ತೀ. ನಂ. ಶ್ರೀಕಂಠಯ್ಯ

ಭಾರತೀಯ ಲೇಖಕ, ವಿದ್ವಾಂಸ

ಪ್ರೊಫೆಸರ್ ತೀ. ನಂ. ಶ್ರೀಕಂಠಯ್ಯ (ನವೆಂಬರ್ ೨೬, ೧೯೦೬ - ಸೆಪ್ಟೆಂಬರ್ ೭, ೧೯೬೬) ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು,

ತೀ. ನಂ. ಶ್ರೀಕಂಠಯ್ಯ
ತೀ.ನಂ.ಶ್ರೀ.
ಜನನನವೆಂಬರ್ ೨೬, ೧೯೦೬
ತುಮಕೂರು ಜಿಲ್ಲೆಯ ತೀರ್ಥಪುರ
ಮರಣಸೆಪ್ಟೆಂಬರ್ ೭, ೧೯೬೬
ವೃತ್ತಿಪ್ರಾಧ್ಯಾಪಕರು, ಸಾಹಿತಿಗಳು
ಪ್ರಮುಖ ಪ್ರಶಸ್ತಿ(ಗಳು)ಪಂಪ ಪ್ರಶಸ್ತಿ (1988)

ಕನ್ನಡದ ದಿಗ್ಗಜರಲ್ಲಿ ಮೂವರು ‘ಶ್ರೀ’ ಗಳು ಪ್ರಸಿದ್ಧರು. ತಮ್ಮ ಸತ್ವದಿಂದ, ಸಾಮರ್ಥ್ಯದಿಂದ, ಪ್ರತಿಭೆಯಿಂದ, ವಿದ್ವತ್ತಿನಿಂದ ಕನ್ನಡ ನಾಡು-ನುಡಿಗಳನ್ನು ಶ್ರೀಮಂತಗೊಳಿಸಿದ ಈ ಮೂವರು ‘ಶ್ರೀ’ ಗಳಲ್ಲಿ ತೀ.ನಂ.ಶ್ರೀ ಅವರೂ ಒಬ್ಬರು. ಕನ್ನಡದ ಕಣ್ವ, ಕಣ್ಮಣಿಗಳೆಂದು ಹೆಸರಾದ ಬಿ.ಎಂ.ಶ್ರೀ ಮತ್ತು ಎಂ.ಆರ್.ಶ್ರೀ ಅವರಂತೆಯೇ ತೀ.ನಂ.ಶ್ರೀ ಅವರೂ ‘ಕನ್ನಡ ಕಳಶ’ವನ್ನು ಬೆಳಗಿದ ಕೀರ್ತಿ ಪಡೆದವರು.

ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು. ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ. "ಒಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ ಸಂಕಲನವಾಗಿದ್ದು, ಕೆ.ಎಸ್.ನರಸಿಂಹಸ್ವಾಮಿ ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ ಸಂಕಲನಗಳಲ್ಲೊಂದು. ರಾಕ್ಷಸನ ಮುದ್ರಿಕೆ ವಿಶಾಖ ದತ್ತನ ಮುದ್ರಾರಾಕ್ಷಸ, ನಾಟಕದ ಯಶಸ್ವಿ ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ.

ಚಿಕ್ಕನಾಯಕನಹಳ್ಳಿ ವಿಜಯನಗರ ಸಾಮ್ರಾಜ್ಯ ಒಡೆದ ಮೇಲೆ ತಲೆ ಎತ್ತಿಕೂಂಡ ಪಾಳೆಯ ಪಟ್ಟುಗಳಲ್ಲಿ ಒಂದಾದ ಹಾಗಲವಾಡಿಯ ಚರಿತ್ರೆಯ ಮೂಲಕ ಪರಿಚಿತವಾಗಿದೆ. ಚಿಕ್ಕನಾಯಕನ ಹಳ್ಳಿಯ ಪೂರ್ವಕ್ಕೆ ಸುಮಾರು 17 ಮೈಲಿ ದೂರವಿದ್ದ ಹಾಗಲವಾಡಿ ಹಾಳಾದ ನಂತರ ಆ ಸಂಸ್ಥಾನದ ಮಂತ್ರಿಯಾಗಿದ್ದ ಬ್ರಾಹ್ಮಣ ಕುಟುಂಬದವರು ಬಂದು ತೀರ್ಥಪುರದಲ್ಲಿ ನೆಲಸಿದರಂತೆ. ಇವರೇ ತೀ.ನಂ ಶ್ರೀ ಅವರ ಪೂರ್ವಜರು.

ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರವೆಂಬ, ಸಾಧಾರಣ ಹಳ್ಳಿಯ ಶ್ಯಾನುಭೋಗರ ಮಗನಾಗಿ, ೧೯೦೬ ರಲ್ಲಿ, ಜನಿಸಿದರು. ಇದು ಹಳ್ಳಿಯಾದಾಗ್ಯೂ, ಐತಿಹಾಸಿಕ ಸ್ಥಳವೆಂದು ಪ್ರಸಿದ್ಧಿಯಾಗಿತ್ತು. ವಿಜಯನಗರ ಸಾಮ್ರಾಜ್ಯ ಒಡೆದಮೇಲೆ, ತಲೆಯೆತ್ತಿಕೊಂಡ ಹಲವಾರು ಪಳೆಯಪಟ್ಟುಗಳಲ್ಲಿ ಒಂದಾದ ಹಾಗಲವಾಡಿ, ಚರಿತ್ರೆಯಮೂಲಕ ಚಿರಪರಿಚಿತವಾದ ಜಾಗ. ಇದು, ಚಿಕ್ಕನಾಯಕನಹಳ್ಳಿಯ ಪೂರ್ವಕ್ಕೆ, ಸುಮಾರು ೧೭ ಮೈಲಿ ದೂರದಲ್ಲಿದ್ದ ಹಾಗಲವಾಡಿ, ನೆಲಕಚ್ಚಿದಾಗ ಆಸ್ಥಾನಮಂತ್ರಿ ಬ್ರಾಹ್ಮಣರು ; ಬಡವರು. ತೀರ್ಥಪುರಕ್ಕೆ ವಲಸೆಬಂದು, ನೆಲೆಸಿದವರಲ್ಲಿ , ತೀ. ನಂ. ಶ್ರೀಯವರ ಪೂರ್ವಜರೂ ಇದ್ದರೆಂದು ಇತಿಹಾಸಕಾರರು ದಾಖಲು ಮಾಡಿದ್ದಾರೆ. ತಂದೆ, ನಂಜುಂಡಯ್ಯ. ತಾಯಿ, ಭಾಗೀರಥಮ್ಮ. ಶ್ರೀಕಂಠಯ್ಯನವರು. ೯ ನೆಯವಯಸ್ಸಿನಲ್ಲಿದ್ದಾಗಲೇ ತಾಯಿಯವರು ತೀರಿಕೊಂಡರು. ಈ ಅನಾಥ ಬಾಲಕನ ಲಾಲನೆ-ಪಾಲನೆಯನ್ನು ಅವರ ಸೊದರತ್ತೆ,(ವಿಧವೆ) ಮಾಡಿದರು. ಅವರ ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ ಕನ್ನಡದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆಯಿತು. ಪ್ರಾಥಮಿಕ ಶಾಲೆ ವ್ಯಾಸಂಗವನ್ನು ತುಮಕೂರು ಸರ್ಕಾರಿ ಕಾಲೇಜಿಯೇಟ್ ಮುಗಿಸಿದರು. ೧೯೨೩ ರಲ್ಲಿ ಎಂಟ್ರೆನ್ಸ್ ಪರೀಕ್ಷೆಗೆ ಕುಳಿತುಕೊಂಡರು. ಬಿ. ಎ. ಪದವಿಯನ್ನು ಪಡೆದರು. ಆಗ ಮೈಸೂರಿನ ಧೊರೆಯಾಗಿದ್ದ, ನಾಲ್ಮಡಿ ಕೃಷ್ಣರಾಜ ಒಡೆಯರ್ ರವರ ಕೈಗಳಿಂದ ೬ ಚಿನ್ನದ ಪದಕಗಳನ್ನು ಪಡೆದರು. ಅವರಿಗೆ 'ಕನ್ನಡದಲ್ಲಿ ಎಮ್.ಎ.' ಮಾಡುವ ಆಸೆ. ಆದರೆ, ಅದರ ವ್ಯವಸ್ಥೆ ಇರಲಿಲ್ಲ. ಅವರ ಮನೆಯಲ್ಲಿ ಎಲ್ಲೆಲ್ಲೂ ಓದು, ವಿದ್ಯಾರ್ಜನೆಯ ವಾತಾವರಣ ತುಂಬಿತ್ತು. ಅವರ ಮನೆಯ ಪುಸ್ತಕ ಭಂಡಾರದಲ್ಲಿ ೫,೦೦೦ ಪುಸ್ತಕಗಳಿದ್ದವು.

ಎಮ್.ಸಿ.ಎಸ್ ಪರೀಕ್ಷೆ ಮುಗಿಸಿ, ಶ್ರೀರಂಗಪಟ್ಟಣದಲ್ಲಿ, ಕಂದಾಯದ ಇಲಾಖೆಯಲ್ಲಿ ಪ್ರೊಬೇಷನರ್ ಪದವಿಗೆ ಸೇರಿದರು. ಈ ವ್ರತ್ತಿ ಅವರಿಗೆ ಸಮಾಧಾನ ಕೊಡಲಿಲ್ಲ. ಮೈಸೂರಿನ ಇಂಟರ್ ಮೀಡಿಯೇಟ್ ಕಾಲೇಜ್ ಗೆ ಸೇರಿದರು. ೧೯೨೬ ರಲ್ಲಿ, ಜಯಲಕ್ಷ್ಮೀ ಅವರನ್ನು ಮದುವೆಯಾದರು. ೧೯೨೯ ರಲ್ಲಿ ಇಂಗ್ಲಿಷ್ ಎಂ.ಎ ನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮಹಾರಾಜ ಕಾಲೇಜ್ ನಲ್ಲಿ ಉಪ-ಪ್ರಾಧ್ಯಾಪಕ ಕೆಲಸ ಸಿಕ್ಕಿತು. ಅದೇ ಸಮಯದಲ್ಲಿ ತಂದೆಯವರು ನಿಧನರಾದರು. ಪ್ರಥಮ ಕೃತಿ 'ಒಲುಮೆ' ಪ್ರಕಟ. ೧೯೩೧ ರಲ್ಲಿ ಮಗಳು ನಾಗರತ್ನ,ಜನಿಸಿದಳು . ೧೯೩೨ ರಲ್ಲಿ ಎಂ.ಎ.ಕನ್ನಡ ಶುರುವಾಯಿತು. ಆನಂತರದಲ್ಲಿ ಹುಟ್ಟಿದ ೨ ಗಂಡುಮಕ್ಕಳು, ಶೈಶವದಲ್ಲೇ ಮರಣ ಹೊಂದಿದರು. ೧೯೪೨ ರಲ್ಲಿ ಮಗ, ನಾಗಭೂಷಣನ ಜನನ. ಆ ಹೊತ್ತಿನಲ್ಲೇ ತೀ.ನಂ.ಶ್ರೀ ಯವರ ಸಹೋದರಿ ಮರಣಹೊಂದಿದರು.೧೯೪೩ ರಲ್ಲಿ, ಅವರನ್ನು ಸಾಕಿ-ಸಲಹಿದ ಸೊದರತ್ತೆ, ಲಕ್ಷೀದೇವಮ್ಮನವರು ನಿಧನರಾದರು.

ನೌಕರಿ, ಹಲವಾರು ನಗರಗಳಲ್ಲಿ

ಬದಲಾಯಿಸಿ

ಇಂಟರ್ಮೀಡಿಯೇಟ್ ಕಾಲೇಜ್ ಬೆಂಗಳೂರಿಗೆ ವರ್ಗ. ಮತ್ತೆ, ೧೯೫೭ ರಲ್ಲಿ ಮೈಸೂರು. ಮೈಸೂರು ಸಂವಿಧಾನ ಪರಿಷತ್ ನಲ್ಲಿ ಭಾಷಾಂತರಕಾರರಾಗಿ. ದಾವಣಗೆರೆ ಕಾಲೇಜ್ ನಲ್ಲಿ ಸೂಪೆರಿನ್ಟೆಂಡೆಂಟ್ ಆಗಿ, ಕೋಲಾರ ಕಾಲೇಜ್, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ. ಮೈಸೂರು ಮಹಾರಾಜ ಕಾಲೇಜ್ ಕನ್ನಡ ಪ್ರೊಫೆಸರ್ ಆಗಿ ನಿಯುಕ್ತರಾದರು.ಸಾಹಿತ್ಯೋಪಾಸನೆಗೆ ತಮ್ಮನ್ನು ತೆತ್ತುಕೊಂಡಿದ್ದರಿಂದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಮೂರನೇಯ ಸ್ಥಾನ ಮಾತ್ರ ದೊರೆಯಿತಾದರೂ ಅದರಿಂದ ಕಂದಾಯ ಇಲಾಖೆಯ ಪೋಬೆಷ್‍ನಲ್ ಹುದ್ದೆ ಸಿಕ್ಕಿ ಶ್ರೀರಂಗಪಟ್ಟಣಕ್ಕೆ ನೌಕರಿಯ ಮೇಲೆ ಹೋಗಬೇಕಾಯಿತು. ಆದರೆ ಎರಡೇ ತಿಂಗಳಲ್ಲಿ ಅದನ್ನು ತ್ಯಜಿಸಿ ಮೈಸೂರಿನ ಇಂಟರ್‍ಮಿಡಿಯೇಟ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ಹಿಂದಕ್ಕೆ ಬಂದರು. 1929ರಲ್ಲಿ ಪರೀಕ್ಷೆಗೆ ಕುಳಿತು ಇಂಗ್ಲೀಷ್ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದರು, ಅಲ್ಲದೆ ತಮ್ಮ ಪ್ರೀತಿಯ ಮಾತೃ ಸಂಸ್ಥೆ ಮಹಾರಾಜ ಕಾಲೇಜಿಗೆ ವರ್ಗವೂ ಆಯಿತು. ಅದೇ ವರ್ಷ ತಮ್ಮ ತಂದೆಯನ್ನು ಕಳೆದುಕೊಂಡ ದೌರ್ಭಾಗ್ಯವೂ ಅವರದಾಯಿತು. ಅಷ್ಟರಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ ವ್ಯಾಸಂಗವೂ ಪ್ರಾರಂಭವಾದುದರಿಂದ ಅಧ್ಯಾಪಕ ವೃತ್ತಿಗೆ ಕನ್ನಡ ಎಂ.ಎ ಪರೀಕ್ಷೆಗೂ ವ್ಯಾಸಂಗ ಮಾಡಿ 1930ರಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಪದವಿ ಪ್ರಧಾನ ಸಮಾರಂಭದಲ್ಲಿ ಮೂರು ಸುವರ್ಣ ಪದಕಗಳು ಬಂದವು. 1936ರಲ್ಲಿ ಬಿ.ಎ ಪರೀಕ್ಷೆ ಇನ್ನು ಒಂದು ತಿಂಗಳಿದೆ ಎನ್ನುವಾಗ ತೀ.ನಂ.ಶ್ರೀ ಯವರಿಗೆ ಜಯಲಕ್ಷಿ ಅವರೊಂದಿಗೆ ಮದುವೆ ಆಯಿತು. ವಧು ತಾಲೂಕು ಕೇಂದ್ರ ತುರುವೇಕೆರೆಯವರು. ಬಾಲ್ಯ ವಿವಾಹವೆಂದೇ ಎನ್ನಬಹುದಾದ ಇದರಿಂದ ಅವರ ಓದು ಸಾಹಿತ್ಯಾಭ್ಯಾಸಿಗಳಿಗೆ ಧಕ್ಕೆಯೇನು ಆದಂತೆ ಕಾಣಲಿಲ್ಲ. ಅವರ ಹಿರಿಯ ಮಗಳು 1931ರಲ್ಲಿ ಹುಟ್ಟಿದಳು. 1932ರಲ್ಲಿ ಅವರ ಪ್ರಥಮ ಕೃತಿ ‘ಓಲುಮೆ’ ಪ್ರಕಟವಾಯಿತು. 1936ರಲ್ಲಿ ಎರಡನೇಯ ಮಗಳು ನಾಗರತ್ನನ, 1942ರಲ್ಲಿ ಮಗ ನಾಗಭೂಷಣ್ ಜನಿಸಿದರು. ಈ ಅವಧಿಯಲ್ಲೇ ಅವರಿಗೆ ಎರಡು ಗಂಡು ಮಕ್ಕಳು ಜನಿಸಿ ಶೈಶವದಲ್ಲಿ ತೀರಿಕೊಂಡಿದ್ದವು. ಇದ್ದ ಒಬ್ಬಳೆ ತಂಗಿ ಸಾವಿತ್ರಮ್ಮ ಗುಣ ಹೊಂದದೆ ಮಾನಸಿಕ ಅಸ್ವಸ್ಥತೆಯಿಂದ ನರಳುತಿದ್ದರು. 1943ರಲ್ಲಿ ತೀ.ನಂ.ಶ್ರೀ ಅವರಿಗೆ ಉಪ ಪ್ರಾಧ್ಯಾಪಕರಾಗಿ ಭಡ್ತಿ ದೊರೆತ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ ಅವರ ಸೋದರತ್ತೆ ಲಕ್ಷೀದೇವಮ್ಮನವರು ತೀರಿಕೊಂಡರು. ಅನಂತರ ನಾಲ್ಕು ತಿಂಗಳಲ್ಲೆ ಹಿರಿಯ ಮಗಳು ವಿಶಾಲಾಕ್ಷಿ ತನ್ನ 12 ವಯಸ್ಸಿನಲ್ಲಿ ತೀರಿಕೊಂಡಳು ಹೀಗಾಗಿ ಅವರ ಬದುಕಿನ ತಕ್ಕಡಿ ಸುಖಕ್ಕಿಂತಲೂ ದುಃಖದ ಕಡೆಗೆ ಹೆಚ್ಚು ತೂಗಿದಂತೆ ಕಾಣುತ್ತದೆ. 1943ರಲ್ಲಿ ಉಪಪ್ರಾಧ್ಯಾಪಕರಾಗಿ ದೊರೆತ ಬಡ್ತಿಯ ಜೊತೆಗೆ ಅವರಿಗೆ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿಗೆ ವರ್ಗವೂ ಆಯಿತು. ಮತ್ತೆ ಅವರು 1957ರ ವರೆಗೆ ಮೈಸೂರಿಗೆ ಹಿಂತಿರುಗುವುದಾಗಲಿಲ್ಲ. ಬೆಂಗಳೂರಿನಲ್ಲಿ ಪ್ರೋ. ಮೂರ್ತಿರಾವ್ ಮತ್ತು ಪೂ.ತಿ.ನರಸಿಂಹಾಚಾರ್ ಅವರುಗಳ ಜೊತೆ ಸಿಕ್ಕಿತು. ಮಾಸ್ತಿ ಅವರಂತಹ ಲೇಖಕರ ಹತ್ತಿರ ಸಂಪರ್ಕ, ಸ್ನೇಹಗಳು ದೊರೆತವು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳೇ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಉಂಟಾಯಿತು. ಈ ನಡುವೆ 1948ರ ನವೆಂಬರ್‍ನಿಂದ 1950ರ ಜನವರಿವರೆಗೆ ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಅವರು ಭಾಷಾಂತಕಾರರಾಗಿ ಕೆಲಸ ಮಾಡಿದರು. 1948 ಮತ್ತು 1950ರಲ್ಲಿ ಎರಡು ಸಲ ಕೆಲವೇ ತಿಂಗಳು ಕಾಲ ದಾವಣಗೆರೆಯ ಕಾಲೇಜಿನಲ್ಲಿ ಸೂಪರ್ ಇಂಟಿಂಡೆಮಟ್ ಆಗಿ ಕೆಲಸ ಮಾಡಿ ಬರಬೇಕಾಯಿತು. 1951ರಲ್ಲಿ ಕೆಲವು ತಿಂಗಳುಗಳ ಕಾಲ ಕೋಲಾರ ಕಾಲೇಜಿನ ಸೂಪರ್ ಇಂಟಿಂಡೆಮಟ್‍ಆಗಿ ಇದ್ದು ಬಂದರು. 1952ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ತೀನಂಶ್ರಿ ಅವರ ಸೇವೆಯನ್ನು ಎರವಲಾಗಿ ಪಡೆಯಿತು. ಕರ್ನಾಟಕ ವಿಶ್ವವಿದ್ಯಾನಿಲಯದ ಪಥಮ ಕನ್ನಡ ಪ್ರಾಧ್ಯಾಪಕರಾಗಿ ಅಲ್ಲಿಗೆ ಹೋದವರು ಕನ್ನಡ ಅಧ್ಯಯನಕ್ಕೆ ಬೇಕಾದ ತಳಹದಿಯನ್ನು ಹಾಕಿದರು. ಆಗ ಕನ್ನಡ ಎಂ.ಎ ಓದುವ ವಿದ್ಯಾರ್ಥಿಗಳ ಕೊರತೆ ಇದ್ದಿತಾದರೂ ಆ ಅವಧಿಯಲ್ಲಿ ಅವರ ಶಿಶ್ಯರಾಗಿದ್ದ ಕೆಲವರು ಈಗ ಭಾಷಾ ವಿಜ್ಞಾನಿಗಳಾಗಿದ್ದಾರೆ. ಪ್ರಸಿದ್ಧ ಲೇಖಕರೂ ಆಗಿದ್ದಾರೆ. ಧಾರವಾಡದ ಅವರ ಸೇವೆಯ ಅವಧಿ ಇನ್ನೂಂದು ಕಾರಣಕ್ಕೆ ಮುಖ್ಯವಾಯಿತು. ಪೂಣೆಯ ಡೆಕೆನ್ ಕಾಲೇಜಿನ ಭಾಷಾ ವಿಜ್ಞಾನ ಪೀಠದೊಂದಿಗೆ ಅವರಿಗೆ ಸಂಪರ್ಕ ಬೆಳೆಯಿತು. ಆ ಸಂಸ್ಥೆ ನಡೆಯುತ್ತಿದ್ದ ಭಾಷಾ ಶಾಸ್ತ್ರದ ಬೇಸಿಗೆಯ ಶಾಲೆಯಲ್ಲಿ ಅಧ್ಯಾಪಕರಾಗಿ ಭಾಗವಹಿಸಿದರು. ಪ್ರಸಿದ್ಧರಾದ ಪ್ರಾಚ್ಯ ಮತ್ತು ಪಾಶ್ಚಾತ್ಯ ಭಾಷಾ ವಿಜ್ಞಾನಿಗಳಾದ ಡಾ. ಸುನೀತ್ ಕುಮಾರ್ ಚಟರ್ಜಿ, ಕ್ಯಾಲಿಫೂರ್ನಿಯಾ ವಿವಿ ನಿಲಯದ ಡಾ. ಎಂ.ಬಿ ಎಮೆನೊ ಮೊದಲಾದವರ ಪರಿಚಯ ಸ್ನೇಹಗಳು ಅಲ್ಲಿ ದೊರೆತವು.

ವಿದೇಶ ಪ್ರವಾಸ

ಬದಲಾಯಿಸಿ

ಅಮೇರಿಕಾದ ರಾಟ್ ಫೆಲಾರ್ ಪ್ರತಿಷ್ಠಾಬದ ವೇತನದ ಮೇಲೆ ಅಧ್ಯಯನಕ್ಕಾಗಿ ತೀ.ನಂ.ಶ್ರೀ ಅವರಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯಿತು. 1955-56ರಲ್ಲಿ 8 ತಿಂಗಳ ಕಾಲ ಆಮೇರಿಕಾದ ಮಿಶಿಗನ್ ಮತ್ತು ಪೆನ್ಸಿಲ್ವೇನಿಯ ವಿವಿ ನಿಲಯಗಳಲ್ಲಿ ಅಧ್ಯಾಯನ ಮಾಡಿ ಬಿಡುವಿನ ವೇಳೆಯಲ್ಲಿ ಆಮೇರಿಕಾದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರು. ಒಂದು ತಿಂಗಳು ಇಂಗ್ಲೆಂಡಿನಲ್ಲಿ ಕಳೆದು, ಫ್ರಾನ್ಸ್, ಇಟಲಿ ಮೊದಲಾದ ಯುರೋಪಿನ ರಾಷ್ಟ್ರಗಳಲ್ಲಿ ಒಂದು ತಿಂಗಳು ಪ್ರವಾಸ ಮಾಡಿ ಸ್ವದೇಶಕ್ಕೆ ಮರಳಿದರು. ಧಾರವಾಡದಲ್ಲಿ ಅವರ ಸೇವೆಯ ಅವಧಿ ಮುಗಿದು 1957ರ ಜನವರಿಯಲ್ಲಿ ಶ್ರೀಕಂಠಯ್ಯ ನವರು ಮೈಸೂರಿನ ಮಹಾರಾಜ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಹಿಂದಿರುಗಿದರು. ಅವರು ಮತ್ತೆ ಮಹಾರಾಜ ಕಾಲೇಜಿಗೆ ಬಂದಿದ್ದರಿಂದ ಅಲ್ಲಿನ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳ ಮೈಯಲ್ಲಿ ನವಚೈತನ್ಯ ಹರಿಯಿತು. ಆಗ ತಾನೆ ಡಾ. ಕೆ.ವಿ ಪುಟ್ಟಣ್ಣಪ್ಪನವರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ ಮೈಸೂರು ವಿವಿ ನಿಲಯದ ಉಪ ಕುಲಪತಿಯ ಸ್ಥಾನಕ್ಕೇರಿದರು. ಕನ್ನಡದ ಮುಖ್ಯಸ್ಥರ ಸ್ಥಾನ ಶ್ರೀಕಂಠಯ್ಯವನರಿಗೆ ತೆರವಾಗಿತ್ತು. ತೀನಂಶ್ರೀ ಅವರು ವಿವಿ ನಿಲಯಕ್ಕೆ ಮರಳಿದುದರಿಂದ ಆದ ಸಂತೋಷವನ್ನು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಓಲಗದ ಸ್ವಾಗತದಲ್ಲಿ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಪಾಠ ಹೇಳುತ್ತಾ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸುತ್ತಾ ಮೂರು ವರ್ಷಗಳು ಕಳೆದು ಕನ್ನಡ ನಿಘಂಟಿನ ಮೊದಲ ಪುಟಗಳ ಮಾದರಿ ಈ ಅವಧಿಯಲ್ಲಿ ಪ್ರಕಟವಾಯಿತು. ಅಷ್ಟರಲ್ಲಿ ಪದವಿ ತರಗತಿಗಳಿಂದ ಸ್ನಾತಕೊತ್ತರ ಅಧ್ಯಯನ ಸಂಶೋಧನ ವಿಭಾಗಗಳನ್ನು ಪ್ರತ್ಯೇಕಿಸುವ ಯೋಜನೆಯ ಅನ್ವಯ ಮಾನಸ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮೊದಲ ಪ್ರಾಧ್ಯಾಪಕರಾಗಿ ತೀನಂಶ್ರೀ ಅವರು ಮಹಾರಾಜ ಕಾಲೇಜಿನಲ್ಲಿ ಇದ್ದ ಸ್ನಾತಕೋತ್ತರ ವಿಭಾಗವನ್ನು ಮಾನಸ ಗಂಗೋತ್ರಿಗೆ ಸಾಗಿಸಿಕೊಂಡು ಹೋದರು. ಅಲ್ಲಿ ಕನ್ನಡ ಅಧ್ಯಯನ ಕೇಂದ್ರದ ತಳಹದಿಯನ್ನು ಭದ್ರ ಮಾಡಿ 62ನೇ ಮಾರ್ಚ್ ತಿಂಗಳ ಅಂತ್ಯದಲ್ಲಿ, ಮೂವತ್ನಾಲ್ಕು ವರ್ಷಗಳ ಸೇವೆಯ ನಂತರ ತೀನಂಶ್ರೀ ನಿವೃತ್ತರಾದರು. ಆದರೆ ಅವರಿಗೆ ಬಿಡುವು ಸಿಕ್ಕಲಿಲ್ಲ. ಯುಜಿಸಿ ಪ್ರಾಧ್ಯಾಪಕರಾಗಿ ಅಧ್ಯಯನ ಕೇಂದ್ರದಲ್ಲಿ ಕೆಲಸವನ್ನು ಮುದುವರೆಸುವುದರ ಜೊತೆಗೆ ಕನ್ನಡ ನಿಘಂಟಿನ ಕೆಲೆಸದಲ್ಲಿ ತಮ್ಮ ಬಹು ಮಟ್ಟಿನ ವೇಳೆಯನ್ನು ಕಳೆದರು. 1958ರಲ್ಲಿ ಅವರು ನಿಘಂಟು ಸಮಿತಿಯ ಅಧ್ಯಕ್ಷರೂ ಆಗಿದ್ದರು. 1962ರಲ್ಲಿ, ತಾವು ನಿವೃತ್ತಿ ಹೊಂದಿದ ವರ್ಷ ಮೈಸೂರಿನಲ್ಲಿ ಸಿಐಟಿಬಿ ಮೂಲಕ ಮನೆಯೊಂದನ್ನು ಕೊಂಡು ಕೊಂಡರು.

ಮೈಸೂರಿನ, ಓರಿಯೆಂಟಲ್ ರಿಸರ್ಚ್ ಶಾಖೆಯಲ್ಲಿ

ಬದಲಾಯಿಸಿ

ತೀ.ನಂ.ಶ್ರೀ ಯವರ ಜೊತೆಗೆ ದುಡಿದ ಗೆಳೆಯರು, ಪ್ರೊ. ಡಿ.ಎಲ್.ನರಸಿಂಹಾಚಾರ್,ಕಸ್ತೂರಿ ರಂಗಚಾರ್, ಮುಂತಾದವರುಗಳು. ಅಲ್ಲಿನ ಅಪಾರ ಗ್ರಂಥಗಳನ್ನು ವಿಂಗಡಿಸಿ, ೧. ಕನ್ನಡಭಾಷೆಯ ಬೈಬ್ಲಿಯೋಥಿಕ, ಹಾಗೂ, ೨. ಸಂಸ್ಕ್ರತ ಭಾಷೆಯ ಬೈಬ್ಲಿಯೋಥಿಕ ಗಳನ್ನು,ಒಂದುಕಡೆ ಶೇಖರಿಸಿಟ್ಟರು. ಈ ಅಮೂಲ್ಯ ಗ್ರಂಥ ರಾಶಿಯಿಂದ, ಪ್ರೊ. ಆರ್.ಶ್ಯಾಮಾಶಾಸ್ತ್ರಿಗಳು, ಕೌಟಿಲ್ಯನ ಅರ್ಥಶಾಸ್ತ್ರವನ್ನು ಹುಡುಕಿ, ಸಂಪಾದಿಸಿ ಪ್ರಕಟಿಸಿದರು. ಓರಿಯೆಂಟಲ್ ಗ್ರಂಥಾಲಯವನ್ನು, ೧೯೧೮ ರಲ್ಲೇ ಸ್ಥಾಪಿಸಲಾಯಿತು. (ಮೈಸೂರು ವಿಶ್ವವಿದ್ಯಾನಿಲಯ, ೧೯೧೬ ರಲ್ಲಿ ಸ್ಥಾಪನೆಗೊಂಡಿತು.) ಗ್ರಂಥಾಲಯದ ಸಮಿತಿಯಲ್ಲಿ, ಅವರಜೊತೆಗೆ, ಪ್ರೊ.ಸಿ.ಆರ್.ರೆಡ್ಡಿ,, ಪ್ರೊ ಎಮ್.ಹಿರಿಯಣ್ಣ, ಎನ್. ರಂಗಾಚಾರ್ಯ, ಮುಂತಾದವರುಗಳು ಸಹಾಯಕರಾಗಿ ದುಡಿಯುತ್ತಿದ್ದರು. ೧೯೪೩ ರಲ್ಲಿ, ತೀ.ನಂ.ಶ್ರೀ ಯವರನ್ನು ಛೇರ್ಮನ್ ಆಗಿ ನಿಯುಕ್ತಿಸಲಾಯಿತು. ಮಾನಸ ಗಂಗೋತ್ರಿ, ಕನ್ನಡ ಅಧ್ಯಯನ ಕೇಂದ್ರಕ್ಕೆ ಅವರು ಭದ್ರವಾದ ತಳಪಾಯ ಹಾಕಿಕೊಟ್ಟರು. ೧೯೫೮ ರಲ್ಲಿ ನಿಘಂಟು ಸಮಿತಿಯಲ್ಲಿ ಅಧ್ಯಕ್ಷರಾದರು.

ಸಾಹಿತ್ಯಾಧ್ಯಯನದಲ್ಲೇ ತಮ್ಮ ಜೀವನದ ಸರ್ವಸ್ವ

ಬದಲಾಯಿಸಿ

ಅವರು, 'ಕನ್ನಡದ ನವೋದಯ ಸಾಹಿತ್ಯದ ಆಚಾರ್ಯಪುರುಷರುಗಳಲ್ಲೊಬ್ಬರು'. ಅವರು ಬರೆಯದೆ ಹೋದದ್ದು ಹೆಚ್ಚು. ವಿಚಾರ, ವಿದ್ವತ್ತು, ಬಹುಶೃತತ್ವವನ್ನು, ಹೊಂದಿದ್ದರು. ಅವರ ಸಮಯ, ಸದಾ ಗೋಷ್ಠಿಗಳು, ಅಧ್ಯಾಪಕ ವೃತ್ತಿ, ನಿರಂತರ ಓದು, ಇವುಗಳಲ್ಲೇ ವ್ಯಯವಾಗುತ್ತಿತ್ತು. ಬರೆಯಲು ಸಮಯವೇ ಇಲ್ಲ. ಅವರ ಕೈನಿಂದ, ಕನ್ನಡ ಭಾಷಾ ಚರಿತ್ರೆ, ಎಂಬ ಅಮೋಘ ಕೃತಿ, ಬರಬೇಕಾಗಿತ್ತು. ಅತ್ಯಂತ ಕನ್ನಡಾಭಿಮಾನಿ, ಸದಾ ಚಿಂತನೆ, ಬೋಧನೆ. ಓದಿನ ಗೀಳು. ತೀ.ನಂ.ಶ್ರೀ.ಯವರ ಕೈಯಲ್ಲಿ, ಪುಸ್ತಕ ಕೊಟ್ಟರೆ ಸಾಕು; ನೀರು, ಅನ್ನ, ನಿದ್ರೆ, ಏನೂ ಬೇಡ.

"ಓದು ಬರಹಕ್ಕೆ ಶತೃ, ಮಾತು ಕೃತಿಗೆ ಶತೃ". ಇದು, ಪದೇ-ಪದೇ ತೀ.ನಂ.ಶ್ರೀ. ಯವರು ತಮ್ಮ ಗೆಳೆಯರು, ಹಾಗೂ ಅಪ್ತರಬಳಿ ಹೇಳುತ್ತಿದ್ದ ಮಾತುಗಳು. ಜಿ.ಎಸ್.ಎಸ್ ಅವರನ್ನು, "ಪರಿಪೂರ್ಣತೆಯ, ಅತೃಪ್ತ ಅನ್ವೇಷಕ", ಎನ್ನುತ್ತಿದ್ದರು.

ಸಾಹಿತ್ಯ ಸೇವೆ

ಬದಲಾಯಿಸಿ

ತೀ.ನಂ.ಶ್ರೀ ಅವರನ್ನು ನೆನೆಯುವವರಿಗೆ, ಮೂರು ಕ್ಷೇತ್ರಗಳಲ್ಲಿ ಅವರು ಅದ್ವಿತೀಯರಾಗಿ ನಿಲ್ಲುತ್ತಾರೆ. ಮೊದಲನೆಯದು, ಅವರು ಕನ್ನಡದಲ್ಲಿ ಬರೆದು ಬಿಟ್ಟು ಹೋದ ‘ಭಾರತೀಯ ಕಾವ್ಯ ಮೀಮಾಂಸೆ’ ಎಂಬ ಉದ್ಧಾಮ ಕೃತಿಯಲ್ಲಿ, ‘’No Indian Language has a book that can even distantly approach Bharatiya Kavya Meemamse” ಎಂದು ಪ್ರೊ. ಡಿ.ಎಲ್.ಎನ್ ಅವರು ಹೇಳಿದ್ದು ಸಮಂಜಸವಾಗಿದೆ. ಇದು ಹೊರ ಬಂದ ಕಾಲಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಇಂತಹ ಸಮಗ್ರ ಕೃತಿ ಇರಲಿಲ್ಲ. ಇದನ್ನು ಓದಿ ಮುಗಿಸಿದಾಗ ಭಾರತೀಯ ಕಾವ್ಯ ಮೀಮಾಂಸೆಯ ಜೊತೆಗೆ ಕನ್ನಡ ಸಾಹಿತ್ಯವನ್ನು ದಿಗ್ದರ್ಶನ ಮಾಡಿದ ಅನುಭವವಾಗುತ್ತದೆ. ಈ ಕೃತಿಗಾಗಿ ತೀ.ನಂ.ಶ್ರೀ ಅವರಿಗೆ ಮರಣೋತ್ತರವಾಗಿ ‘ಪಂಪ’ ಪ್ರಶಸ್ತಿ ನೀಡಲಾಗಿದೆ.

ಎರಡನೆಯದು, ಅವರು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಭಾಷಾ ವಿಜ್ಞಾನದ ಅಭ್ಯಾಸಕ್ಕೆ ಮಾಡಿದ ಪೂರ್ವ ಸಿದ್ಧತೆ ಮತ್ತು ಕನ್ನಡ ನಿಘಂಟಿಗೆ ನೀಡಿದ ಪರಿಶ್ರಮದ ಕಾಣಿಕೆ. ಮೂರನೆಯದು ಅವರು ಪ್ರಾಧ್ಯಾಪಕರಾಗಿ ಭಾಷಣಕಾರರಾಗಿ ಸಂಪಾದಿಸಿದ್ದ ಜನಾನುರಾಗ. ಜನಪ್ರಿಯತೆಗೆ ಸುಲಭವಾಗಿ ಅಂಟುವ ಪೊಳ್ಳುತನಕ್ಕೆ ಅವಕಾಶ ಮಾಡಿಕೊಡದೆ ಖ್ಯಾತರಾಗಿದ್ದವರು ಅವರು. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅವರು ಪ್ರಾಧ್ಯ್ಯಾಪಕರಾಗಿದ್ದಾಗ ಛಂದಸ್ಸು, ಕಾವ್ಯಮೀಮಾಂಸೆ ಮತ್ತು ಭಾಷಾ ಶಾಸ್ತ್ರ – ಮೂರನ್ನೂ ಅವರ ಬಾಯಲ್ಲಿಯೇ ಕೇಳಬೇಕು ಎಂದು ವಿದ್ಯಾರ್ಥಿಗಳು ಆಸೆ ಪಡುವಂಥ ಸ್ಥಿತಿ ಇತ್ತು. ಮೂರು ವಿಷಯಗಳಲ್ಲೂ ಅವರ ವಿದ್ವತ್ತು ಅದ್ವಿತೀಯವಾಗಿತ್ತು.

‘ಒಲುಮೆ’(೧೯೩೨) ತೀ.ನಂ.ಶ್ರೀ ಅವರ ಮೊಟ್ಟ ಮೊದಲ ಕೃತಿ. ಪಾಶ್ಚಾತ್ಯ ರಮ್ಯ ಸಂಪ್ರದಾಯದ ಕಾವ್ಯದಿಂದ, ಸಂಸ್ಕೃತ ಸಾಹಿತ್ಯದಲ್ಲಿನ ಮುಕ್ತಕಗಳಿಂದ ಪ್ರಭಾವಿತರಾಗಿ ಬಿ.ಎಂ.ಶ್ರೀ ಅವರ ‘ಇಂಗ್ಲೀಷ್ ಗೀತೆಗಳು’ ರಚನೆಯಿಂದ ಸ್ಫೂರ್ತಿ ಹೊಂದಿ ತೀ.ನಂ.ಶ್ರೀ ಅವರು ತಾರುಣ್ಯದಲ್ಲಿ ಬರೆದ ಕವಿತೆಗಳ ಸಂಕಲನ ಇದು. ಕೆ. ಎಸ್. ನರಸಿಂಹ ಸ್ವಾಮಿ ಮೊದಲಾಗಿ ಕನ್ನಡದ ಅನೇಕ ಕವಿಗಳಿಗೆ ಸ್ಪೂರ್ತಿಯ ಬಾಗಿಲನ್ನು ತೆರೆದ ಪದ್ಯಗಳು ಇದರಲ್ಲಿವೆ. ಓದಿದವರೆಲ್ಲ ಇಂಥ ಪದ್ಯಗಳು ಇನ್ನಷ್ಟು ಇರಬೇಕಾಗಿತ್ತು ಎಂದು ಆಸೆ ಪಡುವಂತೆ ಮಾಡಿದ ಅಪರೂಪದ ಪ್ರೇಮಗೀತೆಗಳ ಸಂಕಲನ ‘ಒಲುಮೆ’.

‘ನಂಟರು’ (ಮೊದಲ ಮುದ್ರಣ ೧೯೬೨) ತಡವಾಗಿ ಪ್ರಕಟವಾದ ಪ್ರಬಂಧಗಳ ಸಂಕಲನ. ತೀ.ನಂ.ಶ್ರೀ ಅವರು ‘ಪ್ರಬಂಧವೆನ್ನುವುದು ಮಂದಶೃತಿಯ ಭಾವಗೀತೆ’ ಎಂದು ತಿಳಿದಿದ್ದರು. ಇಲ್ಲಿನ ಪ್ರಬಂಧಗಳೆಲ್ಲ ಭಾವಗೀತೆಗಳಂತೆ ಮಿನುಗುವ ನುಡಿಚಿತ್ರಗಳಂತೆಯೇ ಇವೆ. ೧೯೭೦ರಲ್ಲಿ ಪ್ರಕಟವಾದ ‘ಬಿಡಿ ಮುತ್ತು’ ಅಮರ ಶತಕ ಮತ್ತು ಇತರ ಕೆಲವು ಪ್ರಸಿದ್ಧ ಸಂಸ್ಕೃತ ಸುಭಾಷಿತ ಸಂಕಲನಗಳಿಂದ ಆರಿಸಿದ ೨೧೫ ಮುಕ್ತಕಗಳ ಕನ್ನಡ ಅನುವಾದ. ಇಲ್ಲಿನ ಸುಂದರ ಸುಭಾಷಿತಗಳು ಕನ್ನಡಕ್ಕೆ ತೀ.ನಂ.ಶ್ರೀಯವರ ಒಂದು ವಿಶೇಷ ಕೊಡುಗೆ.

ತೀ.ನಂ.ಶ್ರೀ ಅವರಿಂದ ೧೯೪೨ರಲ್ಲಿ ಪ್ರಥಮ ಮುದ್ರಣಗೊಂಡ ‘ರಾಕ್ಷಸನ ಮುದ್ರಿಕೆ’ ವಿಶಾಖದತ್ತನ ಪ್ರಸಿದ್ಧವಾದ ಸಂಸ್ಕೃತ ನಾಟಕ ‘ಮುದ್ರಾರಾಕ್ಷಸ’ದ ರೂಪಾಂತರ. ಪ್ರೊ. ವೆಂಕಣ್ಣಯ್ಯನವರ ಸಲಹೆಯ ಮೇರೆಗೆ ಈ ಸುಂದರ ಕೃತಿಯನ್ನು ಕನ್ನಡಕ್ಕೆ ತಂದರು. ೧೯೩೯ರಲ್ಲಿ ‘ಕನ್ನಡ ಮಾಧ್ಯಮ ವ್ಯಾಕರಣ’ವನ್ನು ಪ್ರಕಟಿಸಿದರು. ಇದು ಹೊಸಗನ್ನಡ ಭಾಷೆಯ ಅಭ್ಯಾಸ ಮತ್ತು ಬೆಳವಣಿಗೆಗೆ ಪೂರಕವಾಗಿರಲೆಂದು ಉದ್ಧೇಶಿಸಿ ರಚಿತವಾದ ಗ್ರಂಥಗಳಲ್ಲಿ ಅತ್ಯಂತ ಜನಪ್ರಿಯ ಪುಸ್ತಕ. ೧೯೪೧ರಲ್ಲಿ ಪ್ರಕಟಿಸಿದ ‘ಹೆಣ್ಣು ಮಕ್ಕಳ ಪದಗಳು’ ತೀ.ನಂ.ಶ್ರೀ ಅವರು ಸಂಗ್ರಹಿಸಿದ ಜನಪದ ಗೀತೆಗಳ ಭಂಡಾರವಾಗಿದೆ. ೧೯೪೬ರಲ್ಲಿ ಪ್ರಕಟಿಸಿದ ‘ಹರಿಹರ ಕವಿಯ ನಂಬಿಯಣ್ಣ ರಗಳೆ’ ತೀನಂಶ್ರೀ ಅವರು ತಮ್ಮ ವಿದ್ವತ್ತು ಮತ್ತು ಗ್ರಂಥ ಸಂಪಾದನ ಶಾಸ್ತ್ರದ ಜ್ಞಾನಗಳನ್ನು ಧಾರೆಯೆರೆದು ಸಂಪಾದಿಸಿದ ಪ್ರಾಚೀನ ಕನ್ನಡ ಕಾವ್ಯ. ‘ರನ್ನ ಕವಿಯ ಗದಾಯುದ್ಧ ಸಂಗ್ರಹಂ’ ತೀ.ನಂ.ಶ್ರೀ ಸಂಪಾದಿಸಿದ ಇನ್ನೊಂದು ವಿದ್ವತ್ಪೂರ್ಣ ಕೃತಿ. ಅವರು ರಚಿಸಿದ ವಿಮರ್ಶಾ ಕೃತಿಗಳೆಂದರೆ ‘ಪಂಪ’, ‘ಕಾವ್ಯ ಸಮೀಕ್ಷೆ’, ‘ಸಮಾಲೋಕನ’ ಮತ್ತು ಕಾವ್ಯಾನುಭವ’. ಇಂಗ್ಲೀಷಿನಲ್ಲಿ ತೀ.ನಂ.ಶ್ರೀ ಅವರು ಬರೆದ ‘Imagination in Indian Poetics and Other Literary Papers’, ‘Affricates in Kannada Speech and Other Linguistic Papers’ ಅವರ ಬದುಕಿನ ಅವಧಿಯ ನಂತರದಲ್ಲಿ ಪ್ರಕಟಗೊಂಡಿವೆ.ಕಾವ್ಯ ಮೀಮಾಂಸೆ ಅಥವಾ ಭಾಷೆಯನ್ನು ಕುರಿತು ಅವರು ಬರೆಯಬಹುದಾಗಿದ್ದ ಇನ್ನೂ ಮಹತ್ವದ ಕೃತಿಗಳಿಗೆ ಬೇಕಾದ ಸಿದ್ದತೆ ಎಲ್ಲವೂ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳ ಹಸ್ತ ಪ್ರತಿಯಲ್ಲಿ ಉಳಿದುಹೋಗುವುದು ಅನಿವಾರ್ಯವಾಯಿತು. ತೀನಂಶ್ರೀ ಅವರನ್ನು ನೆನೆಯುವವರಿಗೆ ಮೂರು ಕ್ಷೇತ್ರಗಳಲ್ಲಿ ಅವರು ಅದ್ವಿತೀಯವಾಗಿ ನಿಲ್ಲುತ್ತಾರೆ. ಮೊದಲನೆಯದು ಅವರು ಕನ್ನಡದಲ್ಲಿ ಬರೆದು ಬಿಟ್ಟು ಹೋದ 'ಬಾರತೀಯ ಕಾವ್ಯ ಮೀಮಾಂಸೆ’ ಎಂಬ ಉದ್ಧಾಮ ಕೃತಿಯಲ್ಲಿ ಆ ವಿಷಯದಲ್ಲಿ ಅದನ್ನು ಮೀರಿಸುವಂತದ್ದು ಮುಂದೆ ಬಂದಿತೋ ಹೇಳಲಾಗುವುದಿಲ್ಲ. ಎರಡನೆಯದು ಅವರು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಭಾಷಾ ವಿಜ್ಞಾನದ ಅಭ್ಯಾಸಕ್ಕೆ ಮಾಡಿದ ಪೂರ್ವ ಸಿದ್ಧತೆ ಮತ್ತು ಕನ್ನಡ ನಿಘಂಟಿಗೆ ಅವರ ಪರಿಶ್ರಮದ ಕಾಣಿಕೆ. 1935ರ ಸುಮಾರಿನಿಂದ ಪ್ರಾರಂಭಿಸಿ ಅವರು ಅಲ್ಲಿ ಇಲ್ಲಿ ಬರೆದು ಮಂಡಿಸಿದ ಏಳೆಂಟು ಇಂಗ್ಲೀಷ್ ಲೇಖನಗಳು, ಎಂಟು ಹತ್ತು ಕನ್ನಡ ಲೇಖನಗಳು ಮತ್ತು ಗ್ರಂಥ ರೂಪದಲ್ಲಿ ಬಂದ’ ಕನ್ನಡ ಮಾಧ್ಯಮ ವ್ಯಾಕರಣ ಇವಿಷ್ಟರಿಂದಲೇ ಭಾಷಾಶಾಸ್ತ್ರದ ಅಭ್ಯಾಸಕ್ಕೆ ಅವರು ಒದಗಿಸಿದ ಪೂರ್ವ ಸಿದ್ಧತೆಯನ್ನು ನಿರ್ಣಯಿಸ ಬರುವುದಿಲ್ಲ. ಇದಲ್ಲದೇ ಭಾರತೀಯ ಭಾಷೆಗಳಿಗೆ ಶೀಘ್ರ ಲಿಪಿ, ತಾರೂ(ಟೆಲಿಗ್ರಾಫ್ ಯೋಜನೆ), ಏಕರೂಪದ ಲಿಪಿ ತತ್ವ ಇವುಗಳ ಆವಿಷ್ಕಾರಕ್ಕಾಗ ಭಾರತ ಸರ್ಕಾರದವರು ಹಾಕಿದ ಬೃಹತ್ ಯೋಜನೆಯ ಅಂಗವಾಗಿ ಕನ್ನಡದ ಧ್ವನಿಮಾ, ಆಕೃತಿಮಾಗಳ ಆಗಮನ ಸಂಖ್ಯಾ ಸಾಮರ್ಥ್ಯ ಯೋಜನೆಗೆ ಪುಣೆಯ ಡೆಕ್ಕನ್ ಕಾಲೇಜಿನ ಎಂ.ಆರ್ ರಂಗನಾಥ್ ಅವರನ್ನು ಒಪ್ಪಿಸಿ ಅದಕ್ಕೆ ಮಾರ್ಗದರ್ಶನವನ್ನು ಕೊಟ್ಟರು. ಎಂಟುನೂರು ಪುಟಗಳ ಒಂದು ಲಕ್ಷಕ್ಕೂ ಮಿಕ್ಕ ಪದಗಳಿಂದ ಕೂಡಿದ ಈ ಕೃತಿಪ್ರಕಟವಾದದಂದು ತೀನಂಶ್ರೀ ಅವರ ದೊಡ್ಡದೊಂದು ಕನಸು ನನಸಾಗಿ ಕನ್ನಡಿಗರಿಗೆ ದೊರೆಯಲಿದೆ. ಅವರು ಮೈಸೂರು ಸಂವಿಧಾನ ಪರಿಷತ್ತಿನಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡಿದಾಗ ಕನ್ನಡವನ್ನು ಆಡಳಿತ ಭಾಷೆಯಾಗಿ ಅಣಿಗೊಳಿಸುವ ಸಾಹಸಕ್ಕೆ ಸಾಕಷ್ಟು ಅಮೂಲ್ಯವಾದ ಕೊಡುಗೆಗಳನ್ನು ಕೊಟ್ಟಿರಬೇಕು. ತೀ.ನಂ.ಶ್ರೀ ಅವರ ಪ್ರತಿಭೆ, ವಿದ್ವತ್ತುಗಳು, ಅವರ ಆಸಕ್ತಿಯ ಪರಧೀಯೊಳಗೆ ಬರುವ ವಿಷಯಗಳು ಮತ್ತು ಜೀವಿತಾವಧಿಯಲ್ಲಿ ಅವರಿಗಿದ್ದ ಪ್ರಸಿದ್ಧಿಗಳನ್ನು ಪರಿಗಣಿಸಿದರೆ ಅವರು ಬರೆದ ಗ್ರಂಥಗಳ ಸಂಖ್ಯೆ ಕಡಿಮೆ ಎಂದೇ ಎಲ್ಲರ ಅಭಿಪ್ರಾಯ. ಅವರ ಹೆಸರಿನಲ್ಲಿ ಪ್ರಖಟವಾಗಿರುವ ಕೃತಿಗಳ ಸಂಖ್ಯೆ ಹದಿನಾಲ್ಕು ಮಾತ್ರ. ಅವುಗಳಲ್ಲಿ ಮೂರು ಅವರ ಮರಣ ನಂತರ ಪ್ರಕಟವಾದವು. ಇವಲ್ಲದೆ ಇಂಗ್ಲಿಷ್‍ನಲ್ಲಿ ಬರೆದ ಭಾಷೆ, ವ್ಯಾಕರಣ ಮತ್ತು ಸಾಹಿತ್ಯಗಳನ್ನು ಕುರಿತು ಬರೆದ ಸುಮಾರು ಹತ್ತೋಂಬತ್ತು ಲೇಖನಗಳು ಗ್ರಂಥ ರೂಪದಲ್ಲಿ ಬರೆದ ವಿವಿಧ ಕಡೆ ಚದುರಿಹೋಗಿವೆ. ಅಲ್ಲದೆ ಭಾಷಾಶಾತ್ರ ಕುರಿತ ಅವರ ಲೇಖನಗಳ ಸಂಗ್ರಹ ಅಚ್ಚೆಗೆ ಸಿದ್ದವಾಗಿದೆ ಎಂದು ತಿಳಿದುಬಂದಿದೆ. ಏಳೆಂಟು ಕನ್ನಡ ಲೇಖನಗಳು ಈಗ ಪ್ರಕಟವಾಗಿರುವ ಯಾವ ಸಂಗ್ರಹದಲ್ಲಿಯೂ ಸೇರದೆ ಉಳಿದುಕೊಂಡಿವೆ. ಗ್ರಂಥರೂಪದಲ್ಲಿ ಪ್ರಕಟವಾಗಿರುವ ಅವರ ಕೃತಿಗಳನ್ನು ಸ್ಥೂಲವಾಗಿ ಸೃಜನಾ, ಶಾಸ್ತ್ರ, ಸಂಪಾದನೆ ಮತ್ತು ವಿಮರ್ಶೆ ಎಂದು ನಾಲ್ಕು ವಿಧವಾಗಿ ಪರಿಶೀಲಿಸಬಹುದು. ಈ ವಿಭಾಗ ಕಾಲಾನುಕ್ರಮವಾಗಿ ಕಾಣದಿರಬಹುದು ಮತ್ತು ಶಾಸ್ತ್ರದೂಳಗೆ ವಿಮರ್ಶೆ, ವಿಮರ್ಶೆಯೊಳಗೆ ಶಾಸ್ರ್ತ ಬೆರೆಯಬಹುದು. ಸೃಜನ ‘ಒಲುಮೆ’ ಇದು ತೀ.ನಂ.ಶ್ರೀಯವರ ಮೊಟ್ಟ ಮೊದಲ ಕೃತಿ.

ತೀನಂಶ್ರೀ ಕೊಡುಗೆಗಳು

ಬದಲಾಯಿಸಿ

1940 ರಲ್ಲಿ ಭಾರತದ ಸಂವಿಧಾನ ಪರಿಷತ್ತಿನ ಅಧ್ಯಕ್ಷರು ಕರೆದಿದ್ದ ಭಾಷಾ ವಿಜ್ಞಾನಿಗಳ ಸಭೆಯ ಪ್ರತಿನಿಧಿಯಾಗಿ ಅವರು ಭಾರತ ದೇಶದ ಮುಖ್ಯಸ್ಥರಿಗೆ ಸೂಚಿಸಿದ ‘ರಾಷ್ಟ್ರಪತಿ' ಎಂಬ ಹೆಸರು ಅಂಗೀಕೃತವಾಯಿತು. 1957ರಲ್ಲಿ ದೆಹಲಿಯಲ್ಲಿ ನಡೆದ ಪ್ರಾಚ್ಯ ಸಮ್ಮೇಳನದ ದ್ರಾವಿಡ ಸಂಸ್ಕøತಿ ಗೋಷ್ಠಿಯ ಅಧ್ಯಕ್ಷರಾಗಿ, ಗದಗಿನಲ್ಲಿ ನಡೆದ ನಲ್ವತ್ಮೂರನೆಯ ಸಾಹಿತ್ಯ ಸಮ್ಮೇಳನದ ಭಾಷಾ ಬಾಂಧವ್ಯ ಗೋಷ್ಠಿಯ ಅಧ್ಯಕ್ಷರಾಗಿ, 1958 ರಲ್ಲಿ ಮೈಸೂರಿನಲ್ಲಿ ನಡೆದ ಭಾಷಾಶಾಸ್ತ್ರದ ಬೇಸಿಗೆ ಶಾಲೆಯ ಸ್ಥಳೀಯ ನಿರ್ದೇಶಕರಾಗಿ 1960ರಲ್ಲಿ ಅಖಿಲ ಭಾರತ ಭಾಷಾ ವಿಜ್ಞಾನಿಗಳ ಸಂಘದ ಅಧ್ಯಕ್ಷರಾಗಿದ್ದ ಅವರು ಭಾಷಾಶಾಸ್ತ್ರದ ಅಧ್ಯಯನ ಮತ್ತು ಬೆಳವಣಿಗೆಗೆ ಚಾಲನೆಯನ್ನು ಕೊಟ್ಟರು. 1965 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸ್ಥಾನಕ್ಕೆ ಅವರಿಗೆ ಬಂದ ಆಹ್ವಾನ ಅವರ ವಿದ್ವತ್ತಿಗೆ ಸಂದ ಪುರಸ್ಕಾರವಾದರೂ ಅವರು ಅದನ್ನು ನಿರಾಕರಿಸಿದದು ಕನ್ನಡಕ್ಕಾಗಿ ಅವರು ಮಾಡಬೇಕಾಗಿದ್ದ ಕೆಲಸಕ್ಕೆ ಕೊಟ್ಟ ಆದ್ಯತೆಯೇ ಸರಿ. ಭಾಷೆಗಾಗಿ ಭಾಷಾಶಾಸ್ತ್ರಕ್ಕಾಗಿ ಅವರು ಮಾಡಿದ ದುಡಿಮೆಯನ್ನು ಕನ್ನಡದ ನಿಘಂಟಿಗಾಗಿ ಅವರು ಪಟ್ಟ ಪರಿಶ್ರಮದಿಂದ ಪ್ರತ್ಯೇಕಿಸುವಂತಿಲ್ಲ. ತಮ್ಮ ಕೊನೆಯ ವರ್ಷಗಳ ಬಹು ಮಟ್ಟಿನ ಸಮಯವನ್ನು ವಿಘಂಟು ರಚನೆಯ ಸಿದ್ಧತೆಗಾಗಿ ಮೀಸಲಿರಿಸಿದರು. ಕನ್ನಡ ಭಾಷಾ ಶಾಸ್ತ್ರದ ಪರಿಭಾಷೆ, ನಿರೂಪಣಾ ವಿಧಾನಗಳಿಗೆ ಹೇಗೋ ಹಾಗೆಯೇ ನಿಘಂಟಿನ ರಚನಾ ವಿಧಾನ, ಅರ್ಥ ವಿವರಣೆ, ಚಿಹ್ನೆಗಳು ಇವುಗಳಿಗೆಲ್ಲಾ ತೀನಂಶ್ರೀ ಅವರ ವಿದ್ವತ್ತು ವಿಫಲವಾದ ಕೊಡುಗೆಯನ್ನು ಕೊಟ್ಟಿದೆ. ಮೂರನೆಯದು ಅವರು ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿ ಸಂಪಾದಿಸಿದ್ದ ಜನಾನುರಾಗ, ಜನಪ್ರೀಯತೆಗೆ ಸುಲಭವಾಗಿ ಅಂಟುವ ಪೊಳ್ಳುತನಕ್ಕೆ ಅವಕಾಶ ಮಾಡಿ ಕೊಡದೇ ಖ್ಯಾತರಾಗಿದ್ದರು ಅವರು. ಮೈಸೂರು ವಿ.ವಿ ನಿಲಯದಲ್ಲಿ ಅವರು ಪ್ರಾಧ್ಯಾಪಕರಾಗಿದ್ದಾಗ ಛಂದಸ್ಸು, ಕಾವ್ಯಮೀಮಾಂಸೆ ಮತ್ತು ಭಾಷಾಶಾಸ್ತ್ರ ಮೂರನ್ನೂ ಅವರ ಬಾಯಲ್ಲಿಯೇ ಕೇಳಬೇಕು ಎಂದು ವಿದ್ಯಾರ್ಥಿಗಳು ಆಸೆ ಪಡುವಂತಹ ಸ್ಥಿತಿ ಇತ್ತು. ಮೂರು ವಿಷಯಗಳಲ್ಲೂ ಅವರ ವಿದ್ವತ್ತು ಅದ್ವಿತೀಯವಾಗಿತ್ತು. ಅವರ ಬೋಧನಾ ಕಲೆಯು ಇದಕ್ಕೆ ಕಾರಣವಾಗಿತ್ತು. ತೀನಂಶ್ರೀಯವರ ವಿದ್ವತ್ತು ಬಹುಶುತೃತ್ವಗಳನ್ನು ಬಲ್ಲವರೆಲ್ಲರೂ ಇವರು ಹೆಚ್ಚು ಬರೆಯದೇ ಇದ್ದುದಕ್ಕೆ ವಿಷಾದಿಸುವವರೇ. ಆಗಿನ ಅಧ್ಯಾಪಕರಲ್ಲಿ ಬಹುಜನರ ಪ್ರತಿಭೆ ಬರವಣೆಗೆಯಲ್ಲಿ ಹೊರಹೊಮ್ಮದೇ ಇದ್ದುದಕ್ಕೆ ಅಧೈರ್ಯ ಅಥವಾ ಆತ್ಮ ವಿಶ್ವಾಸದ ಅಭಾವ ಕಾರಣವಿರಬಹುದೇ ಎಂದು ಪ್ರೋ. ಮೂರ್ತಿರಾಯರು ಶಂಕೆ ಪಡುತ್ತಾರೆ. ತೀನಂಶ್ರೀಯವರಲ್ಲಿ ಕ್ರಮಶ್ರದ್ಧೆ, ಕರ್ಮಶ್ರದ್ಧೆಗಳ ಹೋರಾಟ ನಡೆದು ಕ್ರಮಶ್ರದ್ಧೆಯ ಕೈ ಸ್ವಲ್ಪ ಮೇಲಾಯಿತೆನೋ ಎಂದು ಅನುಮಾನ ಪಡುತ್ತಾರೆ. ‘ಕಂ ಪಾಂಡಿತ್ಯಂ ಪರಿಚ್ಚೇದಃ’ ಎಂಬ ಸಂಸ್ಕøತದ ಹೇಳಿಕೆಯನ್ನು ತೀನಂಶ್ರೀ ಮತ್ತೆ ಮತ್ತೆ ನೆನಪಿಸಿತ್ತಿದ್ದರು. ಪರಿಚ್ಛೇದ, ನಿಷ್ಕøಷ್ಠತೆಗಳ ಶೋಧನೆಯಲ್ಲಿ, ಸಂಶಯ ನಿವಾರಣೆಗಾಗಿ ಅವರು ಹಲವಿ ವರ್ಷಗಳ ವರೆಗೆ ಕಾಯ್ದದ್ದುಂಟು. ತರಗತಿಗಳಿಗೆ ಸಿದ್ಧತೆ ಇಲ್ಲದೇ ಅವರು ಸಾಮಾನ್ಯವಾಗಿ ಹೋಗುತ್ತಿರಲಿಲ್ಲ. ಸಾರ್ವಜನಿಕ ಭಾಷಣೆಗಳಿಗೆ ತಯಾರಾಗದೇ ಹೋಗುವುದು ಶೋತೃಗಳಿಗೆ ಮಾಡಿದ ಅವಮಾನ ಎಂಬ ನಿಷ್ಟುರತೆ ಅವರು. ಮನೆಯಲ್ಲಿದ್ದು ಇಲ್ಲ ಎನಿಸಿಕೊಳ್ಳುವ ಅಸೌಜನ್ಯ ಅಸಾಮಾಜಿಕ ನಡವಳಿಕೆ ಅವರಲ್ಲಿರಲಿಲ್ಲ. ನಿರಂತರ ಓದು. ಸಹೃದಯ ಗೋಷ್ಠಿ ನಡು ನಡುವೆ ಒಪ್ಪಿಕೊಳ್ಳುತ್ತಿದ್ದ ಉಪನ್ಯಾಸ ಕಾರ್ಯಕ್ರಮಗಳು ಅಧ್ಯಾಪಕ ವೃತ್ತಿಯಲ್ಲಿ ಅವರಿಗಿದ್ದ ಗೌರವಾದರ- ಇವೆಲ್ಲ ಸೇರಿ ಅವರು ಹೆಚ್ಚು ಬರೆಯದಂತಾಗಿರಬೇಕು. ಸಾರ್ವಜನಿಕ ಭಾಷಣ ಮತ್ತು ತರಗತಿಯ ಪಾಠಗಳಲ್ಲಿ ಅವರ ಅಭಿಪ್ರಾಯ, ಅಲೋಚನೆಗಳು ಅಭಿವ್ಯಕ್ತಿ ಪಡೆದು ಆ ಮೂಲಕವೂ ಅವರಿಗೆ ತೃಪ್ತಿ ಸಿಗುತ್ತಿರಬಹುದು ಎಂದು ಅವರ ಮಗ ಪ್ರೋ, ಪಿ.ಎಸ್ ನಾಗಭೂಷಣ ಭಾವಿಸುತ್ತಾರೆ. ಬರೆಯಲಾಗದೇ ಇದ್ದುದಕ್ಕೆ ಅವರಲ್ಲಿ ಕೊರಗು ಇದ್ದಿತು.

೧೯೬೬ರ ಆಗಸ್ಟ್ ತಿಂಗಳಲ್ಲಿ ಶಿಕ್ಷಣ ಸಚಿವಾಲಯದ ವತಿಯಿಂದ ದೆಹಲಿಯಲ್ಲಿ ತಂತ್ರಜ್ಞಾನ ಪರಿಭಾಷೆಯ ತಜ್ಞರುಗಳ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಲವು ಸ್ಥಳಗಳಿಗೆ ಭೇಟಿಕೊಟ್ಟು ರಾಂಚಿಯಲ್ಲಿರುವ ಮಗಳ ಮನೆ ಮತ್ತು ಕಲ್ಕತ್ತೆಯಲ್ಲಿದ್ದ ಮಗನ ಮನೆಗೆ ಭೇಟಿಕೊಟ್ಟರು. ಅದೇ ಸಂದರ್ಭದಲ್ಲಿ ೧೯೬೬ ರಲ್ಲಿ ಸೆಪ್ಟೆಂಬರ್ ೭ ರಂದು, ಕಲ್ಕತ್ತಾದಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕಕ್ಕೆ ಬಂದದ್ದು ಅವರ ಸಾವಿನ ಸುದ್ದಿ ಮಾತ್ರ ಅವರ ಅಂತ್ಯ ಸಂಸ್ಕಾರ ಕಲ್ಕತ್ತಾದ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು.

ರಚಿಸಿದ ಕೃತಿಗಳು

ಬದಲಾಯಿಸಿ
  • ಒಲುಮೆ (ಕವನ ಸಂಕಲನ)
  • ನಂಟರು (ಪ್ರಬಂಧ ಸಂಕಲನ)
  • ಭಾರತೀಯ ಕಾವ್ಯಮೀಮಾಂಸೆ
  • ಕನ್ನಡ ಮಧ್ಯಮ ವ್ಯಾಕರಣ
  • ನಂಬಿಯಣ್ಣನ ರಗಳೆ (ಸಂಪಾದನೆ)
  • ಬಿಡಿ ಮುತ್ತು (ಕವನ ಸಂಕಲನ)
  • ರಾಕ್ಷಸನ ಮುದ್ರಿಕೆ.
  • ಗದಾಯುದ್ಧ(ಸಂಪಾದನೆ)

ಹೊರಗಿನ ಸಂಪರ್ಕಗಳು

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಣೆಯಾದ 'ಸಾಲು ದೀಪಗಳು ಕೃತಿಯಲ್ಲಿ . ಜಿ. ಸಣ್ಣಗುಡ್ಡಯ್ಯನವರ ಲೇಖನ