ರಕ್ತಕ್ಷಯ ಎಂದರೆ ಮನುಷ್ಯ ದೇಹದಲ್ಲಿರುವ ರಕ್ತದ ಮೊತ್ತ ಇಲ್ಲವೆ ರಕ್ತೋತ್ಪತ್ತಿ ಕಡಿಮೆಯಾಗುವ ಸ್ಥಿತಿ (ಬ್ಲಡ್‍ಲೆಸ್‍ನೆಸ್). ರಕ್ತದ ಮೊತ್ತ ಇಲ್ಲವೆ ರಕ್ತೋತ್ಪತ್ತಿಯು ಎಲುಬುಮಜ್ಜೆಯಲ್ಲಿ ರಕ್ತ ಉತ್ಪತ್ತಿಯಾಗುವುದಾದರೂ ದೇಹದ ಈಲಿ (ಯಕೃತ್ - ಲಿವರ್), ಪ್ಲೀಹ (ಗುಲ್ಮ - ಸ್ಪ್ಲೀನ್) ಮತ್ತಿತರ ಎಡೆಗಳಿಂದಲೂ ಉತ್ಪತ್ತಿಯಾಗುತ್ತದೆ.

ರಕ್ತಕ್ಷಯ ಉಂಟಾಗಲು ಪ್ರಮುಖವಾದ ಕಾರಣಗಳು ಎಂದರೆ:

  1. ರಕ್ತಹೀನತೆ (ಅನೀಮಿಯ) ಇಲ್ಲವೆ ರಕ್ತಸ್ರಾವ (ಹೆಮೊರೆಜ್); ಅಥವಾ
  2. ರಕ್ತೋತ್ಪತ್ತಿ ಮಾಡುವ ಸ್ಥಳಗಳಾದ ಈಲಿ, ಮಜ್ಜೆ, ಗುಲ್ಮಗಳು ತಮ್ಮ ತಮ್ಮ ಕೆಲಸಗಳನ್ನು ಯುಕ್ತರೀತಿಯಲ್ಲಿ ನಿರ್ವಹಿಸದಿರುವುದು.

ಲಕ್ಷಣಗಳು ಬದಲಾಯಿಸಿ

ರಕ್ತಕ್ಷಯ ಅಥವಾ ರಕ್ತಹೀನತೆಯ ಲಕ್ಷಣಗಳು ಎಂದರೆ ಅಗ್ನಿಮಾಂದ್ಯ (ಅಜೀರ್ಣ) ಏರ್ಪಡುವುದು. ನಾಲಗೆಯ ಮೇಲೆ ಬಿಳಿಯ ಪೊರೆ ಏರ್ಪಟ್ಟು ರುಚಿ ಗೊತ್ತಾಗದೆ ಇರುವುದು, ಆಲಸ್ಯ ಏರ್ಪಡುವುದು, ಕಾಮಾಲೆ ತಲೆದೋರುವುದು. ಕೆಲವೊಮ್ಮೆ ರಕ್ತಸ್ರಾವ ಉಂಟಾಗುವುದು. ಮಜ್ಜೆ ಇರುವ ಜಾಗದಲ್ಲಿ ಮೇದಸ್ಸು (ಕೊಬ್ಬು) ಶೇಖರಗೊಳ್ಳುವುದು, ತೀಕ್ಷ್ಣವೆನಿಸುವ ಔಷಧಗಳನ್ನು ಸೇವಿಸುವುದರಿಂದ ಮತ್ತು ಪದೇ ಪದೇ ಎಕ್ಸ್ ಕಿರಣಕ್ಕೆ ದೇಹವನ್ನು ಒಡ್ಡುವುದರಿಂದ ಪ್ರತಿಕೂಲ ಸನ್ನಿವೇಶ ಉಂಟಾಗುವುದು, ಸೀಸಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಸೀಸ ವಿಷವೇರಿಕೆ ಉಂಟಾಗುವುದು ಮುಂತಾದವು.

ರಕ್ತದಲ್ಲಿ ಸೀಸದ ಅಂಶ ಅಧಿಕವಾಗಿದ್ದಲ್ಲಿ ರಕ್ತದಲ್ಲಿನ ಕೆಂಪುರಕ್ತಕಣಗಳ ಬಣ್ಣ ಇಳಿಮುಖವಾಗುತ್ತದೆ. ರಕ್ತಹೀನತೆ ಸಂದರ್ಭದಲ್ಲಿ ಆಗಾಗ್ಗೆ ಉದರಶೂಲೆ, ಮೂಳೆಕೀಲುಗಳ ನೋವು ಕಾಣಿಸಿಕೊಳ್ಳುತ್ತದೆ. ಗುಲ್ಮ ಊದಿಕೊಳ್ಳಲು ಅವಕಾಶ ಉಂಟಾಗುತ್ತದೆ. ಇದರಿಂದ ಸಿಕಲ್‍ಸೆಲ್ಡ್ ಅನೀಮಿಯ ಎಂಬ ಕಾಯಿಲೆಯೂ ಉಂಟಾಗಬಹುದು. ರಕ್ತಹೀನತೆಯ ಸಲುವಾಗಿ ಉಂಟಾಗಬಹುದಾದ ಕ್ಯಾನ್ಸರ್ ರೋಗದ ಸಂದರ್ಭದಲ್ಲಿ ರಕ್ತಕಣಗಳ ಗಾತ್ರ ಹಿರಿದಾಗುತ್ತದೆ.

ಇತರ ಕಾರಣಗಳು ಬದಲಾಯಿಸಿ

ರಕ್ತಸ್ರಾವದಿಂದ ಉಂಟಾಗುವ ರಕ್ತಕ್ಷಯದ ಸಂದರ್ಭದಲ್ಲಿ ರಕ್ತ ಗರಣೆಗಟ್ಟುವ ಅವಧಿ (ಕೊಯಾಗ್ಯುಲೇಷನ್ ಟೈಮ್) ಕಡಿಮೆಯಾಗೇ ಇರುತ್ತದೆ. ಚಿಕ್ಕ ಗಾಯ ಏರ್ಪಟ್ಟರೂ ಬಹಳ ಹೊತ್ತಿನ ತನಕವೂ ರಕ್ತಸ್ರಾವ ಇದ್ದೇ ಇರುವುದು. ಕೀಲುಗಳಲ್ಲೂ ರಕ್ತಸ್ರಾವ ಏರ್ಪಡುತ್ತದೆ. ಮೂತ್ರವಿಸರ್ಜನೆ ಕಾಲದಲ್ಲೂ ರಕ್ತ ವಿಸರ್ಜನೆಗೊಳ್ಳುತ್ತದೆ. ರೆಂಡು - ಆಸ್ಲರ್ - ವೀಬರ್ ಎಂಬ ರೋಗದ ಸಂದರ್ಭದಲ್ಲಿ ರಕ್ತಸ್ರಾವದ ಜೊತೆಗೆ ಮುಖ, ಬಾಯಿ, ಮೂಗು, ತಲೆ ಮತ್ತು ಕೈಗಳಲ್ಲಿ ವ್ರಣಗಳು ಏರ್ಪಡುತ್ತವೆ. ಜೀರ್ಣಾಂಗಗಳಲ್ಲೂ ಆಂತರಿಕ ರಕ್ತಸ್ರಾವ ಉಂಟಾಗಬಹುದು. ಕ್ಷಯರೋಗ ಮತ್ತು ಹೀಮೋಫೀಲಿಯ (ರಕ್ತಗರಣೆಗಟ್ಟುವ ಕ್ರಿಯಾ ಸಂದರ್ಭದಲ್ಲಿ ತೊಂದರೆ) ಜೀವಾವಧಿ ತನಕ ಇರುವ ಸಾಧ್ಯತೆ ಉಂಟು. ಇಂಥ ಸನ್ನಿವೇಶ ವಂಶಪಾರಂಪರ್ಯವಾಗಿ ಕೂಡ ಉಂಟಾಗಬಹುದು. ಇಂಥ ಕಾರಣಗಳಿಂದಾಗಿ ರಕ್ತಕ್ಷಯ ಇಲ್ಲವೆ ರಕ್ತಹೀನತೆ ತಲೆದೋರುವ ಸಾಧ್ಯತೆಗಳಿರುತ್ತವೆ.

ಜಠರದ ಮತ್ತು ಸಣ್ಣಕರುಳಿನ ಮುಂಭಾಗದಲ್ಲಿ ವ್ರಣಗಳು ಏರ್ಪಡುವುದರಿಂದ ರಕ್ತಸ್ರಾವ ಉಂಟಾಗಬಹುದು. ಹೆಂಗಸರಲ್ಲಿ ಗರ್ಭಕೋಶದಿಂದ ಅದರ ಮುಂಭಾಗದಲ್ಲಿ ಗೀರು, ಸೀಳು ಏರ್ಪಡುವುದರಿಂದ ಪ್ರಸವವೇಳೆಯಲ್ಲಿ ತೊಂದರೆ ಉಂಟಾಗಿ ಗರ್ಭಕೋಶದ ಸತ್ತ್ವ (ಟೋನ್) ಕಡಿಮೆಯಾಗಿ ರಕ್ತಸ್ರಾವ ಉಂಟಾಗಬಹುದು. ಲೋಮನಾಳ ಬೀಗುವಿಂದಲೂ (ಟೀಲಾಂಜಿಎಕ್ಟೇಸಿಸ್) ರಕ್ತಸ್ರಾವ ಉಂಟಾಗಿ ರಕ್ತಕ್ಷಯ ತಲೆದೋರುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: