ಘಜ಼್ನಿ ಮಧ್ಯ ಆಫ್ಘಾನಿಸ್ತಾನದ ಒಂದು ಪಟ್ಟಣ. ಮಧ್ಯಯುಗದ ಎರಡು ರಾಜವಂಶಗಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈಗ ಘಜ್ನಿ಼ ಪ್ರಾಂತ್ಯದ ಆಡಳಿತ ಕೇಂದ್ರ. ಉ.ಅ. 330 34’ ಮತ್ತು ಪೂ.ರೇ. 680 18’ ರಲ್ಲಿ ಸು. 7,300’ ಎತ್ತರದ ಪ್ರಸ್ಥಭೂಮಿಯ ಮೇಲೆ, ಘಜ್ನಿ಼ ನದಿಯ ಎರಡೂ ದಂಡೆಗಳ ಮೇಲೆ ಸ್ಥಾಪಿತವಾಗಿರುವ ಈ ಪಟ್ಟಣ ಕಾಬೂಲಿನಿಂದ 94 ಮೈ ಮತ್ತು ಕಾಂದಹಾರ್‌ನಿಂದ 224 ಮೈ. ದೂರದಲ್ಲಿದೆ. ಜನಸಂಖ್ಯೆ 190,424 (2021ರ ಅಂದಾಜು).[] ನದಿಯ ಎಡದಂಡೆಯ ಮೇಲಿರುವ ಹಳೆಯ ನಗರದ ಎತ್ತರದ ಗೋಡೆಗಳೂ, ಅದರ ದುರ್ಗವೂ, ಅದರಲ್ಲಿರುವ ಎತ್ತರದ ಗೋಪುರಗಳೂ ಭವ್ಯವಾಗಿವೆ. ಆಫ್ಘಾನಿಸ್ತಾನದಲ್ಲಿ ಉಳಿದಿರುವ, ಕೋಟೆಯಿಂದ ಆವೃತ್ತವಾಗಿರುವ ಪಟ್ಟಣ ಇದೊಂದೇ.

ಘಜ಼್ನಿಯ ಕೋಟೆ, ತಾಪಾ ಸರ್ದಾರ್‌ನಿಂದ ನೋಡಿದಾಗ

ಇತಿಹಾಸ

ಬದಲಾಯಿಸಿ

ಘಜ್ನಿ಼ಯ ಆರಂಭದ ಇತಿಹಾಸ ಸ್ಪಷ್ಟವಾಗಿಲ್ಲ. ಟಾಲೆಮಿಯಿಂದ ಗಾಜಾ಼ಕ ಎಂದೂ,[] ಗ್ರೀಕ್ ಕವಿಗಳಿಂದ ಗಾಜೋ಼ಸ್ ಎಂದೂ ಕರೆಯಲ್ಪಟ್ಟ ಪಟ್ಟಣ ಇದೇ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ. 644ರಲ್ಲಿ ಚೀನೀ ಯಾತ್ರಿಕ ಹ್ಯುಯೆನ್ ತ್ಸಾಂಗ್ ವರ್ಣಿಸಿದ ಜಾಗುಡಾ ಎಂಬ ಪಟ್ಟಣ ಇದೇ ಇರಬಹುದು.[][] ಜಾಗುಡಾ ಪಟ್ಟಣ ಬೌದ್ಧ ಮತದ ಪ್ರಭಾವಕ್ಕೆ ಒಳಗಾಗಿದ್ದ ಟ್ಸಾವೊ-ಕಿನ್-ಟೊ ರಾಜ್ಯದ ರಾಜಧಾನಿಯಾಗಿತ್ತೆಂದು ಅವನು ಹೇಳಿದ್ದಾನೆ. ಘಜ್ನಿ಼ ಪ್ರಾಚೀನ ಅರಬ್ ಮತ್ತು ಪರ್ಷಿಯನ್ ಭೂಗೋಳಶಾಸ್ತ್ರಜ್ಞರ ಮತ್ತು ಉದಂತಕಾರರ ಪ್ರಕಾರ ಜಾ಼ಬೂಲಿಸ್ತಾನದ ರಾಜಧಾನಿಯಾಗಿತ್ತು. ಇದು ಹಿಂದೂಸ್ತಾನದ ಭಾಗವಾಗಿತ್ತೆಂದೂ, ಏಳನೆಯ ಶತಮಾನದ ಉತ್ತರಾರ್ಧದಲ್ಲಿ ಹಲವು ಬಾರಿ ಅರಬರು ಇದನ್ನು ಆಕ್ರಮಿಸಲು ಯತ್ನಿಸಿ ವಿಫಲರಾದರೆಂದೂ ಅವರು ಹೇಳಿದ್ದಾರೆ. ಘಜ್ನಿ಼ ಪ್ರದೇಶವನ್ನು ಸು. 871ರಲ್ಲಿ ಸಫರೀದ್ ಯಾಕೂಬ್ ಇಬ್ನ್ ಲೈತ್ ಜಯಿಸಿದ. ಈತನೇ ಘಜ್ನಿ಼ಯನ್ನು ಸ್ಥಾಪಿಸಿದನೆಂದು ತಾರೀಖ್-ಇ-ಸಿಸ್ತಾನ್ ಎಂಬ ಪರ್ಷಿಯನ್ ಆಕರವೊಂದರಿಂದ ತಿಳಿದುಬರುತ್ತದೆ. ಆದರೆ ಇದು ನಿಜವಿರಲಾರದು. ಅದಕ್ಕೂ ಮುಂಚೆಯೇ ಈ ಪಟ್ಟಣ ಇತ್ತೆಂಬುದಕ್ಕೆ ಚೀನೀ ಬರಹಗಳೂ, 10ನೆಯ ಶತಮಾನದ ಹುದುದ್-ಅಲ್-ಅಲಾಂ ಎಂಬ ಭೌಗೋಳಿಕ ಕೃತಿಯೂ ಸಾಕ್ಷಿಗಳಾಗಿವೆ.

ಇಸ್ಲಾಮೀ ಯುಗದಲ್ಲಿ ಘಜ್ನಿ಼ಯ ಪ್ರಾಮುಖ್ಯ ಆರಂಭವಾದ್ದು 962ರಲ್ಲಿ ಸಾಮರ್‌ಕಂಡ್ ಮತ್ತು ಬುಖಾರಗಳ ಸಮಾನಿದ್ ಅಮೀರರ ರಕ್ಷಕ ಪಡೆಯ ನಾಯಕನಾಗಿದ್ದ ಟರ್ಕ್ ಆಲ್ಪ್ ತಿಗೀನ್ ಎಂಬವನು ಘಜ಼್ನಿಯನ್ನು ಜಯಿಸಿದಾಗಿನಿಂದ.[] ಆತನೂ, ಅವನ ಉತ್ತರಾಧಿಕಾರಿಗಳೂ ಅಮೀರರಿಗೆ ಆಶ್ರಿತರಾಗಿದ್ದರು. ಅವನ ವಂಶಸ್ಥನಾದ ಸಬಕ್ತಿಗೀನ್ ಘಜ್ನಿ಼ಯಲ್ಲಿ ಅಧಿಕಾರಕ್ಕೆ ಬಂದ. ಅವನು ಸ್ಥಾಪಿಸಿದ ಘಜ಼್ನವೀಡ್ ವಂಶ (977-1186) ಮುಂದಿನ ಎರಡು ಶತಮಾನಗಳ ಕಾಲ ವೈಭವದಿಂದ ಆಳಿತು. ಈ ರಾಜವಂಶದವರು ಅಮೀರರೆಂಬ ಬಿರುದನ್ನು ಧರಿಸುತ್ತಿದ್ದರು. ಆದರೂ ಇತಿಹಾಸಕಾರರು ಇವರನ್ನು ಸುಲ್ತಾನರೆಂದು ಕರೆದಿದ್ದಾರೆ. ಸಬಕ್ತಿಗೀನನ ಕಾಲದಲ್ಲೇ ಈ ರಾಜ್ಯ ಉತ್ತರದ ಘೋರ್, ಜಾ಼ಬೂಲಿಸ್ತಾನ್, ಬ್ಯಾಕ್ಟ್ರಿಯಗಳವರೆಗೂ ಹಬ್ಬಿತು. ಹಿಂದೂಸ್ತಾನದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡು ಪಂಜಾಬಿನವರೆಗೂ ಈತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಇವನ ಮಗ ಮಹಮೂದನ (998-1030) ಕಾಲದಲ್ಲಿ ಈ ಸಾಮ್ರಾಜ್ಯ ಬೆಳೆದು ಪಶ್ಚಿಮದಲ್ಲಿ ಆಕ್ಸಸ್‍ನಿಂದ ಆಫ್ಘಾನಿಸ್ಥಾನ ಮತ್ತು ಪರ್ಷಿಯವೂ ಕೂಡಿಕೊಂಡು ಪಂಜಾಬಿನವರೆಗೂ ವ್ಯಾಪಿಸಿತು.

ಹೀಗೆ ಘಜ್ನಿ಼ ನಗರ ಮಹಾ ಸಾಮ್ರಾಜ್ಯದ ರಾಜಧಾನಿಯಾಗಿ ರಾಜಕೀಯ ಚಟುವಟಿಕೆಯ ಕೇಂದ್ರವಾಯಿತು. ಹಿಂದೂಸ್ತಾನದಿಂದ ದೋಚಿದ ಅಗಾಧ ಸಂಪತ್ತು ಮತ್ತು ವಸ್ತುಗಳನ್ನು ಬಳಸಿ ಈ ನಗರವನ್ನು ಕಟ್ಟಲಾಯಿತು. ಇದು ವ್ಯಾಪಾರ ಮತ್ತು ಕೈಗಾರಿಕೆಗಳ ಕೇಂದ್ರವಾಗಿಯೂ ರೂಪುಗೊಂಡಿತು. ಮಹಮೂದನ ಕಾಲದಲ್ಲಿ ಅನೇಕ ಕಟ್ಟಡಗಳು, ಅರಮನೆಗಳು ಮತ್ತು ಮಸೀದಿಗಳ ನಿರ್ಮಾಣವಾದವು. ಈ ಪ್ರಾಚೀನ ನಗರದಲ್ಲಿ 140' ಎತ್ತರದ ಎರಡು ಗೋಪುರಗಳಿವೆ. ಉತ್ತರಕ್ಕಿರುವ ಅರಬ್ಬಿ ಶಾಸನಗಳ ಪ್ರಕಾರ ಮಹಮೂದನಿಂದ ನಿರ್ಮಾಣವಾದ್ದು; ಅದಕ್ಕೆ ಗಜ ದೂರದಲ್ಲಿರುವ ಇನ್ನೊಂದು ಗೋಪುರ ಅವನ ಮಗ ಮಸೂದನಿಂದ ನಿರ್ಮಾಣಗೊಂಡಿತು ಎಂದು ತಿಳಿದುಬರುತ್ತದೆ. ಅರಮನೆಯ ಕಟ್ಟಡಗಳಿಗೆ ವಿಜಯಸೂರೆಯ ಸ್ಮಾರಕವಾಗಿ ಭಾರತದಿಂದ ತಂದ ಹಿಂದೂ ವಿಗ್ರಹಗಳು ಮತ್ತು ಅಮೂಲ್ಯ ಲೋಹದ ಮೂರ್ತಿಗಳನ್ನು ನೇರವಾಗಿ ಸೇರಿಸಲಾಯಿತು. ಮಹಮೂದನಿಂದ ಕಟ್ಟಲಾದ ಅರೂಸಲ್-ಫಲಕ್ ಎಂಬ ಮಸೀದಿಯೂ ಹೀಗೇಯೇ ನಿರ್ಮಿತವಾದ್ದು. ಅದಕ್ಕೆ ಸೇರಿದಂತೆ ಇದ್ದ ಒಂದು ಅಧ್ಯಯನ ಪೀಠದಲ್ಲಿ ಒಂದು ಗ್ರಂಥಾಲಯವೂ ಇತ್ತು. ಈ ನಗರದ ಉತ್ತರಕ್ಕೆ ಮಹಮೂದ ಕಟ್ಟಿಸಿದ ಬಂದ್-ಇ-ಸುಲ್ತಾನ್ ಎಂಬ ಅಣೆಕಟ್ಟು ಈಗಲೂ ಉಳಿದಿವೆ.[] ಫ್ರೆಂಚ್ ಪುರಾತತ್ವ ಶಾಸ್ತ್ರಜ್ಞ ಎಂ.ಡಿ. ಸ್ಕೆಲುಬರ್ಗರ್ ಘಜ್ನಿ಼ ಮಹಮೂದನ ಅರಮನೆಯ ಅವಶೇಷವನ್ನು ಲಷ್ಕರಿ ಬಜಾ಼ರಿನಲ್ಲಿ ಪತ್ತೆ ಹಚ್ಚಿದ.[][][][೧೦]

ಘಜ್ನಿ಼ 1151ರಲ್ಲಿ ಘೋರ್‌ನ ಅಲ್ಲಾವುದ್ದೀನನ ಭೀಕರ ದಾಳಿಗೆ ತುತ್ತಾಯಿತು. ಅವನು ನಗರಕ್ಕೆ ಬೆಂಕಿ ಹಚ್ಚಿ ಅದನ್ನು ಬಹಳ ಮಟ್ಟಿಗೆ ನಾಶಗೊಳಿಸಿದ. ಮುಂದೆ ಸ್ವಲ್ಪ ಕಾಲದಲ್ಲೇ ಘಜ಼್ನವೀಡರ ದೊರೆ ಖುಸ್ರು ಷಾಹ ಈ ನಗರವನ್ನು ತೊರೆದು ಪಂಜಾಬಿನ ಲಾಹೋರಿಗೆ ಹೋಗೆ ನೆಲಸಿದ. ಅಲ್ಲಿಗೆ ಘಜ್ನಿ಼ ನಗರ ತನ್ನ ಮಧ್ಯಯುಗದ ಭವ್ಯತೆಯನ್ನು ಕಳೆದುಕೊಂಡಿತು. ಮುಂದೆ ಅನೇಕ ರಾಜವಂಶಗಳು ಇದನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರೂ ಅದು ತನ್ನ ಹಿಂದಿನ ವೈಭವವನ್ನು ಪುನಃ ಪಡೆಯಲಿಲ್ಲ.

1221ರಲ್ಲಿ ಇದನ್ನು ಜೆಂಘಿಸ್ ಖಾನನ ಮಗ ಒಗದೈ ಆಕ್ರಮಿಸಿದ.[೧೧] ಒಗದೈ ಅನಂತರ ಮಂಗೋಲರ ಸಾಮ್ರಾಜ್ಯ ಇಬ್ಭಾಗವಾದಾಗ ಘಜ್ನಿ಼ಯನ್ನೊಳಗೊಂಡ ಭಾಗ ಪರ್ಷಿಯದ ಇಲ್-ಖಾನರಿಗೆ ಸೇರಿತು. 14ನೆಯ ಶತಮಾನದಲ್ಲಿ ಇದರ ಬಗ್ಗೆ ಹೆಚ್ಚು ಉಲ್ಲೇಖಗಳಿಲ್ಲ. ನಗರದ ಬಹುಭಾಗ ಪಾಳು ಬಿದ್ದಿತ್ತೆಂದು ಇಬ್ನ್ ಬತೂತ ಬರೆದಿದ್ದಾನೆ.[೧೨] ಆ ಶತಮಾನದ ಕೊನೆಯಲ್ಲಿ ಇದು ತೈಮೂರನ ವಶವಾಯಿತು. ಬಾಬರ್ 1504ರಲ್ಲಿ ಘಜ್ನಿ಼ಯನ್ನು ವಶಪಡಿಸಿಕೊಂಡ. ತರುವಾಯ 200 ವರ್ಷಗಳಿಗೂ ಹೆಚ್ಚು ಕಾಲ ಇದು ಮೊಗಲರ ಆಳ್ವಿಕೆಗೆ ಒಳಪಟ್ಟಿತ್ತು. 1738ರಲ್ಲಿ ಇದನ್ನು ನಾದಿರ್ ಷಾ ವಶಪಡಿಸಿಕೊಂಡ. 1839ರಲ್ಲಿ ಘಜ್ನಿ಼ಯನ್ನು ಬ್ರಿಟಿಷರು ಆಕ್ರಮಿಸಿಕೊಂಡರು. 1842ರಲ್ಲಿ ಆಫ್ಘನರು ಗೆದ್ದುಕೊಂಡರೂ ಮತ್ತೆ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು.

ಹೀಗೆ ಘಜ್ನಿ಼ ಬಹು ದೀರ್ಘಕಾಲ ಐತಿಹಾಸಿಕ ಮಹತ್ತ್ವ ಪಡೆದಿತ್ತು. ಈಗ ಅಳಿದುಳಿದಿರುವ ಹಳೆ ಪಟ್ಟಣ ಗೋಡೆಗಳಿಂದ ಆವೃತವಾಗಿದೆ. ಎತ್ತರದ ಗೋಪುರಗಳಿಂದ ಕೂಡಿದ ಈ ಭಾಗ ಕೆಳಗಿನಿಂದ ವೀಕ್ಷಿಸುವ ಪ್ರೇಕ್ಷಕನಿಗೆ ಅದ್ಭುತವಾಗಿ ಕಾಣುತ್ತದೆ. ಈಗಿರುವ ಹಳೆಯ ಗೋಡೆ ಹಳೆಯ ಪಟ್ಟಣದ ದುರ್ಗವಿದ್ದಿರಬಹುದು. 1835ರಲ್ಲಿ ಫ್ರೆಂಚ್ ಮತ್ತು ಇಟಾಲಿಯನ್ ಪುರಾತತ್ವಜ್ಞರು ಇಲ್ಲಿ ಉತ್ಖನನಗಳನ್ನು ನಡೆಸಿ ಇದರ ಇತಿಹಾಸದ ಹಲವು ಅಂಶಗಳನ್ನು ಹೊರಗೆಡವಿದರು. ಗುಡ್ಡದ ಇಳಿಜಾರಿನಲ್ಲಿದ್ದ ಅನೇಕ ವಾಸಗೃಹಗಳನ್ನು ಪರಿಶೋಧಿಸಲಾಗಿದೆ. ಹಳೆಯ ಕಾಬೂಲ್ ರಸ್ತೆಯಲ್ಲಿ ಮಹಮೂದನ ಗೋರಿ ಪತ್ತೆಯಾಗಿದೆ. ಬಯಲಿನ ದಕ್ಷಿಣಕ್ಕಿರುವ ಲಷ್ಕರಿ ಬಜಾರಿನಲ್ಲಿ ಮಹಮೂದನ ಅರಮನೆಯ ಪಳೆಯುಳಿಕೆಯಿದೆ. ದಿಬ್ಬದಲ್ಲಿ ಹಲವು ಅವಶೇಷಗಳು ದೊರೆತಿವೆ. ಘಜ್ನಿ಼ಯಲ್ಲಿರುವ ಕವಿ ಸನಾಯಿಯ ಮಂದಿರ ಮುಸ್ಲಿಮರ ಯಾತ್ರಾಸ್ಥಳ. 1935ರಲ್ಲಿ ಘಜ್ನಿ಼ಯಲ್ಲಿ ಪುರಾತತ್ವ ವಸ್ತು ಸಂಗ್ರಹಾಲಯವೊಂದು ಸ್ಥಾಪಿತವಾಯಿತು. ಆಧುನಿಕ ನಗರ ನದಿಯ ಬಲದಂಡೆಯ ಮೇಲೆ ಬೆಳೆಯುತ್ತಿದೆ.

ಉಲ್ಲೇಖಗಳು

ಬದಲಾಯಿಸಿ
  1. "Estimated Population of Afghanistan 2021-22" (PDF). National Statistic and Information Authority (NSIA). April 2021. Archived (PDF) from the original on June 24, 2021. Retrieved June 21, 2021.
  2. Guinta, Roberta. "GAZNÈ (or GÚazna, GÚazn^n)". Encyclopædia Iranica (Online ed.). United States: Columbia University. Retrieved January 2, 2008.
  3. BA Litvinsky, Zhang Guang-Da, R. Shabani Samghabadi, History of civilizations of Central Asia, pg. 385
  4. Hui-li, 1959, p. 188
  5. John Andrew Boyle (1968). The Cambridge History of Iran, Volume 5. Cambridge University Press. p. 165. ISBN 9780521069366.
  6. Starr, S. Frederick (2 June 2015). Lost Enlightenment: Central Asia's Golden Age from the Arab Conquest to Tamerlane (in ಇಂಗ್ಲಿಷ್). Princeton University Press. ISBN 978-0-691-16585-1.
  7. Petersen, Andrew (1996). Dictionary of Islamic Architecture. Routledge. pp. 161–162.
  8. Schlumberger, Daniel (1952). "Le Palais ghaznévide de Lashkari Bazar". Syria. 29 (3/4): 251–270. ISSN 0039-7946.
  9. Fehérvári, Géza; Shokoohy, Mehrdad (1980). "ARCHEOLOGICAL NOTES ON LASHKARI BAZAR". Wiener Zeitschrift für die Kunde des Morgenlandes. 72: 83–95. ISSN 0084-0076.
  10. Kipfer, Barbara Ann (29 June 2013). Encyclopedic Dictionary of Archaeology (in ಇಂಗ್ಲಿಷ್). Springer Science & Business Media. p. 576. ISBN 978-1-4757-5133-8.
  11. "Ghazni". The Columbia Electronic Encyclopedia, 6th ed. Copyright © 2007, Columbia University Press.
  12. Ibn Battuta (2004). Travels in Asia and Africa, 1325–1354 (reprint, illustrated ed.). London: Routledge. p. 179. ISBN 9780415344739. Retrieved 2010-09-10.
"https://kn.wikipedia.org/w/index.php?title=ಘಜ಼್ನಿ&oldid=1270546" ಇಂದ ಪಡೆಯಲ್ಪಟ್ಟಿದೆ