ಉಪನಯನ
ಉಪನಯನವು ಉಪಕ್ರಮಣ ಕ್ರಿಯಾವಿಧಿ ಮತ್ತು ಇದರ ಮೂಲಕ ಆಧ್ಯಾತ್ಮಿಕ ಜ್ಞಾನದ ವರ್ಗಾವಣೆಯನ್ನು ಸಂಕೇತಿಸಲು ಉಪಕ್ರಮಿಸುವವರಿಗೆ ಒಂದು ಪವಿತ್ರ ದಾರವನ್ನು ತೊಡಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಯಜ್ಞೋಪವೀತ(ಜನಿವಾರವು ಒಬ್ಬರಿಗೆ ಸಂಧ್ಯಾವಂದನೆ ಮತ್ತು ಗಾಯತ್ರಿ ಮಂತ್ರ ಮಾಡಲು ಕೊಟ್ಟ ಅನುಮತಿಯನ್ನು ಸಂಕೇತಿಸಲು ತೊಟ್ಟಿಕೊಳ್ಳಲಾದ ಪ್ರತ್ಯೇಕ ಹತ್ತಿಯ ಎಳೆಗಳಿಂದ ರಚಿತವಾದ ಒಂದು ತೆಳುವಾದ ಪವಿತ್ರೀಕರಿಸಿದ ಹುರಿ. ಧರಿಸುವವನಿಗೆ ಪವಿತ್ರ ಯಜ್ಞೋಪವೀತವನ್ನು ತೊಡಿಸುವ ಉಪನಯನ ಸಮಾರಂಭವನ್ನು ಹಲವುವೇಳೆ ಒಂದು ಸಾಮಾಜಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಮಹತ್ವದ ವಿಧಿಯೆಂದು (ಸಂಸ್ಕಾರ) ಪರಿಗಣಿಸಲಾಗುತ್ತದೆ.
ಉಪನಯನ ವಿಧಿ
ಬದಲಾಯಿಸಿಉಪನಯನವೆಂದರೆ ಆಚಾರ್ಯರ ಸಮೀಪಕ್ಕೆ ಉಪದೇಶಕ್ಕಾಗಿ ಆಗಮಿಸುವುದು (ಇನಿಷಿಯೇಷನ್). ಇದರಲ್ಲಿ ಮುಖ್ಯವಾದುದು ಗಾಯತ್ರಿ ಮಂತ್ರೋಪದೇಶ ಮತ್ತು ಬ್ರಹ್ಮಚರ್ಯವ್ರತ ದೀಕ್ಷೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರೆಂಬ ತ್ರಿವರ್ಣದವರಿಗೆ ಮಾತ್ರ ಈ ಸಂಸ್ಕಾರವುಂಟು. ವಟುವಿನ ವಯಸ್ಸನ್ನು ಮೂರು ವರ್ಣದವರಿಗೂ ಪ್ರತ್ಯೇಕವಾಗಿ ನಿಬಂಧಿಸಲಾಗಿದೆ. ಅವರ ಉಡುಗೆ ತೊಡುಗೆಯಲ್ಲೂ ವ್ಯತ್ಯಾಸವುಂಟು. ಈ ಸಂಸ್ಕಾರದಲ್ಲಿ ವಟುವಿಗೆ ಯಜ್ಞೋಪವೀತಧಾರಣೆ ಮಾಡಿಸಲಾಗುತ್ತದೆ. ಅನಂತರ ಬ್ರಹ್ಮಚಾರಿಯಾಗಿ ಆತ ಧರ್ಮವನ್ನು ಪಾಲಿಸಬೇಕು, ಭಿಕ್ಷೆಯಿಂದ ಜೀವಿಸಬೇಕು. ತ್ರಿಸಂಧ್ಯಾಕಾಲಗಳಲ್ಲಿ ಗಾಯತ್ರಿ ಮಂತ್ರಪೂರ್ವಕ ಸಂಧ್ಯಾವಂದನೆಯನ್ನಾಚರಿಸಬೇಕು. ಅರ್ಘ್ಯನ್ನು ಕೊಡಬೇಕು. ವೇದಾಧ್ಯ ಯನವೇ ವಟುವಿನ ಪ್ರಥಮ ಕರ್ತವ್ಯ. ಗುರುಕುಲವಾಸ, ಗುರುಶುಶ್ರೂಷೆ, ಗುರುಪತ್ನಿಯಲ್ಲಿ ಭಕ್ತಿ-ಇವುಗಳನ್ನು ವಿಧಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಕಾಲಾವಧಿಯನ್ನು ಗೊತ್ತು ಮಾಡಿದಂತೆ ತೋರುವುದಿಲ್ಲ. ಭಾರದ್ವಾಜರು 75 ವರ್ಷ ಬ್ರಹ್ಮಚಾರಿಗಳಾಗಿದ್ದರೂ ವೇದಗಳ ಅಧ್ಯಯನವನ್ನು ಅಲ್ಪ ಪ್ರಮಾಣದಲ್ಲಿ ಮಾತ್ರ ಮುಗಿಸಿದ್ದರಂತೆ. ಪ್ರಾಚೀನ ಕಾಲದಲ್ಲಿ ತಂದೆಯೇ ಗಾಯತ್ರೀ ಮಂತ್ರೋಪದೇಶ ಮಾಡುತ್ತಿದ್ದಿರಬಹುದೆಂಬ ಅಭಿಪ್ರಾಯವಿದೆ. ತೈತ್ತಿರೀಯ ಸಂಹಿತೆ, ಬ್ರಾಹ್ಮಣಗಳ ಕಾಲಕ್ಕೆ ವಟುವನ್ನು ಗುರುಕುಲವಾಸಕ್ಕೆ ಕಳುಹಿಸುವ ಸಂಪ್ರದಾಯ ಬಂದಿರಬಹುದು. ಉದ್ದಾಲಕ ಆರುಣಿ ತಾನೇ ಬ್ರಹ್ಮ ವಿದ್ಯಾಪಾರಂಗತನಾಗಿದ್ದರೂ ತನ್ನ ಪುತ್ರ ಶ್ವೇತಕೇತುವನ್ನು ಮತ್ತೊಬ್ಬ ಗುರುವಿನಲ್ಲಿಗೆ ಕಳುಹಿಸಿಕೊಟ್ಟ ಕಥೆ ಇದೆ.
ಉಪನಯನ ಸಂಸ್ಕಾರವನ್ನು ಆಪಸ್ತಂಬ ಗೃಹ್ಯ ಸೂತ್ರದಲ್ಲಿ ವಿವರವಾಗಿ ಹೇಳಿದೆ. ಧರ್ಮಸೂತ್ರಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯಲ್ಲಿ ಸ್ತ್ರೀಯರಿಗೂ ಉಪನಯನವಿತ್ತೆಂದು ಹೇಳಲಾಗಿದೆ. ಉಪನಯನಕ್ಕೂ ಮುಂಚೆ ಅಕ್ಷರಾಭ್ಯಾಸದೊಂದಿಗೆ ವಿದ್ಯಾರಂಭ ಸಂಸ್ಕಾರ ನಡೆದಿರಬೇಕು. ಉಪನಯನದಿಂದ ಪ್ರೌಢ ವಿದ್ಯಾಭ್ಯಾಸವನ್ನು ಪ್ರಾರಂಭಿಸಲಾಗುತ್ತದೆ. ಇತರ ಸಂಸ್ಕೃತಿಗಳಲ್ಲೂ ಉಪನಯನದಂತೆಯೇ ದೀಕ್ಷಾಪದ್ಧತಿ ಇದೆ. ಸಾಮಾಜಿಕವಾಗಿ ತನ್ನ ಕರ್ತವ್ಯಗಳನ್ನು ಅರಿಯಬೇಕಾದ ಆವಶ್ಯಕತೆಯನ್ನು ವಿದ್ಯಾರ್ಥಿಗೆ ಆಗ ತಿಳಿಸಲಾಗುತ್ತದೆ. ಉಪನಯನದ ಅನಂತರ ಅತಿ ಕಠಿಣವಾದ ಶಿಕ್ಷಣವನ್ನು ಕೊಡಲಾಗುವುದು. ಸಾಮಾಜಿಕ ಜೀವನ ಸುಗಮವಾಗುವುದಕ್ಕೆ ವಿದ್ಯಾಭ್ಯಾಸ ಕ್ರಮ ಎಷ್ಟು ಮಹತ್ತರವಾಗಿರಬೇಕೆಂಬುದನ್ನು ಭಾರತೀಯರು ಚೆನ್ನಾಗಿ ಅರಿತಿದ್ದರು. ಮಾನವಜೀವನ, ಪ್ರಾಣಿಜೀವನದ ಮಟ್ಟಕ್ಕೆ ಇಳಿಯದಿರಬೇಕಾದರೆ ಮಾನವನ ಬೌದ್ಧಿಕ ಬೆಳೆವಣಿಗೆಯೇ ಕಾರಣ. ಮಾನಸಿಕ ಶಿಕ್ಷಣದೊಂದಿಗೆ ಆತ್ಮಬಲ ಮತ್ತು ದೈಹಿಕಬಲಗಳ ಶಿಕ್ಷಣಕ್ಕೂ ಅಷ್ಟೇ ಗಮನಕೊಟ್ಟು ಗುರು ವಿದ್ಯಾರ್ಥಿಯನ್ನು ತರಬೇತು ಮಾಡಬೇಕು. ಇದಕ್ಕಾಗಿ ಗುರುವಿನ ಲಕ್ಷಣಗಳು ಹೇಗಿರಬೇಕೆಂಬ ನಿಬಂಧನೆಗಳನ್ನೂ ಉಪನಯನ ಸಂಸ್ಕಾರದಲ್ಲಿ ತಿಳಿಸಲಾಗಿದೆ. ತನ್ನ ಮಹತ್ತರವಾದ ಹೊಣೆಯನ್ನು ಉಪಾಧ್ಯಾಯ ನಿರ್ವಹಿಸಲೇಬೇಕು. ಉಪನಯನದಿಂದ ಎರಡನೆಯ ಜನ್ಮ ಪ್ರಾಪ್ತವಾಗುವುದೆಂಬ, ಅಂದರೆ ಬಾಲಕ ದ್ವಿಜನಾಗುವನೆಂಬ ಅಭಿಪ್ರಾಯವಿದೆ. ಶಿಷ್ಯನ ಶೀಲವನ್ನು ರೂಪಿಸುವ ಗುರು ಶೀಲವಂತನಾಗಿರಬೇಕು; ಶಿಷ್ಯನ ಮೇಲೆ ಪ್ರಭಾವ ಬೀರುವಷ್ಟು ಯೋಗ್ಯನಾಗಿರಬೇಕು. ಬ್ರಾಹ್ಮಣನಿಗೆ ವಸಂತ ಋತುವಿನಲ್ಲೂ ಕ್ಷತ್ರಿಯನಿಗೆ ಗ್ರೀಷ್ಮ ಋತುವಿನಲ್ಲೂ ವೈಶ್ಯನಿಗೆ ವರ್ಷ ಋತುವಿನಲ್ಲೂ ಅವರ ಸಾತ್ತ್ವಿಕ, ರಾಜಸ ಗುಣಗಳಿಗನುಸಾರವಾಗಿ ಉಪನಯನವನ್ನು ಮಾಡಬೇಕೆಂದು ನಿಯಮವಿದೆ. ಬ್ರಾಹ್ಮಣರು ಶಮದಮಗಳಿಂದ ತೇಜೋವಂತನಾಗಿ ಬಾಳಬೇಕೆಂಬುದು ಒಟ್ಟು ಅಭಿಪ್ರಾಯ.[೧] [೨] [೩]