ಧಾರ್ಮಿಕ ಆವರಣಗಳಿಂದ ದೂರವಾಗಿ ಶುದ್ಧಲೌಕಿಕ ಅಂಶವನ್ನೊಳಗೊಂಡು ಒಂದು ನಿರ್ದಿಷ್ಟ ಪ್ರದೇಶಕ್ಕೆ ಆರೋಪಿಸಲ್ಪಡುವ ಕಥೆಗಳೇ ಸ್ಥಳಪುರಾಣಗಳು. ಇಂಥವನ್ನು ಸ್ಥಳಕಥೆಗಳೆಂದೂ ಕರೆಯುವುದಿದೆ. ಜಾನಪದ ಕ್ಷೇತ್ರದಲ್ಲಿ ಐತಿಹ್ಯ ಎಂದು ಕರೆಯಲಾಗುತ್ತದೆ. ಕಿರಿದಾದ್ದು, ವಿವರಣಾತ್ಮಕವಾದ್ದು, ನಿಷ್ಪತ್ತ್ಯಾತ್ಮಕವಾದ್ದು - ಇವು ಸ್ಥಳಪುರಾಣ ಅಥವಾ ಐತಿಹ್ಯದ ಗುಣಗಳು. ಸಾಮಾನ್ಯವಾಗಿ ಪುರಾಣ ಮೂಲದ ವಸ್ತುಗಳನ್ನೆ ಇವು ಹೊಂದಿರುವುದರಿಂದ ಹಾಗೂ ನಿರ್ದಿಷ್ಟ ಪ್ರದೇಶಕ್ಕೆ ಆರೋಪಿಸಲ್ಪಡುವುದರಿಂದ ಕ್ರಮವಾಗಿ ಸ್ಥಳಪುರಾಣ ಹಾಗೂ ಸ್ಥಳಕಥೆ ಎಂಬ ಹೆಸರುಗಳೂ ಬಳಕೆಯಾಗುತ್ತವೆ. ಪ್ರತಿಯೊಂದು ಐತಿಹ್ಯವೂ ಐತಿಹಾಸಿಕವೆಂಬಂತೆಯೂ ನಡೆದದ್ದೆಂಬಂತೆಯೂ ಹೇಳಲ್ಪಟ್ಟರೂ ಅಲ್ಲಿ ಕಾಲವನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ.

ಐತಿಹ್ಯಗಳು

ಬದಲಾಯಿಸಿ

ಪುರಾಣೇತಿಹಾಸಗಳ ಪ್ರಭಾವ ಇಡೀ ದೇಶದ ಉದ್ದಗಲಕ್ಕೆ ವ್ಯಾಪಿಸಿಕೊಂಡಿರುವುದರಿಂದ ಒಂದೇ ಬಗೆಯ ಸಂದರ್ಭಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದುಂಟು. ಕೆಲವು ಸಂದರ್ಭಗಳು ಒಂದು ಸ್ಥಳದಲ್ಲಿ ಮಾತ್ರ ಸ್ಥಾನ ಪಡೆದಿರಬಹುದು. ಇಂಥ ಸಾಧ್ಯತೆಗಳ ಆಧಾರದಿಂದ ಐತಿಹ್ಯಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಸ್ಥಳೀಯ ಐತಿಹ್ಯ ಮತ್ತು ಸಂಚಾರಿ ಐತಿಹ್ಯ.

ಸ್ಥಳೀಯ ಐತಿಹ್ಯಗಳು

ಬದಲಾಯಿಸಿ

ಸ್ಥಳೀಯ ಐತಿಹ್ಯಗಳು ತಾವು ಹುಟ್ಟಿದ ಸ್ಥಳವನ್ನು ಬಿಟ್ಟು ಅತಿದೂರ ಕ್ರಮಿಸುವುದಿಲ್ಲ. ಪ್ರಕೃತಿಯ ಅದ್ಭುತವನ್ನೊ ವೈಚಿತ್ರ್ಯವನ್ನೊ ಬಣ್ಣಿಸಲು ಹುಟ್ಟಿಕೊಂಡ ಕಥೆಗಳಾಗಿರುತ್ತವೆ. ವಿಶೇಷ ವಸ್ತುವೊಂದರ ವಿಶೇಷ ಗುಣವನ್ನು ಬಣ್ಣಿಸುವ ಐತಿಹ್ಯಗಳೂ ಇರುತ್ತವೆ. ವಸ್ತು ಇರುವ ತನಕ ಅದಕ್ಕೆ ಸಂಬಂಧಿಸಿದ ಐತಿಹ್ಯ ಜೀವಂತವಿರುತ್ತದೆ; ಕಾರಣಾಂತರದಿಂದ ವಸ್ತು ಕಣ್ಮರೆಯಾದರೆ ಕಾಲಕ್ರಮೇಣ ಅದಕ್ಕೆ ಸಂಬಂಧಿಸಿದ ಐತಿಹ್ಯವೂ ಕಣ್ಮರೆಯಾಗುತ್ತದೆ. ದೈತ್ಯ ಸೌಧಗಳನ್ನು ಕುರಿತು, ಸ್ಮಾರಕಗಳನ್ನು ಕುರಿತು, ಯುದ್ಧದ ನೆನಪುಗಳನ್ನು ಕುರಿತು, ಕುಟುಂಬಗಳನ್ನು ಕುರಿತು, ಸ್ತ್ರೀಸಾಹಸವನ್ನು ಕುರಿತು, ಭೂಮಿಯಲ್ಲಿ ಅಡಗಿರಬಹುದಾದ ನಿಧಿಯನ್ನು ಕುರಿತು, ತಳಹದಿಯ ಬಲಿಗಳನ್ನು ಕುರಿತು, ಸರೋವರಗಳನ್ನು ಕುರಿತು - ಹೀಗೆ ಹಲವು ಕಾರಣಗಳನ್ನು ಒಳಗೊಂಡು ಸ್ಥಳೀಯ ಐತಿಹ್ಯಗಳು ಹುಟ್ಟಿಕೊಳ್ಳುತ್ತವೆ. ಮನುಷ್ಯಮಾತ್ರದವರಿಂದ ನಿರ್ಮಿಸಲು ಸಾಧ್ಯವಿಲ್ಲ ಎನ್ನಿಸಿದಾಗ ದೆವ್ವ, ರಾಕ್ಷಸ ದೇವತೆ ಮುಂತಾದ ಅತಿಮಾನುಷ ಶಕ್ತಿಗಳಿಂದ ನಿರ್ಮಾಣವಾದದ್ದೆಂಬ ಕಥೆಗಳನ್ನು ಹೇಳುವ ಐತಿಹ್ಯಗಳೂ ಸೃಷ್ಟಿಯಾಗುವುದಿದೆ. ನೈಸರ್ಗಿಕ ವೈಲಕ್ಷಣ್ಯಗಳೂ ಐತಿಹ್ಯಗಳ ಹುಟ್ಟಿಗೆ ಕಾರಣವಾಗುತ್ತವೆ. ಬಂಡೆಯ ನಡುವೆ ಬಿರುಕು ಇದ್ದಾಗ ಯಾರೋ ಒಬ್ಬ ರಾಜ ತಾನು ಯುದ್ಧದಲ್ಲಿ ಸೋತಾಗ ತನ್ನ ಕತ್ತಿಯನ್ನು ಶತ್ರುವಿಗೆ ಒಪ್ಪಿಸಲಾರದೆ ಬಂಡೆಯೊಂದಕ್ಕೆ ಒಡೆದು ಅದನ್ನು ಚೂರುಚೂರು ಮಾಡಿದಾಗ ಆ ಬಂಡೆಯಲ್ಲಿ ಬಿರುಕುಂಟಾಯಿತು ಎಂಬ ಕಥೆ ಹುಟ್ಟಿಕೊಳ್ಳುತ್ತದೆ. ಒಂದು ಸೀರೆಯನ್ನು ಒಣಗಿಸಲು ಉದ್ದಕ್ಕೂ ಹಾಸಿದಾಗ ಕಾಣುವಂಥ ದೃಶ್ಯವನ್ನು ಹೋಲುವ ಗುರುತೊಂದು ಬಂಡೆಯ ಮೇಲೆ ಕಂಡರೆ, ವನವಾಸದ ಕಾಲದಲ್ಲಿ ಕುಂತೀದೇವಿ ಇಲ್ಲಿ ಸೀರೆಯನ್ನು ಒಣಗಿಸಿಕೊಳ್ಳುತ್ತಿದ್ದಳು ಎಂಬ ಕಥೆ ನದಿಯಲ್ಲಿ ಧಮುಕುವ ನೀರು ಬಂಡೆಯ ಹಿನ್ನೆಲೆಯಲ್ಲಿ ಸ್ವಲ್ಪ ಹಳದಿಯಾಗಿ ಕಂಡರೆ, ಅದು ಸೀತಾದೇವಿ ಮಿಂದ ನೀರು ಎಂಬ ಕಥೆ ಹುಟ್ಟಿಕೊಳ್ಳುತ್ತವೆ. ಬೆಂಗಳೂರು, ಬೆಳಗೊಳ ಮುಂತಾದ ಊರ ಹೆಸರುಗಳು ಕೂಡ ತಮ್ಮವೇ ಐತಿಹ್ಯಗಳನ್ನು ಒಳಗೊಂಡಿವೆ.

ಸಂಚಾರಿ ಐತಿಹ್ಯಗಳು

ಬದಲಾಯಿಸಿ

ಸಂಚಾರಿ ಐತಿಹ್ಯಗಳು ಸಾಮಾನ್ಯವಾಗಿ ಪುರಾಣಕಥೆಗಳನ್ನು ಆಧರಿಸಿರುತ್ತವೆ. ಒಂದು ಸ್ಥಳದಲ್ಲಿ ನಡೆದದ್ದೆಂದು ಹೇಳಲಾಗುವ ಕಥೆಯು ದೇಶದ ಇನ್ನೊಂದು ಭಾಗದಲ್ಲಿಯೂ ನಡೆದದ್ದೆಂದು ಹೇಳಲಾಗುತ್ತದೆ. ಸಂಚಾರಿ ಐತಿಹ್ಯ ಪರಿಮಿತ ಪಾಠಾಂತರಗಳನ್ನು ಒಳಗೊಂಡಿರುತ್ತದೆ. ನಂಬಿಕೆಗಳು ಸಾಮಾನ್ಯವಾಗಿ ಐತಿಹ್ಯಗಳ ಉಗಮಕ್ಕೆ ಕಾರಣವಾಗುತ್ತವೆ.


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: