ಹಂ.ಪ.ನಾಗರಾಜಯ್ಯ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹಂ.ಪ.ನಾಗರಾಜಯ್ಯನವರು ಕನ್ನಡ ಸಾರಸ್ವತ ಲೋಕದಲ್ಲಿ 'ಹಂಪನಾ' ಎಂದೇ ಚಿರಪರಿಚಿತರು. ಇವರು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಂಪಸಂದ್ರ ಎಂಬ ಗ್ರಾಮದಲ್ಲಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ಇವರ ತಂದೆ ಶಾನುಬೋಗ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮನವರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು.
ಹಂಪ ನಾಗರಾಜಯ್ಯ – Hampa Nagarajayya | |
---|---|
ಜನನ | ಅಕ್ಟೋಬರ್ ೭, ೧೯೩೬ ಹಂಪಸಂದ್ರ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ |
ಕಾವ್ಯನಾಮ | Hampana – ಹಂಪನಾ |
ವೃತ್ತಿ | ಸಾಹಿತಿ, ಕನ್ನಡ ಪ್ರಾಧ್ಯಾಪಕರು |
ರಾಷ್ಟ್ರೀಯತೆ | ಭಾರತ |
ವಿಷಯ | ಕನ್ನಡ |
ಪ್ರಮುಖ ಕೆಲಸ(ಗಳು) | ವಡ್ಡಾರಾಧನೆ ಸಮಗ್ರ ಅಧ್ಯಯನ |
ಪ್ರಮುಖ ಪ್ರಶಸ್ತಿ(ಗಳು) | ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಕ್ಕಳ ಸಾಹಿತ್ಯಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಾಸನ ಸಾಹಿತ್ಯ ಪ್ರಶಸ್ತಿ, ಚಿ.ನ.ಮಂಗಳಾ ಪ್ರಶಸ್ತಿ |
ಸಂಬಂಧಿಗಳು | ಕಮಲಾ ಹಂಪನಾ |
ಪ್ರಭಾವಿತರು |
ವಿದ್ಯಾಭ್ಯಾಸ
ಬದಲಾಯಿಸಿಹಂ ಪ ನಾಗರಾಜಯ್ಯನವರು ಮಂಡ್ಯ, ಗೌರಿಬಿದನೂರು, ಮಧುಗಿರಿ, ತುಮಕೂರುಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿದರು. ಆಮೇಲೆ ಮೈಸೂರು ಮಹಾರಾಜ ಕಾಲೇಜುನಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿ ಕುವೆಂಪು, ತೀ. ನಂ. ಶ್ರೀಕಂಠಯ್ಯ, ಡಿ. ಎಲ್. ನರಸಿಂಹಾಚಾರ್, ಎಸ್. ವಿ. ಪರಮೇಶ್ವರ ಭಟ್ಟ, ಕೆ. ವೆಂಕಟರಾಮಪ್ಪ, ದೇ. ಜವರೇಗೌಡ ಮುಂತಾದ ಸಾಹಿತ್ಯಿಕ ದಿಗ್ಗಜಗಳ ನೆರಳಿನಲ್ಲಿ ಸ್ಫೂರ್ತಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿಯನ್ನೂ, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದರು.
ವೃತ್ತಿ
ಬದಲಾಯಿಸಿ೧೯೫೯ರಿಂದ ೧೯೭೦ರವರೆಗೆ ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮಂಡ್ಯ, ದಾವಣಗೆರೆ, ಬೆಂಗಳೂರಿನ ಸರ್ಕಾರಿ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ವಿಷಯವನ್ನು ಬೋಧಿಸಿದರು. ಆಮೇಲೆ ಇವರು ೧೯೭೦ರಿಂದ ೧೯೯೬ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡು ಸ್ನಾತಕೋತ್ತರರಿಗೆ ಬೋಧಿಸಿದರು. ಬೆಂಗಳೂರು ವಿವಿಯಲ್ಲಿರುವಾಗಲೇ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಪ್ರವೃತ್ತಿ
ಬದಲಾಯಿಸಿ- ನಾಡಿನ ಪರಮೋಚ್ಛ ಸಾಹಿತ್ಯ ದೇಗುಲವಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ೧೯೭೮ರಿಂದ ೧೯೮೬ರ ದೀರ್ಘ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ೧೯೬೬ರಿಂದ ೧೯೭೪ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕನ್ನಡದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು ಮುನ್ನೂರು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪರಿಷತ್ತಿನ ಚಿನ್ನದಹಬ್ಬದ ನೆನಪಿಗಾಗಿ ಭವ್ಯ ಕಟ್ಟಡವನ್ನು ಕಟ್ಟಿಸಿದರು.[೧]
- ಹಾಗೆಯೇ ಯುನೆಸ್ಕೋದವರು ೧೯೭೯ನೇ ವರ್ಷವನ್ನು ಅಂತರಾಷ್ಟ್ರೀಯ ಮಕ್ಕಳ ವರ್ಷವೆಂದು ಘೋಷಿಸಿದಾಗ ಶಿಶುಸಾಹಿತ್ಯದ ಸುಮಾರು ಇನ್ನೂರು ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಅವಧಿಯಲ್ಲಿ ಕೃಷ್ಣರಾಜ ಪರಿಷನ್ಮಂದಿರದ ಆವರಣದಲ್ಲಿ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಭವನ ತಲೆಯೆತ್ತಿತು.
- ಹಂಪನಾ ಅವರು ತಮ್ಮ ಅಧ್ಯಾಪನ ವೃತ್ತಿಯ ಜೊತೆಜೊತೆಗೇ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮುಂಬಯಿ ವಿಶ್ವವಿದ್ಯಾಲಯ, ಮದರಾಸು ವಿಶ್ವವಿದ್ಯಾಲಯ ಹಾಗೂ ಮಧುರೈ ವಿಶ್ವವಿದ್ಯಾಲಯಗಳ ಆಶ್ರಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
- ದೇಶವಿದೇಶಗಳಲ್ಲಿ ನಡೆದ ಹತ್ತಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. ಟೊರೊಂಟೊ, ಬುಡಾಪೆಸ್ಟ್, ಮಾಂಟ್ರಿಯಲ್, ಲಂಡನ್, ನವದೆಹಲಿ ಹಾಗೂ ಕೊಲ್ಕತ್ತಗಳಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲುಗೊಂಡಿದ್ದಾರೆ.
- ಹಂಪನಾ ಅವರು ದೇಶವಿದೇಶಗಳ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕನ್ನಡಸಾಹಿತ್ಯ ಮತ್ತು ಜೈನಪರಂಪರೆಯ ಬಗ್ಗೆ ತಮ್ಮ ಅಪ್ರತಿಮ ವಿದ್ವತ್ತನ್ನು ಹಂಚಿದ್ದಾರೆ. ಹಂಪನಾ ಅವರ ಜ್ಞಾನಸಂಪದವನ್ನು ಬಳಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯಗಳ ಯಾದಿ ಇಲ್ಲಿದೆ. [೨] ಆಸ್ಟ್ರಿಯಾದ ಇನ್ಸ್‌ಬ್ರುಕ್ ಕ್ಲಿನಿಕೆನ್ ವಿಶ್ವವಿದ್ಯಾಲಯ ಮತ್ತು ಲಿಯೊಬೆನ್ ವಿಶ್ವವಿದ್ಯಾಲಯ, ಈಟ್ವಾಸ್ ಲೊರಾಂಡ್ ವಿಶ್ವವಿದ್ಯಾಲಯ, ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯ ಮತ್ತು ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯ, ಜರ್ಮನಿಯ ಬಾನ್ ವಿಶ್ವವಿದ್ಯಾಲಯ, ಫ್ರಾನ್ಸಿನ ದಿಷ್ಯೂನ್ ವಿಶ್ವವಿದ್ಯಾಲಯ ಮತ್ತು ಪ್ಯಾರಿಸ್ ಸೊರ್ ಬೋನ್ನ್ ವಿಶ್ವವಿದ್ಯಾಲಯ, ಯುಎಸ್‌ಎ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ, ಚಿಕಾಗೊ ವಿಶ್ವವಿದ್ಯಾಲಯ, ಡೇವಿಸ್ ವಿಶ್ವವಿದ್ಯಾಲಯ, ನ್ಯೂಯಾರ್ಕ್ ವಿಶ್ವವಿದ್ಯಾಲಯ, ಲಾಸ್ ಏಂಜಲಿಸ್ ವಿಶ್ವವಿದ್ಯಾಲಯ ಮತ್ತು ವಾಶಿಂಗ್‌ಟನ್ ವಿಶ್ವವಿದ್ಯಾಲಯ, ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಜ್ ವಿಶ್ವವಿದ್ಯಾಲಯ, ಡರ್‌ಹ್ಯಾಮ್ ವಿಶ್ವವಿದ್ಯಾಲಯ, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ, ಲಂಡನ್ ವಿಶ್ವವಿದ್ಯಾ ಸಂಡಲಯ ಮತ್ತು ಸಂಡರ್‌ಲ್ಯಾಂಡ್ ವಿಶ್ವವಿದ್ಯಾಲಯ, ಹಂಗೆರಿಯ ಬುಡಾಪೆಸ್ಟ್ ಆರ್ಥಿಕ ವಿಶ್ವವಿದ್ಯಾಲಯ ಮತ್ತು ಬುಡಾಪೆಸ್ಟ್ ಸೆಂಟ್ರಲ್ ಯೂರೋಪಿಯನ್ ವಿಶ್ವವಿದ್ಯಾಲಯ.
ಸಾರ್ಥಕ ಜೀವನ
ಬದಲಾಯಿಸಿ- ಅವರ ಪತ್ನಿ ಕಮಲಾ ಹಂಪನಾ ಅವರೂ ಸಾಹಿತ್ಯವೇತ್ತರು, ಉತ್ತಮ ವಾಗ್ಮಿಗಳು ಹಾಗೂ ನಾಡೋಜ ಪ್ರಶಸ್ತಿಗೆ ಭಾಜನರಾದವರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಹಂಪನಾ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ಅವಿರತವಾಗಿ ದುಡಿದಿದ್ದಾರೆ. ಕನ್ನಡದ ಮಹಾನ್ ಶಿಕ್ಷಕ ಪರಂಪರೆಯನ್ನು ಪೋಷಿಸಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸಿದ ಹಿರಿಮೆ ಇವರದು. ಯಾವುದೇ ಲಾಬಿಗಳನ್ನು ಒಣಸಿದ್ಧಾಂತಗಳನ್ನು ಎಂದೂ ತಮ್ಮ ವಿದ್ಯಾರ್ಥಿಗಳ ಮೇಲೆ ಹೇರಿದವರಲ್ಲ.
- ನಾಗೇಂದ್ರಪ್ಪ ದಾಗಿನಕಟ್ಟೆ ಹಾಗೂ ಬಾಳೇಶ ಲಕ್ಸೆಟ್ಟಿ ಅವರು ಪ್ರತ್ಯೇಕವಾಗಿ ಹಂಪನಾ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ. ಹಂಪನಾ ಕೃತಿಗಳ ಅಧ್ಯಯನವನ್ನು ಸಂಶೋಧನಾ ವಿಷಯವನ್ನಾಗಿ ತೆಗೆದುಕೊಂಡು ಕಲಬುರ್ಗಿ ವಿವಿಯಲ್ಲಿ ಡಾ ಚೆನ್ನಣ್ಣ ವಾಲೀಕಾರ ಅವರ ಮಾರ್ಗದರ್ಶನದಲ್ಲಿ ಡಾ. ನಾಗಪ್ಪ ಚಲವಾದಿಯವರು ಡಾಕ್ಟರೆಟ್ ಪಡೆದಿದ್ದಾರೆ.
- ಹಂಪನಾ ಅವರು ವಿಶೇಷವಾಗಿ ಅವರು ಶ್ರಮಣ ಪರಂಪರೆಯನ್ನು ಕನ್ನಡಿಗರ ಮುಂದೆ ತೆರೆದಿಟ್ಟರು. ಅದಕ್ಕಾಗಿ ಅವರು ಪಾಳಿ ಭಾಷೆ, ಪ್ರಾಕೃತ ಭಾಷೆಗಳ ಮೂಲಕ ನಮ್ಮ ದೇಶದ ಪ್ರಾಚೀನ ಲೋಕದರ್ಶನವನ್ನು ಮಾಡಿಸಿದ್ದಾರೆ. ಕನ್ನಡ ನಾಡಿನಲ್ಲೇ ಅತ್ಯಂತ ಒಳಹುನ್ನಾರದ ಭಾಗವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಅಳಿಸಿಹಾಕಿದ್ದ ಒಂದು ಧಾರ್ಮಿಕ ಪರಂಪರೆಯ ಕುರಿತಾದ ಮಾಹಿತಿಯನ್ನು ಸದ್ದಿಲ್ಲದೆ ತುಂಬಿ ಕೊಡುತ್ತಾ ಬಂದಿದ್ದಾರೆ.
- ಭಾವಹಿಂಸೆಯೂ ಪಾಪ ಎಂಬ ಪರಂಪರೆಯ ಹಂಪನಾ ಎಂದೂ ಯಾರನ್ನೂ ಕಟುವಾಗಿ ಮಾತನಾಡಿ ನೋಯಿಸಿದವರಲ್ಲ. ಒಟ್ಟಿನಲ್ಲಿ ನಾಡೋಜ ಹಂಪನಾ ಅವರು ಸೃಜನಶೀಲತೆ, ವಿದ್ವತ್ತು, ಸಂಶೋಧನೆ ಮತ್ತು ಭಾಷಾವಿಜ್ಞಾನದ ಅಪಾರ ತಿಳಿವಳಿಕೆಯೊಂದಿಗೆ ಆಡಳಿತಾತ್ಮಕ ಪರಿಣತಿಯೂ ಉಳ್ಳ ಅಪರೂಪದ ವಿದ್ವಾಂಸ.
ಕೃತಿಗಳು
ಬದಲಾಯಿಸಿಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಇವರ ಲೇಖನಿಯಿಂದ ೧೧೫ ಪುಸ್ತಕಗಳು ಪ್ರಕಟವಾಗಿದೆ. ಅವನ್ನು ಈ ರೀತಿ ವರ್ಗೀಕರಿಸಬಹುದು.
- ಭಾಷಾ ವಿಜ್ಞಾನ(೬),
- ಸಂಶೋಧನೆ(೧೩),
- ಮಹಾಕಾವ್ಯ(ಚಾರುವಸಂತ). ಇದು ಇಂಗ್ಲಿಷ್ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ತರ್ಜುಮೆಯಾಗಿದೆ.[೩]
- ಗ್ರಂಥ ಸಂಪಾದನೆ(೧೫),
- ಜಾನಪದ(೫),
- ಅನುವಾದ(೪),
- ಜೀವನಚರಿತ್ರೆ(೮),
- ಮಕ್ಕಳ ಸಾಹಿತ್ಯ(೬),
- ವಿಮರ್ಶೆ(೨),
- ಕಾದಂಬರಿ(ನಾಗಶ್ರೀ, ಸವ್ಯಸಾಚಿ ಪಂಪ),
- ಪ್ರಬಂಧ ಸಂಕಲನ(೨),
- ಪ್ರಚಾರೋಪನ್ಯಾಸ ಮಾಲೆ(೪),
- ಸಂಪಾದಿತ (೧೧) ಎಂದು ಪಟ್ಟಿ ಮಾಡಬಹುದು. ಇವಿಷ್ಟು ಕನ್ನಡ ಪುಸ್ತಕಗಳಲ್ಲದೆ ಇವರು ಇಂಗ್ಲಿಷಿನಲ್ಲಿಯೂ ಇಪ್ಪತ್ತು ಮೌಲಿಕ ಪುಸ್ತಕಗಳನ್ನು ಹೊರತಂದಿದ್ದಾರೆ.
- ಇವರ ಇತ್ತೀಚಿನ ಪುಸ್ತಕ Spectrum of Classical Literature in Karnataka[೪] ಇದು ಕನ್ನಡ ಸಾಹಿತ್ಯ ಮತ್ತು ಕಾವ್ಯಗಳ ಸಿಂಹಾವಲೋಕನವಾಗಿದೆ.
ಸಂಭಾವನಾ ಗ್ರಂಥಗಳು
ಬದಲಾಯಿಸಿ- ಪಚ್ಚೆತೆನೆ – ೧೯೮೩ರಲ್ಲಿ ಸಂ: ಟಿ ಕೆ ಮಹಮೂದ್ ಮತ್ತು ಶಾ ಮಂ ಕೃಷ್ಣರಾಯ
- ಸಂಕೃತಿ – ೧೯೮೮ರಲ್ಲಿ ಸಂ: ಡಾ ಎಚ್ ಜೆ ಲಕ್ಕಪ್ಪಗೌಡ ಮತ್ತು ಪ್ರೊ. ಸುಕನ್ಯಾ ಮಾರುತಿ
- ಸಂಕರ್ಷಣ – ೧೯೮೮ರಲ್ಲಿ ಸಂ: ಜೆ ಜ್ಞಾನಾನಂದ ಮತ್ತು ಡಾ. ಸಂಜೀವ ಕೆ ಶೆಟ್ಟಿ
- ಬರಹ ಬಾಗಿನ – ೧೯೯೬ ಸಂ: ಎಚ್ ವಿ ನಾಗೇಶ್
- ಹಂಗ್ರಂಥಾವಳಿ – ೧೯೯೭ ಸಂ: ಸ್ಮಿತಾರೆಡ್ಡಿ ಮತ್ತು ತಮಿಳ್ ಸೆಲ್ವಿ
- ಹಂಪನಾ ವಾಙ್ಮಯ – ೨೦೦೭ ಸಂ: ಡಾ. ಎಂ ಭೈರೇಗೌಡ ಮತ್ತು ಬಿ ಆರ್ ಸತ್ಯನಾರಾಯಣ
ಪ್ರಶಸ್ತಿ ಪುರಸ್ಕಾರಗಳು
ಬದಲಾಯಿಸಿಹಂಪನಾ ಅವರಿಗೆಕನ್ನಡ ವಿಶ್ವವಿದ್ಯಾಲಯವು ೨೦೦೬ರಲ್ಲಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.[೫] ಅಲ್ಲದೆ ಅವರನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವು,
- ೧೯೯೩-೯೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೯೫ರ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- ಶಿಶುಸಾಹಿತ್ಯಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ ೧೯೯೦ರಲ್ಲಿ
- ೧೯೯೬ರಲ್ಲಿ ಚಾಮುಂಡರಾಯ ಪ್ರಶಸ್ತಿ
- ೧೯೯೭ರಲ್ಲಿ ಕಾವ್ಯಾನಂದ ಪ್ರಶಸ್ತಿ
- ೧೯೯೮ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
- ೨೦೦೧ರಲ್ಲಿ ಶಾಸನ ಸಾಹಿತ್ಯ ಪ್ರಶಸ್ತಿ
- ಅತ್ತಿಮಬ್ಬೆ ಪ್ರತಿಷ್ಠಾನದ ಚಿ.ನ.ಮಂಗಳಾ ಪ್ರಶಸ್ತಿ
- ಆಚಾರ್ಯ ಕುಂದಕುಂದ ಜ್ಞಾನಪೀಠ ಪ್ರಶಸ್ತಿ[೬]
- ಶೀಮೊಗ್ಗೆ ನಾಗರಿಕ ಸಮುದಾಯವು ನೀಡಿದ ಸಾಹಿತ್ಯಸಿಂಧು ಮತ್ತು ಜ್ಞಾನಭಾಸ್ಕರ ಪ್ರಶಸ್ತಿಗಳು.
- ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ[೭]
- ಶಾಸ್ತ್ರೀಯ ಕನ್ನಡಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಮನ್ನಣೆ.[೮]
ಉಲ್ಲೇಖಗಳು
ಬದಲಾಯಿಸಿ- ↑ "ಕನ್ನಡ ಸಾಹಿತ್ಯ ಪರಿಷತ್ತು". Kannadasahithyaparishattu.in. Retrieved 27 January 2022.
- ↑ "Hampanā". Jainworld.com. Retrieved 26 June 2007.
- ↑ "Hampana's Charu-Vasantha translated into English". Thehindu.com. 27 December 2021. Retrieved 27 January 2022.
- ↑ "ಕನ್ನಡ ಭಾಷೆಯನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವಾಗಬೇಕು - ಬಿ.ಪಿ. ವೀರಭದ್ರಪ್ಪ". www.bookbrahma.com.
- ↑ "Nadoja for Kinhanna Rai, Sarojini Mahishi, Ham. Pa. Na., two others". The Hindu. November 26, 2006. Archived from the original on ಜುಲೈ 7, 2007. Retrieved December 15, 2010.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "कुन्दकुन्द ज्ञानपीठ, इन्दौर". www.kundkundgyanpeeth.org. Archived from the original on 2023-05-28. Retrieved 2024-07-03.
- ↑ "Hampa Nagarajaiah bags prestigious Pampa award". The Times of India. 12 January 2017. Retrieved 2023-07-21.
- ↑ "Hegde, Hampana chosen for President's Certificate". Deccan Herald. 15 August 2019.