ತಳಿವಿಜ್ಞಾನ

(ತಳಿಶಾಸ್ತ್ರ ಇಂದ ಪುನರ್ನಿರ್ದೇಶಿತ)

ತಳಿವಿಜ್ಞಾನವು ಜೀವಿಗಳ ಜೀನ್‍ಗಳು, ಆನುವಂಶೀಯತೆ, ತಳಿ ಬದಲಾವಣೆಗಳನ್ನು ಅಧ್ಯಯನ ಮಾಡುವ ವಿಭಾಗವಾಗಿದೆ.[][][] ಇದನ್ನು ಸಾಮಾನ್ಯವಾಗಿ ಜೀವಶಾಸ್ತ್ರದ ಭಾಗವಾಗಿ ಅಧ್ಯಯನ ಮಾಡಲಾಗುತ್ತದೆ. ಆದರೆ ಇದು ಜೀವವಿಜ್ಞಾನ ಮತ್ತು ಮಾಹಿತ ತಂತ್ರಜ್ಞಾನಗಳನ್ನು ಜೊತೆಗೆ ಜೋಡಿಸುವ ಕೊಂಡಿಯೆಂದು ತಿಳಿಯಲಾಗುತ್ತಿದೆ.

ಗ್ರೆಗರ್ ಮೆಂಡಲ್
ಮಿಶ್ರತಳೀಕರಣ

ವಿಚರಣೆಗಳು, ಜೀವವಿಕಾಸ ಮುಂತಾದ ವಿಷಯಗಳನ್ನು ಅರಿಯಲು ಈ ಶಾಖೆ ಸಹಾಯ ಮಾಡುತ್ತದೆ. ಇದು ಜೀವವಿಜ್ಞಾನದ ಅತ್ಯಂತ ಆಧುನಿಕ ಶಾಖೆ. ಜೀವರಸಾಯನ ಶಾಸ್ತ್ರ, ಬೆಳವಣಿಗೆ, ವಿಭೇದೀಕರಣ ಮುಂತಾದ ವಿಚಾರಗಳೂ ಈ ಶಾಖೆಯ ಪ್ರಕಾರದೊಳಗೆ ಬರುತ್ತವೆ. ಅತ್ಯಂತ ಸೂಕ್ಷ್ಮ ಜೀವಿಗಳಾದ ವೈರಸ್‍ಗಳಿಂದ ಹಿಡಿದು ಮಾನವನವರೆಗಿನ ಜೀವಿಗಳಲ್ಲಿನ ಅನುವಂಶೀಯ ಗುಣಗಳು ಯಾವುವು ಮತ್ತು ಅನುವಂಶೀಯತೆಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಳಿಶಾಸ್ತ್ರ ಚರ್ಚಿಸುತ್ತದೆ. ಪಿತೃಗಳಿಂದ ಪೀಳಿಗೆಗೆ ಅನುವಂಶೀಯ ಗುಣಗಳು ಹೇಗೆ ಸಾಗಿ ಬರುತ್ತವೆ ಎಂಬುದನ್ನು ತಿಳಿಸುವುದೇ ಅಲ್ಲದೆ ಅನುವಂಶೀಯತೆಗೆ ಮೂಲ ಘಟಕಗಳಾದ ಜೀನುಗಳು ಎಂದರೇನು? ಇವುಗಳಲ್ಲಿರುವ ರಾಸಾಯನಿಕ ವಸ್ತುಗಳಾವುವು? ಎಂಬೆಲ್ಲ ವಿಚಾರಗಳನ್ನು ಈ ಶಾಖೆ ಸವಿಸ್ತಾರವಾಗಿ ಚರ್ಚಿಸುತ್ತದೆ.

ತಳಿಶಾಸ್ತ್ರದ ಜನಕ ಗ್ರೆಗರ್ ಮೆಂಡೆಲ್, ೧೯ನೇ ಶತಮಾನದ ಒಬ್ಬ ಅಗಸ್ಟಿನಿಯನ್ ಫ಼್ರಾಯರ್. ಗ್ರೆಗರ್ ಮೆಂಡಲನು ಹೇಗೆ ಒಂದು ಪೀಳಿಗೆಯಿಂದ ಮುಂದಿನ ಹೊಸ ಪೀಳಿಗೆಗೆ ಜೀನ್‍ಗಳು ಬರುತ್ತವೆ ಎಂಬುದನ್ನು ತಳಿ ಮುಂದುವರಿಕೆ ಮಾದರಿಯ ಮೂಲಕ ತಿಳಿಸಿದರು. ಅವರು ಒಂದು ಜೀವಿ (ಬಟಾಣಿ ಸಸ್ಯ)ಯು ತನ್ನ ತಳಿಲಕ್ಷಣವನ್ನು ಮುಂದಿನ ಪೀಳಿಗೆಗೆ 'ಪ್ರತ್ಯೇಕ ಘಟಕ'ದ ಮೂಲಕ ಮುಂದುವರೆಸುತ್ತದೆ ಎಂಬುದನ್ನು ವೀಕ್ಷಣೆ ಮಾಡಿದರು. ಇದು ಇಂದಿಗೂ ಪ್ರಚಲಿತದಲ್ಲಿದೆ. ಆದರೆ 'ಜೀನ್' ಎಂಬ ಈ ಪದಪುಂಜವು ಒಂದು ಅಸ್ಪಷ್ಟ ಅರ್ಥವನ್ನು ಸೂಚಿಸುತ್ತದೆ.

೨೧ನೇ ಶತಮಾನದಲ್ಲೂ ತಳಿಲಕ್ಷಣ ಮುಂದುವರಿಕೆ ಮತ್ತು ಅಣುಲಕ್ಷಣ ಮುಂದುವರಿಕೆಯೆಂಬ ಪ್ರಾಥಮಿಕ ತತ್ವವು ಜಾರಿಯಲ್ಲಿದೆ. ಆದರೆ ಆಧುನಿಕ ತಳಿಶಾಸ್ತ್ರದಲ್ಲಿ ತಳಿಲಕ್ಷಣ ಮುಂದುವರಿಕೆಯಿಂದಾಚೆ ಜೀನ್‍ಗಳ ನಡುವಳಿಕೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಜೀನ್‍ನ ರಚನೆ ಮತ್ತು ಕಾರ್ಯ, ಬದಲಾವಣೆ ಮತ್ತು ಹರಡಿಕೊಂಡಿರುವಿಕೆಯು ಜೀವಕೋಶದ ಅಧ್ಯಯನದ ಸಂದರ್ಭದಲ್ಲಿ ಕಂಡುಬರುತ್ತದೆ. ತಳಿಶಾಸ್ತ್ರವು ಹಲವಾರು ಉಪ ಕ್ಷೇತ್ರಗಳನ್ನು ಹುಟ್ಟುಹಾಕಿದೆ- ಎಪಿಜೆನೆಟಿಕ್ಸ್ ಮತ್ತು ಜನಸಂಖ್ಯೆ ತಳಿಶಾಸ್ತ್ರ. ಜೀವಿಗಳ ವಲಯದ ವಿಶಾಲ ಅರ್ಥದಲ್ಲಿ ಜೀವಿಗಳನ್ನು ಅಧ್ಯಯನ ಮಾಡಲಾಗುತ್ತಿದೆ, ಉದಾಹರಣೆಗೆ ಬ್ಯಾಕ್ಟೀರಿಯ, ಸಸ್ಯಗಳು, ಪ್ರಾಣಿಗಳು ಮತ್ತು ಮಾನವರು.

ಅನೇಕ ಕೋಶಗಳಿಂದ ತೆಗೆಯಲಾದ ಬಹು ವರ್ಣತಂತುಗಳ ಚಿತ್ರ

ತಳಿವಿಜ್ಞಾನವು ಭಿನ್ನತೆ ಹಾಗೂ ಅವುಗಳಿಗೆ ಕಾರಣವಾದ ಅಂಶಗಳ ಬಗ್ಗೆ ಕ್ರಮಬಧ್ಧವಾಗಿ ಅಧ್ಯಯನ ನಡೆಸುವ ಜೀವಶಾಸ್ತ್ರದ ಒಂದು ಶಾಖೆ ಆಗಿದೆ. ತಳಿವಿಜ್ಞಾನ ಕ್ಷೇತ್ರದಲ್ಲಿ ಮೊದಲು ಪ್ರಯೋಗಗಳನ್ನು ನಡೆಸಿದವನು ಗ್ರೆಗೋರ್ ಜೊಹಾನ್ ಮೆಂಡಲ್. ಈತನನ್ನು "ಆಧುನಿಕ ತಳಿವಿಜ್ಞಾನದ ಪಿತಾಮಹ" ಎಂದು ಕರೆಯುತ್ತಾರೆ. ಅವರು ಬಟಾಣಿ ಗಿಡಗಳ ಮೇಲೆ ತಮ್ಮ ಪ್ರಯೋಗವನ್ನು ನಡೆಸಿದರು. ಬಟಾಣಿಸಸ್ಯಗಳ ಹೂಗಳಲ್ಲಿ ಸ್ವಕೀಯ ಮತ್ತು ಪರಕೀಯ ಪರಾಗಸ್ಪರ್ಶವನ್ನು ಸುಲಭವಾಗಿ ನಡೆಸಬಹುದು. ಅವು ಸಂಕ್ಷಿಪ್ತ ಅವಧಿಯ ಜೀವನ ಚಕ್ರವನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯ ಬೀಜಗಳನ್ನು ಉತ್ಪತ್ತಿ ಮಾಡುತ್ತವೆ. ಮೆಂಡಲರು ಎತ್ತರವಾದ ಮತ್ತು ಗಿಡ್ಡವಾದ ಬಟಾಣಿ ಗಿಡಗಳ ಬೀಜಗಳನ್ನು ಆಯ್ದುಕೊಂಡು ಅವುಗಳಲ್ಲಿ ಸ್ವಕೀಯ ಪರಾಗಸ್ಪರ್ಶಗಳನ್ನು ನಡೆಸಿದರು. ಕೆಲವು ಪೀಳಿಗೆಗಳವರೆಗೂ ಸ್ವಕೀಯ ಪರಾಗಸ್ಪರ್ಶಗಳನ್ನು ನಡೆಸಿ, ಶುದ್ಧ ಸಂತಾನವನ್ನು ಪಡೆದರು.

ಮೆಂಡಲನ ಪ್ರಯೋಗಗಳು

ಬದಲಾಯಿಸಿ

ಮೆಂಡಲ್ ತನ್ನ ಪ್ರಯೋಗಕ್ಕೆ ಬಟಾಣಿಯನ್ನು ಆಯ್ದುಕೊಂಡ. ಏಕೆಂದರೆ,

  • ಬಟಾಣಿ ಗಿಡಗಳು ಸಂಕ್ಷಿಪ್ತ ಬೆಳವಣಿಗೆಯ ಅವಧಿ ಹಾಗೂ ಜೀವನಚಕ್ರ ಹೊಂದಿದೆ.
ಬಟಾಣಿ
  • ಈ ಗಿಡಗಳನ್ನು ಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದು.
  • ಹೂಗಳಲ್ಲಿ ಸ್ವಕೀಯ ಪರಾಗಸ್ಪರ್ಶ ನಡೆಯುತ್ತದೆ, ಜೊತೆಗೆ ಪರಕೀಯ ಪರಾಗಸ್ಪರ್ಶವನ್ನು ಸುಲಭವಾಗಿ ನಡೆಸಬಹುದಾಗಿದೆ.
  • ಹೆಚ್ಚಿನ ಸಂಖ್ಯೆಯ ಬೀಜಗಳನ್ನು ಉತ್ಪತ್ತಿ ಮಾಡುತ್ತವೆ.
  • ಅನುವಂಶೀಯವಾಗಬಲ್ಲ ವಿವಿಧ ಭಿನ್ನ ಲಕ್ಷಣಗಳನ್ನು ತೋರುತ್ತದೆ.
  • ಪರಕೀಯ ಪರಾಗಸ್ಪರ್ಶವಾದಾಗ ಫಲವತ್ತಾದ ಮಿಶ್ರತಳಿಯನ್ನು ಉತ್ಪತ್ತಿ ಮಾಡುತ್ತವೆ.

ತಳಿಶಾಸ್ತ್ರಜ್ಞನು ಪ್ರಯೋಗಗಳನ್ನು ನಡೆಸುವಾಗ ಸಂತತಿಯಲ್ಲಿನ ಭಿನ್ನತೆಗಳನ್ನು ಗಮನಿಸಿ, ಆ ಭಿನ್ನತೆ ಅನುವಂಶೀಯವಾಗಲು ಕಾರಣವಾದ ಅಂಶಗಳನ್ನು ವಿಶ್ಲೇಷಿಸುತ್ತಾನೆ. ಪ್ರತಿಯೊಂದು ಜೀವಿಯಲ್ಲೂ ಒಂದು ಗುಣಕ್ಕೆ ವಿರುದ್ಧವಾದ ಅಥವಾ ಭಿನ್ನವಾದ ಎರಡು ರೂಪಗಳು ಇರಬಹುದು.

ಶಬ್ದೋತ್ಪತ್ತಿ

ಬದಲಾಯಿಸಿ

ತಳಿಶಾಸ್ತ್ರ ಎಂಬ ಪದಪುಂಜವನ್ನು ಪ್ರಾಚೀನ ಗ್ರೀಕ್ ಭಾಷೆಯ γενετικός genetikos ಪದದಿಂದ ಪಡೆಯಲಾಗಿದೆ, ಅದರ ಅರ್ಥ 'ಉತ್ಪಾದನೆ/ಉತ್ಪಾದಿಸಬಲ್ಲ'[] ಎಂಬುದಾಗಿದೆ, ಅದನ್ನು ಮತ್ತಷ್ಟು ವಿಷದೀಕರಿಸಿದಾಗ 'ಮೂಲ' ಎಂಬ ಅರ್ಥ ನೀಡುತ್ತದೆ.

ತಳಿವಿಜ್ಞಾನದ ಐತಿಹಾಸಿಕ ಹಿನ್ನಲೆ

ಬದಲಾಯಿಸಿ

ಆಯ್ದ ತಳಿ[]ಯು ತನ್ನ ಮೂಲ ತಳಿಲಕ್ಷಣವನ್ನು ತನ್ನ ಪಿತೃ ಜೀವಿಯಿಂದ ಮುಂದಿನ ಮರಿ ಜೀವಿಗೆ ಸಸ್ಯ ಮತ್ತು ಪ್ರಾಣಿಗಳಲ್ಲಿ ಹೇಗೆ ವರ್ಗಾವಣೆ ಮಾಡುತ್ತದೆ ಎಂಬುದು ಬಹಳ ಹಿಂದಿನಿಂದಿಲೂ ನಾವು ಅವಲೋಕಿಸುತ್ತಾ ಬಂದಿದ್ದೇವೆ. ತಳಿಶಾಸ್ತ್ರದ ಬಗ್ಗೆ ಆಧುನಿಕ ವಿಜ್ಞಾನದ ಜ್ಞಾನವನ್ನು ೧೯ನೇ ಶತಮಾನದ ಮಧ್ಯದಲ್ಲಿ ಗ್ರೇಗರ್ ಮೆಂಡಲರವರ ಕಾರ್ಯದಿಂದ ತಿಳಿಯಲಾಯಿತು.

ತಳಿಶಾಸ್ತ್ರ ನಿಖರವಾಗಿ ೧೮೬೬ರಲ್ಲಿ ಆಸ್ಟ್ರಿಯದ ಪಾದ್ರಿ ಗ್ರೆಗೊರ್ ಮೆಂಡಲನ ಪ್ರಯೋಗಗಳಿಂದ ಮತ್ತು ಆತ ಪ್ರತಿಪಾದಿಸಿದ ಅನುವಂಶೀಯ ನಿಯಮಗಳಿಂದ ಪ್ರಾರಂಭವಾಯಿತೆನ್ನಬಹುದು. ಆದರೆ ಈತನ ಪ್ರಯೋಗಗಳು ೧೯೦೦ರ ವರೆಗೂ ಬೆಳಕಿಗೆ ಬರಲಿಲ್ಲ. ಆ ವರ್ಷ ಕಾರೆನ್ಸ್, ಡಿ ವ್ರೈಸ್ ಮತ್ತು ಷೆರ್ಮಾಕ್ ಎಂಬ ವಿಜ್ಞಾನಿಗಳು ಸ್ವತಂತ್ರವಾಗಿ ಏಕಕಾಲದಲ್ಲಿ ಮೆಂಡಲನ ತತ್ತ್ವಗಳನ್ನು ಆವಿಷ್ಕರಿಸಿದರು. ಆದರೆ ತಳಿಶಾಸ್ತ್ರ ಕೇವಲ ಮೆಂಡಲಿನಿಂದ ಈಚೆಗೆ ಹುಟ್ಟಿಬಂದ ಶಾಖೆಯೇನಲ್ಲ.[] ಏಕೆಂದರೆ ಆದಿಯಿಂದಲೂ ಅನುವಂಶೀಯತೆಯ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಇದ್ದವು ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ. ಇಂಥ ಭಾವನೆಗಳು ಮಾನವನ ಉಗಮದಿಂದಲೇ ಹುಟ್ಟಿಬಂದಿರಬೇಕು. ಕಿ.ಪೂ.೪೦೦೦ಕ್ಕೂ ಮುಂಚಿನ ಬ್ಯಾಬಿಲೋನಿಯನ್ನರ ಶಾಸನಗಳಲ್ಲಿ ಕುದುರೆಯ ಶಿರದ ಆಕಾರ ಮತ್ತು ಅದರ ಕುತ್ತಿಗೆಯ ಮೇಲಿನ ಅಲಿಯಾನ ಬೆಳವಣಿಗೆಯ ಬಗ್ಗೆ ಐದು ಪೀಳಿಗೆಯವರೆಗಿನ ವಂಶವೃಕ್ಷವಿರುವುದು ಕಂಡುಬಂದಿದೆ. ಕ್ರಿಸ್ತಪೂರ್ವದ ಕಾಲದ ಕೆಲವು ಶಾಸನಗಳಲ್ಲಿ ಖರ್ಜೂರದ ಮರಗಳ ತಳಿಸಂಕರ ಕ್ರಿಯೆಯ ಬಗ್ಗೆ ನಿರೂಪಣೆ ಇದೆ. ಅಂದಿನ ಜನರಿಗೆ ಲೈಂಗಿಕ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಅಡಗಿರುವ ಕೆಲವು ವಿಚಾರಗಳ ಬಗ್ಗೆ ಅರಿವಿತ್ತು ಎಂಬುದು ಈ ನಿರೂಪಣೆಗಳಿಂದ ಅರ್ಥವಾಗುತ್ತದೆ. ಕ್ರಿಸ್ತಪೂರ್ವದ ಶತಮಾನಗಳಲ್ಲಿ ಚೀನೀಯರಿಗೆ ಸಂಕರ ತಳಿಗಳ ಹಾಗೂ ವಿಶಿಷ್ಟ ತಳಿಯ ಆಯ್ಕೆಯ ಬಗ್ಗೆ ಆಸಕ್ತಿಯಿತ್ತು. ಈ ದಿಕ್ಕಿನಲ್ಲಿ ಅವರು ಯಶಸ್ವೀ ಪ್ರಯೋಗಗಳನ್ನು ನಡೆಸಿದ್ದರು ಎಂಬುದಕ್ಕೆ ದಾಖಲೆಗಳಿವೆ. ನಮ್ಮ ಸಮಕಾಲಿನ ಬೆಳೆಗಳಾದ ಭತ್ತ, ರಾಗಿ, ಹತ್ತಿ ಮುಂತಾದವು ಈಗಿನ ರೂಪದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿರಲಿಲ್ಲ. ಇವನ್ನು ನಮ್ಮ ಪೂರ್ವಜರು ಕಾಡುಗಿಡಗಳ ತಳಿಸಂಕರ ಕ್ರಿಯೆಯಿಂದ ಪಡೆದರು. ಹೀಗೆ ವಿಕಾಸಗೊಂಡ ಈ ಸಂಕರತಳಿಗಳು ಕೇವಲ ಮಾನವನ ಆಶ್ರಯದಲ್ಲಿ ಬೆಳೆಯಬಲ್ಲವೇ ಹೊರತು ತಮಗೆ ತಾವೇ ಬದುಕಲಾರವು. ಈಗಿರುವ ಸಾಕುಪ್ರಾಣಿಗಳೆಲ್ಲವೂ ಪ್ರಕೃತಿಯಲ್ಲಿದ್ದ ವನ್ಯಜೀವಿಗಳ ಸಂಕರಕ್ರಿಯೆಯಿಂದಲೇ ಹುಟ್ಟಿ ಬಂದವು; ಕಾಡಿನಲ್ಲಿ ಈಗ ಬದುಕಲಾರವು. ಇವಕ್ಕೆ ಮಾನವನ ಆಶ್ರಯ ಬೇಕೇಬೇಕು. ಇದೆಲ್ಲವನ್ನೂ ವಿಚಾರ ಮಾಡಿದಾಗ ತಳಿಶಾಸ್ತ್ರ ಮಾನವನ ಉಗಮದೊಂದಿಗೇ ಆರಂಭವಾದ ಜ್ಞಾನಶಾಖೆ ಎಂಬುದು ವೇದ್ಯವಾಗುತ್ತದೆ.[]

ವೈಜ್ಞಾನಿಕ ಹುಟ್ಟು

ಬದಲಾಯಿಸಿ

ವೈಜ್ಞಾನಿಕವಾಗಿ ತಳಿಶಾಸ್ತ್ರ ಪ್ರಾರಂಭವಾದ ಬಗ್ಗೆ ನಿಖರವಾದ ದಾಖಲೆಗಳು ಇಲ್ಲದಿದ್ದಲ್ಲಿ ಪೈತಾಗರಸನ ಕಾಲದಿಂದಲೇ ಇದು ಬೆಳೆದು ಬಂದಿರುವುದನ್ನು ನಾವು ಕಾಣಬಹುದು. ತಳಿಶಾಸ್ತ್ರದ ಬಗ್ಗೆ ಇವನಿಗಿದ್ದ ಕೆಲವು ಭಾವನೆಗಳು ಅತ್ಯಂತ ಕುತೂಹಲಕಾರಿಗಳಾಗಿವೆ. ಸಂಭೋಗ ಕ್ರಿಯೆಯ ಕಾಲದಲ್ಲಿ ಗಂಡಿನ ವಿವಿಧ ಅಂಗಗಳಿಂದ ತೇವಭರಿತವಾದ ಒಂದು ರೀತಿಯ ಹಬೆ ಹುಟ್ಟಿಬರುತ್ತದೆ ಎಂದು ಈತನೂ ಈತನ ಸಮಕಾಲೀನ ಎಂಪೆಡಾಕ್ಲೀಸನೂ ನಂಬಿದ್ದರು. ಈ ಹಬೆ ಹೆಣ್ಣಿನ ಗರ್ಭಕೋಶದೊಳಗೆ ಸೇರಿ ಬೆಳೆಯುವ ಭ್ರೂಣದಲ್ಲಿನ ವಿವಿಧ ಅಂಗಗಳನ್ನು ಉತ್ಪಾದಿಸುತ್ತದೆ ಎಂದು ಇವರು ತರ್ಕಿಸಿದರು. ಪೈತಾಗರಸನ ಪ್ರಕಾರ ಬೆಳೆಯುವ ಭ್ರೂಣಕ್ಕೆ ಹೆಣ್ಣು ಯಾವ ಕೊಡುಗೆಯನ್ನು ನೀಡುವುದಿಲ್ಲ. ಆದರೆ ಎಂಪೆಡಾಕ್ಲೀಸನ ಪ್ರಕಾರ ಹೆಣ್ಣು ಮತ್ತು ಗಂಡುಗಳೆರಡೂ ಭ್ರೂಣದ ಬೆಳವಣಿಗೆಯಲ್ಲಿ ಸಹಕರಿಸುತ್ತವೆ.[]

ಅರಿಸ್ಟಾಟಲ್‍ನ ಪ್ರಕಾರ

ಬದಲಾಯಿಸಿ

ಇವರ ನಂತರದ ತತ್ವಜ್ಞಾನಿ ಅರಿಸ್ಟಾಟಲನಾದರೋ ಗಂಡಿನಿಂದ ಹುಟ್ಟಿ ಬರುವ ವೀರ್ಯ ಅತ್ಯಂತ ಶುದ್ಧವಾದ ರಕ್ತವೆಂದು ಹೇಳಿದ. ಈ ಪರಿಶುದ್ಧ ರಕ್ತ ಹೆಣ್ಣಿನಲ್ಲಿ ಹೊಸ ಜೀವಿಯನ್ನು ಕೊಡುತ್ತದೆ ಎಂದು ಈತ ತೀರ್ಮಾನಿಸಿದ. ಈತನ ಪ್ರಕಾರ ಹೆಣ್ಣು ಬಹಿಷ್ಠೆಯಾದಾಗ ಹೊರಬರುವ ದ್ರವ ಅಶುದ್ಧ ವಸ್ತು. ಹೆಣ್ಣಿನ ಈ ಅಶುದ್ಧ ರಕ್ತದಿಂದ ಭ್ರೂಣ ತನ್ನ ಬೆಳವಣಿಗೆಗೆ ಬೇಕಾದ ವಸ್ತುಗಳನ್ನು ಆರಿಸಿಕೊಂಡು ಬೆಳೆಯುತ್ತದೆ ಎಂಬುದು ಈತನ ಅಭಿಪ್ರಾಯ. ಅಂದರೆ ಈತನ ಪ್ರಕಾರ ಗಂಡಿನಲ್ಲಿ ಜೀವ ಕೊಡುವ ವಸ್ತುವಿದೆಯಾದರೆ ಹೆಣ್ಣಿನಲ್ಲಿ ಆ ಜೀವದ ಬೆಳವಣಿಗೆಗೆ ಬೇಕಾದ ಎಲ್ಲ ವಸ್ತುಗಳೂ ಇವೆ. ಅರಿಸ್ಟಾಟಲನ ತತ್ತ್ವವನ್ನು ಆಧಾರರಹಿತ ಹಾಗೂ ನಿರುಪಯುಕ್ತ ಎಂದು ವೈಜ್ಞಾನಿಕವಾಗಿ ತೋರಿಸುವವರೆಗೆ ಚಾಲ್ತಿಯಲ್ಲಿತ್ತು.[]

ಲ್ಯೂವೆನ್‍ಹೂಕ್‍ನ ಪ್ರಯೋಗ

ಬದಲಾಯಿಸಿ

ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿ ಲ್ಯೂವೆನ್‍ಹೂಕ್ ಎಂಬಾತ ಗಂಡಿನ ವೀರ್ಯದಲ್ಲಿರುವ ರೇತ್ರಾಣುಗಳನ್ನು ಸೂಕ್ಷ್ಮದರ್ಶಕದ ಸಹಾಯದಿಂದ ಗುರುತಿಸಿದ. ಪ್ರಪ್ರಥಮವಾಗಿ ಹೆಣ್ಣಿನ ಮೊಟ್ಟೆಯನ್ನು ಗುರುತಿಸಿದ ಕೀರ್ತಿಯೂ ಈತನಿಗೆ ಸಲ್ಲುತ್ತದೆ. ರೇತ್ರಾಣು ಭ್ರೂಣಕ್ಕೆ ಜೀವ ಕೊಡುತ್ತದೆ. ಮೊಟ್ಟೆ ಭ್ರೂಣದ ಬೆಳವಣಿಗೆಗೆ ಆಹಾರವನ್ನು ಒದಗಿಸುತ್ತದೆ ಎಂಬುದು ಈತನ ನಂಬಿಕೆ. ತನ್ನ ನಂಬಿಕೆ ನಿಜವೆಂದು ತೋರಿಸಲು ಕೆಲವು ಪ್ರಯೋಗಗಳನ್ನೂ ಈತ ನಡೆಸಿದ. ಕಂದು ಬಣ್ಣದ ಗಂಡು ಮೊಲವನ್ನು ಬಿಳಿಯ ಬಣ್ಣದ ಹೆಣ್ಣು ಮೊಲದೊಡನೆ ಸಂಕರ ಕ್ರಿಯೆಗೊಳಪಡಿಸಿ ಪ್ರಥಮ ಪೀಳಿಗೆಯಲ್ಲಿ ಎಲ್ಲ ಮರಿಗಳೂ ಕಂದು ಬಣ್ಣವನ್ನೇ ಪಡೆಯುವುದನ್ನು ತೋರಿಸಿದ. ಆದ್ದರಿಂದ ಹುಟ್ಟುವ ಪೀಳಿಗೆಯಲ್ಲಿ ಗಂಡಿನ ಗುಣವೇ ಪ್ರಧಾನವೆಂದೂ ಹೆಣ್ಣು ಕೇವಲ ಗಂಡಿನ ಗುಣಗಳ ಬೆಳವಣಿಗೆಗೆ ಪೂರಕವಾದ ಆಹಾರ ವಸ್ತುಗಳನ್ನು ನೀಡುತ್ತದೆ ಎಂದೂ ಈತ ತೀರ್ಮಾನಿಸಿದ.

ಸ್ವಾಮರ್‌ಡ್ಯಾಮ್ ಪ್ರಕಾರ

ಬದಲಾಯಿಸಿ

ಈತನ ತರುವಾಯ ಸ್ವಾಮರ್‌ಡ್ಯಾಮ್ ಎಂಬ ವಿಜ್ಞಾನಿ ಪೂರ್ವೋದ್ಭವ ಸಿದ್ಧಾಂತವನ್ನು ಪ್ರತಿಪಾದಿಸಿದ. ಇದರ ಪ್ರಕಾರ ಮುಂದೆ ಬೆಳೆದು ರೂಪುಗೊಳ್ಳುವ ಜೀವಿ ಗಂಡಿನ ರೇತ್ರಾಣುವಿನಲ್ಲಿ ಮತ್ತು ಹೆಣ್ಣಿನ ಅಂಡದಲ್ಲಿ ಪೂರ್ವಭಾವಿಯಾಗಿ ರೂಪಗೊಂಡಿರುತ್ತದೆ. ಹೀಗೆ ಅಡಗಿರುವ ಈ ಜೀವಿ ಮುಂದೆ ದೊಡ್ಡದಾಗಿ ಬೆಳೆದು ಹೊರಬರುತ್ತದೆ. ಈ ಸಿದ್ಧಾಂತ ಕೇವಲ ಕಾಲ್ಪನಿಕವಾಗಿದ್ದರೂ ದೈವ ಸೃಷ್ಟಿ ಮತ್ತು ಮಾಟ ಮುಂತಾದ ನಂಬಿಕೆಗಳನ್ನು ತಳ್ಳಿಹಾಕಿ ವಾಸ್ತವ ದೃಷ್ಟಿಯನ್ನು ಬೆಳೆಸಿಕೊಳ್ಳಲು ಕೆಲಮಟ್ಟಿಗೆ ಸಹಾಯ ಮಾಡಿತು.

ಮಪಾರ್ಟಿಯಸ್ ಪ್ರಕಾರ

ಬದಲಾಯಿಸಿ

೧೮ನೆಯ ಶತಮಾನದ ಮಪಾರ್ಟಿಯಸ್ ಎಂಬ ವಿಜ್ಞಾನಿ ಪೂರ್ವೋದ್ಭವ ಸಿದ್ಧಾಂತವನ್ನು ಒಪ್ಪದೆ ಅದಕ್ಕೆ ಬದಲಾಗಿ ದ್ವಿಪಿತೃ ಅನುವಂಶೀಯತೆಯ ತತ್ತ್ವವನ್ನು ಪ್ರತಿಪಾದಿಸಿದ. ಈತನ ಪ್ರಕಾರ ಗಂಡು ಮತ್ತು ಹೆಣ್ಣುಗಳೆರಡೂ ಭವಿಷ್ಯ ಜೀವಿಯ ರೂಪುಗೊಳ್ಳುವಿಕೆಗೆ ಸಹಾಯ ಮಾಡುತ್ತವೆ.[೧೦] ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ವೀರ್ಯವನ್ನು ಉತ್ಪಾದಿಸುತ್ತವೆ. ಈ ವೀರ್ಯದಲ್ಲಿ ಅತಿ ಸೂಕ್ಷ್ಮವಾದ ಕಣಗಳು ಅಡಗಿರುತ್ತವೆ. ಈ ಎರಡು ಕಣಗಳು ಒಂದರೊಡನೊಂದು ಕೂಡುವುದರಿಂದ ಭವಿಷ್ಯ ಜೀವಿಯ ನಿರ್ದಿಷ್ಟ ಅಂಗಗಳು ರೂಪುಗೊಳ್ಳುವುವು. ಗಂಡಿನಿಂದ ಬಂದ ಕಣಗಳು ಪ್ರಬಲ ಗುಣಗಳನ್ನು ಪಡೆದಿದ್ದರೆ ಆ ಜೀವಿ ತಂದೆಯನ್ನೇ ಹೆಚ್ಚು ಹೋಲುತ್ತದೆ. ಹಾಗಲ್ಲದೆ ತಾಯಿಯಿಂದ ಬಂದ ಕಣಗಳು ಪ್ರಬಲ ಗುಣಗಳನ್ನು ಪಡೆದಿದ್ದರೆ ಆ ಜೀವಿ ತಾಯಿಯನ್ನೇ ಹೆಚ್ಚು ಹೋಲುತ್ತದೆ. ಅಲ್ಲದೆ ಪಿತೃಗಳಲ್ಲಿ ಈ ರೀತಿಯ ಕಣಗಳು ಅವರ ಎಲ್ಲ ಅಂಗಗಳಲ್ಲಿಯೂ ಉತ್ಪತ್ತಿಯಾಗಿ ಕೊನೆಗೆ ಅವೆಲ್ಲವೂ ಸಂತಾನಾಂಗದೊಳಕ್ಕೆ ಹರಿದು ಬಂದು ಅಲ್ಲಿಂದ ಸಂಭೋಗ ಕ್ರಿಯೆಯ ಕಾಲದಲ್ಲಿ ಜೊತೆಗೂಡಿ ಮುಂದಿನ ಜೀವಿಯನ್ನು ಕೊಡುತ್ತವೆ ಎಂಬುದು ಮಪಾರ್ಟಿಯಸನ ಅಭಿಪ್ರಾಯ.

ಚಾರ್ಲ್ಸ್ ಡಾರ್ವಿನ್‍ನ ತತ್ವ

ಬದಲಾಯಿಸಿ

ಇದೇ ತತ್ತ್ವವನ್ನು ಮುಂದೆ ಚಾರ್ಲ್ಸ್ ಡಾರ್ವಿನ್ ಅನುವಂಶೀಯ ಕ್ರಿಯೆ ಹೇಗೆ ಆಗುತ್ತದೆ ಎಂಬುದನ್ನು ತಿಳಿಸಲು ಬಳಸಿಕೊಂಡ. ಈತನ ಪ್ಯಾನ್‍ಜೀನುಗಳ ತತ್ತ್ವ ಮಪಾರ್ಟಿಯಸನ ತತ್ತ್ವದ ಪ್ರತಿರೂಪ. ಡಾರ್ವಿನ್ ಇಷ್ಟಕ್ಕೇ ತನ್ನ ಪ್ರತಿಪಾದನೆಗಳನ್ನು ನಿಲ್ಲಿಸದೆ ವಂಶವೃಕ್ಷಗಳನ್ನು ಸಂಗ್ರಹಿಸಿ ಅವುಗಳ ಅನುವಂಶೀಯತೆಯನ್ನು ವಿವರಿಸಿದುದು ಅನುವಂಶೀಯತೆಯ ಬಗ್ಗೆ ಆತನಗಿದ್ದ ಆಸಕ್ತಿಯನ್ನು ತೋರಿಸುತ್ತದೆ. ಕೆಲವು ಸಂಸಾರಗಳಲ್ಲಿ ಸಾಮಾನ್ಯ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಬೆರಳುಗಳಿರುವುದನ್ನು ಗುರುತಿಸಿದ ಈತ ಬಹು ಬೆರಳಿನ ಅನುವಂಶೀಯೆಯ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಿ ಆ ಮನೆತನದ ವಂಶವೃಕ್ಷಗಳನ್ನು ಮೊದಲ ಬಾರಿಗೆ ಕರಾರುವಕ್ಕಾಗಿ ವಿವರಿಸಿದ. ಜೊತೆಗೆ ತಳಿಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಸಂಕರ ಪ್ರಯೋಗಗಳನ್ನೂ ಈತ ನಡೆಸಿದ್ದ. ಬಾನೆಟ್ ಎಂಬ ಇನ್ನೊಬ್ಬ ವಿಜ್ಞಾನಿ ಡಾರ್ವಿನ್ನನ ತತ್ತ್ವಗಳಿಗೆ ವಿರುದ್ಧವಾದ ಭಾವನೆಗಳನ್ನು ಹೊಂದಿದ್ದ. ಈತನ ಪ್ರಕಾರ ಭವಿಷ್ಯದಲ್ಲಿ ಹುಟ್ಟುವ ಎಲ್ಲ ಜೀವಿಗಳ ಅತಿ ಸೂಕ್ಷ್ಮ ಅಚ್ಚುಗಳು ಹೆಣ್ಣಿನ ಶರೀರದಲ್ಲಿ ಇರುತ್ತವೆ. ಇವು ಚೀನೀಯರ ಪೆಟ್ಟಿಗೆಗಳಂತೆ ಹೆಣ್ಣಿನ ಅಂಡದಲ್ಲಿ ಒಂದರೊಳಗೊಂದು ಅಡಗಿದ್ದು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಿದು ಬರುತ್ತವೆ. ಇದು ಕೂಡ ಒಂದು ರೀತಿಯ ಪೂರ್ವೋದ್ಭವ ಸಿದ್ಧಾಂತವೇ.

ವುಲ್ಫ್ ಪ್ರಕಾರ

ಬದಲಾಯಿಸಿ

೧೮ ನೆಯ ಶತಮಾನದ ಉತ್ತರಾರ್ಧದಲ್ಲಿ ವುಲ್ಫ್ ಎಂಬ ಜರ್ಮನ್ ವಿಜ್ಞಾನಿ ಪೂರ್ವೋದ್ಭವ ಸಿದ್ಧಾಂತವನ್ನು ಅಲ್ಲಗಳೆದ.[೧೧] ಕೋಳಿಯ ಮೊಟ್ಟೆಯಲ್ಲಿ ಮರಿ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಈತ ಅಭ್ಯಾಸ ಮಾಡಿದ. ಈ ಅಭ್ಯಾಸದ ಫಲವಾಗಿ ಭವಿಷ್ಯ ಜೀವಿಯ ಬೆಳೆವಣಿಗೆ, ವಿಭೇದೀಕರಣಕ್ಕೊಳಗಾಗದಿರುವ ನಿಷೇಚಿತ ಮೊಟ್ಟೆಯಿಂದ ಭವಿಷ್ಯ ಜೀವಿ ತರ್ಕಬದ್ಧವಾದ ರೀತಿಯಲ್ಲಿ ಅನುಕ್ರಮವಾಗಿ ವಿಭೇದೀಕರಣ ಕ್ರಿಯೆಗೊಳಗಾಗಿ ಬೆಳೆದುಬರುತ್ತದೆ ಎಂದೂ, ಮೊಟ್ಟೆಯಲ್ಲಾಗುವ ಕೋಶ ವಿಭಜನೆಯಿಂದ ಈ ಬೆಳೆವಣಿಗೆ ಆಗುತ್ತದೆ ಎಂದೂ ಪ್ರಾಯೋಗಿಕವಾಗಿ ಈತ ತೋರಿಸಿದ, ಈ ತತ್ತ್ವಕ್ಕೆ ಎಪಿಜೆನಿಸಿಸ್ ತತ್ತ್ವವೆಂದು ಹೆಸರು. ಇದು ಇಂದಿಗೂ ಮಾನ್ಯವಾಗಿರುವ ತತ್ತ್ವ.

ಸ್ಟೀವರ್ಡ್ ಪ್ರಯೋಗ

ಬದಲಾಯಿಸಿ

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸ್ಟೀವರ್ಡ್ ಎಂಬ ವಿಜ್ಞಾನಿ ಗಜ್ಜರಿ ಸಸ್ಯದ ಬೇರುಗಳ ಜೀವಕೋಶಗಳನ್ನು ಒಂದೊಂದಾಗಿ ಬೇರ್ಪಡಿಸಿ ಆ ಒಂದೊಂದು ಕೋಶದಿಂದ ಪಿತೃ ಅಥವಾ ಮಾತೃವಿನಂತೆಯೇ ಇರುವ ಗಜ್ಜರಿ ಗಿಡಗಳನ್ನು ಶುದ್ಧ ತಳೀಕರಣ ಕ್ರಿಯೆಯಿಂದ ಬೆಳೆಸಿದ್ದಾನೆ (೧೯೬೦). ಪ್ರಾಣಿಗಳ ಜೀವಕೋಶಗಳನ್ನು ಈಗ ಕೃಷಿ ಮಾಡಲಾಗುತ್ತಿದೆ. ಇಂಥ ಕೃಷಿಯಿಂದ ಈ ಜೀವಕೋಶಗಳನ್ನು ಪುನರ್ ವಿಭೇದೀಕರಣಕ್ಕೊಳಪಡಿಸಿ ಪೂರ್ಣ ಪ್ರಾಣಿಯನ್ನು ಪಡೆಯುವ ಹವಣಿಕೆಯೂ ನಡೆದಿದೆ.

ಗ್ರೆಗೊರ್ ಮೆಂಡಲ್ ಕೊಡುಗೆ

ಬದಲಾಯಿಸಿ

ಈ ಶಾಸ್ತ್ರ ಒಂದು ನಿರ್ದಿಷ್ಟ ಜ್ಞಾನವಾಗಿ ಬೆಳೆಯಲು ಮೆಂಡಲ್‍ನ ಕೊಡುಗೆಗಳು ಸಹಾಯ ಮಾಡಿದವು. ಮಾತಾಪಿತೃಗಳಿಂದ ಬರುವ ಗುಣಗಳು, ಲಕ್ಷಣಗಳು ಒಂದರೊಡನೊಂದು ಬೆರೆತುಹೋಗುತ್ತವೆ ಎಂಬ ಹಳೆಯ ತತ್ತ್ವವನ್ನು ಸಂಪೂರ್ಣವಾಗಿ ತೊಡೆದುಹಾಕಿ ಅದಕ್ಕೆ ಬದಲಾಗಿ ಘಟಕ ಅನುವಂಶೀಯ ತತ್ತ್ವವನ್ನು ತನ್ನ ಪ್ರಯೋಗಗಳ ಮೂಲಕ ಈತ ಶ್ರುತಪಡಿಸಿದ. ಈತ ತನ್ನ ಪ್ರಯೋಗಗಳಿಗೆ ಆರಿಸಿಕೊಂಡ ಜೀವಿ ಬಟಾಣಿ ಗಿಡ. ಇದರ ಒಂದೊಂದೇ ಗುಣವನ್ನು ಆರಿಸಿಕೊಂಡು ಆ ಗುಣದ ಅನುವಂಶೀಯತೆಯ ರೀತಿ ನಿಯಮಗಳನ್ನು ನಿರ್ದಿಷ್ಟವಾಗಿ ಅಭ್ಯಾಸ ಮಾಡಿ ತನ್ನ ತತ್ತ್ವಗಳನ್ನು ಈತ ಪ್ರತಿಪಾದಿಸಿದ. ತನ್ನ ಪ್ರಯೋಗಗಳಲ್ಲಿ ಉಪಯೋಗಿಸಿದ ಬಟಾಣಿ ಗಿಡಗಳ ಹೂವಿನ ಬಣ್ಣ. ಹೂವು ಗಿಡದ ಯಾವ ಭಾಗದಲ್ಲಿದೆ? ರೆಂಬೆಯ ತುದಿಯಲ್ಲಿದೆಯೆ? ಎಲೆಗಳ ಕಂಕುಳಲ್ಲಿದೆಯೆ, ಬೀಜಗಳ ಆಕಾರ, ಬಣ್ಣ, ಇತ್ಯಾದಿ ಏಳು ಪ್ರತ್ಯೇಕ ಗುಣಗಳನ್ನು ಆಯ್ದುಕೊಂಡು ಅವುಗಳ ಅನುವಂಶೀಯತೆಯ ಬಗ್ಗೆ ಶಾಸ್ತ್ರೀಯವಾಗಿ ಮೆಂಡಲ್ ಅಭ್ಯಾಸ ಮಾಡಿದ. ಬಟಾಣಿ ಗಿಡಗಳು ಶುದ್ಧ ತಳಿಗಳು. ಸ್ವಕೀಯ ಪರಾಗಸ್ಪರ್ಶ ಇವುಗಳ ಒಂದು ಗುಣ. ಹೀಗಾಗಿ ಈ ಗಿಡ ಈತನ ಪ್ರಯೋಗಕ್ಕೆ ಬಹಳ ಉಪಯುಕ್ತವಾಯಿತು. ವಿರುದ್ಧ ಗುಣಗಳುಳ್ಳ ಒಂದು ಜೊತೆ ಶುದ್ಧ ತಳಿಗಳನ್ನು ಈತ ತನ್ನ ಪ್ರಥಮ ಪ್ರಯೋಗಕ್ಕೆ ಆರಿಸಿಕೊಂಡ. ಉದಾಹರಣೆಗೆ ಕೆಂಪು ಬಣ್ಣದ ಹೂವಿನ ಗಿಡವನ್ನು ಬಿಳಿಯ ಬಣ್ಣದ ಹೂವಿನ ಗಿಡದೊಂದಿಗೆ ಅಡ್ಡ ಹಾಯಿಸಿದ. ಈ ಗಿಡಗಳನ್ನು ಪಿತೃ ಪೀಳಿಗೆ ಎಂದೂ, ಈ ಪೀಳಿಗೆಯಿಂದ ಹುಟ್ಟಿಬಂದ ಪೀಳಿಗೆಯನ್ನು ಪ್ರಥಮ ಪೀಳಿಗೆ ಅಥವಾ F1 ಪೀಳಿಗೆ ಎಂದೂ ಹೆಸರಿಸಿದ. ಈ ಪೀಳಿಗೆಯಲ್ಲಿ ಕೆಂಪು ಹೂ ಬಿಡುವ ಸಸ್ಯಗಳು ಮಾತ್ರ ಹುಟ್ಟಿದವು. ಇದೆರಿಂದಾಗಿ ಕೆಂಪು ಬಣ್ಣ ಪ್ರಬಲ ಗುಣವೆಂದೂ ಬಿಳಿಯ ಬಣ್ಣ ಅಪ್ರಬಲ ಗುಣವೆಂದೂ ಈತ ತೀರ್ಮಾನಿಸಿ, ಪ್ರಥಮ ಪೀಳಿಗೆಯಲ್ಲಿ ಪ್ರಬಲ ಗುಣ ಮಾತ್ರ ವ್ಯಕ್ತಗೊಳ್ಳುತ್ತದೆಂದೂ ಅಪ್ರಬಲ ಗುಣ ಆ ಗಿಡಗಳಲ್ಲಿದ್ದರೂ ವ್ಯಕ್ತಗೊಳ್ಳುವುದಿಲ್ಲವೆಂದೂ ತಿಳಿಸಿದ. ಪ್ರಥಮ ಪೀಳಿಗೆ ಪಿತೃಪೀಳಿಗೆಯಂತೆ ಶುದ್ಧ ತಳಿಗಳಲ್ಲ. ಇವು ಸಂಕರಗಳು. ಅನಂತರ ಪ್ರಥಮ ಪೀಳಿಗೆ ಜೀವಿಗಳನ್ನು ಒಂದರೊಡನೊಂದು ಅಡ್ಡಹಾಯಿಸಿ ದ್ವಿತೀಯ ಪೀಳೆಗೆಯನ್ನೂ ಪಡೆದ. ದ್ವಿತೀಯ ಪೀಳಿಗೆಗ ಈತ F2 ಪೀಳಿಗೆ ಎಂದು ಹೆಸರಿಟ್ಟ. ಈ ಪೀಳಿಗೆಯಲ್ಲಿ ಕೆಂಪು ಮತ್ತು ಬಿಳಿ ಬಣ್ಣ ಕೊಡುವ ಎರಡೂ ಬಗೆಯ ಗಿಡಗಳು ಒಂದು ನಿರ್ದಿಷ್ಟಪ್ರಮಾಣದಲ್ಲಿ ಅಂದರೆ ೩:೧ ರ ಅನುಪಾತದಲ್ಲಿ ಹುಟ್ಟಿಕೊಂಡವು.[೧೨]

ಅನಂತರ ಮೆಂಡಲ್ ಎರಡು ಗುಣಗಳನ್ನು ತೆಗೆದುಕೊಂಡು ತನ್ನ ಮುಂದಿನ ಪ್ರಯೋಗಗಳನ್ನು ನಡೆಸಿದ. ಈ ಪ್ರಯೋಗಗಳಲ್ಲಿ ಈತ ೯:೩:೩:೧ ರ ಅನುಪಾತದಲ್ಲಿ ಈ ಗುಣಗಳ ವಿಂಗಡಣೆಯನ್ನು ಕಂಡ. ಇಲ್ಲಿ ಮೆಂಡಲನ ಪ್ರಯೋಗಗಳ ನಿಖರತೆ, ಗುಣಗಳನ್ನು ಆರಿಸಿಕೊಂಡ ವಿಧಾನ. ಇವುಗಳ ಅನುವಂಶೀಯತೆಯ ರೀತಿ - ಇವು ಅತಿ ಮುಖ್ಯ. ಈತನ ತತ್ತ್ವಗಳು ಇಂದಿಗೂ ಸರ್ವಮಾನ್ಯ. ಮೆಂಡಲನ ಮೊದಲ ತತ್ತ್ವಕ್ಕೆ ಪ್ರತ್ಯೇಕತೆಯ ನಿಯಮ (ಲಾ ಆಫ್ ಸೆಗ್ರಿಗೇಷನ್) ಎಂದೂ, ಎರಡನೆಯ ತತ್ತ್ವಕ್ಕೆ ಸ್ವತಂತ್ರ ವಿಂಗಡಣೆಯ ನಿಯಮ (ಲಾ ಆಫ್ ಇಂಡಿಪೆಂಡೆಂಟ್ ಅಸಾರ್ಟ್‍ಮೆಂಟ್) ಎಂದೂ ಹೆಸರು.

ಮೆಂಡಲನ ಅನುವಂಶೀಯ ನಿಯಮಗಳನ್ನು ಆಧಾರವಾಗಿಟ್ಟುಕೊಂಡು ಬ್ಯಾಕ್ಟೀರಿಯ, ಶಿಲೀಂಧ್ರಗಳು, ಡ್ರೊಸಾಫಿಲ, ಇಲಿ, ಕುರಿ, ಹಸು ಹಾಗೂ ಇನ್ನಿತರ ಜೀವಿಗಳ ಮೇಲೆ ಪ್ರಯೋಗಗಳನ್ನು ವಿಜ್ಞಾನಿಗಳು ನಡೆಸಿದ್ದಾರೆ. ಮೆಂಡಲನ ತತ್ತ್ವಗಳನ್ನು ವಿಶ್ವಮಾನ್ಯವೆಂದು ಈ ಪ್ರಯೋಗಗಳಿಂದ ಸ್ಥಿರೀಕರಿಸಲಾಗಿದೆ.

ತಳಿಲಕ್ಷಣಗಳ ಬದಲಾವಣೆಗಳು

ಬದಲಾಯಿಸಿ

ಏಕತಳೀಕರಣ

ಬದಲಾಯಿಸಿ

ಒಂದು ನಿರ್ದಿಷ್ಟ ಲಕ್ಷಣಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಲಕ್ಷಣಗಳನ್ನು ತೋರಿಸುವ ಸಸ್ಯಗಳನ್ನು ಸಂಕರಿಸು (ಅಡ್ಡಹಾಯಿಸು)ವುದನ್ನು "ಏಕತಳೀಕರಣ" ಎನ್ನುವರು. ಮೆಂಡಲ್ ಎತ್ತರ ಬಟಾಣಿಗಿಡ ಹಾಗೂ ಗಿಡ್ಡ ಬಟಾಣಿ ಗಿಡಗಳ ನಡುವೆ ಪರಕೀಯ ಪರಾಗಸ್ಪರ್ಶ ನಡೆಸಿದರು. ಇಲ್ಲಿ ಉತ್ಪತ್ತಿ ಆದ ಬೀಜಗಳನ್ನು ಬಿತ್ತಿದಾಗ ಮಧ್ಯಮ ಗಾತ್ರದ ಸಸ್ಯಗಳು ಕಂಡುಬರಬಹುದೆಂದು ನಿರೀಕ್ಷಿಸಿದರು. ಆದರೆ ಎಲ್ಲಾ ಸಸ್ಯಗಳು ಎತ್ತರವಾಗಿ ಬೆಳೆದಿದ್ದವು. ಇದನ್ನು ""ಎಫ್೧ ಪೀಳಿಗೆ"" ಎಂದು ಕರೆದರು. ಎಫ್೧ ಪೀಳಿಗೆಯ ಬೀಜಗಳನ್ನು ಬಿತ್ತಿ ಆ ಸಸ್ಯಗಳ ಹೂಗಳಲ್ಲಿ ಸ್ವಕೀಯ ಪರಾಗಸ್ಪರ್ಶವಾಗುವಂತೆ ಬಿಟ್ಟರು. ಉತ್ಪತ್ತಿಯಾದ ಬೀಜಗಳನ್ನು ಬಿತ್ತಿದಾಗ ಎತ್ತರ ಮತ್ತು ಗಿಡ್ಡ ಸಸ್ಯಗಳ ಅನುಪಾತ ೩:೧ ಇತ್ತು. ಇದಕ್ಕೆ ಏಕತಳಿ ಅನುಪಾತ ಎನ್ನುವರು.

ಎತ್ತರದ ಹಾಗೂ ಗಿಡ್ಡ ಸಸ್ಯಗಳನ್ನು ಅಡ್ಡಹಾಯಿಸಿದಾಗ, ಎಫ್೧ ಪೀಳಿಗೆಯಲ್ಲಿ ಎಲ್ಲವೂ ಎತ್ತರದ ಗಿಡಗಳೇ ಆಗಿದ್ದರೂ ಅವುಗಳಲ್ಲಿ ಎತ್ತರ ಹಾಗೂ ಗಿಡ್ಡ ಗುಣಗಳೆರಡಕ್ಕೂ ಕಾರಣವಾದ ಅಂಶಗಳು ಇದ್ದಿರಬೇಕು. ಏಕೆಂದರೆ, ಎಫ್೧ ಪೀಳಿಗೆಯ ಸಸ್ಯಗಳಲ್ಲಿ ಸ್ವಕೀಯ ಪರಾಗಸ್ಪರ್ಶ ನಡೆಸಿ, ಎಫ್೨ ಪೀಳಿಗೆಯ ಸಸ್ಯಗಳನ್ನು ಬೆಳೆಸಿದಾಗ ಅದರಲ್ಲಿ ಎತ್ತರ ಹಾಗೂ ಗಿಡ್ಡ ಸಸ್ಯಗಳೆರಡೂ ಇದ್ದವು. ಆದ್ದರಿಂದ ಸಸ್ಯಗಳಲ್ಲಿ ಗಿಡ್ಡವಾಗಲು ಕಾರಣವಾದ ಅಂಶವೂ ಇರಬಹುದೆಂದು ತರ್ಕಿಸಿದರು. ಮೆಂಡಲ್ ಎತ್ತರ ಗುಣಕ್ಕೆ ಕಾರಣವಾದ ಅಂಶವನ್ನು ಪ್ರಬಲ ಎಂದು ಕರೆದರು. ಹಾಗೆಯೇ ಗಿಡ್ಡ ಗುಣಕ್ಕೆ ಕಾರಣವಾದ ಅಂಶವನ್ನು ದುರ್ಬಲ ಎಂದು ಕರೆದರು.

ಒಂದು ಗುಣಕ್ಕೆ ಕಾರಣವಾದ ಎರಡು ಭಿನ್ನ ಅಂಶಗಳು ಒಟ್ಟಿಗೆ ಇದ್ದಾಗ, ಸಾಧಾರಣವಾಗಿ, ಅವುಗಳಲ್ಲಿ ಒಂದು ಮಾತ್ರ ವ್ಯಕ್ತವಾಗುತ್ತದೆ, ಇನ್ನೊಂದು ಗುಪ್ತವಾಗಿರುತ್ತದೆ. ವ್ಯಕ್ತವಾಗುವ ಅಂಶ ಪ್ರಬಲವಾದರೆ, ಗುಪ್ತವಾಗಿರುವುದು ದುರ್ಬಲವಾಗುತ್ತದೆ. ಇದನ್ನು ಪ್ರಬಲತೆಯ ನಿಯಮ ಎಂದು ಕರೆದ.

ಪುನೆಟ್ ಚೌಕ

ಬದಲಾಯಿಸಿ
ಲಿಂಗಾಣುಗಳು T t
T TT Tt
t Tt tt

ವ್ಯಕ್ತರೂಪ ಅನುಪಾತ= ೩:೧

(೩ ಎತ್ತರ ಮತ್ತು ೧ ಗಿಡ್ಡ)

ಜೀನ್ ನಮೂನೆ= ೧:೨:೧

(೧ ಶುದ್ಧ ಎತ್ತರ, ೨ ಎತ್ತರ ಮತ್ತು ೧ ಶುದ್ಧ ಗಿಡ್ಡ)

ದ್ವಿತಳೀಕರಣ

ಬದಲಾಯಿಸಿ

ಮೆಂಡಲ್ ಎರಡು ಲಕ್ಷಣಗಳಿಗೆ ಸಂಬಂಧಿಸಿದಂತೆ ಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು - ಅಂದರೆ, ಕೆಂಪು ಹೂವುಗಳನ್ನು ಬಿಡುವ ಎತ್ತರ ಗಿಡ ಮತ್ತು ಬಿಳಿ ಹೂವುಗಳನ್ನು ಬಿಡುವ ಗಿಡ್ಡ ಗಿಡ- ಈ ಲಕ್ಷಣಗಳ ಶುದ್ಧ ಸಸ್ಯಗಳನ್ನು ಅಡ್ಡಹಾಯಿಸಿದನು. ಆಗ ಎಫ್೧ ಪೀಳಿಗೆಯಲ್ಲಿ ದೊರತ ಸಸ್ಯಗಳೆಲ್ಲವೂ ಕೆಂಪು ಹೂಗಳನ್ನು ಬಿಡುವ ಎತ್ತರ ಗಿಡಗಳಾಗಿದ್ದವು. ಎಫ್೧ ಪೀಳಿಗೆಯ ಸಸ್ಯಗಳನ್ನು ಸ್ವಕೀಯ ಪರಾಗಸ್ಪರ್ಶಕ್ಕೆ ಒಳಪಡಿಸಿದಾಗ ದೊರೆತ ಎಫ್೨ ಪೀಳಿಗೆಯಲ್ಲಿ ನಾಲ್ಕು ರೀತಿಯ ಸಸ್ಯಗಳು ೯:೩:೩:೧ ರ ಅನುಪಾತದಲ್ಲಿ ದೊರೆತವು.

ಆ ನಾಲ್ಕು ಬಗೆಗಳು,

  1. . ಕೆಂಪು ಹೂಗಳನ್ನು ಬಿಡುವ ಎತ್ತರ ಗಿಡಗಳು.
  2. . ಬಿಳಿ ಹೂಗಳನ್ನು ಬಿಡುವ ಎತ್ತರ ಗಿಡಗಳು.
  3. . ಕೆಂಪು ಹೂಗಳನ್ನು ಬಿಡುವ ಗಿಡ್ಡ ಗಿಡಗಳು.
  4. . ಬಿಳಿ ಹೂಗಳನ್ನು ಬಿಡುವ ಗಿಡ್ಡ ಗಿಡಗಳು.

ಉತ್ಪರಿವರ್ತನೆ

ಬದಲಾಯಿಸಿ

ಡಿ.ಎನ್.ಎ ಪುನರಾವರ್ತಿ ಪ್ರಕ್ರಿಯೆಯಲ್ಲಿ ಎರಡನೇ ಎಳೆಯ ಪಾಲಿಮರ್ ನಿರ್ಮಾಣದಲ್ಲಿ ಉಂಟಾಗುವ ದೋಷಗಳಿಂದ ಉಂಟಾಗುತ್ತದೆ. ಇಂತಹ ದೋಷಗಳನ್ನೇ ಉತ್ಪರಿವರ್ತನೆ ಎನ್ನಲಾಗುತ್ತದೆ. ಇದು ಜೀವಿಯ ಪ್ರಕಟ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ. ಇವು ಜೀನ್‍ಗಳ ಪ್ರೋಟೀನ್ ಸಂಕೇತೀಕರಣದ ಅನುಕ್ರಮಣಿಕೆಯಲ್ಲಿ ಆಗುವ ದೋಷಗಳಾಗಿವೆ. ಉತ್ಪರಿವರ್ತನೆ ದೋಷಗಳ ಪ್ರಮಾಣ ತೀರಾ ಕಡಿಮೆಯಾಗಿದೆ, ಅದು 10–100 ಮಿಲಿಯನ್‍ಗಳಲ್ಲಿ ಒಂದು.

ತಳಿಶಾಸ್ತ್ರದ ಗುರಿ

ಬದಲಾಯಿಸಿ

ಪ್ರಾಥಮಿಕವಾಗಿ ತಳಿಶಾಸ್ತ್ರದ ಗುರಿ ಅನುವಂಶೀಯ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದೇ ಆಗಿತ್ತು. ೧೯೩೦ರ ವೇಳೆಗೆ ಈ ಗುರಿಯ ಸಾಧನೆ ಸಂಪೂರ್ಣವಾಗಿ ಮುಗಿದಿತ್ತು. ಇದೆ ಕಾಲದಲ್ಲಿ ಜೀನುಗಳ ಕ್ರಿಯೆಯ ಬಗ್ಗೆ ಅನೇಕ ಜೀವವಿಜ್ಞಾನಿಗಳ ಗಮನ ಹರಿದಿತ್ತು. ೧೯೨೩ ರಲ್ಲಿ ಗೆರಾಡ್ ಎಂಬ ವೈದ್ಯ ಅಲ್‌ಕ್ಯಾಪ್ಟೋನ್ಯೂರಿಯ ಎಂಬ ಕಾಯಿಲೆಯನ್ನು ಪತ್ತೆಹಚ್ಚಿದ. ಈ ರೋಗಕ್ಕೆ ಹೋಮೋಜೆಂಟಿಸಿಕ್ ಆಮ್ಲ ಕಾರಣವೆಂದು ಈತ ಕಂಡುಕೊಂಡ.[೧೩] ಈ ರೋಗದಿಂದ ನರಳುವ ವ್ಯಕ್ತಿ ತನ್ನಲ್ಲಿ ಉತ್ಪತ್ತಿಯಾಗುವ ಹೋಮೋಜೆಂಟಿಸಿಕ್ ಆಮ್ಲವನ್ನು ಉತ್ಕರ್ಷಿಸಲಾರ. ಈ ಆವಿಷ್ಕಾರದಿಂದ ತಳಿಶಾಸ್ತ್ರಕ್ಕೆ ಒಂದು ಹೊಸ ತಿರುವು ಸಿಕ್ಕಿತು. ಈ ರೋಗಕ್ಕೂ ಜೀನ್ ಒಂದಕ್ಕೂ ಸಂಬಂಧ ಇದೆಯೆಂದು ಕಲ್ಪಸಲಾಯಿತು. ಸುಸ್ಥಿತಿಯಲ್ಲಿದ್ದ ಒಂದು ಜೀನ್ ವಿಕೃತಿಗೊಂಡಿರುವುದೇ ಈ ರೋಗಕ್ಕೆ ಕಾರಣವೆಂದು ತಿಳಿಯಲಾಯಿತು. ಜೊತೆಗೆ ಜೀನ್‍ಗಳು ಶರೀರದಲ್ಲಿ ನಡೆಯುವ ಪ್ರತಿಯೊಂದು ರಾಸಾಯನಿಕ ಕ್ರಿಯೆಯನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡಿರುತ್ತವೆ ಎಂಬುದು ತಿಳಿಯಿತು. ಹೀಗೆ ತಳಿಶಾಸ್ತ್ರದ ಹೊಸ ಶಾಖೆಯಾದ ರಾಸಾಯನಿಕ ತಳಿಶಾಸ್ತ್ರ ಹುಟ್ಟಿಕೊಂಡಿತು. ಇದರಿಂದ ಜೀನಿನ ಕಾರ್ಯರಂಗವನ್ನು ಅರ್ಥಮಾಡಿಕೊಳ್ಳಲು ಹೊಸ ವಿಧಾನಗಳನ್ನು ಕಂಡುಕೊಳ್ಳಬೇಕಾಯಿತು. ಇದನ್ನರಿಯಲು ಉನ್ನತವರ್ಗದ ಜೀವಿಗಳಾದ ಇಲಿ, ಮನುಷ್ಯ, ಡ್ರೊಸಾಫಿಲ ಮುಂತಾದವು ಸೂಕ್ತವಲ್ಲ ಎಂದು ತಳಿಶಾಸ್ತ್ರಜ್ಞರು ಆಸ್ಕೊಮೈಸೀಟ್ ಶಿಲೀಂಧ್ರವಾದ ನ್ಯೂರಾಸ್ಪೊರವನ್ನು ತಮ್ಮ ಪ್ರಯೋಗಕ್ಕೆ ಆರಿಸಿಕೊಂಡರು. ಇದರಲ್ಲಿ ಆಹಾರ ಪೋಷಣೆಗೆ ಸಂಬಂಧಿಸಿದ ಹೊಸ ಹೊಸ ವಿಕೃತಿಗಳನ್ನು ಅಭ್ಯಾಸ ಮಾಡಿ ಒಂದು ಜೀನು ಒಂದು ಕಿಣ್ವ ಎಂಬ ತತ್ತ್ವವನ್ನು ಬೀಡಲ್ ಮತ್ತು ಟಾಟಮ್ ಎಂಬುವರು ಪ್ರತಿಪಾದಿಸಿದರು.[೧೪] ಅಂದರೆ ಒಂದು ಜೀನು ಒಂದು ಕಿಣ್ವದ ಉತ್ಪತ್ತಿ ನಡೆವಳಿಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಇವರು ತಿಳಿಸಿದರು. ಈಗ ಈ ತತ್ತ್ವದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಒಂದು ಜೀನು ಬಹು ಕಿಣ್ವಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರಬಹುದು ಎಂಬ ಅಭಿಪ್ರಾಯವನ್ನು ತಳೆಯಲಾಗಿದೆ. ಹೀಗೆ ತಳಿಶಾಸ್ತ್ರ ಸಾವಕಾಶವಾಗಿ ಅಣುತಳಿಶಾಸ್ತ್ರವಾಗಿ ಮಾರ್ಪಟ್ಟಿದೆ. ಜೀನಿಗೂ, ಅದರಿಂದ ಉತ್ಪತ್ತಿಯಾಗಿವ ವಸ್ತುಗಳಿಗೂ ಇರುವ ಸಂಬಂಧವನ್ನು ವಿಶ್ಲೇಷಿಸಲು ಇದು ಅನುವು ಮಾಡಿಕೊಟ್ಟಿದೆ. ಜೀನುಗಳ ಜೋಡಣೆಗೂ ಉತ್ಪತ್ತಿಯಾಗುವ ವಸ್ತುಗಳಿಗೂ ಒಂದು ರೀತಿಯ ಸಹರೇಖೀಯ (ಕೋಲೀನಿಯರ್) ಸಂಬಂಧವಿದೆ ಎಂಬುದನ್ನು ಅಣುತಳಿಶಾಸ್ತ್ರ ಶ್ರುತಪಡಿಸಿದೆ.[೧೫][೧೬][೧೭] ಈ ಎಲ್ಲ ಬೆಳೆವಣಿಗೆಗಳಿಂದ ಮೂರು ಅತಿಮುಖ್ಯ ವಿಚಾರಗಳನ್ನು ತಿಳಿಯಲು ಸಹಾಯವಾಗಿದೆ. ಅವುಗಳೆಂದರೆ:

  1. ಅನುವಂಶೀಯ ವಸ್ತುವಿನ ರಾಸಾಯನಿಕ ರಚನೆ (ಇದು ಆಓಂ ಎಂದು ಗೊತ್ತಾಗಿದೆ)
  2. ಆಓಂ ಎಂಬುದು ಎರಡು ಎಳೆಗಳಿಂದಾಗಿರುವ ಬಹು ನ್ಯೂಕ್ಲಿಯೊಟೈಡುಗಳ ಸರಪಣಿ ಎಂದೂ, ಇದರಲ್ಲಿರುವ ಒಂದು ಎಳೆ ಮತ್ತೊಂದು ಎಳೆಗೆ ಪೂರಕ ರೂಪದಲ್ಲಿದೆ ಎಂದೂ, ಈ ಸರಪಣಿ ದ್ವಿಕುಂಡಲಿನೀ ರೂಪದಲ್ಲಿದೆ ಎಂಬ ವಿಚಾರ.
  3. ಇನ್‍ಸುಲಿನ್ ಅಣುವಿನಲ್ಲಿ ಇರುವ ಅಮೈನೋ ಆಮ್ಲಗಳ ಸಂಖ್ಯೆ ಹಾಗೂ ಅವುಗಳ ಜೋಡಣೆ.

ಕಳೆದ ಹದಿನೈದು-ಇಪ್ಪತ್ತು ಮರ್ಷಗಳ ಸಂಶೋಧನೆಗಳಿಂದಾಗಿ ಅನುವಂಶೀಯ ವಸ್ತುಗಳ ಹೇಗೆ ಆಓಂ ಯಲ್ಲಿ ಅಡಗಿವೆ? ಅವು ಹೇಗೆ ಪುನರುತ್ಪಾದಿತವಾಗುತ್ತವೆ? ದೂತ ಖಓಂ ಉತ್ಪತ್ತಿ, ಪ್ರೋಟೀನು ಸಂಶ್ಲೇಷಣೆ ಮುಂತಾದ ಮೂಲಭೂತ ಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದರ ಸಮಗ್ರ ಅರಿವು ಈಗ ತಿಳಿದಿದೆ.

ಬ್ಯಾಕ್ಟೀರಿಯಗಳ ಮೇಲೆ ನಡೆದಿರುವ ಸಂಶೋಧನೆಗಳಿಂದ ಬ್ಯಾಕ್ಟೀರಿಯ ಕ್ರೋಮೋಸೋಮಿನ ರಚನೆ, ಟ್ರಾನ್ಸ್‌ಡಕ್ಷನ್ ಕ್ರಿಯೆ ಹಾಗೂ ಅದರಿಂದ ನಡೆಯುವ ಜೀನುಗಳ ಅದಲುಬದಲು, ಜೊತೆಗೆ ಬ್ಯಾಕ್ಟೀರಿಯಗಳಲ್ಲಿರುವ ಲೈಂಗಿಕ ಕ್ರಿಯೆ, ಟ್ರಾನ್ಸ್‌ಫರ್ಮೇಷನ್ ಕ್ರಿಯೆ ಮುಂತಾದವು ಪೂರ್ಣವಾಗಿ ಬೆಳಕಿಗೆ ಬಂದಿವೆ.

ತಳಿಶಾಸ್ತ್ರದ ಮತ್ತೊಂದು ಮುಖ್ಯ ಶಾಖೆ ಎಂದರೆ ಜೀವಿಸಂದಣಿ ತಳಿಶಾಸ್ತ್ರ. ಮೆಂಡಲನ ತತ್ತ್ವಗಳನ್ನು ಜೀವಿಸಂದಣಿಗೆ ಅನ್ವಯಿಸಿ ಅದಕ್ಕೂ ವಿಕಾಸಕ್ಕೂ ಇರುವ ಸಂಬಂಧಗಳನ್ನು ಅರಿಯುವುದಲ್ಲದೆ ಪ್ರಯೋಗಗಳನ್ನು ನಡೆಸಿಯೊ ಇಲ್ಲವೆ ಬಾಹ್ಯ ಪರಿಸರದಲ್ಲಿ ನಡೆಯುತ್ತಿರುವ ಅನುವಂಶೀಯತೆಯ ವಿಧಾನಗಳನ್ನು ಅಭ್ಯಾಸ ಮಾಡಿಯೊ ವಿಕಾಸ ಹೇಗೆ ಆಗುತ್ತದೆ ಎಂಬುದನ್ನು ತಿಳಿಯುವುದು ಇದರ ಮುಖ್ಯ ಗುರಿ. ವಿಕೃತಿಗಳು, ಅವುಗಳ ಆಯ್ಕೆ, ಜೀನುಗಳ ವಲಸೆ, ಜೀವಿ ಸಂದಣಿಯ ಗಾತ್ರ. ಪರಿಸರದ ವಿಭಿನ್ನತೆಗಳು ಹಾಗೂ ಜೀವಿಸಂದಣಿಯ ಮೇಲೆ ಪರಿಸರ ಬೀರುವ ಪ್ರಭಾವ ಮುಂತಾದ ವಿಚಾರಗಳನ್ನು ಜೀವಿಸಂದಣಿ ತಳಿಶಾಸ್ತ್ರ ಚರ್ಚಿಸುತ್ತದೆ.

ತಳಿಶಾಸ್ತ್ರದ ಅತಿ ಮುಖ್ಯ ಸಾಧನೆಯೆಂದರೆ ಸಂಕರತಳಿಗಳ ಸೃಷ್ಟಿ. ಇದರಿಂದ ಮನುಷ್ಯನ ಆಹಾರ ಸಮಸ್ಯೆಗಳಿಗೆ ಕೊಂಚ ಪರಿಹಾರ ದೊರಕಿದೆಯಲ್ಲದೆ ವೈದ್ಯಕೀಯ ವಿಜ್ಞಾನದಲ್ಲಿ ಅನುವಂಶೀಯ ರೋಗಗಳ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಇದರಿಂದಾಗಿ ತಳಿವೈಜ್ಞಾನಿಕ ಸಲಹೆ (ಜೆನೆಟಿಕ್ ಕೌನ್ಸೆಲಿಂಗ್) ಕೊಡುವುದು ಸಾಧ್ಯವಾಗಿದೆ.

ತಳಿಶಾಸ್ತ್ರ ಇಂದು ಮಾನವಿಕ ಶಾಸ್ತ್ರಗಳ ನಾನಾ ಪ್ರಾಕಾರಗಳಿಗೆ ಪ್ರವೇಶಿಸಿದೆ. ಸಮಾಜಶಾಸ್ತ್ರ, ನೀತಿಶಾಸ್ತ್ರ ಮುಂತಾದ ಪ್ರಕಾರಗಳಲ್ಲಿ ತಳಿಶಾಸ್ತ್ರದ ಬಗ್ಗೆ ಸಾಕಷ್ಟು ಚರ್ಚೆ ಪ್ರಾರಂಭವಾಗಿದೆ. ಮನುಷ್ಯ ತನ್ನ ಜೀನುಗಳನ್ನೇ ಮಾರ್ಪಾಟುಗೊಳಿಸಿ ಉತ್ತಮ ತಳಿ ಸೃಷ್ಟಿಗೆ ಕೈಹಾಕುತ್ತಿದ್ದಾನೆ. ಈಗ ತಳಿಶಾಸ್ತ್ರಜ್ಞರು ಮನುಷ್ಯರಲ್ಲಿ ಶುದ್ಧತಳಿಯ ಸೃಷ್ಟಿ ಮತ್ತು ಜೆನೆಟಿಕ್ ಇಂಜನಿಯರಿಂಗ್‍ಗಳ ಬಗ್ಗೆ ಪ್ರಯೋಗಗಳನ್ನು ಪ್ರಾರಂಭಿಸಿದ್ದಾರೆ.

ಜೀನುಗಳ ಸಂಲಗ್ನತೆ

ಬದಲಾಯಿಸಿ

ಜೀನುಗಳ ಅದಲುಬದಲು ಕ್ರಿಯೆಯ ಅಭ್ಯಾಸದಿಂದ ಜೀನುಗಳ ಸಂಲಗ್ನತೆಯ ಪಟಗಳನ್ನು ತಯಾರಿಸಲಾಯಿತು. ಜೀನುಗಳ ವಿಕೃತ, ವಿಕೃತಕಾರಕ ಹಾಗೂ ಪ್ರೇರಕ ರಾಸಾಯನಿಕಗಳು, ಅಯಾನುಕಾರಕ ವಿಕಿರಣಗಳು ಮುಂತಾದವು ಜೀನುಗಳ ಕಾರ್ಯಶೀಲತೆಯ ಮೇಲೆ ಬೆಳಕು ಚೆಲ್ಲಿವೆ. ಈ ಎಲ್ಲ ವಿಚಾರಗಳಿಂದಾಗಿ ಅನುವಂಶೀಯತೆಯ ವಿಧಾನವನ್ನು ಬಹಳ ಮಟ್ಟಿಗೆ ಅರ್ಥ ಮಾಡಿಕೊಳ್ಳಲಾಗಿದೆ. ವಿಭೇದೀಕರಣ ಕ್ರಿಯೆ, ಜೀನುಗಳ ಚಟುವಟಿಕೆಯ ಹರವು ಮುಂತಾದ ಕ್ಲಿಷ್ಟ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇಂದು ಬಹುಮಟ್ಟಿಗೆ ಸಾಧ್ಯವಾಗಿದೆ.

ತಳೀಕರಣ

ಬದಲಾಯಿಸಿ

ಶುದ್ಧ ತಳೀಕರಣ ಕಾರ್ಯದ ಮೂಲಕ ಸಸ್ಯ ಹಾಗೂ ಪ್ರಾಣಿ ತಳಿ ಉತ್ಪಾದನಾ ಕೇಂದ್ರಗಳಲ್ಲಿ ನಿರ್ದಿಷ್ಟ ಅನುವಂಶೀಯ ಗುಣಗಳುಳ್ಳ ತಳಿಗಳನ್ನು ಈಗ ಉತ್ಪಾದಿಸಲಾಗುತ್ತಿದೆ. ಅತಿ ಹೆಚ್ಚು ಫಸಲು ಕೊಡುವ ಗಿಡಗಳು, ಹೆಚ್ಚು ಹಾಲು ಕೊಡುವ ಹಸು, ಹೆಚ್ಚು ಮೊಟ್ಟೆಯಿಡುವ ಕೋಳಿಗಳನ್ನು ಈಗಾಗಲೇ ಉತ್ಪಾದಿಸಲಾಗಿದೆ. ಇದು ಮನುಷ್ಯನ ಹಂತದವರೆಗೂ ಬಂದರೆ ಏನಾಗಬಹುದು ಎಂಬುದನ್ನು ಊಹಿಸಲಸಾಧ್ಯ. ಇದು ಸಾಧ್ಯವಾದಲ್ಲಿ ಅತಿ ಮಾನವ ಸೃಷ್ಟಿ ಸಾಧ್ಯ. ಅರಿಸ್ಟಾಟಲನಂತ ತತ್ತ್ವಜ್ಞಾನಿಗಳನ್ನು, ಐನ್‍ಸ್ಟೀನ್‍ನಂಥ ವಿಜ್ಞಾನಿಗಳನ್ನು, ಕ್ಯಾಷಿಯಸ್ ಕ್ಲೇನಂಥ ಶಕ್ತಿವಂತರನ್ನು ಎಷ್ಟು ಬೇಕಾದರೂ ಉತ್ಪಾದಿಸುವ ಮಟ್ಟಕ್ಕೆ ತಳಿಶಾಸ್ತ್ರ ತಲುಪಬಹುದು. ಯಾವುದಾದರೊಂದು ಕುಟುಂಬದಲ್ಲಿ ಇದ್ದ ಒಬ್ಬನೇ ಮಗ ಅಕಸ್ಮಾತ್ತಾಗಿ ಸಾವಿಗೀಡಾದರೆ ಕೆಲವು ಗಂಟೆಗಳ ಅನಂತರ ಆ ವ್ಯಕ್ತಿಯ ಶರೀರದ ಬದುಕಿರುವ ಜೀವಕೋಶಗಳನ್ನು ತೆಗೆದುಕೊಂಡು ಅವನಂತೆಯೇ ಇರುವ ವ್ಯಕ್ತಿಯನ್ನು ಸೃಷ್ಟಿ ಮಾಡಬಹುದು. ತಳಿಶಾಸ್ತ್ರ ಇಂದು ಈ ಹಂತದವರೆಗೂ ಬಂದಿದೆ. ಜೆನೆಟಿಕ್ ಇಂಜನಿಯರಿಂಗ್ ಮತ್ತು ಈ ಶುದ್ಧತಳೀಕರಣ ಕ್ರಿಯೆಯಿಂದಾಗಿ ಹೊಸ ಹೊಸ ಶಾಖೆಗಳು ಈಗ ತಳಿಶಾಸ್ತ್ರದಲ್ಲಿ ಹುಟ್ಟಿಕೊಂಡಿವೆ. ಜೀನಿನ ಸಂಕೇತ ಭಾಷೆ, ಅದರ ರಾಸಾಯನಿಕ ಕ್ರಿಯೆಗಳು ಗೊತ್ತಾದ ಮೇಲೆ ಮಾನವ ವಿಕಾಸ ಕ್ರಿಯೆಯನ್ನು ನಿಯಂತ್ರಿಸುವ ಹಾದಿಯಲ್ಲಿದ್ದಾನೆ. ಅನುವಂಶೀಯ ರೋಗಗಳ ನಿವಾರಣೆ, ಬೇಡದಿರುವ ಜೀನುಗಳನ್ನು ಕಿತ್ತು ಹೊಸ ಜೀನುಗಳನ್ನು ಕಸಿ ಮಾಡುವ ವಿಧಾನ ಇತ್ಯಾದಿ ಕ್ರಿಯೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾನೆ.

ಉಲ್ಲೇಖಗಳು

ಬದಲಾಯಿಸಿ
  1. Griffiths, Anthony J.F.; Miller, Jeffrey H.; Suzuki, David T.; Lewontin, Richard C.; Gelbart, William M. (January 12, 2015). An Introduction to Genetic Analysis. W. H. Freeman. p. 868. ISBN 978-1464109485.
  2. Hartl D, Jones E (2005)
  3. "the definition of genetics". www.dictionary.com (in ಇಂಗ್ಲಿಷ್). Retrieved 25 October 2018.
  4. ೧The word genetics stems from the Ancient Greek γενετικός genetikos meaning "genitive"/"generative", which in turn derives from γένεσις genesis meaning "origin"
  5. https://books.google.co.in/books?id=sFiJFuzRVFQC&pg=PA362&redir_esc=y
  6. https://www.britannica.com/science/genetics
  7. http://www.aaas.org/sites/default/files/AAAS_GM_statement.pdf
  8. Hardy, G. H. (1908-07-10). "Mendelian Proportions in a Mixed Population". Science. 28 (706): 49–50. Bibcode:1908Sci....28...49H. doi:10.1126/science.28.706.49. ISSN 0036-8075. PMID 17779291.
  9. https://plato.stanford.edu/entries/aristotle-biology/
  10. Mayr 1982, p. 646.
  11. Mayr, Ernst (1998). "What Is the Meaning of 'Life'?". This Is Biology: The Science of the Living World. Cambridge, MA: Harvard University Press. p. 11. ISBN 978-0-674-88469-4. Retrieved June 10, 2016.
  12. http://www.bshs.org.uk/bshs-translations/mendel
  13. Phornphutkul C, Introne WJ, Perry MB, et al. (2002). "Natural history of alkaptonuria". New England Journal of Medicine. 347 (26): 2111–21. doi:10.1056/NEJMoa021736. PMID 12501223.
  14. Beadle GW, Tatum EL (15 November 1941). "Genetic Control of Biochemical Reactions in Neurospora" (PDF). PNAS. 27 (11): 499–506. Bibcode:1941PNAS...27..499B. doi:10.1073/pnas.27.11.499. PMC 1078370. PMID 16588492.
  15. "Genetikos (γενετ-ικός)". Henry George Liddell, Robert Scott, A Greek-English Lexicon. Perseus Digital Library, Tufts University. Archived from the original on 15 ಜೂನ್ 2010. Retrieved 20 ಫೆಬ್ರವರಿ 2012.
  16. "Genesis (γένεσις)". Henry George Liddell, Robert Scott, A Greek-English Lexicon. Perseus Digital Library, Tufts University. Archived from the original on 15 ಜೂನ್ 2010. Retrieved 20 ಫೆಬ್ರವರಿ 2012.
  17. "Genetic". Online Etymology Dictionary. Archived from the original on 23 ಆಗಸ್ಟ್ 2011. Retrieved 20 ಫೆಬ್ರವರಿ 2012.


ಗ್ರಂಥಸೂಚಿ

ಬದಲಾಯಿಸಿ



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: