ಗೇಲೆನ್ಸು. 129-200. ಗ್ರೀಸ್ ಮತ್ತು ರೋಮಿನ ವೈದ್ಯ ಹಾಗೂ ಲೇಖಕ.

"Claude Galien". Lithograph by Pierre Roche Vigneron. (Paris: Lith de Gregoire et Deneux, ca. 1865)

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಏಷ್ಯಮೈನರಿನ ಮೈಸಿಯ ದೇಶದ ರಾಜಧಾನಿಯಾಗಿದ್ದ ಪರ್ಗಮಮ್ ಎಂಬ ಸ್ಥಳದಲ್ಲಿ ಗ್ರೀಕ್ ದಂಪತಿಗಳ ಮಗನಾಗಿ ಜನಿಸಿದ. ಹದಿನೈದನೆಯ ವಯಸ್ಸಿನಲ್ಲಿ ತತ್ತ್ವಶಾಸ್ತ್ರ ವ್ಯಾಸಂಗವನ್ನೂ 18ನೆಯ ವಯಸ್ಸಿನಲ್ಲಿ ವೈದ್ಯ ವ್ಯಾಸಂಗವನ್ನೂ ಪ್ರಾರಂಭಿಸಿ ವೃತ್ತಿಯಲ್ಲಿ ಇವೆರಡನ್ನೂ ಮಿಶ್ರ ಮಾಡಿಯೇ ವ್ಯವಹರಿಸುತ್ತಿದ್ದ. ಈತ 146 ರಲ್ಲಿ ಗ್ರೀಸಿಗೆ ವೈದ್ಯವಿದ್ಯೆ ಕಲಿಯಲು ತೆರಳಿದ. ಅಲ್ಲಿಂದ ಪೆಲಾಪ್ಸ್‌ ಎಂಬ ಪ್ರಸಿದ್ಧ ವೈದ್ಯನ ಕೈಕೆಳಗೆ ವ್ಯಾಸಂಗ ಮಾಡಲು ಸ್ಮರ್ನಕ್ಕೆ ಹೋದ (148). ಮುಂದೆ ಫಿನಿಷಿಯ, ಪ್ಯಾಲಸ್ತೀನ್, ಕೋರಿಂಥ್, ಕ್ರೀಟ್, ಸೈಪ್ರಸ್ ಮುಂತಾದ ಸ್ಥಳಗಳಲ್ಲೆಲ್ಲ ಅಲೆಯುತ್ತ ವೈದ್ಯಕೀಯ ವ್ಯಾಸಂಗವನ್ನು ಮುಂದುವರಿಸಿ ಕೊನೆಗೆ ಈಜಿಪ್ಟಿನ ಅಲೆಗ್ಸಾಂಡ್ರಿಯ ನಗರಕ್ಕೆ ಬಂದ. ಪರ್ಗಮಮಿಗೆ ಹಿಂತಿರುಗಿ (157) ಅಲ್ಲೇ ನೆಲೆಸಿ ಖಡ್ಗಮಲ್ಲರ (ಗ್ಲೇಡಿಯೇಟರ್) ಶಾಲೆಯಲ್ಲಿ ಶಸ್ತ್ರವೈದ್ಯನಾಗಿ ಸೇರಿಕೊಂಡ. ಅಲ್ಲಿ ಗಾಯಗೊಂಡ ಖಡ್ಗಮಲ್ಲರಿಗೆ ಶಸ್ತ್ರಚಿಕಿತ್ಸೆ ಮಾಡುತ್ತ ತನ್ನ ಶಸ್ತ್ರಚಿಕಿತ್ಸಾ ಪಾರಂಗತಿಯನ್ನು ಸಂಪುರ್ಣ ಮಾಡಿಕೊಂಡ. ಆ ಸಮಯದಲ್ಲಿ ರೋಮನ್ ಚಕ್ರಾಧಿಪತ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದುದರಿಂದ ಸುಮಾರು 161-162 ರಲ್ಲಿ ರೋಮಿಗೆ ತೆರಳಿ ಅಲ್ಲಿ ಜನಪ್ರಿಯನಾಗಿ ಕೊನೆಗೆ ಚಕ್ರವರ್ತಿ ಮಾರ್ಕಸ್ ಅರೇಲಿಯಸನ ಆಸ್ಥಾನವೈದ್ಯನಾಗಿ ನೇಮಕಗೊಂಡ. ಬಳಿಕ 167 ರಲ್ಲಿ ತನ್ನ ಜನ್ಮಸ್ಥಳಕ್ಕೆ ಹಿಂತಿರುಗಿದ. ಆದರೆ ಅದೇ ಸುಮಾರಿಗೆ (169) ಈತನಿಗೆ ಯುದ್ಧರಂಗದಲ್ಲಿ ತನ್ನನ್ನು ಹಿಂಬಾಲಿಸಲು ಮಾರ್ಕಸ್ ಅರೇಲಿಯಸನಿಂದ ಕರೆಬಂದಿತು. ಗೇಲೆನ್ ರೋಮಿಗೆ ಹಿಂತಿರುಗಿ ಭಾವೀ ಚಕ್ರವರ್ತಿ ಕಾಮೊಡಸಿನ ಆರೋಗ್ಯವನ್ನು ನೋಡಿಕೊಳ್ಳಲು ತಾನು ರೋಮಿನಲ್ಲಿ ಇರಬೇಕಾಗುತ್ತದೆಂಬ ನೆಪವೊಡ್ಡಿ ಯುದ್ಧರಂಗಕ್ಕೆ ಹೋಗುವುದನ್ನು ತಪ್ಪಿಸಿಕೊಂಡ. ಆಮೇಲೆ ಕೊನೆಯವರೆಗೂ ರೋಮಿನಲ್ಲೇ ನೆಲೆಸಿದ್ದು ಸುಮಾರು 200 ರಲ್ಲಿ ಬಹುಶಃ ಸಿಸಿಲಿಯಲ್ಲಿ ನಿಧನನಾದ.

ಸಾಧನೆಗಳು

ಬದಲಾಯಿಸಿ

ಗೇಲೆನ್ ತನ್ನ ಪಾಠಪ್ರವಚನಗಳಿಗೂ ಲೇಖನಗಳಿಗೂ ಪ್ರಸಿದ್ಧನಾಗಿದ್ದ. ಮುಖ್ಯ ವಾಗಿ ವೈದ್ಯಶಾಸ್ತ್ರ ಮತ್ತು ತತ್ತ್ವವಿಷಯಗಳ ಮೇಲೆ ಈತ ಸುಮಾರು 300 ಗ್ರಂಥಗಳನ್ನು ರಚಿಸಿದ್ದಾನೆಂದು ಪ್ರತೀತಿ. ಈ ವೈದ್ಯಗ್ರಂಥಗಳಲ್ಲಿ ಅರ್ಧದಷ್ಟು ಮಾತ್ರ ಉಪಲಬ್ಧವಾಗಿವೆ. ತತ್ತ್ವಜ್ಞಾನ ವಿಷಯ ಗ್ರಂಥಗಳು ಬಹುಪಾಲು ಕಳೆದುಹೋಗಿವೆ. ಸಿಕ್ಕಿರುವ ಗ್ರಂಥಗಳಲ್ಲಿ 98 ಅವನೇ ನಿಶ್ಚಯವಾಗಿ ಬರೆದವೆಂದೂ 19 ಬಹುಶಃ ಅವನು ಬರೆದಿರಬಹುದೆಂದೂ 45 ಅವನ ರಚನೆಗಳೇ ಅಲ್ಲವೆಂದೂ ತಿಳಿದುಬಂದಿದೆ. 191 ರಲ್ಲಿ ರೋಮಿನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಅವನ ಅನೇಕ ಗ್ರಂಥಗಳು ಸುಟ್ಟುಹೋದವು. ಆದರೂ ಗೇಲೆನ್ ಧೃತಿಗೆಡದೆ ತನ್ನ ಕೊನೆಯ ಕಾಲದವರೆಗೂ ಪಾಠಪ್ರವಚನಗಳನ್ನೂ ಪ್ರಯೋಗಗಳನ್ನೂ ನಡೆಸುತ್ತಲೇ ಇದ್ದ.

ಗೇಲೆನನ್ನು ಪ್ರಯೋಗಾತ್ಮಕ ಶರೀರ ವಿಜ್ಞಾನದ ಸ್ಥಾಪಕನೆಂದು ಗಣಿಸಬಹುದು. ಹಿಪಾಕ್ರಟೀಸನ ತರುವಾಯದ ಗತಕಾಲದ ವೈದ್ಯರಲ್ಲೆಲ್ಲ ಈತನೇ ಅತ್ಯಂತ ಪ್ರಸಿದ್ಧನಾದವ. ಮಾನವ ದೇಹದ ಅಂಗಛೇದನವನ್ನು ಇವನು ಮಾಡದಿದ್ದರೂ ಬೇರೆ ಪ್ರಾಣಿಗಳ ದೇಹಗಳನ್ನು ಸ್ಥಿರಪ್ರಯತ್ನ ಮತ್ತು ಚತುರತೆಯಿಂದ ಛೇದನ ಮಾಡಿ ತಿಳಿದ ವಿಷಯಗಳನ್ನು ಕರಾರುವಾಕ್ಕಾದ ಮತ್ತು ಸ್ಪಷ್ಟವಾದ ವಾಕ್ಸರಣಿಯಿಂದ ವಿವರಿಸುತ್ತ ತನ್ನ ಕಾಲದಲ್ಲಿ ಪ್ರಚಲಿತವಿದ್ದ ವೈದ್ಯಜ್ಞಾನವನ್ನೆಲ್ಲ ಕ್ರೋಡೀಕರಿಸಿ ಭದ್ರವಾದ ತಳಹದಿಯ ಮೇಲೆ ಗ್ರಂಥಗಳನ್ನು ರಚಿಸಿದ. ಸುಮಾರು 16ನೆಯ ಶತಮಾನದವರೆಗೂ ಈತನ ವಿಚಾರಗಳು ಚರ್ಚೆಗೆ ಒಳಪಡಿಸಲಾಗದ ಅಧಿಕಾರವಾಣಿಯಾಗಿದ್ದವು. ಈತನನ್ನು ವೈದ್ಯರಾಜನೆಂದೂ, ವೈದ್ಯಕೀಯದ ಸರ್ವಾಧಿಕಾರಿಯೆಂದೂ ವರ್ಣಿಸಿದ್ದಾರೆ. ಆದರೆ ರೋಮ್ ಚಕ್ರಾಧಿಪತ್ಯ ನಾಶವಾದ ಮೇಲೆ ಪಶ್ಚಿಮ ಯುರೋಪಿನಲ್ಲಿ ಗೇಲೆನ್ ಪ್ರಸಾರಮಾಡಿದ್ದ ಜ್ಞಾನ ಇಲ್ಲವಾಯಿತು. ಪೂರ್ವಕ್ಕೆ ಪ್ರಸರಿಸಿದ್ದ ಜ್ಞಾನ ಮಾತ್ರ ಲ್ಯಾಟಿನ್ ಮತ್ತು ಅರಬ್ಬಿ ಭಾಷೆಗಳಿಗೆ ಪರಿವರ್ತಿತವಾಗಿ ಜೀವಂತವಾಗಿತ್ತು. ಗೇಲೆನನ ಗ್ರಂಥಗಳು ಪಶ್ಚಿಮ ಯುರೋಪಿನ ಪುನರುಜ್ಜೀವನಕಾಲದ ಸುಮಾರಿಗೆ (15-16ನೆಯ ಶತಮಾನ) ಥಾಮಸ್ ಲಿನೇಕರ್, ಗಿಂಟರ್ ಫಾನ್ ಅಂಡರ್ನಾಕ್ ಮುಂತಾದವರ ವ್ಯಾಸಂಗ ಭಾಷ್ಯಗಳಿಂದ ಪುನರ್ಜನ್ಮ ಪಡೆದು ಅಧಿಕಾರಯುತ ಸ್ಥಾನವನ್ನು ಪಡೆದವು. ಗೇಲೆನನ ವಿಚಾರಗಳನ್ನು ಪ್ರಶ್ನಿಸುವ ಧೈರ್ಯ ಆ ಕಾಲದ ಯಾವ ವೈದ್ಯನಿಗೂ ಇರಲಿಲ್ಲ. ಆದರೆ ಇದರಿಂದ ವೈದ್ಯವಿದ್ಯೆಯ ಪ್ರಗತಿ ಬಹಳವಾಗಿ ಕುಂಠಿತವಾಯಿತು.


ಅಂಗರಚನಾಶಾಸ್ತ್ರ ಮತ್ತು ಶರೀರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗೇಲೆನ್ ತಿಳಿಸಿಕೊಟ್ಟ ವಿಚಾರಗಳು ವಿಶೇಷವಾಗಿ ಗಮನಾರ್ಹವಾಗಿವೆ. ಅಭಿದಮನಿಗಳಲ್ಲಿ (ಅರ್ಟರೀಸ್) ವಾಯು ಇರುವುದೆಂದು ಸುಮಾರು 400 ವರ್ಷಗಳಿಂದಲೂ ಅಲೆಗ್ಸಾಂಡ್ರಿಯ ಪಂಥದವರು ಸಾರುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಗೇಲೆನ್ ಅವುಗಳಲ್ಲಿ ರಕ್ತವೇ ಇರುತ್ತದೆಂಬುದನ್ನು ತೋರಿಸಿಕೊಟ್ಟ. ಮಿದುಳು, ನರಗಳು, ಮಿದುಳುಬಳ್ಳಿ, ನಾಡಿ ಮುಂತಾದವುಗಳ ವಿಷಯವಾಗಿ ಗೇಲೆನ್ ಬಹು ತಿಳಿವಳಿಕೆಯನ್ನುಂಟುಮಾಡಿದ. ಮಿದುಳುಬಳ್ಳಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಛಿದ್ರಿಸಿ, ಅದರಿಂದ ಸಂವೇದನೆ ಮತ್ತು ಕ್ರಿಯಾಶೀಲತ್ವದಲ್ಲಿ ಆಗುವ ಬದಲಾವಣೆಗಳನ್ನೂ ಸಂಯಮರಹಿತ ಮೂತ್ರವಿಸರ್ಜನೆಯನ್ನೂ ವಿವರವಾಗಿ ಪರಿಶೀಲಿಸಿದ. ಮಿದುಳುಬಳ್ಳಿಯನ್ನು ಫ್ರೆನಿಕ್ ನರಗಳ ಉಗಮದಿಂದ ಮೇಲ್ಮಟ್ಟದಲ್ಲಿ ಛಿದ್ರಿಸಿದಾಗ ಸಾವು ಸಂಭವಿಸುವುದು ಏಕೆ ಎನ್ನುವುದನ್ನು ಯಥಾವತ್ತಾಗಿ ವಿವರಿಸಿದ. ಆದರೆ ಮಿದುಳುಬಳ್ಳಿಯನ್ನು ಎಡಬಲಭಾಗವಾಗಿ ಸೀಳಿದರೆ ಚಲನೆ ನಾಶವಾಗುವುದಿಲ್ಲವೆಂಬ ಅಂಶವನ್ನೂ ಸ್ಪಷ್ಟಪಡಿಸಿದ. ಗಂಟಲಿಗೆ ಒದಗುವ ನರವನ್ನು ಕಂಡುಹಿಡಿದು ಅದನ್ನು ಬಿಗಿಯಾಗಿ ದಾರದಿಂದ ಕಟ್ಟಿಬಿಟ್ಟರೆ ಪ್ರಾಣಿಗಳು ಕೂಗುವುದನ್ನು ಇಷ್ಟಬಂದಾಗ ತಡೆಹಿಡಿಯಬಹುದು ಎಂದು ತೋರಿಸಿಕೊಟ್ಟ. ಗುಂಡಿಗೆಯ ರಚನೆಯನ್ನೂ ಕ್ರಿಯೆಯನ್ನೂ ಚೆನ್ನಾಗಿ ತಿಳಿದಿದ್ದರೂ ಅದು ಮಾಂಸದ ಕೋಶವಿರಬಹುದೆಂದು ಮಾತ್ರ ನಂಬಲಿಲ್ಲ.

ಗೇಲೆನ್ ಎಂದರೆ ಸಮಾಧಾನವಾಗಿರುವ ಎಂಬ ಅರ್ಥ ಬರುತ್ತದೆ. ಆದರೆ ಈತ ಇದಕ್ಕೆ ವ್ಯತಿರಿಕ್ತವಾಗಿ ಸೊಕ್ಕಿದ ಮತ್ತು ಉದ್ಧಟವಾದ ಮನೋವೃತ್ತಿಯನ್ನು ಹುಟ್ಟುಗುಣವಾಗಿ ಪಡೆದಿದ್ದ. ತನಗೆ ನಿಸರ್ಗದ ಅರ್ಥಪುರ್ಣತೆ ನಿಚ್ಚಳವಾಗಿ ತಿಳಿದಿದೆಯೆಂದೂ ದೇವರ ಸೃಷ್ಟಿ ಏಕೆ ಆ ರೀತಿಯಲ್ಲೇ ಇದೆ ಎನ್ನುವುದು ತನಗೆ ಅರ್ಥವಾಗಿದೆ ಎಂದೂ ತನಗೆ ಗೊತ್ತಾಗದೇ ಇರುವುದು ಯಾವುದೂ ಇಲ್ಲವೆಂದೂ ಹೇಳಹೊರಟದ್ದು ಈತನ ತಪ್ಪು. ಇದರಿಂದಾಗಿ ತನ್ನ ನಿಜವಾದ ಮಹತ್ತ್ವಕ್ಕೆ ಕುಂದು ತಂದುಕೊಂಡ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
Galenou Apanta, 1538
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೇಲೆನ್&oldid=1124994" ಇಂದ ಪಡೆಯಲ್ಪಟ್ಟಿದೆ