ಓಣಮ್ದಕ್ಷಿಣ ಭಾರತಕೇರಳರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ - ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಕ್ಕಾಗಿ ಇಲ್ಲಿನ ಜನರು ಹೊಸಬಟ್ಟೆಗಳನ್ನು ತೊಡುವುದು ವಾಡಿಕೆ. ಪುರುಷರು ಅಂಗಿ ಮತ್ತು ಮುಂಡು ಎಂದು ಕರೆಯಲಾಗುವ ಸ್ಕರ್ಟ್ ತರದ ಉಡುಪನ್ನು(ಪಂಚೆ)ಧರಿಸಿದರೆ,ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಬಾಲಕಿಯರು ಪಾವಡ ವೆಂಬ ಲಂಗ, ಮೇಲೊಂದು ರವಿಕೆಯನ್ನು ತೊಟ್ಟು ಸಡಗರದಿಂದ ಓಡಾಡುತ್ತಿರುತ್ತಾರೆ. ಓಣಂ ಕೇರಳದ ಸುಗ್ಗಿಯ ಹಬ್ಬವೂ ಹೌದು. [ಸೂಕ್ತ ಉಲ್ಲೇಖನ ಬೇಕು]

ಓಣಂ
ಸಂಕೀರ್ಣವಾಗಿ ಅಲಂಕರಿಸಿದ ಪೂಕಲಂ, ಓಣಂ 2009
ಅಧಿಕೃತ ಹೆಸರುಮಲಯಾಳಂ: ഓണം
ರೀತಿಹಾರ್ವೆಸ್ಟ್ ಫೆಸ್ಟಿವಲ್/ಭಾರತೀಯ ಹಬ್ಬ
ಮಹತ್ವತಿರುವೋಣಿಯಂದು, ರಾಜ ಮಹಾಬಲಿ ಪ್ರತಿ ಮಲಯಾಳಿ ಮನೆಗೆ ಭೇಟಿ ನೀಡುತ್ತಾನೆ ಮತ್ತು ತನ್ನ ಜನರನ್ನು ಭೇಟಿಯಾಗುತ್ತಾನೆ ಎಂದು ನಂಬಲಾಗಿದೆ.
ದಿನಾಂಕಓಣಂ ನಕ್ಷತ್ರ ಚಿಂಗಂ ತಿಂಗಳಲ್ಲಿ

ಓಣಂ, ಆಧುನಿಕ ಕಾಲಮಾನದಲ್ಲಿಯೂ ಉಳಿಸಿ, ಆಚರಿಸಿಕೊಂಡು ಬರಲಾಗುತ್ತಿರುವ ಅತ್ಯಂತ ಪುರಾತನ ಹಬ್ಬವಾಗಿದೆ. ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು - ಇವೆರಡರ ಸಂಗಮದ ಕುರುಹಾಗಿ ಮತ್ತು ಅರಸ ಮಾವೆಳಿಯು ಪಾತಾಳಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಯ ನೆನಪಿನಲ್ಲಿ, ಮಲಯಾಳಿ ತಿಂಗಳು ಚಿಂಗಂನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಅರಸ ಮಾವೆಳಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ.

ಪುರಾಣ ಐತಿಹ್ಯಗಳ ಪ್ರಕಾರ, ಮಹಾಬಲಿ ಚಕ್ರವರ್ತಿಯ ಕಾಲದಲ್ಲಿಯೇ ಕೇರಳವು ಸುವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಅವನ ರಾಜ್ಯಭಾರದ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಂತಸ, ನೆಮ್ಮದಿ ಮತ್ತು ಸಂತೃಪ್ತಿಯಿಂದಿದ್ದು, ಅರಸನೂ ಕೂಡ ಅವರೆಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾಗಿ ತಿಳಿದು ಬರುತ್ತದೆ. ಈ ಎಲ್ಲ ವಿಶೇಷತೆಗಳ ಹೊರತಾಗಿಯೂ ಮಹಾಬಲಿ ಚಕ್ರವರ್ತಿಯಲ್ಲಿ ಒಂದು ನ್ಯೂನತೆ ಇತ್ತು. ಅವನು ಅಹಂಕಾರಿಯಾಗಿದ್ದ. ಇಷ್ಟೆಲ್ಲದರ ನಡುವೆಯೂ ಮಹಾಬಲಿ ತನ್ನ ಒಳ್ಳೆಯ ಗುಣಗಳ ಫಲವಾಗಿ ದೇವರಿಂದ ಅವನೊಂದು ವರ ಪಡೆದುಕೊಂಡಿದ್ದ. ಅದೆಂದರೆ, ವರ್ಷಕ್ಕೊಮ್ಮೆ ಅವನು ತೀರಾ ಆತ್ಮೀಯರಾಗಿದ್ದ ತನ್ನ ಜನರನ್ನು ಭೇಟಿಯಾಗಲು ಸಾಧ್ಯವಿತ್ತು.

ಅವನು ಭೂಲೋಕವನ್ನು ಭೇಟಿ ಮಾಡುವ ಆ ದಿವಸವನ್ನೇ ಅಲ್ಲಿ ಓಣಂ ಆಗಿ ಪ್ರತಿ ವರ್ಷವೂ ಆಚರಿಸುತ್ತಾರೆ. ಅಲ್ಲಿನ ಜನರು ಈ ಹಬ್ಬವನ್ನು ತಮ್ಮ ಪ್ರೀತಿಪಾತ್ರ ಅರಸನೆಡೆಗೆ ತಮಗಿರುವ ಅಭಿಮಾನ ಮತ್ತು ಸಂತಸವನ್ನು ಕೃತಜ್ಞತಾಪೂರ್ವಕವಾಗಿ ವ್ಯಕ್ತಪಡಿಸಲು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.

ಹತ್ತು ದಿನಗಳ ಕಾಲ ಜರುಗುವ ಈ ವಿಶೇಷ ಉತ್ಸವದಲ್ಲಿ ಕೇರಳದ ಸಾಂಸ್ಕೃತಿಕ ವೈಭವವೆಲ್ಲ ಮೈದಾಳಿರುತ್ತದೆಯಲ್ಲದೆ, ಜನರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟಿರುತ್ತವೆ. ಓಣಂ ಉತ್ಸವಾಚರಣೆಯ ಅತ್ಯಂತ ಆಕರ್ಷಣೀಯ ಅಂಶವೆಂದರೆ ತಿರುಓಣಂನ ದಿವಸ ತಯಾರಿಸಲಾಗುವ ಓಣಸಾದ್ಯ ಎಂಬ ಅದ್ಭುತ ತಿನಿಸು. ಇದು 9 ತರದ ಭೋಜನವಾಗಿದ್ದು, 11 ರಿಂದ 13 ಬಗೆಯ ತರಾವರಿ ಖಾದ್ಯಗಳನ್ನು ಹೊಂದಿರುತ್ತದೆ. ಓಣಸಾದ್ಯವನ್ನು ಬಾಳೆಯ ಎಲೆಗಳ ಮೇಲಿಟ್ಟು ಬಡಿಸಲಾಗುತ್ತದೆ ಮತ್ತು ಜನರು ಕೂಡ ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಕೂತು ಈ ಭೋಜನವನ್ನು ಸವಿಯುತ್ತಾರೆ.

ಓಣಂ ಉತ್ಸವದ ಮತ್ತೊಂದು ಮೋಡಿಮಾಡುವ ಅಂಶವೆಂದರೆ ವಲ್ಲಂಕಲಿ ಎನ್ನುವ ಹಾವು ದೋಣಿ ಪಂದ್ಯ. ಈ ಪಂದ್ಯವನ್ನು ಪಂಪಾ ನದಿಯಲ್ಲಿ ಆಯೋಜಿಸಲಾಗುತ್ತದೆ. ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿರುವ ದೋಣಿಗಳಲ್ಲಿ ನೂರಾರು ನಾವಿಕರು ಕೇಕೆ ಹಾಕುತ್ತ ಕೂತು, ಮೇರೆ ಮೀರಿದ ಉತ್ಸಾಹ ಮತ್ತು ಆನಂದದಿಂದ ಹಾಡುಗಳನ್ನು ಹೇಳಿಕೊಂಡು ದೋಣಿ ನಡೆಸುವುದನ್ನು ನೋಡಲು ಅಸಂಖ್ಯಾತ ಜನ ನೆರೆದಿರುತ್ತಾರೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಓಣಂನ ದಿವಸ ಓಣಕಲಿಕಾಲ್ ಎನ್ನುವ ಆಟವನ್ನು ಗುಂಪು ಗುಂಪಾಗಿ ಆಡುವ ಸಂಪ್ರದಾಯವೂ ಇದೆ. ಹೆಚ್ಚು ದೈಹಿಕ ಶ್ರಮವನ್ನು ಹಾಕಿ ಆಡಲಾಗುವ ಆಟಗಳಾದ ತಳಪ್ಪಂತುಕಲಿ (ಇಲ್ಲಿ ಚೆಂಡನ್ನು ಬಳಸಲಾಗುತ್ತದೆ), ಆಮ್ಬೆಯಲ್(ಬಿಲ್ಲಿನಾಟ), ಕುಟುಕುಟು ಮತ್ತು ಕಯ್ಯಮಕಲಿ ಹಾಗೂ ಅತ್ತಕಳಂ ಎಂಬುವ ಕಾಳಗದ ಆಟಗಳನ್ನು ಪುರುಷರು ಆಯ್ಕೆ ಮಾಡಿಕೊಳ್ಳುತ್ತಾರೆ. ಮಹಿಳೆಯರು ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಕುರುಹಾಗಿ ಅವರವರ ಮನೆಗಳ ಮುಂದೆ ತುಂಬಾ ಸುಂದರವೂ, ಸಂಕೀರ್ಣವೂ ಆದ ಪೂಕ್ಕಳಂ ಎಂಬ ಪುಷ್ಪ ರಂಗವಲ್ಲಿಗಳನ್ನು ಹಾಕಿರುತ್ತಾರೆ. ಓಣಂ ಸಂದರ್ಭದಲ್ಲಿ ಕೈಕೊತ್ತಿ ಕಲಿ ಮತ್ತು ತುಂಬಿ ತುಳ್ಳಾಲ್ ಎಂಬೆರಡು ಬಗೆಯ ಅತ್ಯಂತ ಮನೋಹರವಾದ ನೃತ್ಯಪ್ರಕಾರಗಳನ್ನು ಮಹಿಳೆಯರು ಪ್ರದರ್ಶಿಸುತ್ತಾರೆ. ಜಾನಪದ ನೃತ್ಯ ಪ್ರಕಾರಗಳಾದ ಕುಮ್ಮಟ್ಟಿಕಲಿ ಮತ್ತು ಪುಲಿಕಲಿಗಳಂತೂ ಇಡೀ ಉತ್ಸವದ ಮೇರು ಆಕರ್ಷಣೆಗಳಾಗಿವೆ.

ಕೇರಳದಲ್ಲಿ ಮಹಾಬಲಿಯ ಆಳ್ವಿಕೆಯನ್ನು ಸುವರ್ಣಯುಗ ಎಂದೇ ಗುರುತಿಸಲಾಗುತ್ತದೆ. ಓಣಂನ ದಿವಸ ಈ ಕೆಳಗಿನ ಗೀತೆಯನ್ನೇ ಹೆಚ್ಚಾಗಿ ಎಲ್ಲ ಕಡೆಗೂ ನಾವು ಕೇಳಬಹುದಾಗಿದೆ: (ಅನುವಾದ)

ನಮ್ಮ ರಾಜನಾದ ಮಾವೇಲಿ ದೇಶವನ್ನು ಆಳುತ್ತಿದ್ದಾಗ,

ಎಲ್ಲ ಜನರಿಗೂ ಸಮಾನತೆ ಇತ್ತು.
ಮತ್ತು ಜನರು ಸಂತೋಷದಿಂದ ಮತ್ತು ಉಲ್ಲಾಸದಿಂದಿದ್ದರು;
ಅವರೆಲ್ಲರೂ ಹಾನಿಯಿಂದ ಮುಕ್ತರಾಗಿದ್ದರು.
ಆತಂಕವಾಗಲೀ ಅನಾರೋಗ್ಯವಾಗಲೀ ಇರಲಿಲ್ಲ,
ಮಕ್ಕಳ ಸಾವಿನ ಸುದ್ದಿ ಕೇಳಲೇ ಇಲ್ಲ.
ಯಾವುದೇ ಸುಳ್ಳು ಇರಲಿಲ್ಲ,
ಕಳ್ಳತನವಾಗಲೀ ಮೋಸವಾಗಲೀ ಇರಲಿಲ್ಲ,
ಮತ್ತು ಮಾತಿನಲ್ಲಿ ಯಾರೂ ಸುಳ್ಳಾಗಲಿಲ್ಲ.
ಅಳತೆಗಳು ಮತ್ತು ತೂಕಗಳು ಸರಿಯಾಗಿವೆ;
ಯಾರೂ ತನ್ನ ನೆರೆಯವರಿಗೆ ಮೋಸ ಮಾಡಿಲ್ಲ ಅಥವಾ ಅನ್ಯಾಯ ಮಾಡಿಲ್ಲ.
ನಮ್ಮ ದೊರೆ ಮಾವೇಲಿ ನಾಡನ್ನು ಆಳುತ್ತಿದ್ದಾಗ,
ಎಲ್ಲಾ ಜನರು ಒಂದು ಜಾತಿರಹಿತ ಜನಾಂಗವನ್ನು ರಚಿಸಿದರು.

ಪುರಾಣಪುರುಷ ಮಹಾಬಲಿ

ಬದಲಾಯಿಸಿ

ನರಸಿಂಹಅವತಾರದಲ್ಲಿ ಶ್ರೀ ವಿಷ್ಣುವಿನಿಂದ ಹತನಾದ, ಹಿರಣ್ಯಕಶಿಪುವಿನ ಮಗ ಪ್ರಹ್ಲಾದನ ಮೊಮ್ಮಗನೇ ಈ ಮಹಾಬಲಿ. ಅಸುರ ಕುಲ ಸಂಜಾತನಾಗಿದ್ದಾರೂ ಪ್ರಹ್ಲಾದನಿಗೆ ಶ್ರೀ ವಿಷ್ಣುವಿನ ಮೇಲೆ ಅಪಾರವಾದ ಭಕ್ತಿ ಇದ್ದಿತು. ತನ್ನ ತಾತ ಪ್ರಹ್ಲಾದನ ತೊಡೆಯ ಮೇಲಿನ ಕೂಸಾಗಿಯೇ ಮಹಾಬಲಿಯು ವಿಷ್ಣುವಿನ ಮೇಲಿನ ಭಕ್ತಿ ಮತ್ತು ಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದು.

ಮೂರು ಲೋಕಗಳನ್ನು ಜಯಿಸಿದ ಮಹಾಬಲಿ

ಬದಲಾಯಿಸಿ

ಕಾಶ್ಯಪ ಮಹಾಮುನಿಗೆ ಇಬ್ಬರು ಪತ್ನಿಯರು, ದಿತಿ ಮತ್ತು ಅದಿತಿ. ಇಬ್ಬರೂ ಸುರಾಸುರರಿಗೆ ತಾಯ್ತಂದೆಯರು. ದಿತಿ ಅಸುರರಿಗೆ ತಾಯಿಯಾದರೆ, ಅದಿತಿ ದೇವತೆಗಳಿಗೆ ತಾಯಿ. ತಪತ್ಸಾಧನೆಗಾಗಿ ಹಿಮಾಲಯಕ್ಕೆ ಹೋಗಿ ಮರಳಿ ಬಂದ ಕಾಶ್ಯಪ ಮುನಿಗೆ ಅಳುತ್ತಿರುವ ಪತ್ನಿ ಅದಿತಿ ಕಾಣುತ್ತಾಳೆ. ತಕ್ಷಣ ತನ್ನ ಅಂತಃಚಕ್ಷುಗಳಿಂದ ಆಗಿರಬಹುದಾದ ಘಟನೆಯನ್ನು ಮತ್ತು ಪತ್ನಿಯ ದುಃಖಕ್ಕೆ ಕಾರಣವನ್ನು ಮುನಿಯು ತಿಳಿದುಕೊಳ್ಳುತ್ತಾನೆ. ತನ್ನ ಪತ್ನಿಗೆ 'ಪ್ರಪಂಚದಲ್ಲಿನ ಯಾವುದೂ ಕೂಡ ದೈವೇಚ್ಛೆಯಿಲ್ಲದೇ ಸಂಭವಿಸದು ಮತ್ತು ಪ್ರತಿಯೊಬ್ಬರೂ ಅವರವರ ಪಾಡಿಗೆ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾ ಮುನ್ನಡೆಯುವುದು ಒಳ್ಳೆಯದು' ಎಂದು ಸಮಾಧಾನ ಹೇಳುತ್ತಾನೆ. ಹಾಗೆಯೇ ಆಕೆಗೆ ಭಗವಾನ್ ವಿಷ್ಣುವಿನ ಕುರಿತು ಪ್ರಾರ್ಥನೆಯನ್ನು ಮಾಡಲು ತಿಳಿಸಿ, ಶುಕ್ಲ ಪಕ್ಷ ದ್ವಾದಶಿಯ ಅಂದರೆ ಕಾರ್ತಿಕ ಹುಣ್ಣಿಮೆಯ 12ನೆ ದಿವಸದಿಂದ ಪಯೋವ್ರತವನ್ನು ಆಚರಿಸಲು ಹೇಳಿಕೊಡುತ್ತಾನೆ. ಅದಿತಿಯ ನಿಷ್ಠೆ ಮತ್ತು ವ್ರತಕ್ಕೆ ಮೆಚ್ಚಿ ಪ್ರತ್ಯಕ್ಷನಾಗುವ ಶ್ರೀವಿಷ್ಣುವು ಇಂದ್ರನಿಗೆ ಸಹಾಯ ಮಾಡುವುದಾಗಿ ಆಕೆಗೆ ಅಭಯ ಕೊಡುತ್ತಾನೆ.

ಯಾವಾಗ ತಮ್ಮನ್ನೇ ಸೋಲಿಸಿ, ಮೂರೂ ಲೋಕಗಳನ್ನು ಮಹಾಬಲಿ ಚಕ್ರವರ್ತಿಯು ಆಳಲು ತೊಡಗಿದನೋ, ದೇವತೆಗಳಿಗೆ ತುಂಬಾ ಬೇಸರವಾಗುತ್ತದೆ. ದೇವತೆಗಳನ್ನು ಒತ್ತಾಯಪೂರ್ವಕವಾಗಿ ಹಿಂಸಿಸಲಾಗುತ್ತದೆ. ಎಲ್ಲ ದೇವತೆಗಳು ಆಗ ವಿಷ್ಣುವಿನ ಹತ್ತಿರ ಹೋಗಿ ಸಹಾಯ ಹಸ್ತ ಕೇಳುತ್ತಾರೆ. ಆಗ ವಿಷ್ಣುವು ದೇವತೆಗಳನ್ನು ಕುರಿತು ಮಹಾಬಲಿ ಚಕ್ರವರ್ತಿಯು ತನ್ನ ಪ್ರಜೆಗಳೆಲ್ಲರಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದಾಗಿಯೂ ಮತ್ತು ಆತನು ಸುರನಾಗಲು(ದೇವ) ಎಲ್ಲ ಅರ್ಹತೆಗಳನ್ನು ಹೊಂದಿರುತ್ತಾನೆ ಎಂಬುದಾಗಿಯೂ ತಿಳಿಸುತ್ತಾನೆ. ದೇವತೆಗಳಿಗೆ ಮಹಾಬಲಿಯ ಕುರಿತಾಗಿ ಅಸೂಯೆ ಪಡದಿರಲು ಬುದ್ಧಿವಾದ ಹೇಳುತ್ತಾನೆ. ಅಸೂಯೆಯೇ ಅವರೆಲ್ಲರೂ ಅಸುರರಾಗುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳುತ್ತಾನೆ. ಮಹಾಬಲಿಯನ್ನು ಪರೀಕ್ಷಿಸಲು ವಿಷ್ಣು ನಿರ್ಧರಿಸುತ್ತಾನೆ.

ಇದೇ ಹೊತ್ತಿನಲ್ಲಿ ಮಹಾಬಲಿಯು ನರ್ಮದಾ ನದಿಯ ತಟದಲ್ಲಿ ಕುಳಿತು ಪವಿತ್ರ ಯಾಗವಾದ ವಿಶ್ವಜಿತ ಯಾಗ ಅಥವಾ ಅಶ್ವಮೇಧ ಯಾಗದಲ್ಲಿ ಯಜ್ಞಕ್ಕೆ ಸಂಬಂಧಿಸಿದ ವಿಧಿಗಳನ್ನು ಆಚರಿಸುತ್ತಾನೆ. ಜೊತೆಗೆ ತನ್ನ ಆ ಯಾಗದ ಸಂದರ್ಭದಲ್ಲಿ ಯಾರಾದರೂ ಬಂದು ಏನನ್ನೇ ಕೇಳಿದರೂ ದಾನ ಮಾಡುವುದಾಗಿ ಮಾತು ಕೊಟ್ಟಿರುತ್ತಾನೆ.

ವಾಮನನಿಂದ ಮಹಾಬಲಿಯ ಸಂದರ್ಶನ

ಬದಲಾಯಿಸಿ
 
ಮಹಾಬಲಿ ಚಕ್ರವರ್ತಿಯ ಆಸ್ಥಾನದಲ್ಲಿ (ಬಲಕ್ಕೆ ಕುಳಿತಿರುವ ಮಹಾಬಲಿ ಚಕ್ರವರ್ತಿ)ದಾನ ಪಡೆಯುತ್ತಿರುವ ವಾಮನ (ನೀಲ ವರ್ಣದ ಕುಬ್ಜ ಮಾನವ)

ಮಹಾಬಲಿಯ ಯಾಗ ಮತ್ತು ಅವನ ವಾಗ್ದಾನದ ಸಂದರ್ಭವನ್ನು ಉಪಯೋಗಿಸಿಕೊಳ್ಳಲು ನಿರ್ಧರಿಸುವ ಶ್ರೀವಿಷ್ಣುವು ಬ್ರಾಹ್ಮಣನೊಬ್ಬನ ವೇಷ ಧರಿಸಿ, ವಾಮನನಾಗಿ ಮಹಾಬಲಿಯ ಯಾಗಶಾಲೆಗೆ ಬರುತ್ತಾನೆ. ಯುವ ವಟು ವಾಮನನು ಯಾಗಶಾಲೆಯನ್ನು ಪ್ರವೇಶಿಸುತ್ತಿರುವ ಹಾಗೆಯೇ ಅಲ್ಲಿ ಸೇರಿದ್ದ ಋಷಿಗಳಿಗೆ ಯುವವಟುವಿನ ಅನಿರ್ವಚನೀಯ ಪ್ರಭಾವಳಿಯ ಅನುಭವವಾಗುತ್ತದೆ. ಸ್ವತಃ ಮಹಾಬಲಿಯೇ ಅಪೂರ್ವ ವರ್ಚಸ್ಸಿನ ಆ ಬಾಲ ವಟುವನ್ನು ಎಲ್ಲ ಸಾಂಪ್ರದಾಯಿಕ ಗೌರವಾದರಗಳೊಡನೆ ಸ್ವಾಗತಿಸಿ, ಆತನಿಗೆ ರಾಜಯೋಗಿಯ ಸ್ಥಾನಮಾನಕ್ಕೆ ಸರಿಹೊಂದುವ ಶ್ರೇಷ್ಠ ಸ್ಥಾನವನ್ನು ಕೊಡಮಾಡುತ್ತಾನೆ. ತನ್ನ ಸಹಾಯವನ್ನು ಬೇಡಲು ಬರುವ ಜನರಿಗೆ ನೀಡುವ ಯಥಾಪ್ರಕಾರದ ಸೌಜನ್ಯದ ರೀತಿಯಲ್ಲಿ, ವಾಮನ ತಮ್ಮ ಉಪಸ್ಥಿತಿ ಮೂಲಕ ಗೌರವ ನೀಡುತ್ತಿರುವುದು ತನ್ನ ಅದೃಷ್ಟವೆಂದು ಮಹಾಬಲಿ ಅವನಿಗೆ ಹೇಳುತ್ತಾನೆ.

ವಟು ವಾಮನನು ಕೇಳಿದ್ದೆಲ್ಲವನ್ನು ಕೊಡಲು ಮಹಾಬಲಿ ಚಕ್ರವರ್ತಿಯು ಸಿದ್ಧನಾಗಿ ನಿಂತಿರುತ್ತಾನೆ.  ವಾಮನನು ಮುಗುಳ್ನಕ್ಕು ಹೇಳುತ್ತಾನೆ, "ಮಹತ್ತರವಾದ ಏನನ್ನೂ ನೀನು ಕೊಡುವ ಅಗತ್ಯವಿಲ್ಲ ಮಹಾರಾಜ  ಕೇವಲ ನನ್ನ ಮೂರು ಹೆಜ್ಜೆಗಳನ್ನಿಡಲು ಸಾಕಾಗುವಷ್ಟು ಭೂಮಿಯನ್ನು ನೀನು ನನಗೆ ಕೊಟ್ಟರೆ ಸಾಕು ". 

ಅಲ್ಲಿಯೇ ಇದ್ದ ಮಹಾಬಲಿಯ ಮಾರ್ಗದರ್ಶಕರೂ, ಅಸುರ ಗುರುವೂ ಆಗಿದ್ದ ಶುಕ್ರಾಚಾರ್ಯರು ವಟುವಿನ ಮಾತುಗಳನ್ನು ಕೇಳಿ, ಮುಂದಿನದನ್ನು ಮನದಲ್ಲಿಯೇ ಊಹಿಸಿ, ಮಹಾಬಲಿಯ ಯಾಗ ಭಿಕ್ಷೆಗಾಗಿ ಬಂದಿರುವ ಬಾಲ ಯತಿಯು ಸಾಮಾನ್ಯ ಬ್ರಾಹ್ಮಣನಾಗಿರದೆ ಸಾಕ್ಷಾತ್ ಶ್ರೀವಿಷ್ಣು ಆತನ ರೂಪ ತಾಳಿ ಬಂದಿರುವ ಬಗ್ಗೆ ಮಹಾಬಲಿಗೆ ಸೂಕ್ಷ್ಮವಾಗಿ ತಿಳಿಸುತ್ತಾರೆ. ಹಾಗಾಗಿಯೇ ವಟುವಿಗೆ ಯಾವ ವಚನವನ್ನೂ ನೀಡದಿರುವಂತೆ ಮಹಾಬಲಿಗೆ ಸಲಹೆ ಕೊಡುತ್ತಾರೆ. ಆದರೆ ಕೊಟ್ಟ ಮಾತಿಗೆ ಯಾವತ್ತೂ ತಪ್ಪಿರದಿದ್ದ ಚಕ್ರವರ್ತಿ ಮಹಾಬಲಿಗೆ ಹಾಗೆ ಮಾಡಿದರೆ ಪಾಪಕ್ಕೆ ಗುರಿಯಾಗುವೆನೆಂಬ ಅಳುಕು ಇರುತ್ತದೆ. ಆದರೂ ಮಹಾಬಲಿಯನ್ನು ಸಕಲೈಶ್ವರ್ಯಗಳಿಂದ ವಂಚಿತನನ್ನಾಗಿ ಮಾಡಲು ಬಂದಿರುವ ವಟು ವಾಮನನ ಯಾವ ಬೇಡಿಕೆಯನ್ನೂ ಮಾನ್ಯ ಮಾಡದಿರುವಂತೆ ಶುಕ್ರಾಚಾರ್ಯರು ಚಕ್ರವರ್ತಿಗೆ ಒತ್ತಿ ಹೇಳುತ್ತಾರೆ.

 
ಓನಪ್ಪೋತ್ತನ್, ಸಾಂಪ್ರದಾಯಿಕ ಉಡುಪಿನಲ್ಲಿ, ಕೇರಳದ ಉತ್ತರ ಭಾಗದಲ್ಲಿನ ಸಂಪ್ರದಾಯ.ಓನಪ್ಪೋತ್ತನ್ ಪ್ರತಿ ಓಣಂನ ದಿವಸ ಮನೆಮನೆಗೂ ತೆರಳಿ ಆಶೀರ್ವಾದಗಳನ್ನು ನೀಡುತ್ತಾನೆ ಓನಪ್ಪೋತ್ತನ್, ಇತ್ತೀಚಿನ ದಿನಗಳಲ್ಲಿ ತುಂಬಾ ಅಪರೂಪವಾಗುತ್ತಿದ್ದು, ಕೇವಲ ಹಳ್ಳಿಗಳಲ್ಲಿ ಮಾತ್ರ ನೋಡಬಹುದಾಗಿದೆ

ವಾಮನನಿಗೆ ಕೊಟ್ಟ ಮಾತಿಗೆ ತಪ್ಪಲು ಇಷ್ಟವಿಲ್ಲದ ಮಹಾಬಲಿಯು ಗುರು ಶುಕ್ರಾಚಾರ್ಯರ ಸಲಹೆ ಮೀರುತ್ತಿರುವುದಕ್ಕೆ ಅವರ ಕ್ಷಮೆ ಯಾಚಿಸಿ, ವಟುವಿನ ಬೇಡಿಕೆಯನ್ನು ಈಡೇರಿಸಲು ಮುಂದಾಗುತ್ತಾನೆ. ಹಿಂದೊಮ್ಮೆ, ಇಂದ್ರನೊಡನೆ ಯುದ್ಧದಲ್ಲಿ ತೊಡಗುವಾಗ, ಮಹಾಬಲಿಯು ಗುರು ಶುಕ್ರಾಚಾರ್ಯರ ಕಾಲಿಗೆರಗುತ್ತಾನೆ. ನಂತರ ಅವರ ಸಲಹೆಯಂತೆ ವಿಶ್ವಜಿತ ಯಾಗವನ್ನು ಕೈಗೊಂಡು, ಅದರ ಫಲವಾಗಿ ಶಕ್ತಿಶಾಲಿ ಅಸ್ತ್ರಗಳನ್ನು ವರವಾಗಿ ಪಡೆದಿರುತ್ತಾನೆ. ಶುಕ್ರಾಚಾರ್ಯರ ಅನುಗ್ರಹದ ಕಾರಣದಿಂದಾಗಿಯೇ ಮಹಾಬಲಿಯು ಇಂದ್ರನನ್ನು ಜಯಿಸಿರುತ್ತಾನೆ. ಈಗ ತನ್ನ ಮಾತನ್ನೇ ಮೀರುತ್ತಿರುವ ಚಕ್ರವರ್ತಿಯ ಬಗ್ಗೆ ಶುಕ್ರಾಚಾರ್ಯರಿಗೆ ಅಸಾಧ್ಯ ಕೋಪ ಉಂಟಾಗುತ್ತದೆ. ಆ ಕೋಪದಲ್ಲಿಯೇ ಅವರು ಮಹಾಬಲಿಗೆ, "ಗುರುವಿನ ಮಾತನ್ನೇ ಮೀರಿರುವ ನಿನ್ನ ಬದುಕು ಬೂದಿಯಾಗಿ ಹೋಗಲಿ" ಎಂದು ಶಾಪ ನೀಡಿ ಬಿಡುತ್ತಾರೆ. ಧೃಢ ಮನಸ್ಸಿನ ಮಹಾಬಲಿಯು ಶಾಂತನಾಗಿಯೇ, "ಬಂದದ್ದನ್ನೆಲ್ಲಾ ಎದುರಿಸುವೆನೇ ಹೊರತು ಮುಂದಿಟ್ಟ ಹೆಜ್ಜೆಯನ್ನು ಹಿಂದೆಗೆಯಲಾರೆ" ಎಂದು ಉತ್ತರಿಸುತ್ತಾನೆ.

ಮಹಾಬಲಿಯ ಆಳ್ವಿಕೆಯ ಕೊನೆ

ಬದಲಾಯಿಸಿ

ಗುರುವಿಗೆ ಹಾಗೆಂದು ಹೇಳಿ ವಾಮನನ ಕಡೆ ತಿರುಗಿದ ಚಕ್ರವರ್ತಿಯು ಅವನ ಅಪೇಕ್ಷೆಯಂತೆ ಮೂರು ಹೆಜ್ಜೆಗಳನ್ನಿಟ್ಟು ಬೇಕಾದಷ್ಟು ಜಾಗವನ್ನು ಪಡೆದುಕೊಳ್ಳಲು ವಿನಂತಿಸಿಕೊಳ್ಳುತ್ತಾನೆ. ಮಹಾಬಲಿಯು ಹಾಗೆ ಮಾಡದಿರುವಂತೆ ತಡೆಯಲು ಶುಕ್ರಾಚಾರ್ಯರು ಮಾಡುವ ಎಲ್ಲ ಪ್ರಯತ್ನಗಳೂ ನಿಷ್ಫಲವಾಗುತ್ತವೆ. ತನ್ನ ಬಳಿಗೆ ಸಹಾಯ ಬೇಡಿ ಬಂದವರೆಲ್ಲರನ್ನೂ ಸಾಕ್ಷಾತ್ ದೇವರುಗಳೆಂದೇ ಭಾವಿಸುತ್ತಿದ್ದ ಮಹಾಬಲಿಯು ಯಾರು ಏನನ್ನೇ ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಹಾಗಾಗಿಯೇ ತನ್ನ ಗುರುವಿಗೆ ಅವನು, "ಗುರುವರ್ಯ, ಯಾರಿಗೇ ಆಗಲಿ ಪ್ರಾಣ ಮತ್ತು ಮಾನಗಳು ಎರಡು ಕಣ್ಣುಗಳಿದ್ದಂತೆ , ಪ್ರಾಣ ಹೋದರೂ ಮಾನ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾನೆ. "ಮನುಕುಲಕ್ಕೇ ಬೇಡಿದ್ದನ್ನೆಲ್ಲ ಕೊಡುವ ಕರುಣಾಳು ದೇವರೇ ನನ್ನ ಬಳಿಗೆ ಏನನ್ನೋ ಕೇಳಿ ಪಡೆಯಲು ಬಂದಿದ್ದಾನೆಂದರೆ, ನನ್ನಂತಹ ಭಾಗ್ಯಶಾಲಿ ಯಾರುಂಟು, ನಾನೇ ಪುಣ್ಯವಂತ " ಎಂದು ಮಹಾಬಲಿಯು ನುಡಿಯುತ್ತಾನೆ. ಮಹಾಬಲಿ ಹೇಳುತ್ತಾನೆ,ವಿಷ್ಣು ಸ್ವತಃ ಯಾಗಕ್ಕೆ ಬಂದು ಏನನ್ನಾದರೂ ಕೇಳಿದ್ದರೆ ತಾನು ಕೊಡಲು ಸಿದ್ಧನಿರುವೆ.[]

 
ತ್ರಿವಿಕ್ರಮ (ಮೂರೂ ಲೋಕಗಳನ್ನು ಜಯಿಸಿದ)ವಾಮನನು ಮಹಾಬಲಿಯ ಬಳಿ ವಿಜಯದ ನಗೆ ಬೀರುತ್ತಿರುವುದು

ಗಾತ್ರದಲ್ಲಿ ಬೆಳೆದ ವಾಮನ ಸ್ವರ್ಗಲೋಕಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾನೆ. ತನ್ನ ಮೊದಲ ಹೆಜ್ಜೆಯಿಂದ ಇಡೀ ಭೂಮಿಯನ್ನೇ ಅವನು ಅಳೆದು ತೆಗೆದುಕೊಳ್ಳುತ್ತಾನೆ. ಎರಡನೇ ಹೆಜ್ಜೆಯಿಂದ ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ. ವಾಮನನು ಇನ್ನೂ ಒಂದು ಹೆಜ್ಜೆಯನ್ನು ಇಡುವಷ್ಟು ಜಾಗವನ್ನು ಮಹಾಬಲಿಯು ಕೊಡಬೇಕಾಗಿರುತ್ತದೆ. ಆಗ ಮಹಾಬಲಿಯು ತನ್ನಲ್ಲಿ ಕೊಡಲು ಜಾಗವಿಲ್ಲವಾದ್ದರಿಂದ ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿಡಲು ವಾಮನನನ್ನು ಕೇಳಿಕೊಳ್ಳುತ್ತಾನೆ. ಹಾಗೆ ಹೇಳಿದ್ದೇ, ವಾಮನನು ಚಕ್ರವರ್ತಿಯ ತಲೆಯ ಮೇಲೆ ಕಾಲನ್ನು ಇಟ್ಟು,ಭೂಗರ್ಭದ ಪಾತಾಳ ಲೋಕಕ್ಕೆ ತಳ್ಳಿಬಿಡುತ್ತಾನೆ.(ಭೂಮಿಯ ಕೆಳಗಿನ ಸಾಮ್ರಾಜ್ಯ)

ಶ್ರೀವಿಷ್ಣುವಿನ ಕೃಪಾಶೀರ್ವಾದಗಳು

ಬದಲಾಯಿಸಿ

ದೈತ್ಯ ಚಕ್ರವರ್ತಿ ಮಹಾಬಲಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚುವ ವಾಮನ ಅವತಾರೀ ವಿಷ್ಣುವು ಪಾತಾಳಲೋಕವನ್ನು ಆಳೆಂದು ಅವನನ್ನು ಆಶೀರ್ವದಿಸುತ್ತಾನೆ. ಇಷ್ಟಲ್ಲದೇ, ಒಂದು ಮನ್ವಂತರದವರೆಗೆ ಇಂದ್ರ ಪದವಿಯನ್ನು ಮಹಾಬಲಿಗೆ ಪ್ರಧಾನ ಮಾಡಿ, ಆ ಮೂಲಕ ತನ್ನ ಭಕ್ತನ ಆಸೆಯನ್ನು ಈಡೇರಿಸುತ್ತಾನೆ. ಈ ಹಿನ್ನೆಲೆಯಲ್ಲಿಯೇ ಇಂದ್ರನ ಪದವಿಯು ಪ್ರತೀ ಮನ್ವಂತರಕ್ಕೊಮ್ಮೆ ಸ್ಥಾನ ಬದಲಾವಣೆ ಹೊಂದುತ್ತಿರುತ್ತದೆ ಎಂಬ ನಂಬಿಕೆಯಿದೆ.

ಕಡೆಯ ಉಡುಗೊರೆಯಾಗಿ ಮಹಾಬಲಿಗೆ ತನ್ನ ಪ್ರಜೆಗಳನ್ನು ಪ್ರತೀ ವರ್ಷಕ್ಕೊಮ್ಮೆ ಭೇಟಿ ಮಾಡುವ ವರದಾನವೂ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ಕೇರಳಿಗರು ತಮ್ಮ ಪ್ರೀತಿಪಾತ್ರ ಅರಸ ಮಹಾಬಲಿಯು ತಮ್ಮನ್ನು ಭೇಟಿ ಮಾಡಲು ಆಗಮಿಸುವ ಆ ಘಳಿಗೆಯನ್ನು ಓಣಂನ ಹೆಸರಿನಲ್ಲಿ ಸಂತೋಷದಿಂದ ಆಚರಿಸುತ್ತಾರೆ. ಸತ್ಯಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟ ಮಹಾಬಲಿ ಚಕ್ರವರ್ತಿಯು ಈ ಕಾರಣಕ್ಕಾಗಿಯೇ ಸತ್ಯಶ್ರೇಷ್ಠ ಅರಸು ಎನಿಸಿಕೊಂಡಿದ್ದಾನೆ. ಮಹಾಬಲಿ ಹೆಸರಿನ ಅರ್ಥವೇ ಶ್ರೇಷ್ಠ ತ್ಯಾಗ ಎಂಬುದಾಗಿದೆ.

ಓಣಂನ ಸಂದರ್ಭದಲ್ಲಿ ಅಲ್ಲಿನ ಜನರ ಔತಣ, ಹೊಸಬಟ್ಟೆ ಧರಿಸಿ ಓಡಾಡುವ ಸಡಗರ, ಮುಗಿಲು ಮುಟ್ಟುವ ಅವರ ಅಪಾರ ಹರ್ಷಾಚರಣೆಗಳು - ಇವೆಲ್ಲ ಮಹಾಬಲಿ ಚಕ್ರವರ್ತಿಯ ಕಾಲದಲ್ಲಿನ ಪ್ರಜೆಗಳ ಸಮೃದ್ಧ ಮತ್ತು ಸತ್ಯನಿಷ್ಠೆಯ ಬದುಕಿನ ಕ್ಷಣಗಳ ಪ್ರತಿಬಿಂಬವೇ ಅನಿಸುತ್ತದೆ. ಓಣಂಗೆ ಅಲ್ಲಿನ ಜನರಂತೂ ತಪ್ಪದೆ ಹೊಸ ಬಟ್ಟೆಗಳನ್ನು, ವಸ್ತ್ರಗಳನ್ನು ತೊಡುವುದು ಒಂದು ಸಂಪ್ರದಾಯವೇ ಆಗಿದೆ. ವಸ್ತ್ರವೆಂದರೆ ಹೃದಯ ಎಂಬ ನಂಬಿಕೆಯೂ ಆ ಜನರಲ್ಲಿದೆ. ಹೀಗೆ ಹೊಸ ವಸ್ತ್ರ ತೊಡುವುದರ ಅರ್ಥ ಹೃದಯದಲ್ಲಿನ ಹಳೆಯ ಕಲ್ಮಶವನ್ನೆಲ್ಲ ಕಿತ್ತೆಸೆದು ಹೊಸ ಹೊಸ ಸದ್ಭಾವನೆಗಳನ್ನು ಅಲ್ಲಿ ಬೆಳೆಸುವುದು ಎಂಬುದಾಗಿದೆ. ತಮ್ಮ ಜಾತಿ, ಪಂಗಡಗಳ ಯಾವ ಭೇದವೂ ಇರದೇ ಜನರೆಲ್ಲಾ ಒಟ್ಟಾಗಿ ಒಮ್ಮನಸಿನಿಂದ ಪವಿತ್ರ ತಿರುಓಣಂನ್ನು ಸ್ವಾಗತಿಸುತ್ತಾರೆ.

ನೈತಿಕ ನಿಲುವಿನ ಪ್ರಶ್ನೆಗಳು

ಬದಲಾಯಿಸಿ

ಕೆಲವೊಮ್ಮೆ ತನ್ನ ಅಜ್ಜ ಪ್ರಹ್ಲಾದನಂತೆಯೇ ಸತ್ಯವಂತ ಅರಸನೂ, ಮಹಾವಿಷ್ಣುಭಕ್ತನೂ ಆಗಿದ್ದ ಮಹಾಬಲಿಯನ್ನು ವಿಷ್ಣುವು ಶಿಕ್ಷಿಸಿದ್ದು ತುಂಬಾ ಅಸಹಜವೂ, ಅನ್ಯಾಯವೂ ಅನಿಸುತ್ತದೆ. ಆದರೂ ಕಡೆಗೆ ಆತನಿಗೆ ವಿಷ್ಣುವು ಕೊಡಮಾಡಿದ ವರದಾನಗಳನ್ನು ನೆನೆದರೆ ಮತ್ತು ಪವಿತ್ರ ಓಣಂನ ದಿವಸ ಜನರೆಲ್ಲರಿಂದ ಆತನ ಸ್ಮರಣೆಯ ರೀತಿಯನ್ನು ಗಮನಿಸಿದರೆ ಅದೊಂದು ಶಿಕ್ಷೆಯಾಗಿರದೆ ಶಾಶ್ವತ ವರದಾನವೇ ಅನಿಸುವುದೂ ಕೂಡಾ ಹೌದು. ವಿಷ್ಣುವು ಮಹಾಬಲಿಯ ತಲೆಯನ್ನು ತನ್ನ ಪವಿತ್ರ ಪಾದದಡಿಯಲ್ಲಿ ಇಡಲು ಅವಕಾಶ ಮಾಡಿಕೊಟ್ಟು, ಅವನ ಪಾಪಗಳೆಲ್ಲವನ್ನು ತೊಳೆದ ಅಂಶವೂ ಕೂಡ ಇಲ್ಲಿ ಮುಖ್ಯವಾದುದಾಗುತ್ತದೆ.

ವಿಷ್ಣುವು ಅನುಗ್ರಹಿಸಿದ ವರದ ಪ್ರಕಾರ ಮಹಾಬಲಿಯು ಮುಂದಿನ ಎಂಟನೆಯ ಮನುವಿನ ಅಂದರೆ ಸವರ್ಣಿ ಮನುವಿನ ಕಾಲದ ಎಂಟನೆಯ ಇಂದ್ರಪದವಿಗೂ ಪಾತ್ರನಾಗಿರುವುದು ಗಮನಕ್ಕೆ ಬರುತ್ತದೆ. ಪುರಂದರರನ್ನೇ ವರ್ತಮಾನದ ಇಂದ್ರ ಎಂತಲೂ ಹೇಳಲಾಗುತ್ತದೆ.[]

ಈ ಹಿನ್ನೆಲೆಯಲ್ಲಿಯೇ ತನ್ನಿಡೀ ರಾಜ್ಯವನ್ನೇ ದಾನ ಕೊಟ್ಟ ಮಹಾಬಲಿ ಚಕ್ರವರ್ತಿಯನ್ನು ಭೂಲೋಕದ ಮಹಾವಿಷ್ಣುಭಕ್ತ ಅರಸ ಎಂದು ನಂಬಲಾಗುತ್ತದೆ.

ಸುರ ಎಂದರೆ ಒಳ್ಳೆಯವನೂ, ಅಸುರ ಎಂದರೆ ದುಷ್ಟನೂ ಎಂಬ ಅರ್ಥವಿದೆ. ಹಿಂದೂ ಪುರಾಣಗಳ ಪ್ರಕಾರ ಒಳ್ಳೆಯ ಕೆಲಸಗಳನ್ನೇ ಮಾಡುವ ಸುರರು ಕುಕೃತ್ಯಗಳನ್ನೆಸಗಿದರೆ ಅಸುರರಾಗಿಯೂ, ಅಸುರರು ಸುಕೃತ್ಯಗಳನ್ನು ಮಾಡಿದರೆ ಸುರರಾಗಿಯೂ ಜನ್ಮ ತಾಳುತ್ತಾರೆ ಎಂಬ ಪ್ರತೀತಿಯಿದೆ. ಅಸುರ ಅರಸನಾಗಿದ್ದ ಮಹಾಬಲಿಗೆ ಸುರನಾಗುವ ಅಪೇಕ್ಷೆಯಿತ್ತು. ಆ ಉದ್ದೇಶದಿಂದಲೇ ಆತ ತನ್ನೆಲ್ಲ ಪ್ರಜೆಗಳಿಗೂ ಒಳ್ಳೆಯದನ್ನೇ ಮಾಡುತ್ತಾ ಬಂದಿದ್ದ. ಮಹಾಬಲಿಯ ಸತ್ಯವಂತಿಕೆ ಮತ್ತು ನಿಸ್ವಾರ್ಥತೆಯನ್ನು ಪರೀಕ್ಷೆ ಮಾಡುವುದಕ್ಕಾಗಿಯೇ ವಿಷ್ಣುವು ವಾಮನನ ರೂಪ ತಾಳಿ ಬಂದು, ಅವನನ್ನು ಪಾತಾಳಕ್ಕೆ ತಳ್ಳುತ್ತಾನೆ. ಮಹಾಬಲಿಯಾದರೂ ಆ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿರುತ್ತಾನೆ. ಹೀಗೆ ಸುಕೃತ್ಯಗಳನ್ನು ಮಾಡಿ ಸುರನಾದ ಮಹಾಬಲಿಯ ಕತೆಯು ಹಿಂದೂ ಅದ್ವೈತ ಸಿದ್ಧಾಂತಗಳನ್ನು ಪ್ರತಿಪಾದಿಸುವುದನ್ನು ಓಣಂ ಹಬ್ಬವು ಸಂಕೇತಿಸುತ್ತದೆ.

ಹತ್ತು ದಿನಗಳ ಹಬ್ಬದಾಚರಣೆ - ಅತ್ತಂ ಪತ್ತಿನು ಪೋನ್ನೋನಂ

ಬದಲಾಯಿಸಿ
 
ಓಣಂ ಪೂಕ್ಕಲಂ
 
ವಿಶಿಷ್ಟ ಒಣಪೂಕ್ಕಲಂ

ಓಣಂ ಹಬ್ಬದ ಆಚರಣೆಯು ಅತ್ತಂ ದಿನ ಅಂದರೆ ಓಣಂಗೂ ಹತ್ತು ದಿವಸ ಮೊದಲು ಪ್ರಾರಂಭವಾಗುತ್ತದೆ. ಚೌಕನೆಯ ಪಿರಮಿಡ್ ಗಳಂತೆ ಕಾಣುವ ಮಣ್ಣಿನ ಮೂರ್ತಿಗಳಲ್ಲಿ ಒಂದು ಮಹಾಬಲಿಯನ್ನು ಪ್ರತಿನಿಧಿಸಿದರೆ, ಮತ್ತೊಂದು ವಾಮನ ಅವತಾರ ತಾಳಿದ್ದ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಮನೆಯ ಮುಂದಿನ ಅಂಗಳವನ್ನು ಸಗಣಿಯಿಂದ ಸಾರಿಸಿ, ಅಲ್ಲಿರಿಸುವ ಈ ಮೂರ್ತಿಗಳಿಗೆ ಸುಂದರವಾದ ಹೂಗಳಿಂದ ಅಲಂಕಾರ ಮಾಡಿರುತ್ತಾರೆ. 'ಓಣಪೂಕ್ಕಳಂ' ಎಂದು ಕರೆಯಿಸಿಕೊಳ್ಳುವ ಈ ಪುಷ್ಪಚಾಪೆಗಳನ್ನು, ಹೂ ರಂಗವಲ್ಲಿಗಳನ್ನು ಬಗೆಬಗೆಯ, ನಸುಗಂಪು ಬೀರುವ ಹೂಗಳು, ಹೂಪಕಳೆಗಳು, ಸುಗಂಧಿತ ಎಲೆಗಳ ಗುಚ್ಛ ಮುಂತಾದವುಗಳಿಂದ ನಯನಮನೋಹರವಾಗಿ ರಚಿಸಿರುತ್ತಾರೆ. ಇದೊಂದು ಬಹು ಸುಂದರವಾದ ನೈಜ ಕಲೆಯಾಗಿದ್ದು, ಅತ್ಯಂತ ಸೂಕ್ಷ್ಮ, ನವಿರು ಸ್ಪರ್ಶ ಮತ್ತು ಅಪಾರವಾದ ಕಲಾ ನೈಪುಣ್ಯಗಳ ಸಂಗಮದ ಫಲಶ್ರುತಿಯಾಗಿರುತ್ತದೆ. ಇದೇ ಮಾದರಿಯಲ್ಲಿ, ಉತ್ತರ ಭಾರತದಲ್ಲಿ ರಂಗೋಲಿ ಎಂದು ಕರೆಯಲಾಗುವ ವರ್ಣಮಯ ಪುಡಿಯನ್ನು ಬಳಸಿ ಅದ್ಭುತ ರೇಖಾವಿನ್ಯಾಸಗಳನ್ನು ರಚಿಸಲಾಗುತ್ತದೆ. ಈ ರೀತಿಯ ಪುಷ್ಪ ರಂಗೋಲಿಗಳ ರಚನೆ ಮುಗಿದ ಮೇಲೆ ನಟ್ಟನಡುವೊಂದು ಪುಷ್ಪಾಲಂಕೃತ ದೀಪಕಂಭವನ್ನು ನಿಲ್ಲಿಸಲಾಗುತ್ತದೆ.

ಕೆಲವೆಡೆ ತಿರುಓಣಂನ ದಿವಸವೇ ಹಬ್ಬದಾಚರಣೆ ಪ್ರಾರಂಭವಾದರೆ, ಇನ್ನು ಕೆಲವೆಡೆ ಅದರ ಹಿಂದಿನ ದಿನ, ಅಂದರೆ ಉತ್ರಾದಂ ಎಂದು ಕರೆಯಲಾಗುವ ದಿವಸವೇ ಹಬ್ಬವು ಪ್ರಾರಂಭವಾಗಿರುತ್ತದೆ. ತಿರುಓಣಂನ ದಿನ ಮಹಾಬಲಿ ಚಕ್ರವರ್ತಿಯು ಪ್ರತಿಯೊಬ್ಬ ಮಲಯಾಳೀ ಕುಟುಂಬವನ್ನೂ ಸಂದರ್ಶಿಸಿ, ತನ್ನ ಪ್ರಜೆಗಳನ್ನು ಭೇಟಿ ಮಾಡುವನೆಂಬ ಪ್ರತೀತಿಯಿದೆ. ಮನೆಗಳನ್ನೆಲ್ಲ ಒಪ್ಪ ಓರಣಗೊಳಿಸಿ, ಹೂಗಳಿಂದ ಸಿಂಗರಿಸಿ, ದೀಪಗಳಿಂದ ಸಾಲಂಕೃತಗೊಳಿಸಲಾಗುತ್ತದೆ. ಕೇರಳದ ರಾಜಧಾನಿ ತಿರುವನಂತಪುರಂನ ಮುಗಿಲ ಬಯಲಿನಲ್ಲಿ ಸಿಡಿಮದ್ದುಗಳ, ಪಟಾಕಿಗಳ ಚಿತ್ತಾರಗಳಂತೂ ಅಕ್ಷರಶಃ ಒಂದು ಮಾಯಾಲೋಕವನ್ನೇ ಸೃಷ್ಟಿಸಿರುತ್ತವೆ. ಪ್ರತಿಯೊಂದು ಮನೆಗಳಲ್ಲೂ ಭರ್ಜರಿ ಭೋಜನದ ತಯಾರಿಯ ಸೊಬಗನ್ನು ನೋಡುವುದೇ ಒಂದು ಚೆಂದ ಅನಿಸುವ ಹಾಗೆ ಭಕ್ಷ್ಯ ಭೋಜನಗಳನ್ನು ತಯಾರಿಸಲಾಗುತ್ತಿರುತ್ತದೆ. ಮನೆಯ ಯಜಮಾನನೇ ಮನೆಯ ಸದಸ್ಯರೆಲ್ಲರಿಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ಕೊಡುವುದು ಸಂಪ್ರದಾಯ. ಎಷ್ಟೇ ಕಡುಬಡವನಾಗಿದ್ದರೂ ಪ್ರತಿಯೊಬ್ಬ ಕೇರಳಿಗನು ರಾಷ್ಟ್ರೀಯ ಹಬ್ಬ ಓಣಂನ್ನು ತನ್ನ ಶಕ್ತಿಯ ಮಿತಿಯಲ್ಲಿ, ತನ್ನದೇ ರೀತಿಯಲ್ಲಿ ಶ್ರದ್ಧೆ ಸಂತಸಗಳಿಂದ ಆಚರಿಸುತ್ತಾನೆ.

 
ಕೇರಳದ ಓಣಂನಲ್ಲಿ ತಿರುವತ್ತಿರಕಲಿ

ಮಲಯಾಳಂ ಪಂಚಾಂಗದ ಮೊದಲನೇ ತಿಂಗಳಾದ ಚಿಂಗಂ ತಿಂಗಳಿನಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಸಂಪ್ರದಾಯವಾಗಿ ಹೂರಂಗೋಲಿಗಳನ್ನು ಬಿಡಿಸಿರುತ್ತಾರೆ. ಈ ಹೂ ರಂಗೋಲಿಗಳನ್ನು ಬಿಡಿಸುವ ವಿಚಾರದಲ್ಲಿ ಹಾರ್ದಿಕ ಸ್ಪರ್ಧೆಯೇ ಏರ್ಪಟ್ಟಿರುತ್ತದೆ; ಅದೇ ಸಮಯದಲ್ಲಿಯೇ ವಿಶ್ವದೆಲ್ಲೆಡೆ ನೆಲೆಸಿರುವ ಎಲ್ಲ ಕೇರಳಿಗರೂ ಕೂಡ ಅಷ್ಟೇ ಸಂಭ್ರಮದಿಂದ ಈ ಹಬ್ಬವನ್ನು ಹತ್ತು ದಿನಗಳ ಕಾಲ ವೈಭವ, ಉಲ್ಲಾಸಗಳಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು, ದೇವಸ್ಥಾನಗಳನ್ನು ಸಂದರ್ಶಿಸುವುದು, ತಿರುವತ್ತಿರ ಕಲಿ , ತುಂಬಿ ತುಳ್ಳಾಲ್ ನಂತಹ ನೃತ್ಯ ಪ್ರದರ್ಶನ - ಇವೇ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಿಂದ ವಾತಾವರಣವೆಲ್ಲ ಸಡಗರದಿಂದ ಕೂಡಿರುತ್ತದೆ. ಈ ಹಬ್ಬದಾಚರಣೆಯಲ್ಲೆಲ್ಲ ಅತ್ಯಂತ ಆಕರ್ಷಣೀಯವಾದುದೆಂದರೆ ತಿರುಓಣಂನ ದಿವಸದ ಅದ್ದೂರಿ ಭೋಜನ. ಇದನ್ನೇ ದ್ವಿತೀಯ ಓಣಂ ಎಂತಲೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅದೆಷ್ಟೇ ಕಷ್ಟ ಬಂದರೂ ಕೇರಳಿಗರು ಸಾದ್ಯ ಎಂದು ಕರೆಯಲಾಗುವ ಈ ಔತಣವನ್ನು ತಪ್ಪಿಸಿಕೊಳ್ಳುವುದಿಲ್ಲ. ಮಲಯಾಳಂನಲ್ಲೊಂದು ಗಾದೆಯಿದೆ, "ಕಣ್ಣಂ ವಿಟ್ಟುಂ ಓಣಂ ಉನ್ನಂ" ಎಂದು. ಅದರರ್ಥ, 'ನಮ್ಮ ಸರ್ವಸ್ವವನ್ನೇ ನಾವು ಮಾರಬೇಕಾಗಿ ಬಂದರೂ, ಓಣಂನ ಭೋಜನ ಪ್ರಸಾದವನ್ನು ಮಾತ್ರ ತಪ್ಪಿಸಿಕೊಳ್ಳಬಾರದು' ಎಂಬುದಾಗಿದೆ. ಈ ಅಂಶವೇ ತಿರುಓಣಂನ ಮಹತ್ವವನ್ನು ಸಾರಿ ಹೇಳುತ್ತದೆ.

ಭಿನ್ನ ಪ್ರದೇಶಗಳಲ್ಲಿ, ಸಾಂಸ್ಕೃತಿಕ ವೈವಿಧ್ಯತೆಯ ದೃಷ್ಟಿಕೋನದೊಡನೆ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.ಕೊಚ್ಚಿ ಹಾಗೂ ಎರ್ನಾಕುಲಂ ಸಮೀಪದಲ್ಲಿರುವ ಸಾಂಸ್ಕೃತಿಕ ನಗರಿ ತ್ರಿಪೂನಿತುರ ಎಂಬಲ್ಲಿ ಆತಚಾಮಯಂ ಎಂಬ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿಸಲಾಗಿರುತ್ತದೆ. ಈ ಮೆರವಣಿಗೆಯನ್ನು ಚಿಂಗಂ ತಿಂಗಳಿನ ಆತಂ ಅಂದರೆ ಓಣಂ ಹಬ್ಬದ ದಿವಸವೇ ಪ್ರಾರಂಭ ಮಾಡಲಾಗುತ್ತದೆ. ಇದು ಕೂಡ ಸಾಂಪ್ರದಾಯಿಕವಾಗಿ ಓಣಂ ಹಬ್ಬ ಶುರುವಾಗುವುದನ್ನು ಸೂಚಿಸುತ್ತದೆ. ತ್ರಿಕ್ಕಾಕರ ಎಂಬಲ್ಲಿ ಇರುವ ವಾಮನಮೂರ್ತಿ ದೇವಸ್ಥಾನದಲ್ಲೂ ಕೂಡ ಇದೇ ವೇಳೆಗೆ ಸಾಂಪ್ರಾದಾಯಿಕ ವಾರ್ಷಿಕ ಉತ್ಸವವನ್ನು ಆಯೋಜಿಸಲಾಗುತ್ತದೆ. ಪೌರಾಣಿಕವಾಗಿ ಓಣಂ ಹಬ್ಬದೊಡನೆ ನೇರ ನಂಟಿರುವ ಈ ದೇವಸ್ಥಾನವನ್ನು ವಾಮನಮೂರ್ತಿಗೆ ಅರ್ಪಣೆ ಮಾಡಲಾಗಿದೆ.

ಓಣಂ ಪೂಕ್ಕಳಂನ್ನು ಜಾತ್ಯತೀತ ಸಮಾಜವೊಂದರ ಸಂಕೇತವಾಗಿ ಕೂಡ ನೋಡಲಾಗುತ್ತದೆ. ಬೇರೆ ಬೇರೆ ಜಾತಿಯ ಪುಷ್ಪ ಗುಚ್ಛಗಳು ಜೊತೆ ಸೇರಲ್ಪಟ್ಟು ಸುಂದರವಾದ, ಕಣ್ಮನ ಸೆಳೆಯುವ ಪುಷ್ಪ ರಂಗವಲ್ಲಿಗಳನ್ನು ಸೃಜಿಸುವುದೇ ಒಂದು ವಿಶೇಷ. ಹಾಗಾಗಿಯೇ ಈ ಎಲ್ಲ ಆಚರಣೆಗಳು ಅಂದಿನ ಮಹಾಬಲಿ ಚಕ್ರವರ್ತಿಯ ಆಳ್ವಿಕೆಯ ಸುವರ್ಣ ಯುಗವನ್ನು ನೆನಪಿಗೆ ತರುವುದರಲ್ಲಿ ಅಚ್ಚರಿಯೇನಿಲ್ಲ. ಕೇರಳಿಗರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಓಣಂ ಮುಗಿಯುವ ತನಕ ಅಂದರೆ ಆತಂನಿಂದ ಪ್ರಾರಂಭವಾಗಿ ತಿರುಓಣಂನತನಕ ಈ ಹೂ ರಂಗೋಲಿಗಳನ್ನು ರಚಿಸುವುದೇ ಒಂದು ಉಲ್ಲಾಸದಾಯಕ ಚಟುವಟಿಕೆಯಾಗಿರುತ್ತದೆ.


ಮಲಯಾಳಂ ಪಂಚಾಂಗದ ಹೊಸ ವರ್ಷ ಪ್ರಾರಂಭವಾಗುವ ಕೆಲದಿನಗಳಲ್ಲೇ ಶುರುವಾಗುವ ಈ ಹಬ್ಬವು ಹತ್ತು ದಿನಗಳವರೆಗೂ ಮುಂದುವರೆಯುತ್ತದೆ. ಕಡೆಯ ದಿವಸವಾದ ತಿರುಓಣಂ ಈ ಹಬ್ಬದ ಅತ್ಯಂತ ಪ್ರಮುಖ ಘಟ್ಟವಾಗಿದೆ. ಇಡೀ ರಾಜ್ಯದ ತುಂಬೆಲ್ಲ ಆಚರಿಸಲಾಗುವ ಈ ಹಬ್ಬದ ವಿಶಿಷ್ಟ ಸಂಪ್ರದಾಯಗಳು, ಆಚರಣೆಗಳು, ಕಲಾತ್ಮಕ ನೃತ್ಯ-ಸಂಗೀತ ಪ್ರಕಾರಗಳು, ಹಬ್ಬದೂಟಗಳು - ಎಲ್ಲ ಸೇರಿ ಇಡೀ ಉತ್ಸವವನ್ನು ಸುಗ್ಗಿಯ ಹಬ್ಬವನ್ನಾಗಿಸಿರುತ್ತವೆ.

ವಲ್ಲುವನಾಡು, ಅದರಲ್ಲೂ ಮುಖ್ಯವಾಗಿ ಶೋರನೂರು ಮತ್ತು ಒಟ್ಟಪಾಲಂ ಪ್ರದೇಶಗಳಲ್ಲಿ ಕಥಕ್ಕಳಿಯ ನೃತ್ಯಪಟುಗಳು ನೈಜ ಪೌರಾಣಿಕ ವಸ್ತ್ರಗಳಲ್ಲಿ, ಪುರಾಣದ ಪಾತ್ರಗಳನ್ನು, ಮನೋಜ್ಞವಾಗಿ ಅಭಿನಯಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ತ್ರಿಶೂರ್ ಎಂಬಲ್ಲಿ ಅತ್ಯಂತ ರೋಚಕವೆನಿಸುವ ರೀತಿಯಲ್ಲಿ ಅಲಂಕೃತ ಆನೆಗಳ ಮೆರವಣಿಗೆ ಮಾಡಲಾಗುತ್ತದೆ. ಈ ಊರಿನಲ್ಲಿಯೇ ಮುಖವಾಡ ಧರಿಸಿಕೊಂಡ ನೃತ್ಯಪಟುಗಳು ವರ್ಣರಂಜಿತ ಕುಮ್ಮತ್ತಿಕಲಿ ಹೆಸರಿನ ನೃತ್ಯ ಮಾಡುತ್ತಾ ಮನೆಯಿಂದ ಮನೆಗೆ ಸಾಗಿ ಹೋಗುತ್ತಾರೆ. ಚೆರುತ್ತುರುತಿ ಎಂಬಲ್ಲಿಯಂತೂ ಕಥಕ್ಕಳಿ ನೃತ್ಯಪಟುಗಳು ಮಹಾಕಾವ್ಯಗಳಿಂದಾಯ್ದ ಮತ್ತು ಜನಪದ ಕತೆಗಳನ್ನಾಧರಿಸಿದ ದೃಶ್ಯಗಳನ್ನು ಅಭಿನಯಿಸುವುದನ್ನು ನೋಡಲು ಜನಸಾಗರವೇ ನೆರೆದಿರುತ್ತದೆ. ಪುಲಿಕಲಿ ಅಥವಾ ಕಡುವಕಲಿಯಂತೂ ಓಣಂ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಕಾಣಬಹುದಾದ ನೃತ್ಯವಿಶೇಷವಾಗಿದೆ. ಗಾಢ ಹಳದಿ, ಕೆಂಪು, ಕಪ್ಪು ಮೊದಲಾದ ಬಣ್ಣಗಳನ್ನು ಪಟ್ಟೆಹುಲಿಗಳ ತರಹ ಲೇಪಿಸಿಕೊಂಡ ಅಭಿನಯಕಾರರು ಉಡುಕ್ಕು ಮತ್ತು ಥಾಕಿಲ್ ವಾದ್ಯಗಳ ನಾದಕ್ಕೆ ಮನಮೋಹಕವಾಗಿ ಕುಣಿಯುತ್ತಿರುತ್ತಾರೆ.

ಓಣಂ ಆಚರಣೆಯ ಸಂದರ್ಭದಲ್ಲಿಯೇ ಅರನ್ಮುಲದಲ್ಲಿ ಪ್ರಖ್ಯಾತ ಅರನ್ಮುಲ ವಲ್ಲಂಕಲಿಯನ್ನು ಏರ್ಪಡಿಸಲಾಗುತ್ತದೆ.

ಓಣಂನ ಮತ್ತೊಂದು ವಿಶೇಷವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಆಡಲಾಗುವ ಉಯ್ಯಾಲೆ ಪಂದ್ಯ. ಇದಂತೂ ಹಳ್ಳಿಗಾಡುಗಳಲ್ಲಿ ಹಾಸುಹೊಕ್ಕಾಗಿರುವ ಪಂದ್ಯ ವಿಶೇಷವಾಗಿದೆ. ವಿಶಿಷ್ಟ ವಿನ್ಯಾಸದ, ಚೆಂದ ಚೆಂದನೆಯ ಉಡುಗೆ ತೊಡುಗೆ ತೊಟ್ಟಿರುವ ಯುವಕ ಯುವತಿಯರಂತೂ, ಎತ್ತರದ ಉಯ್ಯಾಲೆಗಳಲ್ಲಿ ಇಮ್ಮಡಿಸಿದ ಉತ್ಸಾಹದಿಂದ, ಒಬ್ಬರಿಗೊಬ್ಬರು ಜೀಕಿಕೊಳ್ಳುತ್ತ ಓಣಂ ಗೀತೆಗಳನ್ನು, ಓಣಪ್ಪಟ್ ಗಳನ್ನು ಹಾಡುವುದನ್ನು ನೋಡುವುದೇ ಕಣ್ಣಿಗೆ ನಿಜವಾದ ಹಬ್ಬ ಎನಿಸುವಂತೆ ಮಾಡುತ್ತದೆ.

ಓಣಂನ ವಿಶೇಷ ಚಟುವಟಿಕೆಗಳು

ಬದಲಾಯಿಸಿ
 
ವಿಶಿಷ್ಟ ಓಣಂ ಸದ್ಯ

ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಓಣಂನ ವಿಶೇಷಗಳೆಂದರೆ ಅಂದಿನ ದಿವಸ ಧರಿಸಲಾಗುವ ನವೀನ ಓಣಕ್ಕೊಡಿ ವಸ್ತ್ರಗಳು ಮತ್ತು ದಿವ್ಯತೆ ಹಾಗೂ ವೈವಿಧ್ಯತೆಗೆ ಹೆಸರಾದ, ಸಾದ್ಯಂತವಾಗಿ ಸವಿಯಬಹುದಾದ 'ಓಣಂ ಸಾದ್ಯ ' ಎನ್ನುವ ವಿಶೇಷ ಖಾದ್ಯ. ಈ ಭೋಜನವನ್ನು ಸಾಮಾನ್ಯವಾಗಿ ಬಾಳೆಯ ಎಳೆಯ ಮೇಲೆ, ಇತರೆ ನಾಲ್ಕು ಬಗೆಯ ತರಾವರಿ ಖಾದ್ಯಗಳೊಡನೆ, ಅನ್ನದ ಜೊತೆಗೆ ಬಡಿಸಲಾಗುತ್ತದೆ. ಪರಂಪರಾಗತ ಉಪ್ಪಿನಕಾಯಿ ಮತ್ತು ಹಪ್ಪಳಗಳನ್ನೂ ಬಡಿಸಲಾಗುತ್ತದೆ. ಹಾಲು, ಸಕ್ಕರೆ ಮತ್ತು ಇತರೆ ಸಾಂಪ್ರದಾಯಿಕ ಭಾರತೀಯ ಸುವಾಸನೆಯ ಪದಾರ್ಥಗಳ ಜೊತೆಗೆ ಸೇರಿಸಿದ ಸಿಹಿಭಕ್ಷ್ಯವು ಸಾಮಾನ್ಯವಾಗಿ 'ಪಾಯಸ'ವಾಗಿರುತ್ತದೆ.

ಈಗಾಗಲೇ ಉಲ್ಲೇಖಿಸಿರುವಂತೆ, ಓಣಂ ಮುಗಿಯುವ ತನಕವೂ ಪ್ರತಿಯೊಬ್ಬರೂ ಅವರವರ ಮನೆಯಂಗಳದಲ್ಲಿ ಪೂಕ್ಕಳಂ ಎನ್ನುವ ಬಣ್ಣ ಬಣ್ಣದ ಹೂ ರಂಗೋಲಿಗಳನ್ನು ರಚಿಸುತ್ತಾರೆ. ಈ ರಂಗೋಲಿಗಳ ರಚನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು, ಹೆಚ್ಚಾಗಿ ಪುಟ್ಟ ಬಾಲಕಿಯರು ಭಾಗವಹಿಸುವುದನ್ನು ನೋಡುವುದೇ ಒಂದು ಸಡಗರ. ಎಲ್ಲರೂ ಒಟ್ಟಾಗಿ ಕೂತು, ತನ್ಮಯತೆಯಿಂದ ತುಂಬಾ ವಿಸ್ತಾರವೂ, ಸುಂದರವೂ ಆದ ರಂಗೋಲಿಗಳನ್ನು ರಚಿಸುತ್ತಾರೆ. ಕೆಲವೆಡೆ ಓಣಂಗಾಗಿ ಈ ಹೂ ರಂಗೋಲಿಗಳ ರಚನಾ ಸ್ಪರ್ಧೆಯನ್ನೂ ಏರ್ಪಡಿಸುವುದುಂಟು. ಸಾಮಾನ್ಯವಾಗಿ ಈ ರಂಗೋಲಿಯ ಸುತ್ತಳತೆ 1.5 ಮಿ ವ್ಯಾಸವಿದ್ದು, ವೃತ್ತಾಕಾರದಲ್ಲಿರುತ್ತದೆ. ನಡುವೆ ಹೆಚ್ಚಿನ ಅಲಂಕಾರಕ್ಕಾಗಿ ದೀಪಕಂಭವನ್ನು ಇಡುವ ನಿಯಮವೂ ಇದೆ. ಇತ್ತೀಚಿನ ದಿನಗಳಲ್ಲಿ, ಕೇರಳದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರುಹಾಗಿ, ಈ ರಂಗೋಲಿಗಳು ತಮ್ಮ ರೂಢಿಗತ ವೃತ್ತಾಕಾರದ ವಿನ್ಯಾಸದ ಜಾಡಿನಿಂದ ಹೊರಬಂದು ತುಂಬಾ ನವೀನ ರೀತಿಯ ವಿನ್ಯಾಸಗಳನ್ನು ಅಳವಡಿಸಿಕೊಳ್ಳುತ್ತಿರುವುದು ಗಮನಾರ್ಹ ಅಂಶವಾಗಿದೆ.

ಓಣಂನ ವಿಶೇಷತೆಗೆ ಮತ್ತೊಂದು ಹೆಸರೇ ವಲ್ಲಂಕಲಿ ಎನ್ನುವ ಹೆಸರಿನ ಹಾವು ದೋಣಿ ಪಂದ್ಯ. ಇತರೆ ಪಂದ್ಯ ವಿಶೇಷಗಳೆಂದರೆ ಅರನ್ಮುಲ ದೋಣಿ ಸ್ಪರ್ಧೆ ಮತ್ತು ನೆಹರು ಟ್ರೋಫಿ ದೋಣಿ ಸ್ಪರ್ಧೆ. ಸುಮಾರು ನೂರು ಮಂದಿ ಹುಟ್ಟು ಹಾಕುವವರು, ತುಂಬಾ ದೊಡ್ಡ ದೊಡ್ಡ, ಹಾವಿನಾಕಾರದ ದೋಣಿಗಳಲ್ಲಿ ಕುಳಿತು ದೋಣಿ ನಡೆಸುತ್ತಿರುತ್ತಾರೆ. ದೂರ ದೂರಗಳಿಂದ ಹಿಂಡು ಹಿಂಡಾಗಿ ಈ ಪಂದ್ಯಗಳನ್ನು ನೋಡಲು ಆಗಮಿಸುವ ಜನರು, ನೀರನ್ನು ಚಿಮ್ಮುತ್ತ ಮುಂದೆ ಮುಂದೆ ಸಾಗಿ ಹೋಗುವ ದೋಣಿಗಳ ಸ್ಪರ್ಧೆಗೆ ಸಾಕ್ಷಿಯಾಗುತ್ತಾರೆ.

ಗಣೇಶ ಚತುರ್ಥಿ ಉತ್ಸವದಂದು ಹಿಂದೂಗಳು ಮಣ್ಣಿನ ಗಣೇಶ ಮೂರ್ತಿಗಳನ್ನು ಸ್ಥಾಪಿಸುವ ರೀತಿಯಲ್ಲೇ ಓಣಂ ಸಮಯದಲ್ಲಿ ಹಿಂದೂ ಕೇರಳಿಗರು ತ್ರಿಕ್ಕಾಕ್ಕರ ಅಪ್ಪನ್(ವಾಮನನ ಸ್ವರೂಪದಲ್ಲಿರುವ ವಿಷ್ಣು) ಎಂಬ ಮಣ್ಣಿನ ಮೂರ್ತಿಯೊಂದನ್ನು ತಂತಮ್ಮ ಮನೆಗಳಲ್ಲಿ ಸ್ಥಾಪಿಸಿ ಪೂಜಿಸುತ್ತಾರೆ.

ಕೇರಳದ ತುಂಬೆಲ್ಲ ಈ ಹಬ್ಬವು ತುಂಬಾ ಪ್ರಸಿದ್ಧವಾಗಿರುವುದಕ್ಕೆ ಕಾರಣ, ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಈ ಹಬ್ಬವನ್ನು ಆಚರಿಸಬಹುದಾಗಿದೆ ಎನ್ನುವುದು. ಈ ಹಬ್ಬವು ಹಿಂದೂ ಧರ್ಮದ ಹಿನ್ನೆಲೆ ಹೊಂದಿದ್ದು ಅದೇ ಧರ್ಮದ ರೀತಿ ರಿವಾಜುಗಳ ಜೊತೆ ತಳುಕು ಹಾಕಿಕೊಂಡಿದ್ದರೂ, ಕೇರಳದ ತುಂಬೆಲ್ಲ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ ಭಾವಗಳಿಲ್ಲದೆ, ಸಕಲರೂ ಈ ಹಬ್ಬವನ್ನು ಸಮಾನ ಭಾವದಿಂದ ಆಚರಿಸುತ್ತಾರೆ.

ಈ ಹಬ್ಬದ ಸಮಯದಲ್ಲಿ ಕೇರಳದ ಹಲವೆಡೆ ದೇವಸ್ಥಾನಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ. [] ಇದೇ ಸಂದರ್ಭದಲ್ಲಿ ದೇವಸ್ಥಾನಗಳ ಮುಂದೆ ತಾಳೆಮರವೊಂದನ್ನು ನಿಲ್ಲಿಸಿ, ಸುತ್ತಲೂ ಮರದ ಹೂಜಿಗಂಬಗಳನ್ನು ಇರಿಸಿ, ಒಣ ತಾಳೆ ಗರಿಗಳಿಂದ ಮುಚ್ಚಲಾಗಿರುತ್ತದೆ. [] ಕಡೆಗೆ ಅದರಲ್ಲಿ ದೀಪವನ್ನು ಉರಿಸಿ, ಅದು ಉರಿದು ಬೂದಿಯಾಗುವತನಕ ಬಿಡುತ್ತಾರೆ. ಇದು ಮಹಾಬಲಿ ಚಕ್ರವರ್ತಿಯು ತ್ಯಾಗದ ರೂಪವಾಗಿ ನರಕಕ್ಕೆ ಹೋದದ್ದನ್ನು ಪ್ರತಿನಿಧಿಸುತ್ತದೆ. []

ಇದನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಪು. 66 ಪಾತ್ ಟು ದಿ ಸೌಲ್ . ಅಶೋಕ್ ಬೇಡಿ ಅವರಿಂದ.
  2. ಪು. 30 ನೋ ದ ಪುರಾಣಾಸ್ . ಪುಸ್ತಕ ಮಹಲ್ ಅವರಿಂದ
  3. ೩.೦ ೩.೧ ೩.೨ ಪು. 179ಜೆನಿಯಾಲಜಿ ಆಫ್ ದಿ ಸೌತ್ ಇಂಡಿಯನ್ ಡೈಟೀಸ್ ಬಾರ್ತಲೋಮಯಾಸ್ ಜಿಜೆನ್ಬಲ್, ಡೆನಿಯಲ್ ಜೈರಾಜ್ ಅವರಿಂದ.
"https://kn.wikipedia.org/w/index.php?title=ಓಣಮ್‌&oldid=1157699" ಇಂದ ಪಡೆಯಲ್ಪಟ್ಟಿದೆ