ಅತ್ತಿಮಬ್ಬೆ ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದರು. ಅತ್ತಿಮಬ್ಬೆ ಚಾಲುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ(೯೭೩-೮೮೭)ನ ಮಗ ಇರಿವ ಬೆಡಂಗ ಸತ್ಯಾಶ್ರಯನ (೯೯೭-೧೦೦೮) ಕಾಲದಲ್ಲಿದ್ದರು. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದಲ್ಲಿರುವ ವೆಂಗಿಮಂಡಲದ ಪುಂಗನೂರಿನ ಪ್ರದೇಶದಿಂದ ಬಂದವರು. ಮಲ್ಲಪ್ಪಯ್ಯ ಮತ್ತು ಅಪ್ಪಕಬ್ಬೆ ಅವಳ ತಾಯಿ-ತಂದೆಯರು. ತಂದೆಯು ಕಲೆ ಮತ್ತು ಸಾಹಿತ್ಯಗಳ ದೊಡ್ಡ ಪೋಷಕನಾಗಿದ್ದರು. ಪೊನ್ನ[]ನು ಅವನ ಅಶ್ರಿತನಾಗಿದ್ದವನು.

ಅತ್ತಿಮಬ್ಬೆ
ಜನನಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗ ಕ್ರಿ.ಶ.೯೫೦
ಪುಂಗನೂರು
ವಿಷಯಕನ್ನಡ.
ಬಾಳ ಸಂಗಾತಿನಾಗದೇವ
ತಂದೆಮಲ್ಲಪ್ಪ
ಅತ್ತಿಮಬ್ಬೆ ನಿರ್ಮಿಸಿರುವ ಜೈನ ದೆಗುಲಗಳು
ಜೈನ ದೇಗುಲ

ಅತ್ತಿಮಬ್ಬೆಯ ಆಶ್ರಯದಲ್ಲೆ ರನ್ನ[]ಕವಿ ತನ್ನ ಅಜಿತಪುರಾಣವನ್ನು ಬರೆದದ್ದು(೯೯೩). ಅವರು ಲಕ್ಕುಂಡಿಯಲ್ಲಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದತ್ತಿಗಳನ್ನು ಬಿಡಿಸಿದ್ದು ೧೦೦೭ರಲ್ಲಿ ಎಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಅವರ ಬಗ್ಗೆ ಅನೇಕ ಸಂಗತಿಗಳು []ರನ್ನನ ಅಜಿತಪುರಾಣದಿಂದಲೂ, ಅವನೇ ಬರೆದಿರಬಹುದಾದ ಲಕ್ಕುಂಡಿಯ ಶಾಸನದಿಂದಲೂ ತಿಳಿದುಬರುತ್ತದೆ. ಈಕೆಯ ತೌರುಮನೆಯ ಹಲವು ಸಂಗತಿಗಳು ಪೊನ್ನನ ಶಾಂತಿಪುರಾಣದಿಂದ ತಿಳಿದುಬರುತ್ತವೆ. ಜೊತೆಗೆ, ಅವರಾದ ಮೇಲೆ ರಚಿತವಾದ ಬ್ರಹ್ಮಶಿವನ ಸಮಯಪರೀಕ್ಷೆಯೂ ಏಳೆಂಟು ಶಾಸನಗಳೂ ಅತ್ತಿಮಬ್ಬೆಯನ್ನು ಕೊಂಡಾಡಿವೆ. ೧೯೯೪ನೇ ಇಸವಿಗೆ ಆಕೆ ಇದ್ದು ಒಂದು ಸಹಸ್ರ ವರ್ಷಗಳಾಗಿದ್ದುದರಿಂದ ೧೯೯೪ನೇ ವರ್ಷವನ್ನು ಕರ್ನಾಟಕ ಸರ್ಕಾರ ಅತ್ತಿಮಬ್ಬೆ ವರ್ಷವೆಂದು ಘೋಷಿಸಿತ್ತು. ಅಂದಿನಿಂದ ಆಕೆಯ ಸ್ಮರಣಾರ್ಥ ಅತ್ತಿಮಬ್ಬೆ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿದೆ.

ಅತ್ತಿಮಬ್ಬೆಯ ತಂದೆಯ ತಂದೆ ನಾಗಮಯ್ಯ. ಈಗ []ಆಂಧ್ರ ಪ್ರದೇಶಕ್ಕೆ ಸೇರಿರುವ ವೆಂಗೆಮಂಡಲದ ಕಮ್ಮೆನಾಡಿನ ಪುಂಗನೂರಿನವನು. ಜೈನ ಬ್ರಾಹ್ಮಣ. ಇವನ ಮಕ್ಕಳು ಮಲ್ಲಪಯ್ಯ ಮತ್ತು ಪೊನ್ನಮಯ್ಯ. ಈ ಸೋದರರಿಬ್ಬರ ಆಶ್ರಯದಲ್ಲಿ ಪೊನ್ನ ಶಾಂತಿಪುರಾಣವನ್ನು ಬರೆದ. ಪೊನ್ನಮಯ್ಯ ತನ್ನ ದೊರೆ ತೈಲಪನಿಗಾಗಿ ಕಾವೇರಿ ತೀರದ ಯುದ್ಧದಲ್ಲಿ ಪ್ರಾಣವನ್ನು ಒಪ್ಪಿಸಿದ.ಇವರಲ್ಲಿ ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯರ ಮಗಳೇ ಅತ್ತಿಮಬ್ಬೆ. ಅತ್ತಿಮಬ್ಬೆಯನ್ನು ಅವಳ ತಂಗಿ ಗುಂಡಮಬ್ಬೆಯ ಜೊತೆಯಲ್ಲಿ ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಭುಜಾದಂಡದಂತಿದ್ದ ನಾಗದೇವನಿಗೆ ಕೊಟ್ಟಿದ್ದರು. ಈ ನಾಗದೇವ ಚಾಲುಕ್ಯ ಚಕ್ರವರ್ತಿಯ ಮಹಾಮಂತ್ರಿ ಧಲ್ಲಪನ ಹಿರಿಯ ಮಗ. ತಂದೆಯ ಮಂತ್ರಿಮಂಡಲದಲ್ಲಿಯೇ ಸೇನಾನಾಯಕನಾಗಿದ್ದ. ಅತ್ತಿಮಬ್ಬೆಗೆ ಅಣ್ಣಿಗದೇವನೆಂಬ ಕಿರಿ ವಯಸ್ಸಿನ ಮಗನೂ ಇದ್ದ. ಆದರೆ ಅವಳು ಇನ್ನು ಯೌವನದಲ್ಲಿರುವಾಗಲೇ ಅವಳ ಗಂಡ ನಾಗದೇವ ಮಡಿದನು. ಆಗ ಅವಳ ತಂಗಿ ಗುಂಡಮಬ್ಬೆ ಅಕ್ಕನನ್ನು ಕಷ್ಟದಿಂದ ಒಪ್ಪಿಸಿ, ಎಳೆಯ ಪ್ರಾಯದ ಅಣ್ಣಿಗದೇವನನ್ನು ಸಾಕಿ ಸಲಹುವ ಜವಾಬ್ದಾರಿಯನ್ನು ಗುಂಡುಮಬ್ಬೆಯು ತನ್ನ ಅಕ್ಕನಿಗೆ ವಹಿಸಿ ತಾನು ಸತ್ತು ಹೋಗುತ್ತಾಳೆ. ಒಬ್ಬೊಂಟ್ಟಿಗಳಾದ ಅತ್ತಿಮಬ್ಬೆ ಸುತನ ಜವಾಬ್ದಾರಿಯೊಂದಿಗೆ ಪತಿಯ ಕೆಲಸದ ಜವಾಬ್ದಾರಿಯನ್ನೂ ಸಹ ಹೊತ್ತು ರಾಜಕಾರಣದಲ್ಲಿ ತೈಲಪಚಕ್ರವರ್ತಿಗೂ ತಾಯಿಯಂತೆ ಸಲಹೆ ನೀಡುತ್ತಿದ್ದಳು.ಅವರ ತಂದೆ ತಾಯಿಯ ಹೆಸರು - ಮಲ್ಲಪ್ಪ ,ಅಪ್ಪಕಬೆ

ತನ್ನ ಪತಿ ಮತ್ತು ಸೋದರಿಯರನ್ನು ಕಳೆದುಕೊಂಡ ವಿಷಾದದಲ್ಲಿ ಮುಳುಗಿದ ಅತ್ತಿಮಬ್ಬೆಯು ದುಃಖವನ್ನು ನುಂಗಿಕೊಂಡು ಧಾರ್ಮಿಕವಾದ ಸರಳ ಜೀವನವನ್ನು ನಡೆಸಿದಳು. ಅವಳ ಜೀವನವು ಕಲೆಗಳು ಮತ್ತು ಧರ್ಮದ ಪುನರುಜ್ಜೀವನಕ್ಕೆ ಮೀಸಲಾಯಿತು. ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ದಾನಚಿಂತಾಮಣಿ ಎಂಬ ಬಿರುದನ್ನು ಪಡೆದಳು. ಅತ್ತಿಮಬ್ಬೆಯು ೧೦೦೭ ರಲ್ಲಿ ಲಕ್ಕುಂಡಿಯಲ್ಲಿ ಒಂದು ವಿಶಾಲವಾದ ಜೈನ ಬಸದಿಯನ್ನು ನಿರ್ಮಿಸಿದಳು.ಆ ದೇವಾಲಯದ ನಿರ್ವಹಣೆಗೆ ಅಗತ್ಯವಾದ ದಾನ- ದತ್ತಿಗಳನ್ನೂ ಅವಳೇ ನೀಡಿದಳು. ೧೫೦೦ ರತ್ನಖಚಿತವಾದ ಬಂಗಾರದ ಜಿನಬಿಂಬಗಳನ್ನು ಮಾಡಿಸಿ ಭಕ್ತರಿಗೆ ದಾನವಾಗಿ ನಿೀಡೀದಳು.ಪೊನ್ನಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಯಿಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು. ಅವಳ ಮರಣದ ನಂತರ ಸ್ಥಾಪಿತವಾದ ಅನೇಕ ಶಾಸನಗಳು ಮತ್ತು ಹಲವು ಕವಿಗಳು ಅವಳ ಹಿರಿಮೆಯನ್ನು ಹೊಗಳಿದ್ದಾರೆ. ಆದರೆ ರನ್ನನು ರಚಿಸಿರುವ ಪದ್ಯಗಳು ತಮ್ಮ ಸಾಹಿತ್ಯಕ ಗುಣಕ್ಕಾಗಿಯೂ ಸ್ಮರಣೀಯವಾಗಿವೆ. ಅವನು ಅವಳ ಪಾವಿತ್ರ್ಯವನ್ನು ಗಂಗಾನದಿಯ ನೀರಿಗೆ, ಬಿಳಿಯ ಅರಳೆಗೆ ಮತ್ತು ಕೊಪ್ಪಳ ನಗರದಲ್ಲಿರುವ ಪವಿತ್ರವಾದ ಬೆಟ್ಟಕ್ಕೆ ಹೋಲಿಸಿದ್ದಾನೆ. ಆಕೆ ಸ್ವತಃ ಕಾವ್ಯ ಬರೆಯದಿದ್ದರೂ ಮಹಾಕಾವ್ಯದ ಬಾಳನ್ನು ಬಾಳಿದಳು, ಬೆಳಗಿದಳು, ಆಳಿದಳು.

ಅತ್ತಿಮಬ್ಬೆ ಮಾಡಿರುವ ಕೆಲಸಗಳು

ಬದಲಾಯಿಸಿ
  1. ರನ್ನನಂಥ ವರಕವಿಗಳಿಗೆ ಸ್ಫೂರ್ತಿ ಆಶ್ರಯ ಕೊಟ್ಟಳು.
  2. ನಾಗದೇವ, ಅಣ್ಣಿಗದೇವರಂಥ ರಣಕಲಿಗಳಿಗೆ ಉತ್ಸಾಹ ತುಂಬಿದಳು.
  3. ಓಲೆಗರಿ ಪ್ರತಿಗಳನ್ನು- ಶಾಂತಿಪುರಾಣ, ಅಜಿತಪುರಾಣ ಕಾವ್ಯಗಳ ಹಲವಾರು ಪ್ರತಿಗಳನ್ನು ಬರಸಿ ಕನ್ನಡ ಸಾಹಿತ್ಯವನ್ನು ಪುನರುಜ್ಜೀವಿಸಿದ ಪುಣ್ಯಮೂರ್ತಿಯಾದಳು.
  4. ಜಿನಬಿಂಬಗಳನ್ನು ದಾನಮಾಡಿ ಭಕ್ತರನ್ನು ಉದ್ದೀಪನಗೊಳಿಸಿದಳು.
  5. ಮುನಿಗಳಿಗೆ ಆತ್ಮಾನುಸಂಧಾನದ ಧ್ಯಾನಕಾರ್ಯದಲ್ಲಿ ನೆರವಾದಳು.
  6. ಆರ್ಯಿಕೆಯರಿಗೆ ಆಹಾರ ದಾನವಿತ್ತು ಅವರ ನಿರಾತಂಕ ಜೀವನಕ್ಕೆ ಇಂಬಾದಳು.
  7. ನಾಡಿನಾದ್ಯಂತ ನೂರಾರು ಚೈತ್ಯಾಲಯಗಳನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಚೈತನ್ಯವನ್ನು ಸಾಮಾನ್ಯ ಚೇತನದಲ್ಲೂ ತುಂಬಿ ಹರಿಯಿಸಿದ ಮಹಾಚೇತನವಾದಳು.
  8. ಬೇಡಿದವರಿಗೆ ಅವರು ಬೇಡಿದ್ದನ್ನು ತಡಮಾಡದೆ ಒಡನೆಯೇ ಹಿಡಿ ಹಿಡಿಯಾಗಿ 'ಹಿಡಿ-ಹಿಡಿ' ಎಂದು ಮುಕ್ತಹಸ್ತದಿಂದ ನೀಡಿದಳು; ತನ್ನದೆಂಬ ಸರ್ವಸ್ವವನ್ನೂ ಧರ್ಮಕ್ಕಾಗಿ, ಸಹಮಾನವರ ಒಳಿತಿಗಾಗಿ ದಾನಾಮಾಡಿದಳು

ಅತ್ತಿಮಬ್ಬೆಯ ಬಿರುದುಗಳು

ಬದಲಾಯಿಸಿ
  1. ಕವಿವರ ಕಾಮಧೇನು
  2. ಗಿಣದಂಕಕಾರ್ತಿ
  3. ಜಿನಶಾಸನದೀಪಿಕೆ
  4. ದಾನಚಿಂತಾಮಣಿ
  5. ಗುಣದಖನಿ
  6. ಜೈನ ಶಾಸನ ಲಕ್ಷ್ಮ
  7. ಅಕಲಂಕಚರಿತೆ
  8. ಸಜ್ಜನೈಕಚೂಡಾಮಣಿ
  9. ಸರ್ವಕಳಾವಿದೆ; ಮುಂತಾದುವು

ಅಜಿತ ಪುರಾಣ

ಬದಲಾಯಿಸಿ

೨ನೇಯ ತೀರ್ಥಂಕರ ಅಜಿತಸ್ವಾಮಿಯ ಕುರಿತ ೧೨ ಆಶ್ವಾಸಗಳ ವಿಸ್ತ್ರತ ಕಥೆ.ಮತ್ತು ದಾನಚಿಂತಾಮಣಿ 'ಅತ್ತಿಮಬ್ಬೆ' ಎಂಬ ಜೈನಶ್ರಾವಕಿ ರನ್ನನಿಂದ ಬರೆಯಿಸಿದಳು.

ಪ್ರಮುಖ ಪ್ರಸಂಗಗಳು

ಬದಲಾಯಿಸಿ
  1. ಅತ್ತಿಮಬ್ಬೆ ಚರಿತ್ರೆ
  2. ಸುಸೀಮ ನಗರ ರಾಜ 'ವಿಮಲವಾಹನ'ನ ವೈರಾಗ್ಯ
  3. ಸಗರ ಚಕ್ರವರ್ತಿ ಕಥೆ

ಅತ್ತಿಮಬ್ಬೆ ಚರಿತ್ರೆ

ಬದಲಾಯಿಸಿ

ಒಂದು ಸಾವಿರ ವರುಷದ ಹಿಂದೆ ಚಾಲುಕ್ಯ ರಾಜ್ಯದಲ್ಲಿ ಬಾಳಿ ಬೆಳೆಗಿದ ಮಹಾಸಾಧ್ವಿ ಅತ್ತಿಮಬ್ಬೆಯ ಭವ್ಯವಾದ ಬಾಳೂ ದಿವ್ಯವಾದ ಕಾವ್ಯವಾಗಿ ಮಹಾಕವಿ ರನ್ನನ ಅಜಿತ ಪುರಾಣದಲ್ಲಿ ರಸದೊರತೆಯಂತೆ ರೂಪುಗೊಂಡಿದೆ. ಅವಳ ಪರಮಪವಿತ್ರವಾದ ಉದಾತ್ತ ಜೀವನದ ವಿವರಗಳು ಕವಿಯ ಪವಿತ್ರಾಂತಃಕರಣದಿಂದ ಹೊರಹೊಮ್ಮಿದೆ.ರನ್ನ ಹಾಡಿದ ಅತ್ತಿಮಬ್ಬೆ ಜೀವನ ಗೀತೆ ಸಹೃದಯರ ಕಿವಿಗೆ ಇಂಪು, ಭಕ್ತರ ಹೃದಯಕ್ಕೆ ತಂಪು. ರನ್ನನ ತರುವಾಯ ಆ ಅತ್ತಿಮಬ್ಬೆಯ ನಿರ್ಮಲವಾದ ಜೀವನವನ್ನು ಕುರಿತು ರಚಿತವಾದ ಸುದೀರ್ಘ ಕೃತಿಯೆಂದರೆ ಶ್ರೀ ಜಿ. ಬ್ರಹ್ಮಪ್ಪನವರ ಈ ಕಾದಂಬರಿ. ಸಹಸ್ರ ವರುಷದ ಹಿಂದೆ ಬಾಳಿಹೋದ ಆ ಮಹಾಸಾಧ್ವಿಯ ಶ್ರೇಷ್ಠ ಬದುಕಿನ ಸುರಮ್ಯಚಿತ್ರ ಮತ್ತೆ ಇಲ್ಲಿ ಸಜೀವವಾಗಿ ಸಾಕಾರಗೊಂಡಿದೆ.

ಉಲ್ಲೇಖ

ಬದಲಾಯಿಸಿ
  1. http://honalu.net/tag/%E0%B2%AA%E0%B3%8A%E0%B2%A8%E0%B3%8D%E0%B2%A8/
  2. [೧]
  3. "ರನ್ನ". Archived from the original on 2016-03-06. Retrieved 2015-09-10.
  4. "ಆಂಧ್ರಪ್ರದೇಶ". Archived from the original on 2015-05-29. Retrieved 2015-09-10.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಅಜಿತನಾಥ ಪುರಾಣ, ಶಾಂತಿ ಪುರಾಣ, ಸಮಯ ಪರೀಕ್ಷೆ, ಲಕ್ಕುಂಡಿಯ ಶಾಸನಗಳು, ಸಮಾಲೋಕನದಲ್ಲಿನ ತಿ.ನಂ.ಶ್ರಿ