ರಾಜಾ ರಾಮಣ್ಣ

(ಡಾ.ರಾಜಾ ರಾಮಣ್ಣ ಇಂದ ಪುನರ್ನಿರ್ದೇಶಿತ)

ಡಾ. ರಾಜಾ ರಾಮಣ್ಣ ಆಧುನಿಕ ಭಾರತದ ಒಬ್ಬ ಅಪ್ರತಿಮ ವಿಜ್ಞಾನಿ. ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ರಾಜಾ ರಾಮಣ್ಣನವರು ೧೯೭೪ರ ಮೇ ೧೮ರಂದು ರಾಜಸ್ಥಾನದ ಪೋಖ್ರಾನ್‍ನಲ್ಲಿ ಜರುಗಿದ ಭಾರತದ ಪ್ರಥಮ ಪರಮಾಣು ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಹೋಮಿ ಜಹಂಗೀರ್ ಭಾಬಾರವರ ಆಪ್ತ ಶಿಷ್ಯರಾಗಿದ್ದ ರಾಜಾ ರಾಮಣ್ಣನವರದು ಬಹುಮುಖ ಪ್ರತಿಭೆ. ಅವರು ಶ್ರೇಷ್ಠ ಪರಮಾಣು ವಿಜ್ಞಾನಿಯಲ್ಲದೆ ದಕ್ಷ ಆಡಳಿತಗಾರ, ಸಮರ್ಥ ಸಂಘಟಕ, ನುರಿತ ಪಿಯಾನೋ ಹಾಗು ವಿಯೋಲ ವಾದಕ, ವೇದೊಪನಿಷದ್ ಪಾರಂಗತ, ಉಪಾಧ್ಯಾಯ, ದಾರ್ಶನಿಕ, ರಾಜ್ಯಸಭೆ ಸದಸ್ಯ, ರಕ್ಷಣಾ ರಾಜ್ಯ ಮಂತ್ರಿ ಸಹ ಆಗಿದ್ದರು.

ರಾಜಾ ರಾಮಣ್ಣ
ಚಿತ್ರ:A true scientist.jpg
ರಾಜಾ ರಾಮಣ್ಣ (೧೯೨೫-೨೦೦೪)
ಜನನ(೧೯೨೫-೦೧-೨೮)೨೮ ಜನವರಿ ೧೯೨೫
ತಿಪಟೂರು, ತುಮಕೂರು ಜಿಲ್ಲೆ, ಕರ್ನಾಟಕ
ಮರಣSeptember 24, 2004(2004-09-24) (aged 79)
ಮುಂಬಯಿ, ಮಹಾರಾಷ್ಟ್ರ, ಭಾರತ
ವಾಸಸ್ಥಳಮುಂಬಯಿ, ಭಾರತ
ಪೌರತ್ವಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುಭಾಭಾ ಅಣು ಸಂಶೋಧನ ಕೇಂದ್ರ
Defence Research and Development Organisation
International Atomic Energy Agency
Ministry of Defence
National Institute of Advanced Studies
ಅಭ್ಯಸಿಸಿದ ವಿದ್ಯಾಪೀಠBishop Cotton Boys' School, Madras Christian College
King’s College London, ಯುನೈಟೆಡ್ ಕಿಂಗ್‍ಡಂ
ಪ್ರಸಿದ್ಧಿಗೆ ಕಾರಣOperation Smiling Buddha
Operation Shakti
Indian nuclear programme
ಗಮನಾರ್ಹ ಪ್ರಶಸ್ತಿಗಳುಪದ್ಮ ಶ್ರೀ (1968)
ಪದ್ಮ ಭೂಷಣ (1973)
ಪದ್ಮ ವಿಭೂಷಣ (1975)

ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ-ಜೀವನ

ಬದಲಾಯಿಸಿ

ರಾಜಾ ರಾಮಣ್ಣನವರ ಜನನ ಜನವರಿ ೨೮, ೧೯೨೫ ರಂದು ಕರ್ನಾಟಕದ ತುಮಕೂರಿನಲ್ಲಾಯಿತು. ಮೈಸೂರಿನ ಗುಡ್ ಷೇಫರ್ಡ್ ಕಾನ್ವೆಂಟ್, ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಮತ್ತು ಸೇಂಟ್ ಜೋಸೆಫ್ಸ್ ಕಾಲೇಜುಗಳಲ್ಲಿ ಇವರ ಮೊದಲ ವ್ಯಾಸಂಗ ನಡೆಯಿತು. ಮದರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ ಎಸ್ಸಿ (ಆನರ್ಸ್) ಪದವಿ ಪಡೆದ ನಂತರ ೧೯೪೫ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನ ಅಭ್ಯಸಿಸಿ ೧೯೪೯ ರಲ್ಲಿ ಪಿ. ಎಚ್. ಡಿ. ಪದವಿಯನ್ನು ಪಡೆದರು. ತದನಂತರ ಭಾರತಕ್ಕೆ ಮರಳಿ, 1949 ರಲ್ಲಿ ಇವರು ಮುಂಬಯಿಯ ಟಾಟಾ ವಿಜ್ಞಾನ ಕೇಂದ್ರವನ್ನು ಸೇರಿ ಅಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತದಲ್ಲಿ ಭೌತವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಿದ ರಾಜಾ ರಾಮಣ್ಣನವರು, ಪರಮಾಣು ಕೇಂದ್ರ ವಿದಳನೆಯ (ನ್ಯೂಕ್ಲಿಯರ್ ಫಿಜನ್) ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸಿದ್ದರು. 1953 ರಲ್ಲಿ ಇವರು ಟ್ರಾಂಬೆಯ ಪರಮಾಣು ಶಕ್ತಿ ಕೇಂದ್ರದ ನ್ಯೂಕ್ಲಿಯರ್ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ನಿಯೋಜಿತರಾದರು.

ಟ್ರಾಂಬೆಯಲ್ಲಿ ಪರಮಾಣು ಶಕ್ತಿ ಕೇಂದ್ರ ಪ್ರಾರಂಭವಾದಾಗಿನಿಂದ ಅದರ ಎಲ್ಲ ಚಟುವಟಿಕೆಗಳಲ್ಲೂ ರಾಜಾ ರಾಮಣ್ಣ ಪಾಲುಗೊಂಡಿದ್ದಾರೆ. ಅಪ್ಸರ, ಸೈರಸ್ ಮತ್ತು ಪೂರ್ಣಿಮ-ಈ ರಿಯಾಕ್ಟರುಗಳ ವಿನ್ಯಾಸ ಮತ್ತು ರಚನೆಯಲ್ಲಿ ಇವರು ವಹಿಸಿದ ಪಾತ್ರ ಮಹತ್ತ್ವಪೂರ್ಣವಾದ್ದು. ವಾನ್ ಡಿ ಗ್ರಾಫ್ ವೇಗೋತ್ಕರ್ಷಕ, ಕಲ್ಕತ್ತದಲ್ಲಿಯ ವ್ಯತ್ಯಸ್ಥಶಕ್ತಿ ಸೈಕ್ಲೋಟ್ರಾನ್ ಮತ್ತು ಕಲ್ಪಾಕಮ್‌ನಲ್ಲಿಯ ಸಂಶೋಧನೆಯ ರಿಯಾಕ್ಟರುಗಳು ಇವರ ಅದಮ್ಯ ನಾಯಕತ್ವಕ್ಕೆ ಸಾಕ್ಷಿಗಳಾಗಿವೆ.

ನ್ಯೂಟ್ರಾನ್ ಉಷ್ಣೀಕರಣ, ಮಂದಶಕ್ತಿ ನ್ಯೂಕ್ಲಿಯ ಕ್ರಿಯೆಗಳು, ವಿದಳನ -ಹೀಗೆ ಹಲವು ಪ್ರಕಾರಗಳಲ್ಲಿ ರಾಮಣ್ಣ ಉನ್ನತ ಸಂಶೋಧನೆಗಳನ್ನು ನಡೆಸಿದ್ದಾರೆ. ಇವರು ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಕೆಲಸಕ್ಕಾಗಿ ಇವರಿಗೆ ಅನೇಕ ಬಹುಮಾನಗಳೂ ಫೆಲೋಷಿಪ್‌ಗಳೂ ಸಂದಾಯವಾಗಿವೆ. ಇವರು ಪ್ರಕಟಿಸಿರುವ ಪ್ರೌಢಲೇಖನಗಳ ಸಂಖ್ಯೆ ಎಂಬತ್ತನ್ನು ಮೀರಿವೆ. ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಇವರು ಪಾಲುಗೊಂಡಿದ್ದಾರೆ. 1963 ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸುವರ್ಣ ಅಧಿವೇಶನದಲ್ಲಿ ಭೌತವಿಜ್ಞಾನ ವಿಭಾಗದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು.

ರಾಜಾ ರಾಮಣ್ಣ ಭೌತವಿಜ್ಞಾನದಲ್ಲಿ ಅಪೂರ್ವ ಸಿದ್ಧಿ ಪಡೆದಿದ್ದರೂ ಪಾಶ್ಚಾತ್ಯ ಸಂಗೀತದಲ್ಲಿ ಇವರಿಗೆ ವಿಶೇಷ ಪರಿಶ್ರಮವಿತ್ತು. ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ತಳೆದಿದ್ದರು.

ಭಾರತದ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೋರೇಟ್ ಪದವಿಗಳನ್ನು ಇತ್ತು ಗೌರವ ತೋರಿವೆ.

  • 1966 ರಲ್ಲಿ ಭೌತವಿಜ್ಞಾನದ ರೂವಾರಿ ಎನಿಸಿದ್ದ ಹೋಮಿ ಜಹಾಂಗೀರ್ ಭಾಭಾ ಅವರ ನಿಧನದ ಬಳಿಕ ರಾಜಾ ರಾಮಣ್ಣನವರು ೨ ಅವಧಿಗಳಲ್ಲಿ (೧೯೭೨-೧೯೭೮ ಹಾಗು ೧೯೮೧-೮೩) ಭಾಬಾ ಅಣು ಸಂಶೋಧನಾ ಕೇಂದ್ರದ (ಬಿ.ಏ.ಆರ್.ಸಿ ಅಥವಾ ಬಾರ್ಕ್) ನಿರ್ದೇಶಕರಾಗಿದ್ದರು.
  • ಇದರ ಜೊತೆಗೆ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮತ್ತು ಹೈದರಾಬಾದಿನ ಎಲೆಕ್ಟ್ರಾನಿಕ್ ಕಾರ್ಪೋರೇಷನ್ನಿನ ಅಧ್ಯಕ್ಷರೂ ಆಗಿದ್ದರು.
  • ೧೯೭೮ ರಿಂದ ೧೯೮೧ ರ ವರೆಗೆ ರಾಜಾ ರಾಮಣ್ಣನವರು ರಕ್ಷಣಾ ಮಂತ್ರಿಯ ವೈಜ್ಞಾನಿಕ ಸಲಹೆಗಾರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಢಿ ಸಂಸ್ಥೆಯ (ಡಿ.ಆರ್.ಡಿ.ಒ) ಮಹಾ ನಿರ್ದೇಶಕ, ಹಾಗೂ ರಕ್ಷಣಾ ಸಂಶೋಧನ ಕಾರ್ಯದರ್ಶಿ, ಹೀಗೆ ೩ ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಿದ್ದರು.
  • ಸೆಪ್ಟೆಂಬರ್ ೧, ೧೯೮೩ ರಲ್ಲಿ ಅಣು ಶಕ್ತಿ ಆಯೋಗ (ಏ.ಇ.ಸಿ) ಹಾಗು ಭಾರತ ಸರ್ಕಾರದ ಅಣು ಶಕ್ತಿ ವಿಭಾಗದ(ಡಿ.ಎ.ಇ) ಕಾರ್ಯದರ್ಶಿ ಹುದ್ದೆಯನ್ನು ಸಹ ಅಲಂಕರಿಸಿ ೧೯೮೭ರಲ್ಲಿ ನಿವೃತ್ತರಾದರು.
  • ತದನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಪ್ರೌಢ ಅಧ್ಯಯನ ಸಂಸ್ಥೆಯ (ಎನ್.ಐ.ಎ.ಎಸ್) ಅಧ್ಯಕ್ಷರಾಗಿ ೧೯೮೭ರಿಂದ ೧೯೮೯ರ ವರೆಗೆ ದುಡಿದರು.
  • ಮಹನೀಯರು ದಿವಂಗತರಾದಾಗ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ಸಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.
  • ೧೯೯೦ರಲ್ಲಿ ರಾಜಾ ರಾಮಣ್ಣನವರು ವಿ.ಪಿ. ಸಿಂಗ್ ಸರ್ಕಾರದಲ್ಲಿ ಕೆಲಕಾಲ ರಕ್ಷಣಾ ರಾಜ್ಯ ಸಚಿವರಾಗಿದ್ದರು.
  • ತದನಂತರ ೧೯೯೭ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.
  • 1998ರಲ್ಲಿ ಇವರು ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಪ್ರಥಮ ಅಣು ಬಾಂಬ್ ಪರೀಕ್ಷೆ

ಬದಲಾಯಿಸಿ

ರಾಜಾ ರಾಮಣ್ಣನವರು ಭಾಭಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದಾಗ ನಡೆದ ಮುಖ್ಯ ಘಟನೆಯೆಂದರೆ, ಭಾರತದ ಪ್ರಥಮ ಅಣು ಬಾಂಬ್ ಪರೀಕ್ಷೆ. "ಪೋಖ್ರಾನ್-೧" ಅಥವಾ "ಆಪರೇಷನ್ ಸ್ಮೈಲಿಂಗ್ ಬುದ್ಧ" ಎಂದು ಕರೆಯಲಾಗುವ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ರಾಜಾ ರಾಮಣ್ಣನವರಿಗೆ ಸಲ್ಲುತ್ತದೆ.[]

ಒಳ್ಳೆಯ ಬರಹಗಾರರು

ಬದಲಾಯಿಸಿ

ರಾಜಾ ರಾಮಣ್ಣನವರು ಉತ್ತಮ ಬರಹಗಾರರಾಗಿದ್ದರು. ಅವರ ಎರಡು ಉಲ್ಲೇಖನೀಯ ಕೃತಿಗಳೆಂದರೆ,

  • ಸ್ಟ್ರಕ್ಚರ್ ಆಫ್ ಮ್ಯೂಸಿಕ್ ಇನ್ ರಾಗ, ಎಂಡ್ ವೆಸ್ಟೆರ್ನ್ ಸಿಸ್ಟೆಮ್ಸ್ ಹಾಗೂ
  • ಇಯರ್ಸ್ ಆಫ್ ಪಿಲಿಗ್ರಿಮೇಜ್: ಆನ್ ಆಟೋಬಯೋಗ್ರಫಿ[]

ಪ್ರಶಸ್ತಿಗಳು

ಬದಲಾಯಿಸಿ
  • ೧೯೬೩ರಲ್ಲಿ ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ
  • ೧೯೬೮ರಲ್ಲಿ ಪದ್ಮ ಶ್ರೀ ಪ್ರಶಸ್ತಿ
  • ಪದ್ಮ ಭೂಷಣ
  • ಪದ್ಮ ವಿಭೂಷಣ
  • ಮೇಘನಾಥ್ ಸಾಹಾ ಪದಕ
  • ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ
  • 1993 ರಲ್ಲಿ ಇವರಿಗೆ ವಿಶ್ವಭಾರತಿ ವಿಶ್ವವಿದ್ಯಾನಿಲಯ ದೇಶಿಕೋತ್ತಮ ಗೌರವ ಪದವಿಯನ್ನು ನೀಡಿ ಗೌರವಿಸಿತು.

ಶ್ರೀಯುತರು ಸೆಪ್ಟೆಂಬರ್ ೨೪, ೨೦೦೪ ರಂದು ಮುಂಬಯಿನಲ್ಲಿ ಅಸುನೀಗಿದರು.[]

ಇವನ್ನೂ ನೋಡಿ

ಬದಲಾಯಿಸಿ

ಭಾರತದ ವಿಜ್ಞಾನಿಗಳು

ಉಲ್ಲೇಖಗಳು

ಬದಲಾಯಿಸಿ

[] [] []

  1. "Dr. Ramanna". BARC. BARC: GOVERNMENT OF INDIA, DEPARTMENT OF ATOMIC ENERGY, BABHA ATOMIC RESEARCH CENTRE. Archived from the original on 23 ಮೇ 2013. Retrieved 11 November 2012.
  2. Pandya, Haresh (2 October 2004). "Raja Ramanna Biography". The Guardian. London. Retrieved 11 November 2012.
  3. "Dr. Raja Ramanna's death news". Government of India- Department of Atomic Energy. Archived from the original on 18 ಏಪ್ರಿಲ್ 2015. Retrieved 13 November 2012.
  4. https://kannada.oneindia.com/literature/people/2004/240904rajaramanna.html
  5. http://vigyanprasar.gov.in/ramanna-raja/
  6. https://timesofindia.indiatimes.com/DR-RAJA-RAMANNA/articleshow/49076753.cms

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: