ದತ್ತಾತ್ರೇಯನು ಹಿಂದೂಗಳಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರನಾದ ದೇವರೆಂದು ಪರಿಗಣಿಸಲ್ಪಡುತ್ತಾನೆ. ದತ್ತ ಶಬ್ದದ ಅರ್ಥ "ಕೊಟ್ಟಿದ್ದು", ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ "ಆತ್ರೇಯ"ನೆಂಬ ಹೆಸರು.

ದತ್ತಾತ್ರೇಯ दत्तात्रेय
ದತ್ತಾತ್ರೇಯ: ವರ್ಣಚಿತ್ರ ರಾಜಾ ರವಿವರ್ಮ
ದೇವನಾಗರಿदत्तात्रेय
ಸಂಸ್ಕೃತ ಲಿಪ್ಯಂತರಣDattātreya
ಸಂಲಗ್ನತೆತ್ರಿಮೂರ್ತಿ ಗಳ ಅವತಾರ
ಮಂತ್ರಹರಿ ಓಂ ತತ್ಸತ್ ಜೈ ಗುರುದತ್ತ

ದತ್ತಾತ್ರೇಯ ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ದೂರ್ವಾಸ ಮುನಿ ಈತನ ಸಹೋದರ. ನಿಮಿ ಋಷಿ ಈತನ ಮಗ. ಏಳನೆಯ ದಿವಸದಲ್ಲಿಯೇ ಈತ ತಾಯಿಯ ಗರ್ಭದಲ್ಲಿ ಪ್ರಕಟವಾಗಿ ತಂದೆಗೆ ಸಹಾಯ ಮಾಡಿದನೆಂದು ಕಥೆಯಿದೆ.

ದತ್ತಾತ್ರೇಯನ ಜನನವೃತ್ತಾಂತ ಹೀಗಿದೆ. ಅತ್ರಿಮುನಿ ಸಂತಾನಾರ್ಥವಾಗಿ ಉಗ್ರ ತಪಸ್ಸು ಮಾಡಿದ. ಈತನ ತಪಸ್ಸಿಗೆ ಮೆಚ್ಚಿ ತ್ರಿಮೂರ್ತಿಗಳು ದರ್ಶನ ನೀಡಿದರು. ತಮ್ಮ ಒಬ್ಬೊಬ್ಬರ ಅಂಶದಿಂದಲೂ ಒಬ್ಬೊಬ್ಬ ಮಗ ಹುಟ್ಟುವನೆಂದು ವರ ನೀಡಿದರು. ಅದರಂತೆ ಬ್ರಹ್ಮನ ಅಂಶದಿಂದ ಚಂದ್ರನೂ ವಿಷ್ಣುವಿನ ಅಂಶದಿಂದ ದತ್ತಾತ್ರೇಯನೂ ಶಿವನ ಅಂಶದಿಂದ ದುರ್ವಾಸನೂ ಜನಿಸಿದರು. ಕಾರ್ತವೀರ್ಯ, ಪ್ರಹ್ಲಾದ ಮೊದಲಾದವರಿಗೆ ದತ್ತಾತ್ರೇಯ ಜ್ಞಾನೋಪದೇಶ ಮಾಡಿದ. ಈತ ಬ್ರಹ್ಮಚಾರಿಯೆಂದು ಹೇಳಲಾಗಿದೆ. [೧]

ದೇವತೆಗಳು ರಾಕ್ಷಸರ ಹಿಂಸೆಯನ್ನು ತಡೆಯಲಾರದೆ ದತ್ತಾತ್ರೇಯನಲ್ಲಿ ಮೊರೆಯಿಟ್ಟಾಗ ಅವರಿಗೆ ತನ್ನ ಆಶ್ರಮದಲ್ಲಿ ಈತ ಆಶ್ರಯ ಕೊಟ್ಟ. ರಾಕ್ಷಸರು ಹೊಂಚು ಹಾಕಿ ಈತನ ಆಶ್ರಮದಲ್ಲಿದ್ದ ಲಕ್ಷ್ಮಿಯನ್ನು ಅಪಹರಿಸಿದರು. ಆಗ ಈತ ತನ್ನ ತಪೋಮಹಿಮೆಯಿಂದ ರಾಕ್ಷಸರನೆಲ್ಲ ನಾಶ ಮಾಡಿದ. ಈ ವಿಚಾರ ಭಾಗವತ ಹಾಗೂ ಮಾರ್ಕಂಡೇಯ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.

ಮುಂಬಯಿ-ಮದ್ರಾಸು ರೈಲ್ವೆಮಾರ್ಗದಲ್ಲಿರುವ ಗಾಣಗಾಪುರ ಪ್ರಸಿದ್ಧ ದತ್ತಕ್ಷೇತ್ರವೆನಿಸಿದೆ. ಈ ಕ್ಷೇತ್ರದ ಪಕ್ಕದಲ್ಲಿ ಭೀಮಾನದಿ ಹರಿಯುತ್ತಿದೆ. ಇಲ್ಲಿ ದತ್ತಾತ್ರೇಯನ ಸಗುಣ ಪಾದುಕೆಗಳಿವೆ ಎನ್ನಲಾಗಿದೆ. ಪ್ರತಿ ಹುಣ್ಣಿಮೆಯಲ್ಲಿಯೂ ಇಲ್ಲಿ ಉತ್ಸವವಿರುತ್ತದೆ.[೨]

ದತ್ತಾತ್ರೇಯ ಎಂದಾಗ ನೆನಪಾಗುವುದು ಇಡೀ ಸಮಷ್ಟಿಯನ್ನೇ ತನ್ನ ಗುರುವೆಂದು ಭಾವಿಸಿದ ಶ್ರೇಷ್ಠ ಅರಿವಿನ ಭಾವ.

ಜನನ ಸಂಪಾದಿಸಿ

‘ದತ್ತ’ ಮತ್ತು ‘ ಆತ್ರೇಯ’ ಎರಡು ಪದಗಳು ಸೇರಿದ ದತ್ತಾತ್ರೇಯ ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ದತ್ತನು ತನ್ನನ್ನು ತಾನೇ ಅತ್ರಿ-ಅನುಸೂಯರಿಗೆ ಕೊಟ್ಟುಕೊಂಡು ದತ್ತನಾದನು. ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ ಮಹಾ ಪತಿವ್ರತೆ. ಪ್ರತಿಷ್ಠಾನ (ಈಗಿನ ಪೈಠಣ- ಮಹಾರಾಷ್ಟ್ರದಲ್ಲಿದೆ)ದಲ್ಲಿ ಇಂಥಹದೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದು ಸುಮತಿಯನ್ನು ಬಿಟ್ಟು ಹೊರಟು ಹೋಗುತ್ತಾನೆ. ಹಾಗಿರಲು ಒಮ್ಮೆ ವಿಪರೀತ ಖಾಯಿಲೆ ಬಂದು ಮೈಯಲ್ಲಾ ಹುಣ್ಣಾಗುತ್ತದೆ. ಮತ್ತೆ ಸುಮತಿಯ ಬಳಿಗೇ ಬರುತ್ತಾನೆ. ಅವಳು ತುಂಬಾ ಒಳ್ಳೆಯವಳು ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿ, ಒಳ್ಳೆಯ ಆಹಾರ ಕೊಡುತ್ತಾಳೆ. ಅವನಿಗೆ ನಡೆಯಲೂ ಆಗದಿದ್ದಾಗ ಒಂದು ಸಂಜೆ ಸುಮತಿ ಅವನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಡುತ್ತಾಳೆ. ಇದೇ ಸಮಯದಲ್ಲಿ ಆ ಊರಿನಲ್ಲಿ ಘಟನೆಯೊಂದು ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಆ ಅಪರಾಧಿ, ತಪ್ಪಿಸಿಕೊಂಡು ಪರಾರಿಯಾಗುತ್ತಾನೆ. ಅಪರಾಧಿಯಂತೆ ಕಂಡ ಇನ್ನೊಬ್ಬನನ್ನ ರಾಜಭಟರು ಕರೆತಂದು ರಾಜನ ಎದುರು ನಿಲ್ಲಿಸಿದಾಗ ಹಿಂದು ಮುಂದು ಆಲೋಚಿಸದೇ ರಾಜ ಅವನ್ನು ಶೂಲಕ್ಕೇರಿಸುವಂತೆ ಅಪ್ಪಣೆ ಮಾಡುತ್ತಾನೆ. ರಾಜಾಜ್ಞೆಯಂತೆ ಆತನನ್ನು ಶೂಲಕ್ಕೆ ಏರಿಸಲಾಗುತ್ತದೆ. ಆದರೆ ಆತ ನಿಜವಾದ ಅಪಾರಾಧಿಯೇ ಅಲ್ಲ. ಆತ ಮಾಂಡವ್ಯನೆಂಬ ಋಷಿ. ಆತನ ಯೋಗಬಲದಿಂದ ಶೂಲದ ಮೇಲೆ ಸಾಯದೇ ನೇತಾಡುತ್ತಿರುತ್ತಾನೆ.[೧] ಅದೇ ಮಾರ್ಗವಾಗಿ ಪತಿಯನ್ನು ಹೊತ್ತು ಸುಮತಿ ಬರುವಾಗ ಕತ್ತಲೆಯಲ್ಲಿ ಕೌಶಿಕನ ಕಾಲು ಶೂಲಕ್ಕೆ ತಾಗುತ್ತದೆ. ಇದರಿಂದಕುಪಿತಗೊಂಡ ಋಷಿ “ಈ ಶೂಲಕ್ಕೆ ಕಾಲು ತಾಗಿಸಿಕೊಂಡವನು ಸೂರ್ಯ ಹುಟ್ಟಿದೊಡನೆ ಸಾಯಲಿ" ಎಂದು ಶಪಿಸುತ್ತಾನೆ. ಇದನ್ನು ಕೇಳಿಸಿಕೊಂಡ ಸುಮತಿ ಪತಿಯೇ ಸರ್ವಸ್ವ ಎಂದು ನಂಬಿದ ಆಕೆ “ಎಲೈ ಸೂರ್ಯನೇ, ನೀನು ಉದಯಿಸಬೇಡ. ನನ್ನ ಮಾತು ಮೀರಿದರೆ ನೀನು ಸುಟ್ಟು ಬೀಳುವೆ" ಎನ್ನುತ್ತಾಳೆ. ಪತಿವ್ರತೆಯ ಶಕ್ತಿ ಮಹತ್ತಾದುದು. ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ. ಜಗತ್ತೆಲ್ಲ ಕತ್ತಲಾಯಿತು. ಗಿಡ ಮರ ಬಳ್ಳಿಗಳು ಬೆಳೆಯುವುದು ನಿಂತು ಹೋಯಿತು. ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋದವು. ಜನರ ಸಂಕಷ್ಟ ನೋಡಿ ದೇವತೆಗಳಿಗೆ ಮರುಕ ಹುಟ್ಟಿತು. ಅವರು ಈ ಕಷ್ಟವನ್ನು ನಿವಾರಿಸುವಂತೆ ಬ್ರಹ್ಮನಲ್ಲಿ ಮೊರೆಹೋದರು. ಅದಕ್ಕೆ ಬ್ರಹ್ಮ ಪತಿವ್ರತೆಯು ಶಾಪವಿತ್ತಿದ್ದರಿಂದ ಆಕೆಯ ಬಳಿಗೆ ಹೋಗೋಣ ಎನ್ನುತ್ತಾನೆ. ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮದ ಬಳಿ ಬರುತ್ತಾರೆ. ಅನುಸೂಯಾ ದೇವಿಯನ್ನು ಕಂಡು ವಂದಿಸುತ್ತಾರೆ. ಋಷಿ ದಂಪತಿಗಳಿಗೆ ಆಶ್ಚರ್ಯ. ಬ್ರಹ್ಮ, ಇಂದ್ರ ಮೊದಲಾದ ದೇವತೆಗಳು ಇಳಿದು ಬಂದಿದ್ದಾರೆಂದು. ಕಾರಣ ಕೇಳುವ ಮೊದಲೇ “ತಾಯಿ, ಕೌಶಿಕನ ಪತ್ನಿ ಸುಮತಿಯ ಶಾಪದಿಂದ ಲೋಕವೆಲ್ಲ ಅಸ್ತವ್ಯಸ್ತವಾಗಿದೆ. ಜನರು, ಪಶು ಪಕ್ಷಿಗಳು ಹಾಹಾಕಾರ ಮಾಡುತ್ತಿವೆ. ಆದ್ದರಿಂದ ನೀನು ಪ್ರಸನ್ನಳಾಗಿ ಸುಮತಿಗೆ ತಿಳಿ ಹೇಳಬೇಕು. ಇದರಿಂದ ನಾವು ಉಪಕೃತರಾಗುವೆವು” ಎನ್ನುತ್ತಾರೆ. ಅತ್ರಿ ಅನಸೂಯೆಯರು ದೇವತೆಗಳೊಡನೆ ಸುಮತಿಯ ಮನೆಗೆ ತೆರಳುತ್ತಾರೆ ಮತ್ತು ತಾವು ಬಂದ ಕಾರಣವನ್ನು ತಿಳಿಸುತ್ತಾರೆ. 'ಇದು ದೇವಕಾರ್ಯ ನೀನು ಮಾಡಿಕೊಡಬೇಕು. ಸೂರ್ಯನಿಗೆ ಕೊಟ್ಟ ಶಾಪವನ್ನು ಹಿಂದೆ ತೆಗೆದುಕೊಂಡು ಲೋಕವನ್ನು ಉಳಿಸು' ಎನ್ನುತ್ತಾರೆ. ಅದಕ್ಕೆ ಸುಮತಿ, "ನಿಜ ಆದರೆ ಸೂರ್ಯನು ಉದಯಿಸಿದರೆ ನನ್ನ ಗಂಡನು ಮರಣ ಹೊಂದುತ್ತಾನೆ. ಆತ ಹೋದರೆ ನನ್ನ ಸರ್ವಸ್ವವೇ ಹೋದ ಹಾಗೆ. ಶಾಪವನ್ನು ಹಿಂದೆ ತೆಗೆದುಕೊಳ್ಳಲಾರೆ" ಎಂದು ಬಿಟ್ಟಳು. ಆಗ ಅನಸೂಯ, ತಂಗಿ ಸುಮತಿ ನಿನ್ನ ಶಾಪವನ್ನು ಹಿಂಪಡೆ. ನಾನು ನನ್ನ ಶಕ್ತಿಯಿಂದ ನಿನ್ನ ಗಂಡನನ್ನು ಮತ್ತೆ ಬದುಕಿಸಿ ಕೊಡುವೆ" ಎಂದಳು. ಆಗ ಸುಮತಿ ಶಾಪವನ್ನು ಹಿಂಪಡೆಯುತ್ತಾಳೆ. ಅನಸೂಯ ಕೊಟ್ಟ ಮಾತಿನಂತೆ ಮತ್ತೆ ಕೌಶಿಕನನ್ನು ಬದುಕಿಸುತ್ತಾಳೆ. ಎಲ್ಲರಿಗೂ ಸಂತೋಷವಾಗುತ್ತದೆ. ದೇವತೆಗಳು ಅನಸೂಯೆಯನ್ನು ಹೊಗಳಿ ಕೊಂಡಾಡುತ್ತಾರೆ. ಮಾತೆ ನೀನು ದೇವಕಾರ್ಯವನ್ನು ಮಾಡಿಕೊಟ್ಟೆ. ನಾವು ಸಂತುಷ್ಟರಾಗಿದ್ದೇವೆ ಬೇಕಾದ ವರ ಬೇಡಿಕೋ ಎನ್ನುತ್ತಾರೆ. ಆಗ ಅನಸೂಯೆ, ಹರಿ ಹರ ಬ್ರಹ್ಮರು ನನ್ನ ಮಕ್ಕಳಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಹಾಗೆಯೇ ಆಗಲಿ ಎಂದು ದೇವತೆಗಳೂ ಹರಸುತ್ತಾರೆ. ಅದರಂತೆ ಬ್ರಹ್ಮನ ಅಂಶದಲ್ಲಿ ಚಂದ್ರನೂ, ವಿಷ್ಣುವಿನ ಅಂಶದಲ್ಲಿ ದತ್ತನೂ, ಈಶ್ವರನ ಅಂಶದಿಂದ ದುರ್ವಾಸನೂ ಹುಟ್ಟಿದರು. ಹೀಗೆ ಅನಸೂಯಾದೇವಿ ಮೂವರು ಮಕ್ಕಳನ್ನು ಪಾಲಿಸಿದಳು. ಮಕ್ಕಳು ಬೆಳೆದು ದೊಡ್ಡವರಾದರು. ನಂತರ ತಂದೆ ತಾಯಿಯರ ಅಪ್ಪಣೆ ಪಡೆದು ಚಂದ್ರ ಚಂದ್ರಮಂಡಲಕ್ಕೆ ಹೋದನು. ದುರ್ವಾಸನು ನೆನೆದಾಗ ಬರುವೆನೆಂದು ತಪಸ್ಸಿಗೆ ಹೋದನು. ದತ್ತನು ತಂದೆ ತಾಯಿಯರ ಸೇವೆಯಲ್ಲೇ ಉಳಿದನು[೩].

ದತ್ತಾವತಾರ ಸಂಪಾದಿಸಿ

ಈ ದತ್ತನಲ್ಲೆ ಚಂದ್ರ, ದುರ್ವಾಸರ ಅಂಶವೂ ಒಳಗೊಂಡಿತ್ತು. ಆದರಿಂದಲೇ ಆತನಿಗೆ ಮೂರು ಮುಖ, ಆರು ಕೈ. ಕೆಳಗಿನ ಕೈಗಳಲ್ಲಿ ಮಾಲೆ, ಕಮಂಡಲ, ಮಧ್ಯದ ಕೈಗಳಲ್ಲಿ ಡಮರು, ತ್ರಿಶೂಲ, ಮೇಲಿನ ಕೈಗಳಲ್ಲಿ ಗದಾ, ಚಕ್ರ, ಕಾವಿಬಟ್ಟೆಯನ್ನು ತೊಟ್ಟು, ಜಡೆ, ವಿಭೂತಿಗಳಿಂದ ಅಲಂಕೃತನಾಗಿದ್ದನು. ಆತ ಹುಟ್ಟಿದ್ದು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷ ಚತುದರ್ಶಿ. ಆ ದಿನದಂದೇ ಪ್ರತಿ ವರ್ಷ “ದತ್ತ ಜಯಂತಿ” ಆಚರಿಸುವವರು. ದತ್ತಾತ್ರೇಯನ ಚಿತ್ರಣದಲ್ಲಿ ಹಸುವೊಂದಿದೆ. ಅದೇ ಕಾಮಧೇನು. ಆತನ ಹಿಂದೆ ದೊಡ್ಡ ಮರವಿದೆ. ಅದೇ ಕಲ್ಪವೃಕ್ಷ. ನಾಲ್ಕು ನಾಯಿಗಳಿವೆ. ಅವೇ ನಾಲ್ಕು ವೇದಗಳು. ಹೀಗೆ ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಙಾನ, ಅನುಕಂಪಗಳ ಸಾಕಾರ ಮೂರ್ತಿಯಾಗಿದೆ. ನಮ್ಮ ದೇಶದ ನೈರುತ್ಯ ಭಾಗದಲ್ಲಿ ಗುಜರಾತ್ ರಾಜ್ಯದಲ್ಲಿರುವ ಸಸ್ಯಗಿರಿ ದತ್ತಾತ್ರೇಯನ ವಾಸಸ್ಥಾನವಾಗಿದೆ. ಇದು ರಮ್ಯವಾದ ಬೆಟ್ಟ ಪ್ರದೇಶ, ಅನೇಕ ಗವಿಗಳು, ಕಂದರಗಳು ಅಲ್ಲಿವೆ. ಹೆಮ್ಮರಗಳು ಬೆಳೆದು ನಿಂತಿವೆ. ಇಂಥ ಪ್ರಕೃತಿ ರಮ್ಯಸ್ಥಾನದಲ್ಲಿ ದತ್ತನ ಆಶ್ರಮ ಇದೆ.[೪]

24 ಗುರುಗಳು ಸಂಪಾದಿಸಿ

ಭಾಗವತದಲ್ಲಿ ಶ್ರೀಕೃಷ್ಣ ತನ್ನ ಸ್ನೇಹಿತನಾದ ಉದ್ಧವನಿಗೆ ಉಪದೇಶಿಸಿದ ಉದ್ಧವಗೀತೆ ಮಾತುಗಳಲ್ಲಿ ದತ್ತಾತ್ರೇಯನ 24 ಮಾತುಗಳು ಬರುತ್ತವೆ. ಅವುಗಳೆಂದರೆ

1. ಪೃಥ್ವಿ: ಸಂಪಾದಿಸಿ

ಪೃಥ್ವಿಯಿಂದ ಸಹನಶೀಲತೆ, ಕ್ಷಮೆ, ತಾಳ್ಮೆ ಹಾಗೂ ಎಲ್ಲಾ ಜೀವಿಗಳ ಒಳಿತಿಗಾಗಿ ಬಾಳುವುದನ್ನು ಕಲಿಯಬಹುದು.

2. ವಾಯು: ಸಂಪಾದಿಸಿ

ಯಾವ ಸಂದರ್ಭದಲ್ಲಿಯು ವಾಯು ಹೇಗೆ ತನ್ನ ಗುಣಾದರ್ಶಗಳನ್ನು ಕಳೆದುಕೊಳ್ಳುವುದಿಲ್ಲವೋ ಹಾಗೆ ನಾವು ಯಾವ ವಿಷಯಗಳಿಂದಲೂ ವಿಚಲಿತರಾಗದೆ ಮಾರ್ಗಕ್ರಮಣವನ್ನು ಮಾಡಬೇಕು.

3. ಆಕಾಶ: ಸಂಪಾದಿಸಿ

ಆಕಾಶಕ್ಕೆ ಯಾವುದೆ ಎಲ್ಲೆಗಳಿಲ್ಲ, ಅಂತೆಯೆ ನಮ್ಮ ಆತ್ಮವೂ ಕೂಡ ಇರಬೇಕು. ಹಾಗೆಯೆ ಎಲ್ಲವನ್ನು ಮೀರಿ ಅನಂತವಾಗಿರುವುದಲ್ಲದೆ ನಮ್ಮ ಮನಸ್ಸಿನ ಪ್ರಕ್ಷುಬ್ಧತೆಗಳಿಗೆ ಅತೀತವಾಗಿ ನಿರ್ಮಲವಾಗಿರ ಬೇಕೆಂದು ತಿಳಿಸತ್ತದೆ.

4. ನೀರು: ಸಂಪಾದಿಸಿ

ನೀರಿನಂತೆಯೆ ಉತ್ತಮ ವ್ಯಕ್ತಿ ಸಹ ತನ್ನ ಬಳಿ ಇರುವ ಪ್ರತಿಯೊಬ್ಬರ ಆರೊಗ್ಯ, ಶಾಂತಿಗಳಿಗೆ ಅಗತ್ಯವಾಗುವಂತೆ ಬದುಕಬೇಕು. ನೀರು ಯಾವುದೆ ಅಹಮಿಕೆ ತೋರದಿರುವಂತೆ ಪರಮಾತ್ಮನ ಶ್ರೇಷ್ಠ ಸೃಷ್ಟಿಯ ತೆರೆದು ಬಾಳಬೇಕು.

5. ಅಗ್ನಿ: ಸಂಪಾದಿಸಿ

ಬೆಂಕಿಗೆ ಯಾವುದೇ ಸ್ವರೂಪವಿಲ್ಲದಿದ್ದಾಗಿಯೂ ತಾನು ಸುಡುತ್ತಿರುವ ಕಟ್ಟಿಗೆ ರೂಪದಲ್ಲಿ ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತೆದೆ. ಅಂತೆಯೇ ತಾನು ಪಡೆದ ದೇಹದ ರೂಪದ ಮುಖಾಂತರವೆ ಆತ್ಮವೂ ತನ್ನನ್ನು ತೋರ್ಪಡಿಸಿಕೂಳ್ಳುತ್ತದೆ.

6. ಚಂದ್ರ: ಸಂಪಾದಿಸಿ

ಚಂದ್ರ ಕುಗ್ಗುತ್ತಾನೆ ಹಿಗ್ಗುತ್ತಾನೆ. ಹೀಗೆ ನಿರಂತರ ಪ್ರಕ್ರಿಯೆಗಳಿಗೆ ಒಳಗಾದರು ಶಾಂತನಾಗಿರುತ್ತಾನೆ. ಹಾಗೆ ವ್ಯಕ್ತಿಯು ಜನನದಿಂದ ಮರಣದವರೆಗಿನ ನಿರಂತರ ಬದಲಾವಣೆಗಳಿಂದ ಬಾಧಿಸಲ್ಪಡುವುದಿಲ್ಲ.

7. ಸೂರ್ಯ: ಸಂಪಾದಿಸಿ

ಸೂರ್ಯನ ಪ್ರತಿಫಲನಗಳು ಪರಮಾತ್ಮನು ಒಬ್ಬನೆ ಒಬ್ಬನಾಗಿದ್ದು ವಿವಿಧ ಜೀವಿಗಳ ಮೇಲೆ ತನ್ನನ್ನು ಪ್ರತಿಫಲಿಸಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಹೀಗೆ ಆತ್ಮವು ದೇಹವಲ್ಲ ಎಂಬುದನ್ನು ಅರಿಯಬಹುದಾಗಿದೆ.

8. ಪಾರಿವಾಳ: ಸಂಪಾದಿಸಿ

ಪಾರಿವಾಳವು ತನ್ನ ಮಕ್ಕಳಿಂದ ದೂರವಿರುವುದು ಅಸಾಧ್ಯವೆನಿಸಿ ತಾನೂ ಮೂರ್ಖತನದಿಂದ ಬಲೆಯಲ್ಲಿ ಬಂಧಿತಗೊಳ್ಳುತ್ತದೆ. ಪ್ರಾಜ್ಙನು ಅತಿಯಾದ ವ್ಯಾಮೋಹಗಳಿಂದ ಬಂಧಿತನಾಗುವುದಿಲ್ಲ.

9. ಹೆಬ್ಬಾವು: ಸಂಪಾದಿಸಿ

ಕೆಲವೊಂದು ಸಮಯದಲ್ಲಿ ಹೆಬ್ಬಾವು ತಿನ್ನುವುದಕ್ಕೆ ಏನು ಸಿಗದಿದ್ದರೂ ಹೆದರುವುದಿಲ್ಲ ಪ್ರಾಜ್ಙನೂ ಸುಖದ ಆಮಿಷಗಳ ಅರಸುವಿಕೆಯಲ್ಲಿ ಎಂದೂ ಕಳೆದು ಹೋಗುವುದಿಲ್ಲ.

10. ಸಮುದ್ರ: ಸಂಪಾದಿಸಿ

ನದಿಗಳು ಎಷ್ಟೇ ನೀರನ್ನು ತಂದರೂ, ತರದಿದ್ದರೂ ಸುಖ ಪಡುವುದು ಇಲ್ಲ, ದುಃಖ ಪಡುವುದಿಲ್ಲ. ಅಂತೆಯೆ ಮನುಷ್ಯನೂ ಭೋಗಗಳು ಲಭಿಸಿದಾಗ ಸುಖ ಪಟ್ಟು, ನೋವುಗಳು ಬಂದಾಗ ದುಃಖಿಸಲೂ ಬಾರದು ಎನ್ನುವುದನ್ನು ತಿಳಿಸಿದೆ.

11. ದೀಪದ ಹುಳ: ಸಂಪಾದಿಸಿ

ದೀಪದ ಹುಳು ಹೇಗೆ ಉರಿವ ದೀಪಕ್ಕೆ ಸಿಲುಕಿ ಸಾಯುತ್ತದೆಯೊ ಹಾಗೆಯೇ ಯಾವ ಮನುಷ್ಯನು ಮೋಹಿತನಾಗುತ್ತಾನೋ ಅವನು ದೀಪದ ಹುಳದಂತೆ ಅದರಲ್ಲಿಯೆ ನಾಶನಾಗುತ್ತಾನೆ.

12. ಜೇನುನೊಣ: ಸಂಪಾದಿಸಿ

ಜೇನುನೊಣದಂತೆ ಧನವನ್ನು( ಜೇನು ತುಪ್ಪವನ್ನು) ಸಂಗ್ರಹಿಸುವುದರಿಂದ ಹಠಾತ್ತಾಗಿ ಮರಣ ಬರುತ್ತದೆ. ಈ ಉಪದೇಶವನ್ನು ಪಡೆದುಕೊಂಡು ದ್ರವ್ಯಸಂಗ್ರಹವನ್ನು ಮಾಡುವುದನ್ನು ಬಿಡಬೇಕು.

13. ಆನೆ: ಸಂಪಾದಿಸಿ

ಆನೆಯು ಸ್ತ್ರೀ ವ್ಯಾಮೋಹಕ್ಕೆ ಒಳಗಾಗಿ ಹೇಗೆ ಗುಂಡಿಯಲ್ಲಿ ಸಿಲುಕಿಕೊಳ್ಳುತ್ತದೆಯೋ ಹಾಗೆಯೆ ಯಾವ ಪುರುಷನು ಸ್ತ್ರೀ ಸುಖಕ್ಕೆ ಮರುಳಾಗುತ್ತಾನೆಯೋ ಅವನು ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ.

14. ಭ್ರಮರ: ಸಂಪಾದಿಸಿ

ಭ್ರಮರವು ಒಂದೇ ಕಮಲದ ಸುಗಂಧವನ್ನು ಸೇವಿಸದೆ ಬಹಳಷ್ಟು ಕಮಲಗಳ ಸುವಾಸನೆಯ ಆನಂದವನ್ನು ಪಡೆಯುತ್ತಿರುತ್ತದೆ. ಹಾಗೆಯೆ ನಾವು ಪ್ರತಿಯೊಂದನ್ನು ಕಲಿಯಲು ಪ್ರಯತ್ನಿಸಬೇಕು.

15. ಕಸ್ತೂರಿ ಮೃಗ: ಸಂಪಾದಿಸಿ

ಕಸ್ತೂರಿ ಮೃಗಕ್ಕೆ ಸಂಗೀತದ ವ್ಯಾಮೋಹವು ಇರುವುದರಿಂದ ಬೇಟೆಗಾರ ಸಂಗೀತ ಕೇಳಿಸಿ ಸುಲಭವಾಗಿ ಭೇಟೆಯಾಡುತ್ತಾನೆ. ಇದರಂತೆಯೆ ನಾವು ಯಾವುದೆ ಮೋಹದಲ್ಲಿ ಸಿಲಿಕಿಕೊಳ್ಳಬಾರದು.

16. ಮೀನು: ಸಂಪಾದಿಸಿ

ಮೀನು ತನ್ನ ಆಹಾರದ ರುಚಿಗೆ ಮೋಹಗೊಂಡು ಗಾಳಕ್ಕೆ ಸಿಲುಕುತ್ತದೆ. ಹಾಗೆಯೆ ಮನುಷ್ಯನು ನಾಲಿಗೆಯ ರುಚಿಯಲ್ಲಿ ಬದ್ಧನಾಗಿದ್ದು ಜನ್ಮ ಮರಣದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.

17. ಪಿಂಗಲಾ ವೇಶ್ಯೆ: ಸಂಪಾದಿಸಿ

ಎಲ್ಲಿಯವರೆಗೆ ಮನುಷ್ಯನಲ್ಲಿ ಆಸೆಯು ಪ್ರಬಲವಾಗಿರುತ್ತದೆಯೊ ಅಲ್ಲಿಯವರೆಗೆ ಅವನಿಗೆ ಸುಖ ನಿದ್ರೆ ಬರುವುದಿಲ್ಲ. ಯಾವ ಪುರುಷನು ಆಸೆಯನ್ನು ತ್ಯಜಿಸಿದ್ದಾನೆಯೊ ಅವನಿಗೆ ಈ ಸಂಸಾರದ ದುಃಖಗಳು ಬಂಧಿಸುವುದಿಲ್ಲ.

18. ಟಿಟ್ಟಿಭ: ಸಂಪಾದಿಸಿ

ಟಿಟ್ಟಿಭ ಹಕ್ಕಿ ಮೀನನ್ನು ಕಚ್ಚಿಕೊಂಡು ಹೋಗುವಾಗ ಉಳಿದ ಹದ್ದು, ಕಾಗೆಗಳೆಲ್ಲಾ ಬೆನ್ನು ಹತ್ತಿದಾಗ ದಣಿದ ಟಿಟ್ಟಿಭ ಮೀನನ್ನು ಅಲ್ಲೆ ಬಿಡಲು, ಹದ್ದು ಅದನ್ನು ಕಚ್ಚಿಕೊಳ್ಳುವುದಕ್ಕೂ ಎಲ್ಲಾ ಕಾಗೆಗಳು ಅದನ್ನು ಬೆನ್ನು ಹತ್ತಿದವು. ಇದರಿಂದ ಆ ಟಿಟ್ಟಿಭವು ನಿಶ್ಚಿಂತವಾಗಿ ಕುಳಿತಿತು. ಈ ಸಂಸಾರದಲ್ಲಿ ಮೋಹವನ್ನು ಬಿಡುವುದರಲ್ಲಿಯೆ ಶಾಂತಿ ಇದೆ ಇಲ್ಲದಿದ್ದರೆ ಘೋರ ವಿಪತ್ತಿದೆ.

19. ಬಾಲಕ: ಸಂಪಾದಿಸಿ

ಮನಾಪಮಾನಗಳ ಬಗ್ಗೆ ವಿಚಾರ ಮಾಡದೆ, ಎಲ್ಲ ಚಿಂತೆಗಳ ಪರಿಹಾರ ಮಾಡಿಕೊಂಡು ಬಾಲಕನಂತೆ ಆನಂದದಿಂದ ಇರಬೇಕು.

20. ಕೈಬಳೆ: ಸಂಪಾದಿಸಿ

ಎರಡು ಬಳೆಗಳಿದ್ದರೆ ತಗುಲಿ ಶಬ್ದವಾಗುತ್ತದೆ. ಬಳೆಗಳು ಹೆಚ್ಚಿಗೆ ಇದ್ದರೆ ಹೆಚ್ಚು ಶಬ್ಬವಾಗುತ್ತದೆ. ಹಾಗೆಯೇ ಇಬ್ಬರು ಸೇರಿದ್ದಲ್ಲಿ ಮಾತುಕತೆಗಳಾಗುತ್ತವೆ. ಅದೇ ಹೆಚ್ಚು ಜನ ಸೇರಿದ್ದಲ್ಲಿ ಕಲಹವಾಗುತ್ತದೆ. ಆದ್ದರಿಂದ ಸಾಧನೆ ಮಾಡುವಾಗ ಒಂಟಿಯಾಗಿರಬೇಕು.

21. ಶಸ್ತ್ರಕಾರ: ಸಂಪಾದಿಸಿ

ಶಸ್ತ್ರಕಾರ ಬಾಣವನ್ನು ಮಾಡುವಾಗ ರಾಜನು ಹಾದು ಹೋದನು. ನಂತರ ಒಬ್ಬ ರಾಜನು ಹೀಗೆ ಹೋದನಾ ಎಂದು ಕೇಳಿದಾಗ ಆತ ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದು ನೋಡಲಿಲ್ಲ ಎಂದನು. ಹೀಗೆ ನಾವು ಪ್ರತಿಯೊಂದು ಕಾರ್ಯ ಮಾಡಬೇಕು.

22. ಸರ್ಪ: ಸಂಪಾದಿಸಿ

ಸರ್ಪಗಳು ಅಪಕಾರ ಮಾಡಿದ ಹೊರತು, ಕೆಣಕದ ಹೊರತು ಯಾರನ್ನು ಕಚ್ಚುವುದಿಲ್ಲ. ಅದರಂತೆಯೆ ಮಿತವಾಗಿ ಮಾತನಾಡ ಬೇಕು, ಜಗಳ ಮಾಡಬಾರದು, ಸದಾ ವಿವೇಕದಿಂದ ವರ್ತಿಸಬೇಕು, ಯಾರಿಗೂ ನೋವುಂಟು ಮಾಡಬಾರದು.

23. ಜೇಡ: ಸಂಪಾದಿಸಿ

ಜೇಡಗಳು ಹಗಲೂ ರಾತ್ರಿ ಎನ್ನದೆ ಬಲೆಯನ್ನು ಹಣೆಯುತ್ತವೆ. ಮುಂದೆ ಮನಸ್ಸಿಗೆ ಬಂದಾಗ ಆ ಮನೆಯನ್ನೆ ನುಂಗಿ ಸ್ವತಂತ್ರವಾಗುತ್ತದೆ. ಆದುದರಿಂದ ಜಗತ್ತಿನಲ್ಲಿನ ಘಟನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಬಾರದು.

24. ಕಣಜ: ಸಂಪಾದಿಸಿ

ಕಣಜವು ಯಾವುದೋ ಒಂದು ಹುಳುವನ್ನು ತಂದಿಟ್ಟುಕೊಂಡು ಗಾಳಿ ಊದುತ್ತಾ ಆ ಕೀಟವನ್ನು ಕೊನೆಗೆ ಅದು ಕೂಡ ಕಣಜದ ಹುಳುವನ್ನೇ ಮಾಡುತ್ತದೆ. ಹಾಗೆಯೇ ನಾವು ಸತತ ನಮ್ಮ ಗುರಿಯ ಕಡೆಗೆ ಧ್ಯಾನ ಮಾಡಬೇಕು.[೫]

ಉಲ್ಲೇಖಗಳು ಸಂಪಾದಿಸಿ

  1. https://hinduism.stackexchange.com/questions/21780/why-dattatreya-is-shown-surrounded-by-4-dogs-and-cow
  2. https://www.hindujagruti.org/hinduism/hindu-gods/dattatreya
  3. http://www.sallapa.com/2016/12/blog-post_13.html#links
  4. https://www.hindujagruti.org/hinduism/names-shri-datta-meanings
  5. https://worldteachertrust.org/en/web/publications/books/dattatreya/main