ಹವ್ಯಕರ ಧಾರ್ಮಿಕ ಸಂಸ್ಕಾರ ಮತ್ತು ಸಂಪ್ರದಾಯ

ಹವ್ಯಕರ ಧಾರ್ಮಿಕ ಸಂಸ್ಕಾರದಲ್ಲಿ ಸಂಪ್ರದಾಯ ಮತ್ತು ಪದ್ದತಿಗಳು.ಸಂಪಾದಿಸಿ


 • ಸಾಗರ ಸೀಮೆ - ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗೆ ಸಂಬಂಧ ಪಟ್ಟಿದೆ

ಪ್ರಸ್ಥಾವನೆ :ಸಂಪಾದಿಸಿ

 • ಹಿಂದೂಧರ್ಮದಲ್ಲಿ ಧಾರ್ಮಿಕ ಸಂಸ್ಕಾರಗಳು ಪ್ರಮುಖ ಧಾರ್ಮಿಕ ಕ್ರಿಯೆಗಳಾಗಿವೆ. ಗೃಹಿಣಿಯು ವಿವಾಹದ ನಂತರ ಗರ್ಭಿಣಿಯಾದಾಗ ಸೀಮಂತ ಕ್ರಿಯೆಯಾಗಿ ನಂತರ ಹುಟ್ಟಿದ ಮಗುವಿಗೆ ನಾಮಕರಣದಿಂದ ವಿವಾಹವಾಗುವವರೆಗೂ ಹದಿನಾಲ್ಕು ಬಗೆಯ ಸಂಸ್ಕಾರಗಳಿದ್ದು, ಅವುಗಳಲ್ಲಿ ಕೆಲವು ಮಾತ್ರಾ ಆಚರಣೆಯಲ್ಲಿದೆ. ಒಟ್ಟು ಹದಿನಾರು ಸಂಸ್ಕಾರಗಳೆಂಬುದು ಪ್ರಸಿದ್ಧಿ. ಅವುಗಳಲ್ಲೂ ಬೇರೆ ಬೇರೆ ಪದ್ಧತಿಗಳಿವೆ. ಹೆಚ್ಚು ಪ್ರಚಲಿತವಿರುವ ಹದಿನಾರು ಸಂಸ್ಕಾರಗಳು ಈ ರೀತಿ ಇವೆ : ೧.ಗರ್ಭಾದಾನ, ೨.ಪುಂಸವನ, ೩.ಸೀಮಂತ, ೪.ಜಾತಕರ್ಮ, ೫.ನಾಮಕರಣ, ೬.ಅನ್ನಪ್ರಾಶನ, ೭.ಚೌಲ, ೮.ಉಪನಯನ, ೯,ಉಪಾಕರ್ಮ, ೧೦.ಉತ್ಸರ್ಜನ, ೧೧.ವೇದವ್ರತ, ೧೨.ಗೌದಾನಿಕ, ೧೩.ಸ್ನಾತಕ, ೧೪.ವಿವಾಹ, ೧೫.ಸ್ಮಾರ್ತಾಗ್ನಿ ಹೋತ್ರ, ೧೬.ಔರ್ಧ್ವದೇಹಿಕ.; ೧೬ನೆಯ ಔರ್ಧ್ವದೇಹಿಕ ಸಂಸ್ಕಾರವು ಮರಣಾನಂತರ ಆಚರಿಸುವ ಧಾರ್ಮಿಕ ಕ್ರಿಯೆ.
 • ಮಂತ್ರೋಕ್ತವಲ್ಲದ ರೂಢಿಗತ ನೆಡವಳಿಕೆಗಳನ್ನು ಮಾತ್ರಾ ಇಲ್ಲಿ ಕೊಟ್ಟಿದೆ.
 • ಇಲ್ಲಿ ಹೆಚ್ಚು ರೂಢಿಯಲ್ಲಿರುವ ಸೀಮಂತ ದಿಂದ ವಿವಾಹದ ವರೆಗಿನ ಹೆಚ್ಚು ರೂಢಿಯಲ್ಲಿರುವ ಸಂಸ್ಕಾರಗಳಿಗೆ ಸಂಬಂಧಪಟ್ಟ ಶಿವಮೊಗ್ಗ ಜಿಲ್ಲೆ ಸಾಗರ ಪ್ರಾಂತದಲ್ಲಿರುವ ಹವ್ಯಕ ಸಮುದಾಯದ ಸಂಪ್ರದಾಯಗಳನ್ನು ಮಾತ್ರಾ ಕೊಟ್ಟಿದೆ. ಆ ಸಂಪ್ರದಾಯಗಳಲ್ಲೂ ಗ್ರಾಮ ಗ್ರಾಮಗಳಿಗೂ ಬೇಧಗಳುಂಟು. ಸಂಪ್ರದಾಯಗಳು, ಶಾಸ್ತ್ರಗಳಲ್ಲಿ ಇಲ್ಲದಿದ್ದರೂ ಜನಪದ ರೂಢಿಗತ ನಡವಳಿಕೆಗಳು. ಆವರವರ ಜಾತಿ ಮತ ಪ್ರದೇಶಗಳಿಗೆ ಈ ಸಂಪ್ರದಾಯಗಳು ಬೇರೆ ಬೇರೆ ಆಗಿರಬಹುದು. ಹಬ್ಬ ಹರಿದಿನಾದಿಗಳಿಗೆ ಬೇರೆಬೇರೆ ಸಂಪ್ರದಾಯಗಳಿವೆ. ಇವು ಬರೆದಿಟ್ಟವುಗಳಲ್ಲ. ಆಯಾ ಮನೆತನದವರು ಬಹುಕಾಲದಿಂದ ನಡೆಸಿಕೊಂಡುಬಂದ ಸಾಮಾಜಿಕ ನೆಡವಳಿಕೆಗಳು.

ಸೀಮಂತಸಂಪಾದಿಸಿ


 • ಗರ್ಭಿಣಿಯರಿಗೆ ಬಯಕೆ ತೀರಿಸುವ ಕಾರ್ಯ
 • ಸೀಮಂತವನ್ನು ಗರ್ಭಿಣಿಯರಿಗೆ ನಾಲ್ಕು ತಿಂಗಳ ನಂತರ , ಆರು ತಿಂಗಳು ತುಂಬುವುದರೊಳಗೆ ಮಾಡಬೇಕು. ಆ ದಿನ ದೇವರಿಗೆ ವಿಶೇಷ ಪೂಜೆ ದೇವತಾ ಕಾರ್ಯಗಳನ್ನು ಮಾಡಬೇಕು.( ವಿಷ್ಣು ಪ್ರೀತ್ಯರ್ಥ ಕಾರ್ಯ). ತವರು ಮನೆಯಿಂದ ಐದು ಬಗೆಯ ತಿಂಡಿ ಮಾಡಿ ತಂದು ಗರ್ಭಿಣಿ ಮಗಳಿಗೆ ಬಡಿಸಬೇಕು. ತುಪ್ಪ, ಹಣ್ಣು, ಹೂವು, ಅರಶಿನ-ಕುಂಕುಮ, ಸೀರೆ-ಬಟ್ಟೆ, ಉಡುಗೊರೆ ಕೊಡಬೇಕು.

ಒಳ್ಳೆಯ ದಿನ ನೋಡಿಕೊಂಡು, ಮಡಿಲು ತುಂಬಿ ತವರಿಗೆ ಕಳುಹಿಸಿ ಕೊಡಬೇಕು. ತವರು ಮನೆಗೆ ಕಳಹಿಸಿದ ಮೇಲೆ, ಅತ್ತೆ ಮನೆಯವರು ಸಿಹಿ ತಿಂಡಿ ಮಾಡಿಕೊಂಡು ಹೋಗಿ, ಗರ್ಭಿಣಿಗೆ ಬಡಿಸಿ ಪ್ರೀತಿಯಿಂದ ಅವಳನ್ನು ಮಾತನಾಡಿಸಿಕೊಂಡು ಬರಬೇಕು.

ನಾಮಕರಣಸಂಪಾದಿಸಿ


 • ಮಗು ಹುಟ್ಟಿದ ದಿನದಿಂದ ಹತ್ತು ದಿನಗಳ ಕಾಲ ತಾಯಿ ಮತ್ತು ಮಗುವನ್ನು ಪ್ರತ್ಯೇಕವಾಗಿ ಮಲಗಿಸಬೇಕು. ತೀರಾ ಹತ್ತಿರದವರನ್ನು ಬಿಟ್ಟು ಬೇರೆಯವರಿಗೆ ಮುಟ್ಟಲು ಅವಕಾಶ ಕೊಡಬಾರದು .

ಹತ್ತನೇ ದಿನ ರಾತ್ರಿ ಮಗು- ಬಾಣಂತಿ ವಾಸ್ತು ಬಾಗಿಲು ದಾಟಿಸಿ ಮಗುವಿಗೆ ಬಜೆ ತೆಯಿದು ನೆಕ್ಕಿಸಬೇಕು . ಬಾಗಿಲ ಬಳಿಯಲ್ಲಿ ಮಣೆ ಹಾಕಿ ಕೂರಿಸಿ, ಬಾಣಂತಿಗೆ ಅರಿಸಿ ಕುಂಕುಮ ಕೊಟ್ಟು, ತಲೆಗೆ ಎಣ್ಣೆ ಹಾಕಿ ವೀಳ್ಯದ ಎಲೆ ಪಟ್ಟಿ ಕೊಟ್ಟು , ಕುಡಿಯಲು ಹಾಲು ಕೊಡಬೇಕು, ಬಾಣಂತಿ ಹೋಗಿ ಬರುತ್ತೇನೆ ಅಂತ ಹೇಳಿ ಮಣೆ ಸಾಚಿ ಹೋಗಬೇಕು. ಹನ್ನೊಂದನೇ ದಿನ ಬೆಳಿಗ್ಗೆ ಹಲಸಿನ ಹಣ್ಣು ಮಾವಿನ ಎಲೆ ಹಾಕಿ ಮಗುವಿಗೆ ಶುದ್ಧೋದಕ ಸ್ನಾನ ಮಾಡಿಸ ಬೇಕು. ಮಗು ವನ್ನು ಕುಡಿಬಾಳೆ ಮೇಲೆ ಮಲಗಿಸಿ , ನೀರು ಹಾಕಿ ಮುಟ್ಟಬೇಕು.ಬಾಣಂತಿ ಸ್ನಾನದ ನಂತರ ಪಂಚಗವ್ಯ ತೆಗೆದುಕೊಂಡು ಹಾಸಿಗೆ (ಹಾಸಿದ ಜಾಗ) ಪೂಜೆ ಮಾಡಬೇಕು.

 • ಆ ನಂತರ ಪುರೋಹಿತರು ಪುಣ್ಯಾವರ್ತನೆ ಮತ್ತು ನಾಮಕರಣದ ಕಾರ್ಯಕ್ರಮವನ್ನು ಶಾಸ್ತ್ರ ರೀತಿಯಲ್ಲಿ ಮಾಡಿಸುತ್ತಾರೆ

ಪುಣ್ಯಾವರ್ತನೆಸಂಪಾದಿಸಿ


 • ಸಾಮಗ್ರಿಗಳ ಸಂಗ್ರಹ :-
 • ಅರಿಸಿನ - ಕುಂಕುಮ, ಅಕ್ಕಿ, ಮಂಗಳಾಕ್ಷತೆ, ತೆಂಗಿನಕಾಯಿ, ಎಲೆ-ಅಡಿಕೆ, ಹಣ್ಣು, ಕಲ್ಲು-ಸಕ್ಕರೆ, ಪಂಚ ವೃಕ್ಷದ ಚಕ್ಕೆ, (ಹಲಸು, ಆಲ, ಅತ್ತಿ, ಅರಳಿ, ಬಸರಿ, ) ಈ ಚಕ್ಕೆಗಳನ್ನು ನೀರಿನಲ್ಲಿ ಕುದಿಸಿ, ಕಳಶದ ನೀರು ತಯಾರಿಸುವುದು. ಮಗುವಿಗೆ ಸ್ನಾನ ಮಾಡಿಸಲು ಮಾವಿನಸೊಪ್ಪು, ಪಂಚಗವ್ಯ, ಮಗುವಿಗಾಗಿ ಉಡುದಾರ, ಅಕ್ಕಿ ಹಸನು-ಮಾಡುವ ಮರ, ಬಿಳಿ ಬಟ್ಟೆ ಇತ್ಯಾದಿ ಸಂಗ್ರಹ ಮಾಡಿಕೊಳ್ಳಬೇಕು.
 • ಕಾರ್ಯಕ್ರಮ :-
 • ಮಧ್ಯಾಹ್ನ ನೆಂಟರನ್ನು ಕರೆದು, ಹಬ್ಬದ ಊಟ ಮಾಡಬೇಕು. ಪುಣ್ಯಾವರ್ತನೆಗೆ, ಮಗುವಿನ ತಂದೆಯ ಮನೆಯವರು, ಹೂವು, ಹಣ್ಣು, ಕಲ್ಲು ಸಕ್ಕರೆ, ಮಗುವಿಗೆ ಬಟ್ಟೆ, ಬಾಣಂತಿಗೆ ಕಣ, ಮೆಣಸಿನ ಕಾಳು, ಶುಂಠಿ, ಎಲೆ ಅಡಿಕೆ, ಮತ್ತು ಎಂಟು ತೆಂಗಿನಕಾಯಿ (ವಿನಿಯೋಗ ಇತ್ಯಾದಿ ಸೇರಿ), ಚಿಲ್ಲರೆ ದುಡ್ಡು, ದಕ್ಷಿಣೆಗೆ ಹಣ ತರಬೇಕು. ಅಂದಿನ ವಿನಿಯೋಗದ ಎಲ್ಲಾ ಖರ್ಚು ಮಗುವಿನ ತಂದೆಯದೇ.

ಮಧ್ಯಾಹ್ನ ಮಗುವಿಗೆ ಅನ್ನ ಪ್ರಾಶನ ಮಾಡಿಸಬೇಕು. ಕುಡಿಬಾಳೆ ಹಾಕಿ ಅನ್ನ, ಪಾಯಸ ಹಾಕಿ ಬಂಗಾರದ ಉಂಗುರದಲ್ಲಿ (ಚಮಚದ ಬದಲಿಗೆ) ಮಗುವಿನ ಸೋದರತ್ತೆ, ಕಿವಿಯನ್ನು ಚುಚ್ಚಿಸಬಹುದು. ಆ ದಿನ ಅನ್ನ ಪ್ರಾಶನಕ್ಕೆ , ಕಿವಿ ಚುಚ್ಚುವುದಕ್ಕೆ (ಕರ್ಣವೇಧನ) ಮುಹೂರ್ತ ನೋಡುವುದು ಬೇಡ.

 • ಮಧ್ಯಾಹ್ನಾ ನಂತರ ತೊಟ್ಟಿಲ ಪೂಜೆ :-
 • ಬೇಕಾಗುವ ಸಾಮಗ್ರಿಗಳು : ಹೂವು, ಹಣ್ಣು, ಎರಡು ಕಾಯಿ, ಕಲ್ಲು ಸಕ್ಕರೆ, ಭೂರಿ ದಕ್ಷಿಣೆಗೆ ಹಣ, ಮಾವಿನ ಚನಕೆ, ಮಾವಿನ ಚನಕೆ ಕಟ್ಟಿದ ಕಲ್ಲು ಗುಂಡು, ಅರಿಸಿನ-ಕುಂಕುಮ, ಮಂಗಳಾಕ್ಷತೆ.
 • ತೊಟ್ಟಿಲಿಗೆ ರೇಷ್ಮೆ ಸೀರೆ - ಬಟ್ಟೆ ಹಾಸಿ, ಹೂವಿನ ಅಲಂಕಾರ ಮಾಡಿ ಐದು ಜನ ಮುತ್ತೈದೆಯರು ಐದು ಸಾರಿ ಪ್ರದಕ್ಷಿಣೆ ಮಾಡಿ, ಕೆಳಗಿನಿಂದ ಮೇಲಕ್ಕೆ ಬದಲಾಯಿಸುತ್ತಾ ತೊಟ್ಟಿಲಲ್ಲಿ ಮಲಗಿಸಬೇಕು. ನಂತರ ಗುಂಡಪ್ಪನನ್ನು ಸಣ್ಣ ಹೆಣ್ಣು ಮಕ್ಕಳಿಗೆ , ಹಿರಿಯರಿಗೆ ಕೊಟ್ಟು ನಮಸ್ಕಾರ ಮಾಡಿ ದುಡ್ಡು ತೆಗೆದುಕೊಳ್ಳಬೇಕು.
 • ಪುರೋಹಿತರು ನಾಮಕರಣದ ಕಾರ್ಯಕ್ರಮವನ್ನು ಶಾಸ್ತ್ರ ರೀತಿಯಲ್ಲಿ ಮಾಡಿಸುತ್ತಾರೆ.
 • ನಂತರ ಬಾಣಂತಿ ಮಗುವನ್ನು ತನ್ನ ಗಂಡನಿಗೆ , ತಾಯಿಗೆ ಕೊಟ್ಟು ನಮಸ್ಕಾರ ಮಾಡಿ, ಹಿರಿಯರಿಗೆ ಕೊಟ್ಟು ನಮಸ್ಕಾರ ಮಾಡಬೇಕು. ಆ ನಂತರ ಬಾಣಂತಿ ಮಗುವನ್ನು ತೊಟ್ಟಿಲಿಗೆ ಹಾಕಿ ತೊಟ್ಟಿಲು ತೂಗಬೇಕು. ನಂತರ ಮುತ್ತೈದೆಯರು ಹಾಡು ಹೇಳುತ್ತಾ ತೊಟ್ಟಿಲು ತೂಗಬೇಕು. ನಂತರ ಬಾಣಂತಿ ಮತ್ತು ಮಗುವಿಗೆ ಆರತಿ ಮಾಡಬೇಕು. ಬಾಣಂತಿ-ಸಾಮಾನು ( ಶುಣಠಿ , ಮೆಣಸಿನ ಕಾಳು, ಇತ್ಯಾದಿ ) ತಂದವರು ಅವನ್ನು ಬಾಣಂತಿಗೆ ಕೊಡುವುದು.

ಬಾಣಂತಿ ಸ್ನಾನ ಮಾಡಿಸಿದ ಮಡಿವಾಳತಿಗೆ (ಹೆಂಗಸಿಗೆ) (೧೧ +೧ =೧೨) ಹನ್ನೆರಡು ಪಾವು ಅಕ್ಕಿ , ಎಲೆ-ಅಡಿಕೆ , ಬೆಲ್ಲ, ದುಡ್ಡು, ಬಟ್ಟೆ ಕೊಡಬೇಕು.

ಚೌಳ -ಚೂಡಾಕರ್ಮ-ಚೌಲಸಂಪಾದಿಸಿ


 • ಚೌಳ (ಚೂಡಾಕರ್ಮ)ಸಂಸ್ಕಾರವನ್ನು, ಗಂಡು ಮಕ್ಕಳಿಗೆ ಹುಟ್ಟಿದ ಎರಡು ವರ್ಷದ ನಂತರ ಮೂರು ವರ್ಷದ ಒಳಗೆ ಮಾಡಬೇಕು.
 • ಚೌಳದ ಹಿಂದನ ದಿನ ಅಥವಾ ಅದೇ ದಿನ ನಾಂದಿ ಇಡುವುದು ವಾಡಿಕೆ. ನಾಂದಿಯ ದಿನ ಬೆಳಿಗ್ಗೆ ತಂದೆ, ತಾಯಿ ಮತ್ತು ಮದು -ಮಗನಿಗೆ ಅರಿಸಿನ -ಎಣ್ಣೆ ಮಾಡಿ, ಮನೆಯ ಹೆಣ್ಣು ಮಕ್ಕಳು ಆರತಿ ಎತ್ತಬೇಕು. ಮೂವರೂ ಹಿರಿಯರಿಗೆ ನಮಸ್ಕಾರ ಮಾಡಬೇಕು. ನಂತರ ಮಂಗಳ ಸ್ನಾನ. ನಂತರ ನಾಂದಿ ಕಾರ್ಯಕ್ರಮ. ದೇವರ ಮುಂದೆ ಬಿತ್ತಕ್ಕಿ ದೀಪ (ಕುಡಿಬಾಳೆಯಲ್ಲಿ ಅಕ್ಕಿ,ಕಾಯಿ ವೀಳಯದೆಲೆ ಪಟ್ಟಿ -ಅಡಕೆ,ಹಣತೆಯ ನಂದಾದೀಪ ) ಇಡಬೇಕು. ಹೆಣ್ಣು ಮಕ್ಕಳು ಮಂಗಳಾಕ್ಷತೆ ಕಲಸಿ , ಊರು ಕರೆಯಲು ಹೋಗಬೇಕು. ನಾಂದಿಯ ಮೊದಲು ಅಥವಾ ನಂತರ ಉಡುಗೊರೆ ಮಾಡಬಹುದು. ರಾತ್ರಿ ಉದಕ ಶಾಂತಿ ಮಾಡಬಹುದು.
 • ಚೌಳದ ದಿನ ಬೆಳಿಗ್ಗೆ ಮುಂಚೆ ಮಕ್ಕಳಿಗೆ ಊಟ ಹಾಕುವ ಕಾರ್ಯಕ್ರಮ :-
 • ಊಟಕ್ಕೆ ಐದು ಜನ ಮಕ್ಕಳಿಗೆ ಕರೆಯಬೇಕು. ಐದು ಬಗೆ ಸಿಹಿ ತಿಂಡಿ ಮಾಡಿ ಬಡಿಸಬೇಕು. ಮದುಮಗನ ತಂದೆ ಗಂಡುಮಕ್ಕಳಿಗೆ ದಕ್ಷಿಣೆ, ಹೆಣ್ಣುಮಕ್ಕಳಿಗೆ ಕಣ ಕೊಡಬೇಕು.
 • ಚೌಳ: ಮಗುವಿನ ತಂದೆ, ಮದುಮಗನ ತಲೆಗೆ ಹಾಲು ಮೊಸರನ್ನು ಹಚ್ಚಿ ದರ್ಭೆಯನ್ನು ಇಟ್ಟು ಸ್ವಲ್ಪ ಕೂದಲನ್ನು ಕತ್ತರಿಸಬೇಕು. ನಂತರ ಮಗುವನ್ನು ನಾಪಿತನಿಗೆ ಒಪ್ಪಿಸಬೇಕು. ಅವನನ್ನು ಸೋದರ ಮಾವನ ತೊಡೆಯ ಮೇಲೆ ಕೂರಿಸಿಕೊಂಡು ಚೌಲ(ಕೂದಲು ಕತ್ತರಿಸುವುದು) ಮಾಡಿಸಬೇಕು. ಚೌಳ ಮಾಡಿದ ನಾಪಿತನಿಗೆ ಮರ್ಯಾದೆ ಕೊಡಬೇಕು-ಕುಡಿಬಾಳೆ ಎಲೆಯಲ್ಲಿ, ಅಕ್ಕಿ, ಕಾಯಿ, ತುಪ್ಪ, ಬೆಲ್ಲ, ಬಟ್ಟೆ, ತೊಗರಿಬೇಳೆ, ಗೋಧಿ, ಹಣ, ವೀಳಯದೆಲೆ,ಅಡಿಕೆ , ಇಟ್ಟು ಕೊಡಬೇಕು.
 • ಮಗುವಿನ ಕೂದಲು ತೆಗೆದ ನಂತರ ಮಗುವಿಗೆ ಮಂಗಳ ಸ್ನಾನ ಮಾಡಿಸಿ(ಹಾಲು, ತುಪ್ಪ ಹಾಕಿ), ಹೊರಬಾಗಿಲಿನಿಂದ ಹಾನ ಮಾಡಿ ಚೆಲ್ಲಿ, ಮುಸುಕು ಹಾಕಿಸಿ, ಕುಂಕುಮದ ನಾಮ ಎಳೆದು, ದೇವರ ಮುಂದೆ ಕರೆದುಕೊಂಡು ಬರುವುದು.

ನಂತರ ಚೌಲದ ಹೋಮ, ವಿಶೇಷ ಊಟ, ಉಪಚಾರ, ಭೋಜನದ ನಂತರ ಆರತಿ-ಅಕ್ಷತೆ ಕಾರ್ಯಕ್ರಮ. ರಾತ್ರಿ ಮಗುವಿಗೆ ದೃಷ್ಠಿ-ದೋಷ ತೆಗೆಯಬೇಕು.

 • ವಿಶೇಷ ಕಾರ್ಯಕ್ರಮಗಳ ಮುನ್ನಾದಿನದ ಕಾರ್ಯಕ್ರಮ.
 • ತೋರಣ ಕಟ್ಟಿದವರಿಗೆ, ಮರ್ಯಾದೆ : ಕುಡಿಬಾಳೆಗಳನ್ನು ಮರದಲ್ಲಿ ಇಟ್ಟು, ಅಕ್ಕಿ, ಕಾಯಿ, ತುಪ್ಪ, ಬೆಲ್ಲ, ಎಲೆ-ಅಡಿಕೆ, ಕಾಳು-ಬೇಳೆ, ದಕ್ಷಿಣೆ, (ಮರ ಬಿಟ್ಟು,ಮರ ವಾಪಾಸು ಕೊಡುವುದು)ಇವುಗಳನ್ನು ಕೊಡಬೇಕು.
 • ತರಕಾರಿ ಹೆಚ್ಚಿದ ಊರಿನ ಹೆಂಗಸರಿಗೆ (ಹಿಂದಿನ ದಿನ ಅಥವಾ ಆ ದಿನ ಬೆಳಿಗ್ಗೆ) , ಮತ್ತು, ದೊನ್ನೆ- ಬಾಳೆ ( ಬಾಳೆ ಸೋಯಿಸಿ ಒರೆಸಿ, ಜೋಡಿಸಿ ಇಡುವುದು) ಮಾಡಿದವರಿಗೆ, ಮರ್ಯಾದೆ : ಹರಿವಾಣದಲ್ಲಿ ಅರಳು ಕಾಳು (ಅಥವಾ ಅವಲಕ್ಕಿ), ದೊನ್ನೆಯಲ್ಲಿ ತುಪ್ಪ, ಬೆಲ್ಲ, ಉಪ್ಪಿನಕಾಯಿ, ತೆಂಗಿನಕಾಯಿ, ಪಂಚಕಜ್ಜಾಯ, ಕೊಡಬೇಕು.
 • ಚೌಳ, ಉಪನಯನ ಗಳಿಗೆ, ಒಂದು ತೆಂಗಿನಕಾಯಿ, ಮದುವೆ ಮತ್ತು ಇತರೆ ಕಾರ್ಯಗಳಿಗೆ ಎರಡು ತೆಂಗಿನಕಾಯಿ ಕೊಡುವುದು ಪದ್ದತಿ. ಹೆಚ್ಚು ಜನರಿದ್ದರೆ ಅದಕ್ಕೆ ತಕ್ಕಂತೆ ಕೊಡಬಹುದು.

ಉಪನಯನಸಂಪಾದಿಸಿ


 • ಚೌಲದ ಕಾರ್ಯಕ್ರಮದಂತೆ ಹಿಂದಿನ ದಿನ ನಾಂದಿ ಕಾರ್ಯಕ್ರಮ.
 • ಬೆಳಿಗ್ಗೆ ಮುಂಚೆ ವಟುವಿಗೆ ಮತ್ತು ಅವನ ತಂದೆ - ತಾಯಿಗೆ ಎಣ್ಣೆ -ಅರಿಸಿನ ಮಾಡಿ, ಆರತಿ ಎತ್ತುವುದು ; ಮಂಗಳ ಸ್ನಾನ, ಗಣಪತಿ ಪೂಜೆ, ನಂತರ ನಾಂದಿ ಇಡುವುದು, ಹಿರಿಯರಿಗೆ, ಸಂಬಂಧಿಕರಿಗೆ ಉಡುಗೊರೆ ಕೊಡುವುದು. ಹೆಣ್ಣು ಮಕ್ಕಳು ಮಂಗಳಾಕ್ಷತೆ ಕಲಸಿ ಊರು ಕರೆಯಬೇಕು. ನಂತರ ತೋರಣ ಕಟ್ಟಿದವರಿಗೆ ಮರ್ಯಾದೆ ಕೊಡುವುದು. ಸಂಜೆ ಆಸೆಗೆ ಹೆಚ್ಚಿದವರಿಗೆ (ತರಕಾರಿ ಹೆಚ್ಚಿದ ಮಹಿಳೆಯರಿಗೆ) ಮರ್ಯಾದೆ ಕೊಡಬೇಕು. ರಾತ್ರಿ ಉದಕ ಶಾಂತಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು.
 • ಉಪನಯನ ಕಾರ್ಯಕ್ರಮ : ಬೆಳಿಗ್ಗೆ ಮುಂಚೆ ಸ್ನಾನ ಮಾಡಿ, ಎರಡು ಜನ ಬ್ರಹ್ಮಚಾರಿಗಳಿಗೆ ಉಪನಯನದ ವಟುವಿಗೆ ಮತ್ತು ಮಕ್ಕಳಿಗೆ ಊಟ,. ನಂತರ ಸ್ನಾನ. ಹಸ್ತೋದಕವನ್ನು ಹಾಕಬೇಕು. ಊಟದ ಪದ್ದತಿ ಮರ್ಯಾದಿ ಪದ್ದತಿ ಚೌಳದ ಕಾರ್ಯಕ್ರಮದಂತೇಯೇ ಇರುತ್ತದೆ.

ಚೌಲದಲ್ಲಿ ಮಾಡಿದಂತೆ, ಮೊದಲು ವಟುವಿನ ತಂದೆಯು ವಟುವಿಗೆ ಚೌಲ (ಕೂದಲು ಕತ್ತರಿಸುವುದು) ಮಾಡಿದ ನಂತರ ನಾಪಿತನಿಂದ ಚೌಲ. ನಾಪಿತನಿಗೆ ಚೌಲ ಕಾರ್ಯಕ್ರಮದಲ್ಲಿ ನೀಡಿದಂತೆಯೇ ಮರ್ಯಾದೆ ಕೊಡಬೇಕು. ನಂತರ ವಟುವಿಗೆ ಮಂಗಳ ಸ್ನಾನ ಮಾಡಿಸಿ, ಕುಂಕುಮದ ನಾಮವಿಟ್ಟು ಹೊರಬಾಗಿಲಿನಿಂದ (ಹೆಬ್ಬಾಗಿಲಿನಿಂದ) ಕರೆದುಕೊಂಡು ಬರುವುದು. ನಂತರ ಉಪನಯನದ ಹೋಮ, ಬ್ರಹ್ಮೋಪದೇಶ. ಇದಾದನಂತರ, ಕಂಚು - ಭಿಕ್ಷ ಕಾರ್ಯಕ್ರಮ.

 • ಕಂಚು-ಭಿಕ್ಷ ಕಾರ್ಯಕ್ರಮ: ಇದಕ್ಕೆ ಹತ್ತಿರದ ಸಂಬಂಧಿಕರು, ಅಕ್ಕಿ, ಕಾಯಿ, ದುಡು, (ಹಣ), ಇಟ್ಟು ವಟುವಿಗೆ ಭಿಕ್ಷ ಹಾಕಬೇಕು. ವಟುವಿಗೆ ಮೊದಲು ತಾಯಿ ಭಿಕ್ಷೆ ಹಾಕಬೇಕು, ನಂತರ ಉಳಿದವರು. ಭಿಕ್ಷದ ಕಾರ್ಯಕ್ರಮ ಮುಗಿದ ನಂತರ ಮೊದಲನೆಯ ಆರತಿಯನ್ನು ತಾಯಿ ಮತ್ತು ಅಜ್ಜಿ (ಅಥವಾ ಓರಗಿತ್ತಿ) ಮಾಡುವುದು; ಆನಂತರದ ಆರತಿ ಗಳನ್ನು ಮನೆಯ ಹೆಣ್ಣು ಮಕ್ಕಳೇ ಮಾಡಬೇಕು. ಆರತಿ ಎತ್ತಿಸಿಕೊಂಡವರು (ವಟು-ತಂದೆ-ತಾಯಿ) ಆರತಿ ಬಟ್ಟಲಿಗೆ ದುಡ್ಡು ಹಾಕಬೇಕು.
 • ನಂತರ ಸತ್ಕಾರ-ಭೋಜನ , ಅದಕ್ಕೆ ಮೊದಲು ಅಥವಾ ನಂತರ ಸಮಯಾವಕಾಶ ವಿದ್ದಂತೆ ಆರತಿ-ಅಕ್ಷತೆ (ವಟುವಿಗೆ ಉಡುಗೊರೆ) ಕಾರ್ಯಕ್ರಮ.

ರಾತ್ರಿ ಹಸೆ ಹಾಕಬೇಕು. ಐವರು ಮುತ್ತೈದೆಯರು ಹಸೆ ಜಮಖಾನವನ್ನು ಹಿಡಿದು ಪ್ರದಕ್ಷಿಣೆ ರೂಪದಲ್ಲಿ ಕೈ ಬದಲಾಯಿಸುತ್ತಾ ಸುತ್ತು ವರಿದು ಐದು ಸಾರಿ ಹಸೆ ಹಾಸಬೇಕು. ಅದರ ಮೇಲೆ ವಟುವನ್ನು ಕೂರಿಸಿ, ಕಂಚು-ಭಿಕ್ಷವನ್ನು ಹಾಕಿ, ಆರತಿ ಎತ್ತಬೇಕು.ಉಪನಯನದ ನಂತರ ನಾಲ್ಕೂ ದಿನವೂ ಮೂರು ಹೊತ್ತೂ, ವಟುವಿಗೆ ಕಂಚು-ಭಿಕ್ಷ ಹಾಕಿ, ಅಗ್ನಿ-ಕಾರ್ಯ ಮಾಡಿಸಿ, ಆರತಿ ಎತ್ತಬೇಕು. ಈ ಎಲ್ಲಾ ಕಾರ್ಯಕ್ರಮಗಳ ಹೊಣೆಯನ್ನು, ನೆಂಟಳಿ (ಮನೆಯ ಮದುವೆಯಾದ ಮಗಳು ) ವಹಿಸಿಕೊಂಡು ಮಾಡಬೇಕು.

 • ದಂಟು-ವರ್ತನೆ : ಉಪನಯನದ ನಾಲ್ಕನೇ ದಿನ ದಂಟು-ವರ್ತನೆಯ ಕಾರ್ಯಕ್ರಮ. ಅಂದು, ಅಗ್ನಿಯನ್ನು ವಿಸರ್ಜನೆ ಮಾಡಿಸಿ, ದಂಟು- ಕೋಲನ್ನು ಅರಳಿ-ಕಟ್ಟೆಯಲ್ಲಿ ಇಟ್ಟು, ಹಣ್ಣು-ಕಾಯಿ ಮಾಡಬೇಕು (ಒಡೆದು ನೈವೇದ್ಯ ಮಾಡುವುದು). ಒಂದು ತಿಂಗಳ ನಂತರ , ತಿಂಗಳ-ದಂಟು ವರ್ತನೆ ಮಾಡಬೇಕು.
 • ತಿಂಗಳ ದಂಟು-ವರ್ತನೆ : ಪುರೋಹಿತರನ್ನು ಕರೆದು, ವಟುವಿಗೆ ಹೊಸ ಜನಿವಾರ ಹಾಕಿಸಿ, ಜನಿವಾರದಲ್ಲಿರುವ ಕೃಷ್ಣಾಜಿನವನ್ನು ಬಿಚ್ಚುವುದು, ಅರಳಿಕಟ್ಟೆಗೆ ಹೋಗಿ, ಹಣ್ಣು-ಕಾಯಿ ಮಾಡಿಕೊಂಡು ಬರುವುದು.
 • ನೂತನ ಉಪಾಕರ್ಮ : ಶ್ರಾವಣ ಹುಣ್ಣಿಮೆ ಅಥವಾ ಮಹೂರ್ತವಿರುವ ಹುಣ್ಣಿಮೆಯ ದಿನ ಪುರೋಹಿತರನ್ನು ಕರೆದು ಉಪಾಕರ್ಮಹೋಮ ಮಾಡಿ ಹೊಸ ಜನಿವಾರ ಹಾಕಬೇಕು. ನಂಟರಿಷ್ಟರನ್ನು ಕರೆದು ವಿಶೇಷ ಊಟ ಹಾಕುವುದು.

ಹೆಣ್ಣು ಮಗಳು ಋತುಮತಿಯಾದಾಗಿನ ಕಾರ್ಯಕ್ರಮ.ಸಂಪಾದಿಸಿ

 • ಹುಡುಗಿ ಹೆಣ್ಣಾದಳು (ಋತುವಾದಳು) ಎಂದು ಗೊತ್ತಾದ ತಕ್ಷಣ, ಅರಿಸಿನ -ಕುಂಕುಮ ಕೊಟ್ಟು ವೀಳೆಯದ ಎಲೆಯ ಮೇಲೆ ಲಿಂಬೆಹಣ್ಣು ಇಟ್ಟು ಕೊಡಬೇಕು. ತಲೆಗೆ ಎಣ್ಣೆ ಕೊಡಬೇಕು. ಹಸೆ ಹಾಸಬೇಕು. ಜಮಖಾನ ಹಾಸಿ ಐದು ಜನ ಮುತ್ತೈದೆಯರು ಸುತ್ತುವರಿದು ವೀಳಯದ ಎಲೆ ಪಟ್ಟಿ ಇಟ್ಟು ಹೆಣ್ಣನ್ನು ಕೂರಿಸಿ ಆರತಿ ಎತ್ತಬೇಕು. ಮೂರು ದಿನವೂ ಎರಡೂ ಹೊತ್ತು ಆರತಿ ಎತ್ತಬೇಕು. ಆರತಿ ಎತ್ತಲು ಊರಿನ ಹೆಣ್ಣುಮಕ್ಕಳನ್ನು ಕರೆಯಬಹುದು. ಪ್ರೀತಿ ಇದ್ದವರು ಅವಳಿಗೆ ಸಿಹಿ ತಿಂಡಿ ಮಾಡಿ ಬಡಿಸಬಹುದು.
 • ಹುಡುಗಿಯ ಅಣ್ಣ ಅಥವಾ ತಮ್ಮ ನ ಮೂಲಕ ಅಜ್ಜನ (ಸೋದರ ಮಾವನ ) ಮನೆಗೆ ಒಸಗೆ (ವರ್ತಮಾನ) ಕಳುಹಿಸಿ ನಾಲ್ಕನಯಯ ದಿನದ ಹಬ್ಬದ ಊಟಕ್ಕೆ ಕರೆದು ಬರಬೇಕು.
 • ನಾಲ್ಕನೆಯ ದಿನ ಬೆಳಿಗ್ಗೆ ಮುಂಚೆ ದಿನ ಸ್ನಾನ ಮಾಡಿಸ ಬೇಕು. ಸ್ನಾದ ನೀರಿಗೆ, ಹಲಸಿನ ಎಲೆ , ಮಾವಿನ ಎಲೆ, ಅರಿಸಿನ- ಕುಂಕುಮ ಹಾಕಿ , ಸೀಗೆಪುಡಿ ಹಾಕಿ ಸ್ನಾನ ಮಾಡಿಸಬೇಕು. (ಸ್ನಾನದ ಮಧ್ಯೆ ತಿಂಡಿ ತಿಂದರೆ ಎರಡನೇ ಸ್ನಾನ ಬೇಡ; ಇಲ್ಲದಿದ್ದರೆ ಎರಡನೇ ಸ್ನಾನ ಮಾಡಬೇಕು.) ಅವಳ ಮೈಲಿಗೆ ಬಟ್ಟೆಯನ್ನು ಬಡವರಿಗೆ ಕೊಡಬಹುದು ಇಲ್ಲವೇ ಶುಚಿ ಮಾಡಿ ಉಪಯೋಗಿಸಬಹುದು. ನಂತರ ಮಲಗಿದ ಜಾಗಕ್ಕೆ ಹಾಸಿಗೆ ಪೂಜೆ ಮಾಡಿಸಬೇಕು. ರಂಗೋಲಿ ಹಾಕಿ, ಅದಕ್ಕೆ ಅರಿಸಿನ-ಕುಂಕುಮ ಹಾಕಿ ಪೂಜೆ. ಅದಕ್ಕೆ ಬೆಲ್ಲ, ಸಕ್ಕರೆ, ಹಣ್ಣು, ಏನಾದರೂ ನೈವೇದ್ಯ ಮಾಡುವುದು. ನಂತರ ತುಳಸಿ ತೀರ್ಥ ತೆಗೆದು ಕೊಂಡು ಸೂರ್ಯ ಮಂಡಲ ಹಾಕಿ ಸೂರ್ಯ ನಮಸ್ಕಾರ ಮಾಡಬೇಕು. ಗೋಡೆಯ ಮೇಲೆ ಐದು ಅಥವಾ ಹದಿನಾರು (ಅರಿಸಿನ ಕುಂಕುಮ ನೀರಿನಲ್ಲಿ ಕಲಸಿ , ಅಂಗೈ ಅದ್ದಿ ಗೊಡೆಯ ಮೇಲೆ ಅಂಗೈ ಗುರುತುಗಳನ್ನು ತ್ರಿ ಕೋಣಾಕಾರದಲ್ಲಿ ಒತ್ತುವುದು.) ಚಟ್ಟು ಹೊಡೆಸಬೇಕು. ಆ ದಿನ ಹೂವಿನ ಗಿಡ - ಹಣ್ಣನ ಗಿಡಗಳನ್ನು ಮುಟ್ಟಿ ಸಬೇಕು.
 • ಮಧ್ಯಾಹ್ನ ಹಬ್ಬದ ಅಡಿಗೆ ಮಾಡಿ ಊಟ. ಸಂಜೆ ಹುಡುಗಿಗೆ ಹೂ-ಮುಡಿಸಿ, ಮಡಿಲು ತುಂಬಬೇಕು. ಹಿಂಗಾರ, ಅಕ್ಕಿ, ಕಾಯಿ, ಹಣ್ಣು, ಕಾಳು-ಬೇಳೆ, ಎಲೆ-ಅಡಿಕೆ, ಬಟ್ಟೆ ಹಾಕಿ ಮಡಿಲು ತುಂಬಬೇಕು. ಸೋದರಮಾವನ ಮನೆಯವರು ಸಿಹಿ ತಿಂಡಿ ಕೊಟ್ಟು, ಬಟ್ಟೆ ಉಡುಗೊರೆ ಮಾಡಬೇಕು. ಹುಡುಗಿ ಋತುಮತಿಯಾದಾಗಲೆಲ್ಲಾ, ಮೂರು ದಿನವೂ ಹೊಸಿಲ ಹೊರಗಡೆ ವಾಸ, ಊಟ, ನಿದ್ದೆ, ಅವರು ಊಟ-ತಿಂಡಿ ಮಾಡಿದ ಜಾಗ ಅವರೇ ಶುಚಿ ಮಾಡುವುದು (ಅಶೌಚ ಅಥವಾ ಮೈಲಿಗೆ ಆಚರಣೆ). ಮೂರುದಿನದ ನಂತರ ಬೆಳಿಗ್ಗೆ ಮುಂಚೆ ಶುದ್ಧಾಚರಣೆಯನ್ನು, ಮೊದಲ ಬಾರಿ ಮಾಡಿದಂತೆ (ಸ್ನಾನ, ಪೂಜೆ ಇತ್ಯಾದಿ) ಸರಳವಾಗಿ ಮಾಡಿಕೊಳ್ಳಬೇಕು. ಹನ್ನೆರಡು ಗಂಟೆಯ ನಂತರ ಎರಡನೇ ಸ್ನಾನ ಮಾಡಿದಾಗ ಪೂರ್ಣ ಶುದ್ಧಿಯಾದಂತೆ ಆಗುವುದು.
 • ಈ ಆಚರಣೆಗಳೆಲ್ಲಾ ಇಗ ಮೂವತ್ತು ವರ್ಷಕ್ಕೆ ಮೊದಲು ಇದ್ದ ಪದ್ದತಿ. ಈಗ ಹೆಣ್ಣು ಮಕ್ಕಳು ವಿದ್ಯಾವಂತರೂ, ಉದ್ಯೋಗಶೀಲರೂ ಆದ ಮೇಲೆ ಈ ಆಚರಣೆಗಳಲ್ಲಿ ನಂಬುಗೆಯೂ ಇಲ್ಲ, ಆಚರಿಸಲು ಸಾಧ್ಯವೂ ಇಲ್ಲ. (ಗ್ರಾಮಾಂತರದ) ಕೆಲವು ಸಂಪ್ರದಾಯ ಶೀಲರ ಮನೆಗಳಲ್ಲಿ ಇನ್ನೂ ಈ ಪದ್ದತಿಗಳು ಇರಬಹುದು. ಇದರ ಬಹಳಷ್ಟು ಆಚರಣೆಗಳು ಇತಿಹಾಸದ ಪುಟಕ್ಕೆ ಸೇರಿಹೋಗಿದೆ. ಆದ್ದರಿಂದ ಎಲ್ಲರೂ ಕಾಲಕ್ಕೆ ತಕ್ಕಂತೆ ನಡೆಯುವುದೇ ಸೂಕ್ತ.

ವಿವಾಹ -ಮದುವೆಸಂಪಾದಿಸಿ

 • ವಿವಾಹ -ಮದುವೆ
 • ವಿವಾಹ ಸಿದ್ಧತೆ :ಮದುವೆ ಎಂಬ ಈ ಪವಿತ್ರ ಕಾರ್ಯಕ್ರಮ ನಡೆಯುವುದು ಹೆಣ್ಣಿನ ಮನೆಯಲ್ಲಿ, ಅಥವಾ ಮದುಮಗಳ ತಂದೆ ತಾಯಿಯ ಜವಾಬ್ದಾರಿಯಲ್ಲಿ. ಮದುವೆಯ ಕಾರ್ಯಕ್ರಮದಲ್ಲಿಯೂ, ಮುಂಚಿನ ದಿನ ಮೊದಲು ನಾಂದಿ ಇಡುವ ಕಾರ್ಯಕ್ರಮ. ಬೆಳಿಗ್ಗೆ ಮುಂಚೆ ಗಣಪತಿ ಪೂಜೆ , ಮದುಮಗಳಿಗೆ ಅರಿಸಿನ- ಎಣ್ಣೆ, ಆರತಿ, ಮಂಗಳಸ್ನಾನ, ತಂದೆ- ತಾಯಿಯರೂ ಸ್ನಾಮಾಡಿ, ನಾಂದಿ ಹೋಮ, ಬಿತ್ತಕ್ಕಿ ದೀಪ ಇಡುವುದು. ನಂತರ ಮಂಗಳಾಕ್ಷತೆ ಕಲಸಿ ಊರು ಕರೆಯುವುದು. ಮನೆಯವರು ಅಥವಾ ಹತ್ತಿರದ ಸಂಬಂಧಿಕರು ಒಬ್ಬರು ಗಂಡಸರು ,ಒಬ್ಬರು ಹೆಂಗಸರು ಮಂಗಳಾಕ್ಷತೆ ಕೊಟ್ಟು ಊರಿನ ಎಲ್ಲಾ ಜಾತಿ-ಬಾಂಧವರನ್ನು (ಗ್ರಾಮಸ್ತರು) ದೊನ್ನೆ -ಬಾಳೆ, ತರಕಾರಿ ಹೆಚ್ಚುವುದು, ನಾಂದಿ, ವಿವಾಹದ ಎಲ್ಲಾ ಕಾರ್ಯಕ್ರಮಗಳಿಗೂ ಬರಬೇಕೆಂದೂ, ಸಹಕರಿಸಿ ಕಾರ್ಯವನ್ನು ನಡೆಸಿ ಕೊಡಬೇಕೆಂದು, ಗಂಡಸರನ್ನೂ, ಹೆಂಗಸರನ್ನೂ ಕರೆಯಬೇಕು. ಸಾಮಾನ್ಯವಾಗಿ ಇದನ್ನು ಮೊದಲೇ ಗ್ರಾಮಸ್ತರಿಗೆ ಹೇಳಿರಬೇಕು. ಇತರೆ ಜಾತಿಯವರಿಗೂ, ತೋರಣ ಕಟ್ಟುವವರಿಗೂ ಹೇಳಿರಬೇಕು.

ನಾಂದಿಯ ಸಮಯದಲ್ಲಿ ಹಿರಿಯರಿಗೂ ಸಂಬಂಧಿಕರಿಗೂ ಉಡುಗೊರೆ ಮಾಡಬೆಕು. ಅದೇ ದಿನಸ್ತ್ರೀ ಸಂಸ್ಕಾರ -ನಾಮಕರಣ ಇತ್ಯಾದಿ ಕಾರ್ಯಕ್ರಮವಿರುತ್ತದೆ. ರಾತ್ರಿ ಉದಕ ಶಾಂತಿ ಇರುತ್ತದೆ.

 • ಮದುವೆ ಕಾರ್ಯಕ್ರಮಕ್ಕೆ ಹೆಣ್ಣಿನ ಕಡೆಯವರು ಇಟ್ಟುಕೊಳ್ಳಬೇಕಾದ ಸಾಮಗ್ರಿಗಳು : ಅರಿಸಿನ ಕುಂಕುಮ, ಮಂಗಳಾಕ್ಷತೆ, ಅರಳುಕಾಳು, ತಂಬಿಟ್ಟು, ಪಂಚಕಜ್ಜಾಯ, ಬಿತ್ತಕ್ಕಿ-ದೀಪ (ಹರಿವಾಣ, ಕುಡಿಬಾಳೆ-೨, ಅಕ್ಕಿ, ಬೇಳೆಕಡಲೆ-ಹುರಿಕಡಲೆ, ಕಾಯಿ, ಎಲೆ-ಅಡಿಕೆ, ಹಣತೆ-ದೀಪ ), ಕುಡಿ ಬಾಳೆ, ಬಾಗಿನದ ವಸ್ತುಗಳು ( ಅಕ್ಕಿ, ಕಣ, ಕರಿಮಣಿ, ಕನ್ನಡಿ, ಹಣಿಗೆ, ಕಾಯಿ, ಅರಿಸಿನ, ಕುಂಕುಮ, ದುಡ್ಡು, ವೀಲೆಯದ ಎಲೆಪಟ್ಟಿ.) ಮದುಮಗಳಿಗೆ ಕೊಡುವ ವಸ್ತುಗಳನ್ನು ತುಂಬಿದ ಬಳುವಾರಿ ಪೆಟ್ಟಿಗೆ (ಬಳುವಾರಿ ಸಾಮಾನು ಪಟ್ಟಿಯನ್ನು ಪ್ರತ್ಯೇಕ ತಯಾರಿಸಿ ಇಟ್ಟುಕೊಂಡು ಅವನ್ನು ಪೆಟ್ಟಿಗೆಗೆ ಹಾಕಿ ಇಟ್ಟುಕೊಂಡಿರಬೇಕು) ಸೀರೆ, ಬಟ್ಟೆ, ಮದುವಣತಿಯ (ಮದು-ಮಕ್ಕಳಿಗಾಗಿ ವಿಶೇಷವಾಗಿ ತಯಾರಿಸಿದ್ದು) ಮೇಲುಹೊದಿಕೆ-ಹೊಲಿದು ಸಿದ್ಧಪಡಿಸಿದ್ದು, ಕನ್ನಡಿ ಕಳಸದ ಸಾಮಗ್ರಿಗಳು- ಎರಡು ಜೊತೆ (ಎಲೆ ಅಡಿಕೆ, ಕುಡಿಬಾಳೆ-ಎರಡು, ಅಕ್ಕಿ , ಕನ್ನಡಿ, ಕಳಸ, ದೀಪ,) ಎರಡೆರಡು (೪) ಕಣಗಿಲ ಹೂವಿನ ಮಾಲೆ, ವರನಿಗೆ ಕೊಡುವ ಮಧಪರ್ಕಕ್ಕೆ ಬೇಕಾದ ಬೆಳ್ಳಿ ಬಟ್ಟಲು, ಪಂಚೆ, ಪೇಟ, ಶಲ್ಯ, ಉಡುಗೊರೆ ವಸ್ತುಗಳು (ಬಂಗಾರ, ಬೆಳ್ಳಿಯವು, ಬಟ್ಟೆ ), ಪುರೋಹಿತರ ಪಟ್ಟಿಯ ಸಾಮಾನುಗಳು, ಸಾಕಷ್ಟು ಚಿಲ್ಲರೆ ನಾಣ್ಯ, ದಕ್ಷಣೆ, ಭೂರಿ ದಕ್ಷಿಣೆಗೆ ಹಣ , ನೆಂಟರು, ಸಂಬಂಧಿಕರಿಗೆ ಕೊಡಬೇಕಾದ ಉಡುಗೊರೆ ಸಾಮಾನುಗಳು, ಪಾಣಿಪಂಚೆಗಳು, ಟವಲುಗಳು, ಕೈ-ವಸ್ತ್ರಗಳು, (ತಲೆನೋವು, ಜ್ವರ, ವಾಂತಿ, ಬೇಧಿ, ಇವಗಳ ಚಿಕಿತ್ಸೆಗೆ ಬೇಕಾದ , ಪ್ರಥಮ ಚಿಕಿತ್ಸೆಗೆ ಬೇಕಾದ , ಸಾಮಾನ್ಯ ಔಷಧಿ ಮಾತ್ರೆಗಳು) ಇತ್ಯಾದಿ.
 • ಸಮಾವರ್ತನೆ : ಇದು ಮದುವೆಗೆ ಮುಂಚೆ ಗಂಡಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮ.
 • ನಾಂದಿ : ಮದುಮಗನಿಗೆ ಅರಿಸಿನ -ಎಣ್ಣೆ, ಆರತಿ, ನಂತರ ಸಂಸ್ಕಾರ(ಚೌಳದಿಂದ-ಉಪನಯನದ ವರೆಗೆ), ಮಂಗಳಸ್ನಾನ (?), ನಾಂದಿಯ ಹೋಮ-ಕಾರ್ಯಕ್ರಮ. ಅಕ್ಷತೆ ಕಲಸಿ ಊರು ಕರೆಯುವುದು , ಹಿರಿಯರಿಗೆ , ಸಂಬಂಧಿಕರಿಗೆ ಉಡುಗೊರೆ ಮಾಡುವುದು, ನಾಪಿತನಿಗೆ, ತೋರಣ ಕಟ್ಟಿದವರಿಗೆ ಮರ್ಯಾದೆ ಕೊಡುವುದು, ಊರಿನವರಿಗೆ ಮರ್ಯಾದೆ ಕೊಡುವುದು,
 • ನಂತರ ಸಮಾವರ್ತನೆಯ ಹೋಮ -ಅದರ ಕಾರ್ಯಕ್ರಮ, ಕಾಶೀಯಾತ್ರೆ ಮದುಮಗ ಹೊರಡುವ ಕಾರ್ಯಕ್ರಮ : ಕಾಶೀಯಾತ್ರೆಗೆ ಮದುಮಗ ಹೊರಡುವ ಮೊದಲು, ವರನ ತಾಯಿ ವರನಿಗೆ ಬಾಸಿಂಗವನ್ನು ಕಟ್ಟಿ, ಕಣ್ಣಿಗೆ, ಹಣೆಗೆ ಕಪ್ಪು ಹಚ್ಚಿ, ಕನ್ನಡಿ ತೋರಿಸಿ ಅಕ್ಷತೆ ಇಡಬೇಕು.

ಕಾಶಿ ಯಾತ್ರೆಗೆ ಹೋಗುವಾಗ ಸಾಲಾಗಿ ಏಳು ಕುಡಿ ಬಾಳೆ ಹಾಸಬೇಕು. ಅದರ ಮೇಲೆ ಅಕ್ಕಿ ಹಾಕಿ, ವರನು, ಕಾಶಿ ಗಂಟಿನೋಂದಿಗೆ ಅದರ ಮೇಲೆ ಏಳು ಹೆಜ್ಜೆ ನಡೆಯಬೇಕು. ಕಾಶಿ ಗಂಟಿನಲ್ಲಿ ಅಕ್ಕಿ, ಕಾಯಿ, ಬೇಳೆ, ತರಕಾರಿ ಇತ್ಯಾದಿ ಹಾಕಿ, ಹೊಸ ಪಾಣಿಪಂಚೆಯಲ್ಲಿ ಗಂಟು ಕಟ್ಟಿರಬೇಕು. ವರನಿಗೆ ಒಂದು ಜೊತೆ ಹೊಸ ಚಪ್ಪಲಿ (ಹವಾಯಿ) ಅಥವಾ ಅಡಿಕೆ ಹಾಳೆಯದು ಹಾಕಬೇಕು. ಒಂದು ಛತ್ರಿಯನ್ನು ಇಟ್ಟುಕೊಳ್ಳಬೇಕು; ವರನು ಏಳು ಹೆಜ್ಜೆ ನಡೆಯುವಾಗ, ವರನ ಅಜ್ಜ (ತಾಯಿಯ ತಂದೆ) ಅಥವಾ ಸೋದರಮಾವ ಛತ್ರಿಯ ನೆರಳು ತೋರಿಸಬೇಕು.

 • ವರನು ಇಲ್ಲಿಯ ವಿದ್ಯಾಭ್ಯಾಸ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೊರಡುವ ಶಾಸ್ತ್ರ.

ಕಾಶಿ ಈಗಲೇ ಹೋಗುವುದು ಬೇಡ, ವಿವಾಹ ಮಾಡಿಕೊಂಡು ನಂತರ ಗೃಹಸ್ಥ ನಾಗಿ ಹೋಗಬಹುದು, ನಾನು ನಿನಗೆ ಹೆಣ್ಣನ್ನು ಕೊಡುತ್ತೇನೆ. ನನ್ನ ಸೋದರಿ ಮದುವೆಗೆ ಸಿದ್ದಳಾಗಿದ್ದಾಳೆ, ಎಂದು ವಧುವಿನ ಅಣ್ಣ ಅಥವಾ ತಮ್ಮ ವರನನ್ನು ತಡೆಯಬೇಕು. ವಧುವಿನ ಕಡೆಯವರು ಬರುವಾಗ ಮಂಗಳಾಕ್ಷತೆ, ಕನ್ಯಾರ್ಥನೆಯ ತೆಂಗಿನ ಕಾಯಿ, ಉಡುಗೊರೆಗೆ, ಒಂದು ಶಲ್ಯ ಅಥವಾ ಷರಟಿನ ಬಟ್ಟೆ ತರಬೇಕು. ವರನ ಗಂಟನ್ನು ಇಳಿಸಿದ ನಂತರ ವರನಿಗೆ ಅವನ್ನು ಕೊಡಬೇಕು. ಈ ಕಾಶಿ ಗಂಟನ್ನು ಇಳಿಸಿದ ವಧುವಿನ ಕಡೆಯವರಿಗೆ ವರನ ಕಡೆಯವರು ದಕ್ಷಿಣೆ ಮತ್ತು ಬಟ್ಟೆಯ ಉಡುಗೊರೆ ಮಾಡಬೇಕು. ವರನಿಗೆ ಅವನ ತಾಯಿ ಆರತಿ ಎತ್ತಬೇಕು. ವರನು ನಂತರ ಹಿರಿಯರೆಲ್ಲರಿಗೂ ನಮಸ್ಕಾರ ಮಾಡಬೇಕು. ಮಧ್ಯಾಹ್ನದ ಬ್ರಾಹ್ಮಣ ಭೋಜನಕ್ಕೆ ವರನೇ ಹಸ್ತೋದಕ ಹಾಕಬೇಕು.

 • ರಾತ್ರಿ ಉದಕ ಶಾಂತಿ ಕಾರ್ಯಕ್ರಮ ವಿರುತ್ತದೆ. ಪುರೋಹಿತರ ಕಾರ್ಯಭಾರ.

ವರನ ಕಡೆಯವರು ವಿವಾಹಕ್ಕೆ ಹೋಗುವಾಗ ಸಿದ್ಧತೆ :

 • ವರನ ಕಡೆಯವರು ಮದುವೆಗೆ ಹೆಣ್ಣಿನ ಮನೆಗೆ ದಿಬ್ಬಣ ತೆಗೆದುಕೊಂಡು ಹೋಗುವಾಗ, ತಮ್ಮ ಜೊತೆಯಲ್ಲಿ ಬಾಸಿಗ, ತೊಂಡಿಲು, ಅಕ್ಷತೆ, ಅರಿಸಿನ-ಕುಂಕುಮ, ಕಾಯಿ, ಅಕ್ಕಿ, ವಧುವಿಗೆ, ಸೀರೆಗಳು -ಬಂಗಾರ(ಒಡವೆ), ಹೂವು, ಎರಡು ಕಣಗಿಲ ಹೂಮಾಲೆ, ಬೇಳೆಕಡಲೆ, ಕೊಬ್ಬರಿ, ಎಲೆ-ಅಡಿಕೆ, ವರನ ಉಪಯೋಗಕ್ಕೆ ಬೇಕಾದ ಬೆಳ್ಳಿಯ, ಸಾಮಾನು,ಇತ್ಯಾದಿ ತೆಗೆದುಕೊಂಡು ಹೋಗಬೇಕು.

ಬೀಗಿತ್ತಿಯರು,ನಂಟಲಿ, ವಧು, ಉದ್ದ ಕುಂಕುಮ ಹಚ್ಚಬೇಕು, ಮೇಲು ಹೊದಿಕೆ ಇರಬೇಕು. ಬೀಗರು, ವರನಿಗೆ, ಹಣೆಗೆ ತಿಲಕ, ತಲೆಗೆ ಪೇಟ, ಶಲ್ಯ, ಕೊರಳಿಗೆ ಸರ ಇರಬೇಕು.

 • ವಿವಾಹದ ಕಾರ್ಯಕ್ರಮಗಳು:
 • ಮದುವೆಗೆ ಮುಂಚೆ ವಧುವನ್ನು ದೇವರ ಮುಂದೆ ಕೂರಿಸಿ ಗೌರಿ ಪೂಜೆ ಮಾಡಿಸಬೇಕು. ಸೋದರಮಾವನ ಹೆಂಡತಿಗೆ, ದೊಡ್ಡಮ್ಮನಿಗೆ, ವಧುವಿನಿಂದ ಗೌರಿ ಬಾಗಿನ ಕೊಡಿಸಬೇಕು. ವಧು ಮಂಟಪಕ್ಕೆ ಹೊರಡುವ ಮುಂಚೆ, ಹಿರಿಯರಿಗೆ-ಸಂಬಂಧಿಕರಿಗೆ ನಮಸ್ಕಾರ ಮಾಡಬೇಕು. ಸೋದರ ಮಾವನ ಹೆಂಡತಿಗೆ ಕನ್ನಡಿ ಕಳಸ ಹಿಡಿದುಕೊಳ್ಳಲು ಕೊಡಬೇಕು. ಸೋದರ ಮಾವ ವಧುವನ್ನು ಮಂಟಪಕ್ಕೆ ಕರದು ತರಬೇಕು.
 • ವರನ ಸ್ವಾಗತ :
 • ವರ ಬಾಗಿಲಿಗೆ ಬಂದ ತಕ್ಷಣ , ಪುರೋಹಿತರು ಹಾನ ಮಾಡಿ ಚೆಲ್ಲಿ , ಕಾಯಿ ಸುಳಿಯ ಬೇಕು. ವರನ ಅಕ್ಕ ಅಥವಾ ತಂಗಿಗೆ ಅರಿಸಿನ ಕುಂಕುಮ ಹಚ್ಚಿ ಕನ್ನಡಿ ಕಳಸ ಕೊಡಬೇಕು. ವರನಿಗೆ ಆರತಿ ಎತ್ತಬೇಕು. ವಧವಿನ ತಂದೆ ವರನ ಕೈ ಹಿಡಿದು ವಿವಾಹ ಮಂಟಪಕ್ಕೆ ಕರೆದು ತರಬೇಕು. ವರ ಒಳಗೆ ಬರುವಾಗ , ನಡುಮನೆಯಲ್ಲಿ ವಧುವಿನ ತಾಯಿ ಕನ್ನಡಿ ಕಳಸ ಹಿಡಿದು ನಿಂತಿರಬೇಕು. ನಂತರ ಅದನ್ನು ಸೋದರ ಮಾವನ ಹೆಂಡತಿಗೆ ಒಪ್ಪಿಸಬೇಕು.
 • ವರೋಪಚಾರ ;
 • ವರನನ್ನು ಮಂಟಪದಲ್ಲಿ ಕೂರಿಸಿ ಮಂತ್ರ ಭಿನ್ನ ಮಾಡಿ ವರೋಪಚಾರ ಮಾಡಬೇಕು. ವರನಿಗೆ ತಮ್ಮ ಶಕ್ತಿಯ ಅನುಸಾರ ಬಟ್ಟೆ , ಬಂಗಾರ, ಬೆಳ್ಳಿಯನ್ನು ವಧುವಿನ ಸೋದರರಿಂದ ಕೊಡಿಸಬೇಕು. ವರನ ಪೂಜೆಯನ್ನು ವಧುವಿನ ತಂದೆ ತಾಯಿ ಮಾಡಬೇಕು. ವರನ ಪಾದ ತೊಳೆದು ಹಾಲು , ತುಪ್ಪ ಕುಡಿಸಬೇಕು. ನಂತರ ವರ ಮತ್ತು ನೆಂಟಲಿಯನ್ನು ದೇವರ ಮುಂದೆ ಕರೆದು ತರಬೇಕು. ಹಾಲು-ತುಪ್ಪ ಕುಡಿಸಿದ ಬೆಳ್ಳಿ ಲೋಟವನ್ನು ವರನಿಗೇ ಕೊಡಬೇಕು. ವರ, ತಾವು ತಂದ , ಸೀರೆ, ಬಂಗಾರ, ಕೊಬ್ಬರಿ, ಬೇಳೆಕಡಲೆ, ತೊಂಡಿಲು, ಮುಡಿ-ತೊಂಡಿಲು, ಎಲ್ಲವನ್ನೂ ಪೂಜೆ ಮಾಡಿ, ಗೌರಿಪೂಜೆ ಮಾಡುತ್ತಿರುವ ವಧುವಿಗೆ ಕಳಿಸಿಕೊಡಬೇಕು. ವಧುವಿಗೆ ತೊಂಡಿಲು ಕಟ್ಟಿ ಹೂವನ್ನು ಮಡಿಸಬೇಕು. ವರನನ್ನು ಮಂಟಪಕ್ಕೆ ಕರೆತಂದು ತೆರೆ (ಪರದೆ) ಹಿಡಿದ ನಂತರ, ವಧುವನ್ನು ಕರೆದು ತರಬೇಕು. ವಧುವನ್ನು ಮಂಟಪಕ್ಕೆ ಕರೆದು ತರುವ ಕೆಲಸ . ವಧುವಿನ ಸೋದರ ಮಾವನದು. ತೆರೆಯನ್ನು, ಎರಡೂ ಕಡೆಯ ಅಳಿಯಂದಿರು ಹಿಡಿಯಬೇಕು. ಮುಹೂರ್ತಕ್ಕೆ ಸರಿಯಾಗಿ, ಮಾಲೆ ಹಾಕಿಸುವುದು, ಕರಿಮಣಿ ಕಟ್ಟಿಸುವದು, ಧಾರೆ (ಕನ್ಯಾದಾನ) ಎರೆಸುವುದು ಪುರೋಹಿತರ ಕಾರ್ಯಕ್ರಮ. ವಧೂವರರಿಗೆ ಅಕ್ಷತೆ ಇಡಿಸಿ, ಕರ್ಣಾಭರಣವನ್ನು ಸೋದರತ್ತೆಯವರಿಂದ ಕೊಡಿಸಬೇಕು.

ಕರಿಮಣಿ ಕಟ್ಟುವಾಗ ಸಾಕ್ಷಿಯ ಸಂಕೇತವಾಗಿ ಮತ್ತು ಆಶೀರ್ವಾದದ ಸಂಕೇತವಾಗಿ, ಐದು ಜನರಿಗೆ ತಾಳಿಯನ್ನು ಮುಟ್ಟಿಸಬೇಕು - (ಎರಡು ಜನ ಗಂಡಿನ ಕಡೆಯವರು .ಮೂರುಜನ ಹೆಣ್ಣಿನ ಕಡೆಯವರು.) ಧಾರೆಯ ಅಕ್ಕಿಯನ್ನು ಹಾಕಲು ವಧುವಿನ ಹತ್ತಿರದ ಸಂಬಂಧಿಕರಾದ ದಂಪತಿಗಳು ಬರಬೇಕು. ಧಾರೆ ಅಕ್ಕಿ ಹಾಕಿದವರು ದಕ್ಷಿಣೆಯನ್ನು ಧಾರೆ ಗಿಂಡಿಗೆ ಹಾಕಬೇಕು.

 • ಕರಿಮಣಿ ಕಟ್ಟಿದ ನಂತರ ಸಪ್ತಪದಿ ತುಳಿದು , ಒಂದುಗೂಡಿಸಿ ಎಲ್ಲರ ಎದುರಿನಲ್ಲಿ, ಹೆಣ್ಣು ಒಪ್ಪಿಸಬೇಕು. ವಧುವಿನ ತಾಯಿ ಮತ್ತು ಓರಗಿತ್ತಿ ಸೇರಿ, ಮದುಮಕ್ಕಳಿಗೆ ಆರತಿ ಎತ್ತಬೇಕು.
 • ಲಾಜಾ ಹೋಮ : ಇದಕ್ಕೆ ಬೇಕಾಗುವ ಸಾಮಗ್ರಿಗಳು;

ಕಲ್ಲು ಗುಂಡು, ಮಾವಿನ ಚನಕೆ, ಅರಳಕಾಳು, ಇತರೆ ಹೋಮಕ್ಕೆ ಬೇಕಾದ ಸಾಮಗ್ರಿಗಳು, ಪುರೋಹಿತರ ಮಾರ್ಗದರ್ಶನದಂತೆ ಹೋಮದ ಕಾರ್ಯಕ್ರಮಗಳು ನಡೆಯುತ್ತವೆ. ವಧುವಿನ ಸಹೋದರರು ವಧುವಿನ ಕೈಗೆ ಹೊದಲು ಹೊಯ್ಯಬೇಕು (ಅರಳು ಕಾಳು ಹಾಕಬೇಕು). ಕತ್ತಲಾಗುತ್ತಿದ್ದಂತೆ ವಧೂವರರು ಅರುಂಧತಿ ನಕ್ಷತ್ರ ನೋಡಿ, ನಾಗೋಲಿ ಹೋಮದ ನಂತರ ಮಾರನೇ ದಿನ ಬೆಳಿಗ್ಗೆ ಅರಿಸಿನ-ಎಣ್ಣೆ , ಓಕಳಿ, ಬೀಗಿತ್ತಿ ಅರಿಸಿನ-ಎಣ್ಣೆ ಮಾಡಬೇಕು.

 • ಅರಿಸಿನ -ಎಣ್ಣೆ : ವಧೂವರರಿಗೆ, ಐದು ಎಲೆ ಅಡಿಕೆ ಮಡಿಸಿ ಕೊಡಬೇಕು. ವಗಟು ಹೇಳಿಸಿ ಪರಸ್ಪರ ಹೆಸರು ಹೇಳಿಸಬೇಕು. ವರ ವಧುವಿನ ತಲೆಬಾಚಿ ಬಾಚಣಿಗೆಯನ್ನು ದೂರ ಎಸೆಯಬೇಕು, ಅವಳಿಗೆ ಕನ್ನಡಿ ತೋರಿಸಿ, ಕುಂಕುಮ ಹಚ್ಚಿ, ಹೂ ಮುಡಿಸಬೇಕು. ಪರಸ್ಪರ ಅರಿಸಿನ ಎಣ್ಣೆ, ಲೇಪನ ಮಾಡಬೇಕು, ನಂತರ ವಧೂವರರಿಗೆ ಆರತಿ ಎತ್ತಬೇಕು.
 • ಬೀಗಿತ್ತಿ ಅರಿಸಿನ ಎಣ್ಣೆ : ಮದುಮಕ್ಕಳ ಜೊತೆ ಎರಡೂ ಕಡೆಯ ಬೀಗಿತ್ತಿಯರು ಜೊತೆ ಕುಳಿತು ಅರಿಸಿನ ಎಣ್ಣೆ ಮಾಡಬೇಕು. ಒಗಟಿನ ಮೂಲಕ ಬೀಗಿತಿಯರಿಂದ ಗಂಡಂದಿರ ಹೆಸರು ಹೇಳಿಸಬೇಕು. ತಮಾಷೆಗೆ ಆಭರಣಗಳನ್ನು ಮಾಡಿ ಬೀಗಿvgigತ್ತಿಯರಿಗೆ ಹಾಕಬೇಕು. ಅವರಿಗೆ ಉಡುಗೊರೆ ಮಾಡಿ ಆರತಿ ಎತ್ತಬೇಕು.
 • ಓಕಳಿ: ಕಡಾಯದಲ್ಲಿ ನೀರನ್ನು ತುಂಬಿ , ಅರಿಸಿನ- ಕುಂಕುಮದ ನೀರನ್ನು ಅದಕ್ಕೆ ಕದಡಿ, ಕಡಾಯದಲ್ಲಿ ಉಂಗುರ ಹಾಕಿ (ವರನ ಉಂಗುರ), ಹುಡುಕಿಸಿ ನೆಂಟಳಿ ಕೈಯಲ್ಲಿ ಓಕಳಿ ಆಡಿಸಬೇಕು. ನಂತರ ಸ್ನಾನ.
 • ನಂತರ ವರನ ತಾಯಿ, ವಧುವನ್ನು ಸೊಸೆ ಮಡಿಲಿಗೆ ಕರೆಯುವ ಶಾಸ್ತ್ರ. ಅಂದರೆ ಸೊಸೆಯನ್ನು ಅತ್ತೆ ತೊಡೆಯ ಮೇಲೆ ಕೂರಿಸಿಕೊಂಡು, ಬಂಗಾರದ ಒಡವೆಯನ್ನು ಸೊಸೆಗೆ ಉಡುಗೊರೆ ಕೊಡಬೇಕು. ವಧುವಿನ ಕಡೆಯವರು ಬೀಗರಿಗೆ ಉಡುಗೊರೆ ಮಾಡಬೇಕು.
 • ಗೃಹ ಪ್ರವೇಶಕ್ಕೆ ವಧುವನ್ನು ವರನ ಮನೆಗೆ ಕಳುಹಿಸಿ ಕೊಡುವಾಗ ವಧುವಿನ ತಂದೆ, ಮಗಳನ್ನು ತೊಡೆಯ ಮೇಲೆ ಕೂಡಿಸಿಕೊಂಡು, ಮಡಿಲು ತುಂಬಿ ಕಳುಹಿಸಿ ಕೊಡಬೇಕು, (ಮಡಿಲು ತುಂಬುವುದು: ಅಕ್ಕಿ, ಕಾಯಿ, ದುಡ್ಡು, ಲಿಂಬೆಹಣ್ಣು ). ಬಳುವಾರಿ(ಬಳುವಳಿ) ಪೆಟ್ಟಿಗೆಯನ್ನು ಕೊಡಬೇಕು.
 • ಬಳುವಾರಿ ಪೆಟ್ಟಿಗೆಗೆ ಹಾಕುವ ಸಾಮಗ್ರಿಗಳು : ಅಡುಗೆಗೆ ಬೇಕಾದ ಪಾತ್ರೆಗಳು, ಅರಿಸಿನ-ಕುಂಕುಮ, ಮಂಗಳಾಕ್ಷತೆ, ದೀಪದ ಗಿಣಗಲು, ಹೂ, ಹಣ್ಣು, ಕಾಯಿ, ಕೊಬ್ಬರಿ, ತರಕಾರಿ, ಒಂದು ದೇವತಾಮೂರ್ತಿ, ಹಿಂಗಾರ, ಕಲಸಿದ ಅರಿಸಿನ, ಹೂವಿನ ಗಿಡ, ಮಣೆ (ಕೂರುವ ಚಾಪೆ), ಜಮಖಾನ, ಆಟದ ಸಾಮಾನು.

ಗೃಹ ಪ್ರವೇಶಸಂಪಾದಿಸಿ


 • ವಧೂವರರು ವರನ ಮನೆಗೆ ಬಂದ ತಕ್ಷಣ, ಅವರನ್ನು ವಾದ್ಯದ ಮೂಲಕ ಬರಮಾಡಿ-ಕೊಳ್ಳಬೇಕು. ಚಪ್ಪರದಲ್ಲಿ ಮುಂಬಾಗಿಲ ಎದುರಿನಲ್ಲಿ ಆಸನವನ್ನು ಹಾಕಿ ಕೂರಿಸಬೇಕು. ವರನ ಮನೆಯ ಹೆಣ್ಣು ಮಕ್ಕಳು , ವಧೂವರರ ಕಾಲನ್ನು ತೊಳೆಚಿiಬೇಕು. ಅಲ್ಲೇ ಹಣ್ಣುಮಕ್ಕಳಿಗೆ ವರನು, ಉಡುಗೊರೆ ಕೊಡಬೇಕು. ವಧೂವರರು ಒಳಗೆ ಬರುವಾಗ, ಅವರ ತಲೆಯ ಮೇಲೆ ಅರಳು ಬೀರಿ(ಹಾಕಿ) ಆರತಿ ಎತ್ತಬೇಕು. ನಂತರ ಮುಹೂರ್ತಕ್ಕೆ ಸರಿಯಾಗಿ ಪುರೋಹಿತರು ಹೊಸ್ತಿಲ ಪೂಜೆ ಮಾಡಿಸುತ್ತಾರೆ. ನಂತರ ವಧು ಬಲಗಾಲನ್ನು ಮುಂದಿಟ್ಟು ಅಕ್ಕಿ ತುಂಬಿದ ಸಿದ್ದೆ (ಸೇರಿನ ಪಾತ್ರೆ) ಯನ್ನು ಬಲಗಾಲಲ್ಲಿ ಒದೆದು (ಕಾಲು ಹೆಬ್ಬೆರಳಿನಿಂದ ಸಾವಕಾಶ ಸಿದ್ದೆಗೆ ತಾಗಿಸಿ ಅದನ್ನು ಕೆಡವಬೇಕು) ಒಳಗೆ ಹೋಗಬೇಕು. ಆಗ ತನ್ನ ಮಡಿಲಲ್ಲಿ ಇರುವ ಅಕ್ಕಿಯನ್ನು ಬೀರುತ್ತಾ ಹೋಗಿ ದೇವರಿಗೆ ನಮಸ್ಕಾರ ಮಾಡಬೇಕು. ವಧೂವರರಿಗೆ ಕುಡಿಯಲು ಹಾಲು ಕೊಡಬೇಕು. ನಂತರ ವಧುವಿನಿಂದ ಗೋಡೆಯ ಮೇಲೆ ೫/೬/೮/೧೬ ಚಟ್ಟು ಹೊಡೆಸಬೇಕು. ಚಟ್ಟು ಹೊಡೆದ ಸೊಸೆಗೆ (ವಧುವಿಗೆ), ಅತ್ತೆ ತನ್ನ ಸೀರೆಯನ್ನು ಕೊಡಬೇಕು . ಬಳುವಳಿಯಾಗಿ ಕೊಟ್ಟ ತರಕಾರಿಯನ್ನು ಅವಳಿಂದ (ಸೊಸೆಯಿಂದ)ಹೆಚ್ಚಿಸಬೇಕು. ಪಾಯಸ ತೊಳೆಸುವ ಶಾಸ್ತ್ರ ಮಾಡಿಸುವುದು,
 • ಗರ್ಭಾದಾನ ಹೋಮ : ಪುರೋಹಿತರ ಕಾರ್ಯಕ್ರಮ.
 • ಬಾಗಿನ ಕೊಡಿಸುವ ಶಾಸ್ತ್ರ (ಕಾರ್ಯಕ್ರಮ ) : ವಧುವಿನ ಸೋದರಮಾವನ ಹೆಂಡತಿ ವಧುವನ್ನು ಮಣೆಯ ಮೇಲೆ ಕೂರಿಸಿ ತಲೆ ತುಂಬಾ ಹೂ -ಮುಡಿಸಬೇಕು, ವಧು ಮುತ್ತೈದೆಯರಿಗೆ ಅರಿಸಿನ-ಕುಂಕುಮ ಕೊಟ್ಟು ನಮಸ್ಕಾರ ಮಾಡಬೇಕು. ಆ ಐದು ಜನ ಮುತ್ತೈದೆಯರಿಗೆ (ಹೆಣ್ಣಿನ ಕಡೆಯವರು ಎರಡು, ಗಂಡಿನ ಕಡೆಯವರು ಮೂರು ) ವಧೂವರರು ಬಾಗಿನ ಕೊಡುವುದು. ಬಾಗಿನ ತೆಗೆದುಕೊಂಡ ಮುತ್ತೈದೆಯರು ವಧುವಿಗೆ ಮಡಿಲು ತುಂಬಿ, ಆರತಿ ಎತ್ತಿ ಹರಸಬೇಕು.
 • ಹೆಣ್ಣು ಒಪ್ಪಿಸುವ ಕಾರ್ಯಕ್ರಮ : ಪುರೋಹಿತರ ಮಾರ್ಗದರ್ಶನದಲ್ಲಿ ಶಾಸ್ತ್ರ ರೀತಿ ಸಭೆಯಲ್ಲಿ ಸಭಾಸಾಕ್ಷಿಯಾಗಿ ಈ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯುವುದು. ಪುರೋಹಿತರು, ಸಂಬಂಧಿಕರು, ಮತ್ತು ಗ್ರಾಮಸ್ತರ ಎದುರಿನಲ್ಲಿ , ವಧುವಿನ ತಂದೆ, ತಾಯಿ, ಸೋದರ ಮಾವ, ಅತ್ತೆ, ಅಕ್ಕ-ಭಾವಂದಿರು, ವಧುವನ್ನು ವರನಿಗೆ, ಅವನ ತಂದೆ- ತಾಯಂದಿರಿಗೆ ಒಪ್ಪಿಸಿ ಕೊಡಬೇಕು.
 • ನಂತರ ವಿಶೇಷ ಭೋಜನ -ಸತ್ಕಾರ. ಮಧ್ಯಾಹ್ನಾನಂತರ ಆರತಿ -ಅಕ್ಷತೆ ಕಾರ್ಯಕ್ರಮ, ಪ್ರಮುಖರಿಗೆ, ಸೀಮೆಗೆ ವೀಳಯ ಕೊಡುವುದು .
 • ಶೋಭನ : ರಾತ್ರಿ ಸುಸಜ್ಜಿತ ಮತ್ತು ಸಿಂಗರಿಸಿದ ಕೊಠಡಿಯಲ್ಲಿ ದೀಪ ಹಚ್ಚಿ ಇಡಬೇಕು. ವಧುವಿನಿಂದ ಸಂಬಂಧಿಕರಿಗೆ ಕಣ, ಕೈ -ಬಾಗಿನ(ಕಾಯಿ) ಕೊಡಿಸಬೇಕು. ನಂತರ ದೇವರ ದೀಪದಿಂದ ಒಂದು ಬತ್ತಿಯನ್ನು ಕೋಣೆಯಲ್ಲಿರುವ ದೀಪಕ್ಕೆ ಹಾಕಿಸಬೇಕು. ಹಿರಿಯರೆಲ್ಲರಿಗೂ ನಮಸ್ಕಾರ ಮಾಡಿಸಿ, ವರನ ಅಕ್ಕ ತಂಗಿಯರು, ವಧೂವರರನ್ನು ಕೊಠಡಿಗೆ ಕಳಿಸಬೇಕು.
 • ಮಾರನೇದಿನ ವಧು, ಮುಂಜಾವಿನಲ್ಲೇ ಎದ್ದು ಬಾಗಿಲು-ಸಾರಿಸಿ ರಂಗವಲ್ಲಿ ಹಾಕಬೇಕು. ಸ್ನಾನದ ನಂತರ, ಗಂಗೆಯನ್ನು ತುಂಬಿ, ದೇವರಿಗೆ ಗಂಧವನ್ನು ತೆಯಿದು, ದೇವರ ಪೂಜೆಗೆ ಅಣಿ ಮಾಡಬೇಕು.
 • ಮರುವಾರಿ : ವರ ಮತ್ತು ವಧುವಿನ ಮನೆಯಲ್ಲಿ ಗೃಹಪ್ರವೇಶದ ನಂತರ ಒಂದೊಂದು ದಿನ ಮರುವಾರಿ (ವಿಶೇಷ ಭೋಜನ) ಕಾರ್ಯಕ್ರಮ ನಡೆಸಬೇಕು. ವಿವಾಹ- ಗೃಹಪ್ರವೇಶ ಕಾರ್ಯಗಳಿಗೆ ಬಾರದಿದ್ದವರು, ಹತ್ತಿರದ ಬಂಧು-ಬಾಂಧವರನ್ನು ಕರೆದು ಔತಣ ಹಾಕಿ ವಧೂವರರಿಗೆ ಆರತಿ-ಅಕ್ಷತೆ ಮಾಡುವುದು.

ಹಿರಿಯರ ದಿವಸ ವಿಷ್ಣು ಶ್ರಾದ್ಧ ಆಚರಣೆಸಂಪಾದಿಸಿ


 • (೧೬ನೆಯ ಸಂಸ್ಕಾರಕ್ಕೆ ಬದ ಲಾಗಿ ಹಿರಿಯರ ದಿನ ಆಚರಣೆ ಯ ವಿಷಯ ಕೊಟ್ಟಿದೆ)
 • ೧. ಸಲಕರಣೆ - ಸಂಗ್ರಹ : ದೊನ್ನೆ ೧೬, ಕುಡಿಬಾಳೆ ೧೬, ಎಳ್ಳು ೧ ಮುಷ್ಠಿ , ತೊಳೆದ ಅಕ್ಕಿ ೧ ಸೆರೆ, ಬಿಳಿ ಹೂವು, ತುಳಸಿ, ದರ್ಭೆ, ತಾಲಿ ಸೌಟುಗಳು, ಹರಿವಾಣಗಳು, ತಂಬಿಗೆ, ಕಾಲು ತೊಳೆಯಲು ಹರಿವಾಣ, ಹಣ್ಣು, ಕಾಯಿ, ಎಲೆ-ಅಡಿಕೆ (ವೈದಿPರಿಗೆ ಫಲ ತಾಬೂಲಕ್ಕೆ- ನೈವೇದ್ಯಕ್ಕೆ), ಚಿಲ್ಲರೆದುಡ್ಡು, ದಕ್ಷಿಣೆದುಡ್ಡು, ರಂಗೋಲಿ, ಜನಿವಾರ (ವೈದಿಕರಿಗೆ ದಾನ ಕೊಡಲು)
 • ೨. ತಯಾರಿಸ ಬೇಕಾದ ಭಕ್ಷ್ಯ ಗಳು : ತೊವ್ವೆ, ವಡೆ, ಹೋಳಿಗೆ (ಸಿಹಿ ಭಕ್ಷ್ಯ), ಸುಟ್ಟವ್ವು, ಕಡುಬು (ಇಡ್ಡಲಿ), ಕಂಚಿ -ಶುಂಠಿ ಉಪ್ಪಿನಕಾಯಿ, ಮಜ್ಜಿಗೆ ಹುಳಿ, ಕಾಯಿ ಚಟ್ನಿ, ಗೊಜ್ಜು, ಸಾಸ್ವೆ, ಪಲ್ಯ, ಬೆಲ್ಲದ ಗುಳ, ಇತರೆ -ತುಪ್ಪ, ಹಾಲು, ಮೊಸರು.
 • ೩. ಆಚರಣೆ : ಶ್ರಾದ್ಧದ ಹಿಂದಿನ ದಿನ, ಮನೆಚಿiನ್ನು ಶುಚಿಮಾಡಿ, ವೈದಿಕರಿಗೆ ಉಡಲು ಕೊಡಬೇಕಾದ, ಮಡಿ ಪಂಚೆ, ಶಲ್ಯಗಳನ್ನು ತೊಳೆದು ಮಡಿಯಲ್ಲಿ (ಯಾರೂ ಮುಟ್ಟದಂತೆ ) ಒಣಗಿಸಿರಬೇಕು. ಮುಂಚಿನ ದಿನವೂ ಬೆಳಿಗ್ಗೆ ಮುಸುರೆ-ತಿಂಡಿ ತಿನ್ನದೆ, ಮಡಿಯಲ್ಲೇ ಊಟ ಮಾಡಬೇಕು. ಊಟಕ್ಕೆ ಮುಂಚೆ ಮಡಿಯಲ್ಲಿ ಇಡ್ಡಲಿ ಹಿಟ್ಟು ರುಬ್ಬಿ, ಉಪ್ಪಿನ ಕಾಯಿಗೆ , ಪಲ್ಲೆಗೆ, ಪುಡಿ ಮಾಡಿಕೊಳ್ಳ ಬೇಕು. ಶ್ರಾದ್ಧಮಾಡುವವರು ರಾತ್ರಿ ವಪ್ಪತ್ತು (ಉಪವಾಸ ಅಥವಾ ಫಲಾಹಾರ ) ಮಾಡಬೇಕು.
 • ೪. ಶ್ರಾದ್ಧದ ದಿನ ಹೆಂಗಸರು, ತಲೆ ಸ್ನಾನ ಮಾಡಿ, ಮುಸುರೆ ತಿನ್ನದೆ, ಅಡಿಗೆ ಮಾಡಬೇಕು. ವೈದಿಕರಿಗೆ ತಾಮ್ರದ ಪಾತ್ರೆಯಲ್ಲಿ ಅನ್ನ (ಚರುವು) ಮಾಡಬೇಕು. ಆ ಪಾತ್ರೆಯಿಂದಲೇ ಸ್ವಲ್ಪ ಅನ್ನ ತೆಗೆದು ಹಾಲು ಬೆಲ್ಲ ಹಾಕಿದೊನ್ನೆಯಲ್ಲಿ ಪಾಯಸ ಮಾಡಬೇಕು.
 • ೫. ಶ್ರಾದ್ಧ ಮಾಡುವ ಯಜಮಾನ, ವೈದಿಕರು ಬರುವುದಕ್ಕೆ ಮೊದಲೇ ಮಡಿ ಉಟ್ಟು ದೇವರ ಪೂಜೆ ಮಾಡಿ ಕೇವಲ ಹಣ್ಣಿನ ನೈವೇದ್ಯ ಮಾಡಿರಬೇಕು. ತೀರ್ಥ - ಪ್ರಸಾದ ತೆಗೆದು ಕೊಳ್ಳಬಾರದು . ಸಂಗ್ರಹಗಳನ್ನು ಸರಿಯಾಗಿ ಜೋಡಿಸಿಟ್ಟು ಕೊಂಡಿರಬೇಕು. ವೈದಿಕರು ಬಂದ ತಕ್ಷಣ ಅವರಿಗೆ ಕಾಲು ತೊಳೆಯಲು ಅಥವಾ ಸ್ನಾನ ಮಾಡಲು ನೀರು ಕೊಟ್ಟು ನಂತರ ಉಡಲು ಮಡಿ ಬಟ್ಟೆ ಕೊಡುವುದು. ನಂತರ ಶ್ರಾದ್ಧದ ಕಾರ್ಯಕ್ರಮ.
 • ೬. ಶ್ರಾದ್ಧದ ಕಾರ್ಯಕ್ರಮದ ಕೊನೆಯ ಹಂತ, ವೈದಿಕರ ಊಟ, ದಕ್ಷಿಣೆ ಕೊಡುವುದು, ನಮಸ್ಕಾರ, ಪಿತೃ -ವಿಸರ್ಜನೆ, ತರ್ಪಣವಿಧಿ, ವೈದಿಕರ ವಿಶ್ರಾಂತಿ ವ್ಯವಸ್ಥೆ, ಬಂಧುಗಳೊಡನೆ ಊಟ.
 • ೭. ವೈದಿಕರಿಗೆ ಒಬ್ಬೊಬ್ಬರಿಗೆ ನಾಲ್ಕು ಕುಡಿಬಾಳೆಯನ್ನು ಹಾಕಬೇಕು. ದೇವರ ಎಡೆಗೆ ಎರಡು ಕುಡಿಬಾಳೆ ಹಾಕಬೇಕು (ನಂತರ ಎರಡು ಕುಡಿಬಾಳೆ ಯಿಂದ ಮುಚ್ಚಬೇಕು). ಪ್ರತಿ ಎಡೆಗೆ ನಾಲ್ಕು-ನಾಲ್ಕು ದೊನ್ನೆಗಳನ್ನು ಇಡುವುದು, ಕ್ರಮವಾಗಿ, ಎಲ್ಲಾ ಪಾಕಾರ್ತನೆ-ಭಕ್ಷ್ಯಗಳನ್ನು ದೇವರ ಎಡೆಯಿಂದ ಪ್ರಾರಂಭಿಸಿ ಎಲ್ಲಾ ಎಡೆಗಳಿಗೂ ಬಡಿಸುವುದು. ಅನ್ನದ ಚರಿಗೆ (ಪಾತ್ರೆ)ಯನ್ನೇ ತಂದಿಟ್ಟು ಹಿತ್ತಾಳೆ ಸೌಟಿನಿಂದಲೇ ಬಡಿಸುವುದು. ಕೆಳಗಿನ ದೊನ್ನೆಗೆ ತುಪ್ಪ, ೨ನೆಯದಕ್ಕೆ ಮೆಣಸಿನ ಸಾರು, ೩ನೆಯದಕ್ಕೆ -ಕ್ಕೆ ಹಾಲು, ೪ನೆಯದಕ್ಕೆ -ಕ್ಕೆ ಮೊಸರು, ಈ ಕ್ರಮದಲ್ಲಿ ಬಡಿಸುವುದು. ದೇವರ ಎಡೆಗೆ ಹೆಚ್ಚು ಅನ್ನ ಬಡಿಸಬೇಕು. ವೈದಿಕರಿಗೆ ಹಿತ್ತಾಳೆ ಸೌಟಿನಲ್ಲಿ ಒದೊಂದೇ ಸೌಟು (ತುಂಬಾ) ಅನ್ನ ಬಡಿಸಬೇಕು. ಅಗತ್ಯವಿದ್ದಷ್ಟು ನಂತರ ಬಡಿಸ ಬಹುದು. ವೈದಿಕರ ಊಟದ ನಂತರ ಅವರಿಗೆ ಕೈ ತೊಳೆಯಲು ಮಡಿಯಲ್ಲಿ ಕಾಯಿಸಿದ ಬಿಸಿನೀರು ಕೊಡಬೇಕು. ಆನಂತರ ಉಳಿದ ಕಾರ್ಯಕ್ರಮ.
 • ೮. ಶ್ರಾದ್ಧ ಮಾಡಿದವರು ರಾತ್ರಿ ಉಪವಾಸ (ಒಪ್ಪತ್ತು- ಫಲಾಹಾರ) ಮಾಡಬೇಕು.ಆಧಾರ :ಸಂಪಾದಿಸಿ

 • ಸಂಗ್ರಹ : ಸೌ. ಪ್ರತಿಭಾ ಸುರೇಶ್ ಈಳಿ, ಸಾಗರ ತಾಲ್ಲೂಕು ;(ಟಿಪ್ಪಣಿ ಮತ್ತು ಸಂಪಾದನೆ-ಬಿ.ಎಸ್.ಚಂದ್ರಶೇಖರ ಸಾಗರ.)
ನೋಡಿಸಂಪಾದಿಸಿ