ಏಷ್ಯ ಮೈನರ್: ಏಷ್ಯಪಶ್ಚಿಮದ ತುದಿಯಲ್ಲಿ, ಆಧುನಿಕ ತುರ್ಕಿಯ ಏಷ್ಯನ್ ಭಾಗವನ್ನೊಳಗೊಂಡ ಪರ್ಯಾಯದ್ವೀಪ. ವಿಸ್ತೀರ್ಣ ೭೪೩೩೨.೭೧೩ ಚ.ಕಿಮೀ. ಆಂಟಿ-ಟಾರಸ್ ಪರ್ವತಶ್ರೇಣಿಯೇ ಇದರ ಪುರ್ವದ ಗಡಿ. ಪಶ್ಚಿಮ ಉತ್ತರ ದಕ್ಷಿಣಗಳಲ್ಲಿ ಕ್ರಮವಾಗಿ ಏಜಿಯನ್, ಕಪ್ಪು ಮತ್ತು ಮೆಡಿಟರೇನಿಯನ್ ಸಮುದ್ರಗಳಿವೆ. ಏಜಿಯನ್ ಸಮುದ್ರಕ್ಕೂ ಕಪ್ಪು ಸಮುದ್ರಕ್ಕೂ ನಡುವೆ ಕೊಂಡಿಯಂತಿರುವ ಮಾರ್ಮರ ಸಮುದ್ರದಿಂದ ಐರೋಪ್ಯ ತುರ್ಕಿಯೂ ಏಷ್ಯನ್ ತುರ್ಕಿಯೂ ಪ್ರತ್ಯೇಕಗೊಂಡಿವೆ.

ಏಷ್ಯ ಮೈನರ್ ಎಂಬ ಹೆಸರನ್ನು ಈಗಿನ ಅರ್ಥದಲ್ಲಿ ಮೊಟ್ಟಮೊದಲಿಗೆ ಬಳಸಲಾದದ್ದು ೫ನೆಯ ಶತಮಾನದಲ್ಲಿ-ಒರೋಸ್ಹಿಯಸ್ ಬರೆದ ಹಿಸ್ಟೋರಿಯ ಅಡ್ವರ್ಸಸ್ ಪೆಗಾನೋಸ್ ಕೃತಿಯಲ್ಲಿ ರೋಮಿನ ಏಷ್ಯನ್ ಪ್ರಾಂತ್ಯವನ್ನು ಸೂಚಿಸಲಿಕ್ಕಾಗಿ ಅನಟೋಲಿಯ ಅಥವಾ ಲೆವಾಂಟ್ ಎಂಬುದಕ್ಕೆ ಏಷ್ಯ ಮೈನರ್ ಪರ್ಯಾಯಶಬ್ದ ವಾಗಿತ್ತು. ಅನಂತರ ಬೈeóÁಂಟೈನರಿಂದ ತುರ್ಕರು ಗೆದ್ದುಕೊಂಡ ಪ್ರದೇಶಕ್ಕೆ ಈ ಹೆಸರು ಬಂದದ್ದು 10ನೆಯ ಶತಮಾನದಲ್ಲಿ.

ಭೂರಚನೆ, ಮೇಲ್ಮೈ ಲಕ್ಷಣ

ಬದಲಾಯಿಸಿ

ಪೋರ್ಚುಗಲ್ಲಿನಿಂದ ಮಲಯ ದ್ವೀಪಸ್ತೋಮದ ವರೆಗೆ ಅಕ್ಷಾಂಶರೇಖೆಗಳಂತೆ ಹಬ್ಬಿರುವ ಮಡಿಕೆ ಪರ್ವತಗಳ ಪಟ್ಟಿಯಲ್ಲಿ ಏಷ್ಯ ಮೈನರ್ ಪ್ರದೇಶವೂ ಒಂದು ಭಾಗ. ಪರ್ವತರಚನೆಯ ಕಾರ್ಯ ಇಲ್ಲಿ ಇತ್ತೀಚೆಗೆ ತಾನೇ ಮುಗಿದಿದೆ. ಆದರೆ ಟ್ಯೋಆಡ್ನಲ್ಲಿ ಪದೇ ಪದೇ ಸಂಭವಿಸುವ ಭೂಕಂಪಗಳೂ ಕೇರಿಯದ ಕೆಲವು ಭಾಗಗಳಲ್ಲಿ ಹೊಮ್ಮುವ ಬಿಸಿ ಬುಗ್ಗೆಗಳೂ ವಿಷಾನಿಲಗಳೂ ಯಾನಾರ್ ಟಾಸಿನ ಸತತಜ್ವಾಲೆಯೂ ಇದಕ್ಕೆ ಸಾಕ್ಷಿ. ಏಷ್ಯ ಮೈನರಿನಲ್ಲಿ ಜೀವಂತ ಅಗ್ನಿಪರ್ವತಗಳು ಯಾವುವೂ ಈಗ ಇಲ್ಲ.

ಏಷ್ಯ ಮೈನರಿನ ನಡುವಣ ಪ್ರಸ್ಥಭೂಮಿ ಪಶ್ಚಿಮದಲ್ಲಿ ಸಮುದ್ರಮಟ್ಟದಿಂದ ೪೨೫ಮೀ ಎತ್ತರವಾಗಿದ್ದು ಪುರ್ವದ ತುದಿಯಲ್ಲಿ ೧೧೨೫ಮೀಗಳಿಗೆ ಏರುತ್ತದೆ. ಇದಕ್ಕೆ ಆಗ್ನೇಯದಲ್ಲೂ ದಕ್ಷಿಣದಲ್ಲೂ ಟಾರಸ್ ಪರ್ವತಶ್ರೇಣಿಗಳು ಹಬ್ಬಿವೆ. ಇವು ಈಶಾನ್ಯಾಭಿಮುಖವಾಗಿ ಹಬ್ಬಿ ಅಮಾನಸ್ ಶ್ರೇಣಿಗಳೊಂದಿಗೆ ಕೂಡಿಕೊಂಡು ಮುಂದುವರಿದು ಆಂಟಿ-ಟಾರಸ್ ಎನಿಸಿಕೊಳ್ಳುತ್ತವೆ. ಸಿಲಿಸಿಯ ಕರಾವಳಿ ಪ್ರದೇಶವಿರುವುದು ಟಾರಸ್ ಮತ್ತು ಅಮಾನಸ್ ಮಡಿಕೆಗಳಿಂದ ಸಂಭವಿಸಿರುವ ಕೋನ ಪ್ರದೇಶದಲ್ಲಿ.

ಏಷ್ಯ ಮೈನರಿನ ಉತ್ತರದಲ್ಲಿರುವವು ಪಾಂಟಿಕ್ ಪರ್ವತಶ್ರೇಣಿಗಳು. ಇವು ದಕ್ಷಿಣ ಮತ್ತು ಪುರ್ವದ ಶ್ರೇಣಿಗಳಿಗಿಂತ ತಗ್ಗು ಇವನ್ನು ಅನೇಕ ನದಿಗಳು ವಿಭಾಗಿಸುತ್ತವೆ. ಪರ್ಯಾಯದ್ವೀಪದ ಪಶ್ಚಿಮ ಪರ್ವತಗಳು ಪುರ್ವ-ಪಶ್ಚಿಮವಾಗಿ ಹಬ್ಬಿರುವ ಮಡಿಕೆ ಶ್ರೇಣಿಗಳು. ಕರಾವಳಿಯಿಂದ ಪ್ರಸ್ಥಭೂಮಿ ಪ್ರದೇಶಕ್ಕೆ ಹಾದುಹೋಗಲು ಅನುಕೂಲವಾದ ವಿಶಾಲ ಕಣಿವೆಗಳು ಇಲ್ಲಿ ಅನೇಕ ಉಂಟು. ಇಲ್ಲಿನ ಪರ್ವತಶ್ರೇಣಿಗಳು ಪಶ್ಚಿಮದ ಸಮುದ್ರದೊಳಕ್ಕೆ ಇಳಿದಿರುವುದರಿಂದ ಸಮುದ್ರತೀರ ಅಂಕುಡೊಂಕು. ತೀರದ ದ್ವೀಪಗಳಿಗೂ ಕರಾವಳಿಗೂ ನಡುವಣ ಸಮುದ್ರದ ಆಳ ಹೆಚ್ಚು. ಈ ಕಾರಣಗಳಿಂದಾಗಿ ಇಲ್ಲಿ ನೈಸರ್ಗಿಕ ಬಂದರುಗಳು ಅನೇಕ. ಮಾರ್ಮರ ಸಮುದ್ರದೊಳಕ್ಕೂ ಲಂಬಕೋನೀಯವಾಗಿ ಪರ್ವತಶ್ರೇಣಿಗಳು ಇಳಿದಿವೆ. ಏಷ್ಯ ಮೈನರಿನ ನದಿಗಳು ವರ್ಷವೆಲ್ಲ ತುಂಬಿ ಹರಿಯುವುದಿಲ್ಲ. ಇವುಗಳ ಕೆಳಭಾಗದಲ್ಲಿ ಮರಳು ಹೆಚ್ಚು. ಇವುಗಳಿಂದಾಗಿ ಈ ಪ್ರದೇಶದ ಕರಾವಳಿಯ ರೇಖೆಯೇ ಹಿಂದಿನ ಕಾಲಕ್ಕೂ ಈಗ್ಯೂ ಬಹಳ ವ್ಯತ್ಯಾಸಗೊಂಡಿದೆ. ಏಷ್ಯ ಮೈನರಿನ ಮುಖ್ಯ ನದಿಗಳಿವು: ಪಶ್ಚಿಮದಲ್ಲಿ ಗೆಡಿಜ್, ಬುಯುಕ್ ಮೆಂಡೆರಿಸ್ ಮತ್ತು ಕೋಕ; ಉತ್ತರದಲ್ಲಿ ಸಕರ್ಯ, ಕಿಜೆಲ್ ಇರ್ಮಕ್ ಮತ್ತು ಯೆಸಿಲ್ ಇರ್ಮಕ್; ದಕ್ಷಿಣದಲ್ಲಿ ಸೇಹಾನ್ ಮತ್ತು ಕೇಹಾನ್. ಪ್ರಸ್ಥಭೂಮಿಯ ನಟ್ಟನಡುವೆ ಇರುವ ಟeóï ಗೋಲು ಅದರ ಹೆಸರೇ ಸೂಚಿಸುವಂತೆ ಲವಣಸರೋವರ.

ವಾಯುಗುಣ

ಬದಲಾಯಿಸಿ

ಪರ್ಯಾಯ ದ್ವೀಪವನ್ನು ಸುತ್ತುವರಿದ ಪರ್ವತಶ್ರೇಣಿಗಳಿಂದಾಗಿ ನಡುವಣ ಪ್ರಸ್ಥಭೂಮಿಯಲ್ಲಿನ ವಾಯುಗುಣ ವೈಪರಿತ್ಯಗಳಿಂದ ಕೂಡಿದ್ದಾಗಿದೆ. ಅಲ್ಲಿ ವರ್ಷಕ್ಕೆ ೩-೪ ತಿಂಗಳು ಹಿಮದ ಹೊದಿಕೆ; ನಡುಬೇಸಿಗೆಯಲ್ಲಿ ಬಿಸಿಲು ಧಗೆ ಅಸಾಧ್ಯ. ಎಲ್ಲ ಋತುಗಳಲ್ಲೂ ಗಾಳಿ ಮೊರೆಯುತ್ತ ಬೀಸುತ್ತದೆ. ಮಳೆಯಾಗುವುದು ವಸಂತ ಋತುವಿನಲ್ಲಿ ಮತ್ತು ಬೇಸಿಗೆಯ ಆದಿಯಲ್ಲಿ. ಚಳಿಗಾಲದಲ್ಲಿ ಪ್ರಸ್ಥಭೂಮಿಯ ನಡುಭಾಗದಿಂದ ದಕ್ಷಿಣಕ್ಕೆ ಬೀಸುವ ಗಾಳಿ ಸಮುದ್ರತೀರಕ್ಕೆ ಇಳಿಯುವಾಗ ತನ್ನ ಶೈತ್ಯವನ್ನು ತ್ಯಜಿಸುತ್ತದೆ. ಆದರೂ ಒಮ್ಮೊಮ್ಮೆ ಥಂಡಿ ಅಧಿಕವಾಗಿ ಅಲ್ಲಿನ ಕಿತ್ತಳೆ ಫಸಲೆಲ್ಲ ನಾಶವಾಗುವುದುಂಟು.

ಚಳಿಗಾಲದಲ್ಲಿ ಪುರ್ವಾಭಿಮುಖವಾಗಿ ಬೀಸುವ ಚಕ್ರಮಾರುತಗಳಿಂದ ತೀರಪ್ರದೇಶಗಳಲ್ಲಿ ಮಳೆಯಾಗುತ್ತದೆ.


ಉಲ್ಲೇಖಗಳು

ಬದಲಾಯಿಸಿ


ಸಸ್ಯ ಪ್ರಾಣಿವರ್ಗ

ಬದಲಾಯಿಸಿ

ಏಷ್ಯ ಮೈನರಿನ ಸಸ್ಯ ವೈವಿಧ್ಯಮಯ. ಆದರೆ ಮಧ್ಯ ಮತ್ತು ಪುರ್ವ ಪ್ರದೇಶಗಳಲ್ಲಿರುವುದೆಷ್ಟೋ ಇನ್ನೂ ತಿಳಿದು ಬಂದಿಲ್ಲ. ಪುರ್ವದಿಂದ ಪಶ್ಚಿಮಕ್ಕೂ ಪಶ್ಚಿಮದಿಂದ ಪುರ್ವಕ್ಕೂ-ಏಷ್ಯ ಯುರೋಪುಗಳ ನಡುವೆ-ಸಸ್ಯಗಳು ವಲಸೆ ಹೋಗುವ ಮುಖ್ಯ ಮಾರ್ಗ ಏಷ್ಯ ಮೈನರ್. ನಿತ್ಯಹಸುರಿನ ಸಸ್ಯಗಳಿಂದ ಮರುಭೂಮಿಯ ಕುರುಚಲವರೆಗೆ ನಾನಾ ಬಗೆಯ ಸಸ್ಯಗಳನ್ನು ಇಲ್ಲಿ ಕ್ರಮವಾಗಿ ಗುರುತಿಸಬಹುದು. ಪ್ರಾಣಿಗಳಲ್ಲೂ ಇದೇ ಬಗೆಯ ವೈವಿಧ್ಯವುಂಟು.

ಪ್ರಾಗಿತಿಹಾಸ

ಬದಲಾಯಿಸಿ

ಏಷ್ಯ ಮೈನರಿನ ಪ್ರಾಗಿತಿಹಾಸವನ್ನು ಆಗಿನ ಕಾಲದ ನಾನಾ ಅವಶೇಷಗಳು, ಬಂಡೆಗೆತ್ತನೆಗಳು ಮುಂತಾದ ಮಾಹಿತಿಗಳಿಂದ ರಚಿಸಿಕೊಳ್ಳಬೇಕಾಗಿದೆ. ಪುರ್ವಶಿಲಾಯುಗದ ಅಬ್ಬೆವಿಲ್ಲಿಯನ್ ಹಂತಕ್ಕೆ ಸೇರುವ ಕೈಗೊಡಲಿಗಳು ಅಂಕಾರ, ಇಸ್ತಾನ್ಬುಲ್ ಪ್ರದೇಶಗಳಲ್ಲಿ ದೊರಕಿದ್ದರೂ ಅವುಗಳ ಕಾಲ ನಿರ್ಣಯಿಸಲು ಆವಶ್ಯವಾದ ಮಾಹಿತಿಗಳು ದೊರಕಿಲ್ಲ. ಅನಂತರದ ಅಷ್ಯೂಲಿಯನ್ ಹಂತದ ಕೈಗೊಡಲಿಗಳು ಸಮ್ಸುನ್ ಬಳಿಯ ತೆಕ್ಕೆಕೋಯ್ ಬಳಿ ದೊರಕಿವೆ. 1937ರಲ್ಲಿ ನಡೆದ ಉತ್ಖನನಗಳಲ್ಲಿ ಅಷ್ಯೂಲಿಯನ್ ಹಂತದ ಅಂತ್ಯಕಾಲಕ್ಕೆ ಸೇರುವ ಮಿಕಾಕ್ವಿಯನ್ ರೀತಿಯ ಕೈಗೊಡಲಿಗಳು ಅಂಕಾರ ಬಳಿ ಎಟಿಯೋ ಕುಸು ಎಂಬಲ್ಲಿನ ನದೀ ಮಟ್ಟಗಳಿಂದ ದೊರಕಿವೆ. ಇವು ಮಧ್ಯ ಪ್ಲಿಸ್ಟೋಸೀನ್ ಯುಗದ ಕೊನೆಗಾಲಕ್ಕೆ ಸೇರಿದವು. ಸಮಕಾಲೀನ ಚಕ್ಕೆ ಕಲ್ಲಿನಾಯುಧಗಳು ಮೌಸ್ಟೀರಿಯನ್ ಮತ್ತು ಲೆವಾಲ್ವಾಸಿಯನ್ ಸಂಸ್ಕೃತಿಗಳಿಗೆ ಸೇರಿದವು. ಇವು ಆ ಸುತ್ತಿನ ಇತರ ನದೀಮಟ್ಟಗಳಿಂದ ದೊರಕಿವೆ. ಇಂಥ ಆಯುಧಗಳು ಏಷ್ಯ ಮೈನರಿನ ಮೈದಾನ ಪ್ರದೇಶದ ದಕ್ಷಿಣಭಾಗದ ಅನೇಕ ನೆಲೆಗಳಲ್ಲೂ ಸಿಕ್ಕಿವೆಯಾದ್ದರಿಂದ ಈ ಸಂಸ್ಕೃತಿ ಅಲ್ಲೆಲ್ಲ ವಿಸ್ತಾರವಾಗಿ ಹರಡಿತೆನ್ನಬಹುದು. ಮೌಸ್ಟೀರಿಯನ್ ರೀತಿಯ ಆಯುಧಗಳು ಮಲಾಟ್ಸದ ಬಳಿಯ ಅಡಿಯಮನ್, ಸಮ್ಸುನ್ ಬಳಿಯ ತೆಕ್ಕೆಕೋಯ್ ಮತ್ತು ಅಂಟಾಲ್ಯದ ಬಳಿಯ ಯಾಗ್ಕಕೋಯದ ನೆರೆಯಲ್ಲಿರುವ ಕರಾಯಿನ್ ಗುಹೆ-ಇಲ್ಲೆಲ್ಲ ಕಂಡುಬಂದಿವೆ. ಪುರ್ವಶಿಲಾಯುಗದ ಅಂತ್ಯಕಾಲದ ಅರಿಗ್ನೇಸಿಯನ್ ಸಂಸ್ಕೃತಿಯ ಅವಶೇಷಗಳು ಇಸ್ಪಾರ್ಟ ಪ್ರಾಂತ್ಯದ ಬೊಜನೊನು ಗುಹೆಯಲ್ಲೂ ಅಡಿಯಮನ್ ಬಳಿಯೂ ದೊರಕಿವೆ. ಅಡಿಯಮನ್ ಬಳಿಯ ಕಲ್ಲುಬಂಡೆಗಳ ಮೇಲೆ ಸಮಕಾಲೀನವಾದ ರೇಖಾಚಿತ್ರಗಳ ಕೆತ್ತನೆ ಕಂಡುಬಂದಿದೆ. ಆ ಕಾಲದ ಇತರ ಸಂಸ್ಕೃತಿಗಳ ಅವಶೇಷಗಳು ಈ ಪ್ರದೇಶದಲ್ಲಿ ಇನ್ನೂ ಕಂಡುಬಂದಿಲ್ಲ.

ಮಧ್ಯಶಿಲಾಯುಗಕ್ಕೆ ಸೇರುವ ಸೂಕ್ಷ್ಮ ಶಿಲಾಯುಧ ಸಂಸ್ಕೃತಿಯ ಅವಶೇಷಗಳು ಸಿವಾಸ್ ಬಳಿ ಹಫೀಕ್ ಸರೋವರದ ತೀರದಲ್ಲೂ ಇಸ್ವಾರ್ಟ ಬಳಿಯ ಬಲಾಡಿಜ್ನಲ್ಲೂ ಸಮ್ಸುನ್ ಬಳಿಯಿರುವ ಹಲವಾರು ಗುಹೆಗಳು ಮತ್ತಿತರ ನೆಲೆಗಳಲ್ಲೂ ದೊರಕಿವೆ. ಮೊದಲು ಹೇಳಿದ ನೆಲೆಯಲ್ಲಿ ಮರದ ಉಪಕರಣಗಳನ್ನು ಬಳಸುತ್ತಿದ್ದುದಾಗಿ ತಿಳಿದುಬಂದಿದೆ. ಈ ಸಂಸ್ಕೃತಿಕಾಲದ ಅಂತ್ಯಭಾಗಕ್ಕೆ ನಿರ್ದೇಶಿಸಬಹುದಾದ ಅಂಟಾಲ್ಯ ಬಳಿಯ ಬೆಲ್ಡಿಬಿ ಗುಹಾಮುಖ ನೆಲೆಯಲ್ಲಿ ಕ್ರಮೇಣ ನವಶಿಲಾಯುಗ ಸಂಸ್ಕೃತಿಯತ್ತ ಆಗುತ್ತಿದ್ದ ಪರಿವರ್ತನೆಯ ಸೂಚನೆಗಳು ಕಂಡುಬರುತ್ತವೆ. ಅಲ್ಲಿನ ಶಿಲೆಗಳ ಮೇಲೆ ಕಂಡುಬರುವ ವರ್ಣಚಿತ್ರಗಳು ಗಮನಾರ್ಹ.

ನವಶಿಲಾಯುಗ ಸಂಸ್ಕೃತಿ ಏಷ್ಯ ಮೈನರಿನಲ್ಲಿ ವಿಶೇಷವಾಗಿ ಹಬ್ಬಿದಂತೆ ಕಂಡುಬರುವುದಿಲ್ಲ. ಮೈದಾನ ಪ್ರದೇಶದಲ್ಲಿ ಲವಣ ಸರೋವರದ ಸುತ್ತಮುತ್ತ ಕೆಲವು ನವಶಿಲಾಯುಗ ಸಂಸ್ಕೃತಿ ರೀತಿಯ ಕಲ್ಲಿನಾಯುಧಗಳು ದೊರಕಿದ್ದರೂ ಅಂಥ ಅವಶೇಷಗಳು ದಕ್ಷಿಣಕ್ಕೆ 482.8032 ಕಿಮೀ ದೂರದ ಮೆರ್ಸಿನ್ ಮತ್ತು ಸಕ್ಜಗೋಜು ನೆಲೆಗಳವರೆಗೂ ಕಂಡುಬಂದಿಲ್ಲ. ಆದ್ದರಿಂದ ಮೈದಾನ ಪ್ರದೇಶದ ಈ ಅವಶೇಷಗಳು ಲವಣಶೋಧನೆಗಾಗಿ ಅಲೆಯುತ್ತಿದ್ದ ಜನರು ತಂಡಗಳಾಗಿರಬೇಕೆಂದೂ ಆ ಪ್ರದೇಶದಲ್ಲಿ ನವಶಿಲಾಯುಗೀಣ ಜನವಸತಿಯಿರಲಿಲ್ಲವೆಂದೂ ಅಭಿಪ್ರಾಯ ಪಡಲಾಗಿದೆ. ಈ ಸಂಸ್ಕೃತಿ ಬಹುಶಃ ದಕ್ಷಿಣದ ಪ್ರಭಾವದಿಂದ ಇಲ್ಲಿ ಪ್ರವೇಶಿಸಿ, ಕೆಲವಾರು ಶತಮಾನಗಳ ಕಾಲ ರೂಢಿಯಲ್ಲಿದ್ದು ಕ್ರಮೇಣ ತಾಮ್ರ-ಶಿಲಾಯುಗೀನ ಸಂಸ್ಕೃತಿಗೆ ದಾರಿಮಾಡಿಕೊಟ್ಟಿತೆಂಬುದು ಮೆರ್ಸಿನ್ ಮತ್ತು ಸಕ್ಜಗೋಜು ನೆಲೆಗಳಿಂದ ದೊರೆತ ಮಾಹಿತಿಗಳಿಂದ ವ್ಯಕ್ತವಾಗುತ್ತದೆ.

ಪ್ರ.ಶ.ಪು. 3500ಕ್ಕೂ ಮೊದಲ ಕಾಲಕ್ಕೆ ಸೇರುವ ತಾಮ್ರಶಿಲಾಯುಗೀನ ಸಂಸ್ಕೃತಿಯ ಅವಶೇಷಗಳು ಮೈದಾನ ಪ್ರದೇಶದ ಹಲವಾರು ನೆಲೆಗಳಲ್ಲಿ ದೊರಕಿವೆ. ಆ ಕಾಲದ ಸಂಸ್ಕೃತಿಗಳು ಇಲ್ಲಿ ಕೇಂದ್ರೀಕೃತವಾಗಿದ್ದವೆನ್ನಬಹುದು. ಮೆರ್ಸಿನ್ ನೆಲೆಯಲ್ಲಿ ಸಿಕ್ಕಿರುವ ಅವಶೇಷಗಳು ಪ್ರ.ಶ.ಪು. 4000ಕ್ಕೂ ಹಿಂದಿನವು. ಕ್ರಮೇಣ ಅಲಿಷಾರ್-ಹುಯುಕ್, ಹಿಸಾರ್ಲಿಕ್, ಥೆರ್ಮಿ, ಯೊರ್ಟಾನ್ ಮುಂತಾದ ನೆಲೆಗಳಲ್ಲೂ ಇವು ಕಂಡುಬರುತ್ತವೆ. ಸಾಧಾರಣವಾಗಿ ಅಲಂಕಾರರಹಿತವಾದ ಕಪ್ಪು ಬಣ್ಣದ ಮಡಕೆಗಳು ಉಪಯೋಗಿಸಲ್ಪಡು ತ್ತಿದ್ದರೂ ಕೆಲವೇಳೆ ಮಡಕೆಗಳ ಮೇಲೆ ಹಲವು ರೀತಿಯ ವಿನ್ಯಾಸಗಳನ್ನು ಕೊರೆದು ಆ ಗೆರೆಗಳಲ್ಲಿ ಬಿಳಿಯ ಸುಣ್ಣವನ್ನು ತುಂಬಿ ವಿನ್ಯಾಸಗಳು ಕಾಣುವಂತೆ ಮಾಡಲಾಗುತ್ತಿತ್ತು; ಅಥವಾ ಬಿಳಿಯ ಬಣ್ಣದಿಂದ ವಿನ್ಯಾಸಗಳನ್ನು ಬಿಡಿಸಲಾಗುತ್ತಿತ್ತು. ಅಕ್ಕಪಕ್ಕದ ಸೈಲೀಷಿಯ, ಸಿರಿಯ, ಇರಾಕ್, ಇರಾನ್ ಮುಂತಾದ ಪ್ರದೇಶಗಳಲ್ಲಿ ವಿವಿಧ ರೀತಿಯ ವರ್ಣರಂಜಿತ ಮಡಕೆಗಳನ್ನು ಉಪಯೋಗಿಸುತ್ತಿದ್ದ ಸಂಸ್ಕೃತಿಗಳು ನೆಲೆಸಿದ್ದರೂ ಏಷ್ಯ ಮೈನರ್ ತನ್ನ ಪ್ರತ್ಯೇಕತೆಯನ್ನುಳಿಸಿಕೊಂಡಿತ್ತು. ಬಹುಶಃ ಈ ಸಂಸ್ಕೃತಿ ಉತ್ತರ ಇರಾಕ್ ಮತ್ತು ಸಿರಿಯಗಳು ನವಶಿಲಾಯುಗ ಸಂಸ್ಕೃತಿಗಳಿಂದ ಹುಟ್ಟಿರಬಹುದು. ದಕ್ಷಿಣದಂಚಿನ ಕೆಲನೆಲೆಗಳಲ್ಲಿ ಉತ್ತರ ಇರಾಕ್ ಸಿರಿಯ ಪ್ರದೇಶಗಳ ಸಂಸ್ಕೃತಿಗಳಿಗೆ ಸೇರಿದ ವರ್ಣಚಿತ್ರಿತ ಮಡಕೆಗಳು ಉಪಯೋಗದಲ್ಲಿದ್ದರೂ ಅವು ಆ ಸಂಸ್ಕೃತಿಯ ಮುಖ್ಯ ಲಕ್ಷಣವಾಗಿರಲಿಲ್ಲ.

ಅನಂತರದ ತಾಮ್ರಯುಗೀನ ಸಂಸ್ಕೃತಿ ಮೈದಾನದಲ್ಲೆಲ್ಲ ಪ್ರಬಲವಾಯಿತು. ಪ್ರ.ಶ.ಪು. 2ನೆಯ ಸಹಸ್ರಮಾನದ ಅಂತ್ಯದವರೆಗೂ ಬಳಕೆಯಲ್ಲಿದ್ದ ಈ ಸಂಸ್ಕೃತಿಯ ಕಾಲದಲ್ಲಿ ಮೊತ್ತಮೊದಲಿಗೆ ಏಷ್ಯ ಮೈನರ್ ಸಾಂಸ್ಕೃತಿಕವಾಗಿ ನೆರೆಯ ಪ್ರಾಂತ್ಯಗಳ ಮೇಲೆ ಪ್ರಭಾವ ಬೀರಲಾರಂಭಿಸಿತು. ಮೊದಲ ತಾಮ್ರಶಿಲಾಯುಗೀಣ ಸಂಸ್ಕೃತಿಗಳಲ್ಲಿದ್ದ ರೀತಿಯ ಮಡಕೆಗಳ ಉಪಯೋಗ ಮುಂದುವರಿದವು ಅವುಗಳ ಆಕಾರ ಮತ್ತು ಗಾತ್ರಗಳಲ್ಲಿ ವೈವಿಧ್ಯ ಕಂಡುಬರುತ್ತದೆ. ಆಲಂಕಾರಿಕ ಹಿಡಿಗಳು ಮತ್ತು ನೀಳ ಹಿಡಿಗಳು ಇರುವ ತಟ್ಟೆಗಳು, ಎರಡು ಹಿಡಿಗಳ ಬಟ್ಟಲುಗಳು ಮೊದಲಾದವನ್ನು ಲೋಹದ ಪಾತ್ರೆಗಳ ಮಾದರಿಯಲ್ಲಿ ತಯಾರಿಸಿದಂತೆ ತೋರುತ್ತದೆ. ಈ ಸುಮಾರಿನಲ್ಲಿ ಖಿರ್ಬೆಟ್ ಕೆರಾಕ್ ಮೃಣ್ಪಾತ್ರೆಗಳೆಂದು ಹೆಸರಾಗಿರುವ ಹೊಸ ರೀತಿಯ ಮಡಕೆಗಳು ಬಳಕೆಗೆ ಬಂದವು. ಪ್ರ.ಶ.ಪು. 2600ರ ಸುಮಾರಿನಿಂದ ಪ್ಯಾಲೆಸ್ಟೈನಿನಲ್ಲಿ ಈ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಏಷ್ಯ ಮೈನರ್ ಪ್ರದೇಶ ಹೊರಗಿನವರ ದಾಳಿಗೆ ಗುರಿಯಾಯಿತೆಂಬುದನ್ನು ಇದು ಸೂಚಿಸುತ್ತದೆ. ದಕ್ಷಿಣ ರಷ್ಯದ ಕಾಕಸಸ್ ಪರ್ವತಪ್ರಾಂತ್ಯದಿಂದ ಹೊರಟು ದಾಳಿ ನಡೆಸಿದ ಹಿಟ್ಟೈಟ್ ಜನರೇ ಇದಕ್ಕೆ ಕಾರಣರೆಂದು ಲಿಯೋನಾರ್ಡ್ ವುಲ್ಲಿ ಅಭಿಪ್ರಾಯಪಟ್ಟಿದ್ದಾನೆ. ಇದೇ ಸುಮಾರಿನಲ್ಲಿ ಏಷ್ಯ ಮೈನರಿನ ತಾಮ್ರಯುಗದ ಕಪ್ಪು ಬಣ್ಣದ ಮಡಕೆಗಳು ಗ್ರೀಸ್, ಸೈಲೀಷಿಯ, ಸಿರಿಯ ಮುಂತಾದ ಪ್ರದೇಶಗಳಲ್ಲಿ ಕಂಡುಬರುತ್ತವೆ. ತಾಮ್ರಯುಗದ ಸಂಸ್ಕೃತಿಯ ಉಳಿಕೆಗಳಲ್ಲಿ ಮುಖ್ಯವಾದವೆಂದರೆ ಅಲಾಕ ಹುಯುಕ್ ಬಳಿ ಕಂಡುಬಂದಿರುವ ರಾಜಮನೆತನದವರ ಅಥವಾ ಶ್ರೀಮಂತರ 13 ಸಮಾಧಿಗಳು, ಇವುಗಳನ್ನು ಪ್ರ.ಶ.ಪು.2500ರಿಂದ 2300ರ ಕಾಲಕ್ಕೆ ನಿರ್ದೇಶಿಸಲಾಗಿದೆ.

ಅನಂತರ ಪ್ರ.ಶ.ಪು. 2100ರ ಸುಮಾರಿಗೆ ಕಂಚಿನ ಯುಗ ಪ್ರಾರಂಭವಾಯಿತು. ಸುಮಾರು ಎರಡೂವರೆ ಶತಮಾನಗಳ ಅವಧಿ ಕಂಚಿನ ಯುಗದ ಸಂಸ್ಕೃತಿಯ ಆದಿಭಾಗ. ಈ ಕಾಲದಲ್ಲಿ ಬರೆವಣಿಗೆ ಬಳಕೆಗೆ ಬಂತು. ಬರೆವಣಿಗೆಗಳುಳ್ಳ ಮಣ್ಣಿನ ಫಲಕಗಳು ಉತ್ಖನನಗಳಲ್ಲಿ ದೊರಕಿವೆ. ಏಷ್ಯ ಮೈನರಿನೊಡನೆ ವ್ಯಾಪಾರ ಸಂಬಂಧ ಸ್ಥಾಪಿಸಿದ ಅಸ್ಸೀರಿಯದ ವರ್ತಕರು ತಮ್ಮ ಲೆಕ್ಕಪತ್ರಗಳನ್ನು ಬರೆದಿಟ್ಟುಕೊಳ್ಳಲು ಉಪಯೋಗಿಸಿದ ಫಲಕಗಳೇ ಹೆಚ್ಚು ಸಂಖ್ಯೆಯಲ್ಲಿದ್ದರೂ, ಕೆಲ ಫಲಕಗಳು ನ್ಯಾಯಸಂಬಂಧವಾದ ವಿವರಣೆಗಳನ್ನೀಯುತ್ತವೆ.

ಬರೆವಣಿಗೆಯ ಸಂಪ್ರದಾಯ ಅಸ್ಸಿರಿಯನ್ನರ ಕೊಡುಗೆ. ಇದು ಸಮಕಾಲೀನ ಮೆಸೊಪೊಟೇಮಿಯದ ಪ್ರಭಾವಕ್ಕೊಳಗಾಗಿತ್ತು. ಈ ಕಾಲದಲ್ಲಿ ವರ್ಣಚಿತ್ರಿತವಾದ ಹೊಸ ರೀತಿಯ ಮಡಕೆಗಳ ಸಂಸ್ಕೃತಿ ತಲೆದೋರಿತು. ಇದು ಕಪ್ಪಡೋಸಿಯನ್ ವರ್ಣಚಿತ್ರಿತ ಮಡಕೆಗಳ ಸಂಸ್ಕೃತಿಯೆಂದು ಹೆಸರಾಗಿದೆ. ಈ ಸಂಸ್ಕೃತಿಯ ಜನ ಪುರ್ವ ದಿಕ್ಕಿನಿಂದ ಬಂದಂತೆ ಕಾಣುತ್ತದೆ. ಇದೇ ಸುಮಾರಿಗೆ ಹಿಟ್ಟೈಟ್ ಜನ ಹೆಚ್ಚು ಸಂಖ್ಯೆಯಲ್ಲಿ ಮೈದಾನ ಪ್ರದೇಶದಲ್ಲಿ ನೆಲೆಸಲಾರಂಭಿಸಿದುದರಿಂದ ಅವರೇ ಕಪ್ಪಡೋಸಿಯನ್ ಸಂಸ್ಕೃತಿಯಲ್ಲಿ ಏಷ್ಯ ಮೈನರಿಗೆ ತಂದಿರಬೇಕೆಂದು ಭಾವಿಸಲಾಗಿದೆ. ಆದರೆ ಪ್ರ.ಶ.ಪು. 1850 ರಿಂದ-ಹಿಟ್ಟೈಟ್ ರಾಜ್ಯ ಸ್ಥಾಪನೆಯಾದ ಮೇಲೆ-ಕಪ್ಪಡೋಸಿಯನ್ ಮಡಕೆಗಳು ಕಣ್ಮರೆಯಾದುವು. ಆ ವೇಳೆಗೆ ಹಿಟ್ಟೈಟರು ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡದ್ದೇ ಇದಕ್ಕೆ ಕಾರಣವಾಗಿರಬಹುದು.

ಹಿಟ್ಟೈಟ್ ರಾಜ್ಯಸ್ಥಾಪನೆಯೊಂದಿಗೆ ಚಾರಿತ್ರಿಕಯುಗ ಪ್ರಾರಂಭವಾಯಿತು. ಅಲ್ಲಿಂದ ಮುಂದಿನ ಕಾಲಕ್ಕೆ ಸಂಬಂಧಿಸಿದಂತೆ ದೊರಕಿರುವ ಅನೇಕ ಲಿಖಿತ ಆಧಾರಗಳಿಂದ ಏಷ್ಯ ಮೈನರಿನ ಮುಂದಿನ ಇತಿಹಾಸ ಸ್ಪಷ್ಟವಾಗುತ್ತದೆ. (ಬಿ.ಕೆ.ಜಿ.)

ಇತಿಹಾಸ

ಬದಲಾಯಿಸಿ

ಪ್ರಾಕ್ತನನವಸ್ತು ಸಂಶೋಧನೆಯಿಂದ ದೊರೆತಿರುವ ಮುದ್ರೆಗಳು, ಶಾಸನಗಳು, ಸ್ಮಾರಕಗಳು ಮತ್ತು ಮಣ್ಣಿನ ಮಡಕೆ ಕುಡಿಕೆಗಳು ಏಷ್ಯ ಮೈನರಿನ ಪ್ರಾಚೀನ ಇತಿಹಾಸವನ್ನು ನಿರೂಪಿಸುವ ವಸ್ತುಗಳಾಗಿವೆ. ಬಹಳ ಹಿಂದೆ, ಅಂದರೆ ಪ್ರ.ಶ.ಪು. 3000 ದಿಂದ 1000 ವರ್ಷಗಳವರೆಗೆ, ಸೆಮೈಟರು, ಲಿಡಿಯನರು ಕೇರಿಯನರು, ಲಿಸಿಯನರು, ಗ್ರೀಕರು, ರೋಮನರು ಮತ್ತು ಫಿನಿಷಿಯನರು ತಮ್ಮ ಒಡೆತನವನ್ನಿಲ್ಲಿ ಸ್ಥಾಪಿಸಿದ್ದರು. ಪುರ್ವಕ್ಕೂ ಪಶ್ಚಿಮಕ್ಕೂ ಮಧ್ಯೆ ಇರುವ ಸಮರ ಕ್ಷೇತ್ರವೆಂದೇ ಮೊದಲಿಂದಲೂ ಏಷ್ಯ ಮೈನರಿನ ಖ್ಯಾತಿ. ಪ್ರ.ಶ.ಪು. ಸು. 1950ರಲ್ಲಿ ಏಷ್ಯ ಮೈನರಿನ ಪಶ್ಚಿಮಭಾಗ ಹಿಟ್ಟೈಟ್ ರಾಜರ ಸ್ವಾಧೀನದಲ್ಲಿತ್ತು. ಪ್ರ.ಶ.ಪು. 1500ರ ವೇಳೆಗೆ ಇವರು ಹೇಟಿ ಅಥವಾ ಈಗಿನ ಬಾಘೊಸ್ ಕೀಯಲ್ಲಿ ಪ್ರಬಲ ಸಾಮ್ರಾಜ್ಯ ಸ್ಥಾಪಿಸಿ ಏಷ್ಯ ಮೈನರನ್ನು ಆಳಿದರಲ್ಲದೆ ಸಿರಿಯ ಮತ್ತು ಮಿಟ್ಟಾನಿಗಳ ಮೇಲೆ ಪ್ರಭುತ್ವಕ್ಕಾಗಿ ಕ್ರಮವಾಗಿ ಈಜಿಪ್ಟಿನ ಅರಸರೊಡನೆಯೂ ಅಸ್ಸಿರಿಯನ್ನರೊಡನೆಯೂ ಕಾದಾಡಿದರು.

ಇಂಡೋ-ಯುರೋಪಿಯನ್ ಬುಡಕಟ್ಟಿಗೆ ಸೇರಿದ ಗ್ರೀಕರು ಹಿಟೈಟ್ ಸಾಮ್ರಾಜ್ಯವನ್ನು ನಾಶಮಾಡಿ ಏಜಿಯನ್ ಸಮುದ್ರತೀರದ ಸುತ್ತ ಅನೇಕ ವಸಾಹತುಗಳನ್ನು ಸ್ಥಾಪಿಸಿದರು. ಕ್ರಮೇಣ ಫ್ರಿಜಿಯನ್ ರಾಜ್ಯದ ಉದಯವಾಯಿತು. ಇದರ ಕುರುಹುಗಳು ಶಿಲಾಸ್ಮಾರಕಗಳಲ್ಲೂ ಶಿಲಾಸಮಾಧಿಗಳಲ್ಲೂ ಕೋಟೆಗಳಲ್ಲೂ ನಗರಗಳಲ್ಲೂ ಗ್ರೀಕರ ದಂತಕಥೆಗಳಲ್ಲೂ ಉಳಿದಿವೆ. ಪ್ರ.ಶ.ಪು.8ನೆಯ ಶತಮಾನದಲ್ಲಿ ಆರ್ಮೀನಿಯದಿಂದ ಬಂದ ಸಿಮ್ಮರಿಯನರು ಫ್ರಿಜಿಯನ್ ರಾಜ್ಯವನ್ನಾಕ್ರಮಿಸಿದರು. ಅದರ ನಾಶವಾದ ಬಳಿಕ ಸಾರ್ಡಿನ್ ಕೇಂದ್ರವಾಗುಳ್ಳ ಲಿಡಿಯ ರಾಜ್ಯ ಮೂಡಿತು. ಕೊನೆಯ ದೊರೆಯಾದ ಕ್ರೋಸಸ್ ಹೆಲಿಸ್ವರೆಗೂ ರಾಜ್ಯ ವಿಸ್ತರಿಸಿದನಲ್ಲದೆ ತೀರಪ್ರದೇಶದಲ್ಲಿ ಅಭಿವೃದ್ಧಿ ಸ್ಥಿತಿಯಲ್ಲಿದ್ದ ಗ್ರೀಕರ ವಸಾಹತುಗಳನ್ನು ವಶಪಡಿಸಿಕೊಂಡ. ಪ್ರ.ಶ.ಪು.546ರಲ್ಲಿ ಪರ್ಷಿಯದ ದೊರೆ ಸೈರಸ್ ಲಿಡಿಯದ ಮೇಲೆ ದಂಡೆತ್ತಿಹೋಗಿ ಸಾರ್ಡಿಸನ್ನು ವಶಪಡಿಸಿಕೊಂಡ ಮೇಲೆ ಗ್ರೀಕರ ವಸಾಹತುಗಳು ಯಾವ ಪ್ರತಿರೋಧ ಶಕ್ತಿಯಿಲ್ಲದೆ ಸುಲಭವಾಗಿ ಪರ್ಷಿಯಕ್ಕೆ ಸೇರಿಹೋದುವು. ಪರ್ಷಿಯನ್ನರ ಆಳ್ವಿಕೆಯಲ್ಲಿ ಏಷ್ಯ ಮೈನರ್ ನಾಲ್ಕು ಸಂಸ್ಥಾನಗಳಾಗಿ ವಿಭಾಗವಾಯಿತಾದರೂ ಗ್ರೀಕರ ನಗರ ರಾಜ್ಯಗಳನ್ನಾಳುತ್ತಿದ್ದವರು ಗ್ರೀಕರೇ. ಸಾಮ್ರಾಜ್ಯ ಸ್ಥಾಪನೆಗಾಗಿ ಇತಿಹಾಸದಲ್ಲಿ ಗ್ರೀಕರಿಗೂ ಪರ್ಷಿಯನರಿಗೂ ನಡುವೆ ದೀರ್ಘ ಕಾಲದ ಹೋರಾಟ ನಡೆದು ಕೊನೆಗೆ ಗ್ರೀಕರ ಅಲೆಕ್ಸಾಂಡರ್ ಪ್ರ.ಶ.ಪು.334ರಲ್ಲಿ ಏಷ್ಯ ಮೈನರನ್ನು ಮುತ್ತಿ ಪರ್ಷಿಯನರನ್ನು ಸಂಪೂರ್ಣ ಸೋಲಿಸಿದ.

ಅಲೆಕ್ಸಾಂಡರನ ಮರಣಾನಂತರ ಇತರ ಅನೇಕ ರಾಜರು ಏಷ್ಯ ಮೈನರಿನ ವಿವಿಧ ಭಾಗಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು.

ಪ್ರ.ಶ.ಪು.190ರಲ್ಲಿ ಏಷ್ಯ ಮೈನರ್ ರೋಮನರ ಕೈಸೇರಿ ಪ್ರಭಾವಶಾಲಿಗಳಾದ ಅವರ ಆಳ್ವಿಕೆಯಲ್ಲಿ ಹೆಚ್ಚು ಅಭಿವೃದ್ಧಿಹೊಂದಿತು. ಪ್ರ.ಶ.3ನೆಯ ಶತಮಾನದ ಕೊನೆಯಲ್ಲಿ ಆಳಿದ ರೋಮನ್ ಚಕ್ರವರ್ತಿ ಡಯೋಕ್ಲಿಷಿಯನ್ ಕಾಲದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ಬಿರುಸಾಗಿ ನಡೆದು ಅನೇಕ ಕ್ರೈಸ್ತ ಮಠಗಳು ಅಲ್ಲಲ್ಲಿ ಕಾಣಿಸಿಕೊಂಡುವು. 395ರಲ್ಲಿ ರೋಮನ್ ಚಕ್ರಾಧಿಪತ್ಯ ಇಬ್ಭಾಗವಾದಾಗ ಏಷ್ಯ ಮೈನರ್ ಕಾನ್ಸ್ಟಾಂಟಿನೋಪಲ್ ರಾಜಧಾನಿಯಾಗುಳ್ಳ ಬೈಜಾಂಟಿಯ ಚಕ್ರಾಧಿಪತ್ಯದಲ್ಲಿ ವಿಲೀನವಾಯಿತು. ಪ್ರಾಂತೀಯ ಭಾಷೆಗಳೂ ಹಳೆಯ ಮತಧರ್ಮಗಳೂ ಕ್ರಮೇಣ ಅದೃಶ್ಯವಾಗಿ ದೇಶವೆಲ್ಲ ಗ್ರೀಕ್ ಸಂಸ್ಕೃತಿಯ ಪುರ್ಣ ಪ್ರಭಾವಕ್ಕೊಳಗಾಯಿತು. 6ನೆಯ ಶತಮಾನದ ಕೊನೆಯಲ್ಲಿ ಏಷ್ಯ ಮೈನರ್ ಸಂಪದ್ಭರಿತ ಪ್ರದೇಶವಾಗಿ ಅನೇಕ ಶತಮಾನಗಳ ಕಾಲ ಶಾಂತಿಯ ನೆಲೆವೀಡಾಗಿತ್ತು. 668ರಲ್ಲಿ ಅರಬರು ಏಷ್ಯ ಮೈನರನ್ನು ಪ್ರವೇಶಿಸಿ ಕಾನ್ಸ್ಟಾಂಟಿನೋಪಲನ್ನು ಮುತ್ತಿದರು. ಇಲ್ಲಿಂದ ಮೂರು ಶತಮಾನಗಳ ಪರ್ಯಂತರ ಯುಫ್ರೇಟೀಸ್ ಮತ್ತು ಸೈಲೀಷಿಯನ್ ದ್ವಾರಗಳಲ್ಲಿನ ಸೇತುವೆಗಳ ಒಡೆತನಕ್ಕಾಗಿ ಬಿಜಾಂಟಿನರಿಗೂ ಬಾಗ್ದಾದಿನ ಕಲೀಫರಿಗೂ ಪದೇ ಪದೇ ಯುದ್ಧಗಳು ಸಂಭವಿಸಿದುವು.

11ನೆಯ ಶತಮಾನದಲ್ಲಿ ಸೆಲ್ಜುಕ್ ತುರ್ಕರು ಏಷ್ಯ ಮೈನರನ್ನು ನಾಶಗೊಳಿಸಿದ ಮೇಲೆ ಅನೇಕ ಅನಾಗರಿಕ ತುರ್ಕರ ಪಂಗಡಗಳು. ಹುಟ್ಟಿಕೊಂಡವು. ಹಾಗೆ ಹುಟ್ಟಿಕೊಂಡ ಪಂಗಡಗಳಲ್ಲಿ ಮಂಗೋಲ್ ಪಂಗಡವೂ ಒಂದು. ಮಂಗೋಲರ ರೀತಿ ವರ್ತನೆಗಳು ಇತಿಹಾಸದಲ್ಲೇ ಭಯಾನಕವಾದವು. ಇವರಲ್ಲಿ ಕುಂಟ ತೈಮೂರ್ ಒಬ್ಬ. ಮಂಗೋಲರ ದಾಳಿಯಿಂದ ಜನನಿಬಿಡ ಪ್ರದೇಶಗಳು ನಿರ್ಜನ ಪ್ರದೇಶಗಳಾದವು. ಭೂಮಿ ಬಂಜರಾಯಿತು. ನಗರಗಳ ಲೂಟಿಯಾಯಿತು. ಐತಿಹಾಸಿಕ ಸ್ಮಾರಕಗಳ ಧ್ವಂಸವಾಯಿತು. ಸಮಸ್ತ ಕ್ರೈಸ್ತ ಪಂಗಡಗಳ ಸಂಹಾರವಾಯಿತು. ಈ ಮಹಾ ವಿಪತ್ಪರಂಪರೆಗಳಿಂದ ಏಷ್ಯ ಮೈನರ್ ಮತ್ತೆ ಚೇತರಿಸಿಕೊಳ್ಳಲಾಗಲಿಲ್ಲ.

ತೈಮೂರನ ಮರಣಾನಂತರ ಆಟೋಮನರು ಪ್ರಬಲರಾಗಿ ಏಷ್ಯ ಮೈನರಿನ ಮೇಲೆ ದೀರ್ಘಕಾಲ ತಮ್ಮ ಒಡೆತನ ಸ್ಥಾಪಿಸಿದರು. ಆದರೆ ಮೊದಲನೆಯ ಮಹಾಯುದ್ಧ ಮುಗಿದ ಬಳಿಕ ಅವರ ಆಳ್ವಿಕೆ ಕೊನೆಗೊಂಡಿತು. ಬ್ರಿಟಿಷ್ ಪಡೆಗಳು ಏಷ್ಯ ಮೈನರಿನ ಅರಬ್ಬೀ ಭಾಷೆಯನ್ನಾಡುವ ಜನರಿರುವ ಪ್ರದೇಶಗಳನ್ನೆಲ್ಲ ಸ್ವಾಧೀನ ಪಡಿಸಿಕೊಂಡವು. 1919ರಲ್ಲಿ ಗ್ರೀಕ್ ಪಡೆ ಸ್ಮರ್ನವನ್ನು ಆಕ್ರಮಿಸಿತು.

1920 ಆಗಸ್ಟ್‌ ತಿಂಗಳಲ್ಲಿ ತುರ್ಕರು ಸಹಿ ಮಾಡಿದ ಸೆವ್ರ್ ಒಪ್ಪಂದದ ಪ್ರಕಾರ ಏಷ್ಯ ಮೈನರ್ ಭೌಗೋಳಿಕವಾಗಿ ಕ್ಷಯಿಸತೊಡಗಿತು. ರಾಷ್ಟ್ರ ಸಂಘದ ಆಜ್ಞಾನುಸಾರ ಗ್ರೇಟ್ ಬ್ರಿಟನ್, ಪ್ಯಾಲೆಸ್ಟೈನ್ ಮತ್ತು ಇರಾಕುಗಳ ಮೇಲೂ ಫ್ರಾನ್ಸ್‌, ಸಿರಿಯಗಳ ಮೇಲೂ ಪ್ರಭಾವ ಸ್ಥಾಪಿಸಿತು. ಇದೇ ಸಂದರ್ಭದಲ್ಲಿ ಗ್ರೇಟ್ ಬ್ರಿಟನ್, ಫ್ರಾನ್ಸ್‌ ಮತ್ತು ಇಟಲಿ ರಾಷ್ಟ್ರಗಳು ಒಂದು ಕರಾರಿಗೆ ಸಹಿ ಹಾಕಿದವು. ಈ ಮೂರು ರಾಷ್ಟ್ರಗಳು ಏಷ್ಯ ಮೈನರಿನ ದಕ್ಷಿಣ ಮತ್ತು ಆಗ್ನೇಯ ಭಾಗಗಳನ್ನು ತಮ್ಮಲ್ಲೇ ಹಂಚಿಕೊಂಡುವು.

ಮುಸ್ತಾಫ ಕೆಮಲ್ ಪಾಷನ ಶ್ರೇಷ್ಠ ನಾಯಕತ್ವದಲ್ಲಿ ನಡೆದ ತುರ್ಕಿ ರಾಷ್ಟ್ರೀಯ ಚಳವಳಿ ಚರಿತ್ರಾರ್ಹವಾದದ್ದು. ತುರ್ಕರು ಬೇಗ ಸೈಲೇಷಿಯದಿಂದ ಫ್ರೆಂಚರನ್ನೂ ಗ್ರೀಕರನ್ನೂ ಹೊಡೆದೋಡಿಸಿದರು. 1923 ಜುಲೈ ತಿಂಗಳಲ್ಲಿ ಅಂಗೀಕೃತವಾದ ಲೋಸನ್ ಕೌಲಿನ ಪ್ರಕಾರ ತುರ್ಕಿ ಸ್ವತಂತ್ರ ರಾಷ್ಟ್ರವಾಯಿತು. ಕ್ರಮೇಣ ಅಲ್ಲಿನ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ತುರ್ಕಿ ಗಣರಾಜ್ಯವಾಯಿತು. ಲೋಸನ್ ಕೌಲಿನ ಜೊತೆಯಲ್ಲೆ ಗ್ರೀಕರಿಗೂ ತುರ್ಕರಿಗೂ ಒಪ್ಪಂದ ನಡೆದು ಪಶ್ಚಿಮ ಏಷ್ಯ ಮೈನರಿನಲ್ಲಿ ವಾಸಿಸುತ್ತಿದ್ದ ಸುಮಾರು ಹತ್ತು ಲಕ್ಷ ಗ್ರೀಕರು ಸ್ವಸ್ಥಳಗಳಾದ ಗ್ರೀಸ್ ಮತ್ತು ಮ್ಯಾಸಿಡೋನಿಯ ದೇಶಗಳಿಗೆ ಸ್ಥಳಾಂತರಗೊಂಡರು. (ಸಿ.ಕೆ.ವೈ.ಡಿ.)