ಗಾಯತ್ರಿ ಮೂಲತಃ ಸಂಸ್ಕೃತ ಪದವಾದ ಗಾಯತ್ರ ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ ಗಾಯಂತಮ್ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ ಎಂದು ಬಿಡಿಸುತ್ತಾರೆ. ಭಾಷಾಂತರಿಸಿದರೆ ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊ ಅದೆ ಗಾಯತ್ರ ಎಂಬ ಅರ್ಥ ಮೂಡಿ ಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳಲ್ಲಿ ಮತ್ತು ಧರ್ಮ ಗ್ರಂಥಗಳಲ್ಲಿ ಈ ಪದವನ್ನು ಮೂರು ಸ್ವರೂಪದಲ್ಲಿ ಕಾಣಬಹುದು.

  • ಗಾಯತ್ರೀ ಛಂದಸ್ಸು - ೨೪ ಅಕ್ಷರಗಳ ತ್ರಿಪದಿ
  • ಗಾಯತ್ರೀ ಮಂತ್ರ - ಋಗ್ವೇದದಲ್ಲಿ ಮೊದಲು ಕಾಣಿಸಿಕೊಂಡು, ನಂತರ ಇತರ ವೇದೋಪನಿಷತ್‌ಗಳಲ್ಲಿ ಪ್ರಸ್ತಾಪವಿರುವ ಹಿಂದೂ ಧರ್ಮದ ಒಂದು ಪ್ರಮುಖ ಮಂತ್ರ. ಗಾಯತ್ರೀ ಛಂದಸ್ಸಿನಲ್ಲಿ ಬರೆದ ಯಾವುದೆ ಮಂತ್ರವನ್ನು ಗಾಯತ್ರೀ ಮಂತ್ರ ಎಂದು ಕರೆಯುವ ಪ್ರತೀತಿ ಕೂಡ ಇದೆ.
  • ಗಾಯತ್ರೀ ದೇವಿ - ವೇದಮಾತೆ ಮತ್ತು ದೇವಿ ಸರಸ್ವತಿಯ ಸ್ವರೂಪ.
ಗಾಯತ್ರೀ ದೇವಿ

ವೇದದ ಪ್ರಕಾರ ದೇವಿ ಸನ್ಯಾರ ಅವತಾರ. ವಟುಗಳನ್ನು ಸಲಹುವಳು.

ಗಾಯತ್ರೀ ಛಂದಸ್ಸು

ಬದಲಾಯಿಸಿ

ಗಾಯತ್ರೀ ಛಂದಸ್ಸು ಸಾಲಿಗೆ ೮ ಅಕ್ಷರದಂತೆ ಒಟ್ಟು ೨೪ ಅಕ್ಷರಗಳಿರುವ ತ್ರಿಪದಿ. ಗಾಯತ್ರಿ ಮಂತ್ರ ಕೂಡ ಇದೇ ಛಂದಸ್ಸಿನಲ್ಲಿದೆ. ಋಗ್ವೇದದ ಶ್ಲೋಕಗಳಲ್ಲಿ ಸುಮಾರು ೧/೪ ಭಾಗದಷ್ಟು ಈ ಛಂದಸ್ಸಿನಲ್ಲಿವೆ ಎಂದು ಅಂದಾಜು ಮಾಡಲಾಗಿದೆ. ಇತರ ವೈದಿಕ ಛಂದಸ್ಸುಗಳಂತೆ ಗಾಯತ್ರಿಯೂ ಉದಾತ್ತಾನುದಾತ್ತಸ್ವರಿತಳೆಂಬ ಸ್ವರಗಳೊಡನೆ ಹೇಳಲ್ಪಡುತ್ತದೆ. ಇದರ ಸಾಮಾನ್ಯ ಲಕ್ಷಣ ಹೀಗೆ: ೩ ಪಾದಗಳು: ಪಾದಕ್ಕೆ ೮ ಅಕ್ಷರಗಳು: ಪ್ರತಿಯೊಂದು ಪಾದವನ್ನು ೪ ಅಕ್ಷರಗಳ ೨ ಗಣಗಳನ್ನಾಗಿ ವಿಭಜಿಸಬಹುದು. ಹೀಗೆ ವಿಭಜಿಸಿದಾಗ 2ನೆಯ ಗಣದಲ್ಲಿ ೨ ಬಾರಿ ಹ್ರಸ್ವದೀರ್ಘಾಕ್ಷರಗಳ ಅನುಕ್ರಮವಾದ ವಿನ್ಯಾsಸ (ೃ-,ೃ-) ಸಾಮಾನ್ಯವಾಗಿ ಕಂಡಬರುತ್ತದೆ.

ಗಾಯತ್ರಿ ಸಂಬಂಧವಾದ ಇನ್ನೊಂದು ವೈಲಕ್ಷಣ್ಯವೆಂದರೆ, ಗಾಯತ್ರಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪಾದಗಳನ್ನು ತ್ರಿಷ್ಟುಪ್, ಜಗತಿ ಮುಂತಾದವುಗಳ ಪಾದಗಳೊಡನೆ ಕೂಡಿಸಿರುವುದು. ಉದಾಹರಣೆಗೆ

  1. ಕಕುಭೋಷ್ಣಿಕ್-ಗಾಯತ್ರಿ, ಜಗತಿ, ಗಾಯತ್ರಿ: ಪುರೋಷ್ಣಿಕ್-ಜಗತಿ, ಗಾಯತ್ರಿ, ಗಾಯತ್ರಿ; ಪರೋಷ್ಣಿಕ್-ಗಾಯತ್ರಿ, ಗಾಯತ್ರಿ, ಜಗತಿ
  2. ೪ ಪಾದಗಳ ಬೃಹತಿ-೧ ಜಗತಿ+ ೩ ಗಾಯತ್ರಿ,
  3. ೪ ಪಾದಗಳ ಪಂಕ್ತಿ-೨ ಜಗತಿ + ೨ ಗಾಯತ್ರಿ, ಇದೇ ರೀತಿಯಲ್ಲಿ ತ್ರಿಷ್ಟುಪ್ ಮತ್ತು ಗಾಯತ್ರಿಯ ಪಾದಗಳನ್ನೂ ಕೂಡಿಸಿ ಪುರಸ್ತಾಜ್ಜ್ಯೋತಿ (೧ ತ್ರಿ + ೪ ಗಾ), ಮಧ್ಯೇಜ್ಜ್ಯೋತಿ (೨ ಗಾ + ೧ ತ್ರಿ + ೨ ಗಾ). ಉಪರಿಷ್ಟಾಜ್ಜ್ಯೋತಿ (೪ ಗಾ + ೧ ತ್ರಿ) ಎಂಬುದಾಗಿ ಭೇದಗಳನ್ನು ಕಲ್ಪಿಸಿರುವುದೂ ಉಂಟು.

ಗಾಯತ್ರೀ ಮಂತ್ರ

ಬದಲಾಯಿಸಿ
  • ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ, ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನಿಂದ ದರ್ಶಿಸಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ. ಆದರೆ ಗಾಯತ್ರೀ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ.
  • ಉಪನಯನ ಸಂಸ್ಕಾರದಲ್ಲಿ ಉಪನೀತನಿಗೆ ಈ ಮಂತ್ರವನ್ನು ಉಪದೇಶಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಉಪನೀತ ವಿಪ್ರನಾಗುತ್ತಾನೆ. ಮನುಸ್ಮೃತಿಯಲ್ಲಿ ತಿಳಿಸಿರುವಂತೆ ಗಾಯತ್ರಿ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪೂರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ, ಮಹಾಪಾತಕಗಳು ನಶಿಸುತ್ತವೆ.
  • ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರ ಅಭಿಪ್ರಾಯ. ಋಗ್ವೇದದದ ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, "ಓಂ ಭೂರ್ಭುವಃ ಸ್ವಃ" ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ.
ದೇವ ನಾಗರಿಯಲ್ಲಿ

:ॐ भूर्भुवः॒ स्वः ।

तत्स॑वितुर्वरे॑णयं| ---(तत्सवितुर्वरेण्यं) ।
भ॒र्गो॑ दे॒वस्य॑ धीमहि ।
धियो॒ यो नः॑ प्रचो॒दया॑त्||

(ಪೀಠಿಕೆ) ಓಂ ಭೂರ್ಭುವಃ ಸ್ವಃ

(ಋಗ್ವೇದದದ ೩.೬೨.೧೦ ರಲ್ಲಿರುವ ಮೂಲ ಮಂತ್ರ)

ತತ್ ಸವಿತುರ್ ವರೇಣ್ಯಂ(ತತ್ಸವಿತುರ್ :೪ ಅಕ್ಷರ +ವರೇಣ್ಯಂ :೩ ಅಕ್ಷರ?=ವರೇಣಿಯಂ:೪=೮)

ಭರ್ಗೋ ದೇವಸ್ಯ ಧೀಮಹಿ(೨+೩+೩=೮)

ಧಿಯೋ ಯೋ ನಃ ಪ್ರಚೋದಯಾತ್(೨+೧+೧+೪=೮ :ತ್ ಹಿಂದಿನಯಾಕ್ಕೆ ಸೇರಿ ೧ ಅಕ್ಷರ)

  • (ಒಟ್ಟು ೮+೮+೮=೨೪ ಅಕ್ಷರ)

ಕನ್ನಡ ಭಾಷಾಂತರ

ಬದಲಾಯಿಸಿ

ಹಲವರು ಹಲವು ರೀತಿಯಲ್ಲಿ ಭಾಷಾಂತರಿಸಿದ್ದಾರೆ. ಆದರೆ ಮೂಲ ಅರ್ಥ ಹೀಗೆ ಹೊಮ್ಮುತ್ತದೆ. ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ)ಗೆ ಪ್ರೇರಿಸಲಿ

ಪದಗಳ ಆರ್ಥ

ಬದಲಾಯಿಸಿ
  • ಓಂ - ಓಂ
  • ಭೂಃ - ಭೂಮಿ
  • ಭುವಃ - ಅಂತರಿಕ್ಷ
  • ಸ್ವಃ - ಆಕಾಶ
  • ತತ್ - ಆ
  • ಸವಿತುಃ - ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ)
  • ವರೇಣ್ಯಂ - ಪೂಜಾರ್ಹವಾದ
  • ಭರ್ಗೋ - ತೇಜಸ್ಸನ್ನು
  • ದೇವಸ್ಯ - ದೇವನ
  • ಧೀಮಹಿ - ಧ್ಯಾನಿಸುತ್ತೇವೆ
  • ಧಿಯೋ - ಬುದ್ಧಿ, ವಿವೇಕಗಳನ್ನು
  • ಯೋ - ಅವನು
  • ನಃ - ನಮ್ಮೆಲ್ಲರ
  • ಪ್ರಚೋದಯಾತ್ - ಪ್ರಚೋದಿಸಲಿ

ಉಲ್ಲೇಖ

ಬದಲಾಯಿಸಿ

ಮೊದಲನೆ ವೇದವಾದ ಋಗ್ವೇದದ ಅಂಶಗಳು ಉಳಿದ ಮೂರು ವೇದಗಳಲ್ಲಿ ಸೇರಿರುವ ಕಾರಣ, ಗಾಯತ್ರೀ ಮಂತ್ರದ ಉಲ್ಲೇಖ ಎಲ್ಲಾ ವೇದಗಳಲ್ಲಿದೆ. ಭಗವದ್ಗೀತೆಯಲ್ಲಿ, ಹಲವಾರು ಉಪನಿಷತ್ತುಗಳಲ್ಲಿ, ಶಂಕರಾಚಾರ್ಯರ ಕೃತಿಗಳಲ್ಲಿ ಮತ್ತು ಶ್ರೀಮದ್ ಭಾಗವತದಲ್ಲಿ ಕೂಡ ಗಾಯತ್ರೀ ಮಂತ್ರದ ಪ್ರಸ್ತಾಪವಿದೆ.

ಇನ್ನಷ್ಟು ಮಾಹಿತಿ

ಬದಲಾಯಿಸಿ

ಗಾಯತ್ರೀಮಂತ್ರದೊಡನೆ ಒಂದು ಲಕ್ಷ ತಿಲಹೋಮ ಮಾಡಿದರೆ ಸರ್ವಪಾತಕಗಳೂ ನಶಿಸುತ್ತವೆ. ತುಪ್ಪದಿಂದ ಹೋಮ ಮಾಡಿದರೆ ಆಯಸ್ಸು ಹೆಚ್ಚುತ್ತದೆ. ದಧಿಯಿಂದ ಹೋಮ ಮಾಡಿದರೆ ಮಕ್ಕಳಾಗುತ್ತಾರೆ. ಸಮಿತ್ತಿನಿಂದ ಹೋಮ ಮಾಡಿದರೆ ಗ್ರಹಪೀಡೆ ನಿವಾರಣೆಯಾಗುತ್ತದೆ. ಇದು ಸರ್ವಾಭೀಷ್ಟ ಸಿದ್ಧಿಕರ ಮಂತ್ರ. ಇದನ್ನು ಜಪಿಸಿದವರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದ ದಿವಸ ಮಿಥ್ಯಾಧೀತ (ದೋಷ) ಪ್ರಾಯಶ್ಚಿತ್ತಕ್ಕಾಗಿ ಒಂದು ಸಾವಿರ ಸಂಖ್ಯೆಯಲ್ಲಿ ಗಾಯತ್ರೀ ಜಪ ಅಥವಾ ಹೋಮವನ್ನು ಮಾಡುವುದು ರೂಢಿಯಲ್ಲಿದೆ.

ಗಾಯತ್ರೀ ದೇವಿ

ಬದಲಾಯಿಸಿ

ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಈ ದೇವತೆಯ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯನ್ನು ಎಲ್ಲರು ಸ್ವೀಕರಿಸಿದ್ದಾರೆ.

ಯಾಗದೀಕ್ಷಾಕಾಲದಲ್ಲಿ ಬ್ರಹ್ಮ ತನ್ನ ಪತ್ನಿಯನ್ನು ಯಜ್ಞವಾಟಿಕೆಗೆ ಬರುವಂತೆ ಹೇಳಿಕಳುಹಿಸುತ್ತಾನೆ. ತನ್ನ ಒಡನಾಡಿಯರಿಗಾಗಿ ಕಾಯುತ್ತಿದ್ದ ಆಕೆ ಸಕಾಲಕ್ಕೆ ಬರದೆ ಮುಹೂರ್ತ ಮಿಂಚುತ್ತ ಬರಲು ಕುಪಿತನಾದ ಬ್ರಹ್ಮ ಬೇರೆ ಪತ್ನಿಯನ್ನು ಕರೆತರುವಂತೆ ಇಂದ್ರನಿಗೆ ಆಜ್ಞಾಪಿಸುತ್ತಾನೆ. ಇಂದ್ರ ಕೂಡಲೇ ಭೂಲೋಕಕ್ಕೆ ಹೋಗಿ ಒಬ್ಬ ಸುಂದರಿಯನ್ನು ಕರೆತರಲು ಆಕೆಗೆ ಗಾಯತ್ರೀ ಎಂದು ಹೆಸರಿಟ್ಟು ಗಾಂಧರ್ವ ವಿಧಿಯಿಂದ ಬ್ರಹ್ಮ ವಿವಾಹವಾಗುತ್ತಾನೆ. ಹೀಗೆಂದು ಒಂದು ಪೌರಾಣಿಕ ಕತೆ ಇದೆ.

ಕೆಂಪು ಬಿಳುಪು ಹಳದಿ ನೀಲ ಬಣ್ಣಗಳ ಕಾಂತಿಯಿಂದ ಕೂಡಿರುವವಳೂ ಉಜ್ವಲವಾದ ಮೂರು ಕಣ್ಣುಳ್ಳವಳೂ ಕೆಂಪು ವಸ್ತ್ರವನ್ನು ಧರಿಸಿರುವವಳೂ ವರದಾಭಯ ಹಸ್ತಗಳನ್ನುಳ್ಳವಳೂ ಶಂಖಚಕ್ರಧಾರಣಿಯೂ ಕೈಯಲ್ಲಿ ಕಪಾಲ ಅಂಕುಶ ಜಪಮಾಲೆ ಕಮಲಗಳನ್ನು ಹಿಡಿದಿರುವವಳೂ ಕುಮಾರಿಯೂ ಆಗಿರುವಂತೆ ಗಾಯತ್ರಿ ಸ್ವರೂಪವನ್ನು ಧ್ಯಾನಿಸಬೇಕು. (ವೀರಶೈವ ಪಂಥದ ಕೆರೆಯ ಪದ್ಮರಸನ ದೀಕ್ಷಾಬೋಧೆ ಎಂಬ ಗ್ರಂಥದ ದ್ವಿತೀಯ ಸ್ಥಲದಲ್ಲಿ)

"ಇನ್ನು ಕೇಳು ಗಾಯತ್ರಿಯ ನಿಜಮಂ ಸನ್ನುತ ಭೂತಿರುದ್ರಾಕ್ಷಿಗಳಿರಮಂ ನಿಟಿಲ ತ್ರಿಪುಂಡ್ರಾಂಕಿತಯುಕ್ತಾಂಗಿಯ ಜಟೆರುದ್ರಾಕ್ಷಭಸಿತ ಸರ್ವಾಂಗಿಯ ಅಕ್ಷಮಾಲೆ ಜಪಕರದ ಕಮಂಡಲ ನಿಕ್ಷೇಪಿಸಿದಾಗಂ ಹೃನ್ಮಂಡಲ ಋಗ್ಯಜುಸ್ಸಾಮಂ ನಿಜಮೂರುತಿಯ ಭರ್ಗಭಕ್ತಿಯ ನಿಷ್ಠೆಯ ಮನದರ್ಥಿಯ ಇದು ಗಾಯತ್ರಿಯ ನಿಜದಾಕಾರಂ" - ಎಂದು ಗಾಯತ್ರಿಯ ಸ್ವರೂಪದ ವಿವರಣೆ ಇದೆ. ಗಾಯತ್ರಿಯ ಅಕ್ಷರಗಳಲ್ಲಿ ಒಂದೊಂದು ಅಕ್ಷರವೂ ಒಂದೊಂದು ಶ್ಲೋಕದಲ್ಲಿರುವುದನ್ನು ಶ್ರೀಮದ್ವಾಲ್ಮೀಕಿ ರಾಮಾಯಣದಿಂದ ಉದ್ಧರಿಸಿ 24 ಶ್ಲೋಕಗಳುಳ್ಳ ಈ ಗ್ರಂಥ ಭಾಗಕ್ಕೆ ಗಾಯತ್ರೀರಾಮಾಯಣ ಎಂದು ಅಂಕಿತ ಮಾಡಿದ್ದಾರೆ. ಇದನ್ನು ಪ್ರತಿದಿನ ಪಠಿಸುವುದರಿಂದ ಸರ್ವಪಾಪಗಳೂ ನಶಿಸುತ್ತವೆ ಎಂದು ಫಲಶ್ರುತಿ.

ಇನ್ನೂ ಹೆಚ್ಚಿನ ಅರ್ಥಕ್ಕೆ-> ಗಾಯತ್ರೀ ಪುಟ೨<- ಕ್ಲಿಕ್ ಮಾಡಿ

[] []

ಬಾಹ್ಯ ಸಂಪರ್ಕ ಕೊಂಡಿಗಳು

ಬದಲಾಯಿಸಿ


ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ  
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ


ಉಲ್ಲೇಖ

ಬದಲಾಯಿಸಿ
  1. ಋಗ್ವೇದ
  2. ಗಾಯತ್ರಿ ಜಪ -ವಾಸುದೇವ ಕಾರಂತ ಕೋಟ
"https://kn.wikipedia.org/w/index.php?title=ಗಾಯತ್ರಿ&oldid=1219633" ಇಂದ ಪಡೆಯಲ್ಪಟ್ಟಿದೆ