ಕನ್ನಡ ವಿಶ್ವವಿದ್ಯಾಲಯ


ಕನ್ನಡ ವಿಶ್ವವಿದ್ಯಾಲಯ : ಕನ್ನಡ ನಾಡು, ನುಡಿ, ಸಂಸ್ಕೃತಿಗಳ ವಿಶೇಷ ಅಧ್ಯಯನಕ್ಕಾಗಿ 1991ರಲ್ಲಿ ಸ್ಥಾಪಿತವಾದ ಒಂದು ವಿಶ್ವವಿದ್ಯಾಲಯ.[] ಕನ್ನಡದ ಕೆಲಸಗಳು ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಕೇಂದ್ರಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಅಕಾಡೆಮಿಗಳ ಮೂಲಕ ನಡೆಯುತ್ತಿದ್ದರೂ ಕನ್ನಡ ನಾಡುನುಡಿಯ ಬಗ್ಗೆ, ಕನ್ನಡ ಭಾಷಾ ಪುರೋಬಿsವೃದ್ಧಿಯ ಬಗ್ಗೆ ಆಳವಾದ ಕೆಲಸ ಕಾರ್ಯಗಳು ನಡೆಯಬೇಕೆಂಬ ಮಹೋದ್ದೇಶದಿಂದ ಕರ್ನಾಟಕ ಸರ್ಕಾರ ಈ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತಂದಿತು. ವಿಜಯನಗರ ಜಿಲ್ಲೆಯ (ಆಗ ಬಳ್ಳಾರಿ ಜಿಲ್ಲೆ) ಚಾರಿತ್ರಿಕ ಮಹತ್ತ್ವವುಳ್ಳ ಹಂಪೆಯ ಪರಿಸರದಲ್ಲಿ ಈ ವಿಶ್ವವಿದ್ಯಾಲಯ ನೆಲೆಗೊಂಡಿದೆ. ಹಂಪಿಯ ಹೊರವಲಯದಲ್ಲಿರುವ ಈ ವಿಶ್ವವಿದ್ಯಾಲಯದ ಆವರಣಕ್ಕೆ ವಿದ್ಯಾರಣ್ಯವೆಂದು ಹೆಸರಿದೆ. ವಿಜಯನಗರ ಕಾಲದ ವಿಶಿಷ್ಟ ವಾಸ್ತುಶೈಲಿಯಲ್ಲಿ ಕಟ್ಟಡಗಳನ್ನು ರೂಪಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯ
ಕನ್ನಡ ವಿಶ್ವವಿದ್ಯಾಲಯ
ಕನ್ನಡ ವಿಶ್ವವಿದ್ಯಾಲಯ
ಸ್ಥಾಪನೆ೧೯೯೧
ಪ್ರಕಾರಸಾರ್ವಜನಿಕ
ಉಪಕುಲಪತಿಗಳುಪ್ರೊ.ಡಿ.ವಿ.ಪರಮಶಿವಮೂರ್ತಿ
ಸಿಬ್ಬಂದಿ'-'
ವಿದ್ಯಾರ್ಥಿಗಳ ಸಂಖ್ಯೆ'-'
ಪದವಿ ಶಿಕ್ಷಣ'-'
ಸ್ನಾತಕೋತ್ತರ ಶಿಕ್ಷಣ'-'
ಡಾಕ್ಟರೇಟ್ ಪದವಿ'-'
ಇತರೆ'-'
ಆವರಣಗ್ರಾಮಾಂತರ
'ಮಾತೆಂಬುದು ಜ್ಯೋತಿರ್ಲಿಂಗ'

ವಾಸ್ತುಶಿಲ್ಪ

ಬದಲಾಯಿಸಿ

ಇಲ್ಲಿನ ಕಟ್ಟಡಗಳನ್ನು ರೂಪಿಸಿದವರು ವಾಸ್ತುಶಿಲ್ಪಿ ಲಾರಿ ಬೆಕರ್ ಅವರ ಶಿಷ್ಯ ಗೋವಾದ ಡಿಕುನ್ಹಾ ಮತ್ತು ಗುಲ್ಬರ್ಗದ ‘ಆಕೃತಿ’ ವಾಸ್ತುಶಿಲ್ಪಿಗಳು. ಇವರೊಂದಿಗೆ ನವದೆಹಲಿಯ ವಿನ್ಯಾಸ್ ಆರ್ಕಿಟೆಕ್ಟ್‌ನ ಕಬೀರ್ ವಾಜಪೇಯಿ, ತಮಿಳುನಾಡಿನ ಸ್ಥಪತಿ ಗಣಪತಿಯವರ ಶಿಷ್ಯವರ್ಗದವರು ಕನ್ನಡ ವಿಶ್ವವಿದ್ಯಾಲಯದ ಬೇರೆ ಬೇರೆ ವಿನ್ಯಾಸ ರಚನೆಗೆ ಕಾರಣರಾಗಿದ್ದಾರೆ.

ವಿಸ್ತೀರ್ಣ

ಬದಲಾಯಿಸಿ

ಸು.650 ಎಕರೆ ಪ್ರದೇಶವನ್ನೊಳಗೊಂಡ ವಿಸ್ತಾರವಾದ ಆವರಣವನ್ನು ಹೊಂದಿರುವ ಕನ್ನಡ ವಿಶ್ವವಿದ್ಯಾಲಯ ತಂಜಾವೂರಿನ ತಮಿಳು ವಿಶ್ವವಿದ್ಯಾಲಯ ಹಾಗೂ ಹೈದರಾಬಾದಿನ ತೆಲುಗು ವಿಶ್ವವಿದ್ಯಾಲಯಗಳ ಅಂತಃಪ್ರೇರಣೆಯಿಂದ ರೂಪಿತಗೊಂಡಿತು. ಕನ್ನಡದ ಅತ್ಯಂತ ಪ್ರಾಚೀನ ಶಾಸನವೆನಿಸಿರುವ ಹಲ್ಮಿಡಿ ಶಾಸನದ ಮೇಲ್ಭಾಗದ ಮಾದರಿಯ ಕೆತ್ತನೆಯನ್ನು ಬಳಸಿ ವಿಶ್ವವಿದ್ಯಾಲಯದ ಲಾಂಛನವನ್ನು ರೂಪಿಸಲಾಗಿದೆ. ಮಾತೆಂಬುದು ಜ್ಯೋತಿರ್ಲಿಂಗ ಈ ಲಾಂಛನದ ಧ್ಯೇಯ ವಾಕ್ಯ.

ಚಟುವಟಿಕೆಗಳು

ಬದಲಾಯಿಸಿ

ಕರ್ನಾಟಕ ಸಂಸ್ಕೃತಿಯ ಶೋಧನೆ, ಪ್ರಸಾರ ಹಾಗೂ ಸಂರಕ್ಷಣೆ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಗುರಿ. ಮೇಲ್ನೋಟಕ್ಕೆ ಇದು ಕರ್ನಾಟಕದ ಭೌಗೋಳಿಕ ವ್ಯಾಪ್ತಿಗೆ ಸೀಮಿತ ಅನ್ನಿಸಿದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತಾದ ಯಾವುದೇ ವಿಷಯವೂ ಈ ವಿಶ್ವವಿದ್ಯಾಲಯದ ಪರಿಧಿಯಲ್ಲಿ ಬರುತ್ತದೆ. ಸಮಗ್ರ ಕನ್ನಡ ಸಂಸ್ಕೃತಿಯ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟಣೆ ವಿಶ್ವವಿದ್ಯಾಲಯದ ಮುಖ್ಯ ಗುರಿ. ಇಲ್ಲಿ ಇತರ ವಿಶ್ವವಿದ್ಯಾಲಯಗಳಲ್ಲಿರುವಂತೆ ಬೋಧನೆ ಇರುವುದಿಲ್ಲ. ಸಂಶೋಧನೆಯೇ ಪ್ರಧಾನ. ಸಂಶೋಧನೆಗೆ ಒತ್ತು ನೀಡಿರುವಂತೆಯೇ ಎಂ.ಪಿsಲ್; ಡಿ.ಲಿಟ್ ಹಾಗೂ ಪಿಎಚ್.ಡಿ.; ಎಂ.ಎ.ಪಿಎಚ್.ಡಿ. ಗಳಂಥ ಸಂಶೋಧನ ಪದವಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಕನ್ನಡ ನಾಡುನುಡಿಗೆ ವಿಶೇಷವಾಗಿ ಶ್ರಮಿಸಿದವರನ್ನು ಗುರುತಿಸಿ ನಾಡೋಜ ಗೌರವ ಪದವಿಯನ್ನೂ ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮವನ್ನು ನುಡಿಹಬ್ಬ ಎಂದು ಕರೆಯಲಾಗುತ್ತದೆ. ಅಧ್ಯಯನ, ಸಂಶೋಧನೆ, ಆಡಳಿತ ಮುಂತಾದ ಉದ್ದೇಶಗಳಿಗೆ ಪ್ರತ್ಯೇಕ ಕಟ್ಟಡಗಳಿದ್ದು ಅವುಗಳನ್ನು ಪರಂಪರೆಯ ವಿಶಿಷ್ಟ ಹೆಸರುಗಳಿಂದ ಕರೆಯಲಾಗಿದೆ.

ವಿಭಾಗಗಳು

ಬದಲಾಯಿಸಿ

‘ಕ್ರಿಯಾಶಕ್ತಿ’ ಆಡಳಿತ ಕಟ್ಟಡವಾಗಿದ್ದರೆ, ‘ಕೂಡಲ ಸಂಗಮ’ ಭಾಷಾಂತರ ಹಾಗೂ ದ್ರಾವಿಡ ಸಂಸ್ಕೃತಿ ಅಧ್ಯಯನ ಕಟ್ಟಡ. ಕನ್ನಡ ಭಾಷಾಭಿವೃದ್ಧಿ, ಶಾಸನ ವಿಭಾಗಗಳು ‘ತುಂಗಭದ್ರಾದಲ್ಲಿದೆ. ಮಹಿಳಾ ಅಧ್ಯಯನ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗಗಳು ‘ತ್ರಿಪದಿ’ ಕಟ್ಟಡದಲ್ಲಿವೆ. ಪುಸ್ತಕ ಪ್ರಕಟಣಾಲಯಕ್ಕೆ ‘ಕಾರ್ಯಕ’ವೆನ್ನಲಾಗಿದೆ. ಗ್ರಂಥಾಲಯವನ್ನು ‘ಅಕ್ಷರ’ವೆಂದೂ ಇತಿಹಾಸ, ಪುರಾತತ್ತ್ವ ವಿಭಾಗಗಳಿಗೆ ‘ಘಟಿಕಾಲಯ’ವೆಂದೂ ವಿಚಾರ ಸಂಕಿರಣ, ಸಂಗೀತ, ನೃತ್ಯ ಪ್ರದರ್ಶನ ಸ್ಥಳಕ್ಕೆ ‘ಭುವನ ವಿಜಯ’ವೆಂದೂ ನಾಟಕದ ಬಯಲು ರಂಗಭೂಮಿಗೆ ‘ನವರಂಗ’ವೆಂದೂ ಅಧ್ಯಯನಾಂಗಕ್ಕೆ ‘ಜಕ್ಕಣ ಮಂಟಪ’ವೆಂದೂ ಹೆಸರಿಸಿದೆ. ‘ಮಾನಸೋಲ್ಲಾಸ’ ಕುಲಪತಿಗಳ ನಿವಾಸದ ಹೆಸರಾಗಿದ್ದರೆ ‘ನಿತ್ಯೋತ್ಸವ’ ಅಧ್ಯಾಪಕರ ವಸತಿ ಸಂಕೀರ್ಣದ ಹೆಸರಾಗಿದೆ. ಅತಿಥಿ ಗೃಹಕ್ಕೆ ‘ಶ್ರೀಶೈಲ’ ವೆಂದು ಹೆಸರು. ವಿವಿಧ ಬುಡಕಟ್ಟುಗಳ ವಾಸ್ತುವಿನ್ಯಾಸವನ್ನು ಅಳವಡಿಸಿಕೊಂಡಿರುವ ಅಧ್ಯಯನ ವಿಭಾಗಗಳಿವೆ. ಗಿರಿಸೀಮೆ, ಚಾವಡಿ, ಹಾಲಕ್ಕಿ, ಒಕ್ಕಲಿಗರ ಮನೆ, ದೀವರ ಮನೆ, ಸಿದ್ಧಿಯರ ಮನೆ, ಕುಣಬಿಯರ ಮನೆ, ಗೊಂಡರ ಮನೆ, ಸೋಲಿಗರ ಮನೆ, ಕಾಡು ಮತ್ತು ಜೇನು ಕುರುಬರ ಮನೆ, ಮಲೆಕುಡಿಯರ ಮನೆ ಮುಂತಾದವು ಆಯಾ ಬುಡಕಟ್ಟುಗಳ ವಿಶಿಷ್ಟ ಮನೆ ಮಾದರಿಗಳ ಪ್ರತಿರೂಪಗಳಾಗಿವೆ.

ಪೀಠಗಳು

ಬದಲಾಯಿಸಿ

ವಿಶ್ವವಿದ್ಯಾಲಯದಲ್ಲಿ ದಾನಿಗಳಿಂದ ದತ್ತಿ ಪಡೆದು ವಿವಿಧ ವಿಷಯಗಳಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಇವುಗಳಲ್ಲಿ ಶಂಬಾ ಜೋಶಿ ಅಧ್ಯಯನ ಪೀಠ, ರಾಮಮನೋಹರ ಲೋಹಿಯಾ ಅಧ್ಯಯನ ಪೀಠ, ದಲಿತ ಸಂಸ್ಕೃತಿ ಅಧ್ಯಯನ ಪೀಠ, ಪುರಂದರದಾಸ ಅಧ್ಯಯನ ಪೀಠ, ಕೆ.ವಿ.ತಿರುಪಾಲಕ್ಷಪ್ಪ ದತ್ತಿ ಪೀಠ, ಶ್ರೀಮತಿ ಅಲ್ಲಂ ಸುಮಂಗಳಮ್ಮ ಮತ್ತು ಶ್ರೀ ಅಲ್ಲಂ ಕರಿಬಸಪ್ಪ ದತ್ತಿ ನಿಧಿ, ಕೆ.ಎಲ್.ಇ. ಸೊಸೈಟಿ, ದತ್ತಿ ನಿಧಿ, ಬೆಳಗಾಂವಿ, ಹಿರೇಹಾಳ್ ಇಬ್ರಾಹಿಂ ದತ್ತಿ ನಿಧಿ, ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ ದತ್ತಿ ನಿಧಿ ಹಾಗೂ ಶ್ರೀಮತಿ ಉಮಾದೇವಿ ಕಲಬುರ್ಗಿ ಮಹಿಳಾ ಕ್ಷೇಮನಿಧಿ ಮುಖ್ಯವಾದವು. ಇವುಗಳ ಮೂಲಕ ದತ್ತಿ ಉಪನ್ಯಾಸಗಳು, ಪ್ರಕಟಣೆ, ಶೈಕ್ಷಣಿಕ, ಸಾಂಸ್ಕೃತಿಕ ವ್ಯಕ್ತಿಗಳಿಗೆ ಸನ್ಮಾನ ಮುಂತಾದವನ್ನು ನಡೆಸಲಾಗುತ್ತದೆ.

ದೂರ ಶಿಕ್ಷಣ

ಬದಲಾಯಿಸಿ

ದೂರಶಿಕ್ಷಣ ಕಾರ್ಯಕ್ರಮವನ್ನೂ ವಿಶ್ವವಿದ್ಯಾಲಯ ಹಮ್ಮಿ ಕೊಂಡಿದ್ದು ಇದರಲ್ಲಿ ಕರ್ನಾಟಕ ಅಧ್ಯಯನ, ಕ್ರಿಯಾತ್ಮಕ ಕನ್ನಡ, ದಲಿತ ಅಧ್ಯಯನ, ಪುರಾತತ್ತ್ವ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಮತ್ತು ಮಹಿಳಾ ಅಧ್ಯಯನಗಳನ್ನು ಸ್ನಾತಕೋತ್ತರ ಡಿಪ್ಲೊಮಾಗಳೆಂದೂ ಆಡಳಿತ ಕನ್ನಡ, ಜನಪದ ಕಲೆಗಳು ಇವನ್ನು ಮೆಟ್ರಿಕ್ ಅನಂತರದ ಡಿಪ್ಲೊಮಾಗಳೆಂದೂ ನಡೆಸಲಾಗುತ್ತಿದೆ.

ಪ್ರಕಟಣೆಗಳು

ಬದಲಾಯಿಸಿ

ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಪುರಾತತ್ತ್ವ, ಜಾನಪದ, ಬುಡಕಟ್ಟು ಮುಂತಾದವನ್ನು ಪ್ರದರ್ಶಿಸುವ ಇಲ್ಲಿನ ವಸ್ತುಸಂಗ್ರಹಾಲಯವನ್ನು 1994ರಲ್ಲಿ ಆರಂಬಿsಸಲಾಯಿತು. ಬಿತ್ತರ ಎಂಬ ಮಾಹಿತಿಕೇಂದ್ರ ಕನ್ನಡ ಪತ್ರಿಕೆಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸುವ ಕಾರ್ಯಕ್ರಮವನ್ನು ಹೊಂದಿದೆ. ವಿಶ್ವವಿದ್ಯಾಲಯದ ಪ್ರಸಾರಾಂಗ ಕಳೆದ ಹತ್ತು ವರ್ಷಗಳಲ್ಲಿ 550ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ (2003). ಜೊತೆಗೆ ಪುಸ್ತಕ ಮಾಹಿತಿ, ಚೆಲುವ ಕನ್ನಡ, ವಿಜ್ಞಾನ ಸಂಗಾತಿ, ಕನ್ನಡ ಅಧ್ಯಯನ ಹಾಗೂ ಮಹಿಳಾ ಅಧ್ಯಯನ ಎಂಬ ನಿಯತಕಾಲಿಕೆಗಳನ್ನು ಪ್ರಕಟಿಸುತ್ತಿದೆ. ವಿಶ್ವವಿದ್ಯಾಲಯದ ಮುಖ್ಯ ಪ್ರಕಟಣೆಗಳಲ್ಲಿ ವೃತ್ತಿಪದಕೋಶ, ಬುಡಕಟ್ಟು ಹಾಗೂ ಜನಪದ ಮಹಾಕಾವ್ಯಗಳು, ಶಾಸನ ಸಂಪುಟಗಳು, ಬಿಡಿ ವಿಶ್ವಕೋಶಗಳು, ಕರ್ನಾಟಕ ಚರಿತ್ರೆಯ ಸಂಪುಟಗಳು, ದೇವಾಲಯ ಕೋಶಗಳು ಮುಖ್ಯವಾದವು.

ಉದ್ದೇಶ

ಬದಲಾಯಿಸಿ

ಜ್ಞಾನ ಪ್ರಸಾರ ಕಾರ್ಯಕ್ಕೆ ಅನುಕೂಲವಾಗುವಂತೆ ಮಂಟಪ ಮಾಲೆ, ವಿಶೇಷ ಉಪನ್ಯಾಸ ಮಾಲೆ, ಮೂಲಭೂತ ಉಪನ್ಯಾಸ ಮಾಲೆ ಹಾಗೂ ಉಪೇಕ್ಷಿತ ಸಾಹಿತ್ಯ ಮಾಲೆಗಳಂಥ ಉಪನ್ಯಾಸ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗಾಗಿ ವಿಶ್ವವಿದ್ಯಾಲಯ ಆಯೋಜಿಸಿದೆ. ‘ನವಸಾಕ್ಷರ ಮಾಲೆ’ ಅಕ್ಷರ ಕಲಿಸುವ ಪ್ರಯತ್ನವಾಗಿದೆ. ಪುಸ್ತಕ ಪ್ರೀತಿಯನ್ನು ಜನರಲ್ಲಿ ಹುಟ್ಟಿಸುವ ಕಾರಣದಿಂದ ಪುಸ್ತಕ ಸಂಸ್ಕೃತಿ ಯಾತ್ರೆಯನ್ನು ಕೈಗೊಳ್ಳುವ ವಿಶ್ವವಿದ್ಯಾಲಯ ಜನರ ಬಳಿಗೆ ವಿಚಾರ ಸಾಮಗ್ರಿಯನ್ನು ಒಯ್ಯುತ್ತದೆ. ಅಧ್ಯಯನ ಕಮ್ಮಟ, ಶಿಬಿರ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣಗಳನ್ನು ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಮುಂತಾದ ಎಲ್ಲ ವಿಷಯಗಳಲ್ಲೂ ಹಮ್ಮಿಕೊಂಡು ಕರ್ನಾಟಕದ ವೈವಿಧ್ಯಮಯ ಸಮಾಜ, ಸಂಸ್ಕೃತಿ ಹಾಗೂ ಬಹುಮುಖ ಜ್ಞಾನವನ್ನು ಒಂದು ಸೂರಿನ ಅಡಿಯಲ್ಲಿ ಜಗತ್ತಿಗೆ ಪರಿಚಯಿಸುತ್ತಿದೆ. 2001ರಲ್ಲಿ ವಿಶ್ವವಿದ್ಯಾಲಯ ದಶ ಮಾನೋತ್ಸವವನ್ನು ಆಚರಿಸಿಕೊಂಡಿತು. ಗಡಿನಾಡ ಕನ್ನಡ, ನೆಲ ಜಲ ಸಂರಕ್ಷಣೆ, ಅಖಂಡ ಕರ್ನಾಟಕದ ಕಲ್ಪನೆ, ಪರಿಸರ ಜಾಗೃತಿ, ಕನ್ನಡ ಪ್ರe್ಞೆಯ ಜಾಗೃತಿ ಮುಂತಾದವುಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯ ಗಂಭೀರ ಪ್ರಯತ್ನಗಳನ್ನು ನಡೆಸುತ್ತಿದೆ.

ಕುಲಪತಿಗಳು

ಬದಲಾಯಿಸಿ

ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿ ಚಂದ್ರಶೇಖರ ಕಂಬಾರ (1991-97). ಅನಂತರ ಎಂ.ಎಂ.ಕಲಬುರ್ಗಿ (1997-99), ಎಚ್.ಜೆ.ಲಕ್ಕಪ್ಪಗೌಡ (1999-03), ಬಿ.ಎ.ವಿವೇಕ ರೈ (2004), ಡಾ. ಎ ಮುರಿಗೆಪ್ಪ (2008-12), ಮಲ್ಲಿಕಾ ಘಂಟಿ (೨೦೧೪-೧೮), ಸ.ಚಿ.ರಮೇಶ (೨೦೧೯), ಪ್ರೊ.ಡಿ.ವಿ.ಪರಮಶಿವಮೂರ್ತಿ(ಮಾರ್ಚ್ 2023 ಇಂದ) ಕುಲಪತಿಯಾಗಿದ್ದಾರೆ. ಕರ್ನಾಟಕ ಹಾಗು ಕನ್ನಡದ ಬಗೆಗೆ ಸಂಶೋಧನೆ ನಡೆಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಎಲ್ಲ ರೀತಿಯ ಅರಿವು ಕನ್ನಡದಲ್ಲಿ ಸಿಗುವಂತಾಗಬೇಕು. ಹಾಗೆಯೇ ಕನ್ನಡ ಮತ್ತು ಕರ್ನಾಟಕದ ಬಗೆಗೆ ಬೇರೆ ಭಾಷೆಗಳಲ್ಲಿ ಅರಿವು ದೊರಕುವಂತೆ ಮಾಡುವುದು ಈ ವಿಶ್ವವಿದ್ಯಾಲಯದ ಉದ್ದೇಶ.

ವಿಶ್ವವಿದ್ಯಾಲಯದ ವೈಶಿಷ್ಟ್ಯ

ಬದಲಾಯಿಸಿ
  • ಈ ವಿಶ್ವವಿದ್ಯಾಲಯದಲ್ಲಿ ವಿದ್ಯೆಯನ್ನು ಕಲಿಸುವುದಕ್ಕಿಂತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಶೋಧನೆಯ ಫಲಿತಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತದೆ. ಇದುವರೆವಿಗೂ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆ ಸಾವಿರವನ್ನು ದಾಟಿದೆ. ಈ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರವು ಕನ್ನಡದ ಶ್ರೇಷ್ಟ ಸಾಹಿತ್ಯ ಪಠ್ಯಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ ಪ್ರಕಟಿಸುತ್ತಿದೆ.
  • ಇದುವರೆವಿಗೂ ಮೂರು ಸಂಪುಟಗಳು ಡಾ. ತಾರಕೇಶ್ವರ್ ರವರ ಸಂಚಾಲಕತ್ವದಲ್ಲಿ ಹೊರಬಂದಿವೆ. ಇದಲ್ಲದೆ ಹಲವಾರು ವಿದ್ವತ್ ಪತ್ರಿಕೆಗಳನ್ನೂ ಪ್ರಕಟಿಸುತ್ತಿದೆ. ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್ ಎಂಬ ಇಂಗ್ಲಿಷ್ ಜರ್ನಲ್ ಕೂಡ ಪ್ರಕಟಿಸುತ್ತಿದೆ. ವಿಶ್ವವಿದ್ಯಾಲಯದ ಮೂಲ ಕೇಂದ್ರವು ಹಂಪಿಗೆ ೫ ಕಿ.ಮೀ. ದೂರದಲ್ಲಿ ಹೊಸಪೇಟೆಯಿಂದ ೧೬ ಕಿ.ಮೀ. ದೂರದಲ್ಲಿ ವಿದ್ಯಾರಣ್ಯ ಎಂಬ ೮೦೦ ಎಕರೆಗಳ ಆವರಣದಲ್ಲಿದೆ. ಇದಲ್ಲದೆ ಬಾದಾಮಿ, ಕುಪ್ಪಳಿ, ಕೂಡಲಸಂಗಮಗಳಲ್ಲಿ ಉಪಗ್ರಹ ಕೇಂದ್ರಗಳನ್ನು ಹೊಂದಿದೆ.

ವಿಶ್ವವಿದ್ಯಾಲಯದ ಸ್ವರೂಪ

ಬದಲಾಯಿಸಿ

ಈ ವಿಶ್ವವಿದ್ಯಾಲಯದಲ್ಲಿ ಮೂರು ಅಂಗಗಳಿವೆ:

  1. ಅಧ್ಯಯನಾಂಗ
  2. ಆಡಳಿತಾಂಗ
  3. ಪ್ರಸಾರಾಂಗ

ವಿಶ್ವವಿದ್ಯಾಲಯದ ಮೂರು ನಿಕಾಯಗಳು

ಬದಲಾಯಿಸಿ
  1. ಭಾಷಾ ನಿಕಾಯ,
  2. ಸಮಾಜ ವಿಜ್ಞಾನ ನಿಕಾಯ,
  3. ಲಲಿತಕಲಾ ನಿಕಾಯ

ಭಾಷಾ ನಿಕಾಯದಲ್ಲಿರುವ ವಿಭಾಗಗಳು

ಬದಲಾಯಿಸಿ
  1. ಭಾಷಾಂತರ ಅಧ್ಯಯನ ವಿಭಾಗ
  2. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
  3. ಕನ್ನಡ ಭಾಷಾಧ್ಯಯನ ವಿಭಾಗ
  4. ದ್ರಾವಿಡ ಸಂಸ್ಕೃತಿ ವಿಭಾಗ
  5. ಹಸ್ತಪ್ರತಿ ವಿಭಾಗ
  6. ಮಹಿಳಾ ಅಧ್ಯಯನ ವಿಭಾಗ

ಸಮಾಜ ವಿಜ್ಞಾನ ನಿಕಾಯದಲ್ಲಿರುವ ವಿಭಾಗಗಳು

ಬದಲಾಯಿಸಿ
  1. ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗ
  2. ಚರಿತ್ರೆ ವಿಭಾಗ
  3. ಜಾನಪದ ಅಧ್ಯಯನ ವಿಭಾಗ
  4. ಬುಡಕಟ್ಟು ಅಧ್ಯಯನ ವಿಭಾಗ
  5. ಅಭಿವೃದ್ಧಿ ಅಧ್ಯಯನ್ ವಿಭಾಗ

ಲಲಿತಕಲಾ ನಿಕಾಯದಲ್ಲಿರುವ ವಿಭಾಗಗಳು

ಬದಲಾಯಿಸಿ
  1. ಸಂಗೀತ ವಿಭಾಗ
  2. ದೃಶ್ಯಕಲಾವಿಭಾಗ
  3. ಶಿಲ್ಪಕಲಾ ವಿಭಾಗ

ಅಧ್ಯಯನ ಕೇಂದ್ರಗಳು

ಬದಲಾಯಿಸಿ
  1. ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ
  2. ಮಹಿಳಾ ಅಧ್ಯಯನ ಕೇಂದ್ರ, ಹಂಪಿ
  3. ಭಾಷಾಂತರ ಕೇಂದ್ರ, ಹಂಪಿ
  4. ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲ ಸಂಗಮ

ನೀಡಲಾಗುವ ಪ್ರಶಸ್ತಿಗಳು

ಬದಲಾಯಿಸಿ

ಕನ್ನಡ ವಿಶ್ವವಿದ್ಯಾಲಯವು ಕನ್ನಡದಲ್ಲಿ ಸೇವೆ ಸಲ್ಲಿಸಿದ ಮಹನೀಯರುಗಳಿಗೆ ಈ ಕೆಳಕಂಡ ಪ್ರಶಸ್ತಿ, ಪದವಿಗಳನ್ನು ನೀಡುತ್ತಾ ಬಂದಿದೆ.

  1. ನಾಡೋಜ ಪ್ರಶಸ್ತಿ
  2. ಡಿ ಲಿಟ್ ಪದವಿ

ಇತರೆ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2019-07-17. Retrieved 2019-07-17.


ಉಲ್ಲೇಖ

ಬದಲಾಯಿಸಿ