ಮರಸೇಬು
ಟೊಂಗೆಯೊಂದಿಗೆ ಯುರೋಪಿನ ಮರಸೇಬು
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಉಪಪಂಗಡ:
ಕುಲ:
ಪೈರಸ್

ಪ್ರಭೇದಗಳು

೩೦ಕ್ಕಿಂತ ಹೆಚ್ಚು ಪ್ರಭೇದಗಳಿವೆ; see text.

ಮರಸೇಬು ಯುರೊಪಿನ ಸಮಶೀತೋಷ್ಣ ವಲಯದಲ್ಲಿ ಮತ್ತು ಪಶ್ಚಿಮ ಏಷ್ಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಒಂದು ಫಲವೃಕ್ಷ. ರೋಸೆಸೀ ಕುಟುಂಬಕ್ಕೆ ಸೇರಿದೆ. ಆಂಗ್ಲ ಭಾಷೆಯಲ್ಲಿ ಪೇರ್ (Pear) ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪೈರಸ್ ಕಮ್ಯುನಿಸ್ ಎಂದು. ಇದರಲ್ಲಿ ಹಲವಾರು ಪ್ರಭೇದಗಳಿದ್ದು ಕಮ್ಯುನಿಸ್ ಮತ್ತು ಸಟೈವ ಎಂಬ ಎರಡು ಪ್ರಭೇದಗಳು ವಾಣಿಜ್ಯ ದೃಷ್ಟಿಯಿಂದ ಮುಖ್ಯವಾಗಿದೆ. ಇವುಗಳಲ್ಲಿ ಕಮ್ಯೂನಿಸ್ ಕಾಡುಬಗೆ; ಮಧ್ಯ ಮತ್ತು ದಕ್ಷಿಣ ಯೂರೊಪ್, ಏಷ್ಯ ಮೈನರ್, ಕಾಕಸಸ್ ಮತ್ತು ಉತ್ತರ ಇರಾನ್‌ನಲ್ಲಿ ಬೆಳೆಯುತ್ತದೆ. ಇದರಲ್ಲಿ ಮುಳ್ಳುಗಳುಂಟು. ಎರಡನೆಯದು ಮುಳ್ಳುರಹಿತವಾದ್ದು, ಇದಕ್ಕೆ ದೊಡ್ಡೆಲೆ, ಹೂ ಹಾಗೂ ರಸಭರಿತ ಹಣ್ಣುಗಳಿವೆ. ಕೃಷಿಯಲ್ಲಿರುವ ಎಲ್ಲ ಮರಸೇಬು ಬಗೆಗಳನ್ನೂ ಇದು ಒಳಗೊಂಡಿದೆ.

ಉಗಮ ಸ್ಥಾನ

ಬದಲಾಯಿಸಿ

ಎಲ್ಲ ಬಗೆಯ ಮರಸೇಬುಗಳಿಗೂ ಯೂರೋಪ್ ಪ್ರದೇಶವೇ ಉಗಮ ಸ್ಥಾನವೆಂದು ಬಗೆಯಲಾಗಿದೆ. ಕಾಡುಬಗೆಯಾದ ಕಮ್ಯೂನಿಸ್ ಮತ್ತು ಪೂರ್ವ ಯೂರೊಪಿನಲ್ಲಿ ಬೆಳೆಯುವ ನಿವ್ಯಾಲಿಸ್ ಎಂಬ ಪ್ರಭೇದಗಳ ನಡುವೆ ಸಂಭವಿಸಿರಬಹುದಾದ ಸಹಜ ಸಂಕರದಿಂದಲೋ ಮನುಷ್ಯ ನಡೆಸಿದ ಕೃತಕ ಸಂಕರದಿಂದಲೋ ಇಂದು ಬೇಸಾಯದಲ್ಲಿರುವ ಮರಸೇಬಿನ ತಳಿಗಳು ಉದ್ಭವಿಸಿವೆ ಎನ್ನಲಾಗಿದೆ.

ಸಸ್ಯದ ವಿವರಣೆ

ಬದಲಾಯಿಸಿ

ಮರಸೇಬು ಅಗಲಹಂದರದ ಮಧ್ಯಮಗಾತ್ರದ ಮರ. ಎಲೆಗಳು ಅಂಡಾಕಾರವು; ಗರಗಸ ಅಂಚುಳ್ಳವು. ಹೂಗಳೂ ಕಾರಿಂಬ್ ಬಗೆಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಬಿಳಿ.[] ಹಣ್ಣುಗಳು ಗುಂಡಗಿರಬಹುದು ಇಲ್ಲವೆ ಕಿರಿಯಗಲದ ಬುಡಭಾಗ ಹಿರಿಯಗಲದ ತುದಿಭಾಗವನ್ನು ಪಡೆದಿರಬಹುದು. ತಿರುಳು ಪೂರ್ಣ ಮೆದುವಾಗಿರದೆ ಅಲ್ಲಲ್ಲಿ ಸಣ್ಣ ಹುಳುಕುಗಳಿಂದ ಕೂಡಿರುತ್ತದೆ.

ಸಮಶೀತೋಷ್ಣವಲಯಗಳ ಫಲಗಳ ಪೈಕಿ ಉತ್ಪಾದನೆಯ ಮೊತ್ತ, ತಳಿಗಳ ಸಂಖ್ಯಾಬಾಹುಳ್ಯ ಮತ್ತು ಜನಪ್ರಿಯತೆಗಳ ದೃಷ್ಟಿಯಿಂದ ಮರಸೇಬಿಗೆ ಸೇಬಿನ ಅನಂತರ ಸ್ಥಾನ. ಮರಸೇಬಿನಲ್ಲಿ 5000ಕ್ಕೂ ಹೆಚ್ಚು ತಳಿಗಳಿವೆ. ಮರಸೇಬಿನ ಬೇಸಾಯಕ್ಕೆ ಹೆಸರಾಂತ ದೇಶಗಳೆಂದರೆ ಜರ್ಮನಿ, ಇಟಲಿ, ಫ್ರಾನ್ಸ್, ಸ್ವಿಟ್ಜರ್‌ಲೆಂಡ್, ಅಮೇರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಜಪಾನ್. ಪ್ರಪಂಚಾದ್ಯಂತ ಮರಸೇಬಿನ ಇಳುವರಿ 5 ದಶಲಕ್ಷ ಮೆಟ್ರಿಕ್ ಟನ್ನಿಗೂ ಹೆಚ್ಚಿಗೆಯಿದ್ದು ಇದರಲ್ಲಿ ಅರ್ಧಕ್ಕೂ ಹೆಚ್ಚು ಮೇಲೆ ಉಲ್ಲೇಖಿಸಿದ ದೇಶಗಳಿಂದ ಲಭಿಸುತ್ತದೆ. ಭಾರತದ ಸುಮಾರು 1500 ಹೆಕ್ಟೇರ್ ಪ್ರದೇಶದಲ್ಲಿ ಮರಸೇಬಿನ ಕೃಷಿ ಇದೆ. ಪಂಜಾಬ್, ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡುಗಳು ದೊಡ್ಡ ಪ್ರಮಾಣದಲ್ಲೂ ದೆಹಲಿ, ಉತ್ತರಪ್ರದೇಶ, ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳಗಳು ಕಡಿಮೆ ಪ್ರಮಾಣದಲ್ಲೂ ಇದರ ಕೃಷಿಯಲ್ಲಿ ತೊಡಗಿವೆ. ಭಾರತದಲ್ಲಿ ಬೆಳೆಸುವ ಮರಸೇಬಿನ ತಳಿಗಳ ಪೈಕಿ ಬಾಗುಗೋಷ, ಕಾನ್‌ಫರನ್ಸ್,[] ಮೇರಿಲೂಯಿಸ್, ತಾಮ್ಸನ್ಸ್, ವಿನ್ಟರ್ ನೆಲಿಸ್ ಮುಖ್ಯವೆನಿಸಿವೆ.

 
Eight varieties of pear, from left to right, Williams' Bon Chrétien (sold in the US as Bartlett), two Red Bartlett varieties, d'Anjou, Bosc, Comice, Concorde, and Seckel




ಇದರ ಕೃಷಿಕ್ರಮಗಳು ಸೇಬಿನದರಂತೆಯೇ ಇವೆ. ಬೇರೊಂದು ಪ್ರಭೇದದ (ಉದಾಹರಣೆಗೆ ಪೈರಸ್ ಪೇಷಿಯ, ಪೈ ಪೈರಿಫೋಲಿಯ, ಪೈ ನಿವ್ಯಾಲಿಸ್, ಪೈ ಯುಸ್ಸುರೆನ್ಸಿಸ್ ಇತ್ಯಾದಿ) ತಾಳು ಸಸ್ಯಕ್ಕೆ ಕಸಿಮಾಡಿ ಪಡೆದ ಸಸಿಗಳ ಮೂಲಕ ಇದನ್ನು ವೃದ್ಧಿಸಲಾಗುತ್ತದೆ. ಸಸಿಗಳನ್ನು ನೆಡುವ ಸಮಯ ಚಳಿಗಾಲ. ನೀರನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳಬಲ್ಲ ಆಳ ರೀತಿಯ ನೆಲ ಇದರ ಬೇಸಾಯಕ್ಕೆ ಉತ್ತಮ. ಸೇಬಿಗಿಂತ ಹೆಚ್ಚಿನ ಸೂಕ್ಷ್ಮ ಪ್ರಕೃತಿಯದಾದ್ದರಿಂದ ಚಳಿಯನ್ನು ತಡೆದುಕೊಳ್ಳಲಾರದು. ಗಿಡಗಳು ಬೆಳೆದಮೇಲೆ ಆಗಿಂದಾಗ್ಗೆ ರೆಂಬೆಗಳನ್ನು ಮತ್ತು ಒಂದು ಗೊಂಚಲಿನಲ್ಲಿರುವ ಹೆಚ್ಚಿನ ಕಾಯಿಗಳನ್ನು ಕತ್ತರಿಸಿ ತೆಗೆದು ಹಾಕಲಾಗುತ್ತದೆ. ಇದರಿಂದ ಹಣ್ಣುಗಳ ಗಾತ್ರ ಹೆಚ್ಚುತ್ತದೆ.

ಸಸಿ ನೆಟ್ಟ ಸುಮಾರು ಏಳು ವರ್ಷಗಳ ತರುವಾಯ ಕಾಯಿ ಕಚ್ಚಲು ಆರಂಭಿಸಿ ಸುಮಾರು 70 ವರ್ಷಗಳ ಕಾಲ ಫಲ ಕೊಡುತ್ತ ಹೋಗುತ್ತದೆ. ಪೂರ್ಣಬಲಿತ ಮೇಲೆ, ಅದರೆ ಇನ್ನೂ ಹಸುರಾಗಿವಾಗ, ಕಾಯಿಗಳನ್ನು ಇಳಿಸಲಾಗುತ್ತದೆ, ಒಂದು ಮರದಿಂದ ಒಂದು ಸಲಕ್ಕೆ 100 ಕೆ.ಜಿ ಹಣ್ಣು ಪಡೆಯಬಹುದು.

ರಾಸಾಯನಿಕ ಸಂಯೋಜನೆ

ಬದಲಾಯಿಸಿ

ಇದರ ರಾಸಾಯನಿಕ ಸಂಯೋಜನೆ ಇಂತಿದೆ; ಪ್ರತಿನೂರು ಗ್ರಾಮ್ ಹಣ್ಣಿನಲ್ಲಿ 86.5 ಗ್ರಾಮ್ ತೇವಾಂಶ, 0.4ಗ್ರಾಮ್ ಪ್ರೋಟೀನ್, 0.1 ಗ್ರಾಮ್ ಕೊಬ್ಬು, 0.3 ಗ್ರಾಮ್ ಖನಿಜಾಂಶ, 2.1 ಗ್ರಾಮ್ ನಾರು, 10.6 ಗ್ರಾಮ್ ಬೇರೆ ಬೇರೆ ಬಗೆಯ ಶರ್ಕರಷಿಷ್ಟಗಳು. ಖನಿಜಾಂಶಗಳ ಪೈಕಿ ಕ್ಯಾಲ್ಸಿಯಮ್, ಫಾಸ್ಫರಸ್, ಕಬ್ಬಿಣಗಳೂ ಪ್ರೋಟಿನಗಳ ಪೈಕಿ ನಿಕೊಟಿನಿಕ್ ಆಮ್ಲ, ಜೀವಸತ್ವ Cಗಳು ಮುಖ್ಯ. ಕೆಲವು ಬಗೆಗಳಲ್ಲಿ ಜೀವಸತ್ವ A, ತಯಾಮಿನ್, ರೈಬೊಫ್ಲೇವಿನ್ ಗಳಿರುವುದೂ ಉಂಟು. ಶರ್ಕರಪಿಷ್ಟಗಳ ಪೈಕಿ ಫ್ರಕ್ಟೋಸ್ ಸಕ್ಕರೆಯ ಅಂಶ ಹೆಚ್ಚು, ಸೂಕ್ರೋಸ್ ಸಕ್ಕರೆಯ ಮೊತ್ತ ಬಲು ಕಡಿಮೆ. ಎಂದೇ ಮರಸೇಬನ್ನು ಮಧುಮೇಹ ರೋಗಿಗಳು ನಿರಾತಂಕವಾಗಿ ಸೇವಿಸಬಹುದೆನ್ನಲಾಗಿದೆ.

ಉಪಯೋಗಗಳು

ಬದಲಾಯಿಸಿ

ಮರಸೇಬಿನ ಹಣ್ಣನ್ನು ತಾಜಾ ಹಣ್ಣು, ಷರಬತ್, ಇಲ್ಲವೆ ಮಾದಕ ಪಾನೀಯ, ಸಂಸ್ಕರಿಸಿದ ಹೋಳುಗಳು ಮುಂತಾಗಿ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಮರಸೇಬನ್ನು ಹೋಳುಗಳಾಗಿ ಕತ್ತರಿಸಿ ಸಂಸ್ಕರಿಸಿ ಡಬ್ಬಿಗಳಲ್ಲಿ ಸಂಗ್ರಹಿಸಿರುವ ಉದ್ದಿಮೆಯಲ್ಲಿ ಕೊಂಚ ಪರಿಮಾಣದ ಸಿಪ್ಪೆ ಮುಂತಾದ ತ್ಯಾಜ್ಯವಸ್ತು ದೊರೆಯುತ್ತದೆ. ಇದರಿಂದ ವಿನಿಗರ್, ಆಲ್ಕೊಹಾಲ್ ಇತ್ಯಾದಿಗಳನ್ನು ತಯಾರಿಸುವುದಲ್ಲದೇ ಇದನ್ನು ನೇರವಾಗಿ ದನಗಳ ಉಣಿಸಾಗಿ ಬಳಸುವುದೂ ಇದೆ.

ಮರಸೇಬಿನ ಚೌಬೀನೆ ಕೆಂಪುಮಿಶ್ರಿತ ಹಳದಿ ಬಣ್ಣದ, ಮೃದುವಾದ ಮತ್ತು ನಿಕಟಕಣ ರಚನೆಯುಳ್ಳ ವಸ್ತು. ಕೆತ್ತನೆ ಕೆಲಸಗಳಿಗೂ, ಗಣಿತೀಯ ಉಪಕರಣಗಳ ತಯಾರಿಕೆಗೂ[] ಇದು ಚೆನ್ನಾಗಿ ಒದಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Pear Fruit Facts Page Information. bouquetoffruits.com
  2. "RHS Plant Selector - Pyrus communis 'Conference'". Archived from the original on 9 May 2013. Retrieved 30 May 2013.
  3. Lincoln, William (1986). World Woods in Color. Fresno, California, USA: Linden Publishing Co. Inc. pp. 33, 207. ISBN 0-941936-20-1.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮರಸೇಬು&oldid=1169805" ಇಂದ ಪಡೆಯಲ್ಪಟ್ಟಿದೆ