ರಕ್ತದಲ್ಲಿ ಎರಡು ಭಾಗಗಳು. ಒಂದು ದ್ರವದ್ದು ಇನ್ನೊಂದು ಕಣಗಳಿದ್ದು. ದ್ರವ ಭಾಗಕ್ಕೆ ರಕ್ತರಸ (ಪ್ಲಾಸ್ಮಾ) ಎನ್ನುತ್ತಾರೆ. ರಕ್ತಕಣಗಳಲ್ಲಿ ಅನೇಕ ವಿಧದ ಕಣಗಳಿವೆ. ಹಾಲ್‍ರಸಕಣ (ಲಿಂಫೋಸೈಟ್) ಒಂದನ್ನು ಬಿಟ್ಟು ಉಳಿದ ಎಲ್ಲ ಬಗೆಯ ರಕ್ತಕಣಗಳು, ಚಪ್ಪಟಿಕಗಳು ಮೂಳೆಗಳ ಒಳಗಿನ ಪೊಳ್ಳುಗಳಲ್ಲಿರುವ ಮಜ್ಜೆ (ಮ್ಯಾರೋ)ಯಿಂದ ಜನಿಸುತ್ತವೆ. ಎಲುಮಜ್ಜೆಯು ಮೃದುವಾದ ಮೆತುವಾದ ಊತಕ. ಹಸುಗೂಸಿನ ತೂಕದಲ್ಲಿ ಸುಮಾರು 2.3 ಪ್ರತಿಶತದಷ್ಟು ಎಲುಮಜ್ಜೆ ಇರುತ್ತದೆ. ಬೆಳೆದಿರುವವರಲ್ಲಿ ಇದು ಎರಡು ಪಟ್ಟು ಹೆಚ್ಚಾಗುತ್ತದೆ. ಮಗುವಿನಲ್ಲಿ ಎಲುಮಜ್ಜೆಯ ಘನ ಅಳತೆ 65 ಮಿ.ಲೀ. ನಷ್ಟಿದ್ದು ದೊಡ್ಡವರಲ್ಲಿ 1.6 ರಿಂದ 3.2 ಲೀಟರುಗಳಷ್ಟಾಗುತ್ತದೆ.

ಅಸ್ತಿ ಮಜ್ಜೆಯ ಸರಳವಾದ ವಿವರಣೆ

ಬಣ್ಣದ ಮೂಲಕ ವಿಂಗಡಣೆಸಂಪಾದಿಸಿ

 
ಕೆಂಪು ಮತ್ತು ಹಳದಿ ಎಲುಬು ಮಜ್ಜೆ

ಮಜ್ಜೆಯಲ್ಲಿ ಕೊಬ್ಬಿನ ಊತಕ ಹೆಚ್ಚಾಗಿದ್ದರೆ ಹಳದಿಯಾಗಿ, ರಕ್ತ ತಯಾರಿಕಾ ಊತಕ ಹೆಚ್ಚಾಗಿದ್ದರೆ ಕೆಂಪಾಗಿ ತೋರುವುದು. ಸುಮಾರು ಏಳನೆಯ ವಯಸ್ಸಿನ ತನಕ ದೇಹದೊಳಗಿನ ಮಜ್ಜೆಯಲ್ಲಿ ಕೆಂಪಗೆ ಇರುತ್ತದೆ. ನಂತರ ಮಗು ಬೆಳೆದು ದೊಡ್ಡದಾದಂತೆ ಮಜ್ಜೆ ಕೊಬ್ಬುಗೂಡುವುದು ಹೆಚ್ಚಾಗುತ್ತ ಸಾಗುತ್ತದೆ. ಹೀಗಾಗಿ ಬೆಳೆದವರ ತಲೆಬುರುಡೆ, ಎದೆ ಚಕ್ಕೆ, ಪಕ್ಕೆಲುಗಳು, ಕೊರಳೆಲುಗಳು, ಬೆನ್ನುಗಂಬ ತೊಡೆಮೂಳೆ ಅಲ್ಲದೆ ತೋಳಿನ ಮೇಲ್ಕೊನೆಗಳಲ್ಲಿ ಮಾತ್ರ ಕೆಂಪು ಮಜ್ಜೆ ಉಳಿಯುತ್ತದೆ. ಅವಶ್ಯಕತೆಯ ಹಲವು ತುರ್ತಿನ ಹೊತ್ತುಗಳಲ್ಲಿ ಹಳದಿ ಮಜ್ಜೆ ಕೆಂಪಾಗುತ್ತದೆ. ಯಾವುದೇ ಕಾರಣದಿಂದಾಗಿ ರಕ್ತ ತಯಾರಿಕೆಯ ಚಟುವಟಿಕೆ ಹೆಚ್ಚಿದಾಗಲೂ ಹಳದಿ ಮಜ್ಜೆ ಕೆಂಪಾಗುತ್ತದೆ.

ಚಿಕಿತ್ಸೆ ಹಾಗೂ ಪರಿಣಾಮಗಳುಸಂಪಾದಿಸಿ

 
ಎಲುಬು ಮಜ್ಜೆಯ ಸೂಜಿ ಚಿಕಿತ್ಸೆ

ಪರ್ವತಗಳ ಎತ್ತರದ ಏರಿನಲ್ಲಿ ಆಗುವಂತೆ ಉಸಿರಲ್ಲಿ ಆಮ್ಲಜನಕದ ಪ್ರಮಾಣ ತಗ್ಗಿದರೆ ಕೆಂಪುರಕ್ತ ಕಣಗಳು ಹೆಚ್ಚು ಹೆಚ್ಚಾಗಿ ತಯಾರಾಗುತ್ತವೆ. ಕೋಬಾಲ್ಟ್ ತೆರನ ಕೆಲವು ರಸಾಯನಿಕಗಳಿಂದಲೂ ಹೀಗಾಗುವುದು. ಕೆಲವು ರೋಗಗಳಲ್ಲಿ ಎಲುಮಜ್ಜೆಯಲ್ಲಿ ವಿಶಿಷ್ಟ ಬದಲಾವಣೆಗಳಾಗುವದು. ಇದನ್ನು ಕಂಡುಕೊಳ್ಳಲು ಎದೆ ಚಕ್ಕೆಯಲ್ಲಿ (ಸ್ಟರ್ನಂ) ತೂತಿಟ್ಟು ಸೂಜಿಯಿಂದ ಎಲುಬೊಳಗಿರುವ ಮಜ್ಜೆ ಹೀರಿ ತೆಗೆದು ಪರೀಕ್ಷಿಸುತ್ತಾರೆ.[೧]

ವಿಕಿರಣತೆ ಹಾಗೂ ರಾಸಾಯನಿಕ ಪರಿಣಾಮಸಂಪಾದಿಸಿ

ಎಕ್ಸ್ ಕಿರಣಗಳು, ಪರಮಾಣು ಬಾಂಬ್ ಸಿಡಿತದಿಂದಾಗುವ ವಿಕಿರಣತೆಯಿಂದ ಎಲುಮಜ್ಜೆಗೆ ಹಾನಿಯಾಗುತ್ತದೆ. ರಕ್ತದ ಜೀವಕಣಗಳ ಜನನ ಕುಂಠಿತಗೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಎಲುಮಜ್ಜೆ ಪೂರಣ (ಬೋನ ಮ್ಯಾರೊ ಟ್ರಾಸ್ಸ್‍ಪ್ಲಾಂಟ) ಮಾಡಿದರೆ ಮಜ್ಜೆ ಚೇತರಿಸಿಕೊಂಡು ಮೊದಲಿನಂತಾಗುತ್ತದೆ. ಎಲುಮಜ್ಜೆಯಲ್ಲಿ ಕಾಣುವ ಕಾಂಡಕಣ (ಸ್ಟೆಮ್ ಸೆಲ್ಸ್) ಗಳನ್ನು ದಾನಿಗಳಿಂದ ಪಡೆದು ಸಂರಕ್ಷಿಸಿ ಶೇಖರಿಸಿಟ್ಟು ನಂತರ ಕೆಲವು ವಿಶಿಷ್ಠ ಚಿಕಿತ್ಸೆಯಲ್ಲಿ ಪೂರಣ ಮಾಡಿ ಸಂತಸದಾಯಕ ಫಲಪಡೆಯುವಲ್ಲಿ ವಿಜ್ಞಾನಿಗಳು ಯಶಸ್ಸು ಪಡೆದಿದ್ದಾರೆ.

ಇನ್ನಷ್ಟು ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  1. [೧][ಶಾಶ್ವತವಾಗಿ ಮಡಿದ ಕೊಂಡಿ]ಅಸ್ಥಿಮಜ್ಜೆ ಕಸಿಗೆ ಬಳಕೆಯಾದ ಪೋಷಕರ ಮಜ್ಜೆ