ರೋಮ್ಯುಲಸ್ ವಿಟ್ಹೇಕರ್

ರೋಮ್ಯುಲಸ್ ವಿಟ್ಹೇಕರ್ (1943 - ) ವಿಶ್ವವಿಖ್ಯಾತ ಉರಗ ತಜ್ಞ. ಅಮೆರಿಕ ಸಂಜಾತ ಭಾರತೀಯ.

ರೋಮ್ಯುಲಸ್ ವಿಟ್ಹೇಕರ್

ಬಾಲ್ಯ, ವಿದ್ಯಾಭ್ಯಾಸ

ಬದಲಾಯಿಸಿ

ತಂದೆ ಆರ್. ಈ. ವಿಟ್ಹೇಕರ್, ತಾಯಿ ಡೋರಿಸ್ ವಿಟ್ಹೇಕರ್.  ಜನನ 23 ಮೇ 1943, ನ್ಯೂಯಾರ್ಕ್ ನಗರದಲ್ಲಿ. ಅದು ಎರಡನೇ ಮಹಾಯುದ್ಧದ ಸಮಯ. ಎರಡು ವರ್ಷ ತುಂಬುವ ವೇಳೆಗೆ ತಂದೆ ತಾಯಿಯ ವಿವಾಹ ವಿಚ್ಛೇದನವಾಯಿತು. ಆದರೆ, ಅಜ್ಚಿ (ತಾಯಿಯ ತಾಯಿ)ಯ ತುಂಬಿದ ಸ್ವೀಡಿಷ್ ಸಂಸಾರ ರೊಮ್ಯುಲಸ್ ವಿಟ್ಹೇಕರ್ ಹಾಗೂ ಆತನ ಹಿರಿಯ ಸಹೋದರಿ ಗೇಲ್‌ರನ್ನು ತನ್ನ ಆತ್ಮೀಯ ತೆಕ್ಕೆಯೊಳಗೆ ತೆಗೆದುಕೊಂಡಿತು. ಇಲ್ಲಿಯೇ ವಿಟ್ಹೇಕರ್ ಹಾವಿನ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಿದ್ದು. ಇದು ಆನಂತರ ಪ್ರಾಣಿಗಳ ಪ್ರೀತಿಯಾಗಿ ಮಾರ್ಪಟ್ಟು ಜೀವನ ಪರ್ಯಂತ ಅವುಗಳ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ತೊಡಗಿಕೊಂಡರು. ನಾಲ್ಕು ವರ್ಷ ವಯಸ್ಸಿನಲ್ಲಿ ನಿರಪಾಯದ ಸಣ್ಣ ಹಾವುಗಳನ್ನು ಅಜ್ಜಿ ಮನೆಯ ಹಿತ್ತಲಲ್ಲಿ ಆಟಕ್ಕಾಗಿ ಹಿಡಿಯುತ್ತಿದ್ದ ವಿಟ್ಹೇಕರ್, ತಮ್ಮ ಐವತ್ತನೆಯ ವಯಸ್ಸಿನಲ್ಲಿ ವಿಶ್ವದ ಅತಿ ದೊಡ್ಡ ವಿಷಕಾರಿ ಸರ್ಪವಾದ ಕಾಳಿಂಗ ಸರ್ಪಗಳನ್ನು ಭಾರತದ ಸಹ್ಯಾದ್ರಿ ಕಾಡುಗಳಲ್ಲಿ ಹಿಡಿಯುತ್ತಿದ್ದರು. ಅವುಗಳ ಸಂರಕ್ಷಣೆಗಾಗಿ ತಮ್ಮೆಲ್ಲ ಶಕ್ತಿಯನ್ನು ತೊಡಗಿಸಿದ್ದಾರೆ. ಯಾವುದೇ ಕೆಲಸವಿರಲಿ ಅದಕ್ಕೆ ತಮ್ಮೆಲ್ಲ ಶಕ್ತಿ ತಾಳ್ಮೆಯನ್ನು ಧಾರೆಯೆರೆದು ಅದರಲ್ಲಿ ವಿಜಯಿಯಾಗುವುದೇ ವಿಟ್ಹೇಕರ್ ಅವರ ಕಾರ್ಯ ವೈಖರಿ. ಬಹುಶಃ ಅದೇ ಅವರ ಯಶಸ್ಸಿನ ಗುಟ್ಟು. ಅವರ ಜೊತೆಗಾರರಿಗೆ ಆಶ್ಚರ್ಯ ತರಿಸುವುದು ಇಂದಿಗೂ ಅವರಲ್ಲಿ ಮನೆಮಾಡಿರುವ ಸಣ್ಣ ಮಕ್ಕಳಲ್ಲಿ ಕಂಡುಬರುವಂತಹ ಉತ್ಸಾಹ ಹಾಗೂ ಕರ್ಮಯೋಗಿಯ ಚಟುವಟಿಕೆ.

1951ರಲ್ಲಿ ತಾಯಿ ಡೋರಿಸ್ ಉದ್ಯಮಿ ರಾಮ ಚಟ್ಟೋಪಾಧ್ಯಾಯರನ್ನು ಮದುವೆಯಾಗಿ ಭಾರತಕ್ಕೆ ಬಂದರು.[] ಆಗ ವಿಟ್ಹೇಕರ್ ಏಳುವರ್ಷದ ಪೋರ. ಹಾವಾಡಿಗರೊಂದಿಗೆ ಸ್ನೇಹ ಬೆಳಸಿ ಅವರ ಹಾವುಗಳು ಮತ್ತು ಅವರು ಆ ಬಗ್ಗೆ ಹೇಳುತ್ತಿದ್ದ ಕತೆಗಳೊಂದಿಗೆ ತನ್ನ ಬಾಲ್ಯದ ದಿನಗಳನ್ನು ಕಳೆದ. ಹತ್ತನೆ ವಯಸ್ಸಿನಲ್ಲಿ ಕೊಡಯ್‌ಕೆನಾಲಿನ ವಸತಿಶಾಲೆಯಲ್ಲಿ ವಿದ್ಯಾಭ್ಯಾಸದ ಮುಂದುವರಿಕೆ. ವಿಟ್ಹೇಕರ್ ಈ ಬಗ್ಗೆ ನೆನಪಿಸಿಕೊಳ್ಳುವುದು ಶಿಕ್ಷಕ ಅಥವಾ ವಿದ್ಯೆಯ ಬಗ್ಗೆ ಅಲ್ಲ; ವಾರಾಂತ್ಯದಲ್ಲಿ ಇವರು ಶಾಲೆಯ ಸುತ್ತಲಿನ ಅರಣ್ಯದಲ್ಲಿ ಹಾವು ಹಿಡಿದುದನ್ನು. ಇಲ್ಲಿಯೇ ವಿಟ್ಹೇಕರ್ ತನ್ನ ಜೀವಮಾನದ ಮೊಟ್ಟಮೊದಲ ವಿಷಕಾರಿ ಹಾವನ್ನು - ರಸಲ್ಲನ ಮಂಡಲದ ಹಾವು - ಹಿಡಿದಿದ್ದು. ಅವರ ಜೀವನದ ದಿಕ್ಕನ್ನು ಬದಲಿಸಿದ್ದು ಚಿಕ್ಕಂದಿನಲ್ಲಿ ಅವರಿಗೆ ದೊಡ್ಡವರಿಂದ ದೊರೆತ ಆಸರೆ. ಅಂದು ವಿಷಕಾರಿ ಹಾವಿನ ಬಗ್ಗೆ ಯಾವ ಮಾಹಿತಿ ಇಲ್ಲದಿದ್ದರೂ, ಶಾಲಾ ಶಿಕ್ಷಕಿ ಇವನು ಹಿಡಿದ ವಿಷಕಾರಿ ಹಾವನ್ನು ವಾರಗಟ್ಟಲೆ ಶಾಲೆಯ ಜೀವಶಾಸ್ತ್ರ ಪ್ರಯೋಗಶಾಲೆಯಲ್ಲಿಟ್ಟು ಅಧ್ಯಯನ ಮಾಡಲು ಅವಕಾಶಮಾಡಿಕೊಟ್ಟರು. ತಾಯಿ ತನ್ನ ಅತ್ತೆ ಕಮಲಾದೇವಿ ಚಟ್ಟೊಪಾಧ್ಯಾಯರೊಂದಿಗೆ ಭಾರತ ಪರ್ಯಟನೆ ಮಾಡುತ್ತಿದ್ದಾಗ ಹಾವಿನ ಬಗ್ಗೆ ಲಭ್ಯವಾದ ಎಲ್ಲ ಮಾಹಿತಿ ಕತೆಗಳನ್ನು ಮಗನಿಗೆ ತಲಪಿಸುತ್ತಿದ್ದರು. ಹಾವು ವಿಟ್ಹೇಕರ್ ಅವರ ಜೀವದ ಒಡನಾಡಿಯಾಯಿತು.

ವನ್ಯಜೀವಿ ನಿರ್ವಹಣೆಯನ್ನು ಅಧ್ಯಯನ ಮಾಡಬೇಕೆಂಬುದು ವಿಟ್ಹೇಕರ್ ಅವರ ಹೆಬ್ಬಯಕೆ. ಇದಕ್ಕಾಗಿ ವ್ಯೋಮಿಂಗ್ ವಿಶ್ವವಿದ್ಯಾನಿಲಯವನ್ನು ಆಯ್ಕೆಮಾಡಿಕೊಂಡರು. ಅದಕ್ಕೆ ಕಾರಣ ವಿಶ್ವವಿದ್ಯಾಲಯದ ಪರಿಚಯ ಪತ್ರದಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಾನವರಿಗಿಂತ ಜಿಂಕೆಗಳೇ ಹೆಚ್ಚಿದೆ ಎಂದಿತ್ತಂತೆ. ಆದರೆ ಅದು ನಿಜವಾಗಿರಲಿಲ್ಲ. ಮೊದಲ ವರ್ಷದ ಶಿಕ್ಷಣಕ್ಕೆ ತಂದೆ ನೆರವಾದರು. ಮುಂದೆ ವಿಟ್ಹೇಕರ್ ತಾನೆ ದುಡಿದು ಹಣ ಹೊಂದಿಸಬೇಕಾಗಿತ್ತು. ಅದಕ್ಕಾಗಿ ಹಲವಾರು ಕಡೆ ಕೆಲಸಮಾಡಿದರು. ಆದರೆ ಇಲ್ಲಿನ ಶಿಕ್ಷಣ ಹಾಗೂ ಶಿಕ್ಷಣ ಕ್ರಮ ಇವರಿಗೆ ರುಚಿಸಲಿಲ್ಲ. ಜೊತೆಗೆ ಭಾರತದ ಉಷ್ಣಪ್ರದೇಶಗಳಲ್ಲಿ ಬೆಳೆದ ವಿಟ್ಹೇಕರ್‌ಗೆ ವ್ಯೋಮಿಂಗ್ ತೀವ್ರ ಚಳಿ ಹೊಂದಿಕೆಯಾಗಲಿಲ್ಲ. ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದರು. ಹಡಗಿನ ಟಿಕೆಟ್‌ಗೆ ಹಣ ಹೊಂದಿಸಿ ಭಾರತಕ್ಕೆ ಮರಳುವ ಮೊದಲು ಫ್ಲೊರಿಡಾದಲ್ಲಿ ಅಂದಿಗೆ ವಿಶ್ವದ ಅತಿದೊಡ್ಡ ಹಾವಿನ ಪ್ರತಿವಿಷ ತಯಾರಿಸುತ್ತಿದ್ದ ವಿಲಿಯಮ್ ಹಾಸ್ಟ್‌ರನ್ನು ಭೇಟಿಮಾಡಿದರು. ಆಗ ಹಾಸ್ಟ್ ಅವರದ್ದು ಎಲಪಿಡ್ ವಿಷಕ್ಕೂ ಜಗ್ಗುವುದಿಲ್ಲ ಎಂಬ ಖ್ಯಾತಿ. ಹಾಸ್ಟ್ ವಿಟ್ಹೇಕರ್ ಅವರಿಗೆ ತಮ್ಮ ಪ್ರಯೋಗಾಲಯದಲ್ಲೇ ಕೆಲಸ ಕೊಟ್ಟರು. ಆಗ, ಪ್ರಪಂಚದ ಎಲ್ಲ ಬಗೆಯ ವಿಷಕಾರಿ ಹಾವುಗಳು - ಥೈಲಾಂಡಿನಿಂದ ಕಾಳಿಂಗ ಸರ್ಪ, ಆಫ್ರಿಕಾದಿಂದ ಉಗುಳುವ ನಾಗರ, ದಕ್ಷಿಣ ಅಮೇರಿಕಾದಿಂದ ಕಡಲ ಹಾವುಗಳು - ದಿನ ನಿತ್ಯ ನೂರರ ಸಂಖ್ಯೆಯಲ್ಲಿ ಜಮೆಯಾಗುತ್ತಿದ್ದವು. ಇವುಗಳ ವಿಷದಿಂದ ಪ್ರತಿವಿಷ ತಯಾರಿಸಲಾಗುತ್ತಿತ್ತು. ಈ ಅವಕಾಶ ಕಳೆದುಕೊಳ್ಳಲು ಇಚ್ಛಿಸದೆ, ತನ್ನ ಭಾರತದ ಪ್ರಯಾಣವನ್ನು ಮುಂದೂಡಿ ಮಿಯಾಮಿಯಲ್ಲೇ ಉಳಿದರು. ಅಲ್ಲಿನ ಇತರ ಹಾವು ತಜ್ಞರೊಂದಿಗೆ ಕೆಲಸ. ಮೊದಲ ಬಾರಿಗೆ ತಮಗೆ ಇಷ್ಟವಾದುದನ್ನು ಅಧ್ಯಯನಮಾಡುವ ಅವಕಾಶ. ಇದನ್ನು ಚೆನ್ನಾಗಿಯೇ ಬಳಸಿಕೊಂಡ ವಿಟ್ಹೇಕರ್ ಎರಡು ವರ್ಷಗಳ ಕಾಲ ಹಾಸ್ಟ್‌ನ ಪ್ರಯೊಗಾಲಯದಲ್ಲಿದ್ದರು. ಅಲ್ಲೇ ಮುಂದುವರೆಯುತಿದ್ದರೇನೋ, ಆದರೆ ವಿಯಟ್ನಾಮ್ ಯುದ್ಧದ ಪರಿಣಾಮವಾಗಿ ವಿಟ್ಹೇಕರ್ ಸೇನೆಗೆ ಸೇವೆಸಲ್ಲಿಸಲು ಹೋಗಲೇಬೇಕಾಯಿತು. ಟೆಕ್ಸಾಸ್‌ನಲ್ಲಿನ ಎಲ್ ಪಾಸೋ ಅವರ ಕಾರ್ಯಕ್ಷೇತ್ರ. ಪ್ರಯೋಗಾಲಯದಲ್ಲಿ ಸಹಾಯಕನ ಕೆಲಸ. ಇಲ್ಲಿನ ಮರುಭೂಮಿಗಳಲ್ಲಿ ದೊರೆಯುವ ರಾಟಲ್ ಹಾವುಗಳನ್ನು ಹಿಡಿಯುವ ಅವಕಾಶ. ವಿಟ್ಹೇಕರ್ ಬಹಳ ಸಂತೋಷವಾಗಿಯೇ ಸೇನೆಯಲ್ಲಿನ ಸಮಯವನ್ನು ಕಳೆದರು. ಇಲ್ಲಿಂದ ಅವರನ್ನು ಜಪಾನಿಗೆ ಕಳುಹಿಸಲಾಯಿತು. ಅಲ್ಲಿ ಹಾಬುಸ್ ಮತ್ತು ಮಮೂಶಿಸ್ ಪ್ರಭೇದದ ಹಾವುಗಳನ್ನು ಅಧ್ಯಯನ ಮಾಡಿದರು. ಸೇನೆಯಿಂದ ಬಿಡುಗಡೆಯಾಯಿತು. ಭಾರತದಲ್ಲಿ ಅವರ ಕುಟುಂಬ ಇವರಿಗಾಗಿ ಕಾತರಿಸುತಿತ್ತು. "ಗ್ರೀಕ್ ಫ್ರೈಟರ್" ಹಡಗಿನಲ್ಲಿ 1967ರಲ್ಲಿ ಮುಂಬೈಗೆ ಬಂದಿಳಿದರು. ವಿಟ್ಹೇಕರ್ ಅಮೇರಿಕಾಕ್ಕೆ ಹೊದಾಗ ಪುಟ್ಟ ಮಕ್ಕಳಾಗಿದ್ದ ತಂಗಿ ನೀನಾ, ತಮ್ಮ ನೀಲ್ ಈಗ ಹದಿಹರಯದವರಾಗಿದ್ದರು. ಕಾಲ ಸಂತೋಷವಾಗಿ ಉರುಳಿತು.

ಮುಂದಿನ ಜೀವನ

ಬದಲಾಯಿಸಿ

ವಿಟ್ಹೇಕರ್ ಥಾನೆಯ ಸಮೀಪ ಹಾವಿನ ವಿಷ ಸಂಗ್ರಹಿಸುವ ಪ್ರಯೋಗಶಾಲೆಯನ್ನು ಸ್ಥಾಪಿಸಿದರು. ಇಲ್ಲಿಂದ ಪ್ರತಿವಿಷ ತಯಾರಿಕರಿಗೆ ಹಾವಿನ ವಿಷ ಸರಬರಾಜಾಗುತ್ತಿತ್ತು. ವಿಟ್ಹೇಕರ್ ಕಟ್ಟು ಹಾವುಗಳಿಗಾಗಿ ಬಂಗಾಳಕ್ಕೂ, ಮಂಡಲದ ಹಾವುಗಳಿಗಾಗಿ ಮಹಾರಾಷ್ಟ್ರಕ್ಕೂ ನಾಗರ ಹಾವುಗಳಿಗಾಗಿ ತಮಿಳುನಾಡಿಗೂ ಪ್ರಯಾಣಮಾಡುತಿದ್ದರು. ಇದೇ ಸಂದರ್ಭದಲ್ಲಿ ತಮಿಳುನಾಡಿನ ಕಾಡುಗಳಲ್ಲಿದ್ದ ಪರಿಣತ ಹಾವು ಹಿಡಿಯುವ ಆದಿವಾಸಿಗಳಾದ ಇರುಳರ ಪರಿಚಯವಾಯಿತು. ವಿಟ್ಹೇಕರ್‌ರಿಗೆ ಇವರೊಂದಿಗಿನ ಒಡನಾಟ ನಿಜವಾಗಿ ಒಂದು ಶಿಕ್ಷಣವಾಗಿಯೇ ಪರಿಣಮಿಸಿತು. ಇವರೊಂದಿಗೆ ಹಾವು ಹಿಡಿಯಲು, ಅಧ್ಯಯನ ಮಾಡಲು ವಿಟ್ಹೇಕರ್ ಚೆನ್ನೈಗೆ ವಲಸೆಬಂದರು.

1970ರಲ್ಲಿ ಚೆನ್ನೈನಲ್ಲಿ ಮದ್ರಾಸ್ ಮೊಸಳೆ ಉದ್ಯಾನವನ್ನು ಸ್ಥಾಪಿಸಿದರು (ಮದ್ರಾಸ್ ಕ್ರೊಕೊಡೈಲ್ ಪಾರ್ಕ್). ಇದನ್ನು ಶಿಕ್ಷಣ ಹಾಗೂ ಸರೀಸೃಪಗಳ ಬಗ್ಗೆ ಜಾಗೃತಿ ಮೂಡಿಸುವ ಕೇಂದ್ರವನ್ನಾಗಿ ಬೆಳೆಸಿದರು. ತಾಯಿ ಡೋರಿಸ್, ಸಹೋದರಿ ನೀನಾ ಸಹೋದರ ನೀಲ್ ಇದರಲ್ಲಿ ಶೈಕ್ಷಣಿಕ ಸಲಕರಣೆಗಳನ್ನು ತಯಾರಿಸುವುದರ ಮೂಲಕ, ವಿಟ್ಹೇಕರ್ ಪ್ರವಾಸದಲ್ಲಿದ್ದಾಗ ಹಾವುಗಳನ್ನು ನೋಡಿಕೊಳ್ಳುವುದರ ಮೂಲಕ ಭಾಗಿಗಳಾದರು. ನೀನಾ ವಿಶ್ವ ವನ್ಯಜೀವಿ ನಿಧಿ - ದಕ್ಷಿಣ ಪ್ರಾದೇಶಿಕ ಕಛೇರಿಯ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತಿದ್ದರು. ಈ ಪ್ರಾದೇಶಿಕ ಕಛೇರಿಯ ನಿರ್ದೇಶಕರಾಗಿ ವಿಟ್ಹೇಕರ್ ಅವರೇ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಮಯದಲ್ಲಿ ಚೆನ್ನೈನ ಐ.ಐ.ಟಿ., ಅಣ್ಣಾಮಲೈ ವಿಶ್ವವಿದ್ಯಾನಿಲಯ ಇತ್ಯಾದಿ ವಿದ್ಯಾಸಂಸ್ಥೆಗಳಿಂದ ಅನೇಕರು ಸ್ವಯಂಸೇವಕರಾಗಿ ಉದ್ಯಾನದಲ್ಲಿ ಸೇರಿದರು. ಇವರಲ್ಲಿ ಇಂದು ಶ್ರೇಷ್ಠ ವನ್ಯಜೀವಿ ಸಾಕ್ಷ್ಯಚಿತ್ರ ತಯಾರಕರೆಂದು ಹೆಸರುಮಾಡಿರುವ ಶೇಖರ್ ದತ್ತಾತ್ರಿ ಸೇರಿದಂತೆ, ಜೆ. ವಿಜಯ, ಸತೀಶ್ ಭಾಸ್ಕರ, ಧ್ರುವ ಬಸು ಮುಂತಾದವರಿದ್ದಾರೆ. ಅನೇಕ ಅಧ್ಯಯನಗಳನ್ನು ಮಾಡಿ ಹಾವು, ಹಲ್ಲಿ, ಮೊಸಳೆ, ಸಿಹಿನೀರಿನ ಆಮೆ, ಸಮುದ್ರದ ಆಮೆಗಳ ಬಗ್ಗೆ ಮೂಲಭೂತ, ಅತ್ಯಮೂಲ್ಯ ಮಾಹಿತಿಯನ್ನು ಸಂಗ್ರಹಿಸಲಾಯಿತು. ಅನೇಕ ಸರ್ವೇಕ್ಷಣೆಗಳು ನಡೆದುವು. ಅಪಾಯದ ಗಂಟೆ ಮೊಳಗುತ್ತಿದ್ದಾಗಲೇ ಸರೀಸೃಪದ ಅಧ್ಯಯನ ಭರದಿಂದ ಸಾಗಿತು. ಈಗ ಅದರ ಫಲಗಳನ್ನು ಅನುಷ್ಠಾನಕ್ಕೆ ತರುವ ಬಹುಮುಖ್ಯ ಕಾರ್ಯ ಆರಂಭವಾಯಿತು.

ಅಂದು ಸರೀಸೃಪಗಳ ಸಂರಕ್ಷಣೆಗೆ ಬಹುಮುಖ್ಯ ತೊಡಕಾಗಿದದ್ದು, ಅವುಗಳ ಚರ್ಮಕ್ಕಿದ್ದ ವಿಶ್ವಮಾರುಕಟ್ಟೆ. ಇದು ಹಾವುಗಳನ್ನು ನಾಮಾವಶೇಷ ಮಾಡಲು ಹವಣಿಸಿದಂತೆ ಕಾಣುತಿತ್ತು. ಇದಕ್ಕಾಗಿ ಭಾರತದಿಂದಲೇ ಪ್ರತಿವರ್ಷ ಅರವತ್ತೊಂದು ಲಕ್ಷ ಹಾವುಗಳ ಮಾರಣಹೋಮವಾಗುತಿತ್ತು. ಇನ್ನು ಮೊಸಳೆ ಮತ್ತಿತರ ಸರೀಸೃಪಗಳ ಸ್ಥಿತಿ ಇನ್ನೂ ದಾರುಣವಾಗಿತ್ತು. 1976ರಲ್ಲಿ ಹಾವುಗಳ ಚರ್ಮಮಾರಾಟವನ್ನು ಪ್ರತಿಬಂಧಿಸಲಾಯಿತು. ಇದು ಸರೀಸೃಪಗಳಿಗೆ ವರದಾನವಾಯಿತಾದರೂ ಮಾರುಕಟ್ಟೆಗೆ ಹಾವಿನ ಚರ್ಮ ಒದಗಿಸುತ್ತಿದ್ದ ಇರುಳರ ಜೀವನ ಸಂಕಷ್ಟಕ್ಕೀಡಾಯಿತು. ಆಗ ವಿಟ್ಹೇಕರ್ ತಾವು ಅಮೇರಿಕಾದಲ್ಲಿದ್ದಾಗ ಕಲಿತಿದ್ದ ಹಾವಿನ ವಿಷ ತೆಗೆಯುವ ತಂತ್ರವನ್ನು ಇರುಳರಿಗೆ ಕಲಿಸಿದರು. ಹಾವಿನ ವಿಷಕ್ಕೆ ಪ್ರತಿವಿಷ ತಯಾರಿಸಲು ಹಾವಿನ ವಿಷ ಬೇಕಾಗುತ್ತದೆ. ಹಾವನ್ನು ಹಿಡಿದು ವಿಷ ತೆಗೆದುದಕ್ಕೆ ಗುರುತು ಮಾಡಿ ಮತ್ತೆ ಬಿಟ್ಟುಬಿಡುವುದು ಇಲ್ಲಿನ ತಂತ್ರ. ಇದಕ್ಕಾಗಿ ಇರುಳರ ಸಹಕಾರ ಸಂಘವನ್ನು ಸ್ಥಾಪಿಸಲಾಯಿತು. ಇದು ಯಶಸ್ವಿಯಾಯಿತು. ಈ ಮೂಲಕ ಹಾವುಗಳನ್ನೂ ಇರುಳರನ್ನೂ ಉಳಿಸಿದರು, ವಿಟ್ಹೇಕರ್. ಸುಮಾರು 2000 ಇರುಳರ ಕುಟುಂಬಗಳು ಸಹಕಾರ ಸಂಘದ ಪ್ರಯೋಜನ ಪಡೆದಿವೆ. ಇಂದಿಗೂ ಇರುಳರ ಸಹಕಾರ ಸಂಘದ ಸಲಹೆಗಾರರು, ವಿಟ್ಹೇಕರ್.

ಮೊಸಳೆಗಳ ರಾಷ್ಟ್ರವ್ಯಾಪಿ ಸರ್ವೇಕ್ಷಣೆಮಾಡಿದಾಗ ತಿಳಿದುಬಂದ ಕಳವಳಕಾರಿ ಅಂಶವೆಂದರೆ, ಭಾರತದಲ್ಲಿ ಕಂಡುಬರುವ ಮೂರು ಮೊಸಳೆಗಳು ಅಪಾಯದಂಚಿನಲ್ಲಿವೆ ಎಂಬುದು. ಕೇವಲ ರಕ್ಷಣೆಯೊಂದೇ ಅಲ್ಲದೆ ಮೊಸಳೆಗಳನ್ನು ಬೇರೆಡೆಯಿಂದ ತಂದು ಬಿಡುವ ಮೂಲಕವೂ ಅವುಗಳ ಸಂಖ್ಯೆಯನ್ನು ವೃದ್ಧಿಸುವ ಅವಶ್ಯಕತೆ ಇತ್ತು. ಜೊತೆಗೆ, ಮೃಗಾಲಯಗಳಲ್ಲಿ ಇವುಗಳ ಸಂತಾನೋತ್ಪತ್ತಿಗೆ ಕಾಲ ಪಕ್ವವಾಗಿತ್ತು. ತಮ್ಮ ಮೊದಲ ಹೆಂಡತಿ ಜೈ಼ರೊಂದಿಗೆ ಸೇರಿ ಮದ್ರಾಸ್ ಮೊಸಳೆ ಬ್ಯಾಂಕ್‌ಅನ್ನು ಸ್ಥಾಪಿಸಿದರು. ಇಂದು ವಿಶ್ವದಲ್ಲಿನ 23 ಮೊಸಳೆ, ಆಲಿಗೇಟರ್ ಹಾಗೂ ಕೈಮನ್ ಪ್ರಭೇದಗಳಲ್ಲಿ 14 ಇಲ್ಲಿವೆ. ಜೊತೆಗೆ ಮೊಸಳೆಗಳ ವಂಶವಾಹಿ ಬ್ಯಾಂಕ್ (ಜೀನ್ ಬ್ಯಾಂಕ್) ಸಹ ಕಾರ್ಯಪ್ರವೃತ್ತವಾಗಿದೆ.[] ಇದು ರಾಷ್ಟ್ರದ ಅತಿದೊಡ್ಡ ಮೊಸಳೆಗಳ ಸಂತಾನೋತ್ಪತ್ತಿ ಕೇಂದ್ರ.

ವರ್ಷಗಳ ಕಾಲ ವಿಟ್ಹೇಕರ್ ಅವರ ಆಸಕ್ತಿ ಕೆರಳಿಸಿದ್ದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸರೀಸೃಪ ವೈವಿಧ್ಯ. ಅವರಿಗೆ ಆ ಧ್ವೀಪಗಳಿಗೆ ಭೇಟಿ ನೀಡಲು ಅಂದಿನ ಕಾನೂನು ತೊಡಕಾಗಿತ್ತು. ಭಾರತೀಯರಲ್ಲದವರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ಪ್ರವೇಶವಿರಲಿಲ್ಲ. ವಿಟೇಕರ್ ಅವರ ತುಡಿತ ಎಷ್ಟು ತೀವ್ರವಾಗಿತ್ತೆಂದರೆ, 1975ರಲ್ಲಿ ತಮ್ಮ ಅಮೇರಿಕನ್ ಪೌರತ್ವವನ್ನು ತ್ಯಜಿಸಿ ಭಾರತೀಯರಾದರು. ಈಗ ಯಾರೂ ಅವರನ್ನು ತಡೆಯುವ ಹಾಗಿರಲಿಲ್ಲ. ಅಲ್ಲಿನ ಸರೀಸೃಪ ವೈವಿಧ್ಯಕ್ಕೆ ಮನಸೋತರಾದರೂ ಅವುಗಳ ವಿನಾಶವನ್ನು ಊಹಿಸಿ ಸಂರಕ್ಷಣೆಗಾಗಿ ಅಂಡಮಾನ್ ನಿಕೋಬಾರ್ ಪರಿಸರ ಸಂಘವನ್ನು 1989ರಲ್ಲಿ ಸ್ಥಾಪಿಸಿದರು. ಇಂದು ಇದು ದ್ವೀಪಗಳಲ್ಲಿನ ಅತಿ ಹಳೆಯ ಪರಿಸರ ಸಂರಕ್ಷಣಾ ಸಂಸ್ಥೆ.

ಪಶ್ಚಿಮ ಘಟ್ಟಗಳಲ್ಲಿ ವಿಟ್ಹೇಕರ್ ಸಾಮಾನ್ಯ ಸ್ಯಾಂಡ್ ಬೋವ ಮತ್ತು ಕೆಂಪು ಸ್ಯಾಂಡ್ ಬೋವದ ಮಿಶ್ರತಳಿಯಂತೆ ಕಾಣುತ್ತಿದ್ದ ಹಾವೊಂದನ್ನು ಪತ್ತೆ ಹಚ್ಚಿದ್ದರು. ಅ ಹಾವು ಈ ಎರಡರಂತಲ್ಲದೆ, ಮರದ ಮೇಲೆ ವಾಸಿಸುತಿತ್ತು ಹಾಗೂ ಮನೆ, ಮರಗಳ ಮೇಲೆ ಕಂಡು ಬರುತಿತ್ತು. ವಿಟ್ಹೇಕರ್ ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಿ ಟಿಪ್ಪಣಿ ತಯಾರಿಸಿದ್ದರು. ಕಾಲಾನಂತರ ಇದು ಶಾಸ್ತ್ರೀಯವಾಗಿ ಬೇರೆಯೇ ಹಾವು ಎಂದು ತೀರ್ಮಾನವಾಯಿತು. ಸರ್ಪ ತಜ್ಞ ಡಾ. ಇಂದ್ರನೇಲ್ ದಾಸ್ ಇದನ್ನು ವಿಟ್ಹೇಕರ್ ಬೋವ ಎಂದೇ ಹೆಸರಿಸಿದರು (ವೈಜ್ಞಾನಿಕ ನಾಮದ್ವಯ : ಎರಿಕ್ಸ್ ವಿಟ್ಹೇಕರಿ).[] ವಿಟ್ಹೇಕರ್ ಒಮ್ಮೆ ಹಾವುಗಳ ಹುಡುಕಾಟದಲ್ಲಿ ತೊಡಗಿದ್ದಾಗ ಅವರ ನಾಲ್ಕು ವರ್ಷದ ಮಗ ನಿಖಿಲ್ ಒಂದು ಹಾವನ್ನು ಎತ್ತಿ ಹಿಡಿದ. ಕೂಗಿಕೊಂಡ ಮಗನ ಕೈಲಿನ ಹಾವನ್ನು ಪರೀಕ್ಷಿಸಿಯೇ ಪರೀಕ್ಷಿಸಿದರು ವಿಟ್ಹೇಕರ್. ಅದೊಂದು ಹೊಸ ಪ್ರಭೇದದ ಕುಕ್ರಿ ಹಾವಾಗಿತ್ತು! ಶೇಖರ್ ದತ್ತಾತ್ರಿ ಅವರೊಂದಿಗೆ ಸೇರಿ ಈ ಹಾವಿಗೆ ನಿಖಿಲನ ಕುಕ್ರಿ ಎಂದೇ ನಾಮಕರಣ ಮಾಡಿದರು. ವೈಜ್ಞಾನಿಕ ನಾಮ: ಓಲಿಗೋಡನ್ ನಿಖಿಲಿ.

ಕರ್ನಾಟಕದ ಅತಿ ಹೆಚ್ಚು ಮಳೆಬೀಳುವ ಪ್ರದೇಶವಾದ ಆಗುಂಬೆ ವಿಟ್ಹೇಕರ್ ಅವರು ಮೊದಲು ಕಾಳಿಂಗ ಸರ್ಪ ಹಿಡಿದ ಪ್ರದೇಶ. ವಿಟ್ಹೇಕರ್ ಅವರಿಗೆ ಈ ಪ್ರದೇಶ ಇಷ್ಟವಾಗಲು ಕಾರಣ ಇಲ್ಲಿನ ಜನ ಕಾಳಿಂಗ ಸರ್ಪದೊಂದಿಗೆ ಸಹ ಬಾಳ್ವೆ ನಡೆಸುತ್ತಿರುವುದು! ಯಾವುದೇ ಪ್ರಾಣಿಯ ಸಂರಕ್ಷಣೆಯಲ್ಲಿ ಆ ಪ್ರಾಣಿಯ ಆವಾಸದ ಸುತ್ತಲಿನ ಜನರ ಸಹಕಾರವಿದ್ದರೆ, ಅರ್ಧ ಕೆಲಸ ಮುಗಿದಂತೆಯೇ. ವಿಟ್ಹೇಕರ್ ಈ ಅವಕಾಶವನ್ನು ಬಳಸಿಕೊಂಡು ಆಗುಂಬೆಯಲ್ಲಿ ಮಳೆಕಾಡು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಪಶ್ಚಿಮಘಟ್ಟಗಳಲ್ಲಿ ಸಂಶೋಧನೆ ಮಾಡಲು ಬರುವವರಿಗೆ ಅಗತ್ಯ ಸೌಲಭ್ಯಗಳು ಒಂದೆಡೆ ದೊರೆಯುತ್ತವೆ. ಶ್ರೀ ಗೌರಿಶಂಕರ್ ಇಲ್ಲಿನ ಸಂಶೋಧನೆ ಹಾಗೂ ಶಿಕ್ಷಣದ ಕಾರ್ಯಭಾರವನ್ನು ಹೊತ್ತಿದ್ದಾರೆ. ವಿಟ್ಹೇಕರ್ ಅವರು ಕಾಳಿಂಗ ಸರ್ಪಗಳ ಬಗ್ಗೆ ನಡೆಸುತ್ತಿರುವ ಸಂಶೋಧನೆಯಲ್ಲಿ ಇವರು ಸಹಭಾಗಿಗಳು. ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಆಸಕ್ತರಿಗೂ ಇವರು ವನ್ಯಜೀವಿ ಸಂರಕ್ಷಣೆ ಕುರಿತ ಉಪನ್ಯಾಸಗಳನ್ನು ನೀಡುತ್ತಾರೆ.

ಹಲವಾರು ಪುಸ್ತಕಗಳು, ಸುಮಾರು 150 ಸಂಶೋಧನಾ ಲೇಖನಗಳು, ಟಿಪ್ಪಣಿ ಹಾಗೂ ಇತರರ ಪುಸ್ತಕಗಳಲ್ಲಿ ಪ್ರತ್ಯೇಕ ಅಧ್ಯಾಯಗಳನ್ನು ಬರೆದಿರುವ ವಿಟ್ಹೇಕರ್, 135 ಜನಪ್ರಿಯ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ. ಭಾರತದ ಹಾವುಗಳ ಬಗ್ಗೆ ಸಚಿತ್ರ ಕೈಪಿಡಿ ಹೊರತರಬೇಕೆಂಬ ಅವರ ಕನಸು ಅಶೋಕ್ ಕ್ಯಾಪ್ಟನ್ ಎಂಬ ವರ್ಗೀಕರಣ ತಜ್ಞ, ಛಾಯಾಚಿತ್ರಕಾರರ ಸ್ನೇಹ ದೊರೆತ ಮೇಲೆ ಗರಿಗೆದರಿಕೊಂಡು 2004ರಲ್ಲಿ ಸಾಕಾರವಾಯಿತು. ಸ್ನೇಕ್ಸ್ ಆಫ಼್ ಇಂಡಿಯ ದಿ ಫೀಲ್ಡ್‌ಗೈಡ್ ಎಂಬ 480 ಪುಟಗಳ ಈ ಪುಸ್ತಕದಲ್ಲಿ ಭಾರತದಲ್ಲಿ ಕಂಡುಬರುವ 150ಕ್ಕೂ ಹೆಚ್ಚು ಹಾವುಗಳ ಸಚಿತ್ರ ವರ್ಣನೆಯೊಂದಿಗೆ ಹಾವುಗಳ ಸಂರಕ್ಷಣೆ, ಕಡಿತ- ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಅಮೂಲ್ಯ ಮಾಹಿತಿ ಇದೆ.

ಇದಲ್ಲದೆ “ಕಿಂಗ್ ಕೋಬ್ರ” ಹಾಗೂ “ಸ್ನೇಕ್ ಹಂಟರ್” ಎಂಬ ಎರಡು ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಇವುಗಳನ್ನು ನ್ಯಾಷನಲ್ ಜಿಯೋಗ್ರಾಪಿಕ್ ಚಾನೆಲ್‌ಗಳಲ್ಲಿ ಪ್ರದರ್ಶಿಸಲಾಗಿದೆ.

ವಿಟ್ಹೇಕರ್‌ಅವರಿಗೆ ಅನೇಕ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವ ದೊರೆತಿದೆ. ಮುಖ್ಯವಾಗಿ ಐಯುಸಿಎನ್/ಎಸ್‌ಎಸ್‌ಸಿ (ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಸ್ಥೆ/ಪ್ರಭೇದ ಸಂರಕ್ಷಣಾ ಕೇಂದ್ರ)ದ ಗೌರವ ಸಲಹೆಗಾರರು, ಸದಸ್ಯರು. ಐಯುಸಿಎನ್/ಎಸ್‌ಎಸ್‌ಸಿ ಮೊಸಳೆ ತಜ್ಞರ ತಂಡದ ಉಪಾಧ್ಯಕ್ಷರು. ಐಯುಸಿಎನ್/ಎಸ್‌ಎಸ್‌ಸಿ ಭಾರತ ಉಪಖಂಡದ ಸರೀಸೃಪ ಹಾಗೂ ಉಭಯವಾಸಿ ಅಧ್ಯಯನ ಕೇಂದ್ರದ ಸದಸ್ಯ. ಐಯುಸಿಎನ್/ಎಸ್‌ಎಸ್‌ಸಿ ಸಮುದ್ರ ಆಮೆ ತಜ್ಞ ತಂಡದ ಸದಸ್ಯ ಹಾಗೂ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಲಹಾ ಸಮಿತಿ ಸದಸ್ಯರು.

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ

ಇವರಿಗೆ ಸಂದಿರುವ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಮುಖ್ಯವಾಗಿ

  • ಕನ್ಸರವೇಷನ್ ಮೆರಿಟ್ ಪ್ರಶಸ್ತಿ - ವಿಶ್ವವನ್ಯ ಜೀವಿ ನಿಧಿ - 1983
  • ರೋಲೆಕ್ಸ್ ಪ್ರಶಸ್ತಿ - 1984
  • ಐಯುಸಿಎನ್ ಪಿಎಸ್ ಅವಾರ್ಡ್ - 1986
  • ಅಶೋಕ ಪ್ರತಿಷ್ಠಾನದ ಫೆಲೋಷಿಪ್ - 1991
  • ಪದ್ಮಶ್ರೀ ಪ್ರಶಸ್ತಿ - 2018[][]

ಮೈದಳೆದ ಪ್ರಕೃತಿ ಪ್ರಿಯತೆಯೇ ವಿಟ್ಹೇಕರ್ ಅವರ ಕುಟುಂಬ. ವನ್ಯಜೀವಿ ಸಾಕ್ಷ್ಯಚಿತ್ರ ತಯಾರಕಿ, ಭಾರತದ ಹಾವುಗಳ ಕ್ಷೇತ್ರ ಕೈಪಿಡಿ ಪ್ರಕಟಿಸುವ ಮೂಲಕ ಪ್ರಕಾಶಕರೂ ಆದ ಪತ್ನಿ ಜಾನಕಿ ಲೆನಿನ್, ಹಿರಿಯ ಮಗ ನಿಖಿಲ್ ವಿಟ್ಹೇಕರ್ ಈಗ ಮದ್ರಾಸಿನ ಮೊಸಳೆ ಬ್ಯಾಂಕಿನ ಸಂಶೋಧಕ, ಕಿರಿಯ ಮಗ ಸಮೀರ್ ಜೈವಿಕ ತಂತ್ರಜ್ಞಾನದ ಪದವೀಧರ. ಹಾವಿನ ವಿಷಗಳಿಂದ ಕಿಣ್ವಗಳನ್ನು ಬೇರ್ಪಡಿಸಿ ಜೀವ ರಕ್ಷಕ ಔಷಧಿಯನ್ನು ತಯಾರಿಸುವ ಕನಸನ್ನು ಹೊತ್ತಿದ್ದಾರೆ. ಸಹೋದರ ಮತ್ತು ಸಹೋದರಿಯರು ಕ್ರಮವಾಗಿ ಧ್ವನಿತಂತ್ರಜ್ಞರೂ, ಆಭರಣ ವಿನ್ಯಾಸಕಾರಾಗಿದ್ದರೂ ವಿಟ್ಹೇಕರ್ ಅವರಷ್ಟೇ ಪ್ರಕೃತಿ ಪ್ರಿಯರು.

ಉಲ್ಲೇಖಗಳು

ಬದಲಾಯಿಸಿ
  1. "Meet Rom Whitaker". www.sanctuaryasia.com (in ಇಂಗ್ಲಿಷ್). Archived from the original on 18 ಆಗಸ್ಟ್ 2019. Retrieved 18 August 2019.
  2. Raghavan, T. L. (2009). "Romulus Whitaker - His Story". Environment. Chennai Online. Archived from the original on 14 ಡಿಸೆಂಬರ್ 2008. Retrieved 29 ಜನವರಿ 2009.
  3. Beolens, Bo; Watkins, Michael; Grayson, Michael (2011). The Eponym Dictionary of Reptiles. Baltimore: Johns Hopkins University Press. xiii + 296 pp. ISBN 978-1-4214-0135-5. ("Whitaker, R.", p. 284).
  4. Crocodile Specialist Group (2018). "Minutes of CSG Steering Committee Meeting, Santa Fe, Argentina, 6 May 2018: 3.5. Zoos" (PDF). CSG Steering Committee Meetings (2018): 10.
  5. "Chennai: Padma Shri for Whitaker gladdens ecologists' hearts". Deccan Chronicle (in ಇಂಗ್ಲಿಷ್). 26 January 2018. Retrieved 31 January 2021.


ಹೊರಗಿನ ಮೂಲಗಳು

ಬದಲಾಯಿಸಿ