ಅಮೆಜಾನ್

ದಕ್ಷಿಣ ಅಮೆರಿಕಾದ ಪ್ರಮುಖ ನದಿ
(ಅಮೆಜಾನ್ ನದಿ ಇಂದ ಪುನರ್ನಿರ್ದೇಶಿತ)

ಅಮೆಜಾನ್ ನದಿ ( ಪೋರ್ಚುಗೀಸ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ರಿಯೊ ಅಮೆಝೊನಾಸ್) ದಕ್ಷಿಣ ಅಮೆರಿಕದ ಪ್ರಮುಖ ನದಿ. ಇದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಜಲರಾಶಿಯನ್ನು ಹೊಂದಿದೆ. ಅಲ್ಲದೆ ಒಂದು ವಾದದ ಪ್ರಕಾರ ಅಮೆಜಾನ್ ನದಿಯು ಪ್ರಪಂಚದ ಅತಿ ಉದ್ದವಾದ ನದಿ ಕೂಡ. ಆಫ್ರಿಕಾದ ನೈಲ್ ನದಿ ಮತ್ತು ಅಮೆಜಾನ್ ನದಿಗಳ ನಡುವೆ ಈ ಸ್ಥಾನಕ್ಕಾಗಿ ನಡೆದಿರುವ ಪೈಪೋಟಿ ಶಾಶ್ವತವಾಗಿ ಇತ್ಯರ್ಥವಾಗಿಲ್ಲ. ಅಮೆಜಾನ್ ನದಿಯು ಈ ಭೂಮಿಯ ಮೇಲಿರುವ ಒಟ್ಟೂ ಸಿಹಿನೀರಿನಲ್ಲಿ ೨೦% ರಷ್ಟನ್ನು ಹೊಂದಿದೆ. ಈ ಒಂದು ಮಹಾನದಿಯಲ್ಲಿ ಪ್ರವಹಿಸುವ ನೀರಿನ ಪ್ರಮಾಣವು ನಂತರದ ೮ ಮಹಾನದಿಗಳ ಒಟ್ಟು ನೀರಿನ ಪ್ರಮಾಣಕ್ಕಿಂತ ಅಧಿಕವೆಂದಾದಾಗ ಇದರ ಅಗಾಧತೆಯ ಅರಿವಾಗುವುದು. ಅಮೆಜಾನ್ ನದಿಯು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಲಾನಯನ ಪ್ರದೇಶವನ್ನು ಹೊಂದಿದೆ. ಕೆಲವೊಮ್ಮೆ ಈ ನದಿಗೆ "ಸಿಹಿ ಸಮುದ್ರ" ಎಂಬ ಹೆಸರನ್ನು ಸಹ ಬಳಸುವರು.

ಅಮೆಜಾನ್
( ಅಪುರಿಮ್ಯಾಕ್, ಈನ್, ಟ್ಯಾಂಬೊ, ಉಕಯಾಲಿ, ಅಮೆಜೋನಾಸ್, ಸೊಲಿಮೋಸ್ )
ನದಿ
[[Image:| 256px|none
]]
Kintras ಪೆರು, ಕೊಲೊಂಬಿಯ, ಬ್ರೆಜಿಲ್, ಬೊಲಿವಿಯ, ವೆನೆಜುವೇಲ, ಎಕ್ವಡಾರ್
Tributaries
 - left ಮ್ಯಾರನಾನ್, ಜಪೂರಾ, ರಿಯೊ ನೆಗ್ರೊ
 - right ಉಕಾಯಾಲಿ, ಪುರುಸ್, ಮೆಡೀರಾ, ಟಪಜೋಸ್, ಕ್ಸಿಂಗು
Ceety ಇಕ್ವಿಟೋಸ್ (ಪೆರು); ಮನಾಸ್ (ಬ್ರೆಜಿಲ್)
Soorce ಅಪಾಚೇಟ ಕ್ಲಿಫ್ಫ್
 - location ನೆವಾಡೋ ಮಿಸ್ಮಿ, ಅರೆಕ್ವಿಪಾ, ಪೆರು
 - elevation ೫,೧೭೦ m (೧೬,೯೬೨ ft)
Mooth
 - location ಅಟ್ಲಾಂಟಿಕ್ ಮಹಾಸಾಗರ, ಬ್ರೆಜಿಲ್
 - elevation ೦ m (೦ ft)
Lenth ೬,೯೯೨ km (೪,೩೦೦ mi) (ಸುಮಾರು)
Basin ೭೦,೫೦,೦೦೦ km² (೨೭,೨೦,೦೦೦ sq mi) (ಸುಮಾರು)
Discharge for ಸಾಗರಕ್ಕೆ
 - average ೨,೧೯,೦೦೦ /s (೭೭,೩೪,೦೦೦ cu ft/s)
[[Image:| 256px|none
]]

ಜಲಾನಯನ ಪ್ರದೇಶ

ಬದಲಾಯಿಸಿ

ಅಮೆಜಾನ್ ನದಿಯ ಜಲಾನಯನ ಪ್ರದೇಶವು ಸುಮಾರು ೬,೯೧೫,೦೦೦ ಚ.ಕಿ.ಮೀ. ವಿಸ್ತಾರವಾಗಿದೆ. ಇದು ದಕ್ಷಿಣ ಅಮೆರಿಕ ಖಂಡದ ೪೦%ರಷ್ಟು ಭೂಭಾಗ. ಅಮೆಜಾನ್ ನದಿಯ ಅತಿ ದೂರದ ಉಗಮಸ್ಥಾನ ಶಾಂತಸಾಗರದ ಸಮೀಪವೇ ಇರುವ ಆಂಡೆಸ್ ಪರ್ವತಶ್ರೇಣಿ. ಇಲ್ಲಿಂದ ಮುಂದೆ ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರದವರೆಗೆ ಪ್ರವಹಿಸುತ್ತದೆ. ಅಮೆಜಾನ್ ನದಿಯು ಒಣಬೇಸಗೆ ಕಾಲದಲ್ಲಿ ಸುಮಾರು ೧,೧೦,೦೦ ಚ.ಕಿ.ಮೀ.ಯಷ್ಟು ಭೂಪ್ರದೇಶವನ್ನು ಆವರಿಸಿಕೊಂಡರೆ ಮಳೆಗಾಲದಲ್ಲಿ ಪ್ರವಾಹವುಂಟಾದಾಗ ಇದರ ಮೂರರಷ್ಟು ಅಂದರೆ ಸುಮಾರು ೩,೫೦,೦೦ ಚ.ಕಿ.ಮೀ. ಪ್ರದೇಶವನ್ನು ಆವರಿಸುವುದು. ಬೇಸಗೆಯಲ್ಲಿ ನದಿಯ ಅತ್ಯಂತ ಹೆಚ್ಚಿನ ಅಗಲ ೧೧ ಕಿ.ಮೀ. ಗಳಾದರೆ ಮಳೆಗಾಲದಲ್ಲಿ ಈ ಮಹಾನದಿಯು ೪೫ ಕಿ.ಮೀ.ನಷ್ಟು ಅಗಲವಾಗಿ ಹರಿಯುವುದು. ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರಕ್ಕೆ ಸಾಗಿಸುವ ಸಿಹಿನೀರಿನ ಪ್ರಮಾಣ ಊಹಾತೀತ. ಮಳೆಗಾಲದಲ್ಲಿ ಈ ನದಿಯು ಪ್ರತಿ ಸೆಕೆಂಡಿಗೆ ೩,೦೦,೦೦೦ ಘನ ಮೀಟರುಗಳಷ್ಟು ಸಿಹಿನೀರನ್ನು ಸಾಗರಕ್ಕೆ ಸೇರಿಸುವುದು. ಸಾಗರದ ಮುಖದಲ್ಲಿ ಈ ನದಿಯ ನೀರಿನ ರಭಸ ಹಾಗೂ ಒತ್ತಡ ಎಷ್ಟಿದೆಯೆಂದರೆ ಸಾಗರತೀರದಿಂದ ಹಲವಾರು ಕಿ.ಮೀ. ಗಳ ದೂರದವರೆಗೂ ಸಾಗರದ ನೀರು ಸಿಹಿಯಾಗಿಯೇ ಇರುತ್ತದೆ. ಮಳೆಗಾಲದಲ್ಲಿ ಅಮೆಜಾನ್ ನದಿಯು ಸಾಗರದ ಉಪ್ಪುನೀರನ್ನೇ ಸುಮಾರು ೧೦೦ ಕಿ.ಮೀ.ಗಳಷ್ಟು ಹಿಮ್ಮೆಟ್ಟಿಸುತ್ತದೆ.

 
ಪೆರುವಿನ ನೆವಾಡೋ ಮಿಸ್ಮಿಯ ಅರೆಕಿಪಾದ ಅಪಾಚೆಟಾ ಪರ್ವತದಿಂದ ಅಮೆಜಾನ್ ನದಿಯ ಉಗಮ

ನದಿಯ ಮೂಲಗಳು

ಬದಲಾಯಿಸಿ

ಅಮೆಜಾನ್ ನದಿಯು ಇತಿಹಾಸದಲ್ಲಿ ತನ್ನ ಪಾತ್ರವನ್ನು ಹಲವು ಬಾರಿ ಬದಲಿಸಿಕೊಂಡಿದೆ. ಸೆನೋಝೋಯಿಕ್ ಯುಗದಲ್ಲಿ ಆಂಡೆಸ್ ಪರ್ವತಶ್ರೇಣಿಯು ರೂಪುಗೊಳ್ಳುವ ಮುನ್ನ ಈ ನದಿಯು ಪಶ್ಚಿಮಾಭಿಮುಖವಾಗಿ ಹರಿಯುತ್ತಿತ್ತು. ಇಂದು ಮೇಲಿನ ಅಮೆಜಾನ್ ನದಿಯು ಪೆರುವಿನಲ್ಲಿನ ಹಲವು ದೊಡ್ಡ ನದಿಗಳ ಸರಣಿಯನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾದವು : ಮೊರೋನಾ,ಪಾಸ್ತಾಝಾ,ನುಕುರೇ,ಉರಿಟುಯಾಕು,ಚಾಂಬ್ರಿಯಾ,ಟೈಗ್ರ್,ನಾನೇ,ನಾಪೋ,ಹುವಾಲ್ಲಾಗಾ ಮತ್ತು ಉಕಯಾಲಿ. ಮರನಾನ್ ನದಿಯು ಆಂಡೆಸ್ ಶ್ರೇಣಿಯ ನೆವಾಡೋ ಡಿ ಯಾರುಪಾ ಪ್ರದೇಶದ ಹಿಮನದಿಯೊಂದರಲ್ಲಿ ಉಗಮಿಸಿ ಮುಂದೆ ೧೬೦೦ ಕಿ.ಮೀ. ಗಳವರೆಗೆ ಪೆರುವಿನ ಉನ್ನತಪ್ರದೇಶದ ಕಾಡು,ಕೊಳ್ಳಗಳಲ್ಲಿ ಹರಿದು ನೌಟಾ ಎಂಬಲ್ಲಿ ಉಕಯಾಲಿ ನದಿಯನ್ನು ಕೂಡಿಕೊಂಡು ಅಮೆಜಾನ್ ಮಹಾನದಿಯನ್ನು ರೂಪಿಸುತ್ತದೆ. ಅಮೆಜಾನ್ ನದಿಯ ಅತಿ ದೂರದ ಮೂಲವನ್ನು ೧೯೯೬ರಲ್ಲಿ ಪೆರುವಿನ ಆಂಡೆಸ್ ಪರ್ವತಶ್ರೇಣಿಯಲ್ಲಿನ ನೆವಾಡೋ ಮಿಸ್ಮಿ ಎಂಬ ಪರ್ವತಶಿಖರದಿಂದ ಇಳಿಯುವ ಹಿಮನೀರಿನ ಧಾರೆಯೆಂದು ಗುರುತಿಸಲಾಯಿತು. ಇದು ಪೆರುವಿನ ರಾಜಧಾನಿ ಲಿಮಾದಿಂದ ಸುಮಾರು ೭೦೦ ಕಿ.ಮೀ. ಆಗ್ನೇಯದಲ್ಲಿದೆ. ಈ ಹಿಮನೀರಿನ ಧಾರೆಯು ಮುಂದೆ ಉಕಯಾಲಿ ನದಿಯ ಒಂದು ಭಾಗವಾಗುವುದು. ಹೀಗೆ ಮರನಾನ್ ನದಿ ಮತ್ತು ಉಕಯಾಲಿ ನದಿಗಳ ಸಂಗಮದಿಂದ ರೂಪುಗೊಂಡು ರಿಯೊ ಅಮೆಝೋನಾಸ್ ಎಂದು ಕರೆಯಲ್ಪಡುವ ಅಮೆಜಾನ್ ನದಿಯು ಹಲವು ಬಾರಿ ಹೆಸರನ್ನು ಸಹ ಬದಲಿಸಿಕೊಳ್ಳುವುದು. ಬ್ರೆಜಿಲ್,ಪೆರು ಮತ್ತು ಕೊಲಂಬಿಯ ದೇಶಗಳ ಸಂಧಿಸ್ಥಾನದಲ್ಲಿ ಸಾಲಿಮೋಸ್ ಎಂದು ಕರೆಯಲ್ಪಡೂವ ಈ ನದಿ ಮುಂದೆ ಮನೌಸ್ ಬಳಿ ರಿಯೊ ನಿಗ್ರೋ ನದಿಯನ್ನು ಸೇರಿಸಿಕೊಂಡು ಮತ್ತೆ ಅಮೆಜಾನ್ ನದಿ ಎನಿಸುವುದು. ರಿಯೊ ಅಪುರಿಮ್ಯಾಕ್ ಮತ್ತು ಉಕಯಾಲಿ ನದಿಗಳ ಸಂಗಮದ ನಂತರ ಈ ಮಹಾನದಿಯು ಆಂಡೆಸ್ ಪರ್ವತಪ್ರಾಂತ್ಯದಿಂದ ಹೊರಬಿದ್ದು ಬಯಲನ್ನು ಸೇರುವುದು. ಮುಂದೆ ಮರನಾನ್ ನದಿಯ ಸಂಗಮಸ್ಥಾನದವರೆಗೆ ಈ ಬಯಲು ಪ್ರದೇಶವು ಹರಡಿದ್ದು ಸದಾಕಾಲ ನದಿಯ ಪ್ರವಾಹದಲ್ಲಿ ಮುಳುಗಿರುತ್ತದೆ. ಆ ನಂತರ ಈ ಜಲರಾಶಿಯು ಅಗಾಧ ಅಮೆಜಾನ್ ಮಳೆಕಾಡನ್ನು ಪ್ರವೇಶಿಸುತ್ತದೆ.

 
ಬ್ರೆಜಿಲ್ ನ ಅಮೆಜಾನ್ ಮಳೆಕಾಡು

ಅಮೆಜಾನಿಯನ್ ಮಳೆಕಾಡು

ಬದಲಾಯಿಸಿ
 
ಅಮೆಜಾನ್ ಮಳೆಕಾಡಿನ ವಿಶಾಲ ಹರವನ್ನು ಹಳದಿ ಬಣ್ಣದಲ್ಲಿ ಗುರುತಿಸಲಾಗಿದೆ.

ಅಮೆಜಾನಿಯನ್ ಮಳೆಕಾಡು ಆಂಡೆಸ್ ಶ್ರೇಣಿಯ ಪೂರ್ವದ ಅಂಚಿನಿಂದ ಆರಂಭವಾಗುತ್ತದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಮಳೆಕಾಡು. ಇದು ವಾತಾವರಣದ ದೃಷ್ಟಿಯಿಂದ ಅತಿ ಮಹತ್ವ ಹೊಂದಿದೆ. ಈ ಮಳೆಕಾಡಿನ ಜೀವರಾಶಿಯು ಅಗಾಧಪ್ರಮಾಣದಲ್ಲಿ ಇಂಗಾಲಾಮ್ಲ ( ಕಾರ್ಬನ್ ಡೈ ಆಕ್ಸೈಡ್ )ವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಅಮೆಜಾನ್ ಮಳೆಕಾಡನ್ನು ಉಳಿಸಿಕೊಳ್ಳುವ ವಿಷಯ ಅತಿ ಮಹತ್ವ ಪಡೆದಿರುವುದು. ಅಮೆಜಾನ್ ಮಳೆಕಾಡು ಅಮೆಜಾನ್ ಕೊಳ್ಳದ ಅತ್ಯಂತ ತೇವಯುತ ವಾತವರಣದಿಂದ ಆಧರಿಸಲ್ಪಟ್ಟಿದೆ. ಅಲ್ಲದೆ ಈ ಮಳೆಕಾಡಿನಲ್ಲಿ ಅಮೆಜಾನ್ ಮತ್ತದರ ನೂರಾರು ಉಪನದಿಗಳು ಅತಿ ಮಂದಗತಿಯಲ್ಲಿ ಪ್ರವಹಿಸುತ್ತವೆ. ಇದಕ್ಕೆ ಕಾರಣ ಇಲ್ಲಿಂದ ಸಾಗರದವರೆಗೆ ಭೂಪ್ರದೇಶ ಹೆಚ್ಚೂಕಡಿಮೆ ಮಟ್ಟಸವಾಗಿದೆ. ಉದಾಹರಣೆಯೆಂದರೆ - ಸಾಗರತೀರದಿಂದ ೧೬೦೦ ಕಿ.ಮೀ. ದೂರದಲ್ಲಿ ಅಮೆಜಾನ್ ನದಿಯ ದಡದಲ್ಲಿರುವ ಮನೌಸ್ ಪಟ್ಟಣವು ಸಮುದ್ರಮಟ್ಟದಿಂದ ಕೇವಲ ೧೪೪ ಅಡಿಗಳಷ್ಟು ಎತ್ತರದಲ್ಲಿದೆ. ಅಮೆಜಾನ್ ಮಳೆಕಾಡಿನ ಜೀವವೈವಿಧ್ಯ ವಿಸ್ಮಯಕಾರಿ. ಇಲ್ಲಿ ಕನಿಷ್ಠ ೨೫ ಲಕ್ಷ ಬಗೆಯ ಕೀಟಗಳು, ಹಲವಿ ದಶಸಹಸ್ರ ಸಂಖ್ಯೆಯ ಗಿಡಮರಗಳು , ೨೦೦೦ ಕ್ಕೂ ಹೆಚ್ಚಿನ ಬಗೆಯ ಪ್ರಾಣಿ ಪಕ್ಷಿಗಳು ನೆಲೆಯಾಗಿವೆ. ಜಗತ್ತಿನಲ್ಲಿರುವ ಒಟ್ಟು ಹಕ್ಕಿಗಳಲ್ಲಿ ಕಾಲುಭಾಗದಷ್ಟು ಬಗೆಯವು ಇಲ್ಲಿಯೇ ಇವೆ. ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಸಸ್ಯವೈವಿಧ್ಯ ಅಮೆಜಾನ್ ಮಳೆಕಾಡಿನಲ್ಲಿ ಕಾಣಬರುವುದು. ಒಂದು ಅಂದಾಜಿನ ಪ್ರಕಾರ ಒಂದು ಚದರ ಕಿ.ಮೀ.ನಷ್ಟು ಅಮೆಜಾನ್ ಮಳೆಕಾಡಿನಲ್ಲಿ ೭೫೦೦೦ ಬಗೆಯ ಮರಗಳು ಮತ್ತು ೧,೫೦,೦೦೦ ಬಗೆಯ ಇತರ ಸಸ್ಯಗಳು ಕಂಡುಬರುವುವು. ಅಲ್ಲದೆ ಪ್ರತಿ ಚದರ ಕಿ.ಮೀ.ನಷ್ಟು ಅಮೆಜಾನ್ ಮಳೆಕಾಡಿನಲ್ಲಿರುವ ಜೀವಂತ ಸಸ್ಯರಾಶಿಯು ೯೦೦೦೦ ಟನ್ ತೂಗುವುದು.

ಅಮೆಜಾನ್ ಪ್ರವಾಹ

ಬದಲಾಯಿಸಿ

ಮಳೆಗಾಲದಲ್ಲಿ ಅಮೆಜಾನ್ ನದಿಯ ಸರಾಸರಿ ಆಳ ಸುಮಾರು ೧೩೧ ಅಡಿ ಹಾಗೂ ಸರಾಸರಿ ಅಗಲ ೪೦ ಕಿ.ಮೀ.ಗಳಷ್ಟಿರುತ್ತದೆ. ನವೆಂಬರ್ ತಿಂಗಳಿನಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚತೊಡಗಿ ಜೂನ್ ತಿಂಗಳಿನವರೆಗೂ ಮುಂದುವರೆಯುತ್ತದೆ. ನಂತರ ಅಕ್ಟೋಬರ್ ತಿಂಗಳವರೆಗೆ ನೀರು ಇಳಿಮುಖವಾಗಿರುವುದು. ಒಂದರಿಂದ ಆರು ಮೈಲಿಗಳಷ್ಟು ಅಗಲಕ್ಕಿರುವ ಮುಖ್ಯ ಅಮೆಜಾನ್ ನದಿದಿಯಲ್ಲಿ ಆಟ್ಲಾಂಟಿಕ್ ಸಾಗರದಿಂದ ೧೫೦೦ ಕಿ.ಮೀ. ಒಳಗಿರುವ ಮನೌಸ್ ವರೆಗೆ ಒಳನಾಡಿನ ನೌಕಾಯಾನ ಸಾಧ್ಯ. ಸಣ್ಣ ಗಾತ್ರದ ಸಾಗರನೌಕೆಗಳು ೩೬೦೦ ಕಿ.ಮೀ. ಗಳಷ್ಟು ಒಳನಾಡಿನಲ್ಲಿರುವ ಪೆರುವಿನ ಇಕ್ವಿಟೋಸ್ ಪಟ್ಟಣವನ್ನು ತಲುಪಬಲ್ಲವು. ಸಣ್ಣ ನದಿದೋಣಿಗಳು ಇಲ್ಲಿಂದ ಮುಂದೆ ಇನ್ನೂ ೭೮೫ ಕಿ.ಮೀ. ದೂರದಲ್ಲಿರುವ ಅಚುವಲ್ ಪಾಯಿಂಟ್ ವರೆಗೆ ಸಾಗಬಲ್ಲವು.

ಸಾಗರದೆಡೆಗೆ

ಬದಲಾಯಿಸಿ

ನೂರಕ್ಕೂ ಹೆಚ್ಚು ಗಣನೀಯ ಗಾತ್ರದ ಉಪನದಿಗಳಿರುವ ಅಮೆಜಾನ್ ನದಿಯ ಅಗಲವು ಹಲವೆಡೆ ೬ ರಿಂದ ೧೦ ಕಿ.ಮೀ. ಗಳಷ್ಟಿರುತ್ತದೆ. ಹಲವು ಸ್ಥಳಗಳಲ್ಲಿ ನದಿಯು ಎರಡು ಕವಲುಗಳಾಗಿ ಒಡೆದು ಬಹುದೂರದವರೆಗೆ ಸಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಹಲವಾರು ನೈಸರ್ಗಿಕ ಕಾಲುವೆಗಳು ಈ ಎರಡೂ ಕವಲುಗಳನ್ನು ಜೋಡಿಸುತ್ತವೆ. ಈ ಸನ್ನಿವೇಶವು ದೊಡ್ಡಸಂಖ್ಯೆಯ ದ್ವೀಪಗಳನ್ನು ನದಿಯಲ್ಲಿ ಸೃಷ್ಟಿಸಿದೆ. ಅಮೆಜಾನ್ ನದಿಯ ಅಳಿವೆ ೩೩೦ ಕಿ.ಮೀ. ಅಗಲವಾಗಿದೆ. ಇಂಗ್ಲೆಂಡಿನ ಥೇಮ್ಸ್ ನದಿಯ ಒಟ್ಟೂ ಉದ್ದಕ್ಕಿಂತ ಅಮೆಜಾನ್ ನದಿಯ ಅಳಿವೆಯ ಅಗಲವೇ ಹೆಚ್ಚು. ಅಳಿವೆಯ ಬಾಯಿಯಲ್ಲಿ ಸುಮಾರು ೧೬೦ ಕಿ.ಮೀ. ವರೆಗಿನ ಪ್ರದೇಶವು ಹಲವು ಅರೆಮುಳುಗಿದ ದ್ವೀಪಗಳು ಮತ್ತು ಆಳವಲ್ಲದ ಮರಳದಂಡೆಗಳನ್ನು ಒಳಗೊಂಡಿದೆ. ಇಲ್ಲಿ ಬೋರ್ ಅಥವಾ ಪೊರೊರೋಕಾ ಎಂದು ಕರೆಯಲ್ಪಡುವ ವಿಶಿಷ್ಟ ಪ್ರವಾಹ ಸನ್ನಿವೇಶವೇರ್ಪಡುವುದು. ಈ ಪ್ರವಾಹದ ಅಲೆಗಳು ಭಾರೀ ಗರ್ಜನೆಯೊಂದಿಗೆ ಆರಂಭವಾಗಿ ಸುಮಾರು ೫ ರಿಂದ ೧೩ ಅಡಿಗಳಷ್ಟು ಎತ್ತರದ ನೀರಿನ ಗೋಡೆಯ ರೂಪದಲ್ಲಿ ಅತಿ ವೇಗವಾಗಿ ಸಾಗರದತ್ತ ಧಾವಿಸುತ್ತವೆ. ಈ ಅತಿ ರಭಸದ ನೀರಿನ ಪ್ರವಾಹವು ನದಿಯುದ್ದಕ್ಕೂ ಸಾಗಿಬಂದ ಎಲ್ಲಾ ಮೆಕ್ಕಲುಮಣ್ಣನ್ನು ಸಾಗರದೊಳಗೆ ಬಹುದೂರದವರೆಗೆ ತಳ್ಳಿಬಿಡುತ್ತದೆ. ಈ ಕಾರಣದಿಂದಾಗಿಯೇ ಅಮೆಜಾನ್ ನದಿಗೆ ಮುಖಜ ಭೂಮಿಯಿಲ್ಲ.

ವನ್ಯಜೀವಿಗಳು

ಬದಲಾಯಿಸಿ
 
ಪಿರಾನಾ ಮೀನು

ಜಗತ್ತಿನಲ್ಲಿರುವ ಒಟ್ಟೂ ವನ್ಯಜೀವಿ ಪ್ರಭೇದಗಳ ಮೂರನೆಯ ಒಂದು ಭಾಗ ಅಮೆಜಾನ್ ಮಳೆಕಾಡಿನಲ್ಲಿವೆ. ಈ ಮಳೆಕಾಡಿನ ಒಟ್ಟು ವಿಸ್ತೀರ್ಣ ೨೧ ಲಕ್ಷ ಚ.ಕಿ.ಮೀ. ಅಮೆಜಾನ್ ನದಿಯಲ್ಲಿ ಈವರೆಗೆ ೩೦೦೦ ತಳಿಯ ಮೀನುಗಳನ್ನು ಗುರುತಿಸಲಾಗಿದೆ. ಬೋಟೊ ಎಂದು ಕರೆಯಲ್ಪಡುವ ಅಮೆಜಾನ್ ನದಿ ಡಾಲ್ಫಿನ್ ಜಗತ್ತಿನ ಅತಿ ದೊಡ್ಡ ನದಿ ಡಾಲ್ಫಿನ್. ಅತಿ ಕ್ರೂರ ಸ್ವಭಾವದ ಮೀನಾದ ಪಿರಾನಾಗೆ ಅಮೆಜಾನ್ ನದಿ ನೆಲೆ. ಪಿರಾನಾ ಮೀನುಗಳು ದೊಡ್ಡ ಹಿಂಡುಗಳಲ್ಲಿ ಜೀವಿಸಿ ಮನುಷ್ಯರೂ ಸೇರಿದಂತೆ ಪ್ರಾಣಿಗಳ ಮೇಲೆ ದಾಳಿಯಿಡುತ್ತವೆ. ೧೯೮೧ರಲ್ಲಿ ಓಬಿಡಾಸ್ ಬಳಿ ಸಂಭವಿಸಿದ ದೋಣಿ ಮುಳುಗಡೆಯಲ್ಲಿ ೩೩೧ ಜನರು ಈ ಪಿರಾನಾಗಳಿಗೆ ಬಲಿಯಾದರೆಂದು ನಂಬಲಾಗಿದೆ. ಆದರೆ ಕೆಲವೇ ಜಾತಿಯ ಪಿರಾನಾಗಳು ಮನುಷ್ಯರ ಮೇಲೆ ದಾಳಿಯಿಡುತ್ತವೆ. ಅಮೆಜಾನ್ ನದಿಯಲ್ಲಿ ವಾಸಿಸುವ ಅರಪಿಮಾ ಅಥವಾ ಪಿರರುಕು ಎಂಬ ಹೆಸರಿನ ಮೀನು ಜಗತ್ತಿನ ದೊಡ್ಡ ಸಿಹಿನೀರಿನ ಮೀನುಗಳಲ್ಲಿ ಒಂದು. ಇದು ಸುಮಾರು ೧೦ ಅಡಿಗಳ ವರೆಗೆ ಬೆಳೆದು ೨೦೦ ಕಿಲೋ ವರೆಗೆ ತೂಗಬಲ್ಲುದು. ಪ್ರಪಂಚದ ಅತಿ ದೊಡ್ಡ ಹಾವುಗಳ ಪೈಕಿ ಒಂದಾದ ಅನಕೊಂಡಾ ಅಮೆಜಾನ್ ನದಿಯಲ್ಲಿ ಆಳ ಕಡಿಮೆಯಿರುವಲ್ಲಿ ನೆಲೆಸುತ್ತದೆ. ಹೆಚ್ಚಿನ ಕಾಲ ನೀರಿನ ಒಳಗೆಯೇ ಉಳಿದು ಹೊರಳೆಗಳನ್ನು ಮಾತ್ರ ನೀರಿನಿಂದ ಹೊರಗೆ ಇಟ್ಟುಕೊಂಡಿರುವ ಈ ಹಾವು ಕೆಲವು ಬಾರಿ ಮೀನುಗಾರರ ಮೇಲೆ ದಾಳಿ ಮಾಡುವುದೆಂದು ವದಂತಿಗಳಿವೆ.

ಕಳವಳಕಾರಿ ಸಂಗತಿಗಳು

ಬದಲಾಯಿಸಿ

ಇಂದು ಅಮೆಜಾನ್ ಮಳೆಕಾಡು ಅಪಾಯದ ಅಂಚಿನಲ್ಲಿದೆ. ಅವಿರತವಾಗಿ ಸಾಗಿರುವ ಮರಮಟ್ಟುಗಳ ಉದ್ಯಮ, ಬ್ರೆಜಿಲ್ ನ ಅಮೆಜಾನ್ ಪ್ರದೇಶದಲ್ಲಿ ಹೆದ್ದಾರಿಗಳ ನಿರ್ಮಾಣ , ಕೃಷಿಭೂಮಿಗಾಗಿ ಕಾಡಿನ ನಾಶ ಇವುಗಳಿಂದಾಗಿ ಮಳೆಕಾಡಿನ ವ್ಯಾಪ್ತಿ ಕುಗ್ಗುತ್ತಿದೆ. ಇದರ ಪರಿಣಾಮ ಜಗತ್ತಿನ ವಾತಾವರಣವದ ಮೇಲೆ ಪ್ರತಿಕೂಲವಾಗಲಿದೆ. ಅಮೆಜಾನ್ ಮಳೆಕಾಡನ್ನು ಹೀಗೆಯೆ ಉಳಿಸಿಕೊಳ್ಳುವುದು ಮನುಕುಲದ ಒಳಿತಿನ ದೃಷ್ಟಿಯಿಂದ ಬಲು ಆವಶ್ಯಕ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಅಮೆಜಾನ್&oldid=1196968" ಇಂದ ಪಡೆಯಲ್ಪಟ್ಟಿದೆ