ಕಾಕಂಬಿ
ಕಾಕಂಬಿ- ಕಬ್ಬು ಮತ್ತು ಸಿಹಿಗೆಣಸುಗಳಿಂದ ಸಕ್ಕರೆಯನ್ನು ತಯಾರಿಸುವಾಗ ದೊರೆಯುವ ಪ್ರಮುಖ ಉಪೋತ್ಪನ್ನ; ವಾಣಿಜ್ಯದೃಷ್ಟಿಯಿಂದ ಸಕ್ಕರೆ ಹರಳುಗಳನ್ನು ಪೂರ್ಣವಾಗಿ ಪಡೆದ ತರುವಾಯ ಉಳಿಯುವ ಕಪ್ಪುಬಣ್ಣದ ದ್ರವರೂಪದ ಪಾಕ (ಮೆಲಾಸ್ಸಸ್). ಪಾಕದಲ್ಲಿ ಮೆಲಾಸ್ಸಿಜೆನಿಕ್ ಎಂಬ ವಸ್ತುಗಳು ಇರುವುದರಿಂದ ಕಾಕಂಬಿಯಿಂದ ಮತ್ತೆ ಸಕ್ಕರೆ ಹರಳುಗಳು ದೊರೆಯುವುದಿಲ್ಲ. ಇವು ಪ್ರಧಾನವಾಗಿ ಇನಾರ್ಗೇನಿಕ್ ಲವಣವಸ್ತುಗಳು ಮತ್ತು ಆರ್ಗೇನಿಕ್ (ಸಾವಯವ) ಸಕ್ಕರೆಯಲ್ಲದ ಕಶ್ಮಲಗಳು. ಸುಕ್ರೋಸಿನ ಸಂತೃಪ್ತ ದ್ರಾವಣದಲ್ಲಿ ಇವು ಲೀನವಾಗಿವೆ. ಸುಟ್ಟ ಸಕ್ಕರೆಯ ವಾಸನೆ ಇರುವ ಈ ಕಪ್ಪು ಪಾಕ (ಕಾಕಂಬಿ) ಕಚ್ಚಾ ಸಕ್ಕರೆಯ ತಯಾರಿಕೆಯಲ್ಲೂ ಅದರ ಪರಿಷ್ಕರಣ ಹಂತದಲ್ಲೂ ಸಿಕ್ಕುತ್ತದೆ. ಕಬ್ಬಿನಿಂದ ದೊರೆಯುವ ಕಾಕಂಬಿ ಸಂಯೋಜನೆಯ ಸ್ಥಳ, ಕಬ್ಬಿನ ದರ್ಜೆ, ಮಣ್ಣಿನ ಗುಣ, ಹವೆ, ಕಬ್ಬನ್ನು ಸಂಸ್ಕರಿಸುವ ವಿಧಾನ ಇವನ್ನು ಅವಲಂಬಿಸಿದೆ. ಒಂದು ದರ್ಜೆಯ ಕಾಕಂಬಿಯನ್ನು ಆಹಾರವಸ್ತುವಾಗಿ ಉಪಯೋಗಿಸುತ್ತಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: