ನಗುವನಂದ -ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಒಂದು ಹಾಸ್ಯ ಪತ್ರಿಕೆ.

ಆರಂಭ , ಏರಿಳಿತ, ಅಂತ್ಯ ಬದಲಾಯಿಸಿ

ಒಂದು ಹಾಸ್ಯರಸಪ್ರಧಾನ ನಿಯತಕಾಲಿಕೆಯನ್ನು ತರಬೇಕೆಂದು ಸುಬೋಧ ರಾಮರಾಯರು ಈ ಹೆಸರಿನ ಮಾಸಪತ್ರಿಕೆಯನ್ನು ಜಿ.ಎಸ್.ಕೃಷ್ಣರಾಯರ ಸಂಪಾದಕತ್ವದಲ್ಲಿ ಬೆಂಗಳೂರಿನ ಸುಬೋಧ ಮುದ್ರಣಾಲಯದಿಂದ ಹೊರಡಿಸಿದರು. ಇದರ ಪ್ರಥಮ ಸಂಚಿಕೆ ಬಂದದ್ದು ಜನವರಿ 1933ರಲ್ಲಿ. ಜಿ.ಎಸ್. ಕೃಷ್ಣರಾಯರು ಕೆಲವು ವರ್ಷಗಳ ತರುವಾಯ ಪ್ರತ್ಯೇಕಗೊಂಡು ಇದನ್ನು ಸ್ವತಂತ್ರವಾಗಿ 1949ರವರೆಗೆ ಪ್ರಕಟಿಸಿದರು. ಆ ವೇಳೆಗೆ ಪತ್ರಿಕೆ ಕಷ್ಟಕ್ಕೊಳಗಾಗಲು ಸುಬೋಧ ರಾಮರಾಯರು ಇದನ್ನು ರಂಗನಾಥರಾಯರ ಸಂಪಾದಕತ್ವಕ್ಕೆ ವಹಿಸಿದರು. ರಂಗನಾಥರಾಯರು 1949ರಿಂದ 1950ರವರೆಗೆ ನಡೆಸಿಕೊಂಡು ಬಂದರು. ಆರ್ಥಿಕ ಮುಗ್ಗಟ್ಟಿನಿಂದ ರಂಗನಾಥರಾಯರು ಪತ್ರಿಕೆಯನ್ನು ಸುಬೋಧ ರಾಮರಾಯರಿಗೆ ಹಿಂದಿರುಗಿಸಿದರು. 1950ರಿಂದ 1963ರವರೆಗೆ ಇದು ಸುಬೋಧ ಪ್ರಹ್ಲಾದರಾಯರ ನೇತೃತ್ವದಲ್ಲಿ ಸುಬೋಧ ಪ್ರಕಟಣಾಲಯದಲ್ಲಿ ಪ್ರಕಟವಾಗುತ್ತಿತ್ತು.

1963ರಲ್ಲಿ ರಾಮರಾಯರು ನಗುವನಂದವನ್ನು ಜಿ.ಎಸ್. ಕೃಷ್ಣರಾಯರ ಜೀವನೋಪಾಯಕ್ಕೆಂದು ವಹಿಸಿಕೊಟ್ಟರು. ಕೃಷ್ಣರಾಯರು ಕೆಲವು ತಿಂಗಳುಗಳ ಕಾಲ ಪತ್ರಿಕೆಯನ್ನು ನಡೆಸಿ ತೀರಿಕೊಂಡರು. ಪತ್ರಿಕೆಯನ್ನು ರಂಗನಾಥರಾಯರಿಗೆ ಪುನಃ ವರ್ಗಾಯಿಸಲಾಯಿತು. ಇದು 1.5 ವರ್ಷ ಅವರಿಂದ ಪ್ರಕಟವಾಯಿತು. ಕೊನೆಗೆ ರಂಗನಾಥರಾಯರು ಪತ್ರಿಕೆಯನ್ನು ರಂಜನಾ ಪಬ್ಲಿಕೇಷನ್ ಸಂಸ್ಥೆಗೆ ಮಾರಿದರು. ಇದು ದೀಪಾವಳಿಯ ಕಾಲದಲ್ಲಿ ಮಾತ್ರ ವಾರ್ಷಿಕವಾಗಿ ಪ್ರಕಟವಾಗುತ್ತಿದ್ದು 4 ವರ್ಷಗಳ ತರುವಾಯ ನಿಂತುಹೋಯಿತು.


ನಗುವ ನಂದ ಮಾಸಪತ್ರಿಕೆಯಾಗಿದ್ದಾಗ ಡಿಮೈ 1/4 ಆಕಾರದಲ್ಲಿ ಬರುತ್ತಿತ್ತು. 1951ರಲ್ಲಿ ಇದು ವಾರಪತ್ರಿಕೆಯಾಗಿದ್ದಾಗ ಡಿಮೈ 1/8 ಆಕಾರದಲ್ಲಿತ್ತು. ನಗೆಮಲ್ಲಿಗೆ, ಸಮಾಧಿಯ ಅಗ್ನಿಕುಂಡ, ಉಪ ಕಥಾವಳಿ ವಿಭಾಗಗಳು ಜನಪ್ರಿಯವಾಗಿದ್ದುವು. ಜಿ.ಎಸ್. ಕೃಷ್ಣರಾಯರು ಮಂಗಳೂರು ಬಾಸಲ್ ಮಿಷನ್ ಪ್ರೆಸ್‍ನಿಂದ ಪತ್ರಿಕೆಯನ್ನು ಹೊರಡಿಸುತ್ತಿದ್ದಾಗ (1938) ಇದರ ಪ್ರಸಾರ 3,000. 1963ರಲ್ಲಿ ಇದು 6,800ಕ್ಕೆ ಏರಿತ್ತು. `ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಂ' ಎಂಬುದು ಪತ್ರಿಕೆಯ ಧ್ಯೇಯವಾಕ್ಯವಾಗಿತ್ತು.


ಲೇಖಕರು, ವ್ಯಂಗ್ಯಚಿತ್ರಕಾರರು ಬದಲಾಯಿಸಿ

ನಗುವನಂದಕ್ಕೆ 20 ವರ್ಷಗಳಿಗೂ ಹೆಚ್ಚು ಕಾಲ ಅಂಕಣಲೇಖಕರಾಗಿದ್ದವರು ವಿ.ಜಿ. ಕೃಷ್ಣಮೂರ್ತಿ; ಚಿತ್ರಕಾರರಾಗಿದ್ದವರು ರಾಘವೇಂದ್ರ, ಪತ್ರಿಕೆಯ ಲೇಖಕರ ಬಳಗಕ್ಕೆ ಸೇರಿದ್ದವರು: ಗೊರೂರು ರಾಮಸ್ವಾಮಿ ಅಯ್ಯಂಗಾರ್, ನಾ.ಕಸ್ತೂರಿ, ಜಿ.ಪುರುಷೋತ್ತಮರಾವ್, ಎಂ.ವಿ. ಪ್ರಭು, ಸುಪುತ್ರ (ಸುಬೋಧ ಪ್ರಹ್ಲಾದರಾವ್), ಡಿ.ಕೆ. ಭಾರದ್ವಾಜ್, ವೈ.ಕೆ. ತಿಮ್ಮರಸಯ್ಯ, ನಾಡಿಗೇರ ಕೃಷ್ಣರಾವ್, ಹೊಯ್ಸಳ, ಬಿ.ಎಚ್. ಶ್ರೀಧರ, ಬಿಸ್ರಾ (ಬಿ.ಎಸ್.ರಾಮಾಚಾರ್), ಸೇವಿ ನಮಿರಾಜ ಮಲ್ಲ, ನವಗಿರಿನಂದ ಮೊದಲಾದವರು. ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಗೋಪಿ ಹಾಗೂ ಆನಂದವಿಗಡನ್ ಪತ್ರಿಕೆಯ ಸಿಂಹ ಇವರು ವ್ಯಂಗ್ಯಚಿತ್ರಗಳನ್ನು ನೀಡಿದ್ದಾರೆ.


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ನಗುವನಂದ&oldid=717803" ಇಂದ ಪಡೆಯಲ್ಪಟ್ಟಿದೆ