ಈ ಲೇಖನವು ಹಾವುಗಳಲ್ಲಿ ಒಂದಾದ ನಾಗರಹಾವು ಬಗ್ಗೆ. ನಾಗರಹಾವು ಬಗ್ಗೆ ಇತರ ಲೇಖನಗಳಿಗೆ ಪುಟ ನೋಡಿ.

ಮಾವಿನ ಮರ


Indian cobra
Scientific classification
ಪ್ರಜಾತಿ:
N. naja
Binomial name
Naja naja
Indian cobra distribution
Synonyms
  • Coluber naja Linnaeus, 1758
  • Naja brasiliensis Laurenti, 1768
  • Naja fasciata Laurenti, 1768
  • Naja lutescens Laurenti, 1768
  • Naja maculata Laurenti, 1768
  • Naja non-najaLaurenti, 1768
  • Coluber caecus GMELIN, 1788
  • Coluber rufus GMELIN, 1788
  • Coluber Naja Shaw & Nodder, 1791
  • Coluber Naja Shaw & Nodder, 1794
  • Naja tripudians Merrem, 1820
  • Naja nigra Gray, 1830
  • Naja tripudians forma typica Boulenger, 1896
  • Naja tripudians var. caeca Boulenger, 1896
  • Naja naja naja Smith, 1943
  • Naja naja gangetica Deraniyagala, 1945
  • Naja naja lutescens Deraniyagala, 1945
  • Naja naja madrasiensis Deraniyagala, 1945
  • Naja naja indusi Deraniyagala, 1960
  • Naja naja bombaya Deraniyagala, 1961
  • Naja naja karachiensis Deraniyagala, 1961
  • Naja naja ceylonicus Chatman & Di Mari, 1974
  • Naja naja polyocellata Mehrtens, 1987
  • Naja ceylonicus Osorio E Castro & Vernon, 1989
  • Naja (Naja) najaWallach, 2009

ನಾಗರಹಾವು ಒಂದು ಜಾತಿಯ ಹಾವು.

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ

ರೆಪ್ಟೀಲಿಯ ವರ್ಗ ಸ್ಕ್ವಮೇಟ ಗಣ ಇಲ್ಯಾಪಿಡೀ ಕುಟುಂಬಗಳಿಗೆ ಸೇರಿದ ವಿಷಪೂರಿತ ಹಾವು (ಕೋಬ್ರ). ನಾಜ ನಾಜ ಇದರ ಶಾಸ್ತ್ರೀಯ ಹೆಸರು. ಉದ್ರೇಕಗೊಂಡಾಗ ಕತ್ತಿನ ಭಾಗದ ಪಕ್ಕೆಲಬುಗಳನ್ನು ಮೇಲಕ್ಕೆ ಎತ್ತುವ ಮೂಲಕ ಕತ್ತಿನ ಸುತ್ತ ಸಡಿಲವಾಗಿ ಅಂಟಿಕೊಂಡಿರುವ ಚರ್ಮವನ್ನು ಅಗಲವಾದ ಹೆಡೆಯಾಗಿ ಹರಡುವ ಲಕ್ಷಣವನ್ನು ಈ ಹಾವಿನಲ್ಲಿ ಕಾಣಬಹುದು. ಇದೇ ಲಕ್ಷಣ ನಾಗರಹಾವಿನ ಹತ್ತಿರ ಸಂಬಂಧಿಗಳಾದ ಕಾಳಿಂಗಸರ್ಪ (ಓಫಿóಯೋಫಾಗಸ್ ಹನ್ನ), ಆಫ್ರಿಕದ ಕಪ್ಪುನಾಗರಹಾವು (ನಾಜ ನೈಗ್ರಿಕಾಲಿಸ್) ಮುಂತಾದವುಗಳಲ್ಲೂ ಉಂಟು. ಮಾಂಬಾ, ಬೂಮ್‍ಸ್ಲಾಂಗ್ ಮುಂತಾದ ಹಾವುಗಳಲ್ಲೂ ಈ ರೀತಿಯ ಹೆಡೆ ಇದೆಯಾದರೂ ಇದು ಶ್ವಾಸನಾಳ ದಪ್ಪವಾಗುವುದರಿಂದ ಉಂಟಾಗುತ್ತದೆ.

ಪ್ರಭೇದಗಳು

ಬದಲಾಯಿಸಿ

ಸುಮಾರು ಹತ್ತು ಜಾತಿಯ ನಾಗರಹಾವುಗಳುಂಟು. ಇವೆಲ್ಲವೂ ಉಷ್ಣವಲಯದ ನಿವಾಸಿಗಳು. ಭಾರತ, ದಕ್ಷಿಣ ಚೀನ, ಫಿಲಿಪೀನ್ಸ್ ದ್ವೀಪಗಳು ಮತ್ತು ಮಲಯ ಪರ್ಯಾಯ ದ್ವೀಪಗಳಲ್ಲಿ ಇವು ಬಲುಸಾಮಾನ್ಯ. ಪ್ರಸಕ್ತ ಲೇಖನದಲ್ಲಿ ಮುಖ್ಯವಾಗಿ ಭಾರತದ ನಾಗರಹಾವನ್ನು ವಿವರಿಸಲಾಗಿದೆ.

ನಾಗರಹಾವು ಭಾರತಾದ್ಯಂತ ಕಾಣದೊರೆಯುವುದು. ಕಾಡುಗಳಲ್ಲಿ ಬಯಲು ಸೀಮೆಯಲ್ಲಿ ಹೀಗೆ ಎಲ್ಲ ತೆರನ ಪರಿಸರದಲ್ಲಿ ಇದು ವಾಸಿಸುತ್ತದೆ. ಶುಷ್ಕಪ್ರದೇಶದಲ್ಲಿ ನೀರಿಗೆ ಆದಷ್ಟು ಹತ್ತಿರದಲ್ಲಿ ಇರುತ್ತದೆ; ಬೇಸಗೆಯಲ್ಲಿಯೂ ಹಾಗೆಯೇ. ಇದು ಚೆನ್ನಾಗಿ ಈಜ ಬಲ್ಲುದು ಕೂಡ. ನಿಶಾಚರಿಯಾದ ಇದು ಮುಸ್ಸಂಜೆಯ ಸಮಯದಲ್ಲಿ ಹೆಚ್ಚು ಚುರುಕಾಗಿ ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಇಲಿ, ಕಪ್ಪೆ, ಹಕ್ಕಿಗಳ ಮೊಟ್ಟೆಗಳು ಇದರ ಪ್ರಧಾನ ಆಹಾರ.

ಲಕ್ಷಣಗಳು

ಬದಲಾಯಿಸಿ

ನಾಗರಹಾವು ತುಂಬ ದೊಡ್ಡ ಗಾತ್ರದ ಹಾವೇನಲ್ಲ. ಇದರ ಸರಾಸರಿ ಉದ್ದ 1.3-2 ಮೀ. ಅಪೂರ್ವವಾಗಿ 2.5-3 ಮೀ. ಉದ್ದಕ್ಕೆ ಬೆಳೆದಿರುವುದುಂಟು. ದೇಹದ ಬಣ್ಣ ಕಗ್ಗಂದು. ಕೆಲವೊಮ್ಮೆ ಕಪ್ಪುಬಣ್ಣ ಮಿಶ್ರಗೊಂಡಿದ್ದು ಅಂಥ ನಾಗರಹಾವನ್ನು ಕರಿನಾಗರವೆಂದು ಕರಿಯುವುದಿದೆ. ಹಾಗೆಯೇ ಹೊಂಬಣ್ಣದ ನಾಗರಗಳೂ ಉಂಟು. ನಾಗರಹಾವಿನ ಹೆಡೆಯ ಹಿಂಭಾಗದಲ್ಲಿ ಹೆಚ್ಚು ಕಡಿಮೆ ಕನ್ನಡಕದಂತೆ ಕಾಣುವ ಗುರುತು ಇದೆ. ಅಸ್ಸಾಮ್ ಪ್ರದೇಶದಲ್ಲಿ ಕಾಣಬರುವ ನಾಗರಹಾವಿನ ಹೆಡೆಯಲ್ಲಾದರೋ ಈ ಗುರುತು ಕನ್ನಡಕದಂತೆ ಇರದೆ ಉಂಗುರದಂತೆ ಇದೆ. ರಾಜಸ್ಥಾನ, ಪಂಜಾಬ್ ಕಡೆಗಳಲ್ಲಿನ ನಾಗರಹಾವುಗಳ ಹೆಡೆಯ ಕನ್ನಡಕದ ಗುರುತಿನ ಕೆಳಭಾಗ ಅಪೂರ್ಣವಾಗಿ ರೂಪುಗೊಂಡಿದೆ. ಅಂತೆಯೇ ಯಾವ ಗುರುತೂ ಇಲ್ಲದಿರುವ ಹೆಡೆಯ ನಾಗರಹಾವುಗಳು ಉಂಟು. ಹೆಡೆಯ ಒಳಭಾಗದಲ್ಲಿ ಎರಡು ಕಪ್ಪು ಮಚ್ಚೆಗಳಿವೆ. ಹೆಡೆಯ ಬುಡಭಾಗದಲ್ಲಿ ಕಪ್ಪುಬಣ್ಣದ ಮೂರು ಅಡ್ಡಪಟ್ಟೆಗಳುಂಟು. ಹೆಡೆಯ ಮೇಲೆ ಕನ್ನಡಕದ ಗುರುತಿರಲಿ ಬಿಡಲಿ ಈ ಅಡ್ಡಪಟ್ಟೆಗಳು ಮಾತ್ರ ಇದ್ದೇ ಇರುವುವು. ರಾಜಸ್ಥಾನದ ಕೆಲವೆಡೆಗಳಲ್ಲಿ ಬಿಳಿಚ (ಆಲ್‍ಬೈನೊ) ನಾಗರಗಳು ಕಂಡುಬಂದಿದೆ. ಇವನ್ನು ಅಲ್ಲಿಯ ಸ್ಥಳೀಯರು ವಾಸುಕಿ ನಾಗ ಎಂದು ಕರೆಯುವರು.

ನಾಗರಹಾವಿನ ಬಾಯ ಎರಡು ದವಡೆಗಳಲ್ಲೂ ಚಿಕ್ಕಹಲ್ಲುಗಳುಂಟು. ಮೇಲುದವಡೆಯ ಮುಂತುದಿಯಲ್ಲಿನ ಎರಡು ಹಲ್ಲುಗಳು ಸುಮಾರು 0.5ಸೆಂಮೀ. ಉದ್ದವಿದ್ದು ವಿಷದ ಹಲ್ಲುಗಳಾಗಿ ಮಾರ್ಪಟ್ಟಿದೆ. ಒಂದೊಂದು ವಿಷದ ಹಲ್ಲೂ ಚೂಪಾದ ಕೊಳವೆಯಂತಿವೆ. ಇದರ ಮುಂಭಾಗದಲ್ಲಿ ಒಂದು ಚಿಕ್ಕ ಕಾಲುವೆಯುಂಟು. ಈ ಕಾಲುವೆಗೂ ಬಾಯ ಹಿಂಭಾಗದಲ್ಲಿ ಸ್ಥಿತವಾಗಿರುವ ವಿಷದ ಗ್ರಂಥಿಗಳಿಗೂ ಸಂಪರ್ಕವಿದೆಯಾಗಿ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ವಿಷ ವಿಷದ ಹಲ್ಲಿಗೆ ಸಾಗಿಬರುತ್ತದೆ. ವಿಷದ ಹಲ್ಲುಗಳ ಬುಡದಲ್ಲಿ ಮೊಳಕೆ ರೂಪದ ಹೊಸ ವಿಷದ ಹಲ್ಲುಗಳುಂಟು. ಆಕಸ್ಮಿಕವಾಗಿ ವಿಷದ ಹಲ್ಲುಗಳು ಬಿದ್ದುಹೋದರೆ ಈ ಮೊಳಕೆಹಲ್ಲುಗಳು ವರ್ಧಿಸುವುವು. ನಾಗರಹಾವಿನ ವಿಷ ತೆಳುಹಳದಿ ಬಣ್ಣದ ಪಾರದರ್ಶಕ ಸ್ನಿಗ್ಧ ದ್ರವ. ಬಿಸಿಲಿಗೆ ಒಡ್ಡಿದರೆ ಕೊಂಚ ಬಗ್ಗಡವಾಗುತ್ತದೆ. ಒಂದು ಸಲಕ್ಕೆ ಒಂದು ಹಾವಿನಿಂದ ಸುಮಾರು 0.2 ಗ್ರಾಮ್ (ಒಣತೂಕ) ವಿಷ ದೊರೆಯುತ್ತದೆ. ಬೇಸಗೆಯಲ್ಲಿ ವಿಷದ ಉತ್ಪಾದನೆ ಹೆಚ್ಚು ಎನ್ನಲಾಗಿದೆ. ವಯಸ್ಕ ನಾಗರಹಾವು ಮಾತ್ರವಲ್ಲದೆ ಮರಿನಾಗರದಲ್ಲೂ-ಅದು ಮೊಟ್ಟೆಯೊಡೆದು ಹೊರಬಂದ ದಿನದಿಂದ ಹಿಡಿದು-ವಿಷ ಉಂಟೇ ಉಂಟು. ಆದರೆ ಇದರ ಮೊತ್ತ ಕಡಿಮೆ ಇರುತ್ತದೆ. ನಾಗರ ಹಾವಿನ ವಿಷ ಆಮ್ಲೀಯ ಗುಣವುಳ್ಳದ್ದು. ಒಣಗಿಸಿದಾಗ ಸೂಜಿರೂಪದ ಹರಳುಗಳಾಗುತ್ತವೆ. ನೀರಿನಲ್ಲಿ ಕರಗಬಲ್ಲದು. ಇದು ಹಲವಾರು ಕಿಣ್ವಗಳ ನ್ಯೂರೊಟಾಕ್ಸಿನುಗಳ ಮಿಶ್ರಣ. ಕಿಣ್ವಗಳಲ್ಲಿ ಮುಖ್ಯವಾದವು ಫಾಸ್ಫಾಟಿಡೇಸ್, ಪ್ರೋಟಿಯೇಸ್, ಎರೆಪ್ಸಿನ್, ಕೋಲಿನ್ ಎಸ್ಪರೇಸ್, ಹೈಯಾಲ್‍ಯುರಾನಿಡೇಸ್, ರೈಬೊನ್ಯೂಕ್ಲಿಯೇಸ್, ಡಿಆಕ್ಸಿರೈಬೊನ್ಯೂಕ್ಲಿಯೇಸ್ ಮತ್ತು ಆಫಿಯೊ ಆಕ್ಸಿಡೇಸ್.

ರೇಗಿದಾಗ ನಾಗರಹಾವು ತನ್ನ ದೇಹವನ್ನು ಮೇಲಕ್ಕೆತ್ತಿ, ಹೆಡೆಯನ್ನು ಅಗಲಿಸಿ ಬುಸುಗುಡುತ್ತ ತನ್ನ ಎದುರಾಳಿಯನ್ನು ಹೊಡೆಯುತ್ತದೆ. ಕಡಿತದಿಂದ ಉಂಟಾಗುವ ಲಕ್ಷಣಗಳಲ್ಲಿ ಮುಖ್ಯವಾದವು ಹೀಗಿವೆ: ಕಡಿತಕ್ಕೊಳಗಾದ ಜಾಗ ಕೆಂಪೇರುವುದಲ್ಲದೆ ಉರಿ ಉಂಟಾಗುತ್ತದೆ; ಕಡಿಸಿಕೊಂಡ ವ್ಯಕ್ತಿಗೆ ನಿದ್ರೆ ಅಥವಾ ಮಂಪರು ಉಂಟಾಗುವುದು; 35-50 ಮಿನಿಟುಗಳ ತರುವಾಯ ಬಾಯಲ್ಲಿ ಜೊಲ್ಲು ಯಥೇಚ್ಛವಾಗಿ ಉತ್ಪತ್ತಿಯಾಗುವುದು. ವಾಂತಿಯಾಗುವುದೂ ಉಂಟು; ನಾಲಗೆ ಮತ್ತು ಧ್ವನಿನಾಳಗಳು ಉಬ್ಬಿಕೊಳ್ಳುವುವು; ಇದರಿಂದ ಮಾತನಾಡುವುದೂ ಉಗುಳು ನುಂಗುವುದೂ ಕಷ್ಟಕರವಾಗುತ್ತದೆ; ನಿಧಾನವಾಗಿ ಉಸಿರಾಟ ಇಳಿಮುಖವಾಗುತ್ತದೆ; ಗುಂಡಿಗೆ ಬಡಿತ ಹೆಚ್ಚಾಗುತ್ತದೆ; ಕೊನೆಗೆ ಉಸಿರಾಟವೂ ಹೃದಯ ಬಡಿತವೂ ನಿಂತುಹೋಗುವುವು. ವ್ಯಕ್ತಿ ಹಾವಿನ ಕಡಿತಕ್ಕೆ ಒಳಗಾದ ತತ್‍ಕ್ಷಣ ಪ್ರತಿವಿಷವನ್ನು ಕೊಡುವುದರಿಂದ ಸಾವನ್ನು ತಪ್ಪಿಸಬಹುದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಪ್ರತಿವಿಷದ ದಾಸ್ತಾನು ಇರುತ್ತದೆ. ಆದ್ದರಿಂದ ತಡಮಾಡದೆ ವೈದ್ಯಕೀಯ ನೆರವನ್ನು ಪಡೆದುಕೊಳ್ಳತ್ತಕ್ಕದ್ದು.

ಸಂತಾನಾಭಿವೃದ್ಧಿ

ಬದಲಾಯಿಸಿ

ನಾಗರಹಾವಿನ ಸಂತಾನವೃದ್ಧಿಯ ಶ್ರಾಯ ಮೇ-ಜೂನ್ ತಿಂಗಳುಗಳು. ಗಂಡುಹೆಣ್ಣುಗಳು ಕೂಡಿದ ತರುವಾಯ ಹೆಣ್ಣು 12-30 ಮೊಟ್ಟೆಗಳನ್ನಿಡುತ್ತದೆ. ಸಾಮಾನ್ಯವಾಗಿ ಹೆಣ್ಣು ಮೊಟ್ಟೆಗಳ ಸನಿಹದಲ್ಲೇ ಇದ್ದು ಅವನ್ನು ಕಾಪಾಡುವುವು. ಸುಮಾರು 60 ದಿವಸಗಳ ಅನಂತರ ಮೊಟ್ಟೆಗಳು ಒಡೆದು ಮರಿಹಾವುಗಳು ಹೊರಬರತೊಡಗುವುವು. ಮರಿನಾಗರಗಳಲ್ಲಿ ಚೆನ್ನಾಗಿ ರೂಪುಗೊಂಡ ಹೆಡೆಯುಂಟು. ಇವು ತಮ್ಮ ತಂದೆತಾಯಿಗಳಿಗಿಂತ ಹೆಚ್ಚು ಆಕ್ರಮಣಪ್ರವೃತ್ತಿಯುಳ್ಳವು. ಹುಟ್ಟಿದಾಗ 20-25 ಸೆಂಮೀ. ಉದ್ದವಿರುವ ಇವು ಒಂದು ವರ್ಷದ ತರುವಾಯ 75 ಸೆಂಮೀ. ಉದ್ದ ಬೆಳೆಯುವುವು. ನಾಲ್ಕು ವರ್ಷಗಳಲ್ಲಿ 2 ಮೀ. ಉದ್ದ ಬೆಳೆಯುತ್ತದೆ. ಇವು ಮೂರುವರ್ಷ ವಯಸ್ಸಿನವಾದಾಗ ಲೈಂಗಿಕ ಪ್ರಬುದ್ಧತೆಯನ್ನು ಪಡೆಯುವುವು.

ಸಂಸ್ಕೃತಿಯಲ್ಲಿ ನಾಗರಹಾವು

ಬದಲಾಯಿಸಿ

ಭಾರತದಲ್ಲಿ ನಾಗರಹಾವನ್ನು ಪೂಜನೀಯವೆಂದು ಪರಿಗಣಿಸಲಾಗಿದೆ. ನಾಗಪಂಚಮಿ (ಜುಲೈ ತಿಂಗಳಲ್ಲಿ) ಮತ್ತು ಅನಂತ ಚತುರ್ದಶಿಗಳಂದು (ಸೆಪ್ಟೆಂಬರ್ ತಿಂಗಳಲ್ಲಿ) ನಾಗರಹಾವಿನ ಪೂಜೆಯನ್ನು ನಡೆಸಲಾಗುತ್ತದೆ.ಹಿಂದೂ ಧರ್ಮದಲ್ಲಿ ನಾಗರಹಾವನ್ನು ದೇವತೆಯೆಂದು(ನಾಗದೇವತೆ, ನಾಗಪ್ಪ) ಪರಿಗಣಿಸಲಾಗುತ್ತದೆ.


ಭಾರತದ ನಾಗರ

ಬದಲಾಯಿಸಿ

ನಾಗರಹಾವು - ಎಲಪಿದೇ ವರ್ಗಕ್ಕೆ ಸೇರುವ ವಿಷಪೂರಿತ ಹಾವು.

ಪ್ರಭೇದ: ನಜ ನಜ

ವಾಸಸ್ಥಾನ: ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕ

ಸ್ವಭಾವ: ವಿಷಕಾರಿ. ಇದರ ವಿಷ ಶಕ್ತಿಶಾಲಿ ನ್ಯೂರೋಟಾಕ್ಸಿನ್‍ಗಳನ್ನೊಳಗೊಂಡಿದೆ. ಈ ವಿಷ ಸ್ನಾಯು ಮತ್ತು ಉಸಿರು ಅಥವಾ ಹೃದಯಾಘಾತದ ಮೇಲೆ ಹೆಚ್ಚು ಪರಿಣಾಮವುಂಟುಮಾಡುತ್ತದೆ.

ಆಹಾರ: ಇಲಿ, ಮೊಲ, ಕಪ್ಪೆ, ಪಕ್ಷಿ ಮರಿಗಳು ಇತ್ಯಾದಿ

ನಾಗರದ ಕೆಲವು ಮುಖ್ಯ ಸಂಗತಿಗಳು

ಬದಲಾಯಿಸಿ
 
ಭಾರತೀಯ ನಾಗರಹಾವಿನ ಹೆಡೆಯ ಮೇಲಿನ ಆಕರ್ಷಕ ರಚನೆ
  • ಭಾರತೀಯ ನಾಗರ ಭಾರತದಲ್ಲಿನ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ; ಪ್ರತಿ ವರ್ಷ 10,000 ಜನರು ಸುಮಾರು ಈ ಹಾವು ಕಡಿತದಿಂದ ಸಾಯುವರು.
  • ಭಾರತೀಯ ನಾಗರ ಹಾವಿನ ಕಚ್ಚುವಿಕೆ ಅನೇಕ ಸಂದರ್ಭಗಳಲ್ಲಿ ಸಂಭವಿಸುತ್ತದೆ; ಭತ್ತದ ಅಲ್ಲಿ ಗದ್ದೆ ಮುಂತಾದ ಸ್ಥಳಗಳಲ್ಲಿ ಹಾವು ಆಕರ್ಷಿತವಾಗುತ್ತವೆ , ಅಲ್ಲಿಯೇ ಹೆಚ್ಚು ಹಾವುಕಡಿತ ಸಂಭವಿಸುವುದು.
  • ಭಾರತದಲ್ಲಿ ನಾಗರ ವಿಷವನ್ನು ಸಂಶೋಧನೆಯಲ್ಲಿ ಬಳಸಲಾಗುತ್ತದೆ. ತಯಾರಿಕೆಯನ್ನು ನೋವು ಶಾಮಕ ಮತ್ತು ಕ್ಯಾನ್ಸರ್ ವಿರೋಧಿ ಔಷಧಗಳ ತಯಾರಿಕೆಗೆ ಉಪಯೋಗಿಸುವರು.
  • ಸರ್ಪಗಳು ಕಿವುಡ; ಸಂಗೀತಕ್ಕೆ ಅವುಗಳ 'ನೃತ್ಯ' ಸಂಗೀತದ ಬದಲಿಗೆ, ಫಕೀರ್ ನ ಕೊಳಲು ಚಲನೆಯ ಒಂದು ಪ್ರತಿಕ್ರಿಯೆಯಾಗಿದೆ.
  • ಭಾರತೀಯ ಸರ್ಪಗಳು ಸೆರೆಯಲ್ಲಿ 30 ವರ್ಷಗಳ ವರೆಗೆ ಬದುಕುವುವು.
  • ಭಾರತೀಯ ಸರ್ಪಗಳನ್ನು ಪವಿತ್ರ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ; ವರ್ಷದ ಕೆಲವು ದಿನಗಳಲ್ಲಿ ಅವಕ್ಕೆ ಪೂಜೆ ್ಕ ಪೂಜೆ ಸಲ್ಲಿದುವರು.
  • ಭಾರತೀಯ ನಾಗರದ ಉಪವರ್ಗಗಳಾದ ಇಂಡೋನೇಷ್ಯಾದ ನಾಗಗಳು ಹಲವಾರು ಮೀಟರ್ ದೂರದಿಂದ ತನ್ನ ವಿಷವನ್ನು ಉಗಳಿಚಿಮ್ಮಿಸುತ್ತವೆ. []

ಛಾಯಾಂಕಣ

ಬದಲಾಯಿಸಿ

ಈ ಪುಟಗಳನ್ನೂ ನೋಡಿ

ಬದಲಾಯಿಸಿ


ಉಲ್ಲೇಖ

ಬದಲಾಯಿಸಿ
  1. "ನಾಗರದ ಕೆಲವು ಮುಖ್ಯ ಸಂಗತಿಗಳು". Archived from the original on 2016-10-08. Retrieved 2016-10-04.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: