ಕರ್ನಾಟಕ ಪತ್ರಿಕೋದ್ಯಮ ಇತಿಹಾಸ

jounralisom


ನಾಗರಿಕ ಪ್ರಪಂಚದಲ್ಲಿ ವೃತ್ತ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ ಪತ್ರಕರ್ತರ ಸಹಾಯ ಸಾಮಾನ್ಯವಾದದ್ದೇನಲ್ಲ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪಾಶ್ಚಾತ್ಯಸಂಪರ್ಕವಾದ ಮೇಲೆ ಅವರು ಮುದ್ರಣಯಂತ್ರಗಳನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲ್ಲೇ ಆದಿಯ ಪತ್ರಿಕೆಗಳು ಪ್ರಾರಂಭವಾದವು. ಪಾದ್ರಿಗಳ ಪ್ರಯತ್ನದಿಂದ ಅವರು ಆ ಕೆಲಸವನ್ನು ತಮ್ಮ ಮತ ಪ್ರಚಾರಕಾರ್ಯಕ್ಕಾಗಿ ಪ್ರಾರಂಭಮಾಡಿದರು. ಆದರೂ ಪತ್ರಿಕೆಗಳು ಕನ್ನಡ ಜನ ಜೀವನದ ಪ್ರತಿಬಿಂಬವಾಗಿದೆ. ಪ್ರಥಮ ಪತ್ರಿಕೆಯವಿಷಯದ ಚರ್ಚೆ ಇದ್ದರೂ ೧೮೪೩ ನೆಯ ಜುಲೈ ಒಂದರಲ್ಲಿ ಪ್ರಾರಂಭವಾದ 'ಮಂಗಳೂರು ಸಮಾಚಾರ' ವೆಂಬ ಪತ್ರಿಕೆಯೇ ಕರ್ನಾಟಕದ ಪ್ರಥಮ ಪತ್ರಿಕೆಯೆಂದು ಭಾವಿಸಬಹುದು[]. ಈ ಪತ್ರಿಕೆಯನ್ನು ಸ್ವಿಸರ್‌ಲ್ಯಾಡಿನ ಇವಾಂಜಲಿಕಲ್ ಸೊಸೈಟಿಯ ರೆವರೆಂಡ್ ಮಾಗ್ ಲಿಂಗ್ ರವರು ಮುದ್ರಿಸುತ್ತಿದ್ದರು []. ಇದನ್ನು ಕ್ರಿಸ್ತ ಮತ ಪ್ರಚಾರಕ್ಕೆ ಬಳಸುವುದೇ ಇವರ ಉದ್ದೇಶವಾಗಿತ್ತು[][]. ಪ್ರತಿ ತಿಂಗಳು ೧ ನೆಯ ಮತ್ತು ೧೫ ನೆಯ ತಾರೀಖುಗಳಲ್ಲಿ ಪ್ರಕಟವಾಗುತ್ತಿತ್ತು. ಸ್ವಲ್ಪ ಕಾಲದಲ್ಲಿಯೇ ಬಳ್ಳಾರಿಗೆ ವರ್ಗವಾಗಿ 'ಕನ್ನಡ ಸಮಾಚಾರ' ಎಂಬ ಹೊಸ ಹೆಸರನ್ನು ತಾಳಿತು[]. ೧೮೪೪ ರ ಮಾರ್ಚ್ ಒಂದರಿಂದ ಬಳ್ಳಾರಿಯಿಂದಪ್ರಕಟವಾಗಲು ಪ್ರಾರಂಭವಾಯಿತು. ಇದರ ಬೆಲೆ ಒಂದು ದುಡ್ಡಾಗಿತ್ತು. ಕೆಲವು ಕಾಲಗಳಾದ ನಂತರ ಇದರ ಬೆಲೆ ಎರಡು ದುಡ್ದಿಗೂ ಏರಿತು. ಅಲ್ಪಕಾಲದಲ್ಲಿಯೇ ಮಂಗಳೂರಿಗೆ ವರ್ಗವಾಗಿ 'ಕನ್ನಡ ಸುವಾರ್ತಿಕ', 'ಕರ್ನಾಟಕ ಪತ್ರಿಕೆ', 'ಬಾಲಪತ್ರ', 'ಸತ್ಯದೀಪಿಕೆ', 'ಕ್ರಿಸ್ತಸಭಾಪತ್ರ', ಎಂಬ ಬೇರೆಬೇರೆ ಹೆಸರುಗಳಿಂದ ೧೯೪೦ ರವರೆಗೆ ಬೆಳೆಯಿತು. ೧೮೪೪ ಕ್ಕೂ ಮೊದಲು 'ಭಾಷಾ' ಎಂಬ ಪತ್ರಿಕೆ ಜನ್ಮ ತಾಳಿ ಅಲ್ಪಕಾಲದಲ್ಲಿಯೇ ನಿಂತು ಹೋಯಿತೆಂದೂ ಹೇಳಲಾಗಿದೆ.

ಮೋಗ್ಲಿನ್ ಹರ್ ಮನ್

೧೯ ನೇ ಶತಮಾನ

ಬದಲಾಯಿಸಿ

ಕನ್ನಡ ಪತ್ರಿಕಾ ಪ್ರಪಂಚದ ಇತಿಹಾಸಕ್ಕೆ ಮೈಸೂರು, ಮದ್ರಾಸ್, ಮಂಗಳೂರು ಮತ್ತು ಮುಂಬಯಿ ಮೂಲ ಕೇಂದ್ರಗಳು. ವಿವಿಧ ಖಾಸಗಿ ಮತ್ತು ಸರ್ಕಾರಿ ಅಧಿಕಾರಿಗಳು ಇಲ್ಲೆಲ್ಲ ಪತ್ರಿಕೆಗಳನ್ನು ಪ್ರಾರಂಭಿಸಿ ಕೆಲಕಾಲ ನಡೆಸಿಕೊಂಡು ಬಂದಿದ್ದಾರೆ. ಬ್ರಿಟಿಷರಂತೂ 'ಕನ್ನಡ ಸಮಾಚಾರ' ನಿಂತ ಮೇಲೆ ಮಂಗಳೂರು, ಉಡುಪಿ, ಬೆಂಗಳೂರು, ಮೈಸೂರು ಪ್ರಾಂತಗಳಲ್ಲಿ ವಿವಿಧ ರೀತಿಯ ಪತ್ರಿಕಾವ್ಯವಸಾಯವನ್ನು ನಡೆಸಿದ್ದಾರೆ.

ಮೈಸೂರು ಸಂಸ್ಥಾನದ ವಾರಪತ್ರಿಕೆ 'ವೃತ್ತಾಂತ ಬೋಧಿನಿ' ಇದು ಮುಮ್ಮಡಿ ಕೃಷ್ಣರಾಜ ಒಡೆಯರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಜನ್ಮತಾಳಿತು. ವಿದ್ವನ್‌ಭಾಷ್ಯಂಭೀಷ್ಮಾಚಾರ್ ಇದರ ಸಂಪಾದಕರು, ಕೆಲವು ವಿದ್ವಾಂಸರ ಸಹಾಯದಿಂದ ೧೮೬೪ ರವರೆಗೂ ನಡೆದು ಬಂದಿತು. ೧೮೬೫ ರ ಜುಲೈ ತಿಂಗಳಲ್ಲಿ ಇವರ ತಂದೆಯವರಾದ ಭಿಷ್ಮಂತಿರುಮಲಾಚಾರ್ಯರು ಮೊದಲ ಕನ್ನಡ ವಾರಪತ್ರಿಕೆ "ಕರ್ನಾಟಕ ಪ್ರಕಾಶಿಕಾ" ವನ್ನು ಪ್ರಾರಂಭಿಸಿ ಅದರೊಡನೆ ತಂದೆಗೂ ಸಹಾಯ ಮಾಡುತ್ತಿದ್ದರು. ಭಾಷೆ ಮೇಲು ಮಟ್ಟದ್ದಾಗಿತ್ತು. ಆದರೂ ಇದು ಅಲ್ಪಾಯುಷ್ಯವುಳ್ಳದ್ದಾಯಿತು. ೧೮೬೬ ರಲ್ಲಿ ಭೀಷ್ಮಾಚಾರ್ಯರು ಸರ್ಕಾರಿ ಕೆಲಸ ಸಿಕ್ಕಿದುದರಿಂದ ತಿರುಮಲಾಚಾರ್ಯರೇ ನಡೆಸಿಕೊಂಡು ಹೋದರು. ಈ ಪತ್ರಿಕೆ ೧೮೬೮ ರವರೆಗೂ ೭೮ ರಿಂದ ೯೮ ರವರೆಗೂ ಪ್ರಕಾಶವಾಗುತ್ತಿತ್ತು. ತಿರುಮಲಾಚಾರ್ಯರು ೧೮೭೭ ರಲ್ಲಿ ತೀರಿಕೊಂಡಿದ್ದರಿಂದ ಭೀಷ್ಮಾಚಾರ್ಯರ ಮಕ್ಕಳು ವೆಂಕಟಾಚಾರ್ಯರ ಸಂಪಾದಕರಾಗಿಯೂ, ಟಿ.ಸಿ.ಶ್ರೀನಿವಾಸಾಚಾರ್ಯರೂ ಒಡೆಯರಾಗಿಯೂ ಇದ್ದು ೧೮೯೮ ರಲ್ಲಿ ಇಬ್ಬರೂ ವಿಧಿ ವಶರಾದುದರಿಂದನಿಂತು ಹೋಯಿತು. ಇಲ್ಲಿನ ಲೇಖನಗಳು ಬಹಳ ಪ್ರಭಾವಶಾಲಿಯಾಗಿದ್ದವು.

ಉತ್ತರ ಕರ್ಣಾಟಕದ ಮೊದಲನೆಯ ಪತ್ರಿಕೆ 'ಸುಬುದ್ದಿಪ್ರಕಾಶ' ಇದು ೧೮೫೧ ನೆಯ ಸೆಪ್ಟೆಂಬರ್ ಒಂದರಂದು ಬೆಳಗಾವಿಯಿಂದ ಪ್ರಕಾಶಿತವಾಯಿತು. ಸರಕಾರದ ಘೋಷಣಾ ಪತ್ರಿಕೆಗಳು ಇಂಗ್ಲೀಷ್ ಪ್ರಕಟನೆಗಳ ಸಾರವಾಗಿರುತ್ತಿತ್ತು. ಇದರ ಶೈಲಿ ಶುದ್ಧ ಕನ್ನಡವಾಗಿತ್ತು.೧೮೭೪ ರಲ್ಲಿ 'ದೇಶಾಭಿಮಾನಿ' ಪ್ರಾರಂಭವಾಯಿತು. ನಿರ್ಭೀತವಾದ ಅಭಿಪ್ರಾಯಗಳಿಗೆ ತವರಾಗಿತ್ತು. ಸರ್ಕಾರದ ಆಗ್ರಕ್ಕೆ ಒಳಗಾಗಿ ಮುದ್ರಣಾಲಯವು ಮುಟ್ಟುಗೋಲಾದುದರಿಂದ ನಿಂತು ಹೋಯಿತು. ರಾಷ್ಟ್ರೀಯತೆ ಮತ್ತು ಪ್ರಜಾಸತ್ಮಾತ್ತಕ ಪ್ರಚಾರಕ್ಕೆ ಟೊಂಕ ಕಟ್ಟಿನಿಂತವರು ಎಂ.ವೆಂಕಟ್ಟಕೃಷ್ಣಯ್ಯನವರು. ಇವರಿಗೆ ದೆರ್ವಾರಂಗಚಾರ್ಲು ಅವರಿಂದ ವಿಶೇಷಪ್ರೋತ್ಸಾಹ ದೊರೆಯಿತು. ಇವರು ಬಹು ಯಶಸ್ವಿಯಾದ ಪತ್ರಕರ್ತರಾಗಿದ್ದರು. ಮುಂದೆ ಇವರು ಅಧಿಕ ಸಂಖ್ಯೆಯ ಕನ್ನಡ ಇಂಗ್ಲೀಷ್ ಪತ್ರಿಕೆಗಳಿಗೆ ಕಾರಣರಾದರು. 'ಹಿತಬೋಧಿನಿ', 'ವೆದಂತ ಚಿಂತಾಮಣಿ', 'ಸಂಪದಭ್ಯುದಯ', 'ವೃತ್ತಾಂತಚಿಂತಾಮಣಿ', 'ಸಾದ್ವಿ', 'ಪೌರ' ಸಾಮಾಜಿಕ ಪತ್ರಿಕೆ. ಇವನ್ನು ಕನ್ನಡದಲ್ಲಿಯೂ 'ಮೈಸೂರು ಹರಾಲ್ದ್', 'ವೆಲ್ತ್ ಆಫ್ ಮೈಸೂರು', 'ನೇಚರ್ಕ್ಯೂರ್' ಇವನ್ನು ಇಂಗ್ಲೀಷಿನಲ್ಲಿಯೂ ಬಹು ಯಶಸ್ವಿಯಾಗಿ ನಡೆಸಿದರು. ಈ ಪತ್ರಿಕೆಗಳ ಪ್ರಚಾರವೂ ಗಮನಾರ್ಹವಾಗಿತ್ತು.

ಬಳ್ಳಾರಿಯಲ್ಲಿ ೧೮೮೦ ರ ಕಾಲದಲ್ಲಿ ಪ್ರಾರಂಭವಾದ 'ವಿಜಯ ಧ್ವಜ' ೧೯೩೦ ರಲ್ಲಿ ನಿಂತು ಹೋಯಿತು. ಧಾರವಾಡದ 'ಕರ್ಮವೀರ' ಅನೇಕ ತೊಂದರೆಗಳನ್ನು ಅನುಭವಿಸಿ ಇನ್ನೂ ಜೀವಂತವಾಗಿದೆ. ಸಂಪಾದಕ ದಿವಾಕರ ರಂಗನಾಥರವರೂ ವ್ಯವಸ್ಥಾಪಕ ಹುಕ್ಕೇರಿಯವರೂ ೧೯೨೧ ರಲ್ಲಿ ಬಂಧಿತರಾದಾಗ ಇದನ್ನು ಆಲೂರು ವೆಂಕಟರಾಯರು ನಡೆಸಿದರು. ಈಗ ಇದು ಹುಬ್ಬಳ್ಳಿಯಿಂದ ಪ್ರಕಾಶವಾಗುತ್ತಿದ್ದು ಹೆಚ್ಚು ಪ್ರಸಾರದಿಂದ ಕೂಡಿದೆ. ಎಂ. ಗೋಪಾಲಯ್ಯಂಗಾರ್ ಮತ್ತು ಎಂ. ಶ್ರೀನಿವಾಸಯ್ಯಂಗಾರ್ ಎಂಬ ಸೋದರರು ವೆಂಕಟಕೃಷ್ಣಯ್ಯನವರಲ್ಲಿ ತರಬೇತಾದರು, ಇವರು ಬೆಂಗಳೂರಿಗೆ ಹೋಗಿ ೧೮೮೫ ರಲ್ಲಿ 'ಕನ್ನಡ ನಡೆಗನ್ನದಿ' ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಬಹುಜನಪ್ರಿಯವಾದ ಕನ್ನಡ ವಾರಪತ್ರಿಕೆಯಾಗಿತ್ತು. ಮುಂದೆ ಇವರೇ 'ಮೈಸೂರು ಸ್ಟಾಂಡರ್ಡ್' ಎಂಬ ಪಕ್ಷಪತ್ರಿಕೆಯನ್ನು ಪ್ರಾರಂಭಿಸಿದರು. ಇವರೇ ನಿಜವಾಗಿ ಪೂರ್ಣಸಮಯದ ಪತ್ರಿಕೋದ್ಯಮಿಗಳಾಗಿದ್ದರು. ಇದು 'ನಡೆಗನ್ನಡಿ' ವಾಚಕರ ಮೇಲೆ ವಿಶೇಷ ಪ್ರಭಾವಶಾಲಿಯಾಗಿತ್ತು. ದಿವಾನರುಗಳಾದಸರ್. ಪಿ. ಎನ್. ಕೃಷ್ಣಮೂರ್ತಿ ಮತ್ತು ವಿ. ಪಿ. ಮಾಧವರಾಯರು ಪೂರ್ಣ ಆಶ್ರಯಕ್ಕೆಪಾತ್ರರಾಗಿದ್ದರು.

೧೮೮೭ರಲ್ಲಿ ವೆಸ್ಲಿಯನ್ ಮಿಷನ್ನಿಂದ "ವೃತ್ತಾಂತ" ಪತ್ರಿಕೆಯು ಮೈಸೂರಿನಲ್ಲಿ ಪ್ರಾರಂಭವಾಯಿತು. ಅದರ ಸಂಪಾದಕ ಹೆನ್ರಿಯಾಗಿದ್ದರು. ವಿವೇಕದಿಂದ ತನ್ನ ಕಾರ್ಯವನ್ನು ನಡೆಸಿಕೊಂಡು ಬಂದರು. ಇದು ೧೯೪೨ ರವೆಗೂ ನಡೆದು ನಿಂತು ಹೋಯಿತು.೧೮೮೮ ರಲ್ಲಿ ನರಸಿಂಗರಾಯರು 'ಸೂರ್ಯೋದಯ ಪ್ರಕಾಶಿಕಾ' ಎಂಬ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಅದೇ ಮುಂದೆ ದಿನಪತ್ರಿಕೆಯಾಯಿತು. ಕರ್ನಾಟಕದ ಅತಿಪುರಾತನ ಪತ್ರಿಕೆಗಳಲ್ಲಿ 'ಕರ್ನಾಟಕ ವೈಭವ 'ವೂ ಒಂದು. ಇದನ್ನು ೧೮೯೨ ರಲ್ಲಿ ಮ. ಗೋವಿಂದರಾಯರು ಬಿಜಾಪುರದಲ್ಲಿ ಪ್ರಾರಂಭಿಸಿದರು. ೧೯೨೨ ರಲ್ಲಿ ಇದರ ಮಾಲೀಕತ್ವವನ್ನೂ ಮೊಹರೆ ಹನುಮಂತರಾಯರು ವಹಿಸಿಕೊಂಡರು. ಇದು ಭಾರತ ಸ್ವಾತಂತ್ರ್ಯ ಸಮರಕ್ಕೆ ಮೀಸಲಾಗಿತ್ತು. ಸರ್ಕಾರದಿಂದ ವಿಶೇಷ ತೊಂದರೆಗೆ ಈಡಾಯಿತು. ಹುಬ್ಬಳ್ಳಿಯ ಮೂತಾಲಿಕೆ ದೇಸಾಯಿಯವರು 'ವೀರ ಕೇಸರಿ' ಬಿ. ಆರ್. ಚಿಕ್ಕೋಡಿಯವರ 'ವಿಭಾಕರ', ವಿ. ವಿ. ಪುರಾಣಿಕರ 'ಲೋಕಮತ' ೧೯೨೨ ರ ವೇಳೆಗೆ ಪ್ರಸಿದ್ಧವಾಗಿದ್ದವು.

೨೦ ನೇ ಶತಮಾನ

ಬದಲಾಯಿಸಿ

ಕನ್ನಡ ಪತ್ರಿಕೋದ್ಯಮದಲ್ಲಿ ಮುಂದೆ ಪ್ರಸಿದ್ದರಾದವರು ಡಿ. ವಿ. ಗುಂಡಪ್ಪನವರು. ಇವರು ಕನ್ನಡ ಸಂಸ್ಕೃತದಲ್ಲಿ ನಿಷ್ಣಾತರಾದ ಪತ್ರಿಕೋದ್ಯಮಿಗಳು. ಶ್ರೇಷ್ಠ ಸಾಹಿತಿಗಳು, ಪಕ್ಷಪಾತರ ಹಿತವೂ ದಾಕ್ಷಿಣ್ಯದೂರವು ಆದ ಅವರು ವಿದ್ಯುತ್ ಲೇಖನಗಳಿಂದ ಪ್ರಜೆಗಳಿಗೂ, ಪತ್ರಿಕಾ ಪ್ರಪಂಚಕ್ಕೂ ವಿಶೇಷ ಪ್ರಯೋಜನವಾಗಿದೆ. ೧೯೦೨ ರಲ್ಲಿ ಅವರಿಂದ ಪ್ರಾರಂಭವಾದ ಸಮಾಚಾರ ಸಂಗ್ರಹವೆಂಬ ದೈನಂದಿನ ಪತ್ರಿಕೆ ಪ್ರಾರಂಭವಾಯಿತು. ಇದರಿಂದಲೆ ಜನಪ್ರಿಯವಾಗಿ "ಕೆಲಸ ಮತ್ತು ಕರ್ನಾಟಕ" ಎಂಬ ದ್ವಿವಾರಪತ್ರಿಕೆಗಳಲ್ಲಿ 'ಕರ್ನಾಟಕ'ವು ಹೆಚ್ಚು ಜನಪ್ರಿಯವಾಗಿ ಕೆಲಸ ಮಾಡಿ ೧೪ ವರ್ಷಗಳಾದ ಮೇಲೆ ನಿಂತುಹೋಯಿತು. ಆಮೇಲೆ 'ಅರ್ಥಸಾದಕ ಪತ್ರಿಕೆ'ಯೆಂಬ ಮಾಸಪತ್ರಿಕೆಯನ್ನು ನಡೆಸಿದರು. ಇಂಗ್ಲೀಷಿನಲ್ಲಿ 'ರಿವ್ಯೂಸ್ ಆಫ್ ರಿವ್ಯೂಸ್' ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅದೂ ಕೂಡ ಬಹುಕಾಲ ನಡೆಯಲಿಲ್ಲ. ಆದರೂ ಅವರು ಇದುವರೆಗೂ ಪತ್ರಿಕೆಗಳಿಗೆ ವಿದ್ವತ್ಪೂರ್ಣವಾದ ಲೇಖನೆಗಳನ್ನು ಬರೆಯುತ್ತಿದ್ದರು. ಅವರೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆಯ ಪತ್ರಿಕೆಯ ಸಂಪಾದಕರೂ ಆಗಿದ್ದರು.

ಈ ಮಧ್ಯೆ ಪ್ರಪಂಚದ ಮೊದಲನೆಯ ಮಹಾಯುದ್ದ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಅನೇಕ ಚಳುವಳಿಗಳು ಹೊಸ ಪತ್ರಿಕೆಗಳ ಹುಟ್ಟಿಗೆ ಪ್ರೇರಕವಾದವು. ಅವುಗಳಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯ ಹಿನ್ನೆಲೆಯಲ್ಲಿ ಸಂಪೂರ್ಣ ರಾಷ್ಟ್ರೀಯ ಮನೋಭಾವದಿಂದ ತಿರುಮಲೆ ತಾತಾಚಾರ್ಯ ಶರ್ಮರವರಿಂದ ಪ್ರಾರಂಭವಾದ 'ವಿಶ್ವಕರ್ಣಾಟಕ' ದೈನಂದಿನ ಮತ್ತು ವಾರಪತ್ರಿಕೆಗಳು ಮುಖ್ಯವಾದವು. ಇವುಗಳಲ್ಲಿಯ ಭಾಷಾ ಪ್ರೌಢಿಮೆ, ಅಭಿಪ್ರಾಯ ಗಾಂಭೀರ್ಯ ಮತ್ತು ನಿರ್ದಾಕ್ಷಿಣ್ಯವಾದ ಸಂಪಾದಕೀಯಗಳು ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದವು. ಆದರೆ ಪ್ರತಿಭಟನೆಯನ್ನೂ ಸಹಿಸದ ಸರ್ಕಾರದಿಂದ ಅನೇಕ ಸಲ ಪೆಟ್ಟುಗಳನ್ನು ತಿಂದುವು. ೧೯೨೧ ರಲ್ಲಿ ಪ್ರಾರಂಭವಾದ ಈ ಪತ್ರಿಕೆಯು ೧೯೪೨ ರಲ್ಲಿ ಮತ್ತೊಬ್ಬ ಅಷ್ಟೇ ದಕ್ಷರಾದ ಸಿದ್ಧವನಹಳ್ಳಿ ಕೃಷ್ಣಶರ್ಮರ ಸಂಪಾದಕತ್ವಕ್ಕೆ ಬದಲಾಗಿ ೧೯೪೪ ರಲ್ಲಿ ಸರ್ಕಾರದಿಂದ ನಿಷೇಧಿಸಲ್ಪಟ್ಟು ೧೯೪೫ ರಲ್ಲಿ ಪುನಃ ಶಾಮಯ್ಯಂಗಾರ್ಯರಿಂದ ಪ್ರಾರಂಭವಾಗಿ ೧೯೪೭ರಲ್ಲಿ ವಿಶ್ರಾಂತಿಯನ್ನು ಪಡೆಯಿತು. ಸೀತಾರಾಮಶಾಸ್ತ್ರಿ ಗಳಿಂದ ಪ್ರಾರಂಭವಾದ ವೀರಕೇಸರಿಯು ಇಷ್ಟೇ ಉಜ್ವಲವಾಗಿ ಕೆಲಸ ಮಾಡಿ ಕೆಲವು ವರ್ಷಗಳಾದ ಮೇಲೆ ವಿರಾಮಿಸಿದವು.

 
ಮಹಾತ್ಮ ಗಾಂಧೀಜಿ

1982 ರಲ್ಲಿ ಗದಗ ಮೂಲಕ ದೇವರಾಜ ಕಾರಭಾರಿ ಸಂಪಾದಕತ್ವದಲ್ಲಿ ಪ್ರಸಾರವಾದ ವಜ್ರಾಯುಧ ಪತ್ರಿಕೆ ಭ್ರಷ್ಟರ ನಿದ್ದೆಗೆಡಿಸಿತು 1992 ರ ವರೆಗೂ ಪತ್ರಿಕೆ ವಿವಿಧ ದಬ್ಬಾಳಿಕೆಗಳೊಂದಿಗೆ ತೆವಳುತ್ತ ಸಾಗಿತ್ತು ಆದರೆ ಪತ್ರಿಕೊದ್ಯಮದಲ್ಲಿ ಒಂದು ತಲ್ಲಣವನ್ನು ಸ್ಥಾಪಿಸಿತ್ತು ನಂತರ 1998 ರಲ್ಲಿ ಅವರ ಮಗ ರಾಜವೆಂಕಟೇಶ ಕಾರಭಾರಿ ಯವರು ತಮ್ಮ ಹತ್ತನೆಯ ತರಗತಿ ಕಲಿಯುತ್ತಿರಯವಾಗಲೆ ವಜ್ರಾಯುಧ ಪತ್ರಿಕೆಯ ಸಂಪಾದಕರ ಜವಾಬ್ದಾರಿ ಹೊತ್ತುಕೊಂಡು ಪತ್ರಿಕೆ ಮುನ್ನಡೆಸಿದರು ಆ ಕಾಲದಲ್ಲಿ ಪ್ರಪಂಚದಲ್ಲಿಯೆ ಅತ್ಯಂತ ಕಿರಿಯ ಪತ್ರಿಕಾ ಸಂಪಾದಕರ ಕಿರ್ತಿ ಅವರದ್ದು ನಂತರ 2002 ರಲ್ಲಿ ತಮ್ಮದೆ ಮಹಾಪಾಪಿ ಪತ್ರಿಕೆಯನ್ನು ಸ್ಥಾಪಿಸಿದರು ಇನ್ನುವರೆಗೂ ಪತ್ರಿಕೆ ತನ್ನ ಆಸ್ತಿತ್ವ ಹೊಂದಿದೆ.

ವಿಶ್ವಕರ್ನಾಟಕಕ್ಕೆ ಸಮಕಾಲೀನವೂ ಒಂದು ರೀತಿಯಿಂದಲೇ ಅದಕ್ಕೆ ಸ್ಪರ್ಧಾಳುವೂ ಆದ 'ತಾಯಿನಾಡು' ಪತ್ರಿಕೆಯೂ ೧೯೨೬ ರಲ್ಲಿ ಪ್ರಾರಂಭವಾಗಿ ಅದರ ಸ್ಥಾಪಕ ಸಂಪಾದಕರಾದ ಪಿ. ಆರ್. ರಾಮಯ್ಯ ಮತ್ತು ಸಹಸಂಪಾದಕರಾದ ವಿ. ಬಿ. ಶ್ರೀನಿವಾಸನ್ ಅವರಿಂದ ಇಂದಿನವರೆಗೆ ರುಜುವಾದ ಮಾರ್ಗದಲ್ಲಿ ನಡೆದು ಬರುತ್ತಿದೆ. ಇದು ಯಾವ ಪಕ್ಷಕ್ಕೂ ಒಲಿಯದೇ ಸಮತೂಕದ ಪತ್ರಿಕೆಯಾಗಿರುವುದರಿಂದ ಇಂದಿನವರೆಗೂ ನಡೆದು ಬರಲು ಸಾಧ್ಯವಾಗಿದೆ. ರುಮಾಲೆ ಚೆನ್ನಬಸವಯ್ಯ, ದಯಾನಂದ ಸಾಗರ್ ಮೊದಲಾದ ದಕ್ಷ ಪತ್ರಿಕೋದ್ಯಮಿಗಳು ಇದರ ಸಂಪಾದಕತ್ವದಲ್ಲಿ ಭಾಗಿಗಳಾಗಿದ್ದಾರೆ. ೧೯೩೧ ರಲ್ಲಿ 'ಪ್ರಜಾಮತ' ಪ್ರಾರಂಭವಾಗಿ ಬಹು ಜನಪ್ರಿಯವಾಯಿತು. ಅದರ ಮಾಲೀಕರಾದ ಗುಪ್ತರು ಇದರ ಪ್ರಖ್ಯಾತಿಗೆ ಮುಖ್ಯ ಕಾರಣರು. ಇದು ಸ್ವಲ್ಪ ಕಾಲದಲ್ಲಿಯೇ ಹುಬ್ಬಳ್ಳಿಯಿಂದಲೇ ಪ್ರಚಾರವಾಗತೊಡಗಿತು. ಕೆಲವು ಕಾಲ 'ಪ್ರಜಾಮಿತ್ರ' ಎಂಬ ಹೊಸ ಹೆಸರಿನಿಂದಲೂ ಪ್ರಚಾರವಾಯಿತು. ಶ್ರೀನಿವಾಸಯ್ಯನವರ ಕಾಲದಲ್ಲಿ ಎಂ.ಎಸ್. ಗುರುಪಾದಸ್ವಾಮಿ ಇದರ ಸಂಪಾದಕರಾಗಿದ್ದರು. ಕೆಲವು ಕಾಲ ಟಿ.ಎಸ್. ಸಿದ್ಧಪ್ಪನವರು ಸಂಪಾದಕರಾಗಿದ್ದರು. ಈಗಲೂ ಕ್ರಮವಾಗಿ ಜನಪ್ರಿಯವಾಗದೆ ಎಚ್. ವಿ. ನಾಗರಾಜು ಈಗ ನೋಡಿಕೊಳ್ಳುತ್ತಿದ್ದಾರೆ. ಈಗ ಅದರ ತೆಲುಗು ಆವೃತ್ತಿ ಪ್ರಾರಂಭವಾಗಿ ಆಂಧ್ರದಲ್ಲಿ ವಿಶೇಷ ಜನಪ್ರಿಯವಾಗಿದೆ.

ಬಿ. ಎನ್. ಗುಪ್ತರು ೧೯೩೪ ರಲ್ಲಿ 'ಜನವಾಣಿಯನ್ನು ಪ್ರಾರಂಭಿಸಿದರು. ಇದು ದೇಶಭಕ್ತಿಯುತವಾದ ರಾಷ್ಟ್ರೀಯ ಪತ್ರಿಕೆಯಾಗಿತ್ತು. ಕೆಲವು ಕಾಲ ಕೆ. ಸಿ. ರೆಡ್ಡಿಯವರೂ ಇದರ ಸಂಪಾದಕರಾಗಿದ್ದರು. ಗುಪ್ತರು ತಮ್ಮ 'ಜನವಾಣಿಯನ್ನು 'ಪ್ರಜಾಮತ ' ವಾರಪತ್ರಿಕೆಯನ್ನು ಕೈಗಾರಿಕೋದ್ಯಮಿ ಶ್ರೀನಿವಾಯ್ಯನವರಿಗೆ ಮಾಡಿದರು. ಜಿ. ಎಸ್. ನರಸಿಂಹಯ್ಯ, ಸೋಮಯಾಜಿಗಳು ಸಂಪಾದಕರಾದರು. 'ಜನವಾಣಿ ' ಸ್ವತಂತ್ರ ಮನೋಭಾವವುಳ್ಳ ಸಂಜೆಯ ಪತ್ರಿಕೆಯಾಗಿತ್ತು. ವೀರಣ್ಣ ಗೌಡರ 'ಚಿತ್ರಗುಪ್ತ' ಇಂಗ್ಲೀಷಿನಲ್ಲಿ ಎಸ್. ಆರ್. ವಿ. ಎನ್ ರಾಘವನ್ ಅವರಿಂದ ಸಂಪಾದಿಸಲ್ಪಟ್ಟ 'ಡೆಮೊಕ್ರಾಟ್' ಅಶ್ವತ್ಥನಾರಾಯಣ ರಾಯರ 'ನವಚೇತನ' ಇವು ಸ್ವಾತಂತ್ರ ಹೋರಾಟಕ್ಕಾಗಿ ದುಡಿದ ರಾಷ್ಟ್ರೀಯ ಪತ್ರಿಕೆಗಳು.

ಸ್ವಾತಂತ್ರ್ಯೋತ್ತರ ಮತ್ತು ಪ್ರಸಕ್ತ

ಬದಲಾಯಿಸಿ

ಕಳೆದ ಶತಮಾನದ ಅಂತ್ಯದಲ್ಲಿಯೂ ಈ ಶತಮಾನದ ಪ್ರಾರಂಭದಲ್ಲಿಯೂ ಭಾಷಾ ಸಾಹಿತ್ಯಗಳ ಅಭಿವೃದ್ಧಿಗಾಗಿ ಅನೇಕ ಪತ್ರಿಕೆಗಳು ಜನ್ಮತಾಳಿದವು. 'ಪುಷ್ಪಮಾಲಿಕೆ' ಮತ್ತು ' ಚಂದ್ರೋದಯ ಪತ್ರಿಕೆಗಳನ್ನು ಮದನಸೆಟ್ಟಿ ಕಲ್ಯಾಣಪ್ಪನವರೂ ವಿಭೂತಿ ಹುಚ್ಚಯ್ಯನವರೂ ಪ್ರಾರಂಭಿಸಿದರು. ದೇಸಾಯಿ ಶಿವಪ್ಪನವರು 'ಕರ್ನಾಟಕ ಪತ್ರ' ವನ್ನು ಹೊರಡಿಸಿದರು. ವೆಂಕಟರಂಗೋಕಟ್ಟಿಯವರು 'ಲೋಕ ಶಿಕ್ಷಕ' ಮಾಸಪತ್ರಿಯನ್ನೂ, ಅನಾಡ ಚೆನ್ನ ಬಸಪ್ಪನವರು 'ಕರ್ನಾಟಕ ವೃತ್ತ' ಇವನ್ನೂ ಮಮಲಾಪುರ ಗುರುರಾಯರು 'ಲೋಕಬಂಧು'ವನ್ನು ಪ್ರಕಟಿಸಿದರು. ಬಳ್ಳಾರಿ ರಾಮರಾಯರ ಸಂಪಾದಕತ್ವದಲ್ಲಿ ' ರಾಜಹಂಸ'ವೂ ಹೊಸಕೇರಿ ಅಣ್ಣಾಚಾರ್ಯರ ನೇತೃತ್ವದಲ್ಲಿ 'ಧನಂಜಯ' ಪತ್ರಗಳು ಜನ್ಮತಾಳಿದವು. ಬಾಗಲಕೋಟೆಯ ಕೆರೂರು ವಾಸುದೇವಾಚಾರ್ಯರು ಹುಬ್ಬಳ್ಳಿಯಲ್ಲಿ 'ಕನ್ನಡ ಕೇಸರಿ' ವಾರಪತ್ರಿಕೆಗೂ 'ಸಚಿತ್ರಭಾರತ' ಮಾಸಪತ್ರಿಕೆಗೂ ಜನ್ಮ ದಾತರಾದರು. ದಿವಾಕರ ರಂಗರಾಯರೂ, ಮಧ್ವರಾಯರೂ, ಕರ್ಮವೀರಕ್ಕೆ ಜನಕರಾದರು. ಗದುಗಿಲ್ಲಿ ಉಮಚಗಿ ಶೀನಪ್ಪನವರು 'ರಸಿಕರಂಜಿನಿ' ವಾರಪತ್ರಿಕೆಗೆ ಅಸ್ತಿಭಾರ ಹಾಸಿದರು. ಬಿಜಾಪುರದಲ್ಲಿ 'ಕರ್ನಾಟಕ ವೈಭವ'ವು ಉದಯವಾಯಿತು. ಹುನುಗುಂದ ಕೃಷ್ಣರಾಯರೇ ಮೊದಲಾದ ಮೂವರಿಂದ ಸ್ಥಾಪಿತವಾದ ಭಾಷಾಸೇವಕ' ಮಾಸಪತ್ರಿಕೆಯಲ್ಲಿ ಸಂಸ್ಕೃತದ ಮಾಲತೀಮಾಧವ ಮತ್ತು ಶಾಕುಂತಲಗಳು ಕುರುಹಿನ ಬಕುಳಹಾರ ಮತ್ತು 'ಕೇಡುತಂದ ಉಂಗುರ ' ಎಂಬ ಹೆಸರುಗಳಿಂದ ಪ್ರಕಟವಾದವು. ಬೆಳಗಾವಿಯಲ್ಲಿ 'ಮಾತೃಭೂಮಿ' ಮತ್ತು 'ಕರ್ನಾಟಕ ಮಿತ್ರ' ಪತ್ರಿಗಳೂ ಕುಮಟದಲ್ಲಿ ಕರ್ನಾಟಕ ಧುರೀಣ ಮತ್ತು ಕನ್ನಡ ವೃತ್ತಗಳು ಅವತಾರವಾದುದೂ ಈ ಕಾಲದಲ್ಲಿಯೇ.

ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣಕಾರರು ೧೯೩೩ ರಲ್ಲಿ 'ಸಂಯುಕ್ತ ಕರ್ನಾಟಕ'ವನ್ನು ಪ್ರಾರಂಭಿಸಿದರು. ದತ್ತೋಪಂತ ಬೆಳವಿ, ನಾರಾಯಣರಾವ್ ಜೋಷಿ, ದಾತಾರ ಬೆಳವಂತರಾಯರು, ಗೋಖಲೆ ಕೇಶವರಾವ್ ಇವರು ಇದರ ವ್ಯವಸ್ಥಾಪಕರಲ್ಲಿ ಕೆಲವರು ಈ ಪತ್ರಿಕೆ ಬೇಗನೆ ದಿನಪತ್ರಿಕೆಯಾಯಿತು. ದಿವಾಕರರ ಬಿಡುಗಡೆಯಾದ ಮೇಲೆ 'ಲೋಕ ಶಿಕ್ಷಣ ಟ್ರಸ್ಟು' ಇದನ್ನು ವಹಿಸಿಕೊಂಡಿತು. ಅಲ್ಲಿಯ ಕಾಲವು ಶತಮಾನಗಳಕಾಲ ಹನುಮಂತರಾಯರೇ ಅದರ ಸಂಪಾದಕರಾಗಿದ್ದರು ಮತ್ತು ಇದು ಬೆಂಗಳೂರು ಆವೃತ್ತಿ ೧೯೫೯ ರಲ್ಲಿ ಪ್ರಾರಂಭವಾಯಿತು. ರೋಟರೀ ಮುದ್ರಣ ಯಂತ್ರವನ್ನು ತಂದು 'ಸಂಯುಕ್ತ ಕರ್ನಾಟಕ' ಸ್ಥಿರೀಕೃತವಾಯಿತು. ಟ್ರಸ್ಟು ಗ್ರಾಮಸ್ಥರಿಗಾಗಿ 'ಕಾಮಧೇನು' ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿತು. ೧೯೩೭ ರಲ್ಲಿ ಎನ್. ಎಸ್. ಹರ್ಡಿಕಕ್ ಅವರು 'ಹುಬ್ಬಳ್ಳಿ ಗೆಜೆಟ್' ಎಂಬ ವಾರಪತ್ರಿಕೆಯನ್ನು ಹುಬ್ಬಳ್ಳಿಯ ಪೌರಸಮಸ್ಯೆಗಳಿಗಾಗಿ ಪ್ರಾರಂಭಿಸಿದರು. ೧೯೪೭ ರಲ್ಲಿ ಇದು 'ಜೈಹಿಂದ್' ಎಂಬ ಹೊಸ ಹೆಸರನ್ನು ತಾಳಿತು.

ಮಂಗಳೂರು ಕರ್ನಾಟಕದಲ್ಲಿ ಆದಿಕಾಲದ 'ಕೃಷ್ಣಸೂಕ್ತಿ' 'ಮಧುರವಾಣಿ' ಮೊದಲಾದ ಪತ್ರಿಕೆಗಳೇ ಅಲ್ಲದೆ 'ಕಂಠೀರವ', 'ನವಯುಗ' 'ಸ್ವತಂತ್ರ ಭಾರತ', 'ಪ್ರಭಾತ', 'ರಾಷ್ಟ್ರಬಂಧು', 'ಸ್ವದೇಶಾಭಿಮಾನಿ'. 'ಸ್ವರಾಜ್ಯ', 'ರಾಷ್ಟ್ರಮತ' ಮುಂತಾದವು ಉಪಯುಕ್ತ ಕೆಲಸಗಳನ್ನು ಮಾಡಿವೆ. ಅಲ್ಲಿಯ ಸಂಪಾದಕ ವರ್ಗದಲ್ಲಿ ಪಂಜೆಮಂಗೇಶರಾವ್, ಬೆನಗಲ್ ರಾಮರಾವ್, ರಾಜಗೋಪಾಲಕೃಷ್ಣರಾವ್, ಉಲ್ಲಾಳ ವೆಂಕಟರಾವ್, ಕೆ. ಶಂಕರಭಟ್ಟ ಮೊದಲಾದವರು ಸುಪ್ರಸಿದ್ಧರು. ಹೈದರಾಬಾದ್ ಪ್ರಾಂತ್ಯದಲ್ಲಿ 'ಹೈದರಾಬಾದ್ ಸಮಾಚಾರ್' ಮತ್ತು 'ಸಾಧನ' ಎಂಬುವು ಗಣ್ಯವಾದವು. ಜಿ. ಕೆ. ಪಾಣೀಶಾಚಾರ್ಯರು ಅಲ್ಲಿಯ ಗಣ್ಯಪತ್ರಿಕೋದ್ಯಮಿಗಳು. ಕೊಡನಿನಲ್ಲಿ 'ಕೊಡಗುವೃತ್ತಾಂತ', 'ಕೊಡಗು' ಎಂಬ ಸ್ಥಳೀಯ ಪತ್ರಿಕೆಗಳು ಸಿ. ಎ. ಪೂಣಚ್ಚ ಮತ್ತು ವಿ. ಪಿ. ಬೆಳ್ಳಪ್ಪ ಎಂಬುವರ ಸಂಪಾದಕತ್ವದಲ್ಲಿ ನಡೆಯುತ್ತಿದೆ.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ವಾರ ಮತ್ತು ದಿನಪತ್ರಿಕೆಗಳು ಅಸಂಖ್ಯೇಯವಾಗಿ ಹುಟ್ಟಿವೆ. ಈಗ ಪತ್ರಿಕೋದ್ಯಮ ಒಂದು ಶಾಸ್ತ್ರೀಯ ವೃತ್ತಿಯಾಗಿದೆ. ಪತ್ರಿಕಾಕರ್ತರಿಗೆ ಶಾಸ್ತ್ರೀಯ ದೃಷ್ಟಿ ಧ್ಯೇಯಗಳು ಸಿದ್ಧಿಯಾಗಿದೆ. ಅವರು ದೇಶವಿದೇಶಗಳಲ್ಲಿ ಸೂಕ್ತ ಶಿಕ್ಷಣವನ್ನು ಪಡೆದು ಶಾಸ್ತ್ರೀಯ ರೀತಿಯಲ್ಲಿ ತಮ್ಮ ವೃತ್ತಿಯನ್ನು ನಡೆಸಲು ಯೋಗ್ಯತೆಯನ್ನು ಸಂಪಾದಿಸುತ್ತಿದ್ದಾರೆ. ಪ್ರತ್ಯೇಕ ಪತ್ರಿಕೆಗಳ ರೀತಿ ರಚನೆ ಮತ್ತು ಧ್ಯೇಯಗಳು ಒಂದು ರೀತಿಯಲ್ಲಿ ನಿಷ್ಕೃಷ್ಟವಾಗುತ್ತಿವೆ. ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮವು ವ್ಯಾಸಂಗ ವಿಷಯದಲ್ಲಿ ಒಂದಾಗಿ ಅಂಗೀಕೃತವಾಗಿರುವುದರಿಂದ ಅದಕ್ಕೆ ಹೆಚ್ಚಿನ ಗೌರವವುಂಟಾಗಿದೆ.

ಈಗಿನ ಪತ್ರಿಕೆಗಳಲ್ಲಿ 'ಪ್ರಜಾವಾಣಿ' ಪ್ರಮುಖ ಪತ್ರಿಕೆಯಾಗಿದೆ. ಆಂಗ್ಲ ಭಾಷಾ ಪತ್ರಿಕೆಯಾದ 'ಡೆಕ್ಕನ್ ಹೆರಾಲ್ಡ್' ಜೊತೆಯಲ್ಲಿ ಇದು ೧೯೪೮ ರಲ್ಲಿ ಪ್ರಾರಂಭವಾಯಿತು. ಜನಪ್ರಿಯವೂ ಆಯಿತು. ಇದರ ಪ್ರಥಮ ಸಂಪಾದಕರು ಬಿ. ಪುಟ್ಟಸ್ವಾಮಿಯವರು. ನಂತರ ಖಾದ್ರಿ ಶಾಮಣ್ಣನವರು, ಬಿ. ಎಸ್. ರಾಮಚಂದ್ರರಾಯರು, ಈಗ ಕೆ.ಎನ್.ಶಾಂತ ಕುಮಾರ್ ಸಂಪಾದಕರಾಗಿದ್ದಾರೆ. ಇದರಲ್ಲಿ ಅನೇಕ ರಾಜಕೀಯ ವಿಷಯಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಮಾಡಲಾಗುತ್ತಿದೆ. ಇದರ ಪ್ರಸಾರ ಗಮನಾರ್ಹವಾಗಿದೆ. 'ವಿಜಯವಾಣಿ', 'ವಿಜಯ ಕರ್ನಾಟಕ', 'ಉದಯವಾಣಿ', 'ಕನ್ನಡ ಪ್ರಭ' ಮು೦ತಾದವು ಪ್ರಸಕ್ತ ಕನ್ನಡ ದಿನಪತ್ರಿಕೆಗಳು.

'ಪ್ರಪಂಚ' ಎಂಬ ಪತ್ರಿಕೆಯನ್ನು ೧೯೫೯ ರಲ್ಲಿ ಸಾಲೀಲ ಪುಟ್ಟಪ್ಪನವರು ಪ್ರಾರಂಭಿಸಿದರು. ಇವರು ಪತ್ರಿಕೋದ್ಯಮದಲ್ಲಿ ಎಂ. ಎಸ್. ಸಿ. ಪದವೀಧರರು. ೧೯೫೯ ರಲ್ಲಿ 'ವಿಶ್ವವಾಣಿ'ಯನ್ನು ಪ್ರಾರಂಭಿಸಿದರು. ಸುದ್ದಿಪತ್ರಿಕೆಯಾದ ಇದು ನಾಲ್ಕು ಪುಟಗಳಿಂದ ಕೂಡಿದ್ದರೂ ಉತ್ತಮ ಲೇಖನಗಳಿಂದ ವಿಶಿಷ್ಟವಾಗಿದೆ. ಸಾಹಿತ್ಯ ದೃಷ್ಟಿಯಿಂದಲೇ ಗಣ್ಯವಾದುದು ಪಾಕ್ಷಿಕ, ಮಾಸಿಕ, ತ್ರೈಮಾಸಿಕ ಪತ್ರಿಕೆಗಳು (ಕೆಲವು ದಿನ ಪತ್ರಿಕೆಗಳ ಸಾಪ್ತಾಹಿಕ ಪ್ರಕರಣಗಳಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯ,ಕತೆ, ಕಾದಂಬರಿಗಳು ಅಡಕವಾಗುತ್ತಿವೆ). ಇವುಗಳಲ್ಲಿ 'ಮನೋರಮಾ', ಚಲನಚಿತ್ರ ಪ್ರಪಂಚವನ್ನು ಕುರಿತದ್ದು. 'ಕಥಾವಳಿ', 'ಕಥಾಕುಂಜ', 'ಕತೆಗಾರ' ಇವು ಕತೆಗಳಿಗಾಗಿ ಮೀಸಲಾಯಿತು. 'ತಮಾಷ್', ಸಣ್ಣ ಕಥೆಗಳ ಪತ್ರಿಕೆ. 'ನಗುವನಂದ', 'ಕೊರವಂಜಿ', 'ವಿಕಟವಿನೋದಿನಿ', 'ವಿನೋದ' ಇವು ವಿನೋದ ಪ್ರಧಾನವಾದ ಪತ್ರಿಕೆಗಳು. 'ಸರಸ್ವತಿ', 'ಸೋದರಿ', 'ಶಕ್ತಿ' ಮಹಿಳೆಯರ ಪತ್ರಿಕೆಗಳು. 'ಕಂದ', 'ಬಾಲಪ್ರಪಂಚ', 'ಮಕ್ಕಳ ಪುಸ್ತಕ', 'ಚಂದಮಾಮ' ಮಕ್ಕಳ ಪತ್ರಿಕೆಗಳು. 'ಜಯಕರ್ನಾಟಕ', 'ಜಯಂತಿ', 'ಜೀವನ', 'ಪ್ರಬುದ್ಧಕರ್ನಾಟಕ', 'ಕರ್ನಾಟಕ (ಕನ್ನಡ)', 'ವರಿಷತ್ಪತ್ರಿಕೆ', 'ಕನ್ನಡ ನುಡಿ' ಗಳು ವಿವಿಧ ಸಾಹಿತ್ಯ ಪ್ರಕಾರಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವು ಸರ್ವತೋಮುಖವಾಗಿ ಬೆಳೆಯಲು ಸಹಾಯ ಮಾಡಿವೆ. ಇವುಗಳಲ್ಲಿ 'ಪ್ರಬುದ್ಧ ಕರ್ನಾಟಕ'ಕ್ಕೆ ಅಗ್ರಸ್ಥಾನ. ಇದರ ಜೊತೆಯಲ್ಲಿಯೇ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುತ್ತಿರುವ 'ಮಾನವಿಕ ಕರ್ನಾಟಕ' ಮತ್ತು 'ವಿಜ್ಞಾನ ಕರ್ನಾಟಕ' ಗಳು ಸ್ತುತ್ಯರ್ಹವಾದ ಕೆಲಸವನ್ನು ಮಾಡುತ್ತಿವೆ.

'ಪ್ರಬುದ್ಧ ಕರ್ನಾಟಕ'ದ ವೈಜ್ಞಾನಿಕ ಶಾಖೆಯ ಚಿನ್ನದ ಸಂಪುಟಗಳು (ಎರಡು) ವಿಜ್ಞಾನ ಪ್ರಪಂಚದಲ್ಲಿ ಬಹುಗಣ್ಯವಾಗಿ ಪತ್ರಿಕೋದ್ಯಮದ ಮಟ್ಟವನ್ನು ಬಹು ಎತ್ತರಕ್ಕೆ ಕೊಂಡೊಯ್ದಿದೆ. ಪತ್ರಿಕೋದ್ಯಮದ ಸರ್ವತೋಮುಖವಾದ ಬೆಳವಣಿಗೆಯಿಂದ ಕನ್ನಡ ಭಾಷಾ ಸಂಪತ್ತು ಬೆಳೆದಿದೆ. ಪ್ರಾಂತಭೇದವು ಮಾಯವಾಗುತ್ತಿದೆ. ಶೈಲಿಯು ಶಕ್ತಿ ಪೂರ್ಣವಾಗುತ್ತಿದೆ. ಮಕ್ಕಳ ಸಾಹಿತ್ಯ, ಶಿಶು ಸಾಹಿತ್ಯ, ಮಹಿಳಾ ಸಾಹಿತ್ಯ ಬಹುಮುಖಿಯಾಗಿ ಬೆಳೆಯುತ್ತಿದೆ. ಸಾಹಿತ್ಯ ಯಥೇಚ್ಛವಾಗಿ ಬೆಳೆಯುತ್ತಿದೆ. ಹೊಸ ಲೇಖಕರಿಗೆ ಅವಕಾಶವನ್ನು ಕಲ್ಪಿಸುತ್ತಿದೆ. ಅನೇಕ ಪತ್ರಿಕೆಗಳು ನಡೆಸುತ್ತಿರುವ ವಿವಿಧ ಸ್ಪರ್ಧೆಗಳು ಜನರಿಗೆ ಸ್ಪೂರ್ತಿದಾಯಕವಾಗಿದೆ. ಜನಪದ ಸಾಹಿತ್ಯದ ಪುನರುದ್ಧಾರವಾಗುತ್ತಿದೆ. ಉತ್ಪಾದನೆ, ವಿತರಣೆ, ಸಂಪಾದನೆ, ಜ್ಞಾನ ಪ್ರಸಾರ, ನಿರುದ್ಯೋಗ ಪರಿಹಾರ, ಲೇಖಕರ ಸಂಭಾವನೆ, ಭಿನ್ನರುಚಿಗಳ ಸಮನ್ವಯ ಮೊದಲಾದ ದೃಷ್ಟಿಯಿಂದ ಪತ್ರಿಕೋದ್ಯಮವು ರಾಷ್ಟ್ರಾಭಿವೃದ್ಧಿಯ ಕಾರ್ಯದಲ್ಲಿ ಬಹು ಯಶಸ್ವಿಯಾಗಿದೆ. ಮೇಲೆಯೇ ತಿಳಿಸಿರುವಂತೆ ಪತ್ರಿಕೋದ್ಯಮ ಅದರ ವಿವಿಧ ಶಾಖೆಗಳಾದ ಸೂಕ್ತ ಸಂಗ್ರಹ, ವಿತರಣೆ, ಸಂಪಾದನೆ, ವರದಿ, ಮುದ್ರಣ, ಅಗ್ರಲೇಖನ, ವಿಮರ್ಶೆ ಮೊದಲಾದ ಎಲ್ಲ ಕ್ಷೇತ್ರದಲ್ಲಿಯೂ ವಿಶೇಷ ಅಭಿವೃದ್ಧಿಗೂ, ಪ್ರಾವೀಣ್ಯತೆಗೂ ಅವಕಾಶವನ್ನು ಕಲ್ಪಿಸಿದೆ. ಜ್ಞಾನ ಪ್ರಸಾರ ಮತ್ತು ವಾಚನಾಭಿರುಚಿಯ ಪ್ರೋತ್ಸಾಹ ಕಾರ್ಯದಲ್ಲಿ ಅದರ ಸ್ಥಾನ ಬಹು ಹಿರಿದಾದದ್ದು. ಕನ್ನಡ ಪತ್ರಿಕೋದ್ಯಮ ಇಂದು ಇತರ ಯಾವ ಭಾಷಾ ಪತ್ರಿಕೋದ್ಯಮದೊಡನೆಯೂ ಸಮಮಟ್ಟವನ್ನು ಸ್ಪರ್ಧಿಸಬಲ್ಲುದು. ಕೆಲವು ಪತ್ರಿಕೆಗಳ ಪ್ರಸಾರ ಆರು ಲಕ್ಷದವರೆಗೆ ಏರಿರುವುದು ಗಮನಾರ್ಹವಾದರೂ ಕಲ್ಕತ್ತಾದ ಕೆಲವು ವಂಗ ಪತ್ರಿಕೆಗಳು ಮತ್ತು ಮದ್ರಾಸಿನ ಕೆಲವು ತಮಿಳು ಪತ್ರಿಕೆಗಳು ಮೂವತ್ತು ಲಕ್ಷವನ್ನು ಮೀರಿರುವುದು ಕನ್ನಡ ಪತ್ರಿಕೆಗಳೂ ಅಭಿವೃದ್ಧಿಯಾಗುವುದಕ್ಕೆ ವಿಶೇಷ ಅವಕಾಶವಿದೆ ಎಂಬ ಅಂಶವನ್ನು ಮನಗಾಣಿಸುತ್ತಿವೆ. ಪತ್ರಿಕೆಗಳು, ಜನತೆಯ ವಿಶ್ವವಿದ್ಯಾನಿಲಯವೆಂಬುದು ಪ್ರತಿದಿನವೂ ಅನುಭವಕ್ಕೆ ಬರುತ್ತಿರುವ ನಿತ್ಯ ಸತ್ಯವಾಗಿದೆ.

ಇವುಗಳನ್ನು ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.
  2. Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.
  3. A history of Kannada newspapers is provided by M Ramesh. "Eventful journey of a vibrant, active Kannada press". Online webpage of The Deccan Herald, dated 1 July 2005. 2005, The Printers (Mysore) Private Ltd.
  4. Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.
  5. Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.