ಕಥಕ್ಕಳಿ

ಕೇರಳದ ಶಾಸ್ತ್ರೀಯ ನೃತ್ಯ

ಕಥಕ್ಕಳಿ (ಮಲಯಾಳಂ:കഥകളി)ಯು ಅತ್ಯಂತ ಶೈಲೀಕೃತ ಶಾಸ್ತ್ರೀಯ ಭಾರತೀಯ ನೃತ್ಯ-ನಾಟಕವಾಗಿದೆ. ಪಾತ್ರಧಾರಿಗಳ ಆಕರ್ಷಕ ಅಲಂಕಾರ, ವೈಭವವಾದ ವೇಷಭೂಷಣ, ವಿಶದವಾದ ಭಾವಭಂಗಿಗಳು ಮತ್ತು ಅತಿ ಸ್ಪಷ್ಟವಾದ ಆಂಗಿಕ ಚಲನೆಗಳು ಹಿನ್ನೆಲೆ ಸಂಗೀತ ಮತ್ತು ಪೂರಕವಾದ ತಾಳವಾದ್ಯದೊಂದಿಗೆ ಹದವಾಗಿ ಬೆರೆತಿರುವಂತೆ ಪ್ರಸ್ತುತಪಡಿಸಲಾಗುತ್ತದೆ. ಭಾರತದ ಇಂದಿನ ಕೇರಳರಾಜ್ಯದಲ್ಲಿ ಸುಮಾರು 17ನೇ ಶತಮಾನದಲ್ಲಿ ಅದು ಹುಟ್ಟಿತು.[] ಕಾಲಕ್ರಮೇಣ ಸುಧಾರಿತ ನೋಟಗಳು, ಪರಿಷ್ಕೃತ ಭಾವಭಂಗಿಗಳು ಮತ್ತು ಹೆಚ್ಚುವರಿ ವಿಷಯವಸ್ತುವಿನೊಂದಿಗೆ, ಅಲಂಕೃತ ಹಾಡುಗಾರಿಕೆ ಹಾಗೂ ನಿಖರವಾದ ತಾಳಮದ್ದಲೆಯೂ ಸೇರಿಕೊಂಡು, ಮತ್ತಷ್ಟು ವಿಕಸನಗೊಂಡಿತು.

ಸದ್ಗುಣಶೀಲ ಪಚ್ಚ (ಹಸಿರು)ಪಾತ್ರದಲ್ಲಿರುವ ಕಥಕ್ಕಳಿ ಕಲಾವಿದ.
A close-up of a Kathakali artist

ಇತಿಹಾಸ

ಬದಲಾಯಿಸಿ

ಕಥಕ್ಕಳಿಯು ಅದಕ್ಕಿಂತ ಮೊದಲಿನ ನೃತ್ಯ-ನಾಟಕ ರೂಪವಾದ ರಾಮನಾಟ್ಟಂನಿಂದ ವ್ಯುತ್ಪನ್ನಗೊಂಡಿತು, ಜೊತೆಗೆ ಕೃಷ್ಣನಾಟ್ಟಂನಿಂದ ಕೆಲವು ತಂತ್ರಗಳನ್ನು ತೆಗೆದುಕೊಂಡಿತು. "ಆಟ್ಟಂ" ಎಂದರೆ ಅಭಿನಯಿಸುವುದು ಎಂದರ್ಥ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಥಕ್ಕಳಿಗೆ ಮೊದಲಿನ ಈ ಎರಡೂ ಸ್ವರೂಪಗಳು ಹಿಂದೂ ದೇವರುಗಳಾದ ರಾಮ ಮತ್ತು ಕೃಷ್ಣನ ಕಥೆಗಳನ್ನು ಪ್ರಸ್ತುತಪಡಿಸುವುದಕ್ಕೆ ಸಂಬಂಧಿಸಿದ್ದವು.

ಕೃಷ್ಣನಾಟ್ಟಂಗೆ ಪೂರಕವಾಗಿದ್ದ ಕೊಟ್ಟರಕ್ಕರವು ಕೊಳಿಕ್ಕೋಡ್‌‌ನ ಜಮೊರಿನ್ಸ್‌ರಲ್ಲಿ ತನ್ನ ಮೂಲವನ್ನು ಹೊಂದಿದೆ.

ರಾಮನಾಟ್ಟಂ ಆಗಿದ್ದಾಗಿನ ಮೊದಲ ಹಂತವನ್ನು ನಿರ್ಲಕ್ಷಿಸಿದರೆ, ಕಥಕ್ಕಳಿಯು ವೀಟ್ಟಟ್ಟನಾಡ್‌‌ನಲ್ಲಿ ಉಗಮಗೊಂಡಿದೆ ಎನ್ನಬಹುದು. ಇಲ್ಲಿ ವಿಟ್ಟತು ತಂಬುರನ್‌‌ , ಕೊಟ್ಟಯತು ತಂಬುರನ್‌ (ಇದು ಮಲಬಾರ್‌‌‌ನಲ್ಲಿರುವ ಕೊಟ್ಟಾಯಂ[ಕೊಟ್ಟಾಯಂ(ಮಲಬಾರ್‌‌‌)ನೋಡಿ] ಮತ್ತು ಛತು ಪಣಿಕ್ಕರ್ ಅವರಂತಹ ಇನ್ನೂ ಅನೇಕ ಸಮರ್ಪಣಾಭಾವದ ಕಲಾವಿದರು ಸೇರಿ ಇಂದು ನಾವು ಯಾವುದನ್ನು ಕಥಕ್ಕಳಿ ಎನ್ನುತ್ತೇವೆಯೋ ಅದಕ್ಕೆ ನೆಲೆಗಟ್ಟನ್ನು ಒದಗಿಸಿದರು. ಕಥಕ್ಕಳಿಯ ಪದ್ಧತಿಗಳು, ಶಾಸ್ತ್ರೀಯ ವಿವರಗಳು ಮತ್ತು ಗ್ರಾಂಥಿಕ ಪರಿಪೂರ್ಣತೆ ಕುರಿತು ಅವರ ಪ್ರಯತ್ನಗಳು ಕೇಂದ್ರೀಕೃತವಾಗಿದ್ದವು. ಕೊಟ್ಟಯತು ತಂಬುರಾನ್‌ ನಾಲ್ಕು ಶ್ರೇಷ್ಠ ಕೃತಿಗಳನ್ನು ರಚಿಸಿದರು, ಅವೆಂದರೆ; ಕಿರ್ಮೀರವಧಂ, ಬಕವಧಂ, ನಿವತಕವಾಚ ಮತ್ತು ಕಲ್ಯಾಣಸೌಗಂಧಿಕಂ. ಇದರ ಬಳಿಕ ಕಥಕ್ಕಳಿಯಲ್ಲಿ ನಡೆದ ಎಲ್ಲ ಪ್ರಮುಖ ಬದಲಾವಣೆಗಳು ಕಪ್ಲಿಂಗದ್ ನಾರಾಯಣನ್ ನಂಬೂದಿರಿ(1739–1789) ಎಂಬ ಏಕೈಕ ವ್ಯಕ್ತಿಯ ಪ್ರಯತ್ನದಿಂದ ಆದವು. ಅವರು ಉತ್ತರ ಕೇರಳದ ಕಡೆಯವರಾಗಿದ್ದರು. ಆದರೆ ವೀಟ್ಟತು ಕಲರಿ ಕಲೆಯ ವಿವಿಧ ಸಾಮರ್ಥ್ಯಗಳಲ್ಲಿ ಮೂಲಭೂತ ಬೋಧನೆಗಳನ್ನು ಪಡೆದುಕೊಂಡ ನಂತರ ಅವರು ತಿರುವಾಂಕೂರ್‌‌( ತಿರುವನಂತಪುರ)ಗೆ ಹೋದರು. ರಾಜಧಾನಿಯಲ್ಲಿ ಮತ್ತು ಇನ್ನೂ ಅನೇಕ ಕೇಂದ್ರಗಳಲ್ಲಿ ಅವರು ಸುಧಾರಣೆಗಳನ್ನು ತರುವ ವಿಚಾರದಲ್ಲಿ ಸಹಕರಿಸುವ ಇಚ್ಛೆಯುಳ್ಳ ಅನೇಕರನ್ನು ಕಂಡರು.

ಕಥಕ್ಕಳಿಯು ಕೃಷ್ಣನಾಟ್ಟಂ, ಕೂಡಿಯಾಟ್ಟಂ(ಕೇರಳದಲ್ಲಿ ಪ್ರಚಲಿತದಲ್ಲಿದ್ದ ಒಂದು ಶಾಸ್ತ್ರೀಯ ಸಂಸ್ಕೃತ ನಾಟಕ) ಮತ್ತು ಅಷ್ಟಪದಿಯಾಟ್ಟಂ (12ನೇ ಶತಮಾನದ ಗೀತಗೋವಿಂದಂ ಸಂಗೀತನಾಟಕದ ಒಂದು ರೂಪಾಂತರ), ಈ ಮೂರು ಕಲೆಗಳೊಂದಿಗೆ ಬಹಳ ಹೋಲಿಕೆಗಳನ್ನು ಹೊಂದಿದೆ. ಸಾಂಪ್ರದಾಯಿಕ ಮತ್ತು ಧಾರ್ಮಿಕವಿಧಿಯ ಕಲಾ ಪ್ರಕಾರಗಳಾದ ಮುಡಿಯೆಟ್ಟು , ತಿಯ್ಯಟ್ಟು , ತೆಯ್ಯಂ ಮತ್ತು ಪದಯನಿ ಇತ್ಯಾದಿಗಳ ಹಲವಾರು ಅಂಶಗಳನ್ನು ಕಥಕ್ಕಳಿಯು ಅಳವಡಿಸಿಕೊಂಡಿದೆ. ಜೊತೆಗೆ ಪೊರಟ್ಟುನಾಟಕಂನಂತಹ ಜನಪದ ಕಲೆಗಳಿಂದಲೂ ಕೆಲವು ಅಂಶಗಳನ್ನು ತೆಗೆದುಕೊಂಡಿದೆ. ಈ ಎಲ್ಲದರೊಂದಿಗೆ, ಸಮರಕಲೆಯಾದ ಕಳರಿಪಯಟ್ಟು ಕೂಡ ಕಥಕ್ಕಳಿಯ ಆಂಗಿಕಚಲನೆಗಳನ್ನು ಪ್ರಭಾವಿಸಿದೆ. ಸ್ಥಳೀಯ ಭಾಷೆ ಮಲೆಯಾಳಂ, (ಮಣಿಪ್ರವಲಂ ಎಂದು ಕರೆಯುವ ಸಂಸ್ಕೃತ ಮತ್ತು ಮಲೆಯಾಳಂನ ಮಿಶ್ರಣವಾಗಿದ್ದರೂ), ಕಥಕ್ಕಳಿಯ ಸಾಹಿತ್ಯವು ಸಾಮಾನ್ಯ ಪ್ರೇಕ್ಷಕರಿಗೂ ಚೆನ್ನಾಗಿ ಅರ್ಥವಾಗುವಂತೆ ಮಾಡುವಲ್ಲಿ ಸಹಕರಿಸಿತು.

ಸಮಕಾಲೀನ ಒಲವುಗಳು

ಬದಲಾಯಿಸಿ

ಕಥಕ್ಕಳಿಯನ್ನು ಆಧುನಿಕಗೊಳಿಸುವ, ಪ್ರಸರಿಸುವ, ಉತ್ತೇಜಿಸುವ ಮತ್ತು ಜನಪ್ರಿಯವಾಗಿಸುವ ಒಂದು ಭಾಗವಾಗಿ ಒಂದು ಭಾಗವಾಗಿ, ನವದೆಹಲಿಯಲ್ಲಿರುವ ಕಥಕ್ಕಳಿ ಅಂತಾರಾಷ್ಟ್ರೀಯ ಕೇಂದ್ರ ವು 1980ರಿಂದ ಯೋಜನೆಯೊಂದನ್ನು ಮುಂದುವರೆಸಿಕೊಂಡು ಬಂದಿದೆ. ಈ ಯೋಜನೆಯಡಿಯಲ್ಲಿ ಸಾಂಪ್ರದಾಯಿಕ ಮತ್ತು ಪೌರಾಣಿಕ ಕಥೆಗಳು ಮಾತ್ರವಲ್ಲದೇ, ಐತಿಹಾಸಿಕ ಕಥೆಗಳು, ಐರೋಪ್ಯ ಮಹಾಕಾವ್ಯಗಳು ಮತ್ತು ಶೇಕ್ಸ್‌ಪಿಯರ್‌ ನಾಟಕಗಳನ್ನು ಆಧರಿಸಿದ ಹೊಸ ಕಥಕ್ಕಳಿ ನೃತ್ಯ-ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಇತ್ತೀಚೆಗೆ ಅವರು ಶೇಕ್ಸ್‌ಪಿಯರ್‌ನ ಒಥೆಲೋ ಮತ್ತು ಗ್ರೀಕ್‌-ರೋಮನ್ ಪುರಾಣವಾದ ಸೈಕ್ ಮತ್ತು ಕ್ಯುಪಿಡ್‌ ಆಧರಿಸಿ ಕಥಕ್ಕಳಿ ಪ್ರದರ್ಶನವನ್ನು ರೂಪಿಸಿದ್ದರು.

ಘಟಕಗಳು

ಬದಲಾಯಿಸಿ
 
ದೊಡ್ಡ ಎಣ್ಣೆ ದೀಪದ ಎದುರಿಗೆ ಕಥಕ್ಕಳಿ ಪ್ರದರ್ಶನ.

ಲಲಿತ ಕಲೆಗಳ ಐದು ಘಟಕಗಳ ಸಮ್ಮಿಶ್ರಣ ಕಥಕ್ಕಳಿ ಎಂದು ಪರಿಗಣಿಸಲಾಗುತ್ತದೆ:

  • ಅಭಿವ್ಯಕ್ತಿಗಳು(ನಾಟ್ಯಂ, ಮುಖದ ಅಭಿವ್ಯಕ್ತಿಗಳಿಗೆ ಹೆಚ್ಚು ಒತ್ತು ನೀಡುವ ಘಟಕ)
  • ನೃತ್ಯ(ನೃತ್ತಂ, ಲಯ ಮತ್ತು ಕೈಗಳು, ಕಾಲುಗಳು ಹಾಗೂ ದೇಹದ ಚಲನೆಗೆ ಒತ್ತು ನೀಡುವ ನೃತ್ಯದ ಘಟಕ)
  • ಅಭಿನಯ (ನೃತ್ಯಂ, ಕೈಗಳ ಭಂಗಿಗಳಾದ "ಮುದ್ರಾಗಳ" ಮೇಲೆ ಒತ್ತು ನೀಡುವ ನಾಟಕದ ಅಂಶ)
  • ಹಾಡು/ಗಾಯನ(ಗೀತ)
  • ಸಹವಾದ್ಯ(ವಾದ್ಯಂ)

ಗೀತೆಗಳು/ಸಾಹಿತ್ಯವು ಸಾಹಿತ್ಯಂ ಎಂಬ ಇನ್ನೊಂದು ಸ್ವಂತಂತ್ರ ಘಟಕವೆಂದು ಹೇಳಬಹುದಾದರೂ, ಅದು ಗೀತ ಅಥವಾ ಸಂಗೀತದ ಒಂದು ಘಟಕವೆಂದೇ ಪರಿಗಣಿತವಾಗುತ್ತದೆ. ಏಕೆಂದರೆ ಅದು ನೃತ್ತಂ, ನೃತ್ಯಂ ಮತ್ತು ನಾಟ್ಯಂಗೆ ಒಂದು ಪೂರಕ ಪಾತ್ರವನ್ನು ಮಾತ್ರ ವಹಿಸುತ್ತದೆ.

ಕಥಕ್ಕಳಿ ಪ್ರದರ್ಶನಗಳು

ಬದಲಾಯಿಸಿ
 
ಕಥಕ್ಕಳಿ ವೇದಿಕೆ.

ಪಾರಂಪರಿಕವಾಗಿ ಸುಮಾರು 101 ಶಾಸ್ತ್ರೀಯ ಕಥಕ್ಕಳಿ ಕಥೆಗಳಿವೆ ಎನ್ನಲಾಗಿದೆ. ಆದರೆ ಇಂದಿನ ದಿನಗಳಲ್ಲಿ ಇದರ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಕಥೆಗಳನ್ನು ಸಾಮಾನ್ಯವಾಗಿ ಪ್ರದರ್ಶಿಸಲಾಗುತ್ತದೆ. ಇವುಗಳಲ್ಲಿ ಹೆಚ್ಚುಕಡಿಮೆ ಎಲ್ಲವೂ ಒಂದು ಇಡೀ ರಾತ್ರಿ ಪ್ರದರ್ಶನಕ್ಕೆಂದೇ ಸಂಯೋಜಿಸಲಾಗಿವೆ. ಇಂದು, ಸಂಕ್ಷಿಪ್ತ ಪ್ರದರ್ಶನಗಳ ಅಥವಾ ಆಯ್ದ ಕಥೆಗಳ ಆವೃತ್ತಿಯ ಜನಪ್ರಿಯತೆ ಅಧಿಕವಿರುವುದರಿಂದ, ಸಂಜೆ ಶುರುವಾಗಿ ಮೂರು-ನಾಲ್ಕು ಗಂಟೆಗಳ ಅವಧಿಯಲ್ಲಿ ಪ್ರದರ್ಶನಗಳು ಮುಗಿಯುತ್ತವೆ. ಹೀಗಾಗಿ ಹೆಚ್ಚಿನ ಕಥೆಗಳು ಸಮಗ್ರವಾಗಿ ಅಥವಾ ಸಂಪೂರ್ಣವಾಗಿ ಅಲ್ಲದೇ, ಭಾಗಶಃ ಪ್ರದರ್ಶಿತಗೊಳ್ಳುವುದೇ ಹೆಚ್ಚು. ಜೊತೆಗೆ ಆಯ್ಕೆಯು ನೃತ್ಯಸಂಯೋಜನೆ ಸೌಂದರ್ಯ, ವಿಷಯವಸ್ತುವಿನ ಪ್ರಸ್ತುತತೆ/ಜನಪ್ರಿಯತೆ ಅಥವಾ ನಾಟಕೀಯ ಅಂಶಗಳನ್ನು ಆಧರಿಸಿರುತ್ತದೆ. ಕಥಕ್ಕಳಿಯು ಒಂದು ಶಾಸ್ತ್ರೀಯ ಕಲಾ ಪ್ರಕಾರವಾಗಿದೆ. ಆದರೆ ಈ ಕಲೆಯ ಪರಿಚಯವಿಲ್ಲದ ಹೊಸಬರು ಕೂಡ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಪಾತ್ರಧಾತರಿಗಳ ಲಾವಣ್ಯಮಯ ನೋಟ, ಅವರ ಅಮೂರ್ತ ಚಲನೆಗಳು, ಸಂಗೀತದ ಸ್ವರಗಳು ಮತ್ತು ಲಯಬದ್ಧ ತಾಳದ ಅದ್ಭುತ ಸಮನ್ವಯತೆ, ಈ ಎಲ್ಲದರಿಂದ ಹೊಸಬರಿಗೂ ಗ್ರಹಿಸಲು ಸಾದ್ಯ. ಜೊತೆಗೆ ಏನೇ ಅದರೂ, ಜನಪದದ ಅಂಶಗಳು ಇದರಲ್ಲಿ ಮುಂದುವರಿದುಕೊಂಡೇ ಬಂದಿವೆ. ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು, ಪ್ರಾಯಶಃ ಪ್ರದರ್ಶಿತವಾಗುತ್ತಿರುವ ಕಥೆಯ ಒಂದು ಕಲ್ಪನೆ ಇದ್ದರೆ ಒಳ್ಳೆಯದು.

"It didn't matter that the story had begun, because Kathakali discovered long ago that the secret of the Great Stories is that they have no secrets. The Great Stories are the ones you have heard and want to hear again. The ones you can enter anywhere and inhabit comfortably. They don't deceive you with thrills and trick endings."
- The God of Small Things by Arundhati Roy[]

ಕಥಕ್ಕಳಿಯಲ್ಲಿ ಅಭಿನಯಿಸಲಾಗುವ ತುಂಬ ಜನಪ್ರಿಯ ಕತೆಗಳು ಹೀಗಿವೆ : ನಳಚರಿತಂ(ಮಹಾಭಾರತ ದ ಒಂದು ಕಥೆ),ದುರ್ಯೋಧನ ವಧಂ (ಮಹಾಭಾರತದ ಯುದ್ಧದ ಮೇಲೆ ಕೇಂದ್ರೀಕೃತವಾದ ಕತೆ), ಕಲ್ಯಾಣಸೌಗಂಧಿಕಂ, (ತನ್ನ ಹೆಂಡತಿ ಪಾಂಚಾಲಿಗೆ ಹೂ ತರಲು ಹೋಗುವ ಭೀಮನ ಕಥೆ, ಕೀಚಕವಧಂ ( ಭೀಮ ಮತ್ತು ಪಾಂಚಾಲಿಯ ಇನ್ನೊಂದು ಕಥೆ, ಆದರೆ ಈ ಬಾರಿ ಅವರು ವೇಷಮರೆಸಿಕೊಂಡು ಕಾರ್ಯಾಚರಣೆ ಮಾಡುತ್ತಾರೆ), ಕಿರಾತಂ(ಮಹಾಭಾರತದಲ್ಲಿ ಬರುವ ಅರ್ಜುನ ಮತ್ತು ಪರಮಾತ್ಮನಾದ ಶಿವನ ಯುದ್ಧ), ಕರ್ಣಶಪಥಂ (ಮಹಾಭಾರತದ ಇನ್ನೊಂದು ಕಥೆ), ಪಣ್ಣಿಸ್ಸೆರಿ ನಾನು ಪಿಳೈ ವಿರಚಿತ ನಿಜಾಲ್ಕುತು ಮತ್ತು ಭದ್ರಕಾಳಿವಿಜಯಂ. ಜೊತೆಗೆ ಆಗಾಗ ಪ್ರದರ್ಶಿತಗೊಳ್ಳುವ ಇನ್ನೊಂದಿಷ್ಟು ಕತೆಗಳು ಹೀಗಿವೆ; ಕುಚೇಲವೃತಂ, ಶಾಂತಗೋಪಾಲಂ, ಬಾಲಿವಿಜಯಂ , ದಕ್ಷಯಾಗಂ, ರುಕ್ಮಿಣೀಸ್ವಯವರಂ, ಕಾಳಕೇಯವಧಂ, ಕಿರ್ಮೀರವಧಂ, ಬಕವಧಂ, ಪೂತನಮೋಕ್ಷ್ಮಂ, ಸುಭದ್ರಾಹರಣಂ,ಬಾಲಿವಧಂ, ರುಕ್ಮಾಂಗಧಚರಿತಂ, ರಾವಣೋಲ್ಭವಂ, ನರಕಾಸುರವಧಂ, ಉತ್ತರಾಸ್ವಯವರಂ, ಹರಿಶ್ಚಂದ್ರಚರಿತಂ, ಕಚ-ದೇವಯಾನಿ ಮತ್ತು ಕಂಸವಧಂ.

ಇತ್ತೀಚೆಗೆ ಈ ಕಲೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ಪ್ರಯತ್ನಗಳ ಭಾಗವಾಗಿ, ಬೇರೆ ಸಂಸ್ಕೃತಿಗಳು ಮತ್ತು ಪುರಾಣಗಳ ಕಥೆಗಳನ್ನೂ ತೆಗೆದುಕೊಳ್ಳಲಾಗುತ್ತಿದೆ. ಉದಾಹರಣೆಗೆ ಬೈಬಲ್‌‌ನಿಂದ ಮೇರಿ ಮ್ಯಾಗ್ದಲೀನ, ಹೋಮರ್‌ನ ಇಲಿಯೆಡ್ ಮತ್ತು ವಿಲಿಯಂ ಶೇಕ್ಸ್‌ಪಿಯರ್‌‌ನ ಕಿಂಗ್ ಲಿಯರ್ ಮತ್ತು ಜ್ಯುಲಿಯೆಸ್ ಸೀಸರ್, ಅಲ್ಲದೇ ಗಯಟೆಯ ಫಾಸ್ಟ್‌, ಕೃತಿಗಳನ್ನೂ ಕಥಕ್ಕಳಿ ಕಥಾವಸ್ತುವಾಗಿ ರೂಪಾಂತರಿಸಿ, ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿದೆ.

ಕಥಕ್ಕಳಿಗೆ ಬಳಸುವ ಹಾಡುಗಳ ಭಾಷೆಯು ಮಣಿಪ್ರವಲಂ ಆಗಿದೆ. ಹೆಚ್ಚಿನ ಹಾಡುಗಳು ಮೈಕ್ರೋಸ್ವರ(ಅರ್ಧಸ್ವರಕ್ಕಿಂತ ಕಡಿಮೆ ಅಂತರದ ಸ್ಥಾಯಿಭೇದ)-ಅಧಿಕ ಕರ್ನಾಟಕ ಸಂಗೀತದ ರಾಗಗಳನ್ನು ಆಧರಿಸಿದ್ದರೂ, ಸೋಪಾನಂ ಎಂದು ಕರೆಯಲಾಗುವ ಸರಳಸ್ವರದ ಒಂದು ಬಗೆಯ ವಿಭಿನ್ನ ಶೈಲಿಯನ್ನು ಇದು ಅಳವಡಿಸಿಕೊಂಡಿದೆ. ಈ ವಿಶಿಷ್ಟ ಕೇರಳ ಶೈಲಿಯ ಗಾಯನದ ಮೂಲಬೇರುಗಳು ಕಥಕ್ಕಳಿಯು ಹುಟ್ಟಿದ್ದ ಸಮಯದಲ್ಲಿ ದೇವಾಲಯದಲ್ಲಿ ಹಾಡುತ್ತಿದ್ದ ಹಾಡುಗಳಲ್ಲಿದೆ (ಈಗಲೂ ಹಲವಾರು ದೇವಾಲಯಗಳಲ್ಲಿ ಹಾಡಲಾಗುತ್ತದೆ).

ಇನ್ನು ನಟನಾ ಶೈಲಿಯೊಂದಿಗೆ, ಕಥಕ್ಕಳಿ ಸಂಗೀತವು ಕೂಡ ದಕ್ಷಿಣಾದಿ ಮತ್ತು ಉತ್ತರಾದಿ, ಎರಡರಿಂದಲೂ ಹಾಡುಗಾರರನ್ನು ಹೊಂದಿತ್ತು. ಉತ್ತರಾದಿ ಶೈಲಿಯು ಹೆಚ್ಚಾಗಿ 20ನೇ ಶತಮಾನದ ಕೇರಳ ಕಲಾಮಂಡಲಂನಲ್ಲಿ ಹೆಚ್ಚಾಗಿ ಬೆಳೆಯಿತು. ಕಲಾಮಂಡಲಂ ನೀಲಕಂಠನ್ ನಂಬೀಶನ್ ಎಂಬ ಆ ಕಾಲದ ಅತ್ಯುತ್ತಮ ಕಥಕ್ಕಳಿ ಸಂಗೀತಗಾರ ಆ ಸಂಸ್ಥೆಯಲ್ಲಿಯೇ ರೂಪುಗೊಂಡಿದ್ದರು. ಅವರ ಪ್ರಮುಖ ಶಿಷ್ಯರೆಂದರೆ ಕಲಾಮಂಡಲಂ ಉನ್ನಿಕೃಷ್ಣ ಕುರುಪ್ಪ್, ಗಂಗಾಧರನ್, ರಾಮನ್ ಕುಟ್ಟಿ ವಾರಿಯರ್ , ಮಾಡಂಬಿ ಸುಬ್ರಮಣಿಯನ್ ನಂಬೂದಿರಿ, ತಿರೂರ್ ನಂಬೀಶನ್, ಕಲಾಮಂಡಲಂ ಶಂಕರನ್ ಎಂಬ್ರಂತಿರಿ, ಕಲಾಮಂಡಲಂ ಹೈದರಾಲಿ, ಕಲಾಮಂಡಲಂ ವೆನ್ಮಣಿ ಹರಿದಾಸ್, ಸುಬ್ರಮಣಿಯನ್, ಕಲಾನಿಲಯಂ ಉನ್ನಿಕೃಷ್ಣನ್ ಮತ್ತು ಕಲಾಮಂಡಲಂ ಭಾವದಾಸನ್. ಉತ್ತರಾದಿಯ ಇನ್ನಿತರ ಅಗ್ರಗಣ್ಯ ಸಂಗೀತಗಾರರೆಂದರೆ ಕೊಟ್ಟಕ್ಕಲ್ ವಾಸು ನೆಡುಂಙಾಡಿ , ಕೊಟ್ಟಕ್ಕಲ್ ಪರಮೇಶ್ವರನ್ ನಂಬೂದಿರಿ, ಕೊಟ್ಟಕ್ಕಲ್ ಪಿ.ಡಿ. ನಾರಾಯಣನ್ ನಂಬೂದಿರಿ, ಕೊಟ್ಟಕ್ಕಲ್ ನಾರಾಯಣನ್, ಕಲಾಮಂಡಲಂ ಅನಂತ ನಾರಾಯಣನ್‌‌, ಕಲಾಮಂಡಲಂ ಶ್ರೀಕುಮಾರ್‌ ಪಳನಾಡ್ ದಿವಾಕರನ್, ಕಲಾನಿಲಯಂ ರಾಜೇಂದ್ರನ್ , ಕೊಲತ್ತಪಿಳೈ ನಾರಾಯಣನ್‌‌ ನಂಬೂದಿರಿ, ಕಲಾಮಂಡಲಂ ನಾರಾಯಣನ್‌‌ ಎಂಬ್ರಂತಿರಿ, ಕೊಟ್ಟಕ್ಕಲ್ ಮಧು, ಕಲಾಮಂಡಲಂ ಬಾಬು ನಂಬೂದಿರಿ, ಕಳನಿಲಯಂ ರಾಜೀವನ್, ಕಲಾಮಂಡಲಂ ವಿನೋದ್ ಮತ್ತು ಕಲಾಮಂಡಲಂ ಹರೀಶ್. ಇಂದಿನ ದಿನಗಳಲ್ಲಿ ದಕ್ಷಿಣದಲ್ಲಿ, ಉತ್ತರದಷ್ಟೇ ಪ್ರಸಿದ್ಧರಾದ ಕೆಲವರಲ್ಲಿ ಪದಿಯೂರ್ ಶಂಕರನ್‌ಕುಟ್ಟಿ ಒಬ್ಬರು. ಹಳೆಯ ತಲೆಮಾರಿನ ದಕ್ಷಿಣಾದಿ ಸಂಗೀತಗಾರರಲ್ಲಿ ಇವರೆಲ್ಲ ಇದ್ದಾರೆ:ಚೇರ್ತಲ ತಂಗಪ್ಪ ಪಣಿಕ್ಕರ್, ತಕ್ಕಾಜಿ ಕುಟ್ಟನ್ ಪಿಳೈ, ಚೇರ್ತಲ ಕುಟ್ಟಪ್ಪ ಕುರುಪ್, ತಣ್ಣೀರ್‌ಮುಕ್ಕಂ ವಿಶ್ವಂಭರನ್ ಮತ್ತು ಮುದಕ್ಕಲ್ ಗೋಪಿನಾಥನ್.

ಪ್ರದರ್ಶನ

ಬದಲಾಯಿಸಿ
 
ಪ್ರದರ್ಶನಕ್ಕಾಗಿ ಚಂಡೆ ಬಾರಿಸುತ್ತಿರುವ ಕಲಾವಿದ.

ಪಾರಂಪರಿಕವಾಗಿ, ಕಥಕ್ಕಳಿ ಪ್ರದರ್ಶನವನ್ನು ಸಾಮಾನ್ಯವಾಗಿ ರಾತ್ರಿ ನಡೆಸಲಾಗುತ್ತದೆ ಮತ್ತು ಬೆಳಗಿನ ಜಾವ ಕೊನೆಗೊಳ್ಳುತ್ತದೆ. ಇಂದು ಮೂರು ಗಂಟೆ ಅಥವಾ ಮೂರಕ್ಕಿಂತಲೂ ಕಡಿಮೆ ಅವಧಿಯ ಪ್ರದರ್ಶನಗಳನ್ನು ಕಾಣುವುದು ಕಷ್ಟವೇನಲ್ಲ. ಕಥಕ್ಕಳಿಯನ್ನು ಸಾಮಾನ್ಯವಾಗಿ ಬೃಹತ್ ಕಲಿವಿಳಕ್ಕು (ಕಲಿ ಎಂದರೆ ನೃತ್ಯ, ವಿಳಕ್ಕು ಎಂದರೆ ದೀಪ) ದೀಪದ ಎದುರಿಗೆ ನಡೆಸಲಾಗುತ್ತದೆ, ಇದರ ದಪ್ಪಗಿರುವ ಬತ್ತಿಯು ಕೊಬ್ಬರಿಎಣ್ಣೆಯಲ್ಲಿ ಮುಳುಗಿರುತ್ತದೆ. ಸಾಂಪ್ರದಾಯಿಕವಾಗಿ, ಈ ದೀಪವನ್ನು ದೇವಾಲಯಗಳ, ಅರಮನೆಗಳ, ಶ್ರೀಮಂತರ, ಕಲಾರಸಿಕರ ಮನೆಗಳ ಒಳಗೆ ಪ್ರದರ್ಶನವನ್ನು ನೀಡುವಾಗ ಬೆಳಕು ನೀಡುವ ಏಕೈಕ ದೀಪವಾಗಿ ಬಳಸಲಾಗುತ್ತಿತ್ತು. ಪಾತ್ರಧಾರಿಗಳು ಗೀತೆ ಮತ್ತು ವಾದ್ಯದ ಜೊತೆಗೆ ನಾಟಕವೊಂದರ ಅಭಿನಯವನ್ನು ಮಾಡುತ್ತಿದ್ದರು. ತಾಳವಾದ್ಯದಲ್ಲಿ ಬಳಸುತ್ತಿದ್ದ ವಾದ್ಯಗಳು ಎಂದರೆ ಚಂಡೆ, ಮದ್ದಲೆ (ಕಲಾಮಂಡಲಂ ಕೃಷ್ಣಕುಟ್ಟಿ ಪೊದುವಾಲ್ ಮತ್ತು ಕಲಾಮಂಡಲಂ ಅಪ್ಪುಕುಟ್ಟಿ ಪೊದುವಾಲ್ ಅವರ ಪ್ರಯತ್ನಗಳಿಂದಾಗಿ ಈ ಎರಡೂ ವಾದ್ಯಗಳ ಲಯ, ಸ್ವರಮಾಧುರ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಿವೆ) ಮತ್ತು ಕೆಲವೊಮ್ಮೆ ಎಡಕ್ಕವನ್ನೂ ಬಳಸುತ್ತಿದ್ದರು. ಇದರೊಂದಿಗೆ ಹಾಡುಗಾರರು (ಮುಖ್ಯ ಗಾಯಕನನ್ನು "ಪೊನ್ನಣಿ" ಎನ್ನುತ್ತಾರೆ ಮತ್ತು ಸಹಗಾಯಕರನ್ನು "ಸಿಂಗಿಡಿ" ಎನ್ನುತ್ತಾರೆ) "ಚೆಂಗಿಲ" (ಬೆಲ್‌ಮೆಟಲ್ ಅಥವಾ ಕಂಚಿನಿಂದ ಮಾಡಲಾದ ಜಾಗಟೆ/ಕಂಸಾಳೆಯನ್ನು ಮರದ ಕೋಲಿನಿಂದ ಬಾರಿಸುತ್ತಿರುತ್ತಾರೆ) ಮತ್ತು "ಇಲಥಾಳ" ತಾಳವನ್ನು ಬಳಸುತ್ತಾರೆ. ಒಂದರ್ಥದಲ್ಲಿ ಮುಖ್ಯ ಗಾಯಕನು ಚೆಂಗಿಲವನ್ನು ವಾದ್ಯ ಮತ್ತು ಗೀತೆಯ ಘಟಕಗಳನ್ನು ಜೋಡಿಸಲು ಬಳಸುತ್ತಾರೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕಂಡಕ್ಟರ್ ತನ್ನ ವ್ಯಾಂಡ್(ದಂಡ) ಬಳಸಿದಂತೆ ಇವರು ಚಂಡೆಯನ್ನು ಬಳಸುತ್ತಾರೆ. ಈ ಕಲಾಪ್ರಕಾರದ ಒಂದು ಅತ್ಯಂತ ವಿಶಿಷ್ಟ ಲಕ್ಷಣ ಎಂದರೆ ಪಾತ್ರಧಾರಿಗಳು ಮಾತನಾಡುವುದೇ ಇಲ್ಲ. ಸಂಭಾಷಣೆ ಬದಲಿಗೆ ಕೇವಲ ತಮ್ಮ ಹಾವಭಾವಗಳು, ಅಭಿವ್ಯಕ್ತಿಗಳು ಮತ್ತು ಲಯಬದ್ಧ ನೃತ್ಯದ ಮೂಲಕವೇ ಎಲ್ಲವನ್ನೂ ಹೇಳುತ್ತಾರೆ(ತೀರಾ ಅಪರೂಪದ ಪಾತ್ರಧಾರಿಗಳು ಮಾತ್ರ ಮಾತನಾಡುತ್ತಾರೆ).

ಕಥಕ್ಕಳಿ ನಟರು ತೀವ್ರ ಏಕಾಗ್ರತೆ, ಕೌಶಲ ಮತ್ತು ಅಪಾರ ದೈಹಿಕ ಸಾಮರ್ಥ್ಯವನ್ನು ಬಳಸುತ್ತಾರೆ. ಅಪಾರ ದೈಹಿಕಧಾರ್ಡ್ಯತೆಯನ್ನು ಬೇಡುವ ಈ ಪಾತ್ರಕ್ಕಾಗಿ ಅವರು ಕೇರಳದ ಪುರಾತನ ಸಮರಕಲೆಯಾದ ಕಲರಿಪಯಟ್ಟುವಿನಲ್ಲಿ ತೀವ್ರ ತರಬೇತಿಯನ್ನು ಪಡೆದಿರುತ್ತಾರೆ. ತರಬೇತಿಯು ಕೆಲವೊಮ್ಮೆ 8-10 ವರ್ಷಗಳವರೆಗೆ ಅತ್ಯಂತ ತೀವ್ರರೀತಿಯಲ್ಲಿ ಇರುತ್ತದೆ. ಕಥಕ್ಕಳಿಯಲ್ಲಿ, ಕಥೆಯನ್ನು ಸಂಪೂರ್ಣವಾಗಿ ಕೈಗಳ ಚಲನೆಗಳು (ಮುದ್ರೆಗಳು ಎಂದು ಕರೆಯಲಾಗುವ ಕೈಗಳ ಚಲನೆ) ಮತ್ತು ಮುಖದ ಅಭಿವ್ಯಕ್ತಿಗಳು (ರಸಾಭಿವ್ಯಕ್ತಿ) ಹಾಗೂ ಆಂಗಿಕ ಚಲನೆಯಿಂದಲೇ ಅಭಿನಯಿಸಲಾಗುತ್ತದೆ. ಅಭಿವ್ಯಕ್ತಿಯನ್ನು ನಾಟ್ಯಶಾಸ್ತ್ರದಿಂದ (ಅಭಿವ್ಯಕ್ತಿಯ ವಿಜ್ಞಾನದ ಕುರಿತು ಇರುವ ಒಂದು ಶಾಸ್ತ್ರ ಗ್ರಂಥ) ತೆಗೆದುಕೊಳ್ಳಲಾಗಿದೆ ಮತ್ತು ಬಹಳಷ್ಟು ಭಾರತೀಯ ಶಾಸ್ತ್ರೀಯ ಕಲಾ ಪ್ರಕಾರಗಳಂತೆ 9 ಎಂದು ವರ್ಗೀಕರಿಸಲಾಗಿದೆ. ನರ್ತಕರು ಕೂಡ ತಮ್ಮ ಕಣ್ಣಿನ ಚಲನೆಗಳನ್ನು ನಿಯಂತ್ರಿಸುವುದನ್ನು ಕಲಿಯಲು ವಿಶೇಷ ಅಭ್ಯಾಸ ಗೋಷ್ಠಿಗಳಿಗೆ ಹೋಗುತ್ತಾರೆ.

ಒಟ್ಟು 24 ಮೂಲ ಮುದ್ರೆಗಳು ಇವೆ- ಇವುಗಳ ಮಾರ್ಪಾಡು ಮತ್ತು ಸಂಯೋಜನೆಯಿಂದ ಇಂದು ಬಳಕೆಯಲ್ಲಿರುವ ಹಲವಾರು ಮುದ್ರೆಗಳು ರೂಪುಗೊಂಡಿವೆ. ಪ್ರತಿಯೊಂದನ್ನೂ ಪುನಾ "ಸಮಾನ-ಮುದ್ರೆಗಳು' (ಎರಡು ಅಂಶಗಳನ್ನು ಸಾಂಕೇತಿಸುವ ಒಂದು ಮುದ್ರೆ) ಮತ್ತು ಮಿಶ್ರ-ಮುದ್ರೆಗಳು (ಈ ಮುದ್ರೆಗಳನ್ನು ತೋರಿಸಲು ಎರಡೂ ಕೈಗಳನ್ನು ಬಳಸಲಾಗುವುದು) ಎಂದು ವರ್ಗೀಕರಿಸಲಾಗುತ್ತದೆ. ಮುದ್ರೆಗಳು ಕಥೆಯನ್ನು ಹೇಳಲು ಬಳಸುವ ಒಂದು ಬಗೆಯ ಸಂಕೇತ ಭಾಷೆ ಎನ್ನಬಹುದು.

ಕಥಕ್ಕಳಿ ಕಲಾವಿದರ ಮುಖ್ಯವಾದ ಮುಖದ ಅಭಿವ್ಯಕ್ತಿ ಎಂದರೆ "ನವರಸಂಗಳು" (ನವರಸಗಳು (ಅಕ್ಷರಶಃ ಹೇಳಬೇಕೆಂದರೆ ; ಒಂಬತ್ತು ರಸಗಳು, ಒಂಬತ್ತು ಭಾವನೆಗಳು ಅಥವಾ ಒಂಬತ್ತು ಅಭಿವ್ಯಕ್ತಿಗಳು). ಅವುಗಳೆಂದರೆ, ಶೃಂಗಾರಂ, ಹಾಸ್ಯಂ (ಅಣಕ, ಹಾಸ್ಯ), ಭಯಾನಕಂ (ಭಯ), ಕರುಣಂ, ರೌದ್ರಂ(ಸಿಟ್ಟು, ಕ್ರೋಧ), ವೀರಂ, ಬೀಭತ್ಸಂ , ಅದ್ಭುತಂ (ವಿಸ್ಮಯ, ಅಚ್ಚರಿ), ಶಾಂತಂ. ಪುಟದ ಕೊನೆಯಲ್ಲಿರುವ ಕೊಂಡಿಯು (ಲಿಂಕ್) ನವರಸಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

 
ಮುಖದ ಅಲಂಕಾರ ಮಾಡಿಕೊಳ್ಳುತ್ತಿರುವ ಕಲಾವಿದ.
 
ಕೃಷ್ಣ ಪಾತ್ರದಲ್ಲಿರುವ ಕಥಕ್ಕಳಿ ಕಲಾವಿದ.
 
ಸ್ತ್ರೀ ಪಾತ್ರಧಾರಿ

ಕಥಕ್ಕಳಿಯ ಒಂದು ಅತ್ಯಂತ ಸ್ವಾರಸ್ಯಕರ ಅಂಶವೆಂದರೆ ಅಲ್ಲಿ ಬಳಸುವ ಗಾಢವಾದ ಅಲಂಕಾರ. ಹೆಚ್ಚಿನವೇಳೆ, ಅಲಂಕಾರವನ್ನು ಐದು ಮೂಲ ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ. ಅವೆಂದರೆ ಪಚ್ಚ, ಕಥಿ, ಕರಿ, ಥಾಡಿ, ಮತ್ತು ಮಿಣುಕು. ಇವುಗಳ ವ್ಯತ್ಯಾಸವು ಮುಖದ ಮೇಲೆ ಹಚ್ಚುವ ಪ್ರಮುಖವಾದ ಬಣ್ಣಗಳ ಛಾಯೆಯನ್ನು ಅವಲಂಬಿಸಿರುತ್ತದೆ. ಪಚ್ಚ(ಎಂದರೆ ಹಸುರು) ಹಸಿರನ್ನು ಪ್ರಮುಖವಾದ ಬಣ್ಣವಾಗಿ ಹೊಂದಿರುತ್ತದೆ ಮತ್ತು ಉದಾತ್ತ ಪುರುಷ ಪಾತ್ರಗಳನ್ನು ಅಭಿವ್ಯಕ್ತಿಸಲು ಬಳಸಲಾಗುತ್ತದೆ. ಈ ಪುರುಷರ "ಸಾತ್ವಿಕ" ಮತ್ತು "ರಾಜಸ ಅಥವಾ ರಾಜಸಿಕ" ಗುಣಗಳ ಸಮ್ಮಿಶ್ರಣ ಎನ್ನಲಾಗುತ್ತದೆ. ಕೆಟ್ಟ ಗುಣವನ್ನು ಹೊಂದಿದ (ತಾಮಸಿಕ/ತಾಮಸ) ರಾಜಸಿಕ ಪಾತ್ರಗಳು - ನಾಟಕದ ಖಳನಾಯಕರಿದ್ದಂತೆ (ಉದಾಹರಣೆಗೆ ರಾಕ್ಷಸರಾಜ ರಾವಣನ ಹಾಗೆ) ಮತ್ತು ಹಸಿರು ಬಣ್ಣ ಹಚ್ಚಿದ ಮುಖದಲ್ಲಿ ಕೆಂಪು ಗೆರೆಗಳನ್ನು ಚಿತ್ರಿಸಲಾಗುತ್ತದೆ. ರಾಕ್ಷಸರಂತಹ ತೀರಾ ಕೆಟ್ಟ ವ್ಯಕ್ತಿಗಳ ಪಾತ್ರಗಳು ಪ್ರಮುಖವಾಗಿ ಕೆಂಪು ಬಣ್ಣದ ಅಲಂಕಾರವನ್ನು ಮತ್ತು ಕೆಂಪು ಗಡ್ಡವನ್ನು ಹೊಂದಿರುತ್ತವೆ. ಅವರನ್ನು ಕೆಂಪು ಗಡ್ಡದವರು ಎನ್ನಲಾಗುತ್ತದೆ. ಅನಾಗರಿಕ ಬೇಟೆಗಾರರು ಮತ್ತು ಕಾಡಿನ ಜನರಂತಹ ತಾಮಸಿಕ/ತಾಮಸ ವ್ಯಕ್ತಿಗಳನ್ನು ಪ್ರಮುಖವಾಗಿ ಮುಖಕ್ಕೆ ಕಪ್ಪು ಬಣ್ಣದ ಅಲಂಕಾರದಿಂದ ಮತ್ತು ಕಪ್ಪು ಗಡ್ಡದಿಂದ ಅಲಂಕರಿಸಲಾಗುತ್ತದೆ. ಮಹಿಳೆಯರು ಮತ್ತು ತಪಸ್ವಿಗಳು/ಸನ್ಯಾಸಿಗಳ ಮುಖವನ್ನು ಹೊಳೆಯುವ, ಹಳದಿಯುತ ಬಣ್ಣದಿಂದ ಅಲಂಕರಿಸುತ್ತಾರೆ ಮತ್ತು ಈ ಅರೆ-ವಾಸ್ತವದ ವರ್ಗವು ಐದನೇ ವಿಭಾಗಕ್ಕೆ ಸೇರುತ್ತದೆ. ಇದರೊಂದಿಗೆ, ಮೇಲೆ ಹೇಳಿದ ಐದು ಮೂಲ ವಿಧಗಳನ್ನು ಮಾರ್ಪಡಿಸಿ/ಪರಿಷ್ಕರಿಸಿ ಮಾಡಲಾದ ಅಲಂಕಾರವೂ ಇರುತ್ತದೆ. ಉದಾಹರಣೆಗೆ, ಹನುಮಂತನಿಗೆ ವೆಲ್ಲ ಥಡಿ (ಬಿಳಿ ಗಡ್ಡ)ಬಳಸುತ್ತಾರೆ ಮತ್ತು ಶಿವ ಹಾಗೂ ಬಾಲಭದ್ರ ದೇವರಿಗೆ ಹೆಚ್ಚಾಗಿ ಪಜುಪ್ಪು ಬಳಸಲಾಗುತ್ತದೆ.

ಹಾಗೆ ನೋಡಿದರೆ "ಚುಂಡಂಗ" ನಿಜವಾಗಿಯೂ ಒಂದು ಬೀಜವಲ್ಲ. ಈ ಗಿಡದ ಹೂವುಗಳ ಶಲಾಕೆಯಲ್ಲಿರುವ ಅಂಡಾಶಯವನ್ನು ತೆಗೆದು ಸಿದ್ಧಮಾಡಿರುತ್ತಾರೆ. ಈ ಬೀಜಗಳನ್ನು ಸಿದ್ಧಗೊಳಿಸುವ ವಿಧಾನ ಹೀಗಿದೆ: ಹೂವಿನ ಅಂಡಾಶಯದ ಭಾಗಗಳನ್ನು ತೆಗೆದು ಅಂಗೈಯಲ್ಲಿಟ್ಟುಕೊಂಡು ಬೆಳ್ಳಗಿರುವ ಅವು ಕಪ್ಪಾಗುವವರೆಗೆ ಮತ್ತು ಸುಮಾರು ಅವು ನಿರ್ಜಲಗೊಳ್ಳುವವರೆಗೆ ತಿಕ್ಕುವುದು. ಈ ಸ್ಥಿತಿಯಲ್ಲಿ ಅವು ಒಂದು ಋತುವಿನ ಅವಧಿಯವರೆಗೂ (ಸುಮಾರು ನಾಲ್ಕು ತಿಂಗಳು) ಕೆಡದೇ ಉಳಿಯುತ್ತವೆ.

ಗಮನಾರ್ಹ ತರಬೇತಿ ಕೇಂದ್ರಗಳು ಮತ್ತು ಗುರುಗಳು

ಬದಲಾಯಿಸಿ

ಕಥಕ್ಕಳಿ ಕಲಾವಿದರಿಗೆ ಸುಮಾರು ಒಂದು ದಶಕದಷ್ಟು ಅವಧಿಯ ಸತತವಾದ ತರಬೇತಿ ಪಡೆಯುವುದು ಅಗತ್ಯವಿರುತ್ತದೆ. ಅನೇಕ ಗುರುಗಳು ಕನಿಷ್ಠ ಆರೇಳು ವರ್ಷಗಳ ತರಬೇತಿ ನೀಡುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿತವರಾಗಿರುತ್ತಾರೆ. ಪ್ರಮುಖ ಕಥಕ್ಕಳಿ ಶಾಲೆಗಳು (ಇವುಗಳಲ್ಲಿ ಕೆಲವು ಸ್ವಾತಂತ್ರ್ಯಪೂರ್ವದಲ್ಲಿಯೇ ಆರಂಭಗೊಂಡಿವೆ) ಹೀಗಿವೆ: ಕೇರಳ ಕಲಾಮಂಡಲಂ (ಶೊರನೂರ್‌ ಹತ್ತಿರದ ಚೆರುತುರುತಿಯಲ್ಲಿದೆ), ಪಿಎಸ್‌ವಿ ನಾಟ್ಯ ಸಂಗಂ(ಕೊಜಿಕ್ಕೋಡ್‌‌ಬಳಿಯ ಕೊಟ್ಟಾಕಲ್‌ನಲ್ಲಿದೆ ), ಸದನಂ ಕಥಕ್ಕಳಿ ಮತ್ತು ಶಾಸ್ತ್ರೀಯ ಕಲಾ ಅಕಾಡೆಮಿ (ಅಥವಾ ಗಾಂಧೀ ಸೇವಾ ಸದನ್ಪಾಲಕ್ಕಾಡ್‌ನಲ್ಲಿ ಒಟ್ಟಪ್‌ಪಲಂ ಬಳಿಯ ಪೆರೂರ್‌ನಲ್ಲಿದೆ), ಉನ್ನಯಿ ವಾರಿಯರ್ ಸಮರಕ ಕಲಾನಿಲಯಂ (ತ್ರಿಶೂರ್‌ನ ದಕ್ಷಿಣಕ್ಕೆಇರಿಂಜಲಕುಡದಲ್ಲಿದೆ), ತಿರುವನಂತಪುರಂನಲ್ಲಿರುವ ಮಾರ್ಗಿ, ಕಣ್ಣೂರು ಜಿಲ್ಲೆಯಲ್ಲಿರುವ ಪರಸ್ಸಿನಿಕ್ಕಡವು ಬಳಿಯ ಮುತ್ತಪ್ಪನ್ ಕಾಳಿಯೋಗಂ ಮತ್ತು ಆರ್‌ಎಲ್‌ವಿ ಕೊಚ್ಚಿಗೆ ವಿರುದ್ಧವಿರುವ ತ್ರಿಪುನಿತುರ ದಲ್ಲಿದೆ, ಕಲಾಭಾರತಿ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕರದಲ್ಲಿ ಪಕಲ್‌ಕ್ಕುರಿ ಬಳಿಯಲ್ಲಿದೆ; ಅಂಬಾಲಪೂಜದಲ್ಲಿರುವ ಸಂದರ್ಶನ್ ಕಥಕ್ಕಳಿ ಕೇಂದ್ರಂ ಮತ್ತು ಕುರುವಟ್ಟರ್‌ನಲ್ಲಿರುವ ವೆಲ್ಲಿನಜಿ ನಾನು ನಾಯರ್ ಸಮರಕ ಕಲಾಕೇಂದ್ರ. ಕೇರಳದ ಹೊರಗೆ, ಕಥಕ್ಕಳಿಯನ್ನು ನವದೆಹಲಿಯಲ್ಲಿರುವ ಕಥಕ್ಕಳಿ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಶಾಂತಿನಿಕೇತನದಲ್ಲಿ, ಚೆನೈನಲ್ಲಿರುವ ಕಲಾಕ್ಷೇತ್ರದಲ್ಲಿ ಮತ್ತು ಅಹ್ಮದಾಬಾದ್‌ನ ದರ್ಪಣ ಅಕಾಡೆಮಿಯಲ್ಲಿ ಕಲಿಸಲಾಗುತ್ತದೆ.

ಇಂದಿನ ಹಿರಿಯ ಕಥಕ್ಕಳಿ ಕಲಾಕಾರರು ಎಂದರೆ ಪದ್ಮ ಭೂಷಣ ಕಲಾಮಂಡಲಂ ರಮಣಕುಟ್ಟಿ ನಾಯರ್, ಪದ್ಮ ಶ್ರೀ ಕಲಾಮಂಡಲಂ ಗೋಪಿ, ಕೊಟ್ಟಕ್ಕಲ್ ಶಿವರಾಮನ್, ಮಡವೂರ್ ವಾಸುದೇವನ್ ನಾಯರ್‌‌, ಚೇಮನ್‌ಚೇರಿ ಕುನ್ಹಿರಾಮನ್ ನಾಯರ್‌‌, ಕೊಟ್ಟಕ್ಕಲ್ ಕೃಷ್ಣನ್‌ಕುಟ್ಟಿ ನಾಯರ್‌‌, ಮಂಕೊಂಪು ಶಿವಶಂಕರ ಪಿಳೈ, ಸದಾನಮ್ ಕೃಷ್ಣನ್‌ಕುಟ್ಟಿ, ನೆಲ್ಲಿಯೋಡ್ ವಾಸುದೇವನ್ ನಂಬೂದಿರಿ, ಕಲಾಮಂಡಲಂ ವಾಸು ಪಿಶರೊಡಿ , ಎಫ್‌ಎಸಿಟಿ ಪದ್ಮನಾಭನ್, ಕೊಟ್ಟಕ್ಕಲ್ ಚಂದ್ರಶೇಖರನ್, ಮಾರ್ಗಿ ವಿಜಯಕುಮಾರ್, ಕೊಟ್ಟಕ್ಕಲ್ ನಂದಕುಮಾರನ್ ನಾಯರ್‌‌, ವಝೆಂಕಡ ವಿಜಯನ್, ಇಂಚಕ್ಕಟ್ಟು ರಾಮಚಂದ್ರನ್ ಪಿಳೈ, ಕಲಾಮಂಡಲಂ ಕುಟ್ಟನ್, ಮಯ್ಯನಾಡ್ ಕೇಶವನ್ ನಂಬೂದಿರಿ, ಮಾಥುರ್ ಗೋವಿಂದನ್ ಕುಟ್ಟಿ , ನಾರಿಪತ್ತ ನಾರಾಯಣನ್‌‌ ನಂಬೂದಿರಿ, ಚವರ ಪಾರುಕುಟ್ಟಿ, ತೊನ್ನಕ್ಕಲ್ ಪೀತಾಂಬರಂ , ಸದಾನಂ ಬಾಲಕೃಷ್ಣನ್, ಕಲಾನಿಲಯಂ ಗೋಪಾಲಕೃಷ್ಣನ್ , ಚಿರಕ್ಕರ ಮಾಧವನ್‌ಕುಟ್ಟಿ, ಸದಾನಂ ಕೆ. ಹರಿಕುಮಾರನ್, ತಾಲವಾಡಿ ಅರವಿಂದನ್, ಕಲಾನಿಲಯಂ ಬಾಲಕೃಷ್ಣನ್, ಪರಿಯನಪಟ್ಟ ದಿವಾಕರನ್, ಕೊಟ್ಟಕ್ಕಲ್ ಕೇಶವನ್, ಕಲಾನಿಲಯಂ ಗೋಪಿ ಮತ್ತು ಕುಡಮಲೂರ್ ಮುರಲೀಕೃಷ್ಣನ್ . ಕಥಕ್ಕಳಿಯ ಆಧುನಿಕ ಕಾಲಘಟ್ಟ (ಸುಮಾರು 1930ರ ನಂತರದಲ್ಲಿ)ದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ, ಈಗ ಮರಣಿಸಿರುವ ಕಥಕ್ಕಳಿ ನಟರು-ನೃತ್ಯಗಾರ ಕಲಾವಿದರ ಹೆಸರುಗಳು ಹೀಗಿವೆ: ಪಟ್ಟಿಕ್ಕಂತೋಡಿ ರವುಣಿ ಮೆನನ್, ಚೆಂಗನೂರ್ ರಾಮನ್ ಪಿಳೈ, ಚಂದು ಪಣಿಕ್ಕರ್ , ತಾಕಜಿ ಗುರು ಕಂಚು ಕುರುಪ್‌, ಪದ್ಮ ಶ್ರೀ ಕಲಾಮಂಡಲಂ ಕೃಷ್ಣನ್ ನಾಯರ್‌‌, ಪದ್ಮ ಶ್ರೀ ವಾಜೆಂಕಡ ಕಂಚು ನಾಯರ್‌‌, ಕವಲಪ್ಪರ ನಾರಾಯಣನ್‌‌ ನಾಯರ್‌‌, ಕುರಿಚಿ ಕುನ್ಹನ್ ಪಣಿಕ್ಕರ್, ತೆಕ್ಕಿನಕಟ್ಟಿಲ್ ರಾಮುಣ್ಣಿ ನಾಯರ್‌‌, ಪದ್ಮ ಶ್ರೀ ಕೀಜಪದಂ ಕುಮಾರನ್ ನಾಯರ್‌‌, ಕಲಾಮಂಡಲಂ ಪದ್ಮನಾಭನ್ ನಾಯರ್‌‌, ಮಂಕುಲಂ ವಿಷ್ಣು ನಂಬೂದಿರಿ, ಒಯುರ್ ಕೊಚು ಗೋವಿಂದ ಪಿಳೈ, ವೆಲ್ಲಿನೆಜಿ ನಾನು ನಾಯರ್‌‌, ಪದ್ಮ ಶ್ರೀ ಕಾವುಂಗಲ್ ಚೆತುನ್ನಿ ಪಣಿಕ್ಕರ್‌, ಕೂಡಮಲೂರ್ ಕರುಣಾಕರುನ್ ನಾಯರ್‌‌, ಕಣ್ಣನ್‌ ಪಟ್ಟಲಿ, ಪಲ್ಲಿಪ್ಪುರಂ ಗೋಪಾಲನ್ ನಾಯರ್‌‌, ಹರಿಪ್ಪಾಡ್ ರಾಮಕೃಷ್ಣ ಪಿಳೈ, ಚಂಪಾಕುಲಂ ಪಾಚು ಪಿಳೈ, ಚೆನ್ನಿತಲ ಚೆಲ್ಲಪ್ಪನ್ ಪಿಳೈ, ಗುರು ಮಂಪುಜ ಮಾಧವ ಪಣಿಕ್ಕರ್, ಮತ್ತು ವೈಕಂ ಕರುಣಾಕರನ್.

ಕಥಕ್ಕಳಿ ಇನ್ನೂ ಕೂಡ ಪುರುಷರದೇ ಸಾಮ್ರಾಜ್ಯದಂತಿದೆ. ಆದಾಗ್ಯೂ 1970ರ ನಂತರದಲ್ಲಿ ಮಹಿಳೆಯರೂ ಕೂಡ ಗಮನಾರ್ಹ ಸಂಖ್ಯೆಯಲ್ಲಿ ಈ ಕಲಾ ಪ್ರಕಾರದಲ್ಲಿ ಪ್ರವೇಶಿಸಿದ್ದಾರೆ. ಮಧ್ಯ ಕೇರಳದ ದೇವಾಲಯಗಳ ಪಟ್ಟಣವಾಗಿರುವ ತ್ರಿಪುನಿತುರದಲ್ಲಿ ಕಥಕ್ಕಳಿ ಪ್ರದರ್ಶಿಸುವ ಒಂದು ಮಹಿಳೆಯರ ತಂಡವಿದೆ (ರಾಜ್ಯದ ಬೇರೆ ಬೇರೆ ಭಾಗಗಳಿಗೆ ಸೇರಿದ ಮಹಿಳೆಯರು ಇದರ ಸದಸ್ಯರು), ಆದರೆ ಬಹುತೇಕ ಇರುವುದು ತಿರುವಾಂಕೂರದಲ್ಲಿ.

ಕಥಕ್ಕಳಿ ಶೈಲಿಗಳು

ಬದಲಾಯಿಸಿ

ಸಂಪ್ರದಾಯಂ ಎಂದು ಕರೆಯಲಾಗುವ (ಮಲಯಾಳಂ:സമ്പ്രദായം); ಇವು ಕಥಕ್ಕಳಿಯ ಪ್ರಮುಖ ಶೈಲಿಗಳಾಗಿದ್ದು, ಪ್ರತಿಯೊಂದೂ ಇನ್ನೊಂದರಿಂದ ಸೂಕ್ಷ್ಮವಾಗಿ ಭಿನ್ನವಾಗಿವೆ. ನೃತ್ಯಸಂಯೋಜನೆ ರೀತಿ, ಹಸ್ತ ಭಂಗಿಗಳ ಸ್ಥಾನ ಮತ್ತು ನೃತ್ಯಕ್ಕಿಂತ ನಾಟಕದ ಮೇಲೆ ಒತ್ತು ಅಥವಾ ನಾಟಕಕ್ಕಿಂತ ನೃತ್ಯದ ಮೇಲೆ ಒತ್ತು, ಹೀಗೆ ಹಲವು ಅಂಶಗಳಲ್ಲಿ ಭಿನ್ನವಾಗಿರುತ್ತವೆ. ಕೆಲವು ಪ್ರಮುಖ ಮೂಲ ಕಥಕ್ಕಳಿ ಶೈಲಿಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

  1. ವೀಟ್ಟತು ಸಂಪ್ರದಾಯಂ
  2. ಕಲ್ಲಾಡಿಕ್ಕೊಡನ್ ಸಂಪ್ರದಾಯಂ
  3. ಕಪ್ಲಿಂಗಡು ಸಂಪ್ರದಾಯಂ

ಕಾಲಾಂತರದಲ್ಲಿ, ಇವು ಸಂಕುಚಿತಗೊಳ್ಳುತ್ತ, ಉತ್ತರ (ಕಲ್ಲುವಝಿ) ಮತ್ತು ದಕ್ಷಿಣ (ತೆಂಕನ್) ಶೈಲಿಗಳೆಂದು ಆದವು. ಅತ್ಯಂತ ಶೈಲೀಕೃತವಾದ ಕಲ್ಲುವಝಿ ಪರಂಪರೆಯನ್ನು (ಇದನ್ನು ಮುಖ್ಯವಾಗಿ ಅಭಿವೃದ್ಧಿಪಡಿಸಿದ್ದು ಹೆಸರಾಂತ ಕಲಾವಿದ ಪಟ್ಟಿಕ್ಕಂತೋಡಿ ರವುಣ್ಣಿ ಮೆನನ್ - 1881-1949) ಕೇರಳ ಕಲಾಮಂಡಲಂನಲ್ಲಿ (ಇಲ್ಲಿ ದಕ್ಷಿಣದ ಶೈಲಿಯನ್ನು ಕಲಿಸುವ ವಿಭಾಗವೂ ಇದೆ), ಸದಾನಂ, ಆರ್‌ಎಲ್‌ವಿ ಮತ್ತು ಕೊಟ್ಟಕ್ಕಲ್ ಕೇಂದ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಾರ್ಗಿ ತನ್ನ ತರಬೇತಿಯನ್ನು ಬಹುವಾಗಿ ತೆಂಕನ್ ಶೈಲಿಯನ್ನು ಆಧರಿಸಿ ನೀಡುತ್ತದೆ. ಇಲ್ಲಿ ನಾಟಕ ಮತ್ತು ಭಾಗಶಃ-ವಾಸ್ತವಿಕ ತಂತ್ರಗಳಿಗೆ ಹೆಚ್ಚು ಒತ್ತು ಇರುತ್ತದೆ. ಕಲಾನಿಲಯಂ ತನ್ನ ವಿದ್ಯಾರ್ಥಿಗಳಿಗೆ ಎರಡೂ ಶೈಲಿಗಳಲ್ಲಿ ಪರಿಣಾಮಕಾರಿಯಾಗಿ ತರಬೇತಿ ನೀಡುತ್ತದೆ.

ನೃತ್ಯದ ಬೇರೆ ಪ್ರಕಾರಗಳು ಮತ್ತು ಉಪಾಶಾಖೆಗಳು

ಬದಲಾಯಿಸಿ

ಕೇರಳ ನಟನಂ ಎನ್ನುವುದು ಒಂದು ನೃತ್ಯ ಪ್ರಕಾರವಾಗಿದ್ದು, ಅದು ಭಾಗಶಃ ಕಥಕ್ಕಳಿ ತಂತ್ರಗಳನ್ನು ಮತ್ತು ಕಲಾಸೌಂದರ್ಯವನ್ನು ಆಧರಿಸಿದೆ. ಇದನ್ನು ದಿವಂಗತ ನೃತ್ಯಪಟು ಗುರು ಗೋಪಿನಾಥ್ 20ನೇ ಶತಮಾನದ ಮಧ್ಯಭಾಗದಲ್ಲಿ ಅಭಿವೃದ್ಧಿಪಡಿಸಿ, ಅದಕ್ಕೊಂದು ಶೈಲಿ ನೀಡಿದರು. ಕಥಕ್ಕಳಿಯು ಮಲೆಯಾಳಂ ಸಿನಿಮಾಗಳಲ್ಲಿಯೂ ಚಿತ್ರಿತವಾಗಿದೆ. ಉದಾಹರಣೆಗೆ ವಾನಪ್ರಸ್ಥಂ , ಪರಿಣಯಂ, ಮರಾಟ್ಟಂ ಮತ್ತು ರಂಗಂ. ಜೊತೆಗೆ ಚೆಂಗನೂರ್ ರಾಮನ್ ಪಿಳೈ, ಕಲಾಮಂಡಲಂ ಕೃಷ್ಣನ್ ನಾಯರ್‌‌, ಕೀಜಪಾದಂ ಕುಮಾರನ್ ನಾಯರ್‌‌, ಕಲಾಮಂಡಲಂ ರಾಮಕುಟ್ಟಿ ನಾಯರ್‌‌, ಕಲಾಮಂಡಲಂ ಗೋಪಿ ಮತ್ತು ಕೊಟ್ಟಕ್ಕಲ್ ಶಿವರಾಮನ್ ಇನ್ನಿತರ ಕಥಕ್ಕಳಿ ಕಲಾವಿದರ ಕುರಿತು ಸಾಕ್ಷ್ಯಚಿತ್ರಗಳು ನಿರ್ಮಾಣಗೊಂಡಿವೆ.

ಸೃಜನಶೀಲ ಸಾಹಿತ್ಯದಲ್ಲಿ, ಕಥಕ್ಕಳಿಯನ್ನು ಕರ್ಮೆನ್ (ಎನ್‌. ಎಸ್‌. ಮಾಧವನ್ ಬರೆದಿದ್ದು) ಇನ್ನಿತರ ಹಲವಾರು ಮಲೆಯಾಳಂ ಸಣ್ಣಕಥೆಗಳಲ್ಲಿ ಮತ್ತು ಕೇಶಭಾರಂ (ಪಿ.ವಿ. ಶ್ರೀವಲ್ಸನ್ ಬರೆದಿದ್ದು) ಕಾದಂಬರಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಇಂಡೋ-ಆಂಗ್ಲಿಯನ್ ಕೃತಿಗಳಲ್ಲಿಯೂ ಉಲ್ಲೇಖವಿದೆ. ಉದಾ: ಅರುಂಧತಿ ರಾಯ್ ಅವರ ಬುಕರ್ ಪ್ರಶಸ್ತಿ ವಿಜೇತ ದಿ ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್‌ ಕಾದಂಬರಿಯಲ್ಲಿ ಕಥಕ್ಕಳಿ ಕುರಿತು ಒಂದು ಅಧ್ಯಾಯವಿದೆ. ಹಾಗೆಯೇ ಅನಿತಾ ನಾಯರ್‌‌ ಅವರ ಮಿಸ್ಟ್ರೆಸ್ ಕಾದಂಬರಿಯು ಪೂರ್ಣವಾಗಿ ಕಥಕ್ಕಳಿಯ ಗುಣವಿಶೇಷಗಳಿಂದ ಆವೃತವಾಗಿದೆ.

ಕಥಕ್ಕಳಿಯ ಇನ್ನೊಂದು ರೂಪಾಂತರವು ಕೇರಳದ ಕಾಸರಗೋಡು ಜಿಲ್ಲೆ ಮತ್ತು ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿದೆ, ಅದೆಂದರೆ ಯಕ್ಷಗಾನ. ಯಕ್ಷಗಾನವು ವೇಷಭೂಷಣ ಮತ್ತು ಅಲಂಕಾರದಲ್ಲಿ ಕೇರಳದ ಕಥಕ್ಕಳಿಯನ್ನು ಹೋಲುತ್ತಿದ್ದರೂ, ಅದು ಸಂಭಾಷಣೆಯನ್ನು ಒಳಗೊಂಡಿದ್ದು, ಕಥಕ್ಕಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಹೆಸರಾಂತ ಕಥಕ್ಕಳಿ ಹಳ್ಳಿಗಳು ಮತ್ತು ವಲಯಗಳು

ಬದಲಾಯಿಸಿ

ಕೇರಳದ ಕೆಲವು ಪ್ರದೇಶಗಳು ಅನೇಕ ವರ್ಷಗಳವರೆಗೆ ಹಲವಾರು ಕಥಕ್ಕಳಿ ಕಲಾವಿದರಿಗೆ ಜನ್ಮ ನೀಡಿವೆ. ಇವುಗಳನ್ನು ಕಥಕ್ಕಳಿ ಹಳ್ಳಿಗಳೆಂದು ಕರೆಯಬಹುದಾದರೆ, (ಅವುಗಳಲ್ಲಿ ಕೆಲವು ಈಗ ಪಟ್ಟಣಗಳಾಗಿವೆ) ಅವುಗಳಲ್ಲಿ ಕೆಲವು ಹಳ್ಳಿಗಳು ಹೀಗಿವೆ: ವೆಲ್ಲಿನೆಜಿ, ಕುರುವತ್ತೂರ್, ಕರಲ್‌ಮಣ್ಣ, ಚೆರ್ಪುಲಸ್ಸೆರಿ, ಕೊಥಚಿರ, ಪೆರಿಂಗೋಡ್, ಶ್ರೀಕೃಷ್ಣಪುರಂ ಕೊಂಗಾಡ್ ಮತ್ತು ಪಾಲಕ್ಕಾಡ್ ಜಿಲ್ಲೆಯಲ್ಲಿ ಒಟ್ಟಪಾಲಂ, ಮಲಪ್ಪುರಂ ಜಿಲ್ಲೆಯಲ್ಲಿ ವಜೆಂಕಡ, ತಿಚುರ್‌ ಅಥವಾ ತಿಚೂರ್, ಗುರುವಾಯೂರ್, ತ್ರಿಶೂರ್ ಜಿಲ್ಲೆಯಲ್ಲಿತಿರುವಿಲ್ವಮಾಲ ಮತ್ತು ಇರಿಂಜಲಕುಡ , ಎರ್ನಾಕುಲಂ ಜಿಲ್ಲೆಯಲ್ಲಿ ತ್ರಿಪುನಿತುರ ಮತ್ತು ಅಲಪ್ಪುಜ ಜಿಲ್ಲೆಯಲ್ಲಿ ಕುಟ್ಟನಾಡುವಲಯ, ಜೊತೆಗೆ ದಕ್ಷಿಣ ಟ್ರಾವಂಕೋರ್‌ನಲ್ಲಿ ತಿರುವನಂತಪುರಂ ಮತ್ತು ಉತ್ತರ ಮಲಬಾರ್‌ನ ಪಯ್ಯನ್ನೂರ್.

ಕಥಕ್ಕಳಿ ಕಲಾವಿದರಿಗೆ ಪ್ರಶಸ್ತಿಗಳು

ಬದಲಾಯಿಸಿ
  • ಅನುರಾಗ್ ಪಗ್ಲು ಡೆಬ್, ಮಾರ್ಚ್‌ 2010ದಲ್ಲಿ ಕೊಲ್ಕೊತಾದ ಕಲಾಮಂದಿರದಲ್ಲಿ ನಡೆದ ಅಖಿಲ ಭಾರತೀಯ ಕಥಕ್ಕಳಿ ಕಲಾವಿದರ ಸಮ್ಮೇಳನದಲ್ಲಿ ಮೊದಲನೇ ಬಹುಮಾನ ಗೆದ್ದರು. ಅವರ ಪಗ್ಲು ನೃತ್ಯಕ್ಕೆ ಅಪಾರ ಪ್ರಶಂಸೆ ದೊರೆಯಿತು.
  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿವಿಜೇತರು - ಕಥಕ್ಕಳಿ (1956–2005)
  • ನಂಬೀಸಾನ್ ಸ್ಮಾರಕ ಪ್ರಶಸ್ತಿ Archived 2010-07-22 ವೇಬ್ಯಾಕ್ ಮೆಷಿನ್ ನಲ್ಲಿ.—ಕಥಕ್ಕಳಿಗೆ ಸಂಬಂಧಿಸಿದ ಕಲಾತ್ಮಕ ಪ್ರದರ್ಶನಗಳಿಗಾಗಿ {1992-2008}
  • [ದೇಬಶಿಶ್ ಪ್ರಧಾನ್(ಬೋಟು ಮಹಾರಾಜ್),ಕೊಲ್ಕೊತಾದಲ್ಲಿ 2007ರಲ್ಲಿ ಅತ್ಯುತ್ತ ಕಥಕ್ಕಳಿ ನೃತ್ಯಪಟು ಪ್ರಶಸ್ತಿ ಗೆದ್ದರು[೧]

ಕಥಕ್ಕಳಿ ಆಟ್ಟಂಗಳು

ಬದಲಾಯಿಸಿ

ಆಟ್ಟಂಗಳು ಅಥವಾ "ಎಲಕಿ - ಆಟ್ಟಂಗಳು"

ಆಟ್ಟಂಗಳು ಅಥವಾ ಹೆಚ್ಚು ನಿರ್ದಿಷ್ಟವಾಗಿ "ಎಲಕಿ - ಆಟ್ಟಂಗಳು" ಎಂದರೆ ಕಥೆಯೊಳಗೇ ಅಭಿನಯಿಸಲಾಗುವ ಕೆಲವು ದೃಶ್ಯಾವಳಿಗಳು. ಇವುಗಳನ್ನು ಗಾಯನ ಸಂಗೀತದ ಯಾವುದೇ ಸಹಾಯವಿಲ್ಲದೇ ಕೇವಲ ಮುದ್ರೆಗಳ ಸಹಾಯದಿಂದ ಅಭಿನಯಿಸಲಾಗುತ್ತದೆ. ನಟರು ತಮ್ಮ ಸ್ವಂತ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಕಥಾವಸ್ತುವನ್ನು ಸ್ವಲ್ಪ ಬದಲಿಸುವ ಸ್ವಾತಂತ್ರ್ಯ ಹೊಂದಿರುತ್ತಾರೆ. ನಟರಿಗೆ ಚಂಡೆ, ಮದ್ದಲೆ ಮತ್ತು ಏಲತಾಳಂ (ಕಡ್ಡಾಯವಾಗಿ) ಸಹಾಯವಿರುತ್ತದೆ. ಚೆಂಗಿಲಾ ಇರುತ್ತದೆ (ಆದರೆ ಕಡ್ಡಾಯವೇನಿಲ್ಲ). ಕೆಳಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ. 'ಕೈಲಾಸ ಉಧರಣಂ' ಮತ್ತು 'ತಪಸ್ ಆಟ್ಟಂ' ಬಹಳ ಮುಖ್ಯವಾದವು, ಆದರೆ ಇವುಗಳನ್ನು ಇಲ್ಲಿ ಸೇರಿಸಲಾಗಿಲ್ಲ (ನಂತರದಲ್ಲಿ ಸೇರಿಸಲಾಗುವುದು). ಅನೇಕ ಉಲ್ಲೇಖಗಳಲ್ಲಿ ಎರಡು ಹೀಗಿವೆ:

1. 'ಕಥಕ್ಕಳಿ ಪ್ರಕಾರಂ'- 95ರಿಂದ 142 ಪುಟಗಳು, ಪಣ್ಣಿಶೆರಿ ನಾನು ಪಿಳೈ ವಿರಚಿತ.

2. 'ಕಥಕ್ಕಳಿಯಿಲ್ ಮನೋಧರ್ಮಂಗಳ್' ಚವರ ಅಪ್ಪುಕುಟ್ಟನ್ ಪಿಳೈ ವಿರಚಿತ.

1. ವನ ವರ್ಣನ - ಕಲ್ಯಾಣ ಸೌಂಗಧೀಕದಲ್ಲಿ ಭೀಮ. ಆಧುನಿಕ ಮನುಷ್ಯ ಆದಿಮಾನವರ ಜನ್ಮಸ್ಥಳವಾದ ಕಾಡನ್ನು ಸ್ವಲ್ಪಮಟ್ಟಿನ ಅಚ್ಚರಿ ಮತ್ತು ಗೌರವದಿಂದ ನೋಡುತ್ತಾನೆ. ಕಥಕ್ಕಳಿ ಪಾತ್ರಗಳು ಕೂಡ ಇದಕ್ಕೆ ಹೊರತೇನಲ್ಲ. ಪಾಂಡವರು ಕಾಡಿನಲ್ಲಿ ವಾಸಿಸುತ್ತಿರುವಾಗ ಒಮ್ಮೆ ಹಿಂದೆಂದೂ ನೋಡದ ಹೂವೊಂದು ಹಗುರವಾಗಿ ಗಾಳಿಯಲ್ಲಿ ತೇಲಿಬಂದಿತು. ಅದು ಪಾಂಚಾಲಿಯ ಪಾದದ ಬಳಿ ಬಿದ್ದಿತು. ಅದರ ಸೌಂದರ್ಯ ಮತ್ತು ಸುಗಂಧದಿಂದ ಮೋಹಿತಳಾದ ಪಾಂಚಾಲಿಯು ಭೀಮನಿಗೆ ಅಂತಹ ಇನ್ನೊಂದಿಷ್ಟು ಹೂಗಳನ್ನು ತಂದುಕೊಡುವಂತೆ ಹೇಳುತ್ತಾಳೆ. ಅವಳ ಸಂತೋಷಕ್ಕಾಗಿ ಭೀಮನು ತಕ್ಷಣವೇ ಆ ಹೂ ತರಲು ಹೋಗುತ್ತಾನೆ. ದಾರಿಮಧ್ಯದಲ್ಲಿ ಊಟಕ್ಕೆ ಮತ್ತು ಬಾಯಾರಿಕೆಯಾದರೆ ಕುಡಿಯಲು ಏನು ಮಾಡುವೆ ಎಂದು ಪಾಂಚಾಲಿ ಕೇಳುತ್ತಾಳೆ. ಭೀಮನು ಯೋಚಿಸಿ ಹೇಳುತ್ತಾನೆ, "ಊಟಕ್ಕೆ ಮತ್ತು ಬಾಯಾರಿಕೆಗೆ.. ಏನೂ ಅಗತ್ಯವಿಲ್ಲ. ನಿನ್ನ ನೋಟವೇ ಸಾಕು. ನಿನ್ನ ಈ ನಿರೀಕ್ಷೆಯ ನೋಟ, ಈ ಭರವಸೆಯ ನೋಟವೇ ಸಾಕು. ನಿನ್ನ ಯೋಚನೆಯೇ ನನ್ನನ್ನು ತುಂಬಿಸುತ್ತದೆ. ನನಗೆ ಊಟ ಮತ್ತು ನೀರಿನ ಅಗತ್ಯವೇ ಇಲ್ಲ. ನಾನೀಗ ಹೋಗುತ್ತೇನೆ". ಆತ ತನ್ನ ದಂಡವನ್ನು ತೆಗೆದುಕೊಂಡು ಹೊರಡುತ್ತಾನೆ. ಉಲ್ಲಾಸ ಆತನ ಸ್ಥಾಯಿ ಭಾವವಾಗಿರುತ್ತದೆ. "ಈ ಹೂವನ್ನು ಹುಡುಕಲು ಹೊರಡುವೆ. ದಕ್ಷಿಣದ ಕಡೆಯಿಂದ ಹೂವಿನ ಸುಗಂಧ ಬರುತ್ತಿದೆ. ಆ ಕಡೆಗೆ ಹೋಗೋಣ" ಎಂದು ಭೀಮ ಯೋಚಿಸುತ್ತಾನೆ. ಸ್ವಲ್ಪ ದೂರ ನಡೆದ ನಂತರ ಅವನಿಗೆ ಗಂಧಮಾದನ ಎಂಬ ಒಂದು ಪರ್ವತ ಮತ್ತು ಮೂರು ಕವಲು ದಾರಿಗಳು ಎದುರಾಗುತ್ತವೆ. ಆತ ಪರ್ವತದ ತುದಿಗೆ ಹೋಗಲಿದ್ದ ಮಧ್ಯದ ದಾರಿಯಿಂದ ಹೋಗಲು ನಿರ್ಧರಿಸುತ್ತಾನೆ.ಇನ್ನೂ ಸ್ವಲ್ಪ ದೂರ ಹೋಗುತ್ತಿದ್ದಂತೆ, "ಕಾಡು ಮತ್ತಷ್ಟು ದಟ್ಟವಾಗುತ್ತಿದೆ. ದೊಡ್ಡ ದೊಡ್ಡ ಮರಗಳು, ಎಲ್ಲ ಕಡೆಗಳಲ್ಲಿಯೂ ಚಾಚಿದ ದೊಡ್ಡ ಕೊಂಬೆಗಳು. ಈ ಕಾಡು ಬೆಳಕಿನ ಒಂದೇ ಕಿರಣವೂ ತೂರಿಬರದ ಒಂದು ದೊಡ್ಡ ಕಪ್ಪು ಪಾತ್ರೆಯಂತಿದೆ. ಇದು ನನ್ನ (ಭೀಮನ) ದಾರಿ. ಯಾವುದೂ ನನ್ನನ್ನು ಹಿಮ್ಮೆಟ್ಟಿಸಲಾಗದು". ಹೀಗೆ ಹೇಳುತ್ತ ಆತ ಅನೇಕ ಮರಗಳನ್ನು ಕೆಳಗೆ ಬೀಳಿಸುತ್ತಾನೆ. ಕೆಲವೊಮ್ಮೆ ತನ್ನ ದಂಡದಿಂದ ಮರಗಳನ್ನು ಬೀಳಿಸುತ್ತಾನೆ. ಇದ್ದಕ್ಕಿದ್ದ ಹಾಗೆ ಅವನಿಗೊಂದು ಆನೆ ಕಾಣುತ್ತದೆ. ಒಹ್! ಆನೆ" ಆತ ಆನೆಯನ್ನು ವರ್ಣಿಸುತ್ತಾನೆ. ಅದರ ಸೊಂಡಿಲು, ತೀಕ್ಷ್ಣವಾದ ಕಿವಿಗಳು. ದೇಹದಲ್ಲಿ ಕೆರೆಯುತ್ತಿರುವಂತಹ ಭಾವ. ಅದು ಕೆಸರನ್ನು ಮೈಮೇಲೆ ಹಾಕಿಕೊಳ್ಳುತ್ತದೆ. ಓ ದೇವರೇ. ಆಮೇಲೆ ಅದು ನೀರನ್ನು ಸೊಂಡಿಲಿನಿಂದ ಎಳೆದುಕೊಂಡು, ಮೈಮೇಲೆ ಹಾಕಿಕೊಳ್ಳುತ್ತದೆ. ಸ್ವಲ್ಪ ಒಳ್ಳೆಯದೇ. ನಿಧಾನವಾಗಿ ಅದು ನಿದ್ರಿಸಲು ಆರಂಭಿಸುತ್ತದೆ, ಆಗೀಗ ಎಚ್ಚರವಾಗಿರುತ್ತದೆ. ಬಹಳ ದೊಡ್ಡ ಹೆಬ್ಬಾವು ನಿಧಾನವಾಗಿ ಹತ್ತಿರ ಬರುತ್ತಿರುತ್ತದೆ. ಅದು ಆನೆಯ ಹಿಂಗಾಲನ್ನು ತಟ್ಟನೆ ಹಿಡಿಯುತ್ತದೆ. ಆನೆಯು ಎಚ್ಚರವಾಗಿ, ಹೆಬ್ಬಾವಿನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೆಬ್ಬಾವು ಒಂದು ಕಡೆ ಎಳೆಯುತ್ತದೆ. ಆನೆಯು ಒದೆಯುತ್ತ, ಇನ್ನೊಂದು ಕಡೆ ಎಳೆಯುತ್ತದೆ. ಇದು ಬಹಳ ಹೊತ್ತು ನಡೆಯುತ್ತದೆ. ಇನ್ನೊಂದೆಡೆ ಹಸಿದುಕೊಂಡಿದ್ದ ಸಿಂಹವು ಆಹಾರಕ್ಕಾಗಿ ನೋಡುತ್ತಿರುವುದನ್ನು ಭೀಮನು ಗಮನಿಸುತ್ತಾನೆ. ಅದು ಓಡುತ್ತ ಬಂದು, ಆನೆಯ ತಲೆಗೆ ಡಿಕ್ಕಿ ಹೊಡೆಯುತ್ತದೆ ಮತ್ತು ತಲೆಯ ಒಂದು ಭಾಗವನ್ನು ತಿಂದು ಹೋಗುತ್ತದೆ. ಹೆಬ್ಬಾವು ಇನ್ನುಳಿದ ಭಾಗವನ್ನು ತಿನ್ನುತ್ತದೆ. "ಓ ದೇವರೇ... ಎಷ್ಟು ಕ್ರೂರವಾಗಿದೆ!" ಎಂದು ಉದ್ಗರಿಸಿದ ಭೀಮನು ಮುನ್ನೆಡೆಯುತ್ತಾನೆ.

2. ಉದ್ಯಾನ ವರ್ಣನ - ನಳಚರಿತಂ ಎರಡನೇ ದಿನದಲ್ಲಿ ನಳ ಭಾರತ ಮತ್ತು ವಿದೇಶಗಳ ಅನೇಕ ನೃತ್ಯ ಪ್ರಕಾರಗಳಲ್ಲಿ ಉದ್ಯಾನಗಳ ವಿವರಗಳು ಇವೆ. ಇವು ಕಥಕ್ಕಳಿಯಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತವೆ. ಹೊಸದಾಗಿ ಮದುವೆಯಾದ ನಳ ಮತ್ತು ದಮಯಂತಿ ಉದ್ಯಾನದಲ್ಲಿ ನಡೆಯುತ್ತಿದ್ದಾರೆ. ನಳನು ದಮಯಂತಿಯತ್ತ ಪ್ರೀತಿಯಿಂದ ದಿಟ್ಟಿಸುತ್ತಿರುವಾಗ ಹೂವೊಂದು ಅವಳ ಮೇಲೆ ಬೀಳುತ್ತದೆ. ನಳನಿಗೆ ತುಂಬ ಸಂತೋಷವಾಗುತ್ತದೆ ಮತ್ತು ತನ್ನ ಹೆಂಡತಿಯ ಮೇಲೆ ನಿಸರ್ಗವು ಸಹೃದಯತೆಯನ್ನು ತೋರಿಸುತ್ತಿದೆ ಎಂದು ಯೋಚಿಸುತ್ತಾನೆ. ನಳನು "ತಮ್ಮ ರಾಣಿಯ ಆಗಮನವನ್ನು ನೋಡಿ, ಮರಗಿಡಗಳು, ಬಳ್ಳಿಗಳು ನಿನ್ನ ಮೇಲೆ ಹೂ ಬೀಳಿಸಿ ಸಂತೋಷವನ್ನು ಸೂಚಿಸುತ್ತಿವೆ' ಎನ್ನುತ್ತಾನೆ. ಅವನು ಅವಳಿಗೆ ಹೀಗೆ ಹೇಳುತ್ತಾನೆ, "ಆ ಮರವನ್ನು ನೋಡು. ನಾನು ಒಬ್ಬೊಂಟಿಯಾಗಿದ್ದಾಗ ಆ ಮರವು ಬಳ್ಳಿಯನ್ನು ತಬ್ಬಿಕೊಂಡು, ನನ್ನ ಸ್ಥಿತಿಯನ್ನು ನೋಡಿ ಅಣಕಿಸಿ ನಗುತ್ತಿತ್ತು". ನಂತರ ಅವನು ಮರವನ್ನು ನೋಡಿ, "ಪ್ರಿಯ ಮರವೇ, ಈಗ ನನ್ನನ್ನು ನೋಡು. ಸುಂದರಿಯಾದ ಪತ್ನಿಯೊಂದಿಗೆ ಇರುವ ನಾನು ಎಷ್ಟು ಅದೃಷ್ಟಶಾಲಿ ನೋಡು". ಇಬ್ಬರೂ ಹೀಗೆ ಸುತ್ತಾಡುತ್ತಾರೆ. ಆಗ ದುಂಬಿಯಿಂದು ದಮಯಂತಿಯತ್ತ ಹಾರಿ ಬರುತ್ತದೆ. ನಳ ತಟ್ಟನೆ ಕೈವಸ್ತ್ರವನ್ನು ಅವಳ ಮುಖಕ್ಕೆ ಹಿಡಿದು ರಕ್ಷಿಸುತ್ತಾನೆ. ಅವನು ದುಂಬಿಯತ್ತ ಮತ್ತು ನಂತರ ದಮಯಂತಿಯತ್ತ ನೋಡುತ್ತಾನೆ. "ನಿನ್ನ ಮುಖವನ್ನು ನೋಡಿದ ದುಂಬಿಯು ಹೂವೆಂದು ತಿಳಿದು, ಮಕರಂದವನ್ನು ಹೀರಲು ಬಂದಿದೆ". ನಳ ಮತ್ತು ದಮಯಂತಿಯರು ಉದ್ಯಾನದಲ್ಲಿ ಹತ್ತು ಹಲವು ವಿಧಧ ಧ್ವನಿಗಳನ್ನು ಕೇಳುತ್ತಾರೆ. ದಮಯಂತಿ ಹೀಗೆ ಹೇಳುತ್ತಾಳೆ: "ಇಡೀ ಉದ್ಯಾನ ರೋಮಾಂಚಿತಗೊಂಡಂತೆ ಇದೆ. ಹೂಗಳು ಓಲಾಡುತ್ತಿವೆ ಮತ್ತು ನಗುತ್ತಿವೆ. ಕೋಗಿಲೆಗಳು ಹಾಡುತ್ತಿವೆ ಮತ್ತು ದುಂಬಿಗಳು ನರ್ತಿಸುತ್ತಿವೆ. ಮೃದುವಾದ ತಂಗಾಳಿಯು ಹಿತವಾಗಿ ಬೀಸುತ್ತ ನಮ್ಮ ದೇಹವನ್ನು ಮುತ್ತಿಕ್ಕುತ್ತಿದೆ. ಇಡೀ ಉದ್ಯಾನ ಎಷ್ಟು ಮನಮೋಹಕವಾಗಿ ಕಾಣುತ್ತಿದೆ." ನಂತರ ಸೂರ್ಯ ಮುಳುಗುತ್ತಿದ್ದಾನೆ, ಮರಳಿ ಹೋಗುವ ಸಮಯ ಎಂದು ನಳನು ಹೇಳುತ್ತ, ಅವಳನ್ನು ಅರಮನೆಗೆ ಕರೆದೊಯ್ಯುತ್ತಾನೆ.

3. ಶಬ್ದ ವರ್ಣನ - ಕಲ್ಯಾಣ ಸೌಗಂಧಿಕಂನಲ್ಲಿ ಹನುಮಂತ ಭೀಮನು ಹೂವನ್ನು ಹುಡುಕಿಕೊಂಡು ಹೋದಾಗ, ಹನುಮಂತನು ಮನಸ್ಸಿನಲ್ಲಿ ಶ್ರೀರಾಮನಲ್ಲಿ ಏಕಾಗ್ರಚಿತ್ತದಿಂದ ನೆನೆಯುತ್ತ ತಪಸ್ಸು ಮಾಡುತ್ತ ಕುಳಿತಿರುತ್ತಾನೆ. ಭೀಮನು ಕಾಡಿನಲ್ಲಿ ಅತಿಯಾದ ಸದ್ದು ಮಾಡುತ್ತ ಬಂದಾಗ ಅವನಿಗೆ ತನ್ನ ತಪಸ್ಸಿಗೆ ಭಂಗವಾದಂತೆ ಅನ್ನಿಸುತ್ತದೆ. "ಅರೆ, ಇಷ್ಟು ಗಲಾಟೆಯ ಕಾರಣವೇನು" ಎಂದು ಅವನು ಯೋಚಿಸುತ್ತಾನೆ. ಆಗ ಗಲಾಟೆ ಸದ್ದು ಇನ್ನಷ್ಟು ಜೋರಾಗಿ ಕೇಳುತ್ತದೆ. "ಏನಿದು? ಈ ಸದ್ದು ಮತ್ತಷ್ಟು ಜೋರಾಗಿ ಕೇಳ್ತಿದೆ. ಇಷ್ಟು ಜೋರಾದ ಗಲಾಟೆ. ಮಹಾ ಪ್ರಳಯದ ಸಮಯವಾಯಿತು ಎಂದು ಸಮುದ್ರವು ಮೇಲೇರಿ ಬರುತ್ತಿದೆಯೇ? ಹಕ್ಕಿಗಳು ದಿಕ್ಕಾಪಾಲಾಗಿ ಹಾರುತ್ತಿವೆ. ಮರಗಳು ಆಘಾತಕ್ಕೆ ತತ್ತರಿಸಿವೆ. ಕಲಿಯುಗ ಇನ್ನೂ ಬಂದಿಲ್ಲ. ಹಾಗಿದ್ದರೆ ಇದೇನಿದು? ಪರ್ವತಗಳು ಒಂದಕ್ಕೊಂದು ಪರಸ್ಪರ ಜಗಳವಾಡುತ್ತಿವೆಯೇ? ಇಲ್ಲ, ಹಾಗಿರಲಾರದು. ಪರ್ವತಗಳು ಪರಸ್ಪರ ಜಗಳವಾಡದಿರಲೆಂದು ಇಂದ್ರನು ಅವುಗಳ ರೆಕ್ಕೆ ಕತ್ತರಿಸಿದ್ದಾನೆ. ಸಮುದ್ರವು ತನ್ನ ಸ್ಥಾನ ಬದಲಿಸುತ್ತಿದೆಯೇ? ಹಾಗೂ ಇರಲಾರದು. ಸಮುದ್ರವು ತಾನು ಮತ್ತೆ ಸ್ಥಳ ಬದಲಿಸುವುದಿಲ್ಲ ಎಂದು ಮಾತು ಕೊಟ್ಟಿದೆ. ಅದು ತನ್ನ ವಾಗ್ದಾನವನ್ನು ಮುರಿಯಲಾರದು. ಹೀಗೆ ತನ್ನೊಳಗೇ ಯೋಚಿಸುತ್ತ ಹನುಮಂತನು ಏನಾದರೂ ಸುಳಿವು ಕಾಣಿಸೀತೆ ಎಂದು ಅತ್ತಿತ್ತ ನೋಡುತ್ತಾನೆ. "ಆನೆಗಳು ಮತ್ತು ಸಿಂಹಗಳು ಯಾರನ್ನೋ ಕಂಡು ಹೆದರಿವೆ. ಓ..ಯಾರೋ ದೈತ್ಯಾಕಾರದ ಮನುಷ್ಯ ಈ ದಾರಿಯಾಗಿ ಬರುತ್ತಿದ್ದಾನೆ. ಓ.. ನಾಯಕ ಬರುತ್ತಿದ್ದಾನೆ. ಆತನೇ ಮರಗಿಡಗಳನ್ನು ಎಳೆದಾಡುತ್ತ ಅತ್ತಿತ್ತ ಬಿಸಾಕುತ್ತಿದ್ದಾನೆ. ಸರಿ, ಅವನು ಹತ್ತಿರವಾದರೂ ಬರಲಿ. ನಾನು ನೋಡಿಕೊಳ್ಳುತ್ತೇನೆ."

4. ತಂಡೆದಾಟ್ಟಂ - ಬಲಿ ವಧಂನಲ್ಲಿ ರಾವಣ ತೇರನೊಟ್ಟಂ ನಂತರ ರಾವಣನು ಎತ್ತರದ ಮಣೆಯೊಂದರ ಮೇಲೆ ಕುಳಿತಿರುತ್ತಾನೆ. ಅವನು ತನ್ನಲ್ಲಿಯೇ ಹೇಳಿಕೊಳ್ಳುತ್ತಾನೆ, "ನಾನು ತುಂಬಾ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಇದಕ್ಕೆ ಕಾರಣವೇನಿರಬಹುದು?" ಅವನು ಯೋಚಿಸತೊಡಗುತ್ತಾನೆ. "ಓ,ಈಗ ನನಗೆ ಗೊತ್ತಾಯಿತು. ನಾನು ಬ್ರಹ್ಮನ ತಪಸ್ಸು ಮಾಡಿ, ನನಗೆ ಬೇಕಿರುವ ಎಲ್ಲ ವರಗಳನ್ನು ಪಡೆದಿದ್ದೇನೆ. ನಂತರ ಹತ್ತೂ ದಿಕ್ಕುಗಳಲ್ಲಿಯೂ ವಿಜಯ ಸಾಧಿಸಿದ್ದೇನೆ. ನನ್ನ ಹಿರಿಯಣ್ಣ ವೈಶ್ರವಣನನ್ನೂ ನಾನು ಸೋಲಿಸಿರುವೆ. ನಂತರ ಶಿವ ಮತ್ತು ಪಾರ್ವತಿಯರು ಪರಸ್ಪರ ಅಪಾರ್ಥ ಮಾಡಿಕೊಂಡು, ಮುನಿಸಿಕೊಂಡಿದ್ದಾಗ ನಾನು ಕೈಲಾಸ ಪರ್ವತವನ್ನೂ ಎತ್ತಿರುವೆ. ಆಗ ಪಾರ್ವತಿಯು ಅತೀವ ಭಯಪಟ್ಟು ಶಿವನನ್ನು ತಬ್ಬಿಕೊಂಡಳು. ಆಗ ಶಿವನು ತುಂಬ ಸಂತೋಷಪಟ್ಟು ಚಂದ್ರಹಾಸ ಎಂಬ ದಿವ್ಯ ಖಡ್ಗವನ್ನು ನನಗೆ ನೀಡಿದನು. ಈಗ ಇಡೀ ಜಗತ್ತು ನನ್ನ ಬಗ್ಗೆ ಭಯಪಡುತ್ತಿದೆ. ಅದಕ್ಕೇ ನಾನು ಇಷ್ಟೆಲ್ಲ ಸಂತೋಷ ಅನುಭವಿಸುತ್ತಿರುವೆ." ನಂತರ ಅವನು ಪುನಾ ಹೋಗಿ ಮಣೆಯ ಮೇಲೆ ಕುಳಿತುಕೊಳ್ಳುತ್ತಾನೆ. ಆತ ತುಂಬ ದೂರಕ್ಕೆ ಕಣ್ಣು ಹಾಯಿಸುತ್ತಾನೆ. "ಅರೆ... ಅಲ್ಲಿ ಅಷ್ಟು ದೂರದಲ್ಲಿ ಯಾರು ಬರುತ್ತಿದ್ದಾರೆ? ಅಷ್ಟು ಜೋರಾಗಿ ನಡೆದುಬರುತ್ತಿದ್ದಾರೆ. ಓ..ಅವನು ಅಕಂಬ. ಓಹೋ..ಅವನು ನನಗೇನು ಸುದ್ದಿ ತಂದಿದ್ದಾನೆ ಎಂದು ಕೇಳುತ್ತೇನೆ.

5. ಆಶ್ರಮ ವರ್ಣನೆ - ಕಿರಾತಂನಲ್ಲಿ ಅರ್ಜುನ ಅರ್ಜುನನು ಶಿವನ ಕುರಿತು ತಪಸ್ಸು ಮಾಡಲು ಬಯಸುತ್ತಾನೆ. ಅದಕ್ಕಾಗಿ ಹಿಮಾಲಯದ ತಪ್ಪಲಿನಲ್ಲಿ ಸೂಕ್ತವಾದ ಸ್ಥಳಕ್ಕಾಗಿ ಹುಡುಕುತ್ತಿರುತ್ತಾನೆ. ಆತ ಒಂದು ಆಶ್ರಮವಿದ್ದ ಜಾಗಕ್ಕೆ ಬರುತ್ತಾನೆ. ಅರ್ಜುನನು ಆ ಸ್ಥಳವನ್ನು ಹತ್ತಿರದಿಂದ ಗಮನಿಸುತ್ತಾನೆ. "ಓ.. ಇದು ಎಷ್ಟು ಸುಂದರವಾದ ಸ್ಥಳ. ಇಲ್ಲಿರುವ ಚಿಕ್ಕ ನದಿಯಲ್ಲಿ ಸ್ವಚ್ಛವಾದ ತಿಳಿನೀರು ಹರಿಯುತ್ತಿದೆ. ಯಾರೋ ಸನ್ಯಾಸಿಗಳು ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಕೆಲವು ಸನ್ಯಾಸಿಗಳು ನದಿಯಲ್ಲಿಯೇ ನಿಂತುಕೊಂಡು, ತಪಸ್ಸು ಮಾಡುತ್ತಿದ್ದಾರೆ. ಕೆಲವರು ಸೂರ್ಯನಿಗೆ ಮುಖಮಾಡಿ ನಿಂತಿದ್ದಾರೆ. ಮತ್ತೆ ಕೆಲವರು ಪಂಚಾಗ್ನಿಯ ಮಧ್ಯೆ ನಿಂತಿದ್ದಾರೆ. ಅರ್ಜುನನು ಆ ಸನ್ಯಾಸಿಗಳಿಗೆ ದೂರದಿಂದಲೇ ವಂದಿಸುತ್ತಾನೆ. ಅರ್ಜುನ ತನ್ನೊಳಗೇ ಹೇಳಿಕೊಳ್ಳುತ್ತಾನೆ. "ಆ ಎಳೆ ಜಿಂಕೆಯನ್ನು ನೋಡು. ಅದು ತನ್ನ ತಾಯಿಯನ್ನು ಹುಡುಕುತ್ತಿರುವಂತಿದೆ. ಅದಕ್ಕೆ ಹಸಿವೆ ಮತ್ತು ಬಾಯಾರಿಕೆ ಆಗಿರುವಂತಿದೆ. ಹತ್ತಿರದಲ್ಲಿಯೇ ಹೆಣ್ಣು ಹುಲಿಯೊಂದು ತನ್ನ ಮರಿಹುಲಿಗಳಿಗೆ ಹಾಲೂಡಿಸುತ್ತಿದೆ. ಎಳೆಜಿಂಕೆ ಮರಿಯು ತಾಯಿಹುಲಿಯತ್ತ ಹೋಗುತ್ತದೆ ಮತ್ತು ಹುಲಿಮರಿಗಳನ್ನು ತಳ್ಳಿ, ತಾನು ತಾಯಿಹುಲಿಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯತೊಡಗುತ್ತದೆ. ಜಿಂಕೆ ಮರಿಯನ್ನು ತಾಯಿಹುಲಿಯು ಪ್ರೀತಿಯಿಂದ ದಿಟ್ಟಿಸುತ್ತದೆ ಮತ್ತು ತನ್ನ ಮರಿಯೇನೋ ಎಂಬಂತೆ ಅದರ ಮೈ ನೆಕ್ಕುತ್ತದೆ. ಎಷ್ಟು ಸುಂದರ ದೃಶ್ಯ. ಎಷ್ಟು ಸಂತೃಪ್ತಿಯ ಕ್ಷಣ" ತನ್ನೊಳಗೇ ಹೇಳಿಕೊಳ್ಳುತ್ತ ಆತ ಮತ್ತೆ ನೋಡುತ್ತಾನೆ. "ಇಲ್ಲಿ ಮುಂಗುಸಿ ಮತ್ತು ಸರ್ಪವೊಂದು ತಮ್ಮ ದ್ವೇಷ ಮರೆತು ಪರಸ್ಪರ ತಬ್ಬಿಕೊಂಡಿವೆ. ಈ ಸ್ಥಳ ನಿಜಕ್ಕೂ ಅಚ್ಚರಿಗಳಿಂದ ಕೂಡಿದೆ. ಇಲ್ಲಿಯ ತಪಸ್ವಿಗಳು, ಸನ್ಯಾಸಿಗಳು ಈ ಸ್ಥಳವನ್ನು ದೈವಿಕಗೊಳಿಸಿದ್ದಾರೆ. ನಾನು ಇಲ್ಲಿಯೇ ಎಲ್ಲಿಯಾದರೂ ಕುಳಿತು ತಪಸ್ಸನ್ನು ಮಾಡುವೆ." "ಶಿಖಿನಿ ಶಲಭ" ಎಂಬ ಶ್ಲೋಕವನ್ನು ಸಮಯವಿದ್ದರೆ ಮೇಲಿನದರ ಬದಲಿಗೆ ಆಯ್ಕೆ ಮಾಡಿಕೊಳ್ಳಬಹುದು.

6. ಶ್ಲೋಕವನ್ನು ಆಧರಿಸಿದ ಒಂದು ಆಟ್ಟಂ ಕೆಲವೊಮ್ಮೆ ಮುದ್ರೆಗಳಲ್ಲಿ ಸಂಸ್ಕೃತ ಶ್ಲೋಕಗಳನ್ನು ತೋರಿಸಲಾಗುತ್ತದೆ ಮತ್ತು ಅದು ಹಿತಕರವಾದ, ಆಹ್ಲಾದಕರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಬೇರೆ ಬೇರೆ ನಟರು ತಮ್ಮ ಅಭಿರುಚಿ ಮತ್ತು ಇಷ್ಟಕ್ಕೆ ಅನುಗುಣವಾಗಿ ವಿವಿಧ ಶ್ಲೋಕಗಳನ್ನು ಬಳಸುತ್ತಾರೆ. ಈ ಶ್ಲೋಕಗಳನ್ನು ವಿದ್ಯಾರ್ಥಿಗಳಿಗೆ ಅವರ ತರಬೇತಿಯ ಸಮಯದಲ್ಲಿ ಹೇಳಿಕೊಟ್ಟಿರುತ್ತಾರೆ. ಇದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯನ್ನು ಕೆಳಗೆ ನೀಡಲಾಗಿದೆ: ಶ್ಲೋಕ: ಕುಸುಕೋ ಕುಸುಮೋಲ್ಪಟ್ಟಿ ಶ್ರೂಯತೇನ ಚತುಸ್ಯತೇ ಬಲೇ ತಾವ ಮುಖಂಬುಜೇ ಪಶ್ಯ ನೀಲೋಪಾಲದ್ವಯಂ ಅರ್ಥ: ಒಂದು ಹೂ ಇನ್ನೊಂದು ಹೂವಿನೊಳಗೆ ಅರಳುವ ಸಂಗತಿಯು ಇತಿಹಾಸಕ್ಕೆ ಗೊತ್ತಿಲ್ಲ. ಆದರೆ, ಪ್ರಿಯೆ, ನಿನ್ನ ಕಮಲದಂತಹ ಮುಖದಲ್ಲಿ ಎರಡು ನೀಲಿ ನೀಲೋಪಲ ಹೂಗಳು(ಕಣ್ಣುಗಳು)ಕಾಣುತ್ತಿವೆ.

7. ಶ್ಲೋಕದವನ್ನು ಆಧರಿಸಿದ ಸಂಭಾಷಣೆ ಸಂಸ್ಕೃತ ಶ್ಲೋಕಗಳನ್ನು ಒಂದು ಉದ್ದೇಶವನ್ನು ವ್ಯಕ್ತಪಡಿಸಲೂ ಬಳಸುತ್ತಾರೆ. ಅಂತಹದೊಂದು ಉದಾಹರಣೆ ಎಂದರೆ ಕಾಳಕೇಯ ವಧಂನಲ್ಲಿ ಅರ್ಜುನನು ತನ್ನ ಸಾರಥಿ ಮಾತಲಿಯನ್ನು ಉದ್ದೇಶಿಸಿ ಮಾತನಾಡುವಾಗ ಬಳಸುವ ಶ್ಲೋಕ. ಶ್ಲೋಕ: ಪಿತ: ಕುಶಲೇ ಮಮಾ ಹೃತ ಭುಜಾಂ ನಾತ ಸಚೀ ವಲ್ಲಭ: ಮಾತಾ: ಕಿಂ ನು ಪ್ರಮೋಮಚ ಕುಶಲಿನೀ ಸೂನುರ್ಜಯಂತಸ್ತಯೊ ಪ್ರೀತಂ ವ ಕುಶ್ಚತೆ ತಾಡಿಕ್ಷನವಿದೋವ್ ಚೆತಾ ಸಮುಟ್ಕನುತೆ ಸುತ: ತ್ವಂ ರಾಧಾಮಶು ಚೋದಯ ವಯಂ ಧರ್ಮದೀವಂ ಮಾತಲಾ ಅರ್ಥ ಇಂದ್ರಾಣಿಯ ಗಂಡ ಮತ್ತು ದೇವರುಗಳ ಅಧಿಪತಿ ನನ್ನ ತಂದೆ - ಆತ ಆರೋಗ್ಯದಿಂದ ಇರುವನೇ? ಆತನ ಮಗ ಜಯಂತ - ಆತ ತನ್ನ ತಂದೆಯ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವನೇ? ಓ... ನನಗೆ ಅವರೆಲ್ಲನ್ನೂ ನೋಡುವ ಕಾತುರತೆಯಾಗುತ್ತಿದೆ. 8. ಸ್ವರ್ಗ ವರ್ಣನೆ : ಕಾಳಕೇಯ ವಧಂನಲ್ಲಿ ಅರ್ಜುನ ಅರ್ಜುನನು ತನ್ನ ತಂದೆ ಇಂದ್ರನ ಆಹ್ವಾನದ ಮೇರೆಗೆ ಸ್ವರ್ಗಕ್ಕೆ ಹೋಗುತ್ತಾನೆ. ಇಂದ್ರಾಣಿಯಿಂದ ಅಪ್ಪಣೆಯನ್ನು ಪಡೆದುಕೊಂಡ ನಂತರ ಆತನು ಸ್ವರ್ಗದ ಎಲ್ಲ ಸ್ಥಳಗಳನ್ನೂ ನೋಡಲು ಹೋಗುತ್ತಾನೆ. ಆತ ಮೊದಲು ಒಂದು ಭವ್ಯ ಮಹಲನ್ನು ಅಂದರೆ ತನ್ನ ತಂದೆಯ ಅರಮನೆಯನ್ನು ನೋಡುತ್ತಾನೆ. ಅದಕ್ಕೆ ನಾಲ್ಕು ಪ್ರವೇಶದ್ವಾರಗಳಿದ್ದು, ಬಹಳ ದೊಡ್ಡದಿರುತ್ತದೆ. ಅದನ್ನು ಭೂಲೋಕದ ಬಂಗಾರ ಮತ್ತು ಇನ್ನಿತರ ಆಭರಣಗಳಿಗಿಂತಲೂ ಶ್ರೇಷ್ಠವಾದ ವಸ್ತುಗಳಿಂದ ಕಟ್ಟಿರುತ್ತಾರೆ. ನಂತರ ಅವನು ಇನ್ನೂ ಮುಂದೆ ಹೋಗಿ ಐರಾವತವನ್ನು ನೋಡುತ್ತಾನೆ. ಇಲ್ಲಿ ಅವನು ನಾಲ್ಕು ಕೊಂಬುಗಳಿರುವ ಬೃಹತ್ ಐರಾವತವನ್ನು ವರ್ಣನೆ ಮಾಡುತ್ತಾನೆ. ಅವನಿಗೆ ಅದನ್ನು ಮುಟ್ಟಲು ಭಯವೆನ್ನಿಸುತ್ತದೆ. ನಂತರ ಸ್ವರ್ಗದಲ್ಲಿರುವ ಪ್ರಾಣಿಗಳು ಭೂಲೋಕದಲ್ಲಿದ್ದಂತೆ ಕ್ರೂರಿಗಳಲ್ಲವೇನೋ ಎಂದು ಯೋಚಿಸುತ್ತಾನೆ. ಹಾಗೆ ಯೋಚಿಸುತ್ತ ಅವನು ಐರಾವತವನ್ನು ಮುಟ್ಟಿ, ಅದಕ್ಕೆ ನಮಸ್ಕರಿಸುತ್ತಾನೆ. ದೇವರುಗಳು ಮತ್ತು ರಾಕ್ಷಸರು ಹೇಗೆ ಶ್ವೇತಸಮುದ್ರವನ್ನು ಕಡೆಯುತ್ತಿದ್ದರು ಎಂದು ಅದರೆಲ್ಲ ವಿವರಗಳೊಡನೆ ವರ್ಣಿಸುತ್ತಾನೆ. ಜೊತೆಗೆ ಐರಾವತವು ಈ ಶ್ವೇತಸಮುದ್ರವನ್ನು ಕಡೆಯುವುದನ್ನು ನೋಡಲು ಎದ್ದುಬಂದಿತು ಎಂಬುದನ್ನೂ ವಿವರಿಸುತ್ತಾನೆ. ಆತ ಹಾಗೆ ಮುಂದೆ ನಡೆಯುತ್ತಾನೆ ಮತ್ತು ತನ್ನ ತಂದೆಯ(ಇಂದ್ರನ) ಕುದುರೆಯನ್ನು ನೋಡುತ್ತಾನೆ. ಅದು ಬೆಳ್ಳಗಿನ ಕುದುರೆ ಎಂದು ವರ್ಣಿಸಲಾಗಿದೆ. ಅದು ತಾನು ಹುಟ್ಟಿ ಬಂದಿರುವ ಶ್ವೇತಸಮುದ್ರದ ಅಲೆಗಳಂತೆ ಹೊಳೆಯುವ ಬಿಳಿ ಕೇಸರವನ್ನು ಹೊಂದಿತ್ತು ಎಂದೂ ವಿವರಿಸಲಾಗಿದೆ. ಅವನು ಕುದುರೆಯನ್ನೂ ಮುಟ್ಟಿ, ನಮಸ್ಕರಿಸುತ್ತಾನೆ. ನಂತರ ಆತನು ಆಕಾಶದ ನದಿಯನ್ನು (ಅಥವಾ ಆಕಾಶಗಂಗೆ) ನೋಡಲು ಹೋಗುತ್ತಾನೆ. ಆ ನದಿಯ ಪಕ್ಕ ಅನೇಕ ಪಕ್ಷಿಗಳಿದ್ದವು ಮತ್ತು ಅವು ಹೇಗೆ ಹಾರುತ್ತ, ಆಡುತ್ತಿದ್ದವು ಎಂದು ನೋಡುತ್ತಾನೆ. ನಂತರ ಅವನು ಸ್ವರ್ಗೀಯ ಮಹಿಳೆಯರನ್ನು ನೋಡುತ್ತಾನೆ. ಅವರಲ್ಲಿ ಕೆಲವರು ಹೂ ಕೊಯ್ಯುತ್ತಿರುತ್ತಾರೆ. ಅವರಲ್ಲೊಬ್ಬಳು ತಡವಾಗಿ ಬರುತ್ತಾಳೆ ಮತ್ತು ಹೂಮಾಲೆ ಮಾಡಲು ಕೆಲವು ಹೂಗಳನ್ನು ಇನ್ನುಳಿದ ಹೆಂಗಸರಲ್ಲಿ ಕೇಳುತ್ತಾಳೆ. ಉಳಿದವರು ಕೊಡಲು ನಿರಾಕರಿಸುತ್ತಾರೆ. ಅವಳು ಕಲ್ಪವೃಕ್ಷದ ಸಮೀಪ ಹೋಗಿ, "ದಯವಿಟ್ಟು ನನಗೆ ಸ್ವಲ್ಪ ಹೂ ಕೊಡು" ಎಂದು ಕೇಳಿಕೊಳ್ಳುತ್ತಾಳೆ". ತಕ್ಷಣವೇ ಹೂಮಳೆಯಾಗುತ್ತದೆ ಮತ್ತು ಅವಗಳು ಅವುಗಳನ್ನು ತನ್ನ ಉಡಿಯಲ್ಲಿ ತುಂಬಿಕೊಂಡು, ಉಳಿದವರನ್ನು ಅಣಕಿಸುತ್ತ ಹೂಮಾಲೆ ಮಾಡಲು ಹೋಗುತ್ತಾಳೆ. "ನೋಡಿ.. ನನಗೂ ಹೂ ಸಿಕ್ಕಿದವು". ಇದಾದನಂತರ ಅವನು ಸ್ವರ್ಗದ ಮಹಿಳೆಯರ ಸಂಗೀತ ಮತ್ತು ನೃತ್ಯವನ್ನು ನೋಡುತ್ತಾನೆ. ಮೊದಲು ಅದು ವಿವಿಧ ವಾದ್ಯಗಳನ್ನು ಶ್ರುತಿಗೊಳಿಸಿಕೊಳ್ಳುವುದರಿಂದ ಆರಂಭವಾಗುತ್ತದೆ. ತಂಬೂರ, ಮೃದಂಗ, ವೀಣೆ ಮತ್ತು ನಂತರ ಜಾಗಟೆಯನ್ನು ಬಡಿಯುತ್ತ ನಿಜವಾದ ಸಂಗೀತಕಛೇರಿ ಆರಂಭಗೊಳ್ಳುತ್ತದೆ. ನಂತರ ಎರಡು ಮೂರು ಬಗೆಯ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ನಂತರ ಚೆಂಡುಗಳೊಂದಿಗೆ ಕಣ್ಕಟ್ಟು ಮಾಡುವುದು ಶುರುವಾಗುತ್ತದೆ. ಅದನ್ನು ಒಂದು ಶ್ಲೋಕದಲ್ಲಿ ಹೀಗೆ ವರ್ಣಿಸಲಾಗಿದೆ: ಶ್ಲೋಕ:

ಎಕೋಪಿ ತ್ರಯ ಇವ ಭತಿ ಕಂಡುಕೊಯಂ ಕಾಂತಾಯಾ ಕರತಾಲ ರಕ್ತರಕ್ತ ಅಭ್ರಷ್ಟೊ ನಯನಮರೀಚಿ ನೀಲನೀಲೊ ಭೂಮೌ ತಲ್ಚರನ ನಾಗಾಂಶು ಗೌರ್ಗೌರ: ಅರ್ಥ: ಒಂದು ಚೆಂಡು ಮೂರು ಚೆಂಡುಗಳ ಹಾಗೆ ಕಾಣುತ್ತದೆ. ಅದು ಯಕ್ಷಿಣಿ ಮಾಡುವವಳ ಕೈಯಲ್ಲಿದ್ದಾಗ, ಅದು ಕೈಗಳ ಕೆಂಪನ್ನು ಪಡೆದುಕೊಳ್ಳುತ್ತದೆ. ಅದು ಮೇಲೆ ಹೋದಾಗ ಕಣ್ಣುಗಳ ನೀಲಿತನವನ್ನು ಹೊಂದುತ್ತದೆ, ಅದು ನೆಲಕ್ಕೆ ಬಡಿದಾಗ ಕಾಲಿನ ಉಗುರಗಳ ಬಿಳಿಬಣ್ಣವನ್ನು ಹೊಂದುತ್ತದೆ. ಒಮ್ಮೆ ಕಣ್ಕಟ್ಟು ಮಾಡಿದ ಚೆಂಡು ಕೆಳಕ್ಕೆ ಬಿದ್ದಿತು. ಯಕ್ಷಣಿ ಮಾಡುವವಳು, ಹೇಗೋ ಅದನ್ನು ಸರಿಪಡಿಸಿಕೊಂಡು, ಮುಂದುವರೆದು, "ನೋಡಿ, ಈಗ ನಾನೇನು ಮಾಡುವೆ" ಎಂದು ಹೇಳುತ್ತಾಳೆ. ಒಮ್ಮೆ ಆ ಮಹಿಳೆಯ ಮೇಲುಡುಪು ಕೆಳಜಾರುತ್ತದೆ, ಅವಳು ಲಜ್ಜೆಯನ್ನು ವ್ಯಕ್ತಪಡಿಸುತ್ತ ಅದನ್ನು ಸರಿಪಡಿಸಿಕೊಳ್ಳುತ್ತಾಳೆ. ನಂತರ ಮಹಿಳೆಯರು ಕುಮ್ಮಿ ನೃತ್ಯವನ್ನು ಮಾಡುತ್ತಾರೆ. ಅರ್ಜುನನನು ಈ ನೃತ್ಯವನ್ನು ಆನಂದಿಸುತ್ತಿರುವಾಗ, ಯಾರೋ ಅವನ್ನು ಕರೆಯುತ್ತಾರೆ. ಅರ್ಜುನನಿಗೆ ಭಯವಾಗುತ್ತದೆ. 'ಓ ದೇವರೇ...ನಾನೆಲ್ಲಿರುವೆ?" ಅವನು ತನ್ನೊಳಗೇ ಕೇಳಿಕೊಳ್ಳುತ್ತಾನೆ ಮತ್ತು ನಂತರ ಅವನು ತ್ವರಿತವಾಗಿ ಮರಳುತ್ತಾನೆ.

ಇವನ್ನೂ ನೋಡಿ

ಬದಲಾಯಿಸಿ
  • ಶಾಸ್ತ್ರೀಯ ಭಾರತೀಯ ನೃತ್ಯ
  • ಕೇರಳದ ಕಲೆಗಳು
  • ಯಕ್ಷಗಾನ
  • ಮೋಹಿನಿಯಾಟ್ಟಂ
  • ಕೋಡಿಯಾಟ್ಟಂ
  • ನಾಟ್ಯಕಲ್ಪದ್ರುಮಂ
  • ಒಟ್ಟಮ್ತುಲ್ಲಲ್
  • ತೆಯ್ಯಂ
  • ಕಬುಕಿ
  • ಪಂಚವಾದ್ಯಂ
  • ಮಾಣಿ ಮಾಧವ ಚಾಕ್ಯಾರ್
  • ಕೇರಳ ಕಲಾಮಂಡಲಂ
  • ಗಾಂಧೀ ಸೇವಾ ಸದನ್
  • ಕೇರಳ ಜನಪದ ಅಕಾಡೆಮಿ
  • ಪಂಚೇರಿ ಮೇಳಂ
  • ಪಾಂಡಿ ಮೇಳಂ
  • ತಯಂಬಕ

ಉಲ್ಲೇಖಗಳು

ಬದಲಾಯಿಸಿ
  1. ಜರ್ರಿಲ್ಲಿ, ಪಿ.ಬಿ.( 1984). ದಿ ಕಥಕ್ಕಳಿ ಕಾಂಪ್ಲೆಕ್ಸ್: ಆಕ್ಟರ್, ಪರ್‌ಫಾರ್ಮನ್ಸ್ & ಸ್ಟ್ರಕ್ಚರ್ , ಅಭಿನವ್ ಪಬ್ಲಿಕೇಶನ್ಸ್
  2. Live to tell The Guardian, Saturday February 17, 2007.


ಬಾಹ್ಯ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಕಥಕ್ಕಳಿ&oldid=1162867" ಇಂದ ಪಡೆಯಲ್ಪಟ್ಟಿದೆ