ಘಿಯಾಸ್-ಉದ್-ದೀನ್ ತುಘಲಕ್
ಘಿಯಾಸ್-ಉದ್-ದೀನ್ ತುಘಲಕ್ (ಆಳ್ವಿಕೆ 1320-1325}. ದೆಹಲಿಯ ಸುಲ್ತಾನ; ತುಘಲಕ್ ಸಂತತಿಯ ಸ್ಥಾಪಕ.
ಬದುಕು
ಬದಲಾಯಿಸಿಇವನ ತಂದೆ ತುರ್ಕ; ಸುಲ್ತಾನ್ ಬಲ್ಬನನ ಗುಲಾಮನಾಗಿದ್ದ. ತಾಯಿ ಹಿಂದೂ; ಜಾಟ್ ಮಹಿಳೆ. ಘಿಯಾಸ್-ಉದ್-ದೀನ್ ಸ್ವಸಾಮರ್ಥ್ಯದಿಂದ ಮೇಲಕ್ಕೇರಿದ. ಇವನ ಮೊದಲ ಹೆಸರು ಘಾಜಿ ಮಾಲಿಕ್. ದೆಹಲಿಯ ಸುಲ್ತಾನನಾಗಿದ್ದ ಅಲಾ-ಉದ್-ದೀನ್ ಖಿಲ್ಜಿಯಿಂದ ಸೈನ್ಯದಲ್ಲಿ ಉನ್ನತ ಹುದ್ದೆಗೆ ನೇಮಕ ಹೊಂದಿದ್ದ ಈತ ವಾಯವ್ಯ ಗಡಿನಾಡಿನಲ್ಲಿ ಮಂಗೋಲರ ಆಕ್ರಮಣವನ್ನು ಧೈರ್ಯದಿಂದ ಎದುರಿಸಿ ಕಾದಾಡಿದ. ಅಲಾ-ಉದ್-ದೀನನ ಮರಣಾನಂತರದ ಕಾಲದಲ್ಲಿ ದೆಹಲಿಯ ಸಿಂಹಾಸನವನ್ನು ಅಪಹರಿಸಿಕೊಂಡಿದ್ದ ಖುಸ್ರಾವ್ ಖಾನನನ್ನು ಸೋಲಿಸಿ ಕೊಲ್ಲಿಸುವುದರಲ್ಲಿ ಈತ ಪ್ರಧಾನ ಪಾತ್ರ ವಹಿಸಿದ್ದನೆಂದು ಹೇಳಲಾಗಿದೆ. ದೆಹಲಿಯ ಸುಲ್ತಾನ ಪದವಿ ತಾನಾಗಿಯೇ ಒದಗಿ ಬಂದಿದ್ದರೂ ಅದನ್ನು ಸ್ವೀಕರಿಸಲು ಈತ ಹಿಂಜರಿದ. ಆ ವೇಳೆಗೆ ಇಳಿವಯಸ್ಸಿನವನಾಗಿದ್ದ ಈತನನ್ನು ದೆಹಲಿಯ ಆಸ್ಥಾನಿಕರು ಸುಲ್ತಾನನೆಂದು ಘೋಷಿಸಿದಾಗ ಸಿಂಹಾಸವನ್ನೇರಿ ಘಿಯಾಸ್-ಉದ್-ದೀನ್ ತುಘಲಕ್ ಎಂಬ ಹೆಸರು ತಳೆದ.
ದಕ್ಷ ಆಡಳಿತಗಾರನಾಗಿದ್ದ ಘಿಯಾಸ್-ಉದ್-ದೀನ್ ಯುದ್ಧಚತುರನೂ ಆಗಿದ್ದ. ದಖನ್ ಮತ್ತು ಬಂಗಾಲಗಳಲ್ಲಿ ಏಳುತ್ತಿದ್ದ ದಂಗೆಗಳನ್ನು ಅಡಗಿಸಿದ. ತನ್ನ ಆಳ್ವಿಕೆ ಆರಂಭವಾದೊಡನೆಯೇ ತನ್ನ ಮಗನಾದ ಜೌನ ಖಾನನನ್ನು (ಮಹಮದ್ ಬಿನ್ ತುಘಲಕ್) ದಕ್ಷಿಣಕ್ಕೆ ಕಳಿಸಿ ಅಲ್ಲಿಯ ಪರಿಸ್ಥಿತಿಯನ್ನು ಹತೋಟಿಗೆ ತಂದ. ವಾರಂಗಲ್ಲಿನ ಎರಡನೆಯ ಪ್ರತಾಪರುದ್ರದೇವನನ್ನು ಮಣಿಸಿದ. ಕೆಲವು ವರ್ಷಗಳ ತರುವಾಯ ಬಂಗಾಲವನ್ನು ಸುವ್ಯವಸ್ಥೆಗೆ ಒಳಪಡಿಸುವ ಸಲುವಾಗಿ ಅಲ್ಲಿಗೆ ಹೋಗಿದ್ದು ಹಿಂದಿರುಗಿ ಬರುತ್ತಿದ್ದಾಗ ಸಾವಿಗೀಡಾದ. ಆದರೆ ಇದು ಆಕಸ್ಮಿಕವಲ್ಲವೆಂದೂ ದೆಹಲಿಯ ಸಿಂಹಾಸನವನ್ನು ಆದಷ್ಟು ಜಾಗ್ರತೆ ಏರಬೇಕೆಂಬ ಆಸೆಯಿಂದ ಮಗನಾದ ಜೌನ ಖಾನನೇ ಇದಕ್ಕೆ ಕಾರಣವೆಂದೂ ಕೆಲವರ ಅಭಿಮತ.
ಆಡಳಿತ
ಬದಲಾಯಿಸಿಈತ ಕೇವಲ 5 ವರ್ಷಗಳ ಕಾಲ ರಾಜ್ಯವಾಳಿದವನಾದರೂ ಇವನ ಆಡಳಿತದಲ್ಲಿ ವಿಶೇಷ ದಕ್ಷತೆಯಿತ್ತು. ಅನಾಯಕತ್ವದಿಂದ ಬಿಗಿತಪ್ಪಿದ್ದ ರಾಜ್ಯವನ್ನು ಇವನು ಪುನವರ್ಯ್ವಸ್ಥೆಗೊಳಿಸಿ, ಶಾಂತಿ ನೆಲಸುವಂತೆ ಮಾಡಿದ. ಅಧಿಕಾರಿಗಳನ್ನು ಬಿಗಿಯಾಗಿಟ್ಟಿದ್ದ, ದರೋಡೆಕೋರರ ಹುಟ್ಟಡಗಿಸಿದ; ಕಂದಾಯದ ಹೊರೆಯಿಳಿಸಿದ. ಕಾನೂನುಬಾಹಿರವಾಗಿ ಜಮೀನು ಪಡೆದಿದ್ದವರಿಂದ ಅದನ್ನು ಹಿಂದಕ್ಕೆ ಪಡೆದುಕೊಂಡ. ನೀರಾವರಿಯೇ ಮುಂತಾದ ಹಲವು ಯೋಜನೆಗಳು ಕಾರ್ಯಗತವಾದುವು. ಇದರಿಂದ ರೈತರ ಜೀವನ ಉತ್ತಮ ಗೊಂಡಿತು. ಬಡವರಿಗೆ ಪರಿಹಾರ ದೊರಕಿಸುವ ವ್ಯವಸ್ಥೆಯೊಂದು ಜಾರಿಗೆ ಬಂತು. ಅಂಚೆಯ ವ್ಯವಸ್ಥೆ ಸುಗಮಗೊಂಡಿತು. ಹೀಗೆ ಆಡಳಿತದ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆಗಳನ್ನು ತಂದ ಘಿಯಾಸ್-ಉದ್-ದೀನ್ ಕವಿಜನಾಶ್ರಯನೂ ಆಗಿದ್ದ. ಭಾರತದ ಗಿಳಿ ಎನಿಸಿದ ಪಾರಸೀ ಕವಿ ಅಮೀರ್ ಖುಸ್ರು ಈತನ ಆಸ್ಥಾನ ಕವಿಯಾಗಿದ್ದ.