ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದಕ್ಷಿಣ ಕನ್ನಡ ಜಿಲ್ಲೆಬಂಟ್ವಾಳತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ. ಪ್ರಕೃತಿಯ ಮಡಿಲಲ್ಲಿರುವ ಈ ಕ್ಷೇತ್ರದಲ್ಲಿ ಆಂಜನೇಯ, ದತ್ತಾತ್ರೇಯ, ಗುಹಾಂತರ್ಗತ ಪಂಚಮುಖೀ ಆಂಜನೇಯ ಮಂದಿರಗಳಿವೆ.ಶ್ರೀ ದತ್ತಾಂಜನೇಯ ಇಲ್ಲಿನ ಆರಾಧ್ಯಮೂರ್ತಿ, ಶ್ರೀ ವಜ್ರಮಾತಾದೇವಿಯೂ ಇಲ್ಲಿನ ಆರಾಧ್ಯದೇವರು. ದತ್ತಾತ್ರೇಯನೆಂದರೆ ಬ್ರಹ್ಮ-ವಿಷ್ಣು-ಶಿವ ಸ್ವರೂಪಿ.ಒಳ್ಳೆಯ ಚಿಂತನೆಗಳನ್ನು ಸೃಷ್ಟಿಸಿ, ದೈವಿಕ-ಮಾನವೀಯ ಗುಣಗಳನ್ನು ಸ್ಥಿರಗೊಳಿಸಿ, ಅರಿಷಡ್ವರ್ಗಗಳನ್ನು ನಾಶಗೊಳಿಸುವ ದೇವರೆಂದು ನಂಬಿಕೆ. ಆಂಜನೇಯನು ಶಕ್ತಿಯ ಖಣಿ. ದಿನಾಂಕ ೧೫-೦೨-೧೯೮೯ ರಂದು ನಾರಾಯಣಸ್ವಾಮಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಓಂ ಶ್ರೀ ವೀರಾಂಜನೇಯಸ್ವಾಮೀ ಕ್ಷೇತ್ರವೇ ಮುಂದೆ ಶ್ರೀ ಗುರುದೇವದತ್ತ ಸಂಸ್ಥಾನವಾಯಿತು. ನಾರಾಯಣಸ್ವಾಮಿಯವರೇ ಮುಂದೆ ಶ್ರೀ ಗುರುದೇವಾನಂದರಾದರು. ಈ ಅವಧೂತರೇ ಇಲ್ಲಿನ ಕರ್ತೃತ್ವ ಶಕ್ತಿ.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
ಶ್ರೀ ದತ್ತಾಂಜನೇಯ ದೇವರು

ಗರ್ಭಗುಡಿ ಬದಲಾಯಿಸಿ

ಕೃಷ್ಣಶಿಲೆಯ ಗರ್ಭಗುಡಿಯ ಗೋಪುರವು ೩೫ ಅಡಿ ಎತ್ತರವಿದೆ.ವಿಶೇಷವಾದ ಪದ್ಮಪೀಠದಿಂದ ಗೋಪುರವು ಮೇಲೇರಿದೆ. ತಮಿಳುನಾಡಿನ ಶಿಲೆಗಳನ್ನು ಆಯ್ದು, ತಮಿಳುನಾಡಿನ ಕಾರೈಕುಡಿಯಲ್ಲಿ ಕೆತ್ತನೆಯನ್ನು ಮಾಡಲಾಗಿದೆ. ಗರ್ಭಗುಡಿಯು ಹೊಯ್ಸಳರ ವಾಸ್ತುಶಿಲ್ಪ ಶೈಲಿಯ ವೇಸರಶಿಲ್ಪ ಶೈಲಿಯಲ್ಲಿದೆ.ಆಕಾರದಲ್ಲಿ ಅಷ್ಟಪ್ರಾಸಾದವಾಗಿ ಕಂಗೊಳಿಸುತ್ತದೆ.ಖ್ಯಾತ ಸ್ಥಪತಿ ದಕ್ಷಿಣಾಮೂರ್ತಿಯವರುನಿರ್ಮಾಣದ ನೇತೃತ್ವ ವಹಿಸಿದವರು.(ಆಂಜನೇಯನ ವಿಗ್ರಹವೂ ಇವರ ಕೊಡುಗೆಯೇ.)

ರಾಜಗೋಪುರ ಬದಲಾಯಿಸಿ

ದೇಗುಲದ ಗರ್ಭಗುಡಿಯ ಹೊರಗೆ ಅಷ್ಟಪಟ್ಟಿ ಆಕಾರದಲ್ಲಿ ಸುಂದರವಾದ ಸುತ್ತುಗೋಪುರವಿದೆ. ಇದರಲ್ಲಿ ಕಲಾತ್ಮಕವಾದ ಬೇರೆಬೇರೆ ವರ್ಣಚಿತ್ರಗಳ ಕಥಾಮಾಲಿಕೆಯಿದೆ. ೪೦ ಅಡಿ ಎತ್ತರದ ರಾಜಗೋಪುರದಲ್ಲಿ ಪುರಾಣೇತಿಹಾಸದ ಬೋಧನೆ ನೀಡುವ ಚಿತ್ರಕಾವ್ಯಗಳಿವೆ. ಗೋಪುರದ ಪೂರ್ವಭಾಗದಲ್ಲಿ ಹನುಮದ್ವಿಲಾಸದ ಕಥಾನಕ,ದಕ್ಷಿಣಭಾಗದಲ್ಲಿ ಶಿವಲೀಲೆಯ ಕಥೆಗಳು, ಪಶ್ಚಿಮದಲ್ಲಿ ಗುರುದತ್ತಾತ್ರೇಯರ ಮಹಿಮೆಯನ್ನು ಸಾರುವ ಕಲಾಕೃತಿಗಳು ಹಾಗೂ ಉತ್ತರದಲ್ಲಿ ಶ್ರೀಮನ್ನಾರಾಯಣನ ಮೂರ್ತಿಯಿದೆ.

ಆರಾಧ್ಯದೇವರುಗಳು, ಪರಿವಾರದೇವತೆಗಳು ಬದಲಾಯಿಸಿ

ಶ್ರೀ ದತ್ತಾತ್ರೇಯ ಪ್ರಭು ಮತ್ತು ಶ್ರೀ ಆಂಜನೇಯ ಸ್ವಾಮಿ ಇಲ್ಲಿಯ ಆರಾಧ್ಯ ದೇವರುಗಳು.೧ ಅಡಿ ೧ ಇಂಚು ಎತ್ತರದ ದತ್ತಾತ್ರೇಯರ ಸ್ಫಟಿಕ ವಿಗ್ರಹ, ಕೃಷ್ಣಶಿಲೆಯಿಂದ ರೂಪುಗೊಂಡಂತಹ ೫ ಅಡಿ ೪ ಇಂಚು ಎತ್ತರದ ಅಭಯ ಹಸ್ತದ ಆಂಜನೇಯ ಸ್ವಾಮಿಯ ವಿಗ್ರಹ ಗರ್ಭಗುಡಿಯೊಳಗಿದೆ. ಪರಿವಾರ ದೇವತೆಗಳಾಗಿ ವಿಘ್ನನಾಶಕ ಬಲಮುರಿಗಣಪತಿ, ಶ್ರೀ ಮಹಾವಜ್ರಮಾತೆ ಪ್ರಸನ್ನರೂಪಿಯಾಗಿ ಪರ್ವಕಾಲಗಳಲ್ಲಿ ಸೇವೆ ಸ್ವೀಕರಿಸುವ ಜಗದ್ಧಾತ್ರಿ, ಸುಬ್ರಹ್ಮಣ್ಯ ಸ್ವಾಮಿ, ಮೂಲರಾಮ, ಶಕ್ತಿ ಸ್ವರೂಪಿಣಿ ಭದ್ರಕಾಳಿ ಆರಾಧಿಸಲ್ಪಡುತ್ತಿದ್ದಾರೆ. ನೈಋತ್ಯಭಾಗದಲ್ಲಿ ನಾಗನ ಬಿಂಬವನ್ನು ಪ್ರತಿಷ್ಠಾಪಿಸಲಾಗಿದೆ. ನಮಸ್ಕಾರ ಮಂಟಪದ ಹೊರಗೆ ಸುತ್ತು ಗೋಪುರದ ಮಧ್ಯೆ ಔದುಂಬರ (ಅತ್ತಿ), ಆಮಲಕ (ನೆಲ್ಲಿ), ಹಾಗೂ ಪಾರಿಜಾತ ವೃಕ್ಷಗಳು ಪ್ರಾಕೃತಿಕವಾಗಿ ಹುಟ್ಟಿಬೆಳೆದಿವೆ. ಅತ್ತಿಮರದಲ್ಲಿ ಲಕ್ಷೀನಾರಾಯಣ, (ಇಲ್ಲಿ ದತ್ತನ ಸಾನಿಧ್ಯ), ಪಾರಿಜಾತದಲ್ಲಿ ಪ್ರಾಣದೇವರು, ನೆಲ್ಲಿಮರ ವಿಷ್ಣು ಸಾನಿಧ್ಯದ ಪ್ರತೀಕವಾಗಿರುತ್ತದೆ. ತ್ರೇತಾಯುಗದಲ್ಲಿ ಆಂಜನೇಯನು ಸಂಜೀವಿನಿಯನ್ನು ಹುಡುಕಲು ಹೋಗಿ ಚಂದ್ರದ್ರೋಣ ಪರ್ವತವನ್ನು ತರುತ್ತಿರುವಾಗ ಇಲ್ಲಿದ್ದ ಮಾಯಾಶಕ್ತಿಗಳು ಪ್ರಾಣದೇವರಿಗೆ ತಡೆಯೊಡ್ಡಿದಾಗ ಆ ಶಕ್ತಿಗಳನ್ನು ಪ್ರಾಣದೇವರು ನಾಶಪಡಿಸಿ, ಈ ಪ್ರದೇಶವನ್ನು ಸತ್ವಭರಿತವಾಗಿಸಿದನು ಎಂಬ ನಂಬಿಕೆಯಿದೆ. ಹನುಮಗಂಗಾ ಪುಷ್ಕರಿಣಿಯನ್ನು ೨೦೧೯ ರಲ್ಲಿ ನಿರ್ಮಿಸಲಾಗಿದೆ.[ಪುಷ್ಕರಿಣಿ]

ಶ್ರೀ ಗುರುದೇವದತ್ತ ಪೀಠ ಬದಲಾಯಿಸಿ

ವೃತ್ತಾಕಾರದ ಎರಡು ಅಂತಸ್ತಿನ ದತ್ತಪೀಠವಿದೆ. ಶ್ರೀ ಗುರುದೇವದತ್ತಪೀಠ ಎಂದು ಕರೆಯಲ್ಪಡುವ ಇಲ್ಲಿ ಭಕ್ತರ ಭೇಟಿ ಶ್ರೀಗಳೊಂದಿಗೆ ನಡೆಯುತ್ತದೆ.ಪ್ರತೀ ಶನಿವಾರದಂದು ರಾತ್ರೆ ದತ್ತೋಪಾಸನೆ ಮತ್ತು ಆಂಜನೇಯ ಸೇವೆ, ಪ್ರತೀ ಸಂಕ್ರಮಣದಂದು ಬೆಳಗ್ಗೆ ನಾಗಾರಾಧನೆ, ಸಾಮೂಹಿಕ ಗಾಯತ್ರಿ ಹವನ ಜರುಗುವುದು.

ಶ್ರೀ ಗುರುದೇವ ಜ್ಞಾನಮಂದಿರ ಬದಲಾಯಿಸಿ

ಧಾರ್ಮಿಕ ಸಭೆ ಸಮಾರಂಭಗಳು, ವಿಶೇಷ ಉತ್ಸವಗಳು, ಕಲೆ-ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.“ಪ್ರಜ್ಞಾದೀಪಿಕಾ” ಎಂಬ ಸತ್ಸಂಗ ಕಾರ್ಯಕ್ರಮವು ಪ್ರತೀ ತಿಂಗಳ ಸಂಕ್ರಮಣದ ಸಾಯಂಕಾಲದಂದು ನಡೆಯುತ್ತದೆ. ಪ್ರತಿ ವರ್ಷವೂ ಭಜನಾತಂಡಗಳ ಮೂಲಕ ಅಖಂಡನಾಮಸಂಕೀರ್ತನೆಯು ನಡೆಯುತ್ತದೆ.

ಶ್ರೀ ಗುರುದೇವ ಧರ್ಮಶಾಲೆ ಬದಲಾಯಿಸಿ

ಇಲ್ಲಿ ದೂರದೂರಿನಿಂದ ಬರುವ ಯಾತ್ರಾರ್ಥಿಗಳಿಗೆ ತಂಗುವ ವ್ಯವಸ್ಥೆಯಿದೆ. ಶುಚಿತ್ವ, ನಿರ್ವಹಣಾ ವೆಚ್ಚವನ್ನು ಮಾತ್ರ ಯಾತ್ರಾರ್ಥಿಗಳಿಂದ ಪಡೆಯುತ್ತಾರೆ.

ನಿತ್ಯಾನಂದ ಗುಹೆ ಬದಲಾಯಿಸಿ

ನೆಲವನ್ನು ಕೊರೆದು ನಾಲ್ಕುಅಡಿ ಎತ್ತರ, ಎರಡೂವರೆಅಡಿ ಅಗಲದ ಸ್ಥಳಾವಕಾಶವಿರುವ ಗುಹೆಯನ್ನು ನಿರ್ಮಿಸಲಾಗಿದೆ. ಏಕಾಂತದಲ್ಲಿದ್ದು, ಧ್ಯಾನ-ಚಿಂತನೆಗಳನ್ನು ಮಾಡಲು ಅನುಕೂಲವಾಗುವಂತಹ ಪ್ರಶಾಂತ ವಾತಾವರಣವಿದೆ. ಇಲ್ಲಿ ತಳಭಾಗಕ್ಕೆ ಕಿವಿಕೊಟ್ಟು ಆಲಿಸಿದರೆ ಓಂ ಕಾರ ಪ್ರತಿಧ್ವನಿಸುತ್ತದೆ. ಇಲ್ಲಿ ಪಂಚಮುಖೀ ಆಂಜನೇಯಸ್ವಾಮಿ, ಶ್ರೀ ಮಹಾಗಣಪತಿ ಮತ್ತು ಶ್ರೀ ವಜ್ರಮಾತೆಯ ಬಿಂಬಗಳನ್ನು ಪ್ರತಿಷ್ಠಾಪಿಸಲಾಗಿದೆ. ಗುಹೆಯ ಒಂದು ಕವಲಿನಲ್ಲಿ ಪುಟ್ಟ ಜಲಾಶಯವಿದೆ. ಆಗ್ನೇಯ ಭಾಗದಲ್ಲಿ “ಹನುಮಗಂಗೆ”, ನೈಋತ್ಯ ಭಾಗದಲ್ಲಿ “ಗುಪ್ತಗಂಗೆ” ಈಶಾನ್ಯದಲ್ಲಿ “ತೀರ್ಥಬಾವಿ”ಯನ್ನು ನಿರ್ಮಿಸಲಾಗಿದೆ.

ಶ್ರೀ ಗುರುದೇವ ಕಲ್ಯಾಣಮಂಟಪ ಬದಲಾಯಿಸಿ

ಒಡಿಯೂರಿನಿಂದ ಮೂರು ಕಿಲೋಮೀಟರ್ ದೂರದ ಕನ್ಯಾನದಲ್ಲಿ ಶ್ರೀ ಗುರುದೇವ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲಿದೆ.

ಗುರುದೇವ ಕಲಾಕೇಂದ್ರ ಬದಲಾಯಿಸಿ

ಯಕ್ಷಗಾನ, ನಾಟಕ, ನೃತ್ಯ ಮತ್ತು ಸಂಗೀತದಲ್ಲಿ ಯುವಪ್ರತಿಭೆಗಳಿಗೆ ತರಬೇತಿ ನೀಡಲಾಗುತ್ತದೆ.ಯಕ್ಷಗಾನ ಹವ್ಯಾಸಿ ತಂಡವು ಪರಿಣತ ತರಬೇತುದಾರರಿಂದ ಶಿಕ್ಷಣ ಪಡೆದು ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದೆ. ಮಹಿಳಾ ಯಕ್ಷಗಾನ ತಂಡ, ನಾಟಕ ತಂಡಗಳು ಕ್ರಿಯಾಶೀಲವಾಗಿವೆ.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಬದಲಾಯಿಸಿ

೨೦೧೧ ರಲ್ಲಿ ಆರಂಭಗೊಂಡ ಈ ಸಹಕಾರಿಸಂಸ್ಥೆ ಪ್ರಸ್ತುತ ೧೪ ಶಾಖೆಗಳನ್ನು ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸೌಹಾರ್ದ ಸಹಕಾರಿಗಳಲ್ಲಿ ಅತ್ಯುತ್ತಮ ಸಹಕಾರಿಸಂಸ್ಥೆಯೆಂದು ಹೆಸರುಗಳಿಸಿದೆ.

ಸಮಾಜಮುಖೀ ಕಾರ್ಯಗಳು ಬದಲಾಯಿಸಿ

ಸಂಸ್ಕಾರಯುಕ್ತರಾದ ಮನುಜರನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸಂಸ್ಕೃತಿಯ, ಆಧ್ಯಾತ್ಮಿಕತೆಯ ಜ್ಯೋತಿಯನ್ನು ಬೆಳಗುತ್ತಾ, ನೊಂದವರಿಗೆ ಸಾಂತ್ವನ ನೀಡುತ್ತಾ, ಧ್ಯೇಯ- ಉಜ್ಜೀವನದ ಪಥವನ್ನು ತೋರಿಸಲು ಹಮ್ಮಿಕೊಂಡಿರುವ ಚಟುವಟಿಕೆಗಳು ಬಹಳಷ್ಟು.[ಉತ್ತಮಸಮಾಜ]

ಕಲೆಗಳ ಪೋಷಣೆಗಾಗಿ,ವಿವಿಧ ಉತ್ಸವ, ಪರ್ವಕಾಲಗಳಲ್ಲಿ ಲಲಿತಕಲೆಗಳ ಪ್ರದರ್ಶನಕ್ಕೆ ಸಾಕಷ್ಟು ಅವಕಾಶಗಳನ್ನು ಕೊಡಲಾಗುತ್ತದೆ. ಪರಂಪರಾಗತವಾಗಿ ಉಳಿದು ಬೆಳೆದು ಬಂದ ದೇಶೀಯ ಸಂಸ್ಕೃತಿಯ ಪರಿಚಯವನ್ನು ಉಳಿಸಲೋಸುಗ ಇಂತಹ ಕಲಾಪಗಳಿಗೆ ಮಹತ್ವ ನೀಡಲಾಗುತ್ತದೆ. ಸಂಗೀತ, ನೃತ್ಯ, ಶಿಲ್ಪ, ಚಿತ್ರ, ಯಕ್ಷಗಾನ, ಸಾಹಿತ್ಯಾದಿ ಕಲೆಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ, ತರಬೇತಿ, ಕಮ್ಮಟ, ಸಪ್ತಾಹ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕನ್ನಡ- ತುಳು ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿ, ಸಮಾವೇಶಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಸಾಧಕರಿಗೆ ಸನ್ಮಾನ, ಉಪನ್ಯಾಸ, ಕಾವ್ಯವಾಚನ- ಪ್ರವಚನ, ವ್ಯಾಖ್ಯಾನ ಇತ್ಯಾದಿಗಳು ನಡೆಯುತ್ತಿರುತ್ತವೆ.ಸ್ಥಳೀಯರಲ್ಲಿ ಸಾಂಸ್ಕೃತಿಕ ಆಸಕ್ತಿ ಹೆಚ್ಚುತ್ತದೆ. ಕೈಂತಜೆ ನರಸಿಂಹ ಭಟ್ಟರು ರಚಿಸಿರುವ “ ಶ್ರೀ ಹನುಮದ್ವಿಲಾಸಮ್ ” ಕಾವ್ಯ ವಾಚನ- ಪ್ರವಚನ ಇಲ್ಲಿ ನಡೆದಿರುತ್ತದೆ.

“ ಸಂಸ್ಕಾರ ಪ್ರಜ್ಞಾ ದೀಪಿಕಾ ” ಕಾರ್ಯಕ್ರಮಗಳು ಹಲವಾರು. ಸನಾತನ ಸಂಸ್ಕಾರ ಸಂಕಲ್ಪ ಅಭಿಯಾನದ ಮೂಲಕ ಬಂಟ್ವಾಳ ತಾಲೂಕಿನ ೮೪ ಗ್ರಾಮಗಳ ಎಲ್ಲಾ ಮನೆಗಳಿಗೆ ಸುಮಾರು ಒಂದುಲಕ್ಷ ಭಗವದ್ಗೀತೆ ಪುಸ್ತಕಗಳ ಉಚಿತ ವಿತರಣೆ ನಡೆದಿದೆ. ಯೋಗ, ಪ್ರಾಣಾಯಾಮ, ಮಾನವೀಯ ಮೌಲ್ಯಗಳ ಅವಶ್ಯಕತೆಗಳನ್ನು ಮನೆಮನೆಗೆ ತಲುಪಿಸುವ ಉತ್ತಮಯೋಜನೆಯೊಂದಿಗೆ ಶ್ರೀ ಗುರುದೇವ ಸಂಸ್ಕಾರ ಕೇಂದ್ರಗಳನ್ನು ತೆರೆಯಲಾಗಿದೆ.

ಗೋ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಗೋಶಾಲೆಯನ್ನು ನಿರ್ಮಿಸಿ, ಹೈನುಗಾರಿಕೆಯ ಪ್ರಯೋಜನ, ಮಹತ್ವಗಳನ್ನು ಗ್ರಾಮೀಣ ರೈತರಿಗೆ ತಿಳಿಸಿಕೊಡಲಾಗುತ್ತದೆ. ೨೦೦ ಕ್ಕೂ ಮಿಕ್ಕಿದ ಗೋ ಸಂಪತ್ತು ಇಲ್ಲಿದೆ.

ಸ್ವಾವಲಂಬನೆಯ ಪಾಠವನ್ನು ಕಲಿಸಲಾಗುತ್ತದೆ. ಬಾಲವಿಕಾಸ, ಮಹಿಳಾವಿಕಾಸ ಕಾರ್ಯಕ್ರಮಗಳು, ಹೊಲಿಗೆ ಮತ್ತು ಕಸೂತಿ ತರಬೇತಿ, ಹೊಲಿಗೆಯಂತ್ರ ಹಾಗೂ ಸಹಾಯಧನ ವಿತರಣೆ, ಶಿಕ್ಷಣ, ಆರೋಗ್ಯ ಕಾರ್ಯಕ್ರಮಗಳು, ಮನೆ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣ, ಶ್ರದ್ಧಾಕೇಂದ್ರಗಳ ನಿರ್ಮಾಣ, ಹಿಂದೂರುದ್ರಭೂಮಿ ಅಭಿವೃದ್ಧಿ, ಸಾವಯವಕೃಷಿ ತರಬೇತಿ ಶಿಬಿರ, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು, ಮಾತೃಮಂಡಳಿಗಳು, ವೈದ್ಯಕೀಯ ಶಿಬಿರಗಳು, ವಿಕಾಸವಾಹಿನಿ ಘಟಕಗಳು, ನಿತ್ಯ ಅನ್ನದಾನ, ದುಶ್ಚಟ-ದುರ್ವ್ಯಸನಗಳಿಂದ ಮುಕ್ತರಾಗಲು ಪ್ರೇರಣೆ,...ಮೊದಲಾದ ಉಪಯುಕ್ತವಾದ ಕೆಲಸಗಳನ್ನು ನಡೆಸಲಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.[೧] ಒಡಿಯೂರು ಗ್ರಾಮವಿಕಾಸ ಯೋಜನೆ : ಗ್ರಾಮಗಳ ದತ್ತು ಸ್ವೀಕಾರದ ಮೂಲಕ ಗ್ರಾಮಾಭಿವೃದ್ಧಿ. ಸ್ವಸಹಾಯ ಗುಂಪುಗಳನ್ನು ರಚಿಸಿ, ಜನಸಾಮಾನ್ಯರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಆತ್ಮ ವಿಶ್ವಾಸವನ್ನು ತುಂಬುವುದು, ಸಹಕಾರ ತತ್ವ, ಸ್ವಾವಲಂಬನೆ, ಉಳಿತಾಯ ಮನೋಭಾವನೆ, ವ್ಯವಹಾರ ಕುಶಲತೆ, ನಾಯಕತ್ವ ನಿರ್ವಹಣೆ ಮೊದಲಾದ ಪ್ರಗತಿಪರ ವಿಚಾರಗಳನ್ನು ಅವರಲ್ಲಿ ತುಂಬಿ ವ್ಯಕ್ತಿತ್ವ ನಿರ್ಮಾಣ ಮಾಡುವುದು, ಭಗವದ್ಗೀತೆ,ಪ್ರಾಣಾಯಾಮ,ಯೋಗ, ಧ್ಯಾನ ಇವುಗಳ ನಿರಂತರ ಅಭ್ಯಾಸ, ಸಂಪನ್ಮೂಲ ವ್ಯಕ್ತಿಗಳಿಂದ ಉದಾತ್ತ ವಿಷಯಗಳ ಚಿಂತನ-ಮಂಥನ, ಭಜನೆ, ಶ್ರಮಸೇವೆಗಳ ಮೂಲಕ ಸೇವಾಮನೋಭಾವನೆ ಬೆಳೆಸಿಕೊಳ್ಳುವುದು, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು, ಹೀಗೆ ಜನಸಾಮಾನ್ಯರ ಜೀವನ ವಿಕಾಸವೇ ಗ್ರಾಮವಿಕಾಸ.[೨]

ಗ್ರಾಮ ಸ್ವಚ್ಛತೆ : ೨೦೦೧ ರಿಂದೀಚೆಗೆ ಪ್ರತಿವರ್ಷವೂ ಗ್ರಾಮೋತ್ಸವದಂದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಗ್ರಾಮಗಳಲ್ಲಿ “ ಗ್ರಾಮಸ್ವಚ್ಛತಾ” ಅಭಿಯಾನ ಜರುಗುತ್ತಿದೆ. ಆ ಸಮಯದಲ್ಲಿ ಭಕ್ತರು ಸಮರ್ಪಿಸುವ ಎಲ್ಲಾ ವಸ್ತುಗಳನ್ನೂ ಪುನಃ ಸಮಾಜಕ್ಕೇ ಉಪಯೋಗಿಸಲಾಗುತ್ತದೆ. ಅಂದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ, ಅಂಗವಿಕಲರಿಗೆ ಉಪಕರಣ, ವೃದ್ಧರಿಗೆ ನೆರವು ಔಷಧೀಯ ಸಸಿಗಳ ವಿತರಣೆ ಮೊದಲಾದ ಕಾರ್ಯಗಳಿಗೆ ಬಳಕೆಯಾಗುತ್ತದೆ.

ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆ, ಎ.ಜೆ ಆಸ್ಪತ್ರೆ, ಕೆ.ಎಂ.ಸಿ, ವೆನ್ ಲಾಕ್ ಆಸ್ಪತ್ರೆಯ ಸಹಕಾರದೊಂದಿಗೆ ಚಿಕಿತ್ಸಾ ಶಿಬಿರಗಳನ್ನು ನಡೆಸಿರುತ್ತಾರೆ. ರಕ್ತದಾನ ಶಿಬಿರಗಳನ್ನೂ ಮಾಡಿರುತ್ತಾರೆ.

ಸಮಾಜಮುಖೀ ಸೇವೆಗೆ ಶಕ್ತಿಸ್ತಂಭಗಳಂತಿರುವ ಒಡಿಯೂರು ಶ್ರೀ ಗುರುದೇವ ಸೇವಾಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸಕೇಂದ್ರ ಸಂಸ್ಥೆಗಳ ಶಾಖೆಗಳು ಮಂಗಳೂರು, ಪುತ್ತೂರು, ದಾವಣಗೆರೆ, ಮುಂಬಯಿ, ಪೂನಾ, ಬರೋಡ, ಅಹಮದಾಬಾದ್, ನಾಸಿಕ್, ತಿರುವನಂತಪುರ, ಕಾಸರಗೋಡುಗಳಲ್ಲಿವೆ. [೩]

ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾಯಿಸಿ

೩ ರಿಂದ ೫ ವರ್ಷದ ಪುಟಾಣಿಗಳಿಗೆ ಆರಂಭವಾದ ಶ್ರೀ ಗುರುದೇವ ಗುರುಕುಲ, ಇದೀಗ ಆಂಗ್ಲಮಾಧ್ಯಮವಾಗಿ ಪರಿವರ್ತನೆ ಹೊಂದಿ, ಒಡಿಯೂರು, ಕನ್ಯಾನ, ಕುಡ್ಪಲ್ತಡ್ಕ, ಬೇಡಗುಡ್ಡೆಯಲ್ಲಿ ಎಲ್.ಕೆ.ಜಿ.ಮತ್ತು ಯು.ಕೆ.ಜಿ. ತರಗತಿಗಳು ಕಾರ್ಯನಿರ್ವಹಿಸುತ್ತಿವೆ. ಅದಲ್ಲದೆ ಈ ಕೆಳಗಿನ ಶಿಕ್ಷಣ ಸಂಸ್ಥೆಗಳನ್ನೂ ನಡೆಸಲಾಗುತ್ತಿದೆ.

  • ಶ್ರೀ ಗುರುದೇವ ಕನ್ನಡಮಾಧ್ಯಮ ಪ್ರೌಢಶಾಲೆ (೨೦೦೧)
  • ಶ್ರೀ ಗುರುದೇವ ಆಂಗ್ಲಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ (೨೦೦೬)
  • ಶ್ರೀ ಗುರುದೇವ ಹಿರಿಯ ಪ್ರಾಥಮಿಕ ಶಾಲೆ (೨೦೧೧)
  • ಶ್ರೀ ಗುರುದೇವ ಆಂಗ್ಲಮಾಧ್ಯಮ ಪ್ರೌಢಶಾಲೆ (೨೦೧೫)

ಈ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ೩೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದ ಶಿಕ್ಷಣವ್ಯವಸ್ಥೆಯಿದ್ದು ಕನ್ನಡಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸೆಟಲೈಟ್ ಆಧಾರಿತ ಶಿಕ್ಷಣ ವ್ಯವಸ್ಥೆಯಿದೆ. ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಮತ್ತು ಮಧ್ಯಾಹ್ನದ ಬಿಸಿಯೂಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಸರಕಾರದ ಯಾವುದೇ ಅನುದಾನ ಈ ವಿದ್ಯಾಸಂಸ್ಥೆಗೆ ಇರುವುದಿಲ್ಲ. ಕೃಷಿ ಬದುಕಿನ ಪಾಠವನ್ನು ಕಲಿಸುವ ಉದ್ದೇಶದಿಂದ ಬನಾರಿಯಲ್ಲಿರುವ ಭತ್ತದಕೃಷಿ ಗದ್ದೆಗೆ ಕರೆದುಕೊಂಡು ಹೋಗಿ ಸಾಧ್ವಿ ಶ್ರೀ ಮಾತಾನಂದಮಯೀಯವರ ಉಪಸ್ಥಿತಿಯಲ್ಲಿ ಗದ್ದೆಗಳಿಗಿಳಿದು ನಾಟಿಮಾಡುವ ಪ್ರಾತ್ಯಕ್ಷಿಕೆಯ ಶಿಕ್ಷಣವನ್ನು ನೀಡಲಾಗುತ್ತಿದೆ.

  • ಒಡಿಯೂರು ಶ್ರೀ ಗುರುದೇವ ಐ.ಟಿ.ಐ.(೨೦೧೨) ಯನ್ನು ಆರಂಭಿಸಲಾಗಿದೆ. ಶ್ರೀ ಗುರುದೇವ ಪಬ್ಲಿಕ್ ಚಾರಿಟೇಬಲ್ ಟ್ರುಸ್ಟ್ (ರಿ) ಒಡಿಯೂರು ಇದರ ವತಿಯಿಂದ ನಡೆಯುವ ಈ ಐ.ಟಿ.ಐ. ಯಲ್ಲಿ ಡ್ರಾಫ್ಟ್ಸ್ ಮೆನ್ ಸಿವಿಲ್, ಇಲೆಕ್ಟ್ರೀಷಿಯನ್, ಮೆಕಾನಿಕ್, ರೆಫ್ರಿಜರೇಷನ್ ಮತ್ತು ಏರ್ಕಂಡೀಷನಿಂಗ್ ಎಂಬ ೨ ವರ್ಷದ ವೃತ್ತಿತರಬೇತಿಯನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ವೃತ್ತಿಶಿಕ್ಷಣ ಪರಿಷತ್ತು ನದೆಹಲಿ (NCVT) ಇದರ ಸಂಯೋಜನೆ ಹಾಗೂ Quality Council of India ಇದರ ಮಾನ್ಯತೆಯನ್ನು ಪಡೆದಿರುತ್ತದೆ. ಪ್ರಯೋಗಾಲಯ, ಗ್ರಂಥಾಲಯ, ನುರಿತ ತರಬೇತುದಾರರ ತಂಡವಿದ್ದು, ತರಬೇತಿ ಜತೆಗೆ ಕಂಪ್ಯೂಟರ್ ಮತ್ತು ಆಂಗ್ಲಭಾಷಾ ತರಬೇತಿಯನ್ನು ಕೊಡಲಾಗುತ್ತಿದೆ. ಪ್ರಸಿದ್ಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕಾ ಸಂಸ್ಥೆಗಳ ಜತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಶ್ರೀ ಗುರುದೇವ ಪ್ರಕಾಶನ ಬದಲಾಯಿಸಿ

 
ಫುಸ್ತಕ ಬಿಡುಗಡೆ

ದತ್ತ ತತ್ವ ಪ್ರಚಾರ- ಪ್ರಸಾರಕ್ಕಾಗಿ ಆರಂಭಗೊಂಡ ಸಂಸ್ಥೆ ದತ್ತ ತತ್ವ ಜ್ಞಾನ ಪ್ರಚಾರ ಸಮಿತಿ. ಇದರ ಒಂದು ಭಾಗವೇ ಶ್ರೀ ಗುರುದೇವ ಪ್ರಕಾಶನ. ಗುರುದೇವ ಭಜನಾಮೃತ, ಅವಧೂತನ ಅಂತರಂಗ, ಅವಧೂತಾಮೃತ, ಗುರುಗೀತಾ, ಪುಷ್ಪಾಂಜಲಿ, ಶ್ರೀ ಗುರುಚರಿತಾಮೃತ ಮೊದಲಾದ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಆಧ್ಯಾತ್ಮಿಕ ಸಾಹಿತ್ಯಕೃತಿಗಳ ಮುದ್ರಣ, ಪ್ರಕಟಣೆಯ ಮೂಲಕ ಗುರುತತ್ವವನ್ನು ಪ್ರಚುರಗೊಳಿಸುವುದು ಪ್ರಧಾನ ಉದ್ದೇಶ. ದ್ವೈಮಾಸಿಕ ಆಧ್ಯಾತ್ಮಿಕ ಪತ್ರಿಕೆ “ದತ್ತ ಪ್ರಕಾಶ” ಇದರ ಕೊಡುಗೆ.

ಪಂಚ ಪರ್ವಗಳು ಬದಲಾಯಿಸಿ

  • ಪ್ರತಿಷ್ಠಾಮುಹೂರ್ತವನ್ನು ಲಕ್ಷಿಸಿ, ಪ್ರತಿಷ್ಠಾವರ್ಧಂತಿ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ ಜರುಗುವುದು. ಆ ದಿನ ಬೆಳಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕೈಗೊಳ್ಳಲಾಗುವುದು.[ಒಡಿಯೂರುರಥೋತ್ಸವ]
  • ಹನುಮಜ್ಜಯಂತಿ : ಶ್ರೀ ರಾಮನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು,ಹನುಮಯಾಗ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮಜಯಂತಿ ಸಮಾಪನಗೊಳ್ಳುವುದು
  • ನಾಗರಪಂಚಮಿ : ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಸಾನ್ನಿಧ್ಯವಿರುವ ಇಲ್ಲಿ ನಾಗರಪಂಚಮಿಯಂದು ಸಾರ್ವಜನಿಕ ಆಶ್ಲೇಷ ಬಲಿಪೂಜೆ ಜರಗುವುದು. ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಸೇವೆಗಳನ್ನು ಶ್ರೀ ಸುಬ್ರಾಯ ದೇವರಿಗೆ ಈ ಸಂದರ್ಭದಲ್ಲಿ ಸಲ್ಲಿಸಲಾಗುವುದು.[೪]
  • ಲಲಿತಾಪಂಚಮಿ : ನವರಾತ್ರಿಯ ಸಮಯದಲ್ಲಿ ಲಲಿತಾ ಪಂಚಮಿಯಂದು ಶ್ರೀ ಚಂಡಿಕಾಯಾಗ, ಶ್ರೀ ಲಲಿತಾಸಹಸ್ರನಾಮ ಪಠಣ, ಸಪ್ತಶತೀ ಪಾರಾಯಣ, ಅಷ್ಟಾವಧಾನ ಸೇವೆಗಳು ನಡೆಯುವವು. ಅಲ್ಲದೇ ಶ್ರೀ ಶಾರದಾ ದೇವಿಯ ಆರಾಧನೆ, ಸಾಮೂಹಿಕ ವಿದ್ಯಾರಂಭ, ಶ್ರೀ ಸರಸ್ವತಿ ಹವನ ಮಾಡಲಾಗುವುದು.[[ಶಾಶ್ವತವಾಗಿ ಮಡಿದ ಕೊಂಡಿ] ಲಲಿತಾಪಂಚಮಿ]
  • ದತ್ತಜಯಂತಿ : ಈ ಉತ್ಸವವು ಒಂದುವಾರಗಳ ಕಾಲ ಜರುಗುವುದು. ಗುರುಚರಿತ್ರೆ ಪಾರಾಯಣ, ದತ್ತಾರಾಧನೆ, ದತ್ತಮಾಲಾ ಧಾರಣೆ ನಡೆಯುವುದು. ಹುಣ್ಣಿಮೆಯ ದಿನ ಶ್ರೀ ದತ್ತಮಹಾಯಾಗ ಪೂರ್ಣಾಹುತಿಯಾದ ಬಳಿಕ ಶ್ರೀಗಳವರಿಂದ ಮಧುಕರೀ ಸೇವೆ ಜರಗುವುದು.

ತುಳು ಭಾಷೆ- ಸಂಸ್ಕೃತಿಯ ಪೋಷಣೆ ಬದಲಾಯಿಸಿ

ತುಳು ಭಾಷೆ, ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಎಲ್ಲರಲ್ಲೂ ಈ ಬಗ್ಗೆ ಕಾಳಜಿ ಮೂಡಿಸುವ ನಿರಂತರ ಕಾರ್ಯಕ್ರಮಗಳು ಜರುಗುತ್ತಿವೆ. ೨೦೦೧ ರಲ್ಲಿ ತುಳುನಾಡಿನಲ್ಲೇ ಪ್ರಪ್ರಥಮವಾಗಿ “ತುಳು ಸಾಹಿತ್ಯ ಸಮ್ಮೇಳನ” ಯಶಸ್ವಿಯಾಗಿ ಜರಗಿದೆ. ಆಗ “ಒಡಿಯೂರ್ದ ತುಡರ್” ಎಂಬ ಸ್ಮರಣ ಸಂಚಿಕೆ ಹೊರತರಲಾಗಿತ್ತು. ೨೦೦೭ ರಲ್ಲಿ ಜರಗಿದ ಸಾಹಿತ್ಯ ಸಮ್ಮೇಳನದಲ್ಲಿ “ತುಳು ಐಸಿರೊ” ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಗಿದೆ.[೫] ಒಡಿಯೂರ್ದ ತುಳುಕೂಟ ಎಂಬ ಸಂಘಟನೆಯನ್ನು ಸ್ಥಾಪಿಸಿ, ತುಳು ಪೋಷಣೆಯ ಕೆಲಸಗಳು ನಡೆಯುತ್ತಿವೆ. ಮಕ್ಕಳಲ್ಲಿ ತುಳುಭಾಷೆಯ ಅಭಿಮಾನ ಮೂಡಿಸುವ, ತುಳು ಸಾಹಿತ್ಯ ರಚನೆಗೆ ಪ್ರೋತ್ಸಾಹಿಸುವ ಸಲುವಾಗಿ ವಿದ್ಯಾರ್ಥಿ ತುಳುಕೂಟ ರಚಿಸಿ ಮಕ್ಕಳ ತುಳುಸಾಹಿತ್ಯ ಸಮ್ಮೇಳನ ಸಂಘಟಿಸಲಾಗಿತ್ತು. ತುಳುನಾಡ್ದ ಜಾತ್ರೆ-ಒಡಿಯೂರು ರಥೋತ್ಸವದಂದು, ಪ್ರತೀವರ್ಷವೂ ‘ತುಳುವೆರೆ ತುಲಿಪು’, ತುಳು ಸಮ್ಮೇಳನ’ ನಡೆಸಲಾಗುತ್ತಿದೆ. ತುಳುನಾಡು ಎಂದರೆ ಭತ್ತ-ಅಕ್ಕಿಯ ಸಂಸ್ಕೃತಿ. ಯುವಪೀಳಿಗೆಗೆ ಕೃಷಿಆಸಕ್ತಿ ಮೂಡಿಸುವ ಸಲುವಾಗಿ, ‘ಕೆಸರ್ ಡೊಂಜಿ ದಿನ’,“ಆಟಿದ ಆಯನೊ’ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಭವಿಷ್ಯದ ಯೋಜನೆಗಳು ಬದಲಾಯಿಸಿ

ಅಪೂರ್ವ ಔಷಧೀಯ ಗಿಡಮೂಲಿಕೆಗಳ ಸಂರಕ್ಷಣೆಯ ಉದ್ದೇಶದಿಂದ “ಆದಿಹನುಮಗಿರಿ ಆರೋಗ್ಯಧಾಮ” ನಿರ್ಮಿಸುವ ಯೋಜನೆ ರೂಪಿತಗೊಂಡಿದೆ. ಆಯುರ್ವೇದ ಔಷಧೋಪಚಾರಕ್ಕೆ ಪೂರಕವಾದ ಬಹುತೇಕ ಗಿಡಮೂಲಿಕೆಗಳನ್ನು ಬೆಳೆಸಿ , ಪೋಷಿಸುವ ಉದ್ದೇಶವಿದೆ.

ಆಧ್ಯಾತ್ಮ ಭವನ ಬದಲಾಯಿಸಿ

ವೃತ್ತಿಯಿಂದ ನಿವೃತ್ತರಾಗಿ, ಸಮಾಜ ಸೇವೆ, ಸಾಹಿತ್ಯ, ವ್ಯವಸಾಯ, ಸತ್ಸಂಗ, ಆತ್ಮ ಚಿಂತನೆಯ ಮೂಲಕ ಮಾನಸಿಕ ಶಾಂತಿಯನ್ನು ಕಂಡುಕೊಳ್ಳುವವರಿಗಾಗಿ ಆಧ್ಯಾತ್ಮ ಭವನ ನಿರ್ಮಾಣದ ಯೋಜನೆಯಿದೆ. ವಿಸ್ತೃತ ಪುಸ್ತಕ ಭಂಡಾರ, ಆಧ್ಯಾತ್ಮ ವಿಚಾರ ವೇದಿಕೆ, ಯೋಗ, ಧ್ಯಾನಗಳ ಮೂಲಕ ವಿಶ್ರಾಂತ ಬದುಕನ್ನು ಸುಂದರಗೊಳಿಸುವುದು ಮೂಲ ಉದ್ದೇಶ.

ದಕ್ಷಿಣದ ಗಾಣಗಾಪುರವೆಂದು ಹೆಸರು ಮಾಡಿದೆ ಈ ದತ್ತಾಂಜನೇಯ ಕ್ಷೇತ್ರ.

ಒಡಿಯೂರು ಶ್ರೀ ಶ್ರೀ ಗುರುದೇವಾನಂದರು

 
ಶ್ರೀ ಶ್ರೀ ಗುರುದೇವಾನಂದರು

ಕೇರಳ- ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಒಡಿಯೂರಿನಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಒಡಿಯೂರು ಪೆರ್ಗಡೆ ಶೆಟ್ರು- ಅಂತಕ್ಕ ರವರ ಪುತ್ರನಾಗಿ ೦೮-೦೮-೧೯೬೧ ರಲ್ಲಿ ಜನಿಸಿದರು. ಸಣ್ಣ ಪ್ರಾಯದಲ್ಲೇ ಪಾರಮಾರ್ಥಿಕದತ್ತ ಒಲವು, ಆಧ್ಯಾತ್ಮಿಕ ಜೀವನವನ್ನು ತನ್ನದಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತನ್ನ ಬದುಕನ್ನು ರೂಪಿಸಿಕೊಂಡರು. ಕೆಲವು ವರ್ಷ ಗಾಣಗಾಪುರದಲ್ಲಿದ್ದು ಸಾಧನೆಯನ್ನು ಮಾಡಿದರು. ಅವಧೂತ ಮುನಿ ಶ್ರೀ ವಿವೇಕಾನಂದ ಮುನಿಗಳು ಇವರ ಗುರುಗಳು. ತಾನು ಹುಟ್ಟಿ ಬೆಳೆದ ಊರಿನ ಉದ್ಧಾರವನ್ನು ಮೊದಲಾಗಿ ಪ್ರಾರಂಭಿಸಲು ತೊಡಗಿ, ಅವಧೂತ ಪರಂಪರೆಯ ಪಥವನ್ನು ಹಿಡಿದು, ಸಮಾಜಸೇವೆಯಲ್ಲಿ ಆನಂದವನ್ನು ಪಡೆದರು. ‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಿದ್ದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕೃತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನುಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕು’ ಎನ್ನುವ ಶ್ರೀಗಳು ಸಾಮಾಜಿಕ ಸ್ಪಂದನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ‘ಗ್ರಾಮ ವಿಕಾಸವೆಂದರೆ ದೇಶದ ಪ್ರಗತಿ. ಗ್ರಾಮಾಭಿವೃದ್ಧಿಯಾಗಬೇಕಾದರೆ ಗ್ರಾಮದ ಜನರ ಅಭಿವೃದ್ಧಿಯಾಗಬೇಕು’ ಹಾಗೂ ‘ಯತಿಗಳಿಗೆ ಜನ್ಮದಿನಾಚರಣೆಯ ಸಂಭ್ರಮವು ಸಲ್ಲದು’ ಎಂಬುದು ಇವರ ನಿಲುವು. ಅಂತೆಯೇ ಇವರ ಜನ್ಮದಿನವನ್ನು ಗ್ರಾಮೋತ್ಸವವಾಗಿ ಆಚರಿಸಲಾಗುತ್ತದೆ.[೬] ೨೦೦೧ ರಲ್ಲಿ ಆರಂಭವಾದ ಗ್ರಾಮೋತ್ಸವದಲ್ಲಿ ಕರೋಪಾಡಿ- ಕನ್ಯಾನ ಅವಳಿ ಗ್ರಾಮಗಳನ್ನು ದತ್ತುಸ್ವೀಕರಿಸಿ, ಗ್ರಾಮದುದ್ದಕ್ಕೂ ಸಂಸ್ಕೃತಿ -ಸಂಸ್ಕಾರ ಕಾರ್ಯಕ್ರಮಗಳೊಂದಿಗೆ ವ್ಯಕ್ತಿತ್ವ ವಿಕಸನ ಶಿಕ್ಷಣ, ಗ್ರಾಮಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಯೋಜನೆಯ ದಶಮಾನೋತ್ಸವ (೨೦೧೧)ಸಂದರ್ಭದಲ್ಲಿ ೧೦ ಗ್ರಾಮಗಳನ್ನು ಸೇವಾಗ್ರಾಮಗಳಾಗಿ ಸ್ವೀಕಾರಮಾಡಲಾಗಿತ್ತು. ದುಶ್ಚಟ ಮುಕ್ತ ಹಾಗೂ ಸಾಮರಸ್ಯ ಸಮಾಜದ ನಿರ್ಮಾಣಕ್ಕಾಗಿ ಸುಮಾರು ೪೦೦೦೦ ಮನೆ ಮನೆ ಭೇಟಿ ಕಾರ್ಯಕ್ರಮ ಮಾಡಿದ್ದರು. ೨೦೦೯ ರಲ್ಲಿ ಮಂಡಲೋತ್ಸವದ ಸವಿನೆನಪಿನಲ್ಲಿ ‘‘ಕಮಂಡಲ” ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

 
ಕಮಂಡಲ ಸ್ಮರಣಸಂಚಿಕೆ ಬಿಡುಗಡೆ

ಶ್ರೀ ಸಂಸ್ಥಾನದ ಬೆಳ್ಳಿಹಬ್ಬ (೨೦೧೪)ದ ನೆನಪಿಗಾಗಿ ತುಳುನಾಡಿನಾದ್ಯಂತ “ತುಳುನಾಡ ಜಾತ್ರೆ ಬಲೇ.....ತೇರ್ ಒಯಿಪುಗಾ’ ಕಾರ್ಯಕ್ರಮದ ಮೂಲಕ ತುಳುವರನ್ನು ಒಗ್ಗೂಡಿಸುವ, ತುಳು ಭಾಷೆ ಸಂಸ್ಕೃತಿಯನ್ನು ಮೇಲೆತ್ತುವ ಕೆಲಸ ಒಡಿಯೂರು ಗ್ರಾಮವಿಕಾಸ ಯೋಜನೆಯ ಮೂಲಕ ಮಾಡಲಾಯಿತು. ನಾನು- ನನ್ನದು- ನನ್ನಿಂದಾದುದು ಶೂನ್ಯವಾಗಿರಲಿ ಎಂಬುದು ಇವರ ಧ್ಯೇಯ ವಾಕ್ಯ.

ಯೋಗಿನಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ

 
ಶ್ರೀ ಶ್ರೀ ಮಾತಾನಂದಮಯೀ

ಭಕ್ತಿ ಪಥದಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಸಲ್ಲದು.ಪುರುಷನೋರ್ವ ವೈರಾಗ್ಯ ಜೀವನದಲ್ಲಿ ಆತ್ಮಸಂಧಾನದ ಮೂಲಕ ಪರತತ್ವವನ್ನು ಕಂಡುಕೊಳ್ಳುವುದಾದರೆ, ಅಂತಹ ಹಂಬಲವಿರುವ ಹೆಣ್ಣುಮಕ್ಕಳೂ ಆ ಸನ್ಮಾರ್ಗವನ್ನು ಆಯ್ದುಕೊಳ್ಳಲು ಅರ್ಹರು ಎಂಬುದು ಒಡಿಯೂರು ಶ್ರೀಗಳ ನಿಲುವು.ಅಂತೆಯೇ ಭಜನೆ, ಸತ್ಸಂಗ, ಸಂಗೀತ, ಆಧ್ಯಾತ್ಮಿಕ ಚಿಂತನೆಯಲ್ಲಿ ಅನನ್ಯ ಶ್ರದ್ಢೆಯಿದ್ದ ಶಾರಿಕಾ (ಪೂರ್ವಾಶ್ರಮದ ಹೆಸರು) ಎಂಬ ಹೆಣ್ಣುಮಗಳೊಬ್ಬಳಿಗೆ ದಿನಾಂಕ ೧೮-೧೧-೧೯೯೭ ರಂದು ಗಾಣಗಾಪುರದ ದತ್ತಸನ್ನಿಧಿಯಲ್ಲಿ ಆಧ್ಯಾತ್ಮ ಜೀವನದ ದೀಕ್ಷೆ ನೀಡಿ, ಶ್ರೀ ಮಾತಾನಂದಮಯೀ ಎಂದು ನಾಮಕರಣ ಮಾಡಿದರು. ಅವರೀಗ ಇಲ್ಲಿನ ಅವಧೂತ ಯೋಗಿನಿಯಾಗಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. https://bantwalnews.com/2020/07/19/odiyoor-gramavikas-yojane/
  2. https://vijaykarnataka.com/news/udupi/-/articleshow/32974730.cms
  3. https://bantwalnews.com/2020/04/13/odiyoor-65/
  4. http://epaper.udayavani.com/EditionPage/EPpage.php?edn=Manipal&isid=UVANI_SPTS_20200726#Page/1[ಶಾಶ್ವತವಾಗಿ ಮಡಿದ ಕೊಂಡಿ]
  5. "ಆರ್ಕೈವ್ ನಕಲು". Archived from the original on 2018-01-28. Retrieved 2020-08-03.
  6. https://bantwalnews.com/2020/07/19/odiyoor-66/

ಬಾಹ್ಯ ಸಂಪರ್ಕಗಳು ಬದಲಾಯಿಸಿ

https://www.udayavani.com/homepage-karnataka-edition/karavali/karavali-puttur-belthangady/odiyuru-car-festival ೨https://samskruti.udayavani.com/odiyoor-lalita-panchami-chandika-mahayaga/ Archived 2020-10-22 ವೇಬ್ಯಾಕ್ ಮೆಷಿನ್ ನಲ್ಲಿ. ೩ https://vijaykarnataka.com/news/mangaluru/-/articleshow/15005075.cms https://www.udayavani.com/homepage-karnataka-edition/karavali/karavali-puttur-belthangady/the-sacrifice-of-desire-is-the-birth-of-bliss-odiyuru-sri