ನಾಸಿಕ್ (ಅಧಿಕೃತ ಹೆಸರು : ನಾಶಿಕ್) ಮಹಾರಾಷ್ಟ್ರದ ಒಂದು ನಗರ. ಮುಂಬಯಿಯಿಂದ ೧೮೦ ಮತ್ತು ಪುಣೆಯಿಂದ ೨೨೦ ಕಿಮೀ ದೂರದಲ್ಲಿ ಉತ್ತರ-ಪಶ್ಚಿಮದಲ್ಲಿದೆ. ಇದು ನಾಸಿಕ್ ವಿಭಾಗ ಮತ್ತು ನಾಸಿಕ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವೂ ಹೌದು. "ಭಾರತದ ದ್ರಾಕ್ಷಾರಸದ ರಾಜಧಾನಿ " ಅಥವಾ “ದ್ರಾಕ್ಷಿ ನಗರ” ಎಂದು ಕೂಡಾ ಹೆಸರಾಗಿರುವ ನಾಸಿಕ್ ಗೋದಾವರಿ ನದಿಯ ತೀರದಲ್ಲಿ, ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಹರಡಿಕೊಂಡಿದೆ.ರಮಣೀಯ ಪ್ರಕೃತಿ ಸಂಪತ್ತು ಮತ್ತು ಚೇತೋಹಾರಿ ಹವಾಮಾನಕ್ಕೂ ಇದು ಹೆಸರಾಗಿದೆ. ಗೋದಾವರಿ ನದಿಯ ಉಗಮಸ್ಥಾನ ತ್ರ್ಯಂಬಕೇಶ್ವರ ನಾಸಿಕದ ಹತ್ತಿರದಲ್ಲಿಯೇ ಇದೆ. ಭರದಿಂದ ಬೆಳೆಯುತ್ತಿರುವ ಈ ನಗರದ ೨೦೦೬ರ ಅಂದಾಜು ಜನಸಂಖ್ಯೆ ೧೪ ಲಕ್ಷ.

ನಾಸಿಕ್ ಪೌರಾಣಿಕ, ಐತಿಹಾಸಿಕ, ಸಾಮಾಜಿಕ,ಸಾಂಸ್ಕೃತಿಕ ದೃಷ್ಟಿಯಿಂದಲೂ ಮುಖ್ಯವಾದ ಪಟ್ಟಣ.ಗೋದಾವರಿ ನದಿಯ ದಡದಲ್ಲಿರುವ ಅನೇಕ ಪುರಾತನ ದೇವಾಲಯಗಳಿಂದ ಪ್ರಸಿದ್ಧವಾಗಿರುವ ನಾಸಿಕ್ ಹಿಂದೂಗಳ ಪವಿತ್ರ ಯಾತ್ರಾಸ್ಥಳವೂ ಹೌದು. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಬೃಹತ್ ಸಿಂಹಸ್ಥ ಕುಂಭಮೇಳ ನಡೆಯುವ ಭಾರತದ ನಾಲ್ಕು ಸ್ಥಳಗಳಲ್ಲಿ ನಾಸಿಕ್ ಒಂದು.

ಇತಿಹಾಸ ಸಂಪಾದಿಸಿ

ಇಲ್ಲಿಯ ಹೆಸರುರಾಮಾಯಣದಿಂದ ಬಂದಿದೆ ಎಂದು ಸ್ಥಳಪುರಾಣ ಹೇಳುತ್ತದೆ. ರಾಮನು ವನವಾಸದಲ್ಲಿದ್ದಾಗ ಶೂರ್ಪನಖಿ ರಾಮನನ್ನು ಬಯಸುತ್ತಾಳೆ. ಕೋಪಗೊಂಡ ರಾಮ ಶೂರ್ಪನಖಿಯ ಮೂಗು ಕತ್ತರಿಸುವಂತೆ ತಮ್ಮ ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ. ನಾಸಿಕ್ (ಸಂಸ್ಕೃತದಲ್ಲಿ ಮೂಗು)ಎಂಬ ಹೆಸರು ಈ ಕಥೆಯಿಂದ ಬಂದಿದೆ ಎನ್ನುತ್ತಾರೆ. ರಾವಣ ಸೀತೆಯನ್ನು ಅಪಹರಿಸಿದ ಸ್ಥಳ ಎಂದು ಹೇಳಲಾದ ಪಂಚವಟಿ , ನಾಸಿಕ್ ನಗರದಲ್ಲಿಯೇ ಇದ್ದು , ಅನೇಕ ಧಾರ್ಮಿಕರನ್ನು ಆಕರ್ಷಿಸುತ್ತದೆ. ಇಲ್ಲಿಯ ಅತಿ ಗಮನಾರ್ಹ ಐತಿಹಾಸಿಕ ಸ್ಥಳವೆಂದರೆ , ತ್ರಿರಶ್ಮಿ ಅಥವಾ ಪಾಂಡವರ ಗುಹೆಗಳು. ಗುಡ್ಡದಲ್ಲಿ ಕಲ್ಲಿನಲ್ಲಿ ಕಡೆದ ಈ ಗುಹೆಗಳು ಮೂಲತಃ ಬುದ್ಧವಿಹಾರಗಳು. ಇಲ್ಲಿ ಕಂಡುಬರುವ ವಿಪುಲ ಬ್ರಾಹ್ಮಿ ಲಿಪಿಯ ಬರಹಗಳ ಪ್ರಕಾರ ನಾಸಿಕ್ ನಗರವು ಸುಮಾರು ಕ್ರಿ.ಪೂ.ಒಂದನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದವರೆಗೆ ಭಿಕ್ಕು ಸಂಘಗಳನ್ನು ಪ್ರೋತ್ಸಾಹಿಸಿತ್ತು. ಇಲ್ಲಿಯ ಒಂದು ಭಾರೀ ಗುಹೆ ಶಾತಕರ್ಣಿ ಶಾಮ್ರಾಜ್ಯದ ಪ್ರಸಿದ್ಧ ದೊರೆ ಗೌತಮೀಪುತ್ರ ಶತಕರ್ಣಿ ಯ ಕೊಡುಗೆ. ಇನ್ನೊಂದು ಗುಹೆ ಬುದ್ಧ ಭಿಕ್ಷುಗಳಾದರೆಂದು ಹೇಳಲಾದ ಗ್ರೀಕ್ ತಂದೆ, ಮಗ ರಚಿಸಿದ್ದು.

ವ್ಯುತ್ಪತ್ತಿ ಸಂಪಾದಿಸಿ

ರಾಮಾಯಣದ ಪ್ರಕಾರ, ನಾಸಿಕ್ ಗೋದಾವರಿ ನದಿಯ ದಡದಲ್ಲಿರುವ ಸ್ಥಳವಾಗಿದ್ದು, ಲಕ್ಷ್ಮಣನು ರಾಮನ ಆಶಯದಿಂದ ಶೂರ್ಪನಖನ ಮೂಗು ಕತ್ತರಿಸಿ ಈ ನಗರಕ್ಕೆ "ನಾಸಿಕ್" ಎಂದು ಹೆಸರಿಡಲಾಯಿತು.[೧]

ಅಣೆಕಟ್ಟುಗಳು ಸಂಪಾದಿಸಿ

ಗಂಗಾಪುರ ಅಣೆಕಟ್ಟು ಗಂಗವಾಡಿ ಗ್ರಾಮದ ಸಮೀಪ ಗೋದಾವರಿ ನದಿಯಲ್ಲಿದೆ ಮತ್ತು ಇದು ಮಣ್ಣಿನ ಅಣೆಕಟ್ಟು, ನಾಸಿಕ್.[೨] ಗಿರ್ನಾ ನದಿಯಲ್ಲಿರುವ ಚಂಕಪುರ ಅಣೆಕಟ್ಟು ೧೯ ನೇ ಶತಮಾನದಲ್ಲಿ ಬ್ರಿಟಿಷರು ನಿರ್ಮಿಸಿದ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು ಕಲ್ವಾನ್ ತಹಸಿಲ್‌ನ ಅಭೋನಾ ಗ್ರಾಮದಿಂದ ೩ ಕಿ.ಮೀ ಮತ್ತು ನಾಸಿಕ್‌ನಿಂದ ೬೦ ಕಿ.ಮೀ ದೂರದಲ್ಲಿದೆ. ಕಾಶಿಪಿ ಅಣೆಕಟ್ಟು ನಾಸಿಕ್‌ನ ರಾಜಪುರ ಬಳಿಯ ಕಾಶಿಪಿ ನದಿಯಲ್ಲಿದೆ. ಗಿರ್ನಾ ಅಣೆಕಟ್ಟು ನಾಸಿಕ್ ಜಿಲ್ಲೆಯ ನಂದಗಾಂವ್ ಬಳಿಯ ಗಿರ್ನಾ ನದಿಯಲ್ಲಿರುವ ಭೂಕುಸಿತ ವಿಧವಾಗಿದೆ. ದರ್ನಾ ಅಣೆಕಟ್ಟು ನಾಸಿಕ್ ಜಿಲ್ಲೆಯ ಇಗತ್ಪುರಿ ಬಳಿಯ ದರ್ನಾ ನದಿಯಲ್ಲಿರುವ ಗುರುತ್ವ ಅಣೆಕಟ್ಟು.

ಉದ್ಯಮ ಸಂಪಾದಿಸಿ

ಮೊಘಲರ ಕಾಲದಲ್ಲಿ ನಾಸಿಕ್ ಗುಲ್ಶನಾಬಾದ್ ,ಅಂದರೆ ಗುಲಾಬಿಗಳ ನಗರ, ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸದ್ಯ ನಾಸಿಕ್ ಪ್ರಸಿದ್ಧವಾಗಿರುವುದು ದ್ರಾಕ್ಷಿ ಬೆಳೆಗೆ ಮತ್ತು , ಪುನಃ ಪ್ರಾರಂಭಿಸಲಾಗಿರುವ ,ಒಂದು ಕಾಲದ ಹೆಸರಾಂತ, ಗುಲಾಬಿ ಹೂವಿನ ಕೃಷಿಗೆ. ರಫ್ತು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವಿಧಾನಗಳಿಂದ ವೈನ್ ಮತ್ತು ಗುಲಾಬಿ ಕೃಷಿಯನ್ನು ಅಭಿವೃದ್ಧಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗಿನ ವ್ಯಾಪಕ ಔದ್ಯೋಗಿಕ ಪ್ರಗತಿಯಿಂದ , ನಾಸಿಕ್ "ಮುಂಬಯಿ ಮತ್ತು ಪುಣೆ ಬಿಟ್ಟರೆ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಔದ್ಯೋಗಿಕೀಕರಣವಾಗಿರುವ ನಗರ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ (ಏಕ್ಲಾಹಾರೆ) ಒಂದು ಮುಖ್ಯ ಉಷ್ಣ ವಿದ್ಯುತ್ ಸ್ಥಾವರವಿದ್ದು , ಭಾರತ ಸರಕಾರದ ನಾಣ್ಯ ಮತ್ತು ನೋಟು ಮುದ್ರಣಾಲಯವೂ ಇಲ್ಲಿದೆ. ಸಾತ್ಪುರ, ಅಂಬಡ್, ಸಿನ್ನರ್ ‍ , ಇಗತಪುರಿ ಮತ್ತು ದಿಂಡೋರಿ ಎಂಬಲ್ಲಿ ಐದು ಔದ್ಯೋಗಿಕ ವಲಯಗಳನ್ನು ಸ್ಥಾಪಿಸಲಾಗಿದೆ. ಮಹೀಂದ್ರ ಆಂಡ್ ಮಹೀಂದ್ರ, ರಾಬರ್ಟ್ ಬಾಶ್, ಥೈಸ್ಸೆನ್ ಕ್ರುಪ್ಪ್ , ಸ್ಯಾಮ್ಸೊನೈಟ್, ಸಿಯಾಟ್ , ಅಟ್ಲಾಸ್ ಕಾಪ್ಕೋ, ಎಲ್ ಆಂಡ್ ಟಿ, ಯೂನಿಲೀವರ್‍, ಕೇಬಲ್ ಕಾರ್ಪೋರೇಷನ್ ಆಫ್ ಇಂಡಿಯಾ, ಸೀಮನ್ಸ್, ಕ್ರಾಂಪ್ಟನ್ ಗ್ರೀವ್ಸ್, ಏಬಿಬಿ ಇತ್ಯಾದಿ ಪ್ರಖ್ಯಾತ ಕಂಪನಿಗಳು ಇಲ್ಲಿ ತಮ್ಮ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಿವೆ. ನಾಸಿಕ್ ಐಟಿ / ಬಿಪಿಓ ಉದ್ಯಮದಲ್ಲಿಯೂ ಹೆಸರು ಮಾಡುತ್ತಿದೆ.

ಶಿಕ್ಷಣ ಸಂಪಾದಿಸಿ

ಮಹಾರಾಷ್ಟ್ರದ ಉತ್ತರ-ಪಶ್ಚಿಮ ಭಾಗಕ್ಕೆ ನಾಸಿಕ್ ಶಿಕ್ಷಣ ಕೇಂದ್ರವೂ ಆಗಿದೆ. ಇಲ್ಲಿಯ ಕೆಲವು ಪ್ರಸಿದ್ಧ ಕಾಲೇಜುಗಳೆಂದರೆ ಕೆ.ಕೆ.ಇಂಜಿನಿಯರಿಂಗ್ ಕಾಲೇಜು ಮತ್ತು ಎಮ್ ಈ ಟಿ ಎಂಜಿನಿಯರಿಂಗ್ ಕಾಲೇಜು. ಕೆ ಟಿ ಎಚ್ ಎಮ್ ವಾಸ್ತುಕಲಾ ಕಾಲೇಜು ಮಹಾರಾಷ್ಟ್ರದಲ್ಲಿಯ ಅತ್ಯುತ್ತಮ ವಾಸ್ತುಕಲಾ ಕಾಲೇಜುಗಳಲ್ಲಿ ಒಂದೆಂದು ಹೇಳಲಾಗಿದೆ. ಅನೇಕರಿಗೆ ನಾಸಿಕ್ ನಗರ , ಶಿರಡಿ ಅಥವಾ ತ್ರ್ಯಂಬಕೇಶ್ವರಕ್ಕೆ ಹೋಗುವ ದಾರಿಯಲ್ಲಿ ತಂಗುದಾಣವಷ್ಟೇ ಆಗಿದ್ದರೂ, ಆಸಕ್ತರಿಗೆ ಇಲ್ಲಿ ನೋಡುವಂಥಾ ಅನೇಕ ವಿಷಯಗಳಿವೆ. ಗಂಗಾಪುರ ಆಣೆಕಟ್ಟು, ಮಳೆಗಾಲದಲ್ಲಿ ಧುಮ್ಮಿಕ್ಕುವ ದುಧಸಾಗರ ಜಲಪಾತ , ನಾಸಿಕ್ ನಗರದಿಂದ ಕೆಲ ಕಿ,ಮೀ ದೂರದಲ್ಲಿ, ಗಂಗಾಪುರ ಎಂಬಲ್ಲಿರುವ ಶಿಲಾಯುಗದ ಅವಶೇಷಗಳು, ತ್ರ್ಯಂಬಕೇಶ್ವರಕ್ಕೆ ಹೋಗುವ ದಾರಿಯಲ್ಲಿರುವ , ರಾಜ್ಯದ ಏಕಮೇವ ನಾಣ್ಯಸಂಗ್ರಹಾಲಯ ಇವೆಲ್ಲಾ ನೋಡತಕ್ಕ ಸ್ಥಳಗಳು. ನಾಸಿಕದ ಹತ್ತಿರದ ದೇವಲಾಲಿಯಲ್ಲಿ ಮದ್ದುಗುಂಡುಗಳ (artillery) ಕೇಂದ್ರವಿದೆ. ಓಝಾರ್‍ ಎಂಬಲ್ಲಿ ಮಿಗ್ -೨೧ ಯುದ್ಧವಿಮಾನಗಳನ್ನು ತಯಾರಿಸುವ ಎಚ್.ಏ.ಎಲ್ ಕಾರ್ಖಾನೆಯಿದೆ.

ಹವಾಮಾನ ಸಂಪಾದಿಸಿ

ಗರಿಷ್ಟ ತಾಪಮಾನದ ದಾಖಲೆ : ೪೪.೮ ಡಿಗ್ರಿ ಸೆಲ್ಸಿಯಸ್. ೧೯೬೦ಮೇ ೧೨ರಂದು. ಕನಿಷ್ಟ ತಾಪಮಾನ ದಾಖಲೆ ೦.೬ ಡಿಗ್ರಿ ಸೆಲ್ಸಿಯಸ್ ೧೯೪೫ಜನವರಿ ೭ರಂದು.

ಬಾಹ್ಯ ಸಂಪರ್ಕಗಳು ಸಂಪಾದಿಸಿ

  1. Gaikwad, Yogesh; Berad, Nilesh (1 January 2016). ["Development and present Status of Nashik District" ""Assessment of Present Status of Management Education for Entrepreneurship Development with Special Reference to MBA Institute in Nashik District""]. KRSCMS Journal of Management. p. 27. doi:10.21319/krscms/2016/99662. Retrieved 13 January 2020. {{cite web}}: Check |url= value (help)
  2. "Official WebSite of Nashik District". web.archive.org. 10 August 2013. Archived from the original on 10 ಆಗಸ್ಟ್ 2013. Retrieved 11 January 2020.{{cite web}}: CS1 maint: bot: original URL status unknown (link)
"https://kn.wikipedia.org/w/index.php?title=ನಾಸಿಕ್&oldid=1116013" ಇಂದ ಪಡೆಯಲ್ಪಟ್ಟಿದೆ