ಪೆನುಗೊಂಡೆ ನರಸಿಂಹ ರಂಗನ್ (ಜುಲೈ ೨೭, ೧೯೪೬ - ನವೆಂಬರ್ ೮, ೨೦೧೧) ಅವರು ಮನು ಎಂಬ ಹೆಸರಿನಿಂದ ಕನ್ನಡದಲ್ಲಿ ವೈಜ್ಞಾನಿಕ ಕಥೆ ಕಾದಂಬರಿಗಳಿಗೆ ಪ್ರಖ್ಯಾತರಾಗಿದ್ದಾರೆ.

ಪಿ. ನರಸಿಂಹರಂಗನ್
ಜನನಜುಲೈ ೨೭, ೧೯೪೬
ಮೇಲುಕೋಟೆ
ಮರಣನವೆಂಬರ್ ೮, ೨೦೧೧
ಕಾವ್ಯನಾಮಮನು
ವೃತ್ತಿಬರಹಗಾರರು, ತಾಂತ್ರಿಕ ನಿರ್ದೇಶಕರು
ವಿಷಯಕನ್ನಡ ಕಥಾಲೋಕ

ಜನನ,ವಿದ್ಯಾಭ್ಯಾಸ, ಜೀವನ ಬದಲಾಯಿಸಿ

 • ವೈಜ್ಞಾನಿಕ ಕಥೆಗಳಿಗೆ ಮನು ಎಂಬ ಹೆಸರಿನಿಂದ ಪ್ರಖ್ಯಾತರಾದ ಪೆನುಗೊಂಡೆ ನರಸಿಂಹರಂಗನ್‌ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946ರ ಜುಲೈ 27ರಂದು ಜನಿಸಿದರು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು ಮತ್ತು ತಾಯಿ ರಂಗನಾಯಕ ಮ್ಮನವರು.ಮನು ಅವರ ಪ್ರಾರಂಭಿಕ ಶಿಕ್ಷಣ ಮೇಲುಕೋಟೆಯಲ್ಲಿ ನೆರವೇರಿತು. ಮುಂದಿನ ವಿದ್ಯಾಭ್ಯಾಸವನ್ನು ಮೈಸೂರಿನ ಶಾರದಾ ವಿಲಾಸ ಹೈಸ್ಕೂಲು, ಶಾರದಾವಿಲಾಸ ಕಾಲೇಜಿನಲ್ಲಿ ನೆರವೇರಿಸಿದರು.
 • ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಿಂದ ಮೆಕ್ಯಾನಿಕಲ್‌ ಎಂಜಿನಿಯ ರಿಂಗಿನಲ್ಲಿ ಬಿ.ಇ. ಪದವಿ ಪಡೆದರು. ಇದಲ್ಲದೆ ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಎಂ.ಎ ಪದವಿಗಳನ್ನು ಪಡೆದರು. ಹೀಗೆ ಮನು ಅವರಲ್ಲಿ ವ್ಯಾಪಕವಾದ ಅಧ್ಯಯನಾಸಕ್ತಿ ತುಂಬಿ ತುಳುಕುತ್ತಿತ್ತು.
 • ಮೊದಲು ಮೈಸೂರಿನ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಉದ್ಯೋಗ ಪ್ರಾರಂಭಿಸಿದ ಮನು ಅವರು ಮುಂದೆ ಕೆ.ಜಿ.ಎಫ್‌.ನ ಭಾರತ್‌ ಅರ್ಥ್‌‌ಮೂವರ್ಸ್‌ನಲ್ಲಿ ಸಂಶೋಧನಾ ಇಂಜಿನಿಯರ್ ಆಗಿ, ಚೆನ್ನೈನ ಬ್ರೇಕ್ಸ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್‌ ಇಂಜಿನಿಯರಾಗಿ, ಪುಣೆಯ ಆಟೋಮೊಬೈ ಲ್‌ ರಿಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾದಲ್ಲಿ ಡೆಪ್ಯುಟಿ ಡೈರೆಕ್ಟರ್, ಸೀನಿಯರ್ ಡೆಪ್ಯುಟಿ ಡೈರೆಕ್ಟರಾಗಿ, ವೋಲ್ವೊ ಕಂಪನಿಯ ಸಮಾಲೋಚಕರಾಗಿ ಕೆಲಸ ನಿರ್ವಹಿಸಿ ‘ಮಹಾಸಂಪರ್ಕ’ ಕಾದಂಬರಿಯನ್ನು ಬರೆಯಲೆಂದೇ ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ನೆಲೆಸಿದರು. ೨೦೦೨ರ ವರ್ಷದಲ್ಲಿ ‘ಮಹಾಸಂಪರ್ಕ’ ಪ್ರಕಟಣೆಯ ನಂತರ ಕೆಲವರ್ಷ ಕೆಲಕಾಲ ಎಚ್‌.ಸಿ.ಎಲ್‌. ಕಂಪನಿಯ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದರು.

ಬರಹಗಾರರಾಗಿ ಬದಲಾಯಿಸಿ

 • ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಿದ್ದ ಮನು ಅವರು ಪ್ರಜಾವಾಣಿಯ ಬಾಲವಿಹಾರ ಅಂಕಣಕ್ಕೆ ಪದ್ಯಗಳನ್ನು ಬರೆಯುತ್ತಿದ್ದರು. ಇದಲ್ಲದೆ ಇವರು ಗೋಕುಲ ಪತ್ರಿಕೆಯ ವಿದ್ಯಾರ್ಥಿ ವಿಭಾಗದಲ್ಲಿ ಖಾಯಂ ಲೇಖಕರಾಗಿದ್ದರು. ಕಾಲೇಜು ವಿದ್ಯಾರ್ಥಿ ಯಾಗಿದ್ದಾಗ ಬರೆದ ‘ಆನಂದಿ’ ಕತೆಯು ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆಯಿತು. ಹೀಗೆ ಇವರು ಬರೆದ ಕತೆ, ಕಾದಂಬರಿಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮಂಗಳ, ಮಲ್ಲಿಗೆ ಗೋಕುಲ, ತುಷಾರ, ಮಯೂರ ಮುಂತಾದವುಗಳಲ್ಲಿ ಪ್ರಕಟಗೊಂಡಿವೆ. ಅವರು ಬರೆದ ಕಥೆ, ಕಾದಂಬರಿಗಳೆಲ್ಲವೂ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೇ ಪ್ರಕಟಗೊಂಡಿದ್ದವು.
 • ಮನು ಅವರು ಕಾದಂಬರಿಗಳನ್ನು ಬರೆಯುವಾಗ ಸಾಕಷ್ಟು ಸಿದ್ಧತೆ ನಡೆಸಿ ವಿಪುಲ ಮಾಹಿತಿ ಸಂಗ್ರಹಿಸಿ, ವಸ್ತುನಿಷ್ಠವಾಗಿ ಸನ್ನಿವೇಶಗಳಿಗೆ ತಕ್ಕಂತೆ ಪಾತ್ರಗಳನ್ನು ರಚಿಸಿ, ವೈಜ್ಞಾನಿಕ ರೋಚಕತೆಯನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿದ್ದರು. ಹೀಗೆ ಬರೆದ ಕಾದಂಬರಿಗಳಲ್ಲಿ ಪರ್ವತಾ ರೋಹಿ ಅನುಭವದ ‘ಹಿಮಜ್ವಾಲೆ’, ಕಾರ್ಪೊರೇಟ್‌ ಪ್ರಪಂಚದ ಹೋರಾಟದ ‘ಚಕ್ರ’, ಏಯ್ಡ್ಸ್ ಹಿನ್ನೆಲೆಯ ‘ಐರಾವತ’, ಅಣ್ವಸ್ತ್ರ ನಿಶ್ಶಸ್ತ್ರೀಕರಣದ ವಸ್ತುವನ್ನೊಳಗೊಂಡ ‘ಮಹಾಪ್ರಸ್ಥಾನ’; ಸ್ಟೀಫನ್ ಹಾಕಿನ್ಸ್‌ ಜೀವನವನ್ನಾಧರಿಸಿದ ‘ಮುಸುಕಿದೀಮಬ್ಬಿನಲಿ’, ಆಕಾಶಯಾನದ ‘ಸುದರ್ಶನಚಕ್ರ’, ಇವೆಲ್ಲವೂ ಸೊಗಸಾದ ಕಥಾನಿರೂಪಣೆ, ಕುತೂಹಲ ಹುಟ್ಟಿಸಿ ತಕ್ಷಣ ಪಡೆಯುವ ತಿರುವುಗಳ ಮೂಲಕ ಓದುಗರನ್ನು ರೋಮಾಂಚನಗೊಳಿಸಿವೆ.
 • ಇವಲ್ಲದೆ ಅಯನ, ನೇಪಥ್ಯ, ಖೆಡ್ಡ, ಗ್ರಸ್ತ, ಸಂಚು ಮುಂತಾದ ಒಟ್ಟು ೧೭ ಕಾದಂಬರಿಗಳು; ಕನಕಾಂಬರ, ಕಾರಸ್ಥಾನ, ಜೀವಚ್ಛವ ಮೊದಲಾದ ರೂಪಾಂತರ ಕಾದಂಬರಿಗಳು; ಆಷಾಢದ ಮೋಡಗಳು, ಅಂಕುಶ, ಕಾಳಗ, ಸಂಧಿಕಾಲ ಮೊದಲಾದ ೮ ಮಿನಿಕಾದಂಬರಿಗಳು ಪ್ರಕಟ ಗೊಂಡಿವೆ. ೧೯೮೧ರ ವರ್ಷದಲ್ಲಿ ನಿರ್ದೇಶಕರಾದ ಜೋಸೈಮನ್‌ ಅವರು ಚಕ್ರವ್ಯೂಹ ಕಾದಂಬರಿ ಆಧರಿಸಿ ವಿಷ್ಣುವರ್ಧನರ ಅಭಿನಯದಲ್ಲಿ ‘ಸಾಹಸಸಿಂಹ’ ಎಂಬ ಪ್ರಸಿದ್ಧ ಚಲನಚಿತ್ರವನ್ನು ನಿರ್ದೇಶಿಸಿದ್ದರು. ೧೯೮೮ರಲ್ಲಿ ನಾಗಾಭರಣರವರು ‘ಅಯನ’ ಕಾದಂಬರಿಯನ್ನಾಧರಿಸಿ ‘ಆಸ್ಫೋಟ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಇದಕ್ಕೆ ಮನುರವರಿಗೆ ರಾಜ್ಯ ಸರಕಾರದ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯೂ ಸಂದಿತ್ತು.
 • ಮನು ಅವರು ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ ವಿಭಾಗಕ್ಕಾಗಿ ‘ದೃಷ್ಟಿ’ ಮತ್ತು ಸುಧಾ ವಾರಪತ್ರಿಕೆಗಾಗಿ ‘ವಿಚಾರ ಕಿರಣ’ ಎಂಬ ಅಂಕಣಗಳನ್ನು ಬರೆಯುತ್ತಿದ್ದರು. ಪ್ರಜಾವಾಣಿಯ ವಿಶೇಷಾಂಕಕ್ಕಾಗಿ ಗಾಂಧೀಜಿಯವರ ಬಗ್ಗೆ ‘ಅಜ್ಞಾತಪಿತ’ ಎಂಬ ಕವನ ಮೂಡಿಸಿದ್ದರು. ಹಂಬಲ್‌ ಬುಕ್ಸ್‌, ಲಂಡನ್‌ರವರು ಪ್ರಕಟಿಸಿರುವ ಶ್ರೀನಿವಾಸ ಆರ್ಕ್ ರವರ ಗ್ರಂಥವನ್ನು ‘ಆತ್ಮಾನ್ವೇಷಣೆಯ ಸಾಧನೆಗಳು’ ಎಂದು ಭಾಷಾಂತರಿಸಿದ್ದರು. ಇವರು ಬರೆದ ಜಿ.ವಿ. ದಾಮೋದರನಾಯುಡುರವರ ಜೀವನ ಚರಿತ್ರೆ ‘ಕಸದಿಂದ ರಸ’ ಹಾಗೂ ಇವರದೇ ಸಾಹಿತ್ಯಿಕ ಆತ್ಮಕಥನ ರೂಪವಾದ ‘ಕಥೆಯೊಳಗಿನ ಕಥೆ’ ಯನ್ನು ಭಾರತೀ ಪ್ರಕಾಶನವು ಹೊರತಂದಿದೆ.
 • ಮನು ಅವರ ಎರಡು ನಾಟಕಗಳಾದ ‘20ನೇ ಶತಮಾನದ ಸ್ವರ್ಗ’ ಮತ್ತು ‘ಹೊಟ್ಟೆ ಹೊಕ್ಕ ವಿಧಿ’ ನಾಟಕಗಳು ಗೋಕುಲ ವಿಶೇಷಾಂಕ ಮತ್ತು ಸುಧಾ ಯುಗಾದಿ ವಿಶೇಷಾಂಕಗಳಲ್ಲಿ ಪ್ರಕಟಗೊಂಡಿವೆ. ಇವರು ರಚಿಸಿರುವ ಸುಮಾರು 50ಕ್ಕೂ ಹೆಚ್ಚು ಸಣ್ಣ ಕತೆಗಳು ಆಗಾಗ್ಗೆ ಪ್ರಸ್ತುತ ಸಂದರ್ಭಕ್ಕಾಗಿ ಬರೆದ ಸುಮಾರು ೩೦ಕ್ಕೂ ಹೆಚ್ಚು ಲೇಖನಗಳು, ಹಾಸ್ಯಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮನು ಅವರು ಮಕ್ಕಳಿಗಾಗಿ ‘ಮಕ್ಕಳಿಗಾಗಿ ಸಣ್ಣಕಥೆಗಳು’, ‘ಮಹಾಭಾರತದ ನೀತಿ ಕಥೆಗಳು’, ‘ಈಜಿಪ್ತಿನ ಕಥೆಗಳು’ ಮುಂತಾದ ಮೂರು ಸಂಕಲನ’ ಗಳನ್ನು ಹೊರತಂದಿದ್ದಾರೆ.
 • ಮನು ಅವರು ಗ್ರೀಸ್‌, ಈಜಿಪ್ತ್‌, ಇಟಲಿ, ಸ್ವೀಡನ್‌,ಜರ್ಮನಿ, ಅಮೆರಿಕ, ಆಸ್ಟ್ರೇಲಿಯಾ ದೇಶಗಳನ್ನು ಸುತ್ತಿ ಬಂದು ರಚಿಸಿದ ಪ್ರವಾಸ ಕೃತಿಗಳು ‘ಈಜಿಪ್ತ್ ಪ್ರವಾಸ’ ಹಾಗೂ ‘ಸಮುದ್ರಮಂಥನ’(ಕಾಂಬೋಡಿಯಾ ಪ್ರವಾಸ ಕಥನ). ‘ಸೂರ್ಯಪಾನ’ದ ಬಗ್ಗೆ ಇದ್ದ ಆಸಕ್ತಿಯಿಂದ ವಿಶೇಷ ಅಧ್ಯಯನ ನಡೆಸಿ ಮೈಸೂರು, ಬೆಂಗಳೂರು, ಮಂಗಳೂರು ಮುಂತಾದೆಡೆಗಳಲ್ಲಿ ಉಪನ್ಯಾಸ ನೀಡಿದ್ದಲ್ಲದೆ ಕಿರು ಹೊತ್ತಗೆಯನ್ನೂ ಹೊರ ತಂದಿದ್ದರು. ಅಳಸಿಂಗಾಚಾರ್ಯರ ವ್ಯಾಸ ಮಹಾಭಾರತದ ಎಲ್ಲ ಸಂಪುಟಗಳನ್ನೂ ಓದಿ ಗದ್ಯ ರೂಪದಲ್ಲಿ ಸಂಕ್ಷಿಪ್ತವಾಗಿ ಬರೆದ ‘ವ್ಯಾಸ ಮಹಾಭಾರತ’ ಗ್ರಂಥವೂ ಪ್ರಕಟಗೊಂಡಿದೆ.
 • ಹಿಂದಿ, ಸಂಸ್ಕೃತ, ತಮಿಳು, ಕನ್ನಡ, ಇಂಗ್ಲಿಷ್‌ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದು ಸದಾ ಯಾವುದಾದರೊಂದು ಭಾಷೆಯ ಕೃತಿಯನ್ನು ಓದುತ್ತಲೇ ಇದ್ದ ಮನು ಅವರು ‘ಮಹಾಸಂಪರ್ಕ’ ಕೃತಿ ರಚನೆಗಾಗಿ ತಮ್ಮ ಉನ್ನತ ಹುದ್ದೆಯನ್ನೇ ತ್ಯಜಿಸಿ, ಉತ್ತರ ಭಾರತದ ಹಲವಾರು ರಾಜ್ಯಗಳನ್ನು ಸುತ್ತಿ ಬಂದು, ಮಹಾಭಾರತವನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿರುವುದಲ್ಲದೆ, ಕಾಲ್ಪನಿಕವಾಗಿ ಅನ್ಯ ತಾರಾಲೋಕದವರೊಂದಿಗೆ ಭಾರತೀಯರು ಸಾಧಿಸಿದ್ದ ಸಂಪರ್ಕವನ್ನು ಇಲ್ಲಿನ ವಿಚಾರ, ವಸ್ತುವಾಗಿಸಿದ್ದಾರೆ. ಈ ೯೦೦ಪುಟಗಳ ಬೃಹತ್‌ ಕಾದಂಬರಿಯು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ.

ಕೃತಿಗಳು ಬದಲಾಯಿಸಿ

ವಿಶೇಷ ಕಾದಂಬರಿಗಳು ಬದಲಾಯಿಸಿ

 1. ‘ಹಿಮಜ್ವಾಲೆ’
 2. ‘ಚಕ್ರ’
 3. ‘ಐರಾವತ’
 4. ‘ಮಹಾಪ್ರಸ್ಥಾನ’
 5. ‘ಮುಸುಕಿದೀಮಬ್ಬಿನಲಿ’
 6. ‘ಸುದರ್ಶನಚಕ್ರ’

ಕಾದಂಬರಿಗಳು ಬದಲಾಯಿಸಿ

 1. ಅಯನ,
 2. ನೇಪಥ್ಯ,
 3. ಖೆಡ್ಡ,
 4. ಗ್ರಸ್ತ,
 5. ಸಂಚು

ರೂಪಾಂತರ ಕಾದಂಬರಿಗಳು ಬದಲಾಯಿಸಿ

 1. ಕನಕಾಂಬರ,
 2. ಕಾರಸ್ಥಾನ,
 3. ಜೀವಚ್ಛವ

ಮಿನಿಕಾದಂಬರಿಗಳು ಬದಲಾಯಿಸಿ

 1. ಆಷಾಢದ ಮೋಡಗಳು,
 2. ಅಂಕುಶ,
 3. ಕಾಳಗ,
 4. ಸಂಧಿಕಾಲ

ನಾಟಕಗಳು ಬದಲಾಯಿಸಿ

 1. ‘20ನೇ ಶತಮಾನದ ಸ್ವರ್ಗ’ ಮತ್ತು
 2. ‘ಹೊಟ್ಟೆ ಹೊಕ್ಕ ವಿಧಿ’

ಮಕ್ಕಳ ಪುಸ್ತಕಗಳು ಬದಲಾಯಿಸಿ

 1. ‘ಮಕ್ಕಳಿಗಾಗಿ ಸಣ್ಣಕಥೆಗಳು’,
 2. ‘ಮಹಾಭಾರತದ ನೀತಿ ಕಥೆಗಳು’,
 3. ‘ಈಜಿಪ್ತಿನ ಕಥೆಗಳು’

ಪ್ರವಾಸಕೃತಿಗಳು ಬದಲಾಯಿಸಿ

 1. ‘ಈಜಿಪ್ತ್ ಪ್ರವಾಸ’ ಹಾಗೂ
 2. ‘ಸಮುದ್ರಮಂಥನ’(ಕಾಂಬೋಡಿಯಾ ಪ್ರವಾಸ ಕಥನ).

ಬೃಹತ್‌ ಕಾದಂಬರಿ ಬದಲಾಯಿಸಿ

 1. ‘ಮಹಾಸಂಪರ್ಕ’

ಜೀವನ ಚರಿತ್ರೆ ಬದಲಾಯಿಸಿ

 1. ಜಿ.ವಿ. ದಾಮೋದರನಾಯುಡುರವರ ಜೀವನ ಚರಿತ್ರೆ

ನಿರ್ದೇಶಿಸಿದ ಚಲನಚಿತ್ರಗಳು ಬದಲಾಯಿಸಿ

 1. ‘ಸಾಹಸಸಿಂಹ’
 2. ‘ಆಸ್ಫೋಟ’

ಪ್ರಶಸ್ತಿ, ಗೌರವ ಬದಲಾಯಿಸಿ

 1. ರಾಜ್ಯ ಸರಕಾರದ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ
 2. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ
 3. ಕೆಲಕಾಲ ಎಚ್‌.ಸಿ.ಎಲ್‌. ಕಂಪನಿಯ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದರು.

ವಿದಾಯ ಬದಲಾಯಿಸಿ

ಕನ್ನಡದಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ ಮನು ಅವರು ನವೆಂಬರ್ ೮, ೨೦೧೧ರಂದು ಈ ಲೋಕವನ್ನಗಲಿದರು. ಅವರ ಕೃತಿಗಳಿಂದ ಅವರು ಕನ್ನಡ ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಮಾಹಿತಿ ಕೃಪೆ ಬದಲಾಯಿಸಿ

ಕಣಜ[ಶಾಶ್ವತವಾಗಿ ಮಡಿದ ಕೊಂಡಿ] |ವೈವಸ್ವತ ಮನು- ಸೂರ್ಯ ವಂಶ ನೋಡಿ

"https://kn.wikipedia.org/w/index.php?title=ಮನು&oldid=1184941" ಇಂದ ಪಡೆಯಲ್ಪಟ್ಟಿದೆ