ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳಲ್ಲಿ ಹೊಸದಾದ ಮತ್ತು ಬಹುಶೀಘ್ರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಗಳಲ್ಲೊಂದು (ಸೋಷಿಯಾಲಜಿ). ಈ ಪರಿಕಲ್ಪನೆಯನ್ನು ಪ್ರಥಮಬಾರಿಗೆ ಫ್ರಾನ್ಸ್‌ನ ಸಾಮಾಜಿಕ ತತ್ತ್ವಜ್ಞಾನಿ ಆಗಸ್ಟ್ ಕಾಂಟ್ ಪ್ರಯೋಗಿಸಿದ (1829). ಮಾನವ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧ ಮತ್ತು ಪ್ರಭಾವ ಸ್ವರೂಪವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಈ ವಿಷಯ ವ್ಯಾಪ್ತಿಯಲ್ಲಿ ಸಮಾಜದ ಎಲ್ಲ ಸಂಸ್ಥೆಗಳೂ ಆ ಸಂಸ್ಥೆಗಳಲ್ಲಿ ನಡೆಯುವ ಚಟವಟಿಕೆಗಳೂ ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ತಲೆದೋರುವ ಬದಲಾವಣೆಗಳೂ ಪ್ರಮುಖ ಸ್ಥಾನ ಪಡೆದಿವೆ. ಮಾನವ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಅಂಶ ಸಮಾಜಶಾಸ್ತ್ರದ ಅಧ್ಯಯನ ವ್ಯಾಪ್ತಿಯಿಂದ ಹೊರತಲ್ಲವಾದ್ದರಿಂದ, ಎಲ್ಲ ಮಾನವಿಕಗಳಿಗೂ ಸಮಾಜಶಾಸ್ತ್ರದ ಅರಿವು ಮತ್ತು ಜ್ಞಾನ ಅತ್ಯಗತ್ಯ.

ಸಮಾಜಶಾಸ್ತ್ರದ ವಿಷಯ ವ್ಯಾಪ್ತಿಯಲ್ಲಿ, ಎಲ್ಲ ಸಾಮಾಜಿಕ ಸಂಸ್ಥೆಗಳಲ್ಲಿ, ವಿವಿಧ ಕಾಲ ಘಟ್ಟಗಳಲ್ಲಿ ನಡೆಯುವ, ನಡೆದು ಹೋದ ಚಟುವಟಿಕೆಗಳು, ಆ ಸಂಸ್ಥೆಗಳ ಉಗಮ, ಬೆಳೆವಣಿಗೆ ಹಾಗೂ ಅವುಗಳಲ್ಲಿ ತಲೆದೋರುವ ಬದಲಾವಣೆಗಳನ್ನು ಪ್ರಭಾವಿಸುವ ಅಂಶ ಹಾಗೂ ಕಾಲದಿಂದ ಕಾಲಕ್ಕೆ ಆ ಸಂಸ್ಥೆಗಳು ಎದುರಿಸಬೇಕಾಗಬಹುದಾದ ಸಮಸ್ಯೆಗಳ ಅಧ್ಯಯನಕ್ಕೆ ಆದ್ಯತೆ ನೀಡಿರುವುದರಿಂದ ಯಾವುದೇ ಸಮಾಜದ ನಿಕಟ ಹಾಗೂ ಸೂಕ್ಷ್ಮ ಪರಿಚಯ ಪಡೆದುಕೊಳ್ಳಬೇಕಾದರೆ, ಸಮಾಜಶಾಸ್ತ್ರದ ಜ್ಞಾನ ಅತ್ಯವಶ್ಯ. ಈ ಕಾರಣದಿಂದಲೇ ಸಮಾಜಶಾಸ್ತ್ರ ಇತರ ಅಧ್ಯಯನ ವಿಷಯಗಳಿಗೆ ಪ್ರೇರೇಪಣೆ ನೀಡುತ್ತದೆ ಹಾಗೂ ಅವುಗಳಿಂದ ದೊರೆಯುವ ದೃಷ್ಟಿಕೋನಗಳಿಗೆ ತನ್ನನ್ನೂ ತೆರೆದಿಟ್ಟುಕೊಳ್ಳುತ್ತದೆ.

ಸಮಾಜಶಾಸ್ತ್ರ ನಿರಂತರವಾಗಿ ಬೆಳೆಯುತ್ತಿರುವ ಸಮಾಜ ವಿಜ್ಞಾನವಾದ್ದರಿಂದ, ಹೊಸ ಹೊಸ ಸೈದ್ಧಾಂತಿಕ ದೃಷ್ಟಿಕೋನಗಳು, ಹಳೆಯ ಸಿದ್ಧಾಂತಗಳ ವಿಮರ್ಶೆ ಹಾಗೂ ವಿಭಿನ್ನ ಅಂತರ್‍ಶಿಸ್ತ್ರೀಯ ವಿಚಾರಧಾರೆಗಳು ಈ ಶಾಸ್ತ್ರದ ವ್ಯಾಪ್ತಿಯಲ್ಲಿ ಸೇರಿಕೊಳ್ಳುತ್ತಿವೆ. ಸಮಾಜಶಾಸ್ತ್ರಕ್ಕೆ ಸಿದ್ಧಾಂತಗಳ ರಚನೆ ಎಷ್ಟು ಮುಖ್ಯವೋ ಸಮಾಜದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿಗಳನ್ನು ತರುವುದೂ ಅಷ್ಟೇ ಮುಖ್ಯ. ಸಮಾಜದ ಬಹುಮುಖಿ ಸ್ವರೂಪ ಕುರಿತು ಸಿದ್ಧಾಂತಗಳನ್ನು ಹೆಣೆಯುವುದು ಸಮಾಜಶಾಸ್ತ್ರಜ್ಞರ ಪ್ರಮುಖ ಜವಾಬ್ದಾರಿಯೇ ಹೊರತು, ಸಮಾಜ ಸುಧಾರಣೆಯಲ್ಲ ಎನ್ನುವುದು ಒಂದು ದೃಷ್ಟಿಕೋನವಾದರೆ, ಕೇವಲ ಸಿದ್ಧಾಂತಗಳ ರಚನೆಯಿಂದ ಸಾಮಾಜಿಕ ಅಭಿವೃದ್ಧಿ ಅಥವಾ ಬದಲಾವಣೆ ಸಾಧ್ಯವಿಲ್ಲ; ಆ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವುದೂ ಸಮಾಜಶಾಸ್ತ್ರಜ್ಞರ ಜವಾಬ್ದಾರಿ ಎನ್ನುವುದು ಮತ್ತೊಂದು ವಾದ. ಸಿದ್ಧಾಂತಗಳ ರಚನೆ ಮತ್ತು ಸಾಮಾಜಿಕ ಅಭಿವೃದ್ಧಿ-ಇವೆರಡರ ನಡುವೆ ಸಮನ್ವಯ ಏರ್ಪಟ್ಟಾಗ ಮಾತ್ರ ಸಮಾಜಶಾಸ್ತ್ರಕ್ಕೆ ಔಚಿತ್ಯ ಬರುವುದು. ಸಮಾಜದ ವಿವಿಧ ಪದರುಗಳಲ್ಲಿ, ಸಂಸ್ಥೆಗಳಲ್ಲಿ, ಘಟನಾವಳಿಗಳಲ್ಲಿ ಭಾಗವಹಿಸಿ-ಬೆರೆತು ಸತ್ಯಸಂಗತಿಗಳನ್ನು ಹೊರಗೆಡಹುವುದು ಸಮಾಜಶಾಸ್ತ್ರದ ಜವಾಬ್ದಾರಿ. ಈ ಕಾರಣದಿಂದಲೇ ಇಂದು ಸಮಾಜಶಾಸ್ತ್ರದಲ್ಲಿ ಕ್ಷೇತ್ರಕಾರ್ಯ ಆಧಾರಿತ ಸಂಶೋಧನೆಗೆ ಅತ್ಯಂತ ಮಹತ್ತ್ವ ಸ್ಥಾನ ದೊರೆತಿದೆ.

ಸಮಾಜದ ಸ್ಥಿತಿ ಗತಿಗಳನ್ನೂ ಸಮಾಜ ಕಾಣುತ್ತಿರುವ ಬದಲಾವಣೆಗ ಳನ್ನೂ ಅರ್ಥ ಮಾಡಿಕೊಳ್ಳಲು ಅಥವಾ ಅರ್ಥೈಸಲು ಸಮಾಜಶಾಸ್ತ್ರದಲ್ಲಿ ಅನೇಕ ಪಂಥಗಳಿವೆ. ಇವುಗಳಲ್ಲಿ 1. ಕಾರ್ಯವಾದ ಪಂಥ, 2. ಸಾಂಕೇತಿಕ ಅಂತರಾಕ್ರಿಯಾವಾದ, 3. ಮಾರ್ಕ್ಸ್‌ವಾದ ಮತ್ತು ಸಂಘರ್ಷ ಸಿದ್ಧಾಂತ, 4. ಔಪಚಾರಿಕ ಸಮಾಜಶಾಸ್ತ್ರ, 5. ಸಾಮಾಜಿಕ ಅಸ್ತಿತ್ತ್ವವಾದ ಮತ್ತು ಮನುಕುಲವಿಧಾನಶಾಸ್ತ್ರ (ಎತ್ನೋಮೆಥಡಾಲಜಿ), ಹಾಗೂ 6. ರಚನಾತ್ಮಕವಾದ ಮತ್ತು ರಾಚನಿಕೋತ್ತರವಾದ (ಪೋಸ್ಟ್-ಸ್ಟ್ರಕ್ಚರಲಿಸಮ್). ಮುಖ್ಯವಾದುವು. ಇಂಥ ಸಮಾಜಶಾಸ್ತ್ರೀಯ ಸೈದ್ಧಾಂತಿಕ ದೃಷ್ಟಿಕೋನಗಳೇ ಅಲ್ಲದೆ, ಇತರ ಸಿದ್ಧಾಂತಗಳೂ ಸಮಾಜಶಾಸ್ತ್ರೀಯ ವಿಶ್ಲೇಷಣೆಯಲ್ಲಿ ಬಳಕೆಯಲ್ಲಿವೆ.

ಸಮಾಜಶಾಸ್ತ್ರದ ಅಧ್ಯಯನವಿಷಯ ಹಾಗೂ ಆಸಕ್ತಿಗಳು ವಿವಿಧ ಹಾಗೂ ವಿಭಿನ್ನ ಕ್ಷೇತ್ರಗಳನ್ನು ಆವರಿಸಿಕೊಂಡಿರುವುದರಿಂದ, ಸಮಾಜಶಾಸ್ತ್ರದಲ್ಲಿ ಅನೇಕ ಉಪಶಾಖೆಗಳಿವೆ. ವಿವಿಧ ವಿಷಯಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಅಭ್ಯಸಿಸುವ ಅವಶ್ಯಕತೆಯನ್ನು ಹಿಂದೆಂದಿಗಿಂತ ಹೆಚ್ಚಾಗಿ ಇಂದು ಮನಗಂಡಿರುವುದರಿಂದ, ಸಮಾಜ ಶಾಸ್ತ್ರದ ಉಪಶಾಖೆಗಳು ಹೊಸ ಹೊಸ ದಿಕ್ಕಿನಲ್ಲಿ, ಹೊಸ ಹೊಸ ಆಲೋಚನೆಗಳನ್ನು ಸೇರಿಸಿಕೊಂಡು ಬೆಳೆಯುತ್ತಿವೆ. ಸಮಾಜಶಾಸ್ತ್ರೀಯ ವಿಶ್ಲೇಷಣೆಯ ಅಗತ್ಯವನ್ನು ಮನಗಾಣದ ಕ್ಷೇತ್ರ ಯಾವುದೂ ಇಲ್ಲ ಎಂದರೂ ಉತ್ಪ್ರೇಕ್ಷೆಯಾಗಲಾರದು. ಸಮಾಜಶಾಸ್ತ್ರದ ಕೆಲ ಪ್ರಮುಖ ಉಪಶಾಖೆಗಳೆಂದರೆ ಗ್ರಾಮೀಣ ಸಮಾಜಶಾಸ್ತ್ರ, ನಗರ ಸಮಾಜಶಾಸ್ತ್ರ, ರಾಜಕೀಯ ಸಮಾಜಶಾಸ್ತ್ರ, ಆರೋಗ್ಯ ಸಮಾಜಶಾಸ್ತ್ರ, ಔದ್ಯಮಿಕ ಸಮಾಜಶಾಸ್ತ್ರ, ಶೈಕ್ಷಣಿಕ ಸಮಾಜಶಾಸ್ತ್ರ, ವಿನಾಶದ ಅಂಚಿನಲ್ಲಿರುವ ಗುಂಪುಗಳ ಸಮಾಜಶಾಸ್ತ್ರ, ಸಂಪರ್ಕ ಮಾಧ್ಯಮ ಸಮಾಜಶಾಸ್ತ್ರ ಮತ್ತು ವೃತ್ತಿ ಸಮಾಜಶಾಸ್ತ್ರ ಮೊದಲಾದುವು. ಸಾಮಾಜಿಕ ಬದುಕು ಸಂಕೀರ್ಣವಾಗುತ್ತಾ ಹೋದಂತೆ ಸಮಾಜಶಾಸ್ತ್ರೀಯ ವಿಶ್ಲೇಷಣೆಯ ಅಗತ್ಯವೂ ಹೆಚ್ಚಾಗುತ್ತಾ ಹೋಗುತ್ತದೆ; ಹೊಸ ಹೊಸ ಶಾಖೆಗಳು ಹುಟ್ಟಿಕೊಳ್ಳುತ್ತವೆ.

ಇಂದು ಪ್ರಪಂಚದೆಲ್ಲೆಡೆ ತಾಂತ್ರಿಕ ಪ್ರಗತಿಯಿಂದ ಬದಲಾವಣೆಗಳ ಪ್ರಮಾಣ ಹೆಚ್ಚುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿ ವಿಸ್ಮಯಕಾರಿಯಾದ ಬೆಳೆವಣೆಗೆಗಳನ್ನುಂಟುಮಾಡಿದೆ. ಇಡೀ ಪ್ರಪಂಚವನ್ನು ಜಾಗತೀಕರಣದ ಅಲೆಗಳು ತಮ್ಮೊಳಗೆ ಸೆಳೆದುಕೊಳ್ಳಲೆತ್ನಿಸುತ್ತಿವೆ. ಆದರೆ ಈ ಬೆಳೆವಣಿಗೆ ಗಳ ಜೊತೆಜೊತೆಗೆ ಸಮಾಜದಲ್ಲಿ ವಿಘಟನೆ, ವಿಧ್ವಂಸಕ ಕೃತ್ಯ, ವಿಚ್ಛಿದ್ರಕಾರೀ ಪ್ರವೃತ್ತಿ ವಿನಾಶಕಾರೀ ಸಂಕೇತಗಳೂ ಗಂಭೀರವಾದ ಸವಾಲುಗಳನ್ನೆಸೆಯು ತ್ತಿವೆ. ಸಾಮಾಜಿಕ, ಆರ್ಥಿಕ ಅಸಮಾನತೆ ಹಾಗೂ ಈ ಅಸಮಾನತೆ ಸೃಷ್ಟಿಸುವ ಸಮಸ್ಯೆಗಳು ಕೂಡ ಸಮಕಾಲೀನ ಸಾಮಾಜಿಕ ಬದುಕನ್ನು ಆವರಿಸಿಕೊಂಡಿವೆ. ನಿಜವಾದ ಅರ್ಥದಲ್ಲಿ ಅಭಿವೃದ್ಧಿಯಾಗಬೇಕಾದರೆ, ಜನಾಂಗ, ಜಾತಿ, ಧರ್ಮ, ಲಿಂಗ, ವರ್ಗ, ಪ್ರಾಂತ-ಇವೇ ಮುಂತಾದವುಗಳ ಆಧಾರದ ಮೇಲೆ ತೀವ್ರವಾಗಿ ಸ್ತರೀಕೃತವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ, ಅಭಿವೃದ್ಧಿ ಅವಕಾಶಗಳ ಹಂಚಿಕೆಯಲ್ಲಿ ಸಮಾನತೆ ಯುಂಟಾಗಬೇಕು. ಸಾಮಾಜಿಕ ಸಮಸ್ಯೆಗಳ ಸಮಗ್ರ ಹಾಗೂ ಆಳವಾದ ಅಧ್ಯಯನ ಮಾತ್ರ, ಸಾಮಾಜಿಕ ಸಮತೆಗೆ ಪೂರಕವಾದ ಜ್ಞಾನವನ್ನು ಸೃಷ್ಟಿಸಲು ಸಾಧ್ಯ. ಇಂತಹ ಜ್ಞಾನ ಸೃಷ್ಟಿಯ ಗುರುತರ ಜವಾಬ್ದಾರಿ ಸಮಾಜಶಾಸ್ತ್ರಕ್ಕಿದೆ.

ಸಮಾಜಶಾಸ್ತ್ರ ಕೇವಲ ಬೋಧನೆಯ ವಿಷಯವಲ್ಲ, ಇದೊಂದು ಆಚರಣೆಯೂ ಹೌದು. ಪ್ರಸ್ತುತ ಪ್ರಪಂಚದೆಲ್ಲೆಡೆಯ ಬೆಳೆವಣಿಗೆ, ಬದಲಾವಣೆ, ಮತ್ತು ಬವಣೆಗಳನ್ನು ಅರ್ಥೈಸಿ-ವಿವರಿಸಲು ಸಮಾಜಶಾಸ್ತ್ರದ ನೆರವು ಪಡೆಯಲಾಗುತ್ತಿದೆ. ಈ ಕಾರಣಕ್ಕಾಗಿಯೇ ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ (ಅಭಿವೃದ್ಧಿ, ಆಡಳಿತ, ಕಾನೂನು, ಆರೋಗ್ಯ, ತಂತ್ರಜ್ಞಾನ) ಸಮಾಜಶಾಸ್ತ್ರಜ್ಞರ ಸೇವೆಯ ಅವಶ್ಯಕತೆ ಬಹುವಾಗಿ ಕಂಡುಬರುತ್ತಿದ್ದು, ಸಮಾಜಶಾಸ್ತ್ರದ ಸಮಕಾಲೀನ ಬೆಳೆವಣಿಗೆಗೆ ಈ ಅಂಶವೂ ಪೂರಕವಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: