ಕುವೆಂಪು

ರಸ ಋಷಿ, ಭಾರತೀಯ ಕವಿ, ನಾಟಕಕಾರ, ಚಿಂತಕ
(ಬಲಿದಾನ ಇಂದ ಪುನರ್ನಿರ್ದೇಶಿತ)


ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು.

ಕುವೆಂಪು
ಜನನಡಿಸೆಂಬರ್ ೨೯, ೧೯೦೪
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ಮರಣನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ
ಅಂತ್ಯ ಸಂಸ್ಕಾರ ಸ್ಥಳಕುಪ್ಪಳಿ, ಶಿವಮೊಗ್ಗ ಜಿಲ್ಲೆ
ಕಾವ್ಯನಾಮಕುವೆಂಪು
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ
ವಿಷಯನುಡಿ, ನಾಡೊಲವು, ಪ್ರಕೃತಿ, ಅಧ್ಯಾತ್ಮ, ವಿಚಾರ
ಸಾಹಿತ್ಯ ಚಳುವಳಿನವೋದಯ
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ
ಬಾಳ ಸಂಗಾತಿಹೇಮಾವತಿ
ಮಕ್ಕಳುಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ
ಸಂಬಂಧಿಗಳುಚಿದಾನಂದ ಗೌಡ



ಸಹಿ

www.kuvempu.com

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಜೀವನ

ಬಾಲ್ಯ

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು.[] ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಶಿಕ್ಷಣ

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು.[] ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ

 

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು[]. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ವೈವಾಹಿಕ ಜೀವನ

 
'ಉದಯರವಿ', ಒಂಟಿಕೊಪ್ಪಲ್, ಮೈಸೂರು

ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ನಿಧನ

ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ಸಾಹಿತ್ಯ ಕೃಷಿ

ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.[]

ಕೃತಿಗಳು

ಮಹಾಕಾವ್ಯ

  1. ಶ್ರೀ ರಾಮಾಯಣ ದರ್ಶನಂ (1949)

ಖಂಡಕಾವ್ಯಗಳು

  1. ಚಿತ್ರಾಂಗದಾ (1936)

ಕವನ ಸಂಕಲನಗಳು

  1. ಕೊಳಲು (1930)
  2. ಪಾಂಚಜನ್ಯ (1933)
  3. ನವಿಲು (1934)
  4. ಕಲಾಸುಂದರಿ (1934)
  5. ಕಥನ ಕವನಗಳು (1937)
  6. ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
  7. ಪ್ರೇಮ ಕಾಶ್ಮೀರ (1946)
  8. ಅಗ್ನಿಹಂಸ (1946)
  9. ಕೃತ್ತಿಕೆ (1946)
  10. ಪಕ್ಷಿಕಾಶಿ (1946)
  11. ಕಿಂಕಿಣಿ (ವಚನ ಸಂಕಲನ) (1946)
  12. ಷೋಡಶಿ (1946)
  13. ಚಂದ್ರಮಂಚಕೆ ಬಾ ಚಕೋರಿ (1957)
  14. ಇಕ್ಷುಗಂಗೋತ್ರಿ (1957)
  15. ಅನಿಕೇತನ (1963)
  16. ಜೇನಾಗುವ (1964)
  17. ಅನುತ್ತರಾ (1965)
  18. ಮಂತ್ರಾಕ್ಷತೆ (1966)
  19. ಕದರಡಕೆ (1967)
  20. ಪ್ರೇತಕ್ಯೂ (1967)
  21. ಕುಟೀಚಕ (1967)
  22. ಹೊನ್ನ ಹೊತ್ತಾರೆ (1976)
  23. ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)

ಕಥಾ ಸಂಕಲನ

  1. ಸಂನ್ಯಾಸಿ ಮತ್ತು ಇತರ ಕಥೆಗಳು (1936)
  2. ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು

  1. ಕಾನೂರು ಹೆಗ್ಗಡತಿ (1936)
  2. ಮಲೆಗಳಲ್ಲಿ ಮದುಮಗಳು (1967)

ನಾಟಕಗಳು

  1. ಯಮನ ಸೋಲು (1928)
  2. ಜಲಗಾರ (1928)
  3. ಬಿರುಗಾಳಿ (1930)
  4. ವಾಲ್ಮೀಕಿಯ ಭಾಗ್ಯ (1931)
  5. ಮಹಾರಾತ್ರಿ (1931)
  6. ಸ್ಶಶಾನ ಕುರುಕ್ಷೇತ್ರಂ (1931)
  7. ರಕ್ತಾಕ್ಷಿ (1933)
  8. ಶೂದ್ರ ತಪಸ್ವಿ (1944)
  9. ಬೆರಳ್‍ಗೆ ಕೊರಳ್ (1947)
  10. ಬಲಿದಾನ (1948)
  11. ಚಂದ್ರಹಾಸ (1963)
  12. ಕಾನೀನ (1974)

ಪ್ರಬಂಧ

  1. ಮಲೆನಾಡಿನ ಚಿತ್ರಗಳು (1933)

ವಿಮರ್ಶೆ

  1. ಕಾವ್ಯವಿಹಾರ (1946)
  2. ತಪೋನಂದನ (1950)
  3. ವಿಭೂತಿಪೂಜೆ (1953)
  4. ದ್ರೌಪದಿಯ ಶ್ರೀಮುಡಿ (1960)
  5. ರಸೋ ವೈ ಸಃ (1963)
  6. ಇತ್ಯಾದಿ (1970)

ಆತ್ಮಕಥೆ

  1. ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು

  1. ಸ್ವಾಮಿ ವಿವೇಕಾನಂದ
  2. ರಾಮಕೃಷ್ಣ ಪರಮಹಂಸ

ಅನುವಾದ

  1. ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
  2. ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ

  1. ಸಾಹಿತ್ಯ ಪ್ರಚಾರ (1930)
  2. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
  3. ಷಷ್ಠಿನಮನ (1964)
  4. ಮನುಜಮತ-ವಿಶ್ವಪಥ (1971)
  5. ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ

  1. ಅಮಲನ ಕಥೆ (1924)
  2. ಮೋಡಣ್ಣನ ತಮ್ಮ (ನಾಟಕ) (1926)
  3. ಹಾಳೂರು (1926)
  4. ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
  5. ನನ್ನ ಗೋಪಾಲ (ನಾಟಕ) (1930)
  6. ನನ್ನ ಮನೆ (1946)
  7. ಮೇಘಪುರ (1947)
  8. ಮರಿವಿಜ್ಞಾನಿ (1947)
  9. ನರಿಗಳಿಗೇಕೆ ಕೋಡಿಲ್ಲ (1977)

ಇತರೆ

  1. ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು

  1. ಕನ್ನಡ ಡಿಂಡಿಮ (1968)
  2. ಕಬ್ಬಿಗನ ಕೈಬುಟ್ಟಿ (1973)
  3. ಪ್ರಾರ್ಥನಾ ಗೀತಾಂಜಲಿ (1972)

ನುಡಿನಮನ

ಜ್ಞಾನಪೀಠ ಪ್ರಶಸ್ತಿ ಉಲ್ಲೇಖ
ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ.

ಬಿ.ಎಂ.ಶ್ರೀ.
ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.

ದ.ರಾ.ಬೇಂದ್ರೆ

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ – ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ-ಜನ-ಮನ
ಇದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ?
ಉತ್ತಮ ಕವಿ ನುಡಿ – ಚದುರಗೆ
ಚಾರುತ್ವದ ಕುಂದಣದಲಿ
ಚಾರಿತ್ರ್ಯದ ರತ್ನ
ಚಾತುರ್ಯದ ಮಂತಣದಲಿ
ಸತ್ಸಂಗದ ಯತ್ನ
ಇದೆ ತೃಪ್ತಿಯು ನಿಮಗೆ


ಸ.ಸ.ಮಾಳವಾಡ
ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಡಿ.ಎಲ್.ನರಸಿಂಹಾಚಾರ್
ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ.

ಹಾ.ಮಾ.ನಾಯಕ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ.

ಸುಜನಾ
ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ.

ಜಿ.ಎಸ್.ಶಿವರುದ್ರಪ್ಪ
ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.

ದೇ.ಜ.ಗೌ
ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.

ಕೀರ್ತಿನಾಥ ಕುರ್ತಕೋಟಿ
ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ 'ರೊಮ್ಯಾಂಟಿಕ್' ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಕೋ.ಚೆನ್ನಬಸಪ್ಪ
ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ - ಆತ್ಮಜ್ಞಾನ - ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.

ಕೆ. ಸಚ್ಚಿದಾನಂದನ್
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ 'ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ 'ರಸೋ ವೈ ಸಃ'ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.

ಸ್ಮಾರಕಗಳು

 
ಕವಿಮನೆ, ಕುಪ್ಪಳಿ. ಈಗ ವಸ್ತು ಸಂಗ್ರಹಾಲಯವಾಗಿದೆ.
 
ಕವಿಮನೆ ದಾರಿ ಸೂಚಿ
  1. ಕುಪ್ಪಳಿಯಲ್ಲಿರುವ ಕುವೆಂಪು ಅವರು ಹುಟ್ಟಿದ ಮನೆ ವಸ್ತು ಸಂಗ್ರಹಾಲಯವಾಗಿದೆ.
  2. ಅಲ್ಲೇ ಇರುವ ಅವರ ಸಮಾಧಿ ಸ್ಥಳವಾದ 'ಕವಿಶೈಲ' ಒಂದು ವಿಶಿಷ್ಟ ಸ್ಮಾರಕ.
  3. ಶಿವಮೊಗ್ಗದ ಬಳಿ ಇರುವ ವಿಶ್ವವಿದ್ಯಾಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ.
  4. ಮೈಸೂರು ವಿಶ್ವವಿದ್ಯಾನಿಲಯದಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
  5. ಅನುವಾದ ಕಾರ್ಯವನ್ನು ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾಷಾ ಭಾರತಿ ಸಂಸ್ಥೆಗೆ ಕುವೆಂಪು ಅವರ ಹೆಸರಿಡಲಾಗಿದೆ.
  6. ಮೈಸೂರಿನ ಕುವೆಂಪು ನಗರದಲ್ಲಿರುವ ರಸ್ತೆಗಳಿಗೆ ಕುವೆಂಪು ಅವರ ಪರಿಕಲ್ಪನೆಗಳ, ಪಾತ್ರಗಳ ಹೆಸರುಗಳನ್ನು ಇಡಲಾಗಿದೆ.

ಕುವೆಂಪು ಕುರಿತ ಕೃತಿಗಳು

  1. ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ
  2. ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
  3. ಕುವೆಂಪು - ಲೇ: ದೇಜಗೌ
  4. ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ
  5. ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ
  6. ಕುವೆಂಪು - ಲೇ: ಎಸ್.ವಿ.ಪರಮೇಶ್ವರಭಟ್ಟ
  7. ಶ್ರೀ ಕುವೆಂಪು ಸಂಭಾಷಣೆ ಮತ್ತು ಸಂದರ್ಶನ - ಲೇ: ಎಸ್.ವೃಷಭೇಂದ್ರಸ್ವಾಮಿ
  8. ತರಗತಿಗಳಲ್ಲಿ ಕುವೆಂಪು - ಲೇ: ಎಸ್.ವೃಷಭೇಂದ್ರಸ್ವಾಮಿ
  9. ಕುವೆಂಪು ಕಾವ್ಯಯಾನ - ಲೇ: ಬಿ.ಆರ್. ಸತ್ಯನಾರಾಯಣ
  10. ಕುವೆಂಪು ನುಡಿತೋರಣ - ಸಂ: ಬಿ.ಆರ್.ಸತ್ಯನಾರಾಯಣ

ನಾಟಕ-ಚಲನಚಿತ್ರ-ಧಾರಾವಾಹಿ

  • "ಬೆರಳ್‌ಗೆ ಕೊರಳ್" ನಾಟಕವು ಚಲನಚಿತ್ರವಾಗಿದೆ.
  • "ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ.
  • "ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿದೆ.

ಕೊಡುಗೆ

  1. ಕುವೆಂಪು ಅವರು ಯುಗಪ್ರವರ್ತಕ ಕವಿ.
  2. ಕುವೆಂಪು ಅವರು 'ಶ್ರೀ ರಾಮಾಯಣ ದರ್ಶನಂ' ರಚಿಸುವ ಮೂಲಕ ಆಧುನಿಕ ಕಾಲದಲ್ಲಿ ಮಹಾಕಾವ್ಯ ರಚನೆಗೆ ನಾಂದಿ ಹಾಡಿದರು.
  3. ಕುವೆಂಪು ಅವರು ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಹೊಸ ಕಾಲಕ್ಕೆ ಅಗತ್ಯವೆನ್ನಿಸಿದ ದರ್ಶನವನ್ನು ಕಟ್ಟಿಕೊಟ್ಟಿದ್ದಾರೆ.
  4. ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದ್ದಾರೆ.
  5. ಕುವೆಂಪು ಅವರು ಮಂತ್ರಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ರೂಢಿಗೆ ತಂದರು.
  6. ಕುವೆಂಪು ಅವರು ತಮ್ಮ ಕನಸಿನ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದ್ದಾರೆ.
  7. ಕುವೆಂಪು ಅವರು ದಲಿತ ಹಾಗೂ ಬಂಡಾಯ ಚಳವಳಿಗಳಿಗೆ ಸ್ಫೂರ್ತಿಯಾಗಿದ್ದಾರೆ.
  8. 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಗೌರವ/ ಪ್ರಶಸ್ತಿ ಪುರಸ್ಕಾರಗಳು

  1. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (1955)
  2. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್. (1956)
  3. ಪದ್ಮಭೂಷಣ (೧೯೫೮)
  4. ರಾಷ್ಟ್ರಕವಿ ಪುರಸ್ಕಾರ (೧೯೬೪)
  5. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
  6. ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
  7. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
  8. ಕೇಂದ್ರ ಸಾಹಿತ್ಯ ಅಕಾಡೆಮಿಯು ಫೆಲೋಷಿಪ್ (1979)
  9. ಪಂಪ ಪ್ರಶಸ್ತಿ (೧೯೮೮)
  10. ಪದ್ಮವಿಭೂಷಣ (೧೯೮೯)
  11. ಕರ್ನಾಟಕ ರತ್ನ (೧೯೯೨)
  12. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ
  13. ಕನ್ನಡ ವಿಶ್ವವಿದ್ಯಾಲಯನಾಡೋಜ ಪ್ರಶಸ್ತಿ (ಮರಣೋತ್ತರ)
  14. ಕುವೆಂಪು ಅವರ 113 ನೇ ಜನ್ಮ ದಿನದಂದು, ಗೂಗಲ್ ಇಂಡಿಯಾ ಅವರ ಗೌರವಾರ್ಥ ಡೂಡಲ್ ಪ್ರದರ್ಶಿಸಿತು.(2017 ಡಿಸೆಂಬರ್ 29) [೧]

ಅಧ್ಯಕ್ಷತೆ, ಇತ್ಯಾದಿ

  1. 1928ರಲ್ಲಿ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  2. ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
  3. 1957ರಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ವಿಶ್ವ ಮಾನವ ದಿನ

ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು "ವಿಶ್ವ ಮಾನವ" ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.

ಹೊರಗಿನ ಸಂಪರ್ಕಗಳು

ಉಲ್ಲೇಖಗಳು

  1. "December29 1904 Kuvempu is born". Archived from the original on 2020-07-11. Retrieved 2018-08-28.
  2. Kuvempu Picture Album
  3. ಮಹಾನ್ ರಾಷ್ಟ್ರಕವಿ ಕುವೆಂಪುರವರಿಗೆ ಗೂಗಲ್ ಗೌರವ
  4. ಮೈಸೂರು ವಿಶ್ವವಿದ್ಯಾಲಯದ ಕೈಪಿಡಿ
  5. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುಟ್ಟಪ್ಪ ಕೆ ವಿ
"https://kn.wikipedia.org/w/index.php?title=ಕುವೆಂಪು&oldid=1258274" ಇಂದ ಪಡೆಯಲ್ಪಟ್ಟಿದೆ