ಖಲ್ಜಿ ರಾಜವಂಶವು 1290-1320ರಲ್ಲಿ ದೆಹಲಿಯಿಂದ ಆಳಿದ ಒಂದು ರಾಜವಂಶ. ಇವರು ಮುಸ್ಲಿಂ ರಾಜರು (ಖಿಲ್ಜಿಗಳು).

ಖಲ್ಜಿಗಳು ನಿಯಂತ್ರುಸುತ್ತಿದ್ದ ಪ್ರಾಂತ್ಯಗಳು ಸುಮಾರು ೧೩೨೦[]

ಮೂಲತಃ ಖಲ್ಜಿಗಳು ತುರ್ಕರಾಗಿದ್ದರು.[][][] ಇವರು ಆಫ್ಘಾನಿಸ್ತಾನದ ಖಲ್ಜ್ ಪ್ರದೇಶದಲ್ಲಿ ಬಹಳ ಕಾಲ ನೆಲಸಿ ಆಫ್ಘನರ ಆಚಾರವಿಚಾರಗಳನ್ನು ಸಂಪಾದಿಸಿಕೊಂಡಿದ್ದರು. ಇವರು ತುರ್ಕರಿಗಿಂತ ಭಿನ್ನ ಪ್ರಕೃತಿಯುಳ್ಳವರಾಗಿದ್ದರೆಂದೂ, ಗುಲಾಮ ಸಂತತಿಯ ಕಡೆಯ ರಾಜನಾದ ಕೈಕುಬಾದನ ಮರಣಾನಂತರ ತುರ್ಕರ ಆಡಳಿತ ಕೊನೆಗೊಂಡಿತೆಂದೂ ಆ ಕಾಲದ ಇತಿಹಾಸಕಾರ ಬರಾನಿ ಹೇಳುತ್ತಾನೆ. ಖಲ್ಜಿಗಳಿಗೂ ತುರ್ಕರಿಗೂ ಸ್ನೇಹವಿರಲ್ಲಿಲ್ಲ. ಖಲ್ಜಿಗಳು ಸುಲ್ತಾನರಾಗುವ ಮುನ್ನ ಬಂಗಾಳವನ್ನು ಜಯಿಸಿ ಆಳುತ್ತಿದ್ದರು; ಮತ್ತು ಇನ್ನೂ ಅನೇಕ ಅಧಿಕಾರಗಳನ್ನು ಪಡೆದಿದ್ದರು. ಗುಲಾಮ ಸಂತತಿ ಕ್ಷೀಣವಾದಾಗ ಇವರೆಲ್ಲ ಜಲಾಲುದ್ದೀನ್ ಖಲ್ಜಿ ಎಂಬವನನ್ನು ದೆಹಲಿಯ ಸುಲ್ತಾನನ ಮಂತ್ರಿಯಾಗಿದ್ದ ನೈಜ಼ಾಮುದ್ದೀನನ ವಿರುದ್ಧ ಎತ್ತಿಕಟ್ಟಿದರು. ನೈಜಾಮುದ್ದೀನ್ ಜಲಾಲುದ್ದೀನನ ಶತ್ರು. ಸುಲ್ತಾನನ ಮರಣಾನಂತರ ಜಲಾಲುದ್ದೀನನನ್ನು ಅವರು ಸಿಂಹಾಸನದ ಮೇಲೆ ಕೂರಿಸಿದರು.

ಖಲ್ಜಿ ವಂಶದ ಆಡಳಿತ 30 ವರ್ಷಗಳ ಕಾಲ ನಡೆಯಿತು. ಈ ವಂಶದಲ್ಲಿ ಆಳ್ವಿಕೆ ನಡೆಸಿದ ಸುಲ್ತಾನರಲ್ಲಿ ಅಲ್ಲಾವುದ್ದೀನ್ ಖಲ್ಜಿ ಅತ್ಯಂತ ಪ್ರಸಿದ್ಧ. ಆತ 20 ವರ್ಷಗಳ ಕಾಲ ಆಡಳಿತ ನಡೆಸಿ ಭಾರತದಲ್ಲಿ ಮುಸ್ಲಿಂ ಚಕ್ರಾಧಿಪತ್ಯವನ್ನು ಅಭಿವೃದ್ಧಿಪಡಿಸಿದ.

ಜಲಾಲುದ್ದೀನ್

ಬದಲಾಯಿಸಿ

ಖಲ್ಜಿ ವಂಶದ ಮೊದಲನೆಯವನಾದ ಜಲಾಲುದ್ದೀನ್ ಸಿಂಹಾಸನವನ್ನೇರಿದಾಗ 70 ವರ್ಷ ವಯಸ್ಸಾಗಿತ್ತು. ತುಂಬ ಕರುಣಾಳುವಾದ ಈತ ಮುಪ್ಪಿನಿಂದಾಗಿ ದುರ್ಬಲನಾಗಿದ್ದ. ಈತನ ಆಡಳಿತ ಸಮರ್ಪಕವಾಗಿರಲಿಲ್ಲ. ಎಲ್ಲೆಲ್ಲೂ ದಂಗೆಗಳು ಎದ್ದುವು. ಇವಕ್ಕೆ ಮುಂದಾಳಾಗಿದ್ದವನೇ ಅಲ್ಲಾವುದ್ದೀನ್. ಈತ ಜಲಾಲುದ್ದೀನನ ಅಣ್ಣನ ಮಗ, ಅವನ ಅಳಿಯ. ಇವನು ಖಾಂದೇಶ್ ಮತ್ತು ದೇವಗಿರಿ ರಾಜ್ಯಗಳನ್ನು ಕೊಳ್ಳೆಹೊಡೆದು,[] ಐಶ್ವರ್ಯಬಲದಿಂದ, ಕುತಂತ್ರದಿಂದ ಜಲಾಲುದ್ದೀನನನ್ನೂ ಕೊಲೆಮಾಡಿ 1296ರಲ್ಲಿ ಸುಲ್ತಾನನಾದ.[][]

ಅಲ್ಲಾವುದ್ದೀನ್

ಬದಲಾಯಿಸಿ

ಅಲ್ಲಾವುದ್ದೀನ್ (1296-1316) ಖಲ್ಜಿ ವಂಶದ ಪ್ರಖ್ಯಾತ ದೊರೆ. ತನ್ನ ವಿರೋಧಿಗಳನ್ನೆಲ್ಲ ಕೊಲೆಮಾಡಿದ.[][] ರಾಜ್ಯ ವಿಸ್ತರಿಸಿದ. 1296ರಿಂದ 1305ರವರೆಗೆ ಅನೇಕ ಸಾರಿ ದಂಡೆತ್ತಿ ಬಂದ ಮಂಗೋಲಿಯನರನ್ನು ಹೊಡೆದು ಓಡಿಸಿದ.[೧೦] ದಕ್ಷಿಣ ಭಾರತದ ಮೇಲೆ ಮೊಟ್ಟಮೊದಲು ಆಕ್ರಮಣ ನಡೆಸಿದ ಮುಸ್ಲಿಂ ದೊರೆ ಈತನೇ. ದಕ್ಷಿಣದಲ್ಲಿ ದೇವಗಿರಿಯ ಯಾದವರು, ದೋರಸಮುದ್ರದ ಹೊಯ್ಸಳರು, ಪಾಂಡ್ಯರು, ಓರಂಗಲ್ಲಿನ ಕಾಕತೀಯರು ಇವರು ಅಲ್ಲಾವುದ್ದೀನ್ ಕಳುಹಿಸಿಕೊಟ್ಟ ಮಲ್ಲಿಕ್ ಕಾಫರನ ಸೈನ್ಯಕ್ಕೆ ಸೋತು ಶರಣಾಗತರಾದರು.[೧೧] ಈ ದಂಡೆಯಾತ್ರೆಗಳಿಂದ ಅಪಾರ ಐಶ್ವರ್ಯ ಅಲ್ಲಾವುದ್ದೀನನ ಕೈಸೇರಿತು. ಅವನ ಆಡಳಿತದ ಕೊನೆಗಾಲದಲ್ಲಿ ದೇಶದಲ್ಲಿ ಅವ್ಯವಸ್ಥೆ ತಲೆದೋರಿತು. ಅವನ ನಂಬಿಕೆಯ ಬಂಟನಾದ ಮಲ್ಲಿಕ್ ಕಾಫರನೇ ದ್ರೋಹ ಬಗೆದ.[೧೨] ಈ ಅವ್ಯವಸ್ಥೆಗಳ ನಡುವೆ ಅವನು 1316ರಲ್ಲಿ ಮರಣಹೊಂದಿದ.[೧೩]

ಅಲ್ಲಾವುದ್ದೀನನ ಮರಣಾನಂತರ ಅವನ ಆರು ವರ್ಷದ ಮಗನಾದ ಷಿಹಾಬುದ್ದೀನ್ ಉಮರನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ರಾಜ್ಯಸೂತ್ರಗಳನ್ನು ಕಾಫರ್ ವಶಪಡಿಸಿಕೊಂಡ.[೧೩] ಅಲ್ಲಾವುದ್ದೀನನ ಇಬ್ಬರು ಮಕ್ಕಳ ಕಣ್ಣುಗಳನ್ನು ಕೀಳಿಸಿ ಉಳಿದವರನ್ನು ಸೆರೆಯಲ್ಲಿಟ್ಟು ರಾಣಿಯನ್ನು ಅರಮನೆಯಿಂದೋಡಿಸಿದ. ಷಿಹಾಬುದ್ದೀನನ ತಾಯಿಯನ್ನು ಮದುವೆಯಾದ. ಇನ್ನೂ ಕ್ರೂರಕೃತ್ಯಗಳು ನಡೆಯುವದಕ್ಕೆ ಮೊದಲೇ ಕೆಲವು ಜನ ಸಿಪಾಯಿಗಳು ಮಲ್ಲಿಕ್ ಕಾಫರನನ್ನು ಹಿಡಿದು ಕೊಲೆಮಾಡಿದರು.[೧೪] ಅನಂತರ ಅಲ್ಲಾವುದ್ದೀನನ ಮೂರನೆಯ ಮಗನಾದ ಮುಬಾರಕ್ ಖಾನನನ್ನು ಬಂಧನದಿಂದ ಬಿಡಿಸಿದರು. ಆತ ತಮ್ಮನಾದ ಷಿಹಾಬುದ್ದೀನನ ಕಣ್ಣು ಕೀಳಿಸಿ, ಕುತ್ಬುದ್ದೀನ್ ಮುಬಾರಕ್ ಷಹ ಎಂಬ ಹೆಸರಿನಿಂದ ಸುಲ್ತಾನನಾದ.[೧೫] ವಿಲಾಸಪ್ರಿಯನಾದ ಈತ ಸಿಂಹಾಸನಕ್ಕೆ ಬರುತ್ತಲೇ 17,000 ಬಂಧಿಗಳನ್ನು ಬಿಡುಗಡೆ ಮಾಡಿದ;[೧೬] ಸೈನ್ಯಕ್ಕೆ 6 ತಿಂಗಳ ಸಂಬಳವನ್ನು ಇನಾಮಾಗಿ ಕೊಟ್ಟ;[೧೭] ಹೊಸ ಕಂದಾಯಗಳನ್ನೆಲ್ಲ ತೆಗೆದುಹಾಕಿದ. ಇದರಿಂದ ಜನರೆಲ್ಲರೂ ಭಯ ತಪ್ಪಿ ಸುಖಸಂತೋಷಗಳಲ್ಲಿ ಮಗ್ನರಾದರು. ಕುಡಿತ ಎಲ್ಲೆಲ್ಲೂ ಹೆಚ್ಚಿತು. ಸರಕುಗಳ ಬೆಲೆ ಹೆಚ್ಚಿ, ಮೋಸ ಲಂಚಗಳು ಅಧಿಕವಾದುವು. ದೇಶದಲ್ಲಿ ಎಲ್ಲೆಲ್ಲೂ ದಂಗೆ ನಡೆಯಿತು. ಕಡೆಗೆ 1321ರಲ್ಲಿ ಮುಬಾರಕನನ್ನು ಖುಸ್ರಾವ್ ಖಾನ್ ಕೊಲೆಮಾಡಿ, ಸುಲ್ತಾನ್ ನಸಿರುದ್ದೀನನೆಂಬ ಹೆಸರಿನಿಂದ ಸಿಂಹಾಸನವನ್ನೇರಿದ.[೧೮] ಇವನ ಆಡಳಿತ ಅರಾಜಕತೆಯಿಂದ ಕೂಡಿ ರಕ್ತಪಾತಕ್ಕೆ ಎಡೆ ಮಾಡಿಕೊಟ್ಟಿತು. ಹಿಂದು ಮುಸ್ಲಿಮರಿಬ್ಬರೂ ಇವನ ಆಡಳಿತದಿಂದ ಬೇಸತ್ತರು. ಈ ಸಮಯವನ್ನುಪಯೋಗಿಸಿಕೊಂಡು ಘಾಜ಼ೀಖಾನ್ ತೊಗಲಕ್ ಎಂಬವನು ಖುಸ್ರುವನ್ನು ಸೋಲಿಸಿ, ಅವನನ್ನು ಶೂಲಕ್ಕೇರಿಸಿ 1321ರಲ್ಲಿ ಸಿಂಹಾಸನವನ್ನೇರಿದ.[೧೯][೨೦] ಇಲ್ಲಿಗೆ ಖಲ್ಜಿ ವಂಶ ಕೊನೆಗೊಂಡು, ತೊಗಲಕ್ ವಂಶದ ಆಳ್ವಿಕೆ ಪ್ರಾರಂಭವಾಯಿತು.

ಉಪಸಂಹಾರ

ಬದಲಾಯಿಸಿ

ಒಟ್ಟಿನಲ್ಲಿ 30 ವರ್ಷಗಳ ಕಾಲ ಆಡಳಿತ ನಡೆಸಿದ ಖಲ್ಜಿ ವಂಶದವರಲ್ಲಿ ಅಲ್ಲಾವುದ್ದೀನನನ್ನು ಬಿಟ್ಟರೆ, ಉಳಿದ ರಾಜರು ಅಶಕ್ತರಾಗಿದ್ದರು. ದಂಗೆಗಳು, ಅರಾಜಕತೆ, ಕೊಲೆಗಳು ಸಾಮಾನ್ಯವಾಗಿದ್ದುವು. ಆದರೆ ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ದಂಡೆತ್ತಿಬಂದ ಮುಸ್ಲಿಂ ದೊರೆಗಳು ಖಲ್ಜಿಗಳೇ. ರಾಜ್ಯ ವಿಸ್ತರಣೆಗಿಂತ, ದಕ್ಷಿಣದ ಐಶ್ವರ್ಯವನ್ನು ಲೂಟಿಮಾಡುವುದೇ ಇವರ ಉದ್ದೇಶವಾಗಿತ್ತು. ಇವರ ಕಾಲದಲ್ಲಿ ಕಲೆ ಸಾಹಿತ್ಯ ಅಷ್ಟಾಗಿ ಬೆಳೆಯಲಿಲ್ಲ. ಅಮೀರ್ ಖುಸ್ರು ಎಂಬ ಪ್ರಖ್ಯಾತ ಪರ್ಷಿಯನ್ ಕವಿ ಅಲ್ಲಾವುದ್ದೀನನ ಆಸ್ಥಾನದಲ್ಲಿದ್ದ.

ಉಲ್ಲೇಖಗಳು

ಬದಲಾಯಿಸಿ
  1. Schwartzberg, Joseph E. (1978). A Historical atlas of South Asia. Chicago: University of Chicago Press. p. 147, map XIV.3 (i). ISBN 0226742210.
  2. Khan, Yusuf Husain (1971). Indo-Muslim Polity (Turko-Afghan Period) (in ಇಂಗ್ಲಿಷ್). Indian Institute of Advanced Study.
  3. Fisher, Michael H. (18 October 2018). An Environmental History of India: From Earliest Times to the Twenty-First Century (in ಇಂಗ್ಲಿಷ್). Cambridge University Press. ISBN 978-1-107-11162-2. In 1290, the Turk-Afghan Khalji clan ended the first mamluk dynasty and then ruled in Delhi until one of their own Turkish mamluk commanders rebelled and established his own Tugluq dynasty
  4. Satish Chandra (2007). History of Medieval India:800-1700 (in ಇಂಗ್ಲಿಷ್). Orient Longman. p. 93. ISBN 978-81-250-3226-7. The Khalji rebellion was welcomed by the non-Turkish sections in the nobility. The Khaljis who were of a mixed Turkish-Afghan origin, did not exclude the Turks from high offices, but the rise of the Khaljis to power ended the Turkish monopoly of high offices
  5. A. B. M. Habibullah 1992, p. 323.
  6. A. L. Srivastava 1966, p. 145.
  7. A. B. M. Habibullah 1992, p. 324.
  8. Vincent A Smith, The Oxford History of India: From the Earliest Times to the End of 1911, p. 217, at Google Books, Chapter 2, pp 231-235, Oxford University Press
  9. William Wilson Hunter, The Indian Empire: Its Peoples, History, and Products, p. 334, at Google Books, WH Allen & Co., London, pp 334-336
  10. "Khalji Dynasty". Encyclopædia Britannica. Retrieved 2014-11-13.
  11. Sastri (1955), pp 206–208
  12. R. Vanita & S. Kidwai 2000, p. 132.
  13. ೧೩.೦ ೧೩.೧ Banarsi Prasad Saksena 1992, p. 425.
  14. Banarsi Prasad Saksena 1992, p. 427.
  15. Banarsi Prasad Saksena 1992, p. 428.
  16. Banarsi Prasad Saksena 1992, p. 429.
  17. Kishori Saran Lal 1950, p. 323.
  18. Mohammad Habib 1992, p. 446.
  19. B. P. Saksena 1992, pp. 456–459.
  20. Mohammad Habib 1992, p. 447.

ಗ್ರಂಥಸೂಚಿ

ಬದಲಾಯಿಸಿ



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: