ಗರ್ಭಾಧಾನ

(ಗರ್ಭಾದಾನ ಇಂದ ಪುನರ್ನಿರ್ದೇಶಿತ)

ಗರ್ಭಾಧಾನ (ಅಕ್ಷರಶಃ: ಗರ್ಭದಲ್ಲಿ ಬೀಜವನ್ನು ಇರಿಸುವುದು) ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳಲ್ಲಿ ಮೊದಲನೆಯದು.

ಇತಿವೃತ್ತ

ಬದಲಾಯಿಸಿ

ಗೃಹ್ಯ ಸೂತ್ರಗಳ ಪ್ರಕಾರ, ಈ ಸಂಸ್ಕಾರದ ಆಚರಣೆಯ ಆರಂಭದಲ್ಲಿ, ಪತ್ನಿಯನ್ನು ಯೋಗ್ಯವಾಗಿ ಅಲಂಕರಿಸಲಾಗುತ್ತದೆ ಮತ್ತು ಪತಿಯು ನೈಸರ್ಗಿಕ ಸೃಷ್ಟಿಗಳ ಉಪಮೆಗಳು ಮತ್ತು ತನ್ನ ಪತ್ನಿಗೆ ಗರ್ಭಧಾರಣೆಯಲ್ಲಿ ಸಹಾಯಮಾಡಲು ದೇವತೆಗಳಿಗೆ ಆಮಂತ್ರಣಗಳಿರುವ ವೈದಿಕ ಶ್ಲೋಕಗಳನ್ನು ಪಠಿಸುತ್ತಾನೆ. ನಂತರ ಪುರುಷ ಹಾಗು ಸ್ತ್ರೀ ಬಲಗಳ ಜಂಟಿ ಕ್ರಿಯೆಗಳ ರೂಪಕಗಳಿರುವ ಶ್ಲೋಕಗಳ ಜೊತೆಗೆ ಆಲಿಂಗನ ಆರಂಭವಾಗುತ್ತದೆ ಮತ್ತು ಪತಿಯು ತನ್ನ ಫಲೀಕರಣ ಸಾಮರ್ಥ್ಯವನ್ನು ವ್ಯಕ್ತಪಡಿಸುವ ಶ್ಲೋಕಗಳೊಂದಿಗೆ ತನ್ನ ಶರೀರವನ್ನು ಉಜ್ಜುತ್ತಾನೆ. ಗರ್ಭಾ ಎಂದರೆ ಬಸಿರು ಹಾಗು ದಾನ ಎಂದರೆ ಕೊಡುವುದು ಎಂದರ್ಥ.ಅಕ್ಷರಶಃ ಗರ್ಭ ಸಂಪತ್ತು ಗಳಿಸುವುದು ಎಂದರ್ಥ.

ಗರ್ಭಧಾರಣೆಯ ಕ್ರಮ

ಬದಲಾಯಿಸಿ
  • ವೇದಪೂರ್ವ ಕಾಲದಲ್ಲಿ ಪ್ರಜೋತ್ಪತ್ತಿ ವಿಷಯದ ಬಗ್ಗೆ ಜನರ ಧೋರಣೆ ಏನಿದ್ದಿತೋ ತಿಳಿಯದು. ಮಾನವ ಜಾತಿಯ ಆದಿಕಾಲದಲ್ಲಿ ಗರ್ಭಧಾರಣೆ ಮತ್ತು ಪ್ರಸೂತಿಗಳಿಗೆ ಧಾರ್ಮಿಕ ಪ್ರಾಮುಖ್ಯವಿರಲಿಲ್ಲ. ವಿಷಯೋಪಭೋಗದ ಇಚ್ಛೆಯಾದ ಕೂಡಲೇ ಸ್ತ್ರೀಪುರುಷರಿಬ್ಬರೂ ಒಂದು ಕಡೆ ಕೂಡಿ ಪರಸ್ಪರ ಸಮಾಗಮ ಹೊಂದಿ ಇಂದ್ರಿಯಸುಖವನ್ನು ಅನುಭವಿಸುತ್ತಿದ್ದರು.
  • ಇಂಥ ಸಮಾಗಮದಿಂದ ಸಂತಾನ ಪ್ರಾಪ್ತಿಯಾಗುವುದೆಂಬ ತಿಳಿವಳಿಕೆ ಉಂಟಾದದ್ದು ಕೇವಲ ಅನಂತರ, ನಿಧಾನವಾಗಿ. ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಮುನ್ನಡೆ ಸಾಧಿಸಿದಂತೆ ಆದಿಮಾನವನಿಗೆ ಗರ್ಭಾಧಾನವನ್ನು ಒಂದು ನಿರ್ದಿಷ್ಟ ಸಂಸ್ಕಾರವನ್ನಾಗಿ ಆಚರಿಸುವ ಅಗತ್ಯ ಕಂಡುಬಂತು. ಮನೆ, ಗೃಹಸ್ಥಾಶ್ರಮ, ಸಂತಾನಾಕಾಂಕ್ಷೆ ಇವಕ್ಕೆ ದೈವ ಕೃಪೆ ಅಗತ್ಯ ಎಂಬ ವಿಷಯದಲ್ಲಿ ಮೂಡಿದ ಅವನ ಶ್ರದ್ಧೆ ಈ ಸಂಸ್ಕಾರಕ್ಕೆ ಆಧಾರವಾಗಿದೆ.
  • ಇದರ ಬಗೆಗೆ ಸಂಹಿತೆಗಳಲ್ಲಿ ಪ್ರತ್ಯೇಕ ಉಲ್ಲೇಖವಿಲ್ಲದಿದ್ದರೂ ಗರ್ಭಧಾರಣೆ ಮತ್ತು ಗರ್ಭದೇವತೆಗಳ ಬಗ್ಗೆ ಮಂತ್ರಗಳ ಉಲ್ಲೇಖವನ್ನು ಋಗ್ವೇದ ಮತ್ತು ಅಥರ್ವವೇದ ಸಂಹಿತೆಗಳಲ್ಲಿ ಕಾಣಬಹುದು. ಸೂತ್ರ ಪುರ್ವಕಾಲದಲ್ಲಿ ಇದೊಂದು ಸಾಧಾರಣ ಸಂಸ್ಕಾರವಾಗಿತ್ತು. ಪತಿಯಾದವ ಋತುಸ್ನಾತ ಪತ್ನಿಯನ್ನು ಒಪ್ಪಿಕೊಂಡು, ಗರ್ಭದ ಸ್ಥಾಪನೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಿ, ಆಕೆಯ ಸಮಾಗಮವನ್ನು ಮಾಡುತ್ತಿದ್ದ.
  • ಸೂತ್ರಗಳ ಕಾಲಕ್ಕೆ ಇದೇ ಧಾರ್ಮಿಕ ಸಂಸ್ಕಾರದ ಸ್ವರೂಪವನ್ನು ತಾಳಿತು. ಗೃಹ್ಯಸೂತ್ರದಲ್ಲಿ ಇದರ ಬಗ್ಗೆ ವ್ಯವಸ್ಥಿತ ವಿವರಗಳು ಸೇರಿವೆ. ಋತುಸ್ನಾತ ಸ್ತ್ರೀಯ ಐದನೆಯ ದಿನದಿಂದ ಹದಿನಾರನೆಯ ದಿನದ ಗಡುವಿನ ಶುಭದಿನದಲ್ಲಿ ಇದನ್ನು ನಡೆಸಬೇಕು. ಇದಕ್ಕೆ ಯೋಗ್ಯವಾದ ತಿಥಿ, ನಕ್ಷತ್ರ, ಅವುಗಳ ಶುಭಾಶುಭ ಫಲಗಳ ಬಗ್ಗೆ ಮನು, ಯಾಜ್ಞವಲ್ಕ್ಯ ಇತ್ಯಾದಿ ಸ್ಮೃತಿಕಾರರೂ ಧರ್ಮಸಿಂಧು, ನಿರ್ಣಯಸಿಂಧುಗಳ ಗ್ರಂಥಕರ್ತೃಗಳೂ ವಿವೇಚಿಸಿದ್ದಾರೆ.

ಗರ್ಭಧಾರಣೆಯ ವಾಸ್ತು

ಬದಲಾಯಿಸಿ
  • ಗಂಡು ಮಗುವನ್ನು ಇಚ್ಛಿಸುವಾತ ಹೆಂಡತಿ ರಜಸ್ವಲೆಯಾದ ಮೊದಲನೆಯ ದಿನದಿಂದ ೪, ೬, ೮, ೧೦, ೧೨ ಈ ದಿನಗಳಲ್ಲೂ ಸ್ತ್ರೀಸಂತಾನವನ್ನು ಬಯಸುವಾತ ೫, ೭, ೯, ೧೧ ನೆಯ ದಿನಗಳಲ್ಲೂ ಗರ್ಭಾದಾನ ಮಾಡಬೇಕು. ಸತ್ಸಂತತಿಪ್ರಾಪ್ತಿಗಾಗಿ ಸತಿ-ಪತಿಯರ ಹೃದಯಗಳು ಪ್ರೀತಿಯಿಂದ ಕೂಡಿರತಕ್ಕದ್ದು ಅವಶ್ಯ. ಭಯ, ಕ್ರೋಧ, ದ್ವೇಷ, ಮಾತ್ಸರ್ಯಗಳು ಗರ್ಭವನ್ನು ಕೆಡಿಸುತ್ತವೆ.
  • ಪ್ರಥಮ ರಜೋದರ್ಶನ ಕಾಲದ ತಿಥಿನಕ್ಷತ್ರಗಳಿಗನುಗುಣವಾಗಿ ಗರ್ಭಾಧಾನದ ಶುಭಾಶುಭಗಳನ್ನು ನಿರ್ಣಯಿಸುವುದುಂಟು. ದುಷ್ಟಯೋಗದಲ್ಲಿ ರಜೋದರ್ಶನವಾಗಿದ್ದರೆ ಆ ದೋಷ ಪರಿಹಾರಾರ್ಥವಾಗಿ ಭುವನೇಶ್ವರೀ ಶಾಂತಿಯನ್ನು ಕೈಕೊಳ್ಳುತ್ತಾರೆ. ರಾತ್ರಿ, ಸಮಾಗಮ ಪೂರ್ವದಲ್ಲಿ ಸಂಹಿತಗ್ರಂಥದಲ್ಲಿನ ಮಂತ್ರೋಚ್ಚಾರಣೆ ಮಾಡುತ್ತಾರೆ. ಇತ್ತೀಚೆಗೆ ಗರ್ಭಾದಾನ ಸಂಸ್ಕಾರವನ್ನು ಮದುವೆಯ ಜೊತೆಯಲ್ಲೇ ನಡೆಸುತ್ತಿದ್ದಾರೆ.
  • ಗರ್ಭಾದಾನದ ದಿವಸ ರಾತ್ರಿಯಲ್ಲಿ ಪತಿ-ಪತ್ನಿಯರನ್ನು ಪಕ್ಕಪಕ್ಕದಲ್ಲಿ ಕೂಡಿಸಿ ಪತ್ನಿಯ ಕಡೆಯಿಂದ ಪತಿಯ ಪೂಜೆ ಮಾಡಿಸುತ್ತಾರೆ. ಪತ್ನಿಗೆ ಉಡಿ ತುಂಬುತ್ತಾರೆ. ಹತ್ತಿರ ಸಮಯಗಳನ್ನಿಟ್ಟು ದೀಪ ಉರಿಸುತ್ತಾರೆ. ಪಕ್ಕದಲ್ಲಿ ವಿವಿಧ ಫಲಾಹಾರ ತುಂಬಿದ ತಟ್ಟೆಯನ್ನೂ ತಾಂಬೂಲ ಕರಂಡಕವನ್ನೂ ಇಟ್ಟಿರುತ್ತಾರೆ. ಪತಿ-ಪತ್ನಿಯರಿಗೆ ಆರತಿ ಮಾಡುತ್ತಾರೆ. ಇದು ಲೌಕಿಕ ವಿಧಿ.

ಸಾಹಿತ್ಯ

ಬದಲಾಯಿಸಿ

ವಿದ್ವಾಂಸರು ಗರ್ಭಾಧಾನದ ವಿಧಿಯ ಪತ್ತೆಹಚ್ಚಲು ವೇದಗಳ ಸ್ತೋತ್ರಪಠಣ ಮಾಡುತ್ತಿದ್ದರು. ಪುನರಾವರ್ತಿತ ಪ್ರಾರ್ಥನೆಯನ್ನು ವಂಶಸ್ಥರು ಮತ್ತು ಸಮೃದ್ಧಿಗಾಗಿ ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ.