ಒಂದು ಜಾತಿಯ ಕಟ್ಟುಹಾವು

ಕಟ್ಟುಹಾವುಸಂಪಾದಿಸಿ

ಭಾರತದ ವಿಷಸರ್ಪಗಳಲ್ಲಿ ಒಂದು ಜಾತಿ (ಕ್ರೇಟ್). ಇದಕ್ಕೆ ಬಂಗರಸ್ ಎಂಬ ವೈಜ್ಞಾನಿಕ ಹೆಸರಿದೆ. ಸರೀಸೃಪ ವರ್ಗದ ಒಫೀಡಿಯ ಗಣದ ಇಲಾಪಿಡೀ ಕುಟುಂಬಕ್ಕೆ ಸೇರಿದೆ. ಈ ಜಾತಿಯಲ್ಲಿ ಸುಮಾರು 12 ಪ್ರಭೇದಗಳಿವೆ.

ಬಂಗರಸ್ ಸಿರೂಲಿಯಸ್ಸಂಪಾದಿಸಿ

ಬಂಗರಸ್ ಸಿರೂಲಿಯಸ್ ಎಂಬ ಪ್ರಭೇದ ಭಾರತದಲ್ಲಿ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತದೆ. ಸುಮಾರು 2 ಮೀ ಉದ್ದವಿರುವ ಇದರ ಮೇಲುಮೈ ನೀಲಿಮಿಶ್ರಿತ ಕಪ್ಪು, ಹೊಟ್ಟೆಯ ಭಾಗ ಬಿಳುಪು. ಮೈಮೇಲೆ ಅಡ್ಡಡ್ಡಲಾಗಿ ಬಿಳಿಯ ಪಟ್ಟೆಗಳಿವೆ. ತಲೆಗೂ ಕತ್ತಿಗೂ ಗಾತ್ರದಲ್ಲಿ ವ್ಯತ್ಯಾಸವಿಲ್ಲ. ತಲೆಯ ಮೇಲೆ ಫಲಕಗಳಿವೆ (ಶೀಲ್ಡ್‌). ಬೆನ್ನುಹುರಿಯುದ್ದಕ್ಕೂ ಇರುವ ಹುರುಪೆಗಳು ಉಳಿದವಕ್ಕಿಂತ ದೊಡ್ಡವು. ಬಾಲದಲ್ಲಿರುವ ಉದರಭಾಗದ ಹುರುಪೆಗಳೂ ಒಂದೇ ಸಾಲಿನಲ್ಲಿ ಜೋಡಣೆಗೊಂಡಿವೆ. ಇದು ನಿಶಾಚರಿ, ಗೋಡೆಗಳ ಬಿರುಕುಗಳಲ್ಲಿ, ಕಲ್ಲುಗಳ ರಾಶಿಯ ನಡುವೆ ವಾಸಿಸುತ್ತದೆ. ಇಲಿ ಮತ್ತು ಇತರ ಹಾವುಗಳನ್ನು (ಇತರ ಕಟ್ಟುಹಾವುಗಳನ್ನೂ) ಕಬಳಿಸುತ್ತದೆ.

ಬಂಗಾರಸ್ ಫೇಸಿಯೇಟಸ್ಸಂಪಾದಿಸಿ

ಇನ್ನೊಂದು ಬಗೆಯಾದ ಪಟ್ಟೆ ಕಟ್ಟುಹಾವು ಬಂಗಾರಸ್ ಫೇಸಿಯೇಟಸ್ ಅಸ್ಸಾಮ್, ಮಧ್ಯಪ್ರದೇಶ, ಒರಿಸ್ಸ ಮತ್ತು ಉತ್ತರ ಪ್ರದೇಶದ ಕೆಲಭಾಗಗಳಲ್ಲಿ ವಾಸಿಸುತ್ತದೆ. ಇದು ಸಾಮಾನ್ಯ ಕಟ್ಟುಹಾವಿಗಿಂತ ದೊಡ್ಡದು. ಮೈಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಅಡ್ಡಪಟ್ಟೆಗಳಿವೆ. ತಲೆ ಮತ್ತು ಕತ್ತಿನ ಮೇಲೆ ಕಪ್ಪು ಮಚ್ಚೆಗಳಿವೆ, ಬೇರೆ ಹಾವುಗಳನ್ನು ತಿಂದು ಜೀವಿಸುತ್ತದೆ. ಕಪ್ಪು ಕಟ್ಟುಹಾವು ಬಂಗರಸ್ ನೈಜರ್ ಎಂಬ ಮೂರನೆಯ ಬಗೆಯ ಕಟ್ಟುಹಾವು. ಅಸ್ಸಾಮ್ ಮತ್ತು ಡಾರ್ಜಿಲಿಂಗ್ಗಳಲ್ಲಿ ಕಾಣಬರುತ್ತದೆ. ಇದು ಉಳಿದೆರಡಕ್ಕಿಂತ ಚಿಕ್ಕದು. ದೇಹದ ಬಣ್ಣ ಕಪ್ಪು, ಬಿಳಿ ಪಟ್ಟೆಗಳಿಲ್ಲ; ಉದರಭಾಗ ಬಿಳುಪಾಗಿದ್ದು ಅಲ್ಲಲ್ಲಿ ಕಪ್ಪು ಮಚ್ಚೆಗಳಿವೆ.

ಕಟ್ಟುಹಾವುನ ವಿಷಸಂಪಾದಿಸಿ

ಕಟ್ಟುಹಾವಿನ ವಿಷ ವಿಷಕಾರಿ ಹಾವುಗಳ ವಿಷದಲ್ಲಿಯೇ ತೀಕ್ಷ್ಣವಾದುದು; ನರಮಂಡಲವನ್ನೇ ನಿಶ್ಚೇತನಗೊಳಿಸಿ ಸಾವನ್ನು ತರುತ್ತದೆ. ಸಾವು ತರಲು ಕೇವಲ 2ಮಿಗ್ರಾಂ ವಿಷವಿದ್ದರೂ ಸಾಕು.