ಕತೆಗಾರ
ಕತೆಗಾರ : ಕಥಾಸಾಹಿತ್ಯ ವಿತರಣೆಗೆ ಸೊಂಟ ಕಟ್ಟಿ ನಿಂತ ಕನ್ನಡ ಮಾಸಪತ್ರಿಕೆ.
ಹಿನ್ನೆಲೆ
ಬದಲಾಯಿಸಿ1920ರ ತರುವಾಯದ ಕಾಲ ಹೊಸಗನ್ನಡ ಸಾಹಿತ್ಯ ಸೃಷ್ಟಿಯ ಉತ್ಸಾಹದ ಕಾಲ. ಆಗ ಪ್ರಾಸ ಛಂದೋಮುಕ್ತವಾದ ಹೊಸ ಕವಿತೆ ಹಳೆಯ ಕಟ್ಟುಪಾಡುಗಳನ್ನು ಕಳಚಿ ಮೈಗೊಡವಿಕೊಂಡು ಮೇಲೆದ್ದಂತೆ ಸಣ್ಣಕಥೆಗಳ ಒಂದು ಹೊಸ ಯುಗವೂ ಆರಂಭವಾಯಿ ತೆನ್ನಬೇಕು. ಆಗ ಬಂದ ಆ ಬೆಳೆ ತುಂಬ ಹುಲುಸು. ಸಣ್ಣಕಥೆಯ ವ್ಯಾಪ್ತಿ ವೈವಿಧ್ಯಗಳನ್ನು ಮನಗಂಡ ತರುಣ ಬರಹಗಾರರು ಅದಕ್ಕೆ ಕೈಹಾಕಿದರು. ಸಂಕೀರ್ಣ ವಿಷಯಗಳನ್ನು ಪ್ರಕಟಿಸುತ್ತಿದ್ದ ವಾರಪತ್ರಿಕೆ ಮಾಸಪತ್ರಿಕೆಗಳ ಜೊತೆಗೆ ಸಣ್ಣ ಕಥೆಗಳಿಗಾಗಿಯೇ ಮೀಸಲಾದ ಪತ್ರಿಕೆಗಳು ತಲೆಯೆತ್ತಿದುವು.
ಇತಿಹಾಸ
ಬದಲಾಯಿಸಿಈ ಪತ್ರಿಕೆಯ ಸ್ಥಾಪಕ-ಸಂಪಾದಕರು ಎಂ.ಎನ್. ನಾರಾಯಣರಾವ್. ಪತ್ರಿಕೆ ಹುಟ್ಟಿದ್ದು ಬೆಂಗಳೂರಿನಲ್ಲಿ; 1933 ಅಕ್ಟೋಬರ್ ತಿಂಗಳಲ್ಲಿ. ಕಿರೀಟ ಚತುರ್ಥಾಕಾರದ 38 ಪುಟಗಳ ಬಿಡಿ ಪತ್ರಿಕೆಗೆ ಆಗ ಎರಡೇ ಆಣೆ. ಸಣ್ಣ ಕಥೆಯ ಬರೆವಣಿಗೆಯಲ್ಲಿ ಈಗ ಪ್ರಸಿದ್ಧವಾಗಿರುವ ಹಲವು ಬರೆಹಗಾರರು ಕಥಾವಸ್ತು ನಿರೂಪಣೆ, ತಂತ್ರ ಇತ್ಯಾದಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲವದು. ಜನರೂ ಆ ಕಥೆಗಳನ್ನು ಅಷ್ಟೇ ಕುತೂಹಲಾಸಕ್ತಿಗಳಿಂದ ಓದುತ್ತಿದ್ದರು. ಹೀಗಾಗಿ ಈ ಸಾಹಿತ್ಯ ಪ್ರಕಾರ ಮನೋರಂಜನೆ ಮನೋನ್ನತಿಗಳ ಸಾಧನವಾಗಿ ಬೇರೂರಿ ನಿಂತಿತ್ತು. ಕತೆಗಾರದ ಸಂಪಾದಕರು 1934ನೆಯ ಅಕ್ಟೋಬರ್ ಸಂಚಿಕೆಯಲ್ಲಿ ಬರೆದ ಸಂಪಾದಕೀಯ ಟಿಪ್ಪಣಿಯಲ್ಲಿ ಕಥೆಗಳನ್ನು ಆರಿಸುವುದರಲ್ಲಿ ಇನ್ನೂ ಹೆಚ್ಚು ವೈವಿಧ್ಯಕ್ಕೆ ಗಮನ ಕೊಡಲಾಗುವುದು. ಮುಖ್ಯವಾಗಿ ಇಂದು ವಾಚಕರಿಗೆ ನಾವೀನ್ಯ ಬೇಕು-ಕಥಾವಸ್ತುವಿನಲ್ಲಿ ನಾವೀನ್ಯ, ಕಥನ ರೀತಿಯಲ್ಲಿ ನಾವೀನ್ಯ-ಎಂದು ಹೇಳಿದ್ದಾರೆ. ಕಥಸಾಹಿತ್ಯದಲ್ಲಿ ಹೊಸತನ್ನು ಹುಡುಕುವ ದೃಷ್ಟಿ ಆಗಲೇ ಹೇಗೆ ಬೆಳೆದಿತ್ತೆನ್ನುವುದಕ್ಕೆ ಇದು ಸಾಕ್ಷಿ.
ಕತೆಗಾರ ಪತ್ರಿಕೆಯನ್ನು 1944ನೆಯ ಅಕ್ಟೋಬರಿನಲ್ಲಿ ಜಿ.ಎ. ನರಸಿಂಹಮೂರ್ತಿ ಯವರು ವಹಿಸಿಕೊಂಡು ನಡೆಸತೊಡಗಿದರು. ಆಗ ಬಿಡಿಸಂಚಿಕೆಯ ಬೆಲೆ ನಾಲ್ಕಾಣೆ. ಪತ್ರಿಕೆಯ ಅಂದ ಅಚ್ಚುಕಟ್ಟು ತಿರುಳುಗಳಲ್ಲಿ ಹಲವು ಮಾರ್ಪಾಡುಗಳನ್ನು ಅವರು ಮಾಡಿದರು. ಅದರಲ್ಲಿ ಮುಖ್ಯವಾದದ್ದು ಕನ್ನಡ ಕಥಾವಾಹಿನಿ ಎಂಬ ಶೀರ್ಷಿಕೆ. ಆಗಿನ ಹೆಸರಾದಂತ ಕನ್ನಡ ಮಾಸಪತ್ರಿಕೆಗಳಲ್ಲಿ ಬರುತ್ತಿದ್ದ ಸಣ್ಣಕಥೆಗಳನ್ನು ವಿಮರ್ಶೆ ಮಾಡಿ ಜಳ್ಳು ಯಾವುದು, ಕಾಳು ಯಾವುದು, ಯಾವ ಕಥೆ ಯಾವ ಕಾರಣದಿಂದ ಮೇಲು, ಯಾವ ಕಾರಣದಿಂದ ಅಲ್ಲ ಎನ್ನುವ ಕೂಲಂಕಷ ವಿಮರ್ಶೆ ಈ ವಿಭಾಗದಲ್ಲಿ ಬರುತ್ತಿತ್ತು; ಇದು ಹೊಸದಾಗಿ ಕಥೆ ಬರೆಯುವವರಿಗೆ ಒಂದು ಮಾರ್ಗದರ್ಶಕವಾಗಿತ್ತು; ಕಥೆಗಳ ನೆಲೆಬೆಲೆಗಳನ್ನು ತಿಳಿದುಕೊಳ್ಳುವುದರಲ್ಲಿ ಓದುಗರಿಗೆ ಸಹಾಯಕವಾಗಿತ್ತು.
ಹೀಗೆ ಸಣ್ಣಕಥೆಗಳ ಬರಹಗಾರರ ಬಳಗವನ್ನು ಕಟ್ಟಿ, ಓದುಗರಲ್ಲಿ ಒಳ್ಳೆಯ ಮಟ್ಟದ ರುಚಿ ಬೆಳೆಸಿ, ಕನ್ನಡ ಕಥಸಾಹಿತ್ಯದ ಬೆಳೆವಣಿಗೆಗೆ ದೊಡ್ಡ ಪಾಲಿನ ಸೇವೆ ಸಲ್ಲಿಸಿದ ಕತೆಗಾರ ಪತ್ರಿಕೆ 1968ನೆಯ ಅಕ್ಟೋಬರ್ ವರೆಗೂ ನಡೆಯಿತು.
ಇದರ ಧ್ಯೇಯವಾಕ್ಯ: "ಪ್ರಪಂಚದ ಸೊಗಸು ತೋರ್ಸೋದೇ ನಮ್ಮ ಕಸಬು"
ಉಲ್ಲೇಖಗಳು
ಬದಲಾಯಿಸಿ