಟಾರು ಯಮನ ಮಡಿಲಿಗೆ

  • ತುಪ್ಪ ಅನ್ನ ಉಂಡು ಪಟ್ಟರಾಣ್ಯ ಹೊದ್ದು

ಮುತ್ತಿನ ಕೊಡ್ಲಿ ಹೆಗಲೂರಿ/ತಂದಾನು
ಪುಟ್ಟು ನೇರಾಳ ಕೊನೆಗಳ

  • ಹಾಲು ಅನ್ನ ಉಂಡು ರಾಲಿರಾಣ್ಯ ಹೊನ್ನು

ಹಾವಿನ ಕೊಡ್ಲಿ ಹೆಗಲೂರಿ/ತಂದಾನು
ಸೋ ಎನ್ನಿರೆ, ಸೋಬಾನ ಎನ್ನಿರೆ

ಜನಪದ ನಂಬಿಕೆಗಳಲ್ಲಿ ಅನ್ನ

ಬದಲಾಯಿಸಿ
  1. ಅಕ್ಕಿಯನ್ನಾಗಲಿ, ಅನ್ನವನ್ನಾಗಲಿ ಕಾಲಿನಿಂದ ತುಳಿಯಬಾರದು, ತುಳಿದರೆ ಸಾಯೊ ಹೊತ್ತಿಗೆ ತುತ್ತು ಅನ್ನವು ಸಿಗೋದಿಲ್ಲ
  2. ಅನ್ನ ನೀರಿನ ದಾನ ಮಾಡುವವರಿಗೆ ಸಿರಿ-ಸಂಪತ್ತು,ಪುಣ್ಯ ಲಭಿಸುತ್ತದೆ. ಪಾಪ ನಿವಾರಣೆಯಾಗುತ್ತದೆ.
  3. ಕೆಂಪಕ್ಕಿ ದಾನ ಕೊಟ್ಟರೆ ಅಂತಹವರ ಮನೆತನ ಏಳಿಗೆಯಾಗುತ್ತದೆ.
  4. ಅಕ್ಕಿ ಅಥವಾ ಅನ್ನವನ್ನು ಹಿಯಾಳಿಸಿದರೆ ಅಂತಹವರ ವಂಶಕ್ಕೆ ದರಿದ್ರ ಸುತ್ತಿಕೊಳ್ಳುತ್ತದೆ.
  5. ಕೆಂಪಕ್ಕಿ ಅನ್ನ ತಿಂದ್ರೆ ಆರೋಗ್ಯ ಕೆಡೋದಿಲ್ಲ.

ಜನಪದ ಗಾದೆಗಳಲ್ಲಿ ಅನ್ನ

ಬದಲಾಯಿಸಿ
  1. ಅಕ್ಕನ ಮನೆ ಅನ್ನ ಮುಗ್ಗಲಕ್ಕಿಗೆ ಸಮ.
  2. ಅಕ್ಕಿ ಮೇಲೂ ಆಸೆ ನೆಂಟರ ಮೇಲೂ ಪ್ರೀತಿ.
  3. ಅನ್ನ ಕೊಟ್ಟು, ಅಂಬ್ಲಿ ತಗೊಂಡ್ಳು.
  4. ಕೆಂಪಕ್ಕಿ ಅನ್ನ ಚೆಂದ, ಕೆಂಪು ಮೊಗದ ಹೆಣ್ಣು ಅಂದ.
  5. ಅಕ್ಕರಿಲ್ಲದ ಚಿಕ್ಕವ್ವ ಅಕ್ಕಿ ಹಾಕಿ ಅನ್ನ ಮಾಡಿ ಬರಿ ಬಾಯ್ಮಾತಿಗೆ ಬಾಬಾ ಅಂದ್ಲು.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://www.google.co.in/search?q=%E0%B2%85%E0%B2%A8%E0%B3%8D%E0%B2%A8&biw=1600&bih=789&tbm=isch&tbo=u&source=univ&sa=X&ei=XONqVfP5MpWguQSvroLYCg&ved=0CBwQsAQ
  2. ಜೀವಧಾರೆ. ಕೆ.ಸೌಭಾಗ್ಯವತಿ
  3. "ಆರ್ಕೈವ್ ನಕಲು". Archived from the original on 2015-04-23. Retrieved 2015-05-31.
"https://kn.wikipedia.org/w/index.php?title=ಅನ್ನ&oldid=1213568" ಇಂದ ಪಡೆಯಲ್ಪಟ್ಟಿದೆ