ಹೆಣ್ಣು ಮಕ್ಕಳಿಗೆ ಮದುವೆಯಾಗಿ ಪತಿಗೃಹಕ್ಕೆ ಹೋಗಿ ಗರ್ಭಿಣಿಯಾದ ೭ ನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ. ಇದು ಪತಿಯ ಮನೆಯಲ್ಲಿ ಜರಗುತ್ತದೆ.

ಮುನ್ನುಡಿ ಬದಲಾಯಿಸಿ

೭ನೇ ತಿಂಗಳು ಪ್ರಾರಂಭವಾದಾಗ ಪುರೋಹಿತರು ಇದ್ದಲ್ಲಿಗೆ ಹೋಗಿ ಸೀಮಂತ ದಿನ ಮುಹೂರ್ತವನ್ನು ನಿಶ್ಚಯ ಮಾಡಬೇಕು. ಸೀಮಂತಕ್ಕೆ ಬೇಕಾಗುವ ಸೀರೆ, ಚಿನ್ನ ಆಭರಣಗಳನ್ನು ಸಿದ್ಧತೆ ಮಾಡಬೇಕು. ಹೆಣ್ಣಿನ ತಂದೆ ತಾಯಿ ಕುಟುಂಸಬಸ್ಥರಿಗೆ ನಾವು ನಿಶ್ಚಯ ಮಾಡಿದ ದಿನವನ್ನು ಹೇಳಬೇಕು. ನಮ್ಮ ಬಂಧು ಬಳಗದವರಿಗೂ ಆ ದಿನವನ್ನು ತಿಳಿಸಬೇಕು. ಗರ್ಭಿಣಿಯಾಗುವುದು ಒಂದು ನೈಸರ್ಗಿಕ ಕ್ರಿಯೆ. ಗರ್ಭಿಣಿಗೆ ಏನೇನೋ ಆಸೆಗಳು ಉಂಟಾಗುತ್ತದೆ. ಅವುಗಳಲ್ಲಿ ವಿವಿಧ ಭಕ್ಷ್ಯಗಳನ್ನು ತಿನ್ನುವ ಆಸೆಯೇ ಮುಖ್ಯವಾದುದು. ಗಂಡನ ಮನೆಯಲ್ಲಿ ಗರ್ಭಿಣಿಗೆ ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸುತ್ತಾರೆ.ಬಡಿಸಲು ಬೇಕಾದ ಭಕ್ಷ್ಯಗಳನ್ನು (ಚಕ್ಕುಲಿ, ಲಾಡು, ಹೋಳಿಗೆ ಎಲ್ಲಪ್ಪ ಮುಂತಾದುವು) ಸಿದ್ಧತೆಪಡಿಸಬೇಕು. ಪುರೋಹಿತರು ಹೇಳಿದ ದಿವಸ ಹುಡುಗಿ ಬೆಳಿಗ್ಗೆ ಸ್ನಾನ ಮಾಡಿ ನಿತ್ಯದ ಉಡುಪಿನಲ್ಲಿ ಇರಬೇಕು. ಹಣೆಗೆ ಕುಂಕುಮದ ತಿಲಕ ಇಟ್ಟು ತಲೆಗೆ ಒಂದು ಚೆಂಡು ಮಲ್ಲಿಗೆ ಇಡಬೇಕು.

ಸೀಮಂತಕ್ಕೆ ಹಾಕುವಾಗ ಒಳ್ಳೆಯ ಸೀರೆ ಮತ್ತು ಆಭರಣವನ್ನು ಗಂಡನ ಮನೆಯವರು ಕೊಡುತ್ತಾರೆ. ಅದಕ್ಕೆ ಹೂ ಸೀರೆ ಕೊಡುವುದು ಎನ್ನುತ್ತಾರೆ. ಹೂವು ಸೀರೆ ಕೊಡುವ ಮುಹೂರ್ತದಲ್ಲಿ ಹುಡುಗಿತಾಯಿ ಅಕ್ಕ ತಂಗಿ ಕುಟುಂಬಸ್ಥರನ್ನು ಕರೆದು ಅವರ ಸಮಕ್ಷಮದಲ್ಲಿ ಕೊಡುತ್ತಾರೆ.

ಸಂಪ್ರದಾಯ ಬದಲಾಯಿಸಿ

ಎಲ್ಲರೂ ಕೂಡಿ ಸಾನಾದಿಗೆಯಲ್ಲಿ ದೀಪ ಬೆಳಗಿಸಬೇಕು. ದೇವರ ಫೋಟೋಗೆ ಹೂವು ಹಾಕಿ ಹುಡುಗಿಯ ಅತ್ತೆ ಇಲ್ಲವೆ ನಾದಿನಿ ಹರಿವಾಣದಲ್ಲಿ ಸೀಮಂತಕ್ಕೆ ತಂದ ಎರಡು ಸೀರೆ( ಅದರಲ್ಲಿ ಒಂದು ಬೆಳೆ ಬಾಳುವ ಸೀರೆ ಮತ್ತೊಂದು ಸಾಮನ್ಯವಾದುದು) ಸೀಮಂತಕ್ಕೆ ಮಾಡಿದ ಚಿನ್ನಾಭಾರಣ, ಒಂದು ಅಟ್ಟೆ ಮಲ್ಲಿಗೆ. ಒಂದು ಹಾಳೆ ಕರೆದು ದೇವರಿಗೆ ಕೈ ಮುಗಿಯಬೇಕು. ತುಂಬು ಗರ್ಭಿಣಿಯಾದ ನಮ್ಮ ಈ ಮಗಳಿಗೆ ಒಳ್ಳೆಯ ರೀತಿಯಲ್ಲಿ ಹೆರಿಗೆಯಾಗಬೇಕು. ತಾಯಿ ಮಗು ಇಬ್ಬರು ಕೂಡ ಆರೋಗ್ಯವಂತರಾಗಿ ಇರಲಿ ಎಂದು ಮನೆಯ ದೈವಗಳಿಗೂ ಊರಿನ ದೇವರಿಗೂ ಏನಾದರೂ ಹರಕೆ ಹೇಳಬೇಕು. ಅತ್ತೆ ಈ ಹರಿವಾಣದಲ್ಲಿ ಇದ್ದ ಕುಂಕುಮವನ್ನು ಹೆಣ್ಣಿನ ಹಣೆಗೆ ಇಟ್ಟು ಎಲೆ ಅಡಿಕೆಯನ್ನು ಅವಳ ಕೈಗೆ ಕೊಟ್ಟು ( ಈ ಎಲೆ ಅಡಿಕೆ ಎಲ್ಲ ಕಾರ್ಯಕ್ರಮ ಆಗುವ ತನಕ ಅವಳ ಕೈಯಲ್ಲಿ ಇರಬೇಕು). ಹರಿವಾಣವನ್ನು ಹೆಣ್ಣಿನ ಕೈಗೆ ಕೊಡಬೇಕು. ಅವಳು ಆ ಹರಿವಾಣವನ್ನು ಅವಳ ತಾಯಿ ಅಥವಾ ಸಂಬಂಧದವರ ಕೈಗೆ ಕೊಟ್ಟು ಅತ್ತೆಯ ಕಾಲಿಗೆ ನಮಸ್ಕರಿಸಬೇಕು. ಅನಂತರ ಅವರು ಕೊಟ್ಟ ಒಳ್ಳೆಯ ಸೀರೆ, ಆಭರಣ, ಹೂವುಗಳಿಂದಾವಳನ್ನು ಮದುಮಗಳಂತೆ ಸಿಂಗರಿಸಬೇಕು.

ತಿಂಡಿ ಬದಲಾಯಿಸಿ

ಮಧ್ಯಾಹ್ನ ೧೧-೧೨ ಗಂಟೆಯ ಒಳಗೆ ಅವಳ ನಾದಿನಿ ಕೈ ಹಿಡಿದುಕೊಂಡು ಸಭೆಗೆ ಕರೆದುಕೊಂಡು ಬರಲಿ, ಮೂಡು ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುವಂತೆ ಅವಳನ್ನು ಕುಳ್ಲಿರಿಸಬೇಕು. ಎದುರು ಕಡೆಗೆ ( ಮುಕ್ಕಲಿಕೆ, ಟೀಪಾಯಿ, ಸ್ಟೂಲು ಇವುಗಳಲ್ಲಿ ಯಾವುದಾದರು ಒಂದು ಇರಬೇಕು) ದೊಡ್ಡ ಹರಿವಾಣವನ್ನು ತಂದು ಅದರ ಮೇಲೆ ಇಟ್ಟು ಎರಡು ಬಾಳೆಯ ಎಲೆಯನ್ನು ಹಾಕಿ ಸ್ವಲ್ಪ ನೀರಿನಿಂದ ಅದನ್ನು ಸ್ವಚ್ಛ ಮಾಡಬೇಕು. ಅತ್ತೆ ಬಂದು ಮೊದಲು ಬೇಯಿಸಿದ ಕೋಳಿ ಮೊಟ್ಟೆ ಸೊಪ್ಪಿನ ಪಲ್ಯ ಒಟ್ಟಿಗೆ ಐದು ಸಲ ಎಲೆಯ ಮುಂಭಾಗಕ್ಕೆ ಬಡಿಸಬೇಕು. ಹುರಿದ ಅಕ್ಕಿ ಪುಡಿ ಎಲೆಯ ಮಧ್ಯಭಾಗಕ್ಕೆ ಹಾಕಬೇಕು. ಹುರಿ ಅಕ್ಕಿ, ಅವಲಕ್ಕಿಯನ್ನು ಬೆರೆಸಿ ಅಕ್ಕಿ ಪುಡಿಯ ಮೇಲೆ ಹಾಕಿ ಎಲ್ಲಪ್ಪ, ಚಕ್ಕುಲಿ, ಲಾಡು ಹೋಳಿಗೆ ಹೀಗೆ ನಾನಾ ತರದ ಭಕ್ಷ್ಯಗಳನ್ನು ಅದರ ಸುತ್ತ ಎತ್ತರಕ್ಕೆ ಬರುವಂತೆ ಇಡಬೇಕು. ಪ್ರತಿಯೊಂದು ತರದ ತಿಂಡಿಗಳನ್ನು ೫ ಇಲ್ಲವೆ ೭,೯ ರ ಸಂಖ್ಯೆಯಲ್ಲಿ ಇಡಬೇಕು. ನಂತರ ಎರಡು ತುಂಡು ಬೆಲ್ಲ ಒಂದು ಪೆನ್ನೆ ಬಾಳೆಹಣ್ಣು ಅದರ ಮೇಲೆ ಇಡಬೇಕು. ಲೋಟೆಯಲ್ಲಿ ತುಪ್ಪ ತೆಗೆದುಕೊಂಡು ಚಮಚದಲ್ಲಿ ೫ ಸಲ ಎಲ್ಲ ಭಕ್ಯಗಳ ಮೇಲೆ ಹಾಕಬೇಕು. ನಂತರ ಹುಡುಗಿಯ ಗಂಡನನ್ನು ಕರೆದು ಹೂವು ಸೀರೆ ಕೊಟ್ಟು ಪಿಂಗಾರವನ್ನು ತರಿಸಿ ಅದರ ಮಧ್ಯಭಾಗದ ಪಿಂಗಾರವನ್ನು ತೆಗೆದು ಹುದುಗಿಯ ಮುಡಿಗೆ ಅವಳ ಗಂಡ ಮುಡಿಸಬೇಕು. ೫ ಜನ ಹೆಂಗಸರನ್ನು ಕರೆದು ಆರತಿ ಬೆಳಗಿಸಬೇಕು. ಆರತಿ ಬೆಳಗುವಾಗ ಶೋಭಾನೆ ಹಾಡಬೇಕು. ನಂತರ ಮೊದಲು ಬಡಿಸಿದ ಸೊಪ್ಪು ಮತ್ತು ಒಂದು ಮೊಟ್ಟೆಯನ್ನು ಹುಡುಗಿಯ ಕೈಯಲ್ಲಿ ಕೊಡಬೇಕು. ಅವಳು ಅದನ್ನು ಎಡ ಕೈಯಲ್ಲಿ ಹಿಡಿದುಕೊಂಡು ಬಲ ಕೈಗೆ ಹಾಕಿ ಅದರಿಂದ ಸ್ವಲ್ಪ ಸ್ವಲ್ಪ ಮೊಟ್ಟೆ ಮತ್ತು ಸೊಪ್ಪನ್ನು ಚಿಕ್ಕ ಮಕ್ಕಳನ್ನು ಕರೆದು ಅವರಿಗೆ ತಿನ್ನಿಸಬೇಕು. ಹೀಗೆ ೩,೫,೭ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಿನ್ನಿಸಬೇಕು. ಬಂದವರೆಲ್ಲರು ಅವಳಿಗೆ ಸೌಭಾಗ್ಯವತಿಯಾಗಿ ಸಂತಾನ ಲಕ್ಶ್ಮಿಯಾಗಿ ಬಾಳು ಎಂದು ಆಶೀರ್ವಾದವನ್ನು ಮಾಡಿದ ಮೇಲೆ ಎಲ್ಲರು ಊಟ ಉಪಚಾರ ಸ್ವೀಕರಿಸುತ್ತಾರೆ.

ಶೋಭಾನೆ ಹಾಡು ಬದಲಾಯಿಸಿ

ಸೀಮಂತದಲ್ಲಿ ಶೋಭಾನೆ ಹಾಡುವ ಕ್ರಮವಿದೆ. ಅದರಲ್ಲಿ ಒಂದು ಹಾಡು ಹೀಗಿದೆ.

ಮಲ್ಲಿಗೆಯು ಮುಡಿಯಲ್ಲಿ ಬಾಡದಿರಲಿ
ಸಲ್ಲಲಿತ ಸೊಬಗನ್ನು ನೀಡುತಿರಲಿ||
ನಲ್ಲ ನಲ್ಲೆಯರಲ್ಲಿ ಉಲ್ಲಾಸ ತುಂಬಿಸಲಿ
ಫುಲ್ಲವಿಸಿ ಪರಿಮಳವ ಬೀರುತಿರಲಿ||

ಪ್ರೇಮಾನುರಾಗದಲಿ ತ್ಯಾಗದಲಿ ಭೋಗಲಿ
ಸಾಮರಸ್ಯದ ಬದುಕು ಸಾಗುತಿರಲಿ
ನಿತ್ಯ ನೂತನವಾಗಿ ದಿವ್ಯ ಚೇತನವಾಗಿರಲಿ
ಜೀವನದಿ ಭಾವನದಿ ಹರಿಯುತಿರಲಿ||

ಸವಿ ಹರೆಯದಲಿ ಸವಿದ ಸವಿಗನಸು ನನಸಾಗಿ 
ಸವಿಜೇನು ಜಿನು ಜಿನುಗಿ ಚಿಮ್ಮುತಿರಲಿ
ನವಿರಾದ ನಗೆಯಿರಲಿ ನಗೆಯ ಮಲ್ಲಿಗೆಯರಳಿ
ಬಗೆಯ ಭಾವನೆಗಳನು ಬೆಳಗುತಿರಲಿ||

ಕೊನೆಯದಾಗಿ ಬದಲಾಯಿಸಿ

ನಂತರ ಗರ್ಭಿಣಿಯನ್ನು ತಾಯಿ ಮನೆಗೆ ಕಳುಹಿಸಿಕೊಡುವ ಸಮಯ, ಸಾಮಾನ್ಯವಾಗಿ ಗೋಧೋಳಿ ಲಗ್ನದಲ್ಲಿ ಗರ್ಭಿಣಿಯನ್ನು ತವರು ಮನೆಗೆ ಕಳುಹಿಸಿಕೊಡುತ್ತಾರೆ. ಅದು ಸಾಯಂಕಾಲ ಸೂರ್ಯಾಸ್ಥಮಾನವಾಗುವ ಸಮಯ, ಹಕ್ಕಿಗಳು ಗೂಡು ಸೇರುವ ಸಮಯ, ದನಕರುಗಳು ಕೊಟ್ಟಿಗೆಗೆ ಬಂದು ಸೇರುವ ಸಮಯ. ಆ ಸಮಯದಲ್ಲಿ ಮಗಳು ಬಂದು ತಾಯಿ ಮನೆಗೆ ಸೇರಬೇಕಂತೆ. ಇದು ಸಂಪ್ರದಾಯ. ಅಲ್ಲಿ ಅದನ್ನು ಮನೆ ಹತ್ತಿರದವರಿಗೆ ಹಂಚಿದರೆ ಮತ್ತಷ್ಟು ಉತ್ತಮ. ಅದರ ಪುಣ್ಯ ಫಲ ನಮ್ಮ ಗರ್ಭಿಣಿ ಹುಡುಗಿಗೆ ಸಿಗುತ್ತದೆ ಎಂಬ ನಂಬಿಕೆ.[೧]

ಉಲ್ಲೇಖ ಬದಲಾಯಿಸಿ

  1. ತುಳುನಾಡಿನ ಕಟ್ಟು ಕಟ್ಟಳೆಗಳು ರಾಘು ಪಿ ಶೆಟ್ಟಿ ಪುಟ ೨೫ ಪ್ರಕಾಶಕರು ಲಕ್ಶ್ಮಿಛಾಯ ವಿಚಾರ ವೇದಿಕೆ ಮುಂಬಯಿ
"https://kn.wikipedia.org/w/index.php?title=ಸೀಮಂತ&oldid=1169115" ಇಂದ ಪಡೆಯಲ್ಪಟ್ಟಿದೆ