ವಿಲಿಯಮ್ ಹಾರ್ವೆ
ವಿಲಿಯಮ್ ಹಾರ್ವೆ (1578-1657)[೧] ಇಂಗ್ಲೆಂಡಿನ ಒಬ್ಬ ಚಿಕಿತ್ಸಾವೈದ್ಯ. ಆಧುನಿಕ ಪ್ರಾಯೋಗಿಕ ದೇಹಕ್ರಿಯಾವಿಜ್ಞಾನದ (ಮಾಡರ್ನ್ ಎಕ್ಸ್‌ಪೆರಿ ಮೆಂಟಲ್ ಫಿಜಿಯಾಲಜಿ) ಜನಕ ಎಂದು ಪ್ರಸಿದ್ಧನಾದವ. ರಕ್ತಪರಿಚಲನೆಯ ಕ್ರಮವನ್ನು ಆವಿಷ್ಕರಿಸಿ ಅದನ್ನು ಸ್ಪಷ್ಟವಾಗಿ ವರ್ಣಿಸಿರುವುದು ಇವನ ಮುಖ್ಯ ಸಾಧನೆ.
ಜನನ, ವಿದ್ಯಾಭ್ಯಾಸ
ಬದಲಾಯಿಸಿಆಗ್ನೇಯ ಇಂಗ್ಲೆಂಡಿನ ಕೆಂಟ್‌ನಲ್ಲಿಯ ಫೋಕ್ಸ್‌ಸ್ಟನ್ನಿನಲ್ಲಿ 1578 ಏಪ್ರಿಲ್ 1ರಂದು ಜನಿಸಿದ. ಇವನ ತಂದೆತಾಯಿಗಳು ಶ್ರೀಮಂತರಾಗಿದ್ದವರು. ಹಾರ್ವೆ ಮೊದಲು ಕೇಂಬ್ರಿಜ್‌ನ ಕೈಯಸ್ ಕಾಲೇಜಿಗೆ ಸೇರಿ, ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಾಗಿದ್ದ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನೂ ಇತರ ವಿಷಯಗಳನ್ನೂ ನಾಲ್ಕು ವರ್ಷಗಳ ಕಾಲ ವ್ಯಾಸಂಗಮಾಡಿ ಬಿ.ಎ.ಪದವಿ ಗಳಿಸಿದ (1597).[೨] ಅನಂತರ ಇಟಲಿಯ ಪ್ರಸಿದ್ಧವಾದ ಪಾಡುವ ವಿಶ್ವವಿದ್ಯಾಲಯದಲ್ಲಿ ಹೆಸರಾಂತ ಫ್ಯಾಬ್ರೀಷಿಯಸ್ ಆಬ್ ಅಕ್ವಪೆಂಡೆಂಟಿ (1537-1619) ಎಂಬ ಅಂಗರಚನಾಶಾಸ್ತ್ರಜ್ಞನ ಕೈಕೆಳಗೆ ವೈದ್ಯಕೀಯ ವ್ಯಾಸಂಗಮಾಡಿದ. ಎಂ.ಡಿ. ಪದವಿ ಸಹಿತ ಇಂಗ್ಲೆಂಡಿಗೆ ಮರಳಿ ಲಂಡನ್ನಿನಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದ.
ವೃತ್ತಿಜೀವನ, ಸಾಧನೆಗಳು
ಬದಲಾಯಿಸಿವೈದ್ಯಕೀಯ ವೃತ್ತಿಗಾಗಿ ಲಂಡನ್ನಿನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನ ಸದಸ್ಯನಾಗಿರಬೇಕಾದ್ದು ಆವಶ್ಯಕವಾಗಿದ್ದರಿಂದ 1604ರಲ್ಲಿ ಆ ಕಾಲೇಜಿನ ಸದಸ್ಯನಾದ. ಸುಮಾರು 1607ರಲ್ಲಿ ಲಂಡನ್ನಿನ ಸೇಂಟ್ ಬಾರ್ಥೋಲೋಮ್ಯು ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಈ ಹುದ್ದೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದನಾದರೂ ಇತರ ಕಾರ್ಯಗೌರವಗಳ ಸಲುವಾಗಿ ಅಲ್ಲಿಯ ಕೆಲಸವನ್ನು ಮುಂದುವರಿಸಲಾಗದೆ 1643ರಲ್ಲಿ ಆ ಕೆಲಸದಿಂದ ನಿವೃತ್ತನಾದ. ಇವನು 1607ರಲ್ಲಿ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನ ಫೆಲೋ ಕೂಡ ಆದ.[೩] ವಿಜ್ಞಾನದ ಬೆಳೆವಣಿಗೆ ಅತಿ ಕಡಿಮೆಯಾಗಿದ್ದ ಆ ಕಾಲದಲ್ಲಿ ಎಲ್ಲ ವೈದ್ಯರೂ ತಮ್ಮ ಕೆಲಸವನ್ನು ಇವನಂತೆಯೇ ನಿಷ್ಠೆಯಿಂದ ಮಾಡುತ್ತಿದ್ದರೂ ಇವನದೇ ವಿಶಿಷ್ಟ ಬಗೆಯದಾಗಿತ್ತು. ಈತ ಆಗಾಗ, ಶಸ್ತ್ರವೈದ್ಯವನ್ನೂ ಮಾಡುತ್ತಿದ್ದ. ಪ್ರಸವಶಾಸ್ತ್ರದಲ್ಲಿ ಹೆಸರು ಗಳಿಸಿದ್ದ. ರೋಗಗಳು, ಅವುಗಳ ಲಕ್ಷಣಗಳನ್ನು ಚೆನ್ನಾಗಿ ಗಮನಿಸಿ ವಿಶದವಾಗಿ ಬರೆದಿಡುತ್ತಿದ್ದ. ರೋಗಶಾಸ್ತ್ರ ಎಂಬುದು ದೇಹಕ್ರಿಯಾಶಾಸ್ತ್ರದ ಒಂದು ಭಾಗವೇ ಎಂದು ಹೇಳಿ ಅದನ್ನೂ ದೇಹಕ್ರಿಯಾಶಾಸ್ತ್ರದಂತೆಯೇ ಅಂಗರಚನಶಾಸ್ತ್ರ ದೃಷ್ಟಿಯಿಂದಲೇ ವ್ಯಾಸಂಗ ಮಾಡಬೇಕೆಂಬ ದೃಢ ಅಭಿಪ್ರಾಯ ತಳೆದಿದ್ದ. ತನಗೇ ಪೂರ್ಣವಾಗಿ ನಂಬಿಕೆ ಬರುವವರೆಗೆ ಒಂದು ವ್ಯಾಸಂಗ ವಿಷಯದಲ್ಲಿ ಏನನ್ನೂ ಪ್ರಚುರಪಡಿಸುತ್ತಿರಲಿಲ್ಲ. ಮೇಲಿಂದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿ ಪರೀಕ್ಷಿಸಿ ಪ್ರತಿಪಾದನೆಯನ್ನು ಬಲವಾದ ತಳಹದಿಯ ಮೇಲೆ ಸ್ಥಾಪಿಸಿದ ಬಳಿಕವೇ ಪ್ರಚಾರಮಾಡುತ್ತಿದ್ದ.
ತನ್ನ ‘ಡಿ ಮೋಟು ಕಾರ್ಡಿಸ್’ ಎಂಬ ಗ್ರಂಥದಲ್ಲಿ ಹೇಳಿರುವ ವಿಷಯವನ್ನು 12 ವರ್ಷಗಳಷ್ಟು ಮುಂಚೆಯೇ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಉಪನ್ಯಾಸವಾಗಿ ತಿಳಿಯಪಡಿಸಿದ್ದರೂ ಪುಸ್ತಕ ರೂಪದಲ್ಲಿ ಬರೆದು ಪ್ರಚುರಪಡಿಸಿದ್ದು 1628ರಲ್ಲಿ. ಈ ಗ್ರಂಥದ ಮೊದಲ 19 ಪುಟಗಳಲ್ಲಿ ಈತ ಗುಂಡಿಗೆ ಮತ್ತು ರಕ್ತ ಪರಿಚಲನೆ ವಿಷಯದಲ್ಲಿ ಹಿಂದಿನವರಾದ ಅರಿಸ್ಟಾಟಲ್, ಗೇಲನ್‌ಗಳು ತಿಳಿಸಿದ್ದ ವಿಚಾರಗಳನ್ನೂ ಸುಮಾರು 1550 ರಿಂದ ಈಚೆಗೆ ವೆಸೇಲಿಯಸ್, ಫ್ಯಾಬ್ರೀಷಿಯಸ್ ಮೊದಲಾದವರು ಈ ವಿಷಯವಾಗಿ ಕಂಡುಕೊಂಡಿದ್ದ ವಿಚಾರಗಳನ್ನೂ ತಿಳಿಸಿದ್ದಾನೆ. ಮುಂದಿನ ಉಳಿಕೆಯ ಸುಮಾರು 52 ಪುಟಗಳಲ್ಲಿ ತಾನು ವ್ಯಾಸಂಗಿಸಿದ ವಿಷಯಗಳನ್ನು ಹಂತ ಹಂತವಾಗಿ ವಿವರಿಸುತ್ತ ರಕ್ತ ಪರಿಚಲಿಸುತ್ತಿದೆ ಎಂಬ ನಿರ್ಧಾರಕ್ಕೆ ಏಕೆ ಬರಬೇಕು ಎನ್ನುವುದನ್ನು ವಿವಾದಕ್ಕೆ ಆಸ್ಪದಬಾರದ ರೀತಿಯಲ್ಲಿ ಪ್ರತಿಪಾದಿಸಿದ್ದಾನೆ. ವಿವಿಧ ತೆರನ ಬಹುಸಂಖ್ಯೆಯ ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗಗಳನ್ನು ಆಧರಿಸಿ ತನ್ನ ಪ್ರತಿಪಾದನೆಯನ್ನು ಸಾಧಿಸಿದ್ದಾನೆ. ಎಂದೇ ದೇಹಕ್ರಿಯಾವಿಜ್ಞಾನದ ವ್ಯಾಸಂಗ ಪ್ರಯೋಗಾತ್ಮಕವಾಗಿ, ವೈಜ್ಞಾನಿಕವಾಗಿ ಪ್ರಾರಂಭವಾದ್ದು ಆಗಲೇ. ‘ಡಿ ಮೋಟು ಕಾರ್ಡಿಸ್’ ಗ್ರಂಥದಿಂದ ಮತ್ತು ರಿಯೋಲಾನ್ ಎಂಬವನಿಗೆ ಇವನು ಬರೆದ ಕಾಗದಗಳಿಂದ ಇಂಥ ಪ್ರಯೋಗಾತ್ಮಕ ವ್ಯಾಸಂಗವಿಧಾನ ಮೊದಲಿಗೆ ಪ್ರಚಾರಕ್ಕೆ ಬಂತು. ಈತ ಲ್ಯಾಟಿನ್‌ನಲ್ಲೂ ಮಾತೃಭಾಷೆಯಾದ ಇಂಗ್ಲಿಷಿನಲ್ಲೂ ಘನವಾದ ವಿದ್ವಾಂಸನಾಗಿದ್ದುದರಿಂದ ವಿಷಯ ಪ್ರತಿಪಾದನೆಯ ಸಾಮರ್ಥ್ಯ ಪಡೆದಿದ್ದ. ತನ್ನ ಪ್ರತಿಪಾದನೆಯನ್ನು ಒಪ್ಪದ ಎದುರಾಳಿಗಳನ್ನು ಒಪ್ಪಿಸಲು ಪ್ರಯತ್ನಪಟ್ಟದ್ದು ಕೇವಲ ಕೆಲವು ಪ್ರಸಂಗಗಳಲ್ಲಿ ಮಾತ್ರ.
ರಕ್ತಪರಿಚಲನೆಯ ಬಗ್ಗೆ ಮೊದಲಿದ್ದ ತಿಳಿವಳಿಕೆ
ಬದಲಾಯಿಸಿರಕ್ತಪರಿಚಲನೆಯ ವಿಷಯವಾಗಿ ಇವನು ಬರೆದ ಗ್ರಂಥ `ಡಿ ಮೋಟು ಕಾರ್ಡಿಸ್’ನಿಂದ ಇವನಿಗೆ ಅಷ್ಟು ಮನ್ನಣೆ ಏಕೆ ಬಂದಿತು ಎಂಬುದು ಮಂದಟ್ಟಾಗಬೇಕಾದರೆ ಈ ವಿಚಾರದಲ್ಲಿ ಆಗಿನ ಕಾಲಕ್ಕೆ, ಅಂದರೆ ಇವನು ತನ್ನ ಸಿದ್ಧಾಂತವನ್ನು ಮಂಡಿಸುವುದಕ್ಕೆ ಮುಂಚೆ ಇದ್ದ ಜ್ಞಾನ ಎಷ್ಟು ಎಂಬುದನ್ನು ತಿಳಿಯುವುದು ಲೇಸು. ಅದರ ಸ್ಥೂಲ ವಿವರಗಳಿವು: ಆಹಾರದಿಂದ ರಕ್ತ ಈಲಿಯಲ್ಲಿ (ಯಕೃತ್ತು) ತಯಾರಾಗಿ ಗುಂಡಿಗೆಗೆ ಒಯ್ಯಲ್ಪಟ್ಟು ರಕ್ತನಾಳಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದು ಎಂದು ಅರಿಸ್ಟಾಟಲ್ (ಕ್ರಿಪೂ 384-322) ವಿವರಿಸಿದ್ದ. ಅಲ್ಲಿಂದೀಚೆಗೆ ಅಲೆಗ್ಸಾಂಡ್ರಿಯ ವಿದ್ಯಾಲಯದ ವೈದ್ಯರುಗಳಾದ ಹಿರೋಫಿಲಸ್, ಇರಾಸಿಸ್ಟ್ರೇಟಸ್ ಮೊದಲಾದವರು ಈ ನಾಳಗಳಲ್ಲಿ ಕೆಲವಲ್ಲಿ ಮಾತ್ರ ರಕ್ತ ಪ್ರವಹಿಸುವುದೆಂದೂ ಮಿಕ್ಕವುಗಳಲ್ಲಿ ಅನಿಲ ಸಂಚಾರವಿರುತ್ತೆಂದೂ ಆದ್ದರಿಂದ ಈ ನಾಳಗಳಿಗೆ ಕ್ರಮವಾಗಿ ವೆಯ್ನ್ ಮತ್ತು ಆರ್ಟರಿ (ಅಂದರೆ ಏರ್‌ಪೈಪ್-ಅನಿಲಕ್ರಮಿಸುವ ನಾಳ) ಎಂದು ಕರೆಯಬೇಕೆಂದೂ ಬೋಧಿಸಿದರು. ರೋಮಿನ ವೈದ್ಯ ಗೇಲೆನ್ (ಸು. ಕ್ರಿ.ಶ. 130-201) ಎಂಬವ ಆರ್ಟರಿಗಳಲ್ಲೂ ರಕ್ತವಿರುತ್ತದೆಂದು ತೋರಿಸಿದ. ಆರ್ಟರಿಗಳಲ್ಲಿ ರಕ್ತದೊಂದಿಗೆ ಪ್ರಾಣವಾಯು (ಅನಿಮಲ್ ಸ್ಪಿರಿಟ್) ಎಂಬ ಇನ್ನೊಂದು ರೀತಿಯ ಅನಿಲ ಮಿದುಳಿನಲ್ಲಿ ಉತ್ಪತ್ತಿಯಾಗಿ ನರಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದೆಂದೂ ವೆಯ್ನ್‌ಗಳಲ್ಲಿ ಕೇವಲ ರಕ್ತ ಮಾತ್ರವಿರುವುದೆಂದು ಗೇಲೆನ್ ತನ್ನ ಶಿಷ್ಯರಿಗೆ ಬೋಧಿಸಿದ. ಕ್ರಿ.ಶ.16ನೆಯ ಶತಮಾನದ ತನಕವೂ ಇಷ್ಟೇ ಜ್ಞಾನ ಅಂಗಶಾಸ್ತ್ರಜ್ಞರಿಗೂ ವೈದ್ಯರಿಗೂ ಈ ವಿಚಾರದಲ್ಲಿ ಇದ್ದದ್ದು. ಅವರಿಗೆ ರಕ್ತ ನಾಳಗಳಲ್ಲಿ ಸುಮ್ಮನೆ ತುಂಬಿಕೊಂಡಿರದೆ ಚಲಿಸುತ್ತಿರುವುದೆಂಬುದು ಗೊತ್ತಿತ್ತು. ಆದರೆ ಅದು ಕ್ರಮಬದ್ಧ ಪರಿಚಲನೆಯಿಂದ ದೇಹದಲ್ಲೆಲ್ಲ ಪರ್ಯಟನೆ ನಡೆಸಿ ಪುನಃ ಹೊರಟ ಸ್ಥಳಕ್ಕೇ ಬಂದು ಸೇರುವ ವಿಷಯ ತಿಳಿದಿರಲಿಲ್ಲ. ನಾಳಗಳಲ್ಲಿ ರಕ್ತ ರಸ್ತೆಯಲ್ಲಿಯ ಜನಸಂಚಾರದಂತೆ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ ಎಂದು ತಿಳಿದಿದ್ದರು. ರಕ್ತದಲ್ಲಿ ಎರಡು ವಿಧಗಳಿರುವುವೆಂದು ಅವರು ವಿವರಿಸುತ್ತಿದ್ದರು. ಯಕೃತ್ತಿನಲ್ಲಿ ಉತ್ಪತ್ತಿಯಾಗಿ ಗುಂಡಿಗೆಯ ಬಲಭಾಗಕ್ಕೆ ಬಂದು ಸೇರಿ ಅಲ್ಲಿಂದ ಫುಪ್ಪುಸಗಳಿಗೆ ಒಯ್ಯಲ್ಪಟ್ಟು ಮುಂದಕ್ಕೆ ವೆಯ್ನ್‌ಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದು ಒಂದು. ಇನ್ನೊಂದು ಬಗೆಯ ರಕ್ತ ಗುಂಡಿಗೆಯ ಎಡಭಾಗದಿಂದ ಆರ್ಟರಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವುದು. ಗುಂಡಿಗೆಯ ಎಡಬಲಭಾಗಗಳು ತೀರ ಬೇರೆ ಬೇರೆಯಾಗಿರದೆ ಒಂದು ಭಾಗದ ರಕ್ತವು ಇನ್ನೊಂದು ಭಾಗಕ್ಕೆ ಅಡ್ಡತಡಿಕೆಯಲ್ಲಿರುವ ರಂಧ್ರಗಳ ಮೂಲಕ ಹೋಗಲು ಸಾಧ್ಯ; ಗುಂಡಿಗೆಯ ಮತ್ತು ನಾಡಿಗಳು ಮಿಡಿಯುವುದು ಅವುಗಳಲ್ಲಿ ಪ್ರಾಣವಾಯುವೂ ಇರುವುದರಿಂದ ಎಂದು ಅವರು ತಿಳಿದಿದ್ದರು. ಗುಂಡಿಗೆ ಕೂಡ ಒಂದು ಬಗೆಯ ಮಾಂಸದಿಂದಾದ ಕೋಶವೆಂದೂ ಅದಕ್ಕೆ ಸಂಕೋಚನ-ವ್ಯಾಕೋಚನ ಸಾಮರ್ಥ್ಯವಿದ್ದು, ಅದು ಸಂಕೋಚಿಸುವುದರಿಂದಲೇ ರಕ್ತಚಲನೆಗೆ ಬೇಕಾಗುವ ಒತ್ತಡ ಒದಗುತ್ತದೆ ಎಂಬುದೂ ಅವರಿಗೆ ತಿಳಿದಿರಲಿಲ್ಲ.
16ನೆಯ ಶತಮಾನದಲ್ಲಿ ಹಲವಾರು ವೈದ್ಯಕೀಯ ವಿಜ್ಞಾನಿಗಳು ಅಂದಿನ ಜ್ಞಾನದಲ್ಲಿ ಕೆಲವು ತಪ್ಪುಗಳಿರುವುದೆಂದು ತೋರಿಸಿದರು. 1543ರಲ್ಲಿ ವೆಸೇಲಿಯಸ್ ಗುಂಡಿಗೆಯ ಅಡ್ಡತಡಿಕೆಯಲ್ಲಿ ರಂಧ್ರವಿಲ್ಲವೆಂದು ತೋರಿಸಿದ. ಆದರೆ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾದ ರಂಧ್ರಗಳಿರಬಹುದೆಂಬುದನ್ನು ಅಲ್ಲಗಳೆಯುವಂತಿರಲಿಲ್ಲ. 1553 ರಲ್ಲಿ ಮೈಕೇಲ್ ಸರ್ವೇಟಸ್ (1511-53) ತನ್ನ `ಕ್ರಿಶ್ಚಿಯಾನಾ ರೆಸ್ಟಿಟ್ಯೂಷಿಯೋ’ ಎಂಬ ಮತಸಂಬಂಧೀ ಗ್ರಂಥದಲ್ಲಿ ರಕ್ತ ಗುಂಡಿಗೆಯ ಬಲಭಾಗದಿಂದ ಎಡಭಾಗಕ್ಕೆ ಬರುವುದು ರಂಧ್ರವಿಲ್ಲದ ಅಡ್ಡತಡಿಕೆಯ ಮೂಲಕ ಅಸಾಧ್ಯವೆಂದೂ ವಾಸ್ತವವಾಗಿ ರಕ್ತ ಗುಂಡಿಗೆಯ ಬಲಭಾಗದಿಂದ ಫುಪ್ಪುಸಕ್ಕೆ ಒಯ್ಯಲ್ಪಟ್ಟು ಅಲ್ಲಿಂದ ಪುನಃ ಗುಂಡಿಗೆಯ ಎಡಭಾಗಕ್ಕೆ ವಾಪಸ್ಸು ಬರುತ್ತದೆಂದೂ ಪ್ರಾಸಂಗಿಕವಾಗಿ ತಿಳಿಸಿದ್ದ.[೪] ಹಾರ್ವೆಯ ಫ್ಯಾಬ್ರೀಷಿಯಸ್ ಸುಮಾರು 1600 ರಲ್ಲಿ ವೆಯ್ನ್‌ಗಳಲ್ಲಿ ಕವಾಟಗಳಿರುವುದನ್ನು ತೋರಿಸಿದ್ದ. ಗುಂಡಿಗೆಯಿಂದ ಹೊರಹೊರಟ ರಕ್ತ ಫುಪ್ಫುಸದಲ್ಲಿ ಸಂಚರಿಸಿ ಪುನಃ ಗುಂಡಿಗೆಗೆ ಬಂದು ಸೇರುವುದು; ವೆಯ್ನ್‌ಗಳಲ್ಲಿ ಹೃದಯಾಭಿಮುಖವಾಗಿ ಮಾತ್ರ ಚಲಿಸಲು ಸಾಧ್ಯವಾಗುವಂತೆ ಕವಾಟಗಳಿರುವುದು-ಈ ಎರಡು ಸಂಗತಿಗಳೂ ಇವನಿಗೆ ರಕ್ತಪರಿಚಲನೆಯ ವಿಷಯವಾಗಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಲು ಪ್ರಮುಖ ಅಂಶಗಳಾಗಿದ್ದವು. ಈ ವಿಷಯಗಳು ಫ್ಯಾಬ್ರೀಷಿಯಸನಿಗೆ ತಿಳಿದಿದ್ದರೂ ರಕ್ತಪರಿಚಲನೆಯ ವಿಷಯ ಅವನಿಗೆ ಏಕೆ ಹೊಳೆಯಲಿಲ್ಲ ಎನ್ನುವುದು ಆಶ್ಚರ್ಯದ ಸಂಗತಿ. ಅಂದ ಹಾಗೆ ಕನ್ನಡದಲ್ಲಿ ಆರ್ಟರಿಗೆ ಅಪಧಮನಿ ಎಂದೂ ವೆಯ್ನ್‌ಗೆ ಅಭಿಧಮನಿ (ಅಥವಾ ಸಿರ) ಎಂದೇ ಹೆಸರು.
ಹಾರ್ವೆಯ ಸಿದ್ಧಾಂತ
ಬದಲಾಯಿಸಿಈತ ತನ್ನ ಸಂಶೋಧನೆಗಳಿಂದ ಗುಂಡಿಗೆ ಎಂಬುದು ಸಂಕೋಚನ ಸಾಮರ್ಥ್ಯವಿರುವ ಮಾಂಸದ ಚೀಲವೆಂದೂ ಅದರ ಸಂಕೋಚನದಿಂದ ರಕ್ತ ಅಪಧಮನಿ ಮೂಲಕ ರಭಸದಿಂದ ನೂಕಲ್ಪಡುವುದೆಂದೂ ವಿಶದೀಕರಿಸಿದ. ಇದಲ್ಲದೆ
- ನಾಡಿಯ ಮಿಡಿತವೂ ಗುಂಡಿಗೆಯ ಸಂಕೋಚನವೂ ಏಕಕಾಲದಲ್ಲಿ ಆಗುತ್ತವೆ. ಗುಂಡಿಗೆ ವ್ಯಾಕೋಚಿಸಿದಾಗ ನಾಡಿಮಿಡಿತ ಇರುವುದಿಲ್ಲವಾದ್ದರಿಂದ ಗುಂಡಿಗೆಯ ಸಂಕೋಚನದಿಂದಲೇ ರಕ್ತ ಅಯೋರ್ಟ (ಮಹಾಪಧಮನಿ) ಮತ್ತು ಪಲ್ಮನರಿ ಆರ್ಟರಿಗಳ (ಶ್ವಾಸಾಪಧಮನಿ) ಮೂಲಕ ಹೊರದೂಡಲ್ಪಡುತ್ತದೆ. ಹೀಗೆ ಇದ್ದಕ್ಕಿದ್ದಂತೆ ದಿಢೀರನೆ ಅಪಧಮನಿಗಳಿಗೆ ರಕ್ತ ತುಂಬಿಕೊಳ್ಳವುದರಿಂದಲೇ ನಾಡಿಮಿಡಿತ ಉಂಟಾಗುತ್ತದೆ.
- ಗುಂಡಿಗೆಯ ಎಡಬಲಭಾಗಗಳು ಪೂರ್ತಿಯಾಗಿ ಬೇರೆ ಬೇರೆಯಾಗಿವೆ. ಅವುಗಳ ನಡುವಿನ ತಡಿಕೆಯಲ್ಲಿ ರಂಧ್ರವಿಲ್ಲ. ಆದ್ದರಿಂದ ಗುಂಡಿಗೆಯ ಬಲಭಾಗದಿಂದ ಉಂಟಾಗುವ ರಕ್ತಪರಿಚಲನೆಯೇ ಬೇರೆ, ಎಡಭಾಗದಿಂದುಂಟಾಗುವುದೇ ಬೇರೆ. ಹೀಗೆ ಎರಡು ರಕ್ತ ಪರಿಚಲನೆಗಳಿವೆ.
- ಅಪಧಮನಿ ಮತ್ತು ಅಭಿಧಮನಿಗಳಲ್ಲಿರುವ ರಕ್ತ ಒಂದೇ, ಬೇರೆ ಬೇರೆ ಅಲ್ಲ. ಗುಂಡಿಗೆಯ ಎಡಭಾಗವೂ ಬಲಭಾಗವೂ ಏಕಕಾಲಿಕವಾಗಿ ಸಂಕೋಚಿಸುತ್ತವೆ. ಬಲಭಾಗದಲ್ಲಿಯಂತೆಯೇ ಎಡಭಾಗದಿಂದಲೂ ರಕ್ತ ಮಾತ್ರ ಹೊರದೂಡಲ್ಪಡುತ್ತದೆ. ಹಿಂದಿನ ವಿಜ್ಞಾನಿಗಳು ವಿವರಿಸಿದ್ದಂತೆ ಇದು ಪ್ರಾಣವಾಯುವನ್ನು ಕೂಡಿಕೊಂಡಿರುವುದಿಲ್ಲ.
- ಅಪಧಮನಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವ ರಕ್ತ ಕಿಂಚಿತ್ತಾಗಿ ಆಯಾ ಎಡೆಗಳಲ್ಲಿ ಉಪಯೋಗಗೊಂಡು ಉಳಿದದ್ದು ಅಭಿಧಮನಿಗಳ ಮೂಲಕ ಗುಂಡಿಗೆಗೇ ಹಿಂತಿರುಗಿ ಬರುತ್ತದೆ. ಅಭಿಧಮನಿಗಳಲ್ಲಿ ರಕ್ತ ಗುಂಡಿಗೆಗೆ ಅಭಿಮುಖವಾಗಿ ಮಾತ್ರ ಸಾಗುತ್ತದೆ. ಕವಾಟಗಳಿರುವುದರಿಂದ ಹಿಮ್ಮುಖವಾಗಿ ಹರಿಯಲು ಸಾಧ್ಯವಿಲ್ಲ.[೫] ಆದ್ದರಿಂದ ಇವುಗಳಲ್ಲಿ ರಕ್ತ ಒಂದು ಸಲ ಹಿಂದಕ್ಕೆ ಇನ್ನೊಂದು ಮುಂದಕ್ಕೆ ಹರಿಯುತ್ತದೆ ಎನ್ನುವುದು ತಪ್ಪು.
- ರಕ್ತ ಪರಿಚಲನೆ ಪ್ರಾರಂಭವಾಗುವುದು ಗುಂಡಿಗೆಯಿಂದ ಅಲ್ಲದೆ ಯಕೃತ್ತಿನಿಂದ ಅಲ್ಲ; ಕೊನೆಗೊಳ್ಳುವುದೂ ಅಲ್ಲಿಯೇ.
ಈ ವಿಷಯಗಳನ್ನೆಲ್ಲ ಗ್ರಂಥ ವ್ಯಾಸಂಗದಿಂದಲೂ, ನಿರಂತರ ಚಿಂತನೆಯಿಂದಲೂ ಹಾರ್ವೆ ತರ್ಕಿಸಿ ಅನೇಕ ಸಂಶೋಧನೆಗಳಿಂದ ತನ್ನ ವಾದಸರಣಿ ಸರಿಯಾಗಿರುವುದೆಂದು ಕಂಡುಕೊಂಡ. ಸಂಶೋಧನೆಗಳನ್ನು ಶವಗಳ ಮೇಲೆ ನಡೆಸಿದ್ದಲ್ಲದೆ ಗುಂಡಿಗೆಯ ಮಿಡಿತವನ್ನು ನಾಯಿ, ಹಂದಿ, ಹಾವು, ಕಪ್ಪೆ, ಮೀನು, ಏಡಿ, ಮುತ್ತಿನ ಚಿಪ್ಪು, ಕೀಟ ಇವುಗಳ ಸಂದರ್ಭಗಳಲ್ಲಿ ಕಣ್ಣಾರೆ ಕಂಡು ವಿಷಯಗಳನ್ನು ಮಂದಟ್ಟುಮಾಡಕೊಂಡ.[೬] ಮೊಟ್ಟೆಯೊಳಗೆ ಇರುವ ಕೋಳಿಯ ಭ್ರೂಣದಲ್ಲಿ ಕೂಡ ಗುಂಡಿಗೆಯ ಮಿಡಿತವನ್ನು ತಾನು ನೋಡಿರುವುದಾಗಿ ತಿಳಿಸಿ ದೊರೆ ಚಾರ್ಲ್ಸ್‌ನಿಗೂ ತೋರಿಸಿ ದೃಢಪಡಿಸಿದ. ಗುಂಡಿಗೆಯಲ್ಲಿ ಮತ್ತು ಅಭಿಧಮನಿಗಳಲ್ಲಿ ವಪೆಯಂತಿರುವ ಕದ ಅತವಾ ಕವಾಟಗಳು ಅಳವಟ್ಟಿರುವ ರೀತಿಯಾದರೂ ರಕ್ತ ಒಂದೇ ಮಾರ್ಗವಾಗಿ ಪ್ರವಹಿಸುವಂತೆ ಮಾಡುತ್ತದೆ ಎಂದು ನಿಶ್ಚಯಿಸಿದ. ರಕ್ತ ಹೃತ್ಕರ್ಣದಿಂದ (ಆರಿಕಲ್) ಹೃತ್ಕುಕ್ಷಿಗೂ (ವೆಂಟ್ರಿಕಲ್) ಅಲ್ಲಿಂದ ಅಪಧಮನಿಗಳಿಗೂ ಪ್ರವಹಿಸಬಲ್ಲದೆ ವಿನಾ ಅಪಧಮನಿಯಿಂದ ಹಿಂದಕ್ಕೆ ಹೃತ್ಕುಕ್ಷಿಗೂ ಮತ್ತು ಹೃತ್ಕುಕ್ಷಿಯಿಂದ ವಾಪಸು ಹೃತ್ಕರ್ಣಕ್ಕೂ ಹೋಗುವ ಹಾಗಿಲ್ಲ; ಇದೇ ರೀತಿ ಅಭಿಧಮನಿಗಳಲ್ಲಿ ರಕ್ತ ಗುಂಡಿಗೆಯ ಕಡೆಗೆ ಹರಿಯುವುದೇ ಹೊರತು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸಲಾರದು; ರಕ್ತ ಪರಿಚಲನೆ ಗುಂಡಿಗೆಯಿಂದ ಅಪಧಮನಿಗಳು, ಅಪಧಮನಿಗಳಿಂದ ಅಭಿಧಮನಿಗಳು, ಪುನಃ ಗುಂಡಿಗೆ-ಹೀಗೆ ಏರ್ಪಟ್ಟಿದೆ ಎಂದು ಈತ ತನ್ನ ಸಿದ್ಧಾಂತವನ್ನು ಮಂಡಿಸಿದ. ಇವೆಲ್ಲವನ್ನೂ ಒಳಗೊಂಡ ಡಿ ಮೋಟು ಕಾರ್ಡಿಸ್ ಗ್ರಂಥ 72 ಪುಟಗಳಷ್ಟು. ಆದರೂ ಬಲು ಬಿಗಿಯಾದ ಶೈಲಿಯಲ್ಲಿ ರಚಿತಗೊಂಡು ಅದರಲ್ಲಿಯ ವಿಷಯ ನಿರೂಪಣೆ ನಿಷ್ಕೃಷ್ಟವಾಗಿಯೂ ಸಂಪೂರ್ಣವಾಗಿಯೂ ಇದೆ. ಅಪಧಮನಿಗಳಿಗೂ ಅಭಿಧಮನಿಗಳಿಗೂ ನೇರ ಸೇರ್ಪಡೆ ಕಾಣಿಸದಿರುವುದರಿಂದ ಮತ್ತೆ ಬೇರೆ ರೀತಿ ಸೇರ್ಪಡೆ ಹೇಗೆ ಇರುವುದು ಎಂಬುದನ್ನು ಮಾತ್ರ ಈತನಿಗೆ ತೋರಿಸುವುದಕ್ಕಾಗಲಿಲ್ಲ. ಆದರೂ ಅಂಥ ಸೇರ್ಪಡೆ ಇದ್ದೇ ತೀರಬೇಕು ಎನ್ನುವುದನ್ನು ಮಾತ್ರ ಆತ ಖಂಡಿತವಾಗಿ ನಿರೂಪಿಸಿದ್ದ. ಸುಮಾರು 35 ವರ್ಷಗಳ ಬಳಿಕ ಇವನು ಕಾಲವಾದ 4 ವರ್ಷಗಳ ಅನಂತರ ಹಾರ್ವೆಯಂತೆಯೇ ಪ್ರಸಿದ್ಧನಾದ ದೇಹಕ್ರಿಯಾ ವಿಜ್ಞಾನಿ ಮಾಲ್ಪೀಜಿ (1628-94) ಎಂಬವ ಅಪಧಮನಿಗಳಿಗೂ ಅಭಿಧಮನಿಗಳಿಗೂ ಸಂಪರ್ಕ ಕಲ್ಪಿಸುವ ಲೋಮನಾಳಗಳನ್ನು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಅಧ್ಯಯನ ಮಾಡಿದ.[೭] ಇದರಿಂದ ಈತನ ನಿರೂಪಣೆ ನಿಜ ಎಂಬುದು ಸ್ಪಷ್ಟಗೊಂಡಿತು. ಈತನ ಕಾಲಕ್ಕೆ ಸೂಕ್ಷ್ಮದರ್ಶಕದ ಉಪಜ್ಞೆ ಇನ್ನೂ ಆಗಿರಲಿಲ್ಲವಾದ್ದರಿಂದ ಲೋಮನಾಳಗಳಂಥ ಸೂಕ್ಷ್ಮರಚನೆಗಳನ್ನು ಈತ ಕಾಣುವಂತಿರಲಿಲ್ಲ.
ಹಾರ್ವೆಯ ಸಿದ್ಧಾಂತಕ್ಕೆ ವಿರೋಧ
ಬದಲಾಯಿಸಿರಕ್ತ ಪರಿಚಲನೆ ವಿಷಯದಲ್ಲಿ ಈತನ ಸಿದ್ಧಾಂತವನ್ನು ಇಂಗ್ಲೆಂಡಿನಲ್ಲಿ ಮತ್ತು ಯುರೋಪಿನಲ್ಲಿಯ ವೈದ್ಯವೃಂದ ಬಲುಬೇಗ ಒಪ್ಪಿಕೊಂಡಿತು. ಪ್ರಾಚೀನ ವಿಜ್ಞಾನಿಗಳಾದ ಗೇಲೆನ್ ಮೊದಲಾದವರು ಹೇಳಿದ್ದನ್ನು ಯಾರೂ ಪ್ರಶ್ನಿಸಕೂಡದು, ಹಾಗೆ ಪ್ರಶ್ನಿಸಲು ಅಧಿಕಾರವೇ ಇಲ್ಲ ಎಂಬ ಅಂಧ ಮನೋಭಾವ ಸಾಮಾನ್ಯವಾಗಿದ್ದ ಆ ಕಾಲದಲ್ಲಿ ಈ ನೂತನ ಸಿದ್ಧಾಂತಕ್ಕೆ ಒಪ್ಪಿಕೊಳ್ಳದಿರುವುದಕ್ಕೆ ಇವನ ಪ್ರಯೋಗಗಳು ಮತ್ತು ವಾದಗಳು ಅವಕಾಶವನ್ನೇ ಕೊಡುವಂತಿರಲಿಲ್ಲ. ಆದರೂ ಇವನ ಸಿದ್ಧಾಂತಕ್ಕೆ ಪ್ರತಿಭಟನೆ ಇಲ್ಲದಿರಲಿಲ್ಲ. ಅಲ್ಲದೆ ಈ ರೀತಿ ಇವನು ಅರಿಸ್ಟಾಟಲ್, ಗೇಲೆನ್‌ಗಳ ಬೋಧನೆಗೆ ವಿರುದ್ಧವಾಗಿ ಪ್ರತಿಪಾದಿಸುವನೆಂದು ಕ್ರುದ್ಧರಾದ ಜನರಿಂದ ಇವನ ವೈದ್ಯವೃತ್ತಿಯೂ ಗಣನೀಯವಾಗಿಯೇ ಕುಂಠಿತವಾಯಿತು.[೮] ಈತನ ಸಿದ್ಧಾಂತವನ್ನು ಒಪ್ಪದೆ ಪ್ರತಿಭಟಿಸಿದವರ ಪೈಕಿ ನ್ಯೂರೆಂಬರ್ಗಿನ ಕ್ಯಾಸ್ಪಾರ್ ಹಾಫ್‌ಮನ್ ಎಂಬ ವಿಜ್ಞಾನಿಯೂ ಒಬ್ಬ. ಆತ ಯೂರೊಪಿನಲ್ಲಿ ಸಂಚರಿಸುತ್ತಿದ್ದಾಗ ಅವನನ್ನು ಸಂದರ್ಶಿಸಿ ರಕ್ತಪರಿಚಲನೆ ತಾನು ಪ್ರತಿಪಾದಿಸಿದಂತೆಯೇ ಇದೆ ಎನ್ನುವುದನ್ನು ಆತನಿಗೆ ಮನವರಿಕೆ ಮಾಡಿಕೊಡಬೇಕೆಂದು ಇವನು ತನ್ನ ಸ್ವಾಭಾವಿಕ ನಡೆವಳಿಕೆಗೆ ಪ್ರತಿಯಾಗಿ ನಿರ್ಧರಿಸಿದ. ಆದರೆ ಎಷ್ಟು ಪ್ರತ್ಯಕ್ಷ ಪ್ರಮಾಣಗಳನ್ನು ಮಾಡಿ ತೋರಿಸಿದರೂ ಕೇವಲ ಮೊಂಡುತನದಿಂದ ಹಾಫ್‌ಮನ್ ಒಪ್ಪದೇ ಇದ್ದದ್ದು ಇವನಿಗೆ ಬಲು ಬೇಸರ ತರಿಸಿ ಕೊನೆಗೆ ಕೋಪದಿಂದ ತಾನು ಹಿಡಿದಿದ್ದ ಶಸ್ತ್ರ ಸಲಕರಣೆಗಳನ್ನು ಬಿಸಾಡಿಹೋದನೆಂದು ತಿಳಿದುಬಂದಿದೆ. ಪ್ಯಾರಿಸ್ಸಿನ ಪ್ರಸಿದ್ಧ ವೈದ್ಯ ಜೀನ್ ರಿಯೋಲಾನ್ ಎಂಬವ ಹಾರ್ವೆಯ ರಕ್ತ ಪರಿಚಲನೆಯ ಸಿದ್ಧಾಂತವನ್ನು ಭಾಗಶಃ ಒಪ್ಪಿಕೊಂಡಿದ್ದ. ಇವನು ಅವನಿಗೆ ಎರಡು ದೀರ್ಘ ಪತ್ರಗಳನ್ನು ಬರೆದು ಅದರಲ್ಲಿ ರಿಯೋಲಾನ್ ಎತ್ತಿದ ಆಕ್ಷೇಪಣೆಗಳಿಗೆಲ್ಲ ತಕ್ಕ ಉತ್ತರ ಕೊಟ್ಟದ್ದಲ್ಲದೆ ಇನ್ನೂ ಬೇರೆ ಬೇರೆ ಪ್ರಯೋಗಗಳನ್ನು ಸೂಚಿಸಿ ತನ್ನ ಸಿದ್ಧಾಂತವೇ ಸರಿ ಎಂದು ತಿಳಿಯಪಡಿಸಿದ. ಇವನ ಸಿದ್ಧಾಂತವನ್ನು ಒಪ್ಪದೆ ಇದ್ದವರು ವಿರಳವಾಗಿದ್ದರೂ ಸುಮಾರು 80 ವರ್ಷಗಳಾದ ಮೇಲೂ ರಿಯೋಲಾನ್ ಅಂಥವರು ಇದ್ದರೆಂದೂ 1701ರಲ್ಲಿ ಜೋಸೆಫ್ ಬ್ರೌನ್ ಎಂಬವ ಲಂಡನ್ನಿನಲ್ಲಿ ಇವನ ರಕ್ತಪರಿಚಲನೆಯ ಸಿದ್ಧಾಂತವನ್ನು ಅಲ್ಲಗಳೆದು ಉಪನ್ಯಾಸ ಮಾಡಿದನೆಂದೂ ತಿಳಿದುಬರುತ್ತದೆ.
ಇತರ ಸಾಧನೆಗಳು
ಬದಲಾಯಿಸಿಇವನು ಪರಿಶೋಧಿಸಿದ ಇನ್ನೊಂದು ವಿಚಾರ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಮತ್ತು ಭ್ರೂಣದ ಬೆಳೆವಣಿಗೆಗಳಿಗೆ ಸಂಬಂಧಪಟ್ಟಿದ್ದು. ಈ ವಿಚಾರಗಳನ್ನೊಳಗೊಂಡ ಗ್ರಂಥ ರಕ್ತ ಪರಿಚಲನೆಯನ್ನು ವಿವರಿಸಿರುವ ಗ್ರಂಥದ 5-6 ಪಟ್ಟು ದೊಡ್ಡದಾಗಿದ್ದರೂ ಅದರಷ್ಟು ನಿಖರವಾಗಿಲ್ಲ. ವಿಷಯಗಳ ಅಸ್ಪಷ್ಟ ನಿರೂಪಣೆಗಳು ಇದಕ್ಕೆ ಕಾರಣ. ಬಹುಶಃ ಪರಿಶೋಧನೆಗೆ ಅಗತ್ಯವಾದ ಸಲಕರಣೆ, ವಿಶೇಷ ವಿಧಾನಗಳು ಇವನ ಕಾಲಕ್ಕೆ ಇನ್ನೂ ಒದಗಿ ಬಂದಿರಲಿಲ್ಲವಾದ್ದರಿಂದ ಈತನಿಗೆ ವಿಷಯ ನಿರೂಪಣೆಯನ್ನು ಹೆಚ್ಚು ನಿರ್ದಿಷ್ಟವಾಗಿ ಮಾಡಲಾಗಲಿಲ್ಲವೆಂದು ಹೇಳಲಾಗಿದೆ. ಈ ಪರಿಶೋಧನೆಗಳ ಪರಿಣಾಮವಾಗಿ ಎಲ್ಲ ಪ್ರಾಣಿಗಳೂ ಅಂಡದಿಂದ ಪ್ರಾರಂಭವಾದವೇ (ಆಮ್ನೆ ವೈವಮ್ ಎಕ್ಸ್ ಓವೋ) ಎಂದು 1651ರಲ್ಲಿ ಈತ ಹೇಳಿದನಾದರೂ[೯] ವಾಸ್ತವವಾಗಿ ಸ್ತನಿಗಳಲ್ಲಿ ಅಂಡ ಇರುವ ವಿಚಾರ ಪತ್ತೆಯಾದದ್ದು 1827 ರಲ್ಲಿ, ಈತ ನಿಧನಹೊಂದಿ ಸುಮಾರು 170 ವರ್ಷಗಳಾದ ಮೇಲೆಯೇ. ಪ್ರಜನನಕ್ರಿಯೆ ಮತ್ತು ಭ್ರೂಣದ ಬೆಳೆವಣಿಗೆ ವಿಚಾರವಾಗಿ ಫ್ಯಾಬ್ರೀಷಿಯಸ್ ತನ್ನ ಅಧ್ಯಯನಕ್ಕೆ 1600ರ ವಸಂತಕಾಲದಲ್ಲಿ ತನ್ನ ಪ್ರಿಯ ಶಿಷ್ಯನಾಗಿದ್ದ ಇವನ ಸಹಾಯವನ್ನು ಪಡೆದಾಗಲೇ ಇವನು ಈ ವಿಷಯದಲ್ಲಿ ವ್ಯಾಸಂಗ ಪ್ರಾರಂಭಿಸಿದ ಎಂದುಕೊಳ್ಳಬಹುದು. ಅರಿಸ್ಟಾಟಲನ ಬಳಿಕ ಕೋಳಿಯ ತತ್ತಿಯಲ್ಲಿ ಭ್ರೂಣದ ಬೆಳೆವಣಿಗೆಯನ್ನು ಅಭ್ಯಸಿಸಿದವರಲ್ಲಿ ಮೊದಲಿನಿಂದಲೂ ಹಾರ್ವೆಯ ಮೇಲೆ ಪ್ರಭಾವ ಬೀರಿತ್ತೆಂದು ಕಾಣಿಸುತ್ತದೆ. ಮನೆಯಲ್ಲಿ ಹೆಂಡತಿ ಸಾಕಿದ್ದ, ತಾವೆಲ್ಲರೂ ಅಂದು ಗಂಡು ಹಕ್ಕಿ ಎಂದುಕೊಂಡಿದ್ದ ಗಿಳಿ, ದೊರೆ ಚಾರ್ಲ್ಸ್ ವಿಂಡ್ಸರ್ ಪಾರ್ಕಿನಲ್ಲಿ ಜಿಂಕೆಗಳು ಮರಿ ಹಾಕುವ ಕಾಲದಲ್ಲಿ ಪ್ರತಿವರ್ಷವೂ ವೈಜ್ಞಾನಿಕ ಕಾರಣಗಳಿಗಾಗಿ ಜಿಂಕೆಗಳನ್ನು ಕೊಲ್ಲಬಹುದೆಂಬ ತನಗೆ ಇತ್ತ ಅನುಮತಿಯ ಮೇರೆಗೆ ಕೊಂದ ಜಿಂಕೆಗಳು, ಪ್ರಸಿದ್ಧ ಪ್ರಸವಶಾಸ್ತ್ರಜ್ಞನಾಗಿ ತಾನು ನಡೆಸಿದ ಅನೇಕ ಪ್ರಸವ ಸನ್ನಿವೇಶಗಳು-ಇವುಗಳಿಂದೆಲ್ಲ ಇವನು ವಿಷಯ ಸಂಗ್ರಹ ಮಾಡಿದ್ದ. ಅರಿಸ್ಟಾಟಲ್, ಗೇಲನ್ ಹೇಳಿದ್ದಂತೆ ಸಂತಾನ ಸೃಷ್ಟಿಗೆ ಹೆಣ್ಣುಗಂಡು ಎರಡೂ ಆವಶ್ಯಕ ಎನ್ನುವ ಮಾತನ್ನು ಈತ ಪುಷ್ಟೀಕರಿಸಿ, ಎಲ್ಲ ಪ್ರಾಣಿಗಳೂ ಮಾನವರೂ ಅಂಡದಿಂದಲೇ ಉದ್ಭವಿಸುವುದು ಎಂದು ಸ್ಪಷ್ಟವಾಗಿ ತಿಳಿಸಿದ. ಕೋಳಿಯಲ್ಲಿಯ ಅಂಡಾಶಯ ಅಂಡನಾಳಗಳನ್ನು ವಿವರಿಸಿ ಅಂಡಾಶಯದಲ್ಲಿ ಅಂಡಾಣು ಒಂದು ಬಿಂದುವಿನಂತಿರುವುದೆಂದೂ ಅನಂತರ ಅದು ಹಳದಿ ಮತ್ತು ಬಿಳಿಭಾಗಗಳಿಂದ ಅವೃತವಾಗುವುದೆಂದೂ ತಿಳಿಸಿದ. ಆಗ ತಾನೇ ಹೊರಬಂದ ತತ್ತಿಯ ರಚನೆ ಹೇಗೆ ಇರುತ್ತದೆ, ಮುಂದಿನ ದಿವಸಗಳಲ್ಲಿ ಅದು ಹೇಗೆ ವೃದ್ಧಿಯನ್ನು ತೋರಿಸುತ್ತದೆ ಎನ್ನುವುದನ್ನು ಇವನು ವಿಶದೀಕರಿಸಿದ. ತತ್ತಿಯಲ್ಲಿ ಭ್ರೂಣ ಕೋಳಿಯಾಗುವುದು ಬಹುಶಃ ಕೀಟವರ್ಗದಲ್ಲಿ ತತ್ತಿ ಕೋಶಾವರಣದಿಂದ ಚಿಟ್ಟೆಯಾಗುವುದನ್ನು ಹೋಲುತ್ತದೆ ಎಂದು ತಿಳಿಸಿದ. ಭ್ರೂಣ ಬೆಳೆಯುತ್ತ ಹೋದಂತೆ ಹೆಚ್ಚು ಅಂಗಗಳು ಮೂಡಿ ಭ್ರೂಣದೇಹ ಮಾರ್ಪಾಡಾಗುತ್ತಲೇ ಇರುವುದು ಎನ್ನುವ ಸಿದ್ಧಾಂತವನ್ನು ಮಂಡಿಸಿದ. ಇದಕ್ಕೆ ಜೈವಾಂಕುರ ಸಿದ್ಧಾಂತವೆಂದು (ಎಪಿಜೆನಿಸಿಸ್) ಹೆಸರು.[೧೦] ಕೆಲವು ವರ್ಷಗಳ ಅನಂತರ ವಿಜ್ಞಾನಿಗಳು ಈ ಸಿದ್ಧಾಂತವನ್ನು ಮೂಲೆಗೆ ನೂಕಿ ಅಂಡಾಣುವಿನಲ್ಲಿ ಅಂಗಗಳೂ ಪೂರ್ವಭಾವಿಯಾಗಿಯೇ ಸೃಷ್ಟಿಗೊಂಡಿರುತ್ತವೆ ಎಂದು ಪ್ರತಿಪಾದಿಸಿದರೂ ಮತ್ತೆ 1759ರಿಂದ ಈಚೆಗೆ ಇವನ ಸಿದ್ಧಾಂತಕ್ಕೆ ಮನ್ನಣೆ ಮತ್ತೆ ದೊರಕಿದೆ. ಪ್ರಜನನ ಸಂಬಂಧೀ ವ್ಯಾಸಂಗವನ್ನು ದೀರ್ಘಕಾಲಿಕವಾಗಿಯೂ, ವ್ಯಾಪಕವಾಗಿಯೂ ಮಾಡಿ ವಿಷಯಗಳನ್ನು ಸಂಗ್ರಹಿಸಿ ಗುರುತು ಹಾಕಿಟ್ಟಿದ್ದರೂ ಇವನು ಅವುಗಳನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ. ಕೊನೆಗೆ ತನ್ನ ಸಮಸ್ತ ವ್ಯಾಸಂಗ, ವೈದ್ಯಕೀಯ ಚಟುವಟಿಕೆ ಎಲ್ಲವನ್ನೂ ವರ್ಜಿಸಿ ತಮ್ಮನ ಮನೆಯಲ್ಲಿ ತನ್ನ ವಾರ್ಧಕ್ಯ ಕಳೆದ. ಮುಂದೆ 1650ರಲ್ಲಿ ಇವನ ಸ್ನೇಹಿತ ಜಾರ್ಜ್ ಎಂಟ್ ಎಂಬ ವೈದ್ಯ ಹಾಗೆ ಪ್ರತಿಪಾದಿಸಿದ ವಿಚಾರಗಳಿರುವ ಹಸ್ತಪ್ರತಿಯನ್ನು ಮುದ್ರಿಸಿ ಪ್ರಕಟಿಸಿದ (1651).
ಇವನ ರಚನೆಗಳು ಎರಡು ಗ್ರಂಥಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜೀನ್ ರಿಯೋಲಾನಿಗೆ ಹಾರ್ವೆ ಬರೆದ ಎರಡು ದೀರ್ಘಪತ್ರಗಳು ಗ್ರಂಥದಂತೆಯೇ ಇದ್ದು, ವಿಷಯ ಪ್ರತಿಪಾದನೆ, ವಾದವಿವಾದಗಳು, ಪ್ರಯೋಗವಿಧಾನ, ಪರಿಣಾಮಗಳು ಎಲ್ಲವನ್ನೂ ಒಳಗೊಂಡಿದ್ದುವು. ಇವು ಕೇಂಬ್ರಿಜ್‌ನಲ್ಲಿ ಪ್ರಕಟವಾದುವು (1649). ತನಗೆ ಸ್ನೇಹಿತನಂತೆ ಇದ್ದ ಚಾರ್ಲ್ಸ್ ದೊರೆ ಕೊಲೆಗೀಡಾದ ಪ್ರಕ್ಷುಬ್ಧ ಸಂದರ್ಭದಲ್ಲಿಯೂ ಇವನು ವೈಜ್ಞಾನಿಕ ವಿಷಯಗಳ ಸರಿ ತಪ್ಪು ನಿರ್ಣಯದಲ್ಲಿ ಎಷ್ಟು ಆಸಕ್ತನಾಗಿದ್ದನೆಂಬುದನ್ನು ಇದು ತೋರಿಸುತ್ತದೆ. ಇದೇ ರೀತಿ ಕ್ಯಾಸ್ಪಾರ್ ಹಾಫ್‌ಮನ್, ಶ್ಲೇಜಲ್, ವ್ಲಾಕ್‌ವೆಲ್ಡ್, ಮಾರಿಸನ್ ಮೊದಲಾದವರಿಗೆ ಕ್ರಮವಾಗಿ ಬರೆದ ವೈಜ್ಞಾನಿಕ ವಿಷಯ ಪತ್ರಗಳಲ್ಲಿ ಹಾರ್ವೆಯ ಅಮಿತಾಸಕ್ತಿಗಳು ಎದ್ದು ಕಾಣುತ್ತವೆ. ಅಲ್ಲದೆ ತಾಮಸ್ ಪಾರ್ ಎಂಬ, 150 ವರ್ಷಗಳಿಗೂ ಮೀರಿ ಬದುಕಿದ್ದನೆಂದು ಹೇಳಲಾದ, ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವಿವರಣೆ, ಇವನು ಮೊದಲನೆಯ ಲುಮ್ಲೆಯನ್ ಉಪನ್ಯಾಸಕ್ಕೆ ಉಪಯೋಗಿಸಿದ ವ್ಯಾಖ್ಯಾನ ಇವನ್ನೂ ಆತನ ಕೃತಿಗಳೆಂದು ಭಾವಿಸಿದೆ. ಕೀಟಗಳ ಪ್ರಜನನಕ್ರಿಯೆ ಕುರಿತು ಇವನು ಆಳವಾಗಿ ವ್ಯಾಸಂಗಿಸಿ ಗ್ರಂಥವೊಂದನ್ನು ರಚಿಸಿದ್ದ. ಆದರೆ ದೊರೆಯನ್ನು ಹಿಂಬಾಲಿಸುತ್ತಿದ್ದ ಕಾಲದಲ್ಲಿ ಇವನು ದೊರೆಯೊಡನಾಡಿಯೆಂದು ಕ್ರುದ್ಧರಾದ ಜನ ಲಂಡನ್ನಿನಲ್ಲಿ ಇವನ ಮನೆಯನ್ನು 1642ರಲ್ಲಿ ಲೂಟಿ ಮಾಡಿದಾಗ ಆ ಹಸ್ತಪ್ರತಿ ಪೂರ್ಣವಾಗಿ ನಾಶವಾಗಿ ಹೋಯಿತು.[೧೧] ಪಾರ್ಲಿಮೆಂಟಿನ ಅನುಮತಿ ಇದ್ದಾಗಲೂ ಜನ ತನ್ನ ಮೇಲೆ ಆರೋಪಣೆ ಮಾಡಿ ಅಮೂಲ್ಯ ವ್ಯಾಸಂಗ ಫಲವನ್ನು ನಿರ್ನಾಮ ಮಾಡಿದ್ದು ಇವನಿಗೆ ಬಲು ಸಂಕಟವನ್ನು ತಂದುಕೊಟ್ಟಿತು. ಇಷ್ಟೇ ಅಲ್ಲದೆ ಶ್ವಾಸಕ್ರಮದ ಮೇಲೆಯೂ ರೋಗಶಾಸ್ತ್ರದ ಮೇಲೆಯೂ ಗ್ರಂಥಗಳನ್ನು ರಚಿಸಿದ್ದನೆಂದೂ ಬಹುಶಃ ಅವು ಲಂಡನ್ನಿನ ಭೀಕರ ಅಗ್ನಿಕಾಂಡದಲ್ಲಿ ನಾಶವಾಗಿ ಹೋಗಿರಬೇಕೆಂದೂ ಹೇಳಲಾಗಿದೆ.
ನಿಧನ
ಬದಲಾಯಿಸಿಈತ 1657 ಜೂನ್ 3ರಂದು ಲಂಡನ್ನಿನಲ್ಲಿ ನಿಧನನಾದ.
ಉಲ್ಲೇಖಗಳು
ಬದಲಾಯಿಸಿ- ↑ {{cite encyclopedia |encyclopedia=Oxford Dictionary of National Biography |edition=online |publisher=Oxford University Press |ref=harv |last =French |last1 = |author = |author1 = |authors = |first =Roger |first1 = |authorlink = |author-link = |HIDE_PARAMETER10= |authorlink1 = |last2 = |author2 = |first2 = |authorlink2 = |HIDE_PARAMETER16= |last3 = |author3 = |first3 = |authorlink3 = |HIDE_PARAMETER21= |title =William Harvey |title = |url =http://www.oxforddnb.com/view/article/12531 |doi = |origyear = |year = |date = |month = |HIDE_PARAMETER30= |HIDE_PARAMETER31= |separator = |mode = |doi=10.1093/ref:odnb/12531 }}
- ↑ "Harvie, William (HRVY593W)". A Cambridge Alumni Database. University of Cambridge.
- ↑ Power 1897, p. 31.
- ↑ Servetus, Michael (1553). Christianismi restitutio … (in ಲ್ಯಾಟಿನ್). Vienne, France: Baltasar Arnoullet. p. 170. Available at: Biblioteca Digital Hispánica – Biblioteca Nacional de España From p. 170: "Fit autem communicatio hæc non per parietem cordis medium, ut vulgo creditur, sed magno artificio a dextro cordis ventriculo, longo per pulmones ductu, agitatur sanguis subtilis: a pulmonibus præparatur, flavus efficatur: et a vena arteriosa, in arteriam venosam transfunditur." (However this communication [of blood from the right to the left ventricle] occurs not through the middle wall of the heart, as is commonly believed, but by a great mechanism, the subtle blood is driven from the right ventricle of the heart, [and] at length led through the lungs; it is made ready in the lungs, is made yellowish, and is [thus] transferred from the pulmonary artery into the pulmonary vein.)
- ↑ Friedland, Gerald (2009). "Discovery of the function of the heart and circulation of blood". Cardiovascular Journal of Africa. 20 (3): 160. PMC 3721262. PMID 19575077.
- ↑ Billimoria, Aspi. "Pioneers in Cardiology: William Harvey". JAPI.
- ↑ Reveron, Rafael Romero (2011). "Marcello Malpighi (1628-1694), Founder of Microanatomy". Int. J. Morphol. 29 (2): 399–402. doi:10.4067/S0717-95022011000200015.
- ↑ Beveridge, W. I. B. (1950). The art of scientific investigation. New York: W. W. Norton.
- ↑ Needham, Joseph (1934). A History of Embryology. New York. pp. 133–153.
- ↑ Heard, Edith (December 13, 2012). "Épigénétique et mémoire cellulaire: Leçon inaugurale prononcée le jeudi 13 décembre 2012". Épigénétique et mémoire cellulaire. Leçons inaugurales (in French). Collège de France. ISBN 9782722602328. Retrieved June 10, 2016.
{{cite book}}
:|website=
ignored (help)CS1 maint: unrecognized language (link) - ↑ Power 1897, p. 125.
ಹೊರಗಿನ ಕೊಂಡಿಗಳು
ಬದಲಾಯಿಸಿ- Works by William Harvey at Faded Page (Canada)
- William Harvey info from the (US) National Health Museum
- The Harvey Genealogist: The Harvey Book: PART ONE (mentions William Harvey and various ancestors and relatives)
- William Harvey: "On The Motion Of The Heart And Blood In Animals", 1628
- Images from De motu cordis From The College of Physicians of Philadelphia Digital Library
- Hutchinson, John (1892). . Men of Kent and Kentishmen (Subscription ed.). Canterbury: Cross & Jackman. pp. 63–64.